samachara
www.samachara.com
ವಿಶ್ವದ 900 ಕೋಟಿ ಜನತೆಗೆ ಸಾವಯವ ಕೃಷಿಯಿಂದಲೇ ಆಹಾರ ಒದಗಿಸಬಹುದು!
ಪಾಸಿಟಿವ್

ವಿಶ್ವದ 900 ಕೋಟಿ ಜನತೆಗೆ ಸಾವಯವ ಕೃಷಿಯಿಂದಲೇ ಆಹಾರ ಒದಗಿಸಬಹುದು!

ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಿರುವ ವರದಿಯೊಂದು ಸಾವಯವ ಕೃಷಿಯ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದೆ. ಸಾವಯುವ ಕೃಷಿ ಪದ್ಧತಿಯಿಂದ ವಿಶ್ವದ ಜನತೆಗೆ ಹೇಗೆ ಆಹಾರ ಪೂರೈಸಬಹುದು ಎನ್ನುವುದರ ಬಗ್ಗೆ ವಿಸ್ತೃತವಾಗಿ ವಿವರಿಸಿದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

“ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆದು ಬರೋಬ್ಬರಿ 900 ಕೋಟಿ ಜನರಿಗೆ ಆಹಾರ ಒದಗಿಸಬಹುದು. ಆದರೆ ಸದ್ಯ ವಿಶ್ವದಲ್ಲಿನ ಕೃಷಿ ಭೂಮಿಯನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಿ, ಇಡೀ ಜಗತ್ತಿನ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಹಸಿರು ಮನೆ ಪರಿಣಾಮದ ಇಂಧನಗಳ ಬಳಕೆಯನ್ನು ತಗ್ಗಿಸಬೇಕಿದೆ ಅಷ್ಟೇ. ಇದರ ಜತೆಗೆ ಆಹಾರ ಪದಾರ್ಥಗಳನ್ನು ಬೆಕಾಬಿಟ್ಟಿಯಾಗಿ ವ್ಯರ್ಥ ಮಾಡುವುದು ಹಾಗೂ ಪ್ರಾಣಿಗಳಿಗೆಂದು ಬೆಳೆಯುತ್ತಿರುವ ಆಹಾರ ಪದಾರ್ಥಗಳ ಉತ್ಪಾದನಾ ಪ್ರಮಾಣವನ್ನು ತಗ್ಗಿಸಬೇಕು”

- ಇವು ಸ್ಟಿಟ್ಜರ್‌ಲ್ಯಾಂಡ್‌ನ ಸಾವಯವ ಕೃಷಿ ಸಂಶೋಧನಾ ಸಂಸ್ಥೆ, ಇನ್ಸ್ಟಿಟ್ಯೂಟ್‌ ಆಫ್‌ ಎನ್ವಿರಾನ್‌ಮೆಂಟಲ್‌ ಡಿಸೀಷನ್ಸ್, ಇಟಲಿಯ ಫುಡ್‌ ಅಂಡ್‌ ಅಗ್ರಿಕಲ್ಚರ್‌ ಆರ್ಗನೈಸೇಷನ್‌ ಆಫ್‌ ಯುನೈಟೆಡ್‌ ಸ್ಟೇಟ್ಸ್, ಆಸ್ಟ್ರಿಯಾದ ಇನ್ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಎಕಾಲಜಿ ಮತ್ತು ಇಂಗ್ಲೆಂಡ್‌ನ ಇನ್ಸ್ಟಿಟ್ಯೂಟ್‌ ಆಫ್‌ ಬಯೋಲಾಜಿಕಲ್‌ ಅಂಡ್‌ ಎನ್ವಿರಾನ್‌ಮೆಂಟಲ್‌ ಸೈನ್ಸಸ್‌ ಸಂಸ್ಥೆಗಳ ಸಂಶೋಧನಾರ್ಥಿಗಳು ಒಟ್ಟಾಗಿ ಸಲ್ಲಿಸಿದ “Strategies for feeding the world more sustainably with organic agriculture” ಎಂಬ ಸಂಶೋಧನಾ ಪ್ರಬಂಧದ ಕೊನೆಯ ಸಾಲುಗಳು.

ವಿಶ್ವದ 900 ಕೋಟಿ ಜನತೆಗೆ ಸಾವಯವ ಕೃಷಿಯಿಂದಲೇ ಆಹಾರ ಒದಗಿಸಬಹುದು!

ಇಂದು ಜಗತ್ತಿನ ಬಹುತೇಕ ಜನರು ಸಾವಯವದತ್ತ ಮರಳುತ್ತಿದ್ದಾರೆ. ರಾಸಾಯನಿಕಗಳ ಹೊರತಾದ ಆಹಾರ ಪದಾರ್ಥಗಳತ್ತ ಒಲವು ತೊರುತ್ತಿದ್ದಾರೆ. ಮಾನವನು ಕೃಷಿಯನ್ನು ಅಭಿವೃದ್ಧಿ ಪಡಿಸುತ್ತಾ ಸಾಗಿದಂದಿನಿಂದಲೂ ಕೂಡ ಸಾವಯವ ಪದ್ಧತಿ ರೈತನ ಜತೆಗಿತ್ತು. 1950ರ ಆಸುಪಾಸಿನಲ್ಲಿ ಕಾಲಿಟ್ಟ ರಾಸಾಯನಿಕ ಗೊಬ್ಬರಗಳು ಸಾವಯವ ಕೃಷಿಯನ್ನು ಮೂಲೆಗೆ ತಳ್ಳಿದ್ದವು. ನಂತರ ಬಂದ ರಾಸಾಯನಿಕ ಕೀಟನಾಶಕಗಳೂ ಕೂಡ ಸಾವಯವ ಪದ್ಧತಿಯನ್ನು ತುಳಿದು ಮೆರೆದವು. ಆಧುನಿಕ ಕೃಷಿ ಪದ್ಧತಿಗಳಲ್ಲಿ ಸಾವಯವಕ್ಕೆ ಜಾಗವೇ ಇಲ್ಲದಂತಾಯಿತು.

ಆದರೆ ಆಧುನಿಕ ಕೃಷಿ ಪದ್ಧತಿ ಆರೋಗ್ಯದ ಮೇಲೆ, ಪರಿಸರದ ಮೇಲೆ, ಆರ್ಥಿಕತೆಯ ಮೇಲೆ ಉಂಟು ಮಾಡುತ್ತಿರುವ ನಕಾರಾತ್ಮಕ ಪರಿಣಾಮಗಳು ಈಗ ಸಾವಯವ ಪದ್ಧತಿ ಮುನ್ನೆಲೆಗೆ ಬರುವಂತೆ ಮಾಡಿದೆ. ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಕೂಡ ಕೆಲವು ಪರಿಸರ ಪೂರಕ ಮನೋಭಾವವುಳ್ಳ ರೈತರು ಮರಳಿ ಸಾವಯವದತ್ತ ತಿರುಗಿದ್ದಾರೆ. ಹಲವಾರು ಪದವೀಧರರೂ ಕೂಡ ಕೈತುಂಬಾ ಸಂಬಳ ದೊರೆಯುವ ಉದ್ಯೋಗಗಳನ್ನು ಬಿಟ್ಟು ಕೃಷಿಯತ್ತ ಮರಳುತ್ತಿದ್ದಾರೆ. ಆದರೆ ಜಗತ್ತು ಸಂಪೂರ್ಣವಾಗಿ ಸಾವಯವದತ್ತ ತಿರುಗುವ ಕಾಲ ಇನ್ನು ದೂರವೇ ಉಳಿದಿದೆ. ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸದ್ಯ ಇರುವ ದೊಡ್ಡ ಸಮಸ್ಯೆ ಎಂದರೆ ಕಡಿಮೆ ಇಳುವರಿ ದೊರೆಯುವುದು.

ಹಲವಾರು ತಜ್ಞರು, ವರದಿಗಳು ರೈತರಿಗೆ ಸಾವಯವದತ್ತ ಮರಳುವಂತೆ ಸೂಚಿಸುತ್ತಿದ್ದಾರೆ. ಹಲವಾರು ಮುಂದುವರಿದ ದೇಶಗಳು ಸಾವಯವ ಕೃಷಿ ಪದ್ಧತಿಗೆ ಹಲವಾರು ಸಹಾಯ ಧನಗಳನ್ನು ನೀಡಿ ಪ್ರೋತ್ಸಾಹಿಸುತ್ತಿವೆ. ಸಾವಯವ ಸಂಶೋಧನೆಗಳಿಗೂ ಕೂಡ ಅವಕಾಶ ಕಲ್ಪಿಸಿವೆ. ಆದರೆ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಸಾವಯವಕ್ಕೆ ಪ್ರೋತ್ಸಾಹ ನೀಡುವುದು ಮರೀಚಿಕೆಯಾಗಿಯೇ ಉಳಿದಿದೆ. ಆದರೂ ಸಹ ಕೆಲ ರೈತರು ಸಾವಯವದಿಂದ ಬದುಕನ್ನು ಹಸಿರಾಗಿಸಿಕೊಂಡ ಉದಾಹರಣಗಳೂ ಕೂಡ ಕಣ್ಣ ಮುಂದಿವೆ.

ವಿಶ್ವದ 900 ಕೋಟಿ ಜನತೆಗೆ ಸಾವಯವ ಕೃಷಿಯಿಂದಲೇ ಆಹಾರ ಒದಗಿಸಬಹುದು!

ಈಗ ಮೂರು ರಾಷ್ಟ್ರಗಳ ಸಂಶೋಧಕರು ಸಾವಯವವೇ ನಮ್ಮ ಮುಂದಿರುವ ಏಕೈಕ ದಾರಿ ಎನ್ನುತ್ತಿದ್ದಾರೆ. ಸಾವಯವ ಕೃಷಿಯ ಮೂಲಕ ಮುಂದಿನ ದಿನಗಳಲ್ಲಿ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಹೇಗೆ ಉತ್ಪಾದಿಸಿಕೊಳ್ಳಬಹುದು ಎನ್ನುವುದರ ಕುರಿತು ಸಂಶೋಧಕರು ವಿಸ್ತೃತ ವರದಿಯನ್ನು ಪ್ರಕಟಿಸಿದ್ದಾರೆ.

ಸದ್ಯ ಇರುವ ಅಂದಾಜುಗಳ ಪ್ರಕಾರ 2050ರ ವೇಳೆಗೆ ವಿಶ್ವದ ಜನತೆಗೆ ಅಗತ್ಯವಿರುವ ಆಹಾರವನ್ನು ಪೂರೈಸಲು ಈಗ ಬೆಳೆಯುತ್ತಿರುವ ಬೆಳೆಯ ಜತೆ ಶೇ.50ರಷ್ಟನ್ನು ಹೆಚ್ಚಿಸಬೇಕಿದೆ. ಈಗಾಗಲೇ ಆಧುನಿಕ ಕೃಷಿ ಪದ್ಧತಿಯಿಂದ ಭೂಮಿ ತನ್ನ ಸಾರವನ್ನು ಕಳೆದುಕೊಳ್ಳುತ್ತಿರುವಾಗ ಈ ಪ್ರಮಾಣದಲ್ಲಿ ಕೃಷಿ ಉತ್ಪನ್ನವನ್ನು ಹೆಚ್ಚಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸಾವಯವ ಕೃಷಿಯತ್ತ ಮರಳುವುದೇ ನಮ್ಮ ಮುಂದಿರುವ ಅತ್ಯುತ್ತಮ ದಾರಿ ಎನ್ನುತ್ತಾರೆ ಸಂಶೋಧಕರು.

ಸಾವಯವ ಕೃಷಿ ಭೂಮಿಗೆ ಬೀಳುವ ವಿಷಕಾರಿ ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ಇಲ್ಲವಾಗಿಸುತ್ತದೆ. ಮಿಶ್ರ ಬೆಳೆಯ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಜತೆಗೆ ಮಾನವನ ಆರೋಗ್ಯವನ್ನೂ ಕೂಡ ಕಾಪಾಡುತ್ತದೆ. ಸಾವಯವ ಕೃಷಿಯಿಂದ ದೊರೆಯುವ ಉತ್ಪನ್ನ ರಾಸಾಯನಿಕ ಕೃಷಿ ಪದ್ಧತಿಯಲ್ಲಿ ದೊರೆಯುವುದಕ್ಕಿಂತ ಕಡಿಮೆ, ಸಾವಯವ ಪದ್ದತಿಯಲ್ಲಿ ಸದ್ಯದ ಅಹಾರ ಅಗತ್ಯವನ್ನು ಪೂರೈಸಲು ಇನ್ನೂ ಹೆಚ್ಚಿನ ಭೂಮಿಯ ಅಗತ್ಯತೆ ಇದೆ ಎಂಬ ವಾದಗಳಿವೆ. ಆದರೆ ಪರಿಸರಕ್ಕೆ ಸಾವಯವ ಕೃಷಿ ನೀಡುವ ಕೊಡುಗೆಗಳ ಮುಂದೆ ಇವೆಲ್ಲವೂ ನಗಣ್ಯ ಎನಿಸುತ್ತವೆ. ಪರಿಸರ ಮತ್ತು ಆರೋಗ್ಯಕ್ಕೆ ಪೂರಕವಾದ ಸಾವಯವಕ್ಕೆ ಹೊಂದಿಕೊಳ್ಳಲು ಅನಿವಾರ್ಯವಾಗಿ ಈಗಿನ ಜೀವನ ಪದ್ಧತಿಯನ್ನು ಬದಲಿಸಿಕೊಳ್ಳಬೇಕಿದೆ.

ವಿಶ್ವದ 900 ಕೋಟಿ ಜನತೆಗೆ ಸಾವಯವ ಕೃಷಿಯಿಂದಲೇ ಆಹಾರ ಒದಗಿಸಬಹುದು!

ಸಾವಯವ ಕೃಷಿ ಸಾಧ್ಯವೇ?:

ಈ ತಜ್ಞರ ಸಂಶೋಧನೆಯ ಪ್ರಕಾರ ಇಡೀ ಜಗತ್ತನ್ನು ಸಾವಯವದ ಕಡೆ ಹೊರಳಿಸಬಹುದು. ಅದಕ್ಕಾಗಿ ಕೆಲವು ತ್ಯಾಗ ಮಾಡಬೇಕಿದೆಯಷ್ಟೇ. ಸದ್ಯದ ಆಹಾರ ಬೇಡಿಕೆಗೆ ಹೋಲಿಸಿಕೊಂಡರೆ ಈಗಿನ ಕೃಷಿಭೂಮಿಯಲ್ಲಿ ಸಾವಯವ ಪದ್ಧತಿಯ ಮೂಲಕ ಶೇ.60ರಷ್ಟು ಬೇಡಿಕೆಯನ್ನು ಪೂರೈಸಬಹುದಾಗಿದೆ. ಹೆಚ್ಚಿನ ಬೆಳೆ ಬೆಳೆಯಬೇಕು ಎಂದರೆ ಹೆಚ್ಚಿನ ಭೂಮಿಯಲ್ಲಿ ಕೃಷಿ ಮಾಡಬೇಕಿದೆ. ಇದು ಕಷ್ಟ ಸಾಧ್ಯ.

ಸಂಶೋಧಕರು ಹೇಳುವಂತೆ ಸಾವಯವ ಪದ್ಧತಿಯಲ್ಲಿ ಸುಸ್ಥಿರತೆಯನ್ನು ಕಂಡುಕೊಳ್ಳಬೇಕು ಎಂದರೆ ವ್ಯರ್ಥವಾಗುತ್ತಿರುವ ಆಹಾರ ಪದಾರ್ಥಗಳಲ್ಲಿ ಶೇ.50ರಷ್ಟನ್ನು ಕಡಿಮೆ ಮಾಡಬೇಕು. ಜಾನುವಾರುಗಳಿಗಾಗಿ ಬೆಳೆಯುತ್ತಿರುವ ಬೆಳೆಯನ್ನು ಶೇ.50ರಷ್ಟು ಕಡಿಮೆಗೊಳಿಸಬೇಕು. ಅಂದರೆ ಅಗತ್ಯಕ್ಕಿಂತಲೂ ಹೆಚ್ಚಾಗಿರುವ ಪ್ರಾಣಿಜನ್ಯ ಆಹಾರ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು. ಇವೆರಡೂ ಮಾಡಿದ ನಂತರ ಇನ್ನೂ ಸ್ವಲ್ಪ ಭೂಮಿಯನ್ನು ಕೃಷಿಗಾಗಿ ಮೀಸಲಿಟ್ಟರೆ 2050ಕ್ಕೆ 900 ಕೋಟಿ ಜನರಿಗೆ ಅಗತ್ಯವಿರುವ ಆಹಾರವನ್ನು ಸಾವಯವ ಕೃಷಿಯಲ್ಲಿಯೇ ಪೂರೈಸಬಹುದು.

ಜಾಗತಿಕ ಮಟ್ಟದಲ್ಲಿ ಪ್ರಾಣಿಜನ್ಯ ಆಹಾರ ಪದಾರ್ಥಗಳ ಬಳಕೆಯನ್ನು ಕಡಿಮೆಗೊಳಿಸುವುದು ಕಷ್ಟವೆನಿಸಬಹುದು. ಈ ಆಹಾರ ಪದಾರ್ಥಗಳ ಬಳಕೆಯ ಮೇಲೆ ಕಡಿವಾಣ ಹಾಕಿದರೆ ಜಾನುವಾರುಗಳ ಸಂಖ್ಯೆ ಕೂಡ ಇಳಿಮುಖವಾಗುತ್ತದೆ. ಇದನ್ನು ಒಪ್ಪಲು ಕಷ್ಟವೆನಿಸಬಹುದು. ಆದರೆ ಪ್ರಾಣಿಜನ್ಯ ಆಹಾರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಸುಸ್ಥಿರತೆ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಸಂಶೋಧಕರ ಅಭಿಪ್ರಾಯ. ಜಾನುವಾರು ಸಂಖ್ಯೆ ಕಡಿಮೆಯಾದರೆ ಮೇವಿನ ಅಗತ್ಯವೂ ಕಡಿಮೆಯಾಗುತ್ತದೆ. ಮೇವು ಬೆಳೆಯಲೆಂದು ಬಿಟ್ಟ ಭೂಮಿ ಕೃಷಿಗೆ ಬಳಕೆಯಾಗುತ್ತದೆ.

ಜತೆಗೆ ವಿಶ್ವದಲ್ಲಿ ಆಹಾರ ಪದಾರ್ಥಗಳು ಹೇಗೆ ವ್ಯರ್ಥವಾಗುತ್ತವೆಂದು ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಈ ವ್ಯರ್ಥಗೊಳಿಸುವ ಅಹಾರ ಪದಾರ್ಥಗಳ ಪ್ರಮಾಣವನ್ನು ತಗ್ಗಿಸಿದರೆ ಸಾವಯವದಲ್ಲಿಯೇ ಅಗತ್ಯವಿರುವಷ್ಟು ಆಹಾರವನ್ನು ನಮ್ಮದಾಗಿಸಿಕೊಳ್ಳಬಹುದು.

ವಿಶ್ವದ 900 ಕೋಟಿ ಜನತೆಗೆ ಸಾವಯವ ಕೃಷಿಯಿಂದಲೇ ಆಹಾರ ಒದಗಿಸಬಹುದು!

ಸಾವಯವದಿಂದ ದೊರೆಯುವ ಲಾಭವೇನು?:

ಸಂಶೋಧಕರು ಹೇಳುವ ಪ್ರಕಾರ 2050ರ ವೇಳೆಗೆ ವಿಶ್ವದ ಶೇ.100ರಷ್ಟು ಕೃಷಿಯನ್ನು ಸಾವಯವ ಪದ್ಧತಿಯತ್ತ ಹೊರಳಿಸಿದರೆ ಶೇ.10-20ರಷ್ಟು ಮಣ್ಣಿನ ಸವಕಳಿಯ ಸಂಭಾವ್ಯತೆ ತಪ್ಪುತ್ತದೆ. ರಾಸಾಯನಿಕ ಗೊಬ್ಬರ, ಕೀಟನಾಶಕ, ಇತ್ಯಾದಿ ಸಾಂಪ್ರದಾಯಿಕ ಕೃಷಿಯ ಅಗತ್ಯತೆಗಳ್ಯಾವುವೂ ಇರದಿರುವುದರಿಂದ, ನವೀಕರಿಸಲಾಗದ ಇಂಧನ ಮೂಲಗಳ ಮೇಲಿನ ಶೇ.19-27ರಷ್ಟು ಅವಲಂಬನೆ ಇಲ್ಲವಾಗುತ್ತದೆ. ಜಾಗತಿಕ ತಾಪಮಾನಕ್ಕೆ ಮುಖ್ಯ ಕಾರಣವಾಗಿರುವ ಹಸಿರು ಮನೆ ಅನಿಲಗಳ ಹೊರಸೂಸುವಿಕೆಯ ಪ್ರಮಾಣವೂ ಕಡಿಮೆಯಾಗುತ್ತದೆ.

2050ರ ವೇಳೆಗೆ 900 ಕೋಟಿ ಜನಸಂಖ್ಯೆಗೆ ಅಗತ್ಯವಾದ ಆಹಾರವನ್ನು ಪೂರೈಸಲು ಇನ್ನೂ ಹೆಚ್ಚಿನ ಭೂಮಿಯಲ್ಲಿ ಕೃಷಿ ಮಾಡಬೇಕು. ಅದಕ್ಕಾಗಿ ಅರಣ್ಯವನ್ನೂ ಕೂಡ ಕಡಿಯಬೇಕಾಗಬಹುದು. ಅರಣ್ಯ ನಾಶದಿಂದ ಜೀವ ವೈವಿಧ್ಯತೆಯ ಮೇಲೆ ನಕರಾತ್ಮಕ ಪರಿಣಾಮ ಬೀರಬಹುದು ಎನ್ನಲಾಗುತ್ತದೆ. ಆದರೆ ಸಾವಯವ ಕೃಷಿಯಲ್ಲಿ ಕಿಟನಾಶಕಗಳ ಬಳಕೆ ಇಲ್ಲದಿರುವುದರಿಂದ ಹಾಗೂ ಈ ಕೃಷಿ ಪದ್ಧತಿಯಿಂದ ವಾತಾವರಣದಲ್ಲಿನ ಸಾರಜನಕವೂ ಕೂಡ ವೃದ್ಧಿಯಾಗುವುದರಿಂದ ಜೀವ ವೈವಿಧ್ಯತೆಯಲ್ಲಿ ಸುಸ್ಥಿರತೆಯನ್ನು ಕಾಣಬಹುದು. ಆಗ ಅರಣ್ಯ ನಾಶ ನಕಾರಾತ್ಮಕ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ ಸಂಶೋಧಕರು.

ಸಾವಯವ ಕೃಷಿ ಪದ್ಧತಿಯೊಂದೇ 2050ರಲ್ಲಿ ಅಗತ್ಯವಿರುಷ್ಟು ಆಹಾರವನ್ನು ನೀಡುವುದರ ಜತೆಗೆ, ಕೃಷಿ ಪದ್ಧತಿಗಳಿಂದ ಪರಿಸರದ ಮೇಲಾಗುವ ಹಾನಿಯನ್ನು ತಡೆಗಟ್ಟಬಲ್ಲದು ಎನ್ನುವುದು ಸಂಶೋಧಕರ ವಾದ. ಆದರೆ ಇದಕ್ಕಾಗಿ ಜನ ಮತ್ತು ಜಾನುವಾರು ಎರಡು ವರ್ಗಕ್ಕೂ ಕೂಡ ವ್ಯವಸ್ಥಿತವಾದ ಆಹಾರ ಪದ್ಧತಿಯನ್ನು ರೂಪಿಸಿಕೊಳ್ಳಬೇಕಿದೆ. ಆಹಾರವನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕಿದೆ. ಹಾಗಾದರೆ ಮಾತ್ರ ಪ್ರಕೃತಿಯನ್ನೂ ಉತ್ತಮವಾಗಿರಿಸಿ, ಮಾನವನೂ ಕೂಡ ಸುಸ್ಥಿರವಾಗಿ ಬದುಕಬಲ್ಲ.