samachara
www.samachara.com
ವಿಯ್ಯೂರು ಕೇಂದ್ರ ಕಾರಾಗೃಹ
ವಿಯ್ಯೂರು ಕೇಂದ್ರ ಕಾರಾಗೃಹ
ಪಾಸಿಟಿವ್

ಕಾರಾಗೃಹದಲ್ಲೊಂದು ದಿನ: ಕೇರಳ ಸರಕಾರದಿಂದ ‘ಜೈಲ್ ಟೂರಿಸಂ’

ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಕೇರಳದಲ್ಲಿ ವಿಶಿಷ್ಟ ಪ್ರವಾಸೋದ್ಯಮ ಅಸ್ತಿತ್ವಕ್ಕೆ ಬರಲಿದೆ. ಜನರು ಒಂದು ರಾತ್ರಿ, ಒಂದು ಹಗಲು ಜೈಲಿನಲ್ಲಿ ಉಳಿದುಕೊಂಡು ಅಲ್ಲಿನ ಅನುಭವಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಸಾಧಾರಣ ಆಹಾರ. ಬಿಳಿ ಬಟ್ಟೆ. ಮಬ್ಬುಗತ್ತಲಿನಲ್ಲಿ ಕಂಬಿ ಹಿಂದಿನ ಕೋಣೆಯಲ್ಲಿ ವಾಸ. ಹಲವು ಜನರಿಗೆ ಇದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜೈಲು ಅಂದರೇನೇ ಹಾಗೆ ಹಲವು ಜನರ ಪಾಲಿಗದು ದುಃಸ್ವಪ್ನ. ಆದರೆ ಇದೇ ಜೈಲಿನಲ್ಲಿ ದಿನಚರಿಗಳು ಹೇಗಿರುತ್ತದೆ ಎಂಬ ಕುತೂಹಲ ಹಲವು ಜನರಿಗೆ ಇದೆ. ಈ ಕುತೂಹಲವನ್ನು ತಣಿಸುವುದರ ಜತೆಗೆ ಅದನ್ನೇ ಪ್ರವಾಸೋದ್ಯಮವಾಗಿಸಲು ಮುಂದಾಗಿದೆ ಕೇರಳ ಸರಕಾರ.

ಪ್ರವಾಸಿಗರನ್ನು ತರಹೇವಾರಿ ವಿಧಾನದಲ್ಲಿ ಆಕರ್ಷಿಸುವ ‘ದೇವರ ಸ್ವಂತ ನಾಡು’ ಕೇರಳ ಇದೀಗ ಜೈಲು ಪ್ರವಾಸೋದ್ಯಮಕ್ಕೆ ಮುಂದಾಗಿದೆ. ಈ ಮೂಲಕ ಮತ್ತೊಂದಿಷ್ಟು ಪ್ರವಾಸಿಗರನ್ನು ತನ್ನ ರಾಜ್ಯಕ್ಕೆ ಬರಮಾಡಿಕೊಳ್ಳುವ ಗುರಿ ಹಾಕಿಕೊಂಡಿದೆ.

ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಕೇರಳದಲ್ಲಿ ಈ ವಿಶಿಷ್ಟ ಪ್ರವಾಸೋದ್ಯಮ ಅಸ್ತಿತ್ವಕ್ಕೆ ಬರಲಿದೆ. ಜನರು ಒಂದು ರಾತ್ರಿ, ಒಂದು ಹಗಲು ಜೈಲಿನಲ್ಲಿ ಉಳಿದುಕೊಂಡು ಅಲ್ಲಿನ ಅನುಭವಗಳನ್ನು ಗಿಟ್ಟಿಸಿಕೊಳ್ಳಬಹುದಾದ ಈ ವಿಶೇಷ ಯೋಜನೆಯನ್ನು ಜಾರಿಗೊಳಿಸಲು ಅಲ್ಲಿನ ಬಂಧೀಖಾನೆ ಇಲಾಖೆ ಮುಂದಾಗಿದೆ.

ವಿಯ್ಯೂರು ಕೇಂದ್ರ ಕಾರಾಗೃಹ ಮತ್ತು ತ್ರಿಶ್ಶೂರ್ ಜಿಲ್ಲಾ ಕಾರಾಗೃಹದಲ್ಲಿ ವಿಶಿಷ್ಟ ‘ಪ್ರಿಸನ್ ಮ್ಯೂಸಿಯಂ’ ತಲೆ ಎತ್ತುತ್ತಿದ್ದು ಅದರ ಭಾಗವಾಗಿ ಐನೂರು ರೂಪಾಯಿ ಪಾವತಿಸಿ ಜೈಲಿನಲ್ಲಿ ಉಳಿದುಕೊಳ್ಳುವ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಒಂದೊಮ್ಮೆ ಇದಕ್ಕೆ ಸರಕಾರ ಅನುಮತಿ ನೀಡಿದರೆ ಆಸಕ್ತಿಯುಳ್ಳ ಪ್ರವಾಸಿಗರು ಬಂದು 24 ಗಂಟೆಗಳ ಕಾಲ ಜೈಲು ಆವರಣದಲ್ಲಿರುವ ಮ್ಯೂಸಿಯಂನಲ್ಲಿ ಉಳಿದುಕೊಳ್ಳಬಹುದಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಈ ಸಂಬಂಧ ನಾವು ವಿವರವಾದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದು ಬಂಧೀಖಾನೆ ವಿಭಾಗದ ಡಿಜಿಪಿ ಶ್ರೀಲೇಖ ಹೇಳಿದ್ದಾರೆ.

ಈಗಾಗಲೇ ಕಾರಾಗೃಹ ವಸ್ತು ಸಂಗ್ರಹಾಲಯದ ನಿರ್ಮಾಣ ಕೆಲಸ ನಡೆಯುತ್ತಿದೆ. ಜೈಲಿಗೆ ಸಂಬಂಧಿಸಿದ ಸಾಂಪ್ರದಾಯಿಕ ಮತ್ತು ವಿಶೇಷ ವಸ್ತುಗಳ ಪ್ರದರ್ಶನ ಇದರಲ್ಲಿ ಇರಲಿದೆ ಎಂದವರು ಮಾಹಿತಿ ನೀಡಿದ್ದಾರೆ. ಬ್ರಿಟೀಷರು ಮತ್ತು ರಾಜರ ಕಾಲದ ದಾಖಲೆಗಳು, ಹಿಂಸೆ ನೀಡುವ ವಸ್ತುಗಳು, ಶಸ್ತ್ರಾಸ್ತ್ರಗಳು, ಕೈಕೊಳಗಳು ಮತ್ತು ಇತರ ವಸ್ತುಗಳು ಇಲ್ಲಿರಲಿವೆ. ಬ್ರಿಟೀಷ್ ಪೊಲೀಸರ ಯುನಿಫಾರ್ಮ್‌ಗಳು, ಅಪರೂಪದ ಜೈಲಿನ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.

ಕೇರಳದಲ್ಲಿ ಒಟ್ಟು 54 ಜೈಲುಗಳಿವೆ. ಇದರಲ್ಲಿ ಎರಡು ಜೈಲುಗಳಲ್ಲಿ ಈ ರೀತಿಯ ವಸ್ತು ಸಂಗ್ರಹಾಲಯ ತಲೆ ಎತ್ತಲಿದೆ. ಈ ಸಂಕೀರ್ಣದಲ್ಲಿ ವಸ್ತು ಪ್ರದರ್ಶನ ಜಾಗ, ಪ್ರವಾಸಿಗರಿಗೆ ಉಳಿದುಕೊಳ್ಳಲು ವ್ಯವಸ್ಥೆ, ಗ್ರಂಥಾಲಯ, ಆಹಾರದ ವ್ಯವಸ್ಥೆ, ಧ್ವನಿ ಮತ್ತು ಬೆಳಕಿನ ಪ್ರದರ್ಶನ ಇರಲಿದೆ. ಮುಂಗಡವಾಗಿ ನೋಂದಣಿ ಮಾಡಿಕೊಂಡು ಆಸಕ್ತರು ಇಲ್ಲಿ ಉಳಿದುಕೊಳ್ಳಬಹುದು. ‘ಅತಿಥಿಗಳಿಗೆ ಜೈಲಿನ ಬಟ್ಟೆಯಿಂದ ಹಿಡಿದು ಊಟವನ್ನೂ ನೀಡಲಾಗುತ್ತದೆ. ಇದರಿಂದ ಅವರಿಗೆ ನಿಜವಾದ ಜೈಲಿನ ಅನುಭವ ಸಿಗಲಿದೆ’ ಎನ್ನುತ್ತಾರೆ ವಿಯ್ಯೂರು ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಎಂ.ಕೆ. ವಿನೋದ್ ಕುಮಾರ್.

ಚೆನ್ನೈ ಮೂಲದ ವಾಸ್ತುಶಿಲ್ಪಿ ಈ ಮ್ಯೂಸಿಯಂ ವಿನ್ಯಾಸ ಮಾಡಿದ್ದು ರಾಜ್ಯ ಸರಕಾರದ ನಿರ್ಮಿತಿ ಕೇಂದ್ರ ಇದರ ನಿರ್ಮಾಣದ ಹೊಣೆ ಹೊತ್ತಿದೆ. ಒಟ್ಟು 6 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಈಗಾಗಲೇ 3 ಕೋಟಿ ಹಣ ಬಿಡುಗಡೆ ಆಗಿದ್ದು ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.

ಐತಿಹಾಸಿಕ ಸಂಗಾರೆಡ್ಡಿ ಜೈಲು ಮ್ಯೂಸಿಯಂ, ತೆಲಂಗಾಣ
ಐತಿಹಾಸಿಕ ಸಂಗಾರೆಡ್ಡಿ ಜೈಲು ಮ್ಯೂಸಿಯಂ, ತೆಲಂಗಾಣ

ಹಾಗೆ ನೋಡಿದರೆ ಜೈಲಿನಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ಅವಕಾಶವನ್ನು ಈ ಹಿಂದೆಯೇ ತೆಲಂಗಾಣ ನೀಡಿದೆ. ಇಲ್ಲಿನ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ 220 ವರ್ಷ ಹಳೆಯ ಕೇಂದ್ರ ಕಾರಾಗೃಹದಲ್ಲಿ ‘ಫೀಲ್ ದ ಜೈಲ್’ ಹೆಸರಿನಲ್ಲಿ 500 ರೂಪಾಯಿಗೆ ಒಂದು ದಿನ ಜೈಲಿನಲ್ಲಿ ಉಳಿದುಕೊಳ್ಳಬಹುದಾಗಿದೆ. ನಿಜಾಮ ರಾಜ ಸಲಾರ್ ಜಂಗ್-1 1796ರಲ್ಲಿ ನಿರ್ಮಿಸಿದ ಈ ಐತಿಹಾಸಿಕ ಜೈಲಲ್ಲಿ ಉಳಿದುಕೊಳ್ಳುವ ಅತಿಥಿಗಳಿಗೆ ಜೈಲಿನ ಖಾದಿ ಸಮವಸ್ತ್ರ, ಸ್ಟೀಲ್ ಪ್ಲೇಟ್ ಮತ್ತು ಲೋಟ, ಬಟ್ಟೆ ಸೋಪು ಜತೆಗೆ ಮಗ್ ಅಲ್ಲದೆ ರಾಜ್ಯ ಕಾರಾಗೃಹದ ಕೈಪಿಡಿಯಲ್ಲಿರುವ ಬೆಡ್ ಮತ್ತು ಇತರ ವ್ಯವಸ್ಥೆಗಳನ್ನಷ್ಟೇ ನೀಡಲಾಗುತ್ತದೆ.

ಇದೀಗ ಇಂಥಹದ್ದೇ ಅವಕಾಶ ಕೇರಳವೂ ನೀಡುತ್ತಿದೆ. ಇನ್ನೇಕೆ ತಡ ಜೈಲಿಗೆ ಹೋಗಲಾಗದವರು ಕನಿಷ್ಟ ಹೀಗಾದರೂ ಒಮ್ಮೆ ಜೈಲಿನ ಊಟ ತಿಂದು ಬನ್ನಿ.