samachara
www.samachara.com
‘ನಾರ್ಥ್‌ ಸೆಂಟಿನೆಲ್‌’; ಅಂಡಮಾನ್‌ನ ಈ ದ್ವೀಪಕ್ಕೆ ಹೋದರೆ ವಾಪಸ್‌ ಬರುವುದಿಲ್ಲ!
ಪಾಸಿಟಿವ್

‘ನಾರ್ಥ್‌ ಸೆಂಟಿನೆಲ್‌’; ಅಂಡಮಾನ್‌ನ ಈ ದ್ವೀಪಕ್ಕೆ ಹೋದರೆ ವಾಪಸ್‌ ಬರುವುದಿಲ್ಲ!

ಹಿಂದಿನ ಅಸ್ತಿತ್ವವನ್ನೇ ಕಾಯ್ದುಕೊಂಡು ಬರುತ್ತಿರುವ ಜಗತ್ತಿನ ಕೆಲವೇ ಕೆಲವು ಬುಡಕಟ್ಟುಗಳಲ್ಲಿ ಅತೀ ನಾರ್ಥ್‌ ಸೆಂಟಿನೆಲಿಸ್‌ಗಳದ್ದೂ ಒಂದು. ಸುಮಾರು 60 ಸಾವಿರ ವರ್ಷಗಳಿಂದ ಈ ದ್ವೀಪದಲ್ಲಿ ವಾಸವಾಗಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ.

ನಮ್ಮಲ್ಲಿನ ಬಹಳಷ್ಟು ಮಂದಿ ಆದಿವಾಸಿಗಳನ್ನು, ಬುಡಕಟ್ಟು ಸಮುದಾಯಗಳನ್ನು ಚಿತ್ರಗಳಲ್ಲಷ್ಟೇ ನೋಡಿರುತ್ತೇವೆ. ಆದಿವಾಸಿಗಳೆಂದರೆ ಕ್ರೂರಿಗಳು, ಕೊಲೆಪಾತಕಿಗಳು ಎಂದೇ ಬಹಳಷ್ಟು ಜನ ಭಾವಿಸಿರುತ್ತಾರೆ. ಆದರೆ, ಬಹಳಷ್ಟು ಆದಿವಾಸಿ ಸಮುದಾಯಗಳು ಇಂದು ಆಧುನಿಕ ಎನಿಸುವ ಜೀವನ ಶೈಲಿಯಲ್ಲಿ ಕೆಲವನ್ನಾದರೂ ಅಳವಡಿಸಿಕೊಂಡಿವೆ. ಹೊರಜಗತ್ತಿನ ಜತೆಗೆ ಸಂಬಂಧವೇ ಇಲ್ಲದಂತೆ ಬದುಕುತ್ತಿರುವುದು ಕೆಲವೇ ಕೆಲವು ಸಮುದಾಯಗಳು ಮಾತ್ರ. ಅಂತಹ ಆದಿವಾಸಿ ಸಮುದಾಯವೊಂದು ಭಾರತದಲ್ಲೂ ಇದೆ. ಒಂದೊಮ್ಮೆ ಅವರನ್ನು ಭೇಟಿ ಮಾಡುವ ಮನಸ್ಸಿದ್ದರೆ ಜೀವವನ್ನೇ ಬಿಡಬೇಕಾಗಬಹುದು!

ಹೌದು, ಇಂತಹದ್ದೊಂದು ಪುರಾತನವಾದ, ಆಧುನಿಕ ಜಗತ್ತನ್ನೆ ಕಾಣದ, ಅದರ ಬಗ್ಗೆ ಅರಿವೂ ಇಲ್ಲದ ಸಮುದಾಯ ಭಾರತದಲ್ಲಿದೆ. ಹೆಸರು ನಾರ್ಥ್‌ ಸೆಂಟಿನೆಲೀಸ್‌. ಇರುವುದು ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹಗಳ ಸಮೀಪದ ಪುಟ್ಟ ದ್ವೀಪವೊಂದರಲ್ಲಿ.

‘ನಾರ್ಥ್‌ ಸೆಂಟಿನೆಲ್‌’; ಅಂಡಮಾನ್‌ನ ಈ ದ್ವೀಪಕ್ಕೆ ಹೋದರೆ ವಾಪಸ್‌ ಬರುವುದಿಲ್ಲ!

ಬಂಗಾಳ ಕೊಲ್ಲಿ ಸಾಗರದಲ್ಲಿನ ಅಂಡಮಾನ್‌ ನಿಕೋಬರ್‌ ದ್ವೀಪಗಳ ಪೈಕಿ ಒಂದಾದ ಈ ನಾರ್ಥ್‌ ಸೆಂಟಿನೆಲ್‌ ದ್ವೀಪ ಸುಮಾರು 60 ಚದರ ಕಿಲೋಮೀಟರ್‌ಗಳಷ್ಟು ಚಿಕ್ಕದಾಗಿರುವ ಭೂ ಪ್ರದೇಶ. ಕರ್ನಾಟಕದ ರಾಜಧಾನಿ ಬೆಂಗಳೂರಿಗಿಂತ ಅಂದಾಜು 10 ಪಟ್ಟು ಚಿಕ್ಕದು. ಆದರೆ ದ್ವೀಪದ ಸುತ್ತಲೂ ಕೂಡ ಅದ್ಭುತವಾದ ತೀರ ಪ್ರದೇಶಗಳಿವೆ. ಸುತ್ತಮುತ್ತಲೆಲ್ಲಾ ಹವಳದ ದಿಣ್ಣೆಗಳಿವೆ. ಆದರೆ ಹೋಗಲು ಮಾತ್ರ ಸಾಧ್ಯವಿಲ್ಲ. ಹೋದರೆ ತಿರುಗಿ ಬರುವುದಿಲ್ಲ!

ಭಾರತ ಸರಕಾರದ ಸುಪರ್ದಿಯಲ್ಲಿರುವ ಈ ದ್ವೀಪಕ್ಕೆ ಹೊರಗಿನ ವ್ಯಕ್ತಿಗಳು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಕಾರಣ ದ್ವೀಪದಲ್ಲಿರುವ ಆದಿವಾಸಿಗಳು. ಈ ಆದಿವಾಸಿಗಳನ್ನು ನಾರ್ಥ್‌ ಸೆಂಟಿನೆಲೀಸ್ ಗುರುತಿಸಲಾಗುತ್ತದೆ. ನಾರ್ಥ್‌ ಸೆಂಟಿನೆಲ್‌ ದ್ವೀಪದಲ್ಲಿರುವ ಕಾರಣ ಈ ಹೆಸರು ಬಂದಿದೆ. ಅವರು ಅವರಿಗೆ ಯಾವ ಹೆಸರನ್ನು ಇಟ್ಟುಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ.

ಹೊರ ಜಗತ್ತಿನಿಂದ ದೂರ ಉಳಿದು ತಮ್ಮ ಹಳೆಯ ಅಸ್ತಿತ್ವವನ್ನೇ ಕಾಯ್ದುಕೊಂಡು ಬರುತ್ತಿರುವ ಜಗತ್ತಿನ ಕೆಲವೇ ಕೆಲವು ಬುಡಕಟ್ಟುಗಳಲ್ಲಿ ಅತೀ ಪ್ರಾಚೀನವೆನಿಸುವ ಜನಾಂಗ ನಾರ್ಥ್‌ ಸೆಂಟಿನೆಲೀಸ್‌ಗಳದ್ದು. ಸರಿಸುಮಾರು 60,000 ವರ್ಷಗಳಿಂದ ಈ ಬುಡಕಟ್ಟು ಜನಾಂಗ ಈ ದ್ವೀಪದಲ್ಲಿ ವಾಸವಾಗಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಇವರು ಎಲ್ಲಿಂದ ಬಂದವರು, ಈ ಭೂಭಾಗಕ್ಕೆ ಸೇರಿದ್ದವರು ಎನ್ನುವ ಯಾವ ಮಾಹಿತಿಯೂ ಕೂಡ ಇಲ್ಲ. ಕಾರಣ ಈ ಸಮುದಾಯ ಹೊರ ಜಗತ್ತಿನ ಜನರನ್ನು ತನ್ನ ಹತ್ತಿರಕ್ಕೆಯೇ ಬಿಟ್ಟುಕೊಳ್ಳುವುದಿಲ್ಲ.

ಸಂಶೋಧಕರು ಹೇಳುವಂತೆ ಈ ಸಮುದಾಯದ ಜನಸಂಖ್ಯೆ ಸುಮಾರು 400ರವರೆಗೆ ಇರಬಹುದು. ಯಾರದರೂ ಬಳಿಗೆ ಬಂದರೆ ಬಿಲ್ಲು ಬಾಣಗಳನ್ನು ಬಳಸಿ ಕೊಲ್ಲುತ್ತಾರೆ. ಆದ್ದರಿಂದ ಸರಿಯಾದ ಲೆಕ್ಕವೂ ಕೂಡ ಸಿಕ್ಕಿಲ್ಲ.

ಅಂಡಮಾನ್‌ ದ್ಪೀಪಗಳಲ್ಲಿ ಈಗ 3 ಆದಿವಾಸಿ ಸಮುದಾಯಗಳು ಜೀವಿಸುತ್ತಿವೆ. ಹಿಂದೆ ಯುರೋಪಿಯನ್‌ ಅಧ್ಯಯನಕಾರರು ಈ ದ್ವೀಪಗಳಲ್ಲಿ 5 ಬುಡಕಟ್ಟು ಸಮುದಾಯಗಳಿವೆ ಎಂದು ಹೇಳಿದ್ದರು. ಆದರೆ ಈಗ 2 ಸಮುದಾಯಗಳು ನಶಿಸಿಹೋಗಿವೆ. ಉಳಿದಿರುವ ಮೂರು ಸಮುದಾಯಗಳೆಂದರೆ ಜರವಾ, ಒಂಗೆ ಮತ್ತು ಸೆಂಟಿನೆಲೀಸ್‌.

ಅಧ್ಯಯನಗಳು ಹೇಳುವಂತೆ ಜರವಾ ಮತ್ತು ಒಂಗೆ ಸುಮಾರು 70 ಸಾವಿರ ವರ್ಷಗಳ ಹಿಂದೆ ಈ ಭೂಭಾಗಕ್ಕೆ ಬಂದು ನೆಲಸಿರಬಹುದು. ಅದು ಹಿಮಯುಗವಾಗಿದ್ದು, ಮ್ಯಾನ್ಮಾರ್‌ ಮತ್ತು ಅಂಡಮಾನ್‌ ದ್ವೀಪಗಳ ನಡುವೆ ಉಂಟಾಗಿದ್ದ ಹಿಮ ಸೇತುವೆಯನ್ನು ಬಳಸಿ, ಈ ದ್ವೀಪ ಸೇರಿರಬಹುದಾದ ಊಹೆಗಳನ್ನು ಅಧ್ಯಯನಕಾರರು ಮುಂದಿಟ್ಟಿದ್ದಾರೆ. ಈ ಎರಡು ಸಮುದಾಯಗಳ ಮಧ್ಯೆ ಸಾಮ್ಯತೆಗಳಿಲ್ಲ. ಆದರೆ ಆಫ್ರಿಕಾ ಮೂಲದಿಂದ ಬಂದವರು ಎಂದು ಅಧ್ಯಯನಕಾರರು ಹೇಳುತ್ತಾರೆ. ಈ ಸಮುದಾಯಗಳು ಮುಖ್ಯಭೂಮಿಯಾದ ಭಾರತದಿಂದಲೇ ಬಂದಿವೆ ಎಂದೂ ಕೂಡ ಕೆಲ ಅಧ್ಯಯನಕಾರರು ವಾದ ಮಂಡಿಸುತ್ತಾರೆ. ಆದರೆ ಈ ಜಿಜ್ಞಾಸೆಗೆ ಉತ್ತರ ದೊರೆತಿಲ್ಲ.

ಈ ಆದಿವಾಸಿಗಳನ್ನು ನೋಡುವ ಸಲುವಾಗಿ ಸಫಾರಿ ಇತ್ತು. ಸುತ್ತಲೂ ಭದ್ರಗೊಳಿಸಿದ ಬಸ್‌ನಲ್ಲಿ ಕೂತು ಕಾಡೊಳಗಿನ ಆದಿವಾಸಿಗಳನ್ನು ಕಾಡು ಪ್ರಾಣಿಗಳಂತೆ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಆದರೆ ಈಗ ಇದನ್ನು ಸ್ಥಗಿತಗೊಳಿಸಲಾಗಿದೆ. 2014ರ ವೇಳೆ ಆದಿವಾಸಿ ಮಹಿಳೆಯ ಬೆತ್ತಲೆ ದೇಹದ ವೀಡಿಯೋ ಮಾಡಿ, ದೌರ್ಜನ್ಯ ಎಸಗಿದ ಪ್ರಕರಣ ವರದಿಯಾಗಿತ್ತು.

ಜರವಾ ಮತ್ತು ಒಂಗೆಗಳ ಬಗ್ಗೆ ಒಂದಷ್ಟು ಮಾಹಿತಿಯಿದೆ. ಆದರೆ ನಾರ್ಥ್‌ ಸೆಂಟಿನೆಲೀಸ್‌ ಬಗ್ಗೆ ತಿಳಿದಿರುವುದು ಅತ್ಯಲ್ಪ. ಕಾರಣ ಅವರು ಅನುಸರಿಸುತ್ತಿರುವ ಗೌಪ್ಯತೆ. ಈ ಸಮುದಾಯ ನವ ಶಿಲಾಯುಗಕ್ಕಿಂತಲೂ ಹಿಂದಿನ ಕಾಲದಲ್ಲೇ ಈ ಭೂಭಾಗಕ್ಕೆ ವಲಸೆ ಬಂದಿತ್ತು ಎನ್ನಲಾಗಿದೆ. ಯಾರು ಕೂಡ ಈ ಜನರನ್ನು ತಲುಪಲು ಸಾಧ್ಯವಾಗದ ಕಾರಣ ಇವರ ಮೂಲ ಏನು ಎಂಬುದು ಜಗತ್ತಿಗೆ ತಿಳಿಯದೆಯೇ ಉಳಿದಿದೆ. ದೂರದಿಂದಲೇ ಈ ಸಮುದಾಯದ ಕೆಲವು ಫೋಟೊಗಳನ್ನು ಕ್ಲಿಕ್ಕಿಸಲಾಗಿದೆ. ಆದರೆ ಆ ಫೋಟೊಗಳು ಸ್ಪಷ್ಟವಾಗಿಲ್ಲ.

‘ನಾರ್ಥ್‌ ಸೆಂಟಿನೆಲ್‌’; ಅಂಡಮಾನ್‌ನ ಈ ದ್ವೀಪಕ್ಕೆ ಹೋದರೆ ವಾಪಸ್‌ ಬರುವುದಿಲ್ಲ!

1800ರ ಸುಮಾರಿಗೆ ಬ್ರಿಟಿಷ್‌ ಅಧ್ಯಯನಕಾರರು ಈ ಸಮುದಾಯದ ಅಧ್ಯಯನಕ್ಕೆ ಮುಂದಾಗಿದ್ದರು. ದ್ವೀಪಕ್ಕೆ ಕಾಲಿಟ್ಟು ಬದುಕಿ ಮರಳುವುದರ ಜತೆಗೆ ಅಧ್ಯಯನಕ್ಕೆಂದು 6 ಜನ ನಾರ್ಥ್‌ ಸೆಂಟಿನೆಲ್‌ ಸಮುದಾಯದ ವ್ಯಕ್ತಿಗಳನ್ನೂ ಕೂಡ ಬಂಧಿಸಿ ದಕ್ಷಿಣ ಅಂಡಮಾನ್‌ನ ಪೋರ್ಟ್‌ ಬ್ಲೇರ್‌ಗೆ ತಂದಿದ್ದರು. ಆದರೆ ಕೆಲವೇ ದಿನಗಳಲ್ಲಿ ನಾರ್ಥ್‌ ಸೆಂಟಿನೆಲ್‌ ಆದಿವಾಸಿಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಅನಾರೋಗ್ಯಕ್ಕೆ ತುತ್ತಾದರು. 6 ಜನರಲ್ಲಿ ಇಬ್ಬರು ಪ್ರಾಣ ಬಿಟ್ಟರು. ಅವರಲ್ಲಿ ಆಧುನಿಕ ಜಗತ್ತಿನ ರೋಗ ರುಜಿನಗಳಿಗೆ ಹೊಂದಿಕೊಳ್ಳುವ ರೊಗ ನಿರೋಧಕ ಶಕ್ತಿ ಇರಲಿಲ್ಲ. ಆದ್ದರಿಂದ ಆದಿವಾಸಿಗಳನ್ನು ಮತ್ತೆ ನಾರ್ಥ್‌ ಸೆಂಟಿನೆಲ್‌ ದ್ವೀಪಕ್ಕೆ ಬಿಡಲಾಯಿತು. ಜತೆಗೆ ಸಾಕಷ್ಟು ಉಡುಗೊರೆಗಳನ್ನೂ ಕೂಡ ಕೊಟ್ಟುಕಳಿಸಲಾಯಿತು.

ನಾರ್ಥ್‌ ಸೆಂಟಿನೆಲ್‌ ಸಮುದಾಯವನ್ನು ಹೊರಗಿಂದ ನೋಡಿ ತಿಳಿದಿರುವುದಷ್ಟೇ ಇಡೀ ಜಗತ್ತಿಗೆ ಗೊತ್ತಿರುವ ಮಾಹಿತಿ. ಅವರದ್ದೇ ಆದ ಸಂಸ್ಕೃತಿಯನ್ನು ಹೊಂದಿರುವ ನಾರ್ಥ್ ಸೆಂಟಿನೆಲ್‌ ಸಮುದಾಯ ಒಟ್ಟಾರೆಯಾಗಿ ಬೇಟೆಯಾಡಿ ಜೀವನ ಸಾಗಿಸುತ್ತದೆ. ದೊಡ್ಡ ಹಲ್ಲಿಗಳು, ಹಂದಿಗಳು, ಹಣ್ಣುಗಳು ಹಾಗೂ ಸುತ್ತಲಿನ ಸಮುದ್ರ ತೀರದಲ್ಲಿ ದೊರೆಯುವ ಆಹಾರಗಳನ್ನು ನಂಬಿಕೊಂಡಿದೆ. ಆತ್ಮ ರಕ್ಷಣೆಗಾಗಿ ಕೈಯಿಂದಲೇ ತಯಾರಿಸಿದ ಬಿಲ್ಲು ಬಾಣಗಳನ್ನು, ಭರ್ಜಿಗಳನ್ನು ಈ ಜನ ಬಳಸುತ್ತಾರೆ.

ಈ ಅಪರೂಪದ ಆದಿವಾಸಿ ಸಮುದಾಯದ ರಕ್ಷಣೆಗಾಗಿ ಭಾರತ ಸರಕಾರ ನಾರ್ಥ್ ಸೆಂಟಿನೆಲ್‌ ದ್ವೀಪವನ್ನು ಹಾಗೂ ಅದರ ಸುತ್ತಲಿನ ಮೂರು ಮೈಲಿಗಳಷ್ಟು ಸಾಗರವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿದೆ. ಆಧುನಿಕ ಜಗತ್ತಿನ ಯಾರೂ ಕೂಡ ಈ ಭಾಗಕ್ಕೆ ತೆರಳುವಂತಿಲ್ಲ. ಈ ನಿಯಂತ್ರಣದಿಂದಾಗಿ ಆಧುನಿಕ ಜಗತ್ತಿನ ಕಾಯಿಲೆಗಳು ಈ ಭಾಗವನ್ನು ತಲುಪಿಲ್ಲ. ಆಧುನಿಕ ಜನರು ಈ ಪ್ರದೇಶಕ್ಕೆ ಕಾಲಿಟ್ಟರೆ ಸರಕಾರವೇನು ಶಿಕ್ಷೆ ನೀಡುವ ಅಗತ್ಯವಿಲ್ಲ. ದ್ವೀಪದೊಳಗಿನ ಆದಿವಾಸಿ ಸಮುದಾಯದವರೇ ಅವರನ್ನು ಕೊಲ್ಲುತ್ತಾರೆ.