samachara
www.samachara.com
‘ಚಿನ್ನದ ಚಿಗರೆ ಹಿಮಾ’: ಭತ್ತದ ಗದ್ದೆಯಿಂದ ಅಂಡರ್ 20 ವಿಶ್ವ ಚಾಂಪಿಯನ್‌ಶಿಪ್‌ವರೆಗೆ...
ಪಾಸಿಟಿವ್

‘ಚಿನ್ನದ ಚಿಗರೆ ಹಿಮಾ’: ಭತ್ತದ ಗದ್ದೆಯಿಂದ ಅಂಡರ್ 20 ವಿಶ್ವ ಚಾಂಪಿಯನ್‌ಶಿಪ್‌ವರೆಗೆ...

“ಆಕೆಯಲ್ಲಾಗಿರುವ ಪ್ರಗತಿ ಆಕೆ ಎಷ್ಟರ ಮಟ್ಟಿಗೆ ಸಾಮರ್ಥ್ಯ ಹೊಂದಿದ್ದಾಳೆ ಎಂಬುದನ್ನು ತೋರಿಸುತ್ತದೆ. ಇದೀಗ ಆಕೆ ಶೂ ಧರಿಸಿ ಕೇವಲ 2 ವರ್ಷಗಳಷ್ಟೇ ಆಗಿವೆ,” - ಹಿಮಾ ದಾಸ್ ಕೋಚ್

ಅದು ಅಸ್ಸಾಂನ ಸಾಮಾನ್ಯ ಕಟಾವು ಮುಗಿದ ಭತ್ತದ ಗದ್ದೆ. ಆ ಗದ್ದೆಯಲ್ಲಿ ತನ್ನ ಓರಗೆಯ ಹುಡುಗರೊಂದಿಗೆ ಫುಟ್‌ಬಾಲ್ ಆಡುವುದು ಆಕೆಯ ಅಭ್ಯಾಸ. ಹೀಗೆ ಒಂದು ದಿನ ಆಕೆ ಕೆಸರು ಮೆತ್ತಿಕೊಂಡು ನೆಗೆಯುತ್ತಿದ್ದ ಫುಟ್‌ಬಾಲ್‌ನ ಹಿಂದೆ ಓಡುತ್ತಿದ್ದಳು. ಆಕೆಯ ಚಿಗರೆಯಂತ ವೇಗ ಮೊದಲಿಗೆ ಸ್ಥಳೀಯ ಕೋಚ್ ಒಬ್ಬರ ಕಣ್ಣಿಗೆ ಬಿತ್ತು. ಗದ್ದೆಯಲ್ಲಿ ಉಳಿದಿದ್ದ ಚೂರು ಪಾರು ಭತ್ತದ ಮೊನಚು ಹುಲ್ಲಿನ ನಡುವೆ ಆಕೆ ಓಡುತ್ತಿದ್ದ ವೇಗ ನೋಡಿ ‘ನೀನು ಅಥ್ಲೆಟಿಕ್ಸ್‌ ಬಗ್ಗೆ ಗಮನ ಹರಿಸು’ ಎಂದು ಹೇಳಿ ಅವರು ಹೊರಟು ಹೋದರು.

ಹಾಗೆ ಭತ್ತದ ಗದ್ದೆಯಲ್ಲಿ ಮಣ್ಣು ಮೆತ್ತಿದ ಫುಟ್‌ಬಾಲ್ ಒದೆಯುತ್ತಿದ್ದವಳೇ ಹಿಮಾ ದಾಸ್. ಸದ್ಯ ಫಿನ್ಲೆಂಡ್‌ನ ಟ್ಯಾಂಪರ್‌ ನಗರದಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನ 400 ಮೀಟರ್ ಓಟದಲ್ಲಿ ಬಂಗಾರ ಗೆದ್ದು ರಾತೋ ರಾತ್ರಿ ದೇಶದಾದ್ಯಂತ ಮನೆ ಮಾತಾಗಿದ್ದಾಳೆ. 20 ವರ್ಷದೊಳಗಿನವರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ದೇಶದ ಕೇವಲ ಎರಡನೇ ಕ್ರೀಡಾಪಟುವ ಹಿಮಾ. ಅದರಲ್ಲೂ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಐತಿಹಾಸಿಕ ಚಿನ್ನ ಈಕೆಯದು ಎಂಬುದು ಗಮನಾರ್ಹ. ಈ ಹಿಂದೆ ಜಾವೆಲಿನ್‌ನಲ್ಲಿ ನೀರ್ಜ್ ಚೋಪ್ರಾ ಚಿನ್ನ ಹಾಗೂ ಡಿಸ್ಕಸ್‌ನಲ್ಲಿ ಕೃಷ್ಣ ಪೂನಿಯಾ ಮತ್ತು ನವಜೀತ್ ಕೌರ್ ದಿಲ್ಲೋನ್ ಕಂಚು ಗೆದ್ದಿದ್ದರು.

18 ತಿಂಗಳ ‘ಬಂಗಾರ’ದ ಹಾದಿ

ಫುಟ್‌ಬಾಲ್ ಆಡುತ್ತಿದ್ದಾಗ ಸ್ಥಳೀಯ ಕೋಚ್ ಹೇಳಿದ ಮಾತು ಆಕೆಯ ಜೀವನವನ್ನೇ ಬದಲಾಯಿಸಿತು. ಆ ಕೋಚ್ ನೀನು ಅಥ್ಲೆಟಿಕ್ಸ್‌ನಲ್ಲಿ ಗಮನ ಹರಿಸು ಅಂದಿದ್ದೇ ತಡ, ಹಿಮಾ ಓಡಲು ಶುರುವಿಟ್ಟುಕೊಂಡಳು. ಹಾಗೆ ಅಥ್ಲೆಟಿಕ್ಸ್ ಆಯ್ದುಕೊಂಡವಳು ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು ಅಸ್ಸಾಂನ ಶಿವಸಾಗರ್‌ನಲ್ಲಿ; ಸರಿಯಾಗಿ 18 ತಿಂಗಳ ಹಿಂದೆ ನಡೆದ ಅಂತರ್‌ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ.

“ಆಕೆ ಅವತ್ತು ಕಡಿಮೆ ಬೆಲೆಯ ಶೂ ಧರಿಸಿದ್ದಳು. ಆದರೂ ಆಕೆ 100 ಮತ್ತು 200 ಮೀಟರ್ ಓಟದಲ್ಲಿ ಚಿನ್ನ ಗೆದ್ದಳು. ಆಕೆ ಗಾಳಿಯಂತೆ ಓಡಿದಳು. ನನ್ನ ಇಷ್ಟು ವರ್ಷದ ವೃತ್ತಿಯಲ್ಲಿ ನಾನು ಇಂಥಹ ಪ್ರತಿಭಾವಂತರನ್ನು ನೋಡಿಲ್ಲ,” ಎಂದು ಅಂದು ನಡೆದಿದ್ದನ್ನು ನೆನಪಿಸಿಕೊಳ್ಳುತ್ತಾರೆ ನಿಪೋನ್. ನಿಫೋನ್ ಮತ್ಯಾರೂ ಅಲ್ಲ, ಅಸ್ಸಾಂ ಕ್ರೀಡಾ ಮತ್ತು ಯುವಜನ ಕಲ್ಯಾಣ ಇಲಾಖೆಯಿಂದ ನೇಮಿಸಲ್ಪಟ್ಟ ಅಥ್ಲೆಟಿಕ್ಸ್ ಕೋಚ್.

ಅವತ್ತೇ ಆಕೆಗೆ ‘ನಿನ್ನ ಊರು ಬಿಟ್ಟು ಗುವಾಹಟಿಗೆ ಹೋಗು’ ಎಂದು ಸಲಹೆ ನೀಡುತ್ತಾರೆ ನಿಪೋನ್. ಅಥ್ಲೆಟಿಕ್ಸ್‌ನಲ್ಲಿ ಉಜ್ವಲ ಭವಿಷ್ಯವಿದೆ ಎಂಬುದನ್ನು ನಿಫೋನ್ ಹಿಮಾಳಿಗೆ ಮನವರಿಕೆ ಮಾಡಿಕೊಡುತ್ತಾರೆ. ಆದರೆ ಅಸ್ಸಾಂನ ನಗಾನ್ ಜಿಲ್ಲೆಯ ಧಿಂಗ್ ಗ್ರಾಮದಲ್ಲಿ ಸಣ್ಣ ಭತ್ತದ ಗದ್ದೆಯಿಟ್ಟುಕೊಂಡು ತನ್ನ ಆರು ಮಕ್ಕಳನ್ನು ಸಲಹುತ್ತಿದ್ದ ರಂಜಿತ್ ದಾಸ್ ಮಗಳನ್ನು ಕಳುಹಿಸಲು ಸಿದ್ಧವಿರಲಿಲ್ಲ. ತಾಯಿ ಜೊಮಾಲಿ ಕೂಡ ತನ್ನ ಕೊನೆಯ ಮಗಳನ್ನು ದೂರದ ಗುವಾಹಟಿಗೆ ತರಬೇತಿಗೆ ಕಳುಹಿಸಲು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಹಿಮಾಳಿಗೆ ಮಾತ್ರ ತರಬೇತಿ ಪಡೆಯುವ ಆಸೆ.

ಕೊನೆಗೆ ನಿಪೋನ್ ಹಿಮಾಳಿಗೆ ಗುವಾಹಟಿಯ ಸರುಸಜೈ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಪಕ್ಕದಲ್ಲೇ ಉಳಿದುಕೊಳ್ಳಲು ಬಾಡಿಗೆ ಮನೆಯೊಂದರ ವ್ಯವಸ್ಥೆ ಮಾಡಿ ಆಕೆಯನ್ನು ಮಹಾನಗರಕ್ಕೆ ಕರೆಸಿಕೊಂಡರು. ಅಷ್ಟೊತ್ತಿಗಾಗಲೇ ನಿಪೋನ್ ಅಧಿಕಾರಿಗಳ ಮನವೊಲಿಸಿ ಆಕೆಗೆ ರಾಜ್ಯ ಅಕಾಡೆಮಿಯಲ್ಲಿ ಸ್ಥಾನ ನೀಡುವಂತೆ ಮನವಿ ಮಾಡಿದ್ದರು. ಅವತ್ತಿಗೆ ಬಾಕ್ಸಿಂಗ್ ಮತ್ತು ಫುಟ್‌ಬಾಲ್‌ಗೆ ಮಾತ್ರ ಜನಪ್ರಿಯವಾಗಿದ್ದ ಅಕಾಡೆಮಿಯಲ್ಲಿ ಹಿಮಾಳಿಗೆ ಜಾಗ ನೀಡಲು ಅಧಿಕಾರಿಗಳಿಗೆ ಇಷ್ಟವಿರಲಿಲ್ಲ. ಮೊದಲಿಗೆ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಾರೆ. ಕೊನೆಗೊಂದು ನಿರ್ಧಾರಕ್ಕೆ ಬರುತ್ತಾರೆ.

“ಅಲ್ಲಿ ಅಥ್ಲೆಟಿಕ್ಸ್‌ನವರಿಗೆ ಬೇರೆ ವಿಭಾಗವಿರಲಿಲ್ಲ. ಆದರೆ ಹಿಮಾಳ ಪ್ರದರ್ಶನ ನೋಡಿ ಆಕೆಯನ್ನು ಅಕಾಡೆಮಿಯೊಳಕ್ಕೆ ಸೇರಿಸಿಕೊಳ್ಳಲು ಅಧಿಕಾರಿಗಳು ಒಪ್ಪಿಕೊಂಡರು,” ಎಂದು ಅವತ್ತು ನಡೆದಿದ್ದನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಮುಂದೆ ಬಿಚ್ಚಿಡುತ್ತಾರೆ ನಿಪೋನ್.

“ನಾನು ಹಿಮಾಳಿಗೆ ಒಂದೇ ಮಾತು ಹೇಳುತ್ತಿದ್ದೆ. ದೊಡ್ಡ ಕನಸು ಕಾಣು. ಕಾರಣ, ಕೆಲವರಿಗೆ ಮಾತ್ರ ದೇವರು ಪ್ರತಿಭೆ ನೀಡುತ್ತಾರೆ. ಏಷ್ಯನ್ ಗೇಮ್ಸ್ ರಿಲೇ ತಂಡದಲ್ಲಿ ಆಕೆಯನ್ನು ಸೇರಿಸಲು ಯತ್ನಿಸಿ ಯಶಸ್ವಿಯಾಗುವುದು ನನ್ನ ಗುರಿಯಾಗಿತ್ತು. ಆದರೆ ಆಕೆ ಎಲ್ಲಾ ನಿರೀಕ್ಷೆಗಳನ್ನೂ ಮೀರಿ ವೈಯಕ್ತಿಕ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲೇ ಚಿನ್ನದ ಗೆದ್ದಳು,” ಎಂದು ತಮ್ಮ ಶಿಷ್ಯೆಯ ಸಾಧನೆ ಬಗ್ಗೆ ಹಿಗ್ಗುತ್ತಾರೆ ನಿಪೋನ್.

ಕೋಚ್‌ರಂತೆ ಹಿಮಾ ಬಗ್ಗೆ ಇಷ್ಟೊಂದು ನಿರೀಕ್ಷೆ ಯಾರಿಗೂ ಇರಲಿಲ್ಲ. ಅದರಲ್ಲೂ ಆಕೆ ಆರಂಭದಲ್ಲಿ ನಿಧಾನವಾಗಿ ಓಟ ಆರಂಭಿಸಿದ್ದಳು. ಇದರಿಂದ ಆಕೆ ಗೆಲ್ಲುತ್ತಾಳೆ ಎಂದು ಯಾರೂ ಅಂದುಕೊಂಡಿರಲಿಲ್ಲ. ವೀಕ್ಷಕ ವಿವರಣೆ ನೀಡುವವರೂ ಅಕೆಯ ಬಗ್ಗೆ ಗಮನ ಹರಿಸಿರಲಿಲ್ಲ. ಕೊನೆಯ ತಿರುವಿನಲ್ಲಿ ಆಕೆ ಮೊದಲ ಮೂರೂ ಸ್ಥಾನದಲ್ಲಿಯೂ ಇರಲಿಲ್ಲ. ಆದರೆ ಇದರಿಂದ ನನಗೇನೂ ಒತ್ತಡ ಇರಲಿಲ್ಲ ಎನ್ನುತ್ತಾರೆ ನಿಪೋನ್. “ಅವಳ ಓಟ ಆರಂಭವಾಗುವುದೇ ಕೊನೆಯ 80 ಮೀಟರ್‌ನಲ್ಲಿ,” ಎಂಬುದು ಅವರ ಅಂಬೋಣ. ಗುರುವಿನ ನಂಬಿಕೆಯಂತೆಯೇ ಕೊನೆಯ 80 ಮೀಟರ್‌ನಲ್ಲಿ ಬಿರುಗಾಳಿಯಂತೆ ನುಗ್ಗಿದ ಹಿಮಾ 51.46 ಸೆಕೆಂಡ್‌ನಲ್ಲೇ 400 ಮೀಟರ್ ಓಟ ಪೂರೈಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾಳೆ.

ಹಾಗೆ ನೋಡಿದರೆ ಇದು ಆಕೆಯ ಅತ್ಯುತ್ತಮ ಪ್ರದರ್ಶನವೇನಲ್ಲ. ಆಕೆ ಈ ಹಿಂದೆ 51.13 ನಿಮಿಷದಲ್ಲಿ ಓಟ ಮುಗಿಸಿದ ದಾಖಲೆ ಇದೆ ಎನ್ನುತ್ತಾರೆ ಆಕೆಯ ಕೋಚ್ ನಿಪೋನ್. ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್ 2018ರಲ್ಲೂ ಆಕೆ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿ 51.32 ಸೆಕೆಂಡುಗಳಲ್ಲಿ ಗುರಿ ತಲುಪಿ 6ನೇ ಸ್ಥಾನ ಪಡೆದು ಅಚ್ಚರಿ ಹುಟ್ಟಿಸಿದ್ದಳು. “ಆಕೆಯಲ್ಲಾಗಿರುವ ಪ್ರಗತಿ ಆಕೆ ಎಷ್ಟರ ಮಟ್ಟಿಗೆ ಸಾಮರ್ಥ್ಯ ಹೊಂದಿದ್ದಾಳೆ ಎಂಬುದನ್ನು ತೋರಿಸುತ್ತದೆ. ಇದೀಗ ಆಕೆ ಶೂ ಧರಿಸಿ ಕೇವಲ 2 ವರ್ಷಗಳಷ್ಟೇ ಆಗಿವೆ,” ಎನ್ನುವ ಅವರು ಆಕೆಗಿನ್ನೂ ತರಬೇತಿ ನೀಡುವುದಿದೆ ಎನ್ನುವುದರ ಬಗ್ಗೆ ಗಮನ ಸೆಳೆಯುತ್ತಾರೆ.

ಕೇವಲ 18 ನೇ ವಯಸ್ಸಲ್ಲಿ ಒಂದೂವರೆ ವರ್ಷಗಳ ಪರಿಶ್ರಮದೊಂದಿಗೆ ಹಿಮಾ ದಾಸ್ ಇಷ್ಟು ಎತ್ತರಕ್ಕೆ ಏರಿದ್ದಾಳೆ. ಆಕೆ ಮುಂದಿನ ದಿನಗಳಲ್ಲಿ ತೋರಲಿರುವ ಪ್ರದರ್ಶನದ ಬಗ್ಗೆ ದೇಶದ ಜನರಿಗೆ ಭಾರಿ ನಿರೀಕ್ಷೆಗಳಿವೆ. ಮತ್ತಷ್ಟು ಉತ್ತಮ ತರಬೇತಿಯನ್ನೂ ಪಡೆದಲ್ಲಿ ಆಕೆ ಈ ನಿರೀಕ್ಷೆಗಳ ಬೆಟ್ಟವನ್ನು ತಲುಪುವ ಎಲ್ಲಾ ಸಾಧ್ಯತೆಗಳಿವೆ.