samachara
www.samachara.com
‘ಬದುಕು ಸುಂದರ ಹೋರಾಟ’: ಅಶಾಂತಗೊಂಡ ವಾತಾವರಣದಲ್ಲಿ ಶಾಂತಿಗಾಗಿ ಕಾಲ್ನಡಿಗೆ
ಪಾಸಿಟಿವ್

‘ಬದುಕು ಸುಂದರ ಹೋರಾಟ’: ಅಶಾಂತಗೊಂಡ ವಾತಾವರಣದಲ್ಲಿ ಶಾಂತಿಗಾಗಿ ಕಾಲ್ನಡಿಗೆ

ಕೇವಲ 8 ಜನರಿಂದ ಆರಂಭಗೊಂಡ ಕಾಲ್ನಡಿಗೆ 30 ದಿನಗಳ ಕಾಲ 300 ಮೈಲಿಗೂ ಹೆಚ್ಚು ದೂರವನ್ನು ಕ್ರಮಿಸಿ, ತನ್ನ ಸಂಖ್ಯೆಯನ್ನು 65ಕ್ಕೆ ಏರಿಸಿಕೊಂಡಿದೆ. ರಂಜಾನ್ ಉಪವಾಸದ ಜತೆ ಕಾಲ್ನಡಿಗೆಯನ್ನೂ ಆರಂಭಿಸಿರುವ ಈ ಜನರು ಬಯಸುತ್ತಿರುವುದು ಶಾಂತಿಯನ್ನು.

ಕೇವಲ ಎಂಟು ಜನರಿಂದ ಆರಂಭಗೊಂಡ ಕಾಲ್ನಡಿಗೆ 30 ದಿನಗಳ ಕಾಲ 300 ಮೈಲಿಗೂ ಹೆಚ್ಚು ದೂರವನ್ನು ಕ್ರಮಿಸಿ, ತನ್ನ ಸಂಖ್ಯೆಯನ್ನು 65ಕ್ಕೆ ಏರಿಸಿಕೊಂಡಿದೆ. ರಂಜಾನ್ ಉಪವಾಸದ ಜತೆಗೆ ಕಾಲ್ನಡಿಗೆಯನ್ನೂ ಆರಂಭಿಸಿರುವ ಈ ಜನರು ಬಯಸುತ್ತಿರುವುದು ಶಾಂತಿಯನ್ನು.

ಈ ತಂಡದಲ್ಲಿನ ಒಬ್ಬ ಹುಡುಗ ಇದೀಗಷ್ಟೇ 10ನೇ ಇಯತ್ತೆಯ ಪರೀಕ್ಷೆ ಬರೆದಿದ್ದಾನೆ. ರಜಾ ದಿನಗಳನ್ನು ಕಾಲ್ನಡಿಗೆಯಲ್ಲಿ ಕಳೆಯುತ್ತಿದ್ದಾನೆ. ಮತ್ತೊಬ್ಬಾತ ಕವಿ, ಹಿಂದೊಮ್ಮೆ 4 ಗುಂಡುಗಳು ಆತನ ಎದೆಯನ್ನು ಸೀಳಿದ್ದವು. ಅವುಗಳಲ್ಲೊಂದು ಇನ್ನೂ ಆತನ ಎದೆಗೂಡೊಳಗೇ ಇದೆ. ಇನ್ನೊಬ್ಬ ಬಾಡಿ ಬಿಲ್ಡರ್‌, ಸುದೀರ್ಘ ನಡಿಗೆಯಿಂದ ತನ್ನ ದೇಹದ 20 ಪೌಂಡ್‌ ತೂಕವನ್ನು ಇಳಿಸಿಕೊಂಡಿದ್ದಾನೆ. ಒಬ್ಬ ಪೊಲೀಯೋ ಕಾಯಿಲೆಗೆ ತುತ್ತಾಗಿರುವವನು. ಒಬ್ಬರು ನಿವೃತ್ತ ಸೈನ್ಯಾಧಿಕಾರಿ. ದಿನಗೂಲಿ ಕಾರ್ಮಿಕರು, ರೈತರು, ಯುದ್ಧದ ಸಮಯದಲ್ಲಿ ತನ್ನ ಕಣ್ಣುಗಳನ್ನು ಕಳೆದುಕೊಂಡ ಒಬ್ಬ ಮೆಕಾನಿಕ್‌ –ಹೀಗೆ ಹಲವಾರು ಜನ ಯುದ್ಧವನ್ನು ಬದಿಗೊತ್ತಿ ಶಾಂತಿಗಾಗಿ ಹಪಹಿಪಿಸುತ್ತಿದ್ದಾರೆ. ಅದಕ್ಕಾಗಿ ಕಾಲ್ನಡಿಗೆಯನ್ನು ಆರಂಭಿಸಿದ್ದಾರೆ. ಆಫ್ಘಾನಿಸ್ತಾನದ ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಶಾಲೆ, ಮಸೀದಿ, ಪ್ರಾರ್ಥನಾ ಸ್ಥಳ, ಜನ ಸೇರುವ ಜಾಗ ಹೀಗೆ ಎಲ್ಲೆಡೆ ನಿಂತು ಶಾಂತಿಗಾಗಿ ಹಂಬಲಿಸುತ್ತಾರೆ.

ಕಾಲ್ನಡಿಗೆ ಆರಂಭಿಸಿರುವ ತಂಡದ ಸದಸ್ಯರು.
ಕಾಲ್ನಡಿಗೆ ಆರಂಭಿಸಿರುವ ತಂಡದ ಸದಸ್ಯರು.

ಇದು ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ಕೆಲವು ಜನರು ಸೇರಿ ತಳಮಟ್ಟದಿಂದ ನಡೆಸುತ್ತಿರುವ ಚಿಕ್ಕ ಹೋರಾಟದ ಕತೆ. ಮೊದಲಿಗೆ ಈ ಕಾಲ್ನಡಿಗೆ ಹೋರಾಟ ಆರಂಭಗೊಂಡಾಗ ಒಟ್ಟು 8 ಜನರಿದ್ದರು. ಹೆಲ್ಮಂಡ್‌ ಪ್ರದೇಶದಲ್ಲಿ ಸ್ಫೋಟಗೊಂಡ ಸೂಸೈಡ್‌ ಬಾಂಬ್‌ಗಳು ಕಬಳಿಸಿದ ಹತ್ತಾರು ಜನರ ಪ್ರಾಣ, ಗಾಯಗೊಂಡವರ ನೋವು ಇವರನ್ನು ಈ ಹೋರಾಟಕ್ಕೆ ಪ್ರೇರೇಪಿಸಿತ್ತು. ಮೊದಲಿಗೆ ಈ ಕಗ್ಗೊಲೆ ನಡೆದ ಜಾಗದಲ್ಲಿಯೇ ಯುವಕರ ಗುಂಪೊಂದು ಟೆಂಟ್‌ ಹಾಕಿ ಕುಳಿತುಕೊಂಡು ಮೌನ ಹೋರಾಟ ಆರಂಭಿಸಿತ್ತು. ಅವರ ಹೋರಾಟಕ್ಕಿರಲಿ, ರಕ್ತಕ್ಕೂ ಕೂಡ ಕವಡೆ ಕಾಸಿನ ಕಿಮ್ಮತ್ತಿರಲಿಲ್ಲ.

ಹೀಗೆ ಕುಳಿತಿದ್ದರೆ ಯಾವ ಉಪಯೋಗವೂ ಇಲ್ಲ ಎಂದೆನಿಸಿರಬೇಕು. ಯುವಕರು ರಂಜಾನ್ ತಿಂಗಳಿನಲ್ಲಿ ಉಪವಾಸದ ಜತೆಗೆ ಕಾಲ್ನಡಿಗೆಯನ್ನು ಆರಂಭಿಸಿದ್ದರು. ಆಫ್ಘಾನ್‌ನ ಉತ್ತರ ಭಾಗದಲ್ಲಿದ್ದ ಪುಟ್ಟ ಹಳ್ಳಿಯೊಂದರಿಂದ ಅರಂಭಗೊಂಡ ಅವರ ಕಾಲ್ನಡಿಗೆ ಈಗ ದಕ್ಷಿಣ ಆಫ್ಘಾನ್‌ವರೆಗೂ ಸಾಗಿ ಬಂದಿದೆ. 30 ದಿನಗಳುದ್ದಕ್ಕೂ 300 ಮೈಲಿಗಿಂತಲೂ ಹೆಚ್ಚು ದೂರವನ್ನು ಸಾಗಿ ಬಂದ ಈ ಮೆರವಣಿಗೆ ಈಗ ಸಧ್ಯಕ್ಕೆ ಗಜ್ನಿ ನಗರದ ಪುಟ್ಟ ಮಸೀದಿಯೊಂದರ ಬಳಿ ಬೀಡು ಬಿಟ್ಟಿದೆ. ಇನ್ನೂ ಮುಂದಕ್ಕೆ ಸಾಗಲಿದೆ. ಬದುಕಿನ ನೋವುಗಳ ಮಧ್ಯೆ ಆಫ್ಘಾನಿಸ್ತಾನದ ಉರಿಬಿಸಿಲು ಇವರಿಗೆ ಲೆಕ್ಕಕ್ಕೇ ಇಲ್ಲ.

ಈ ಗುಂಪು ಕಾಲ್ನಡಿಗೆಯ ಜತೆಜತೆಗೆ ಹಾದಿಯಲ್ಲಿ ಸಿಗುವ ಜನತೆಗೆ ಯುದ್ಧದ ಬೀಕರತೆಯನ್ನು ವಿವರಿಸುತ್ತಿದೆ. ಸಮರ ನಮ್ಮ ಸ್ವಂತ ಬದುಕಿನೊಂದಿಗೆ ಹೇಗೆ ಚೆಲ್ಲಾಟವಾಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಸುತ್ತಿದೆ. ಹೇಗೆ ತಮ್ಮ ಅನ್ನವನ್ನು ಕಿತ್ತುಕೊಂಡಿದೆ ಎಂದು ಸಾರುತ್ತಿದೆ. ಕದನ ಕಿತ್ತುಕೊಂಡ ಬದುಕಿನ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದೆ. ದಿನನಿತ್ಯ ಹರಿಯುತ್ತಿರುವ ರಕ್ತದ ಹೊಳೆಗೆ ತಡೆಯೊಡ್ಡಿ ಶಾಂತಿಯ ಬಾವುಟ ನೆಡಬೇಕು ಎಂಬ ಈ ಗುಂಪಿನ ಆಸೆಗೆ ಸುತ್ತ ಸಿಗುವ ಜನರೆಲ್ಲರೂ ನೀರೆರೆಯುತ್ತಿದ್ದಾರೆ.

ವೈದ್ಯಕೀಯ ವ್ಯಾಸಂಗ ನಡೆಸುತ್ತಿರುವ 27ರ ಪ್ರಾಯದ ಇಕ್ಬಾಲ್‌ ಖೈಬರ್‌ ಈ ತಂಡದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಜನರ ಮುಂದೆ ಮಾತನಾಡುವಾಗ ತಂಡದ ಸದಸ್ಯರು ಅನುಭವಿಸಿದ ನೋವುಗಳು, ದಾರಿ ಸಿಕ್ಕವರು ಹಂಚಿಕೊಂಡ ದಾರುಣ ಕತೆಗಳನ್ನು ಸೇರಿಸಿ ಮನವೊಲಿಸುವು ಪ್ರಯತ್ನ ಮಾಡುತ್ತಾರೆ. “ಗಗನ ಚುಂಬಿ ಕಟ್ಟಡಗಳು, ಐಶಾರಾಮಿ ಕಾರುಗಳು, ಇವ್ಯಾವುವೂ ಕೂಡ ನಮ್ಮ ಬದುಕಿನ ಭಾಗವಲ್ಲ,” ಎನ್ನುತ್ತಾರೆ.

‘ಬದುಕು ಸುಂದರ ಹೋರಾಟ’: ಅಶಾಂತಗೊಂಡ ವಾತಾವರಣದಲ್ಲಿ ಶಾಂತಿಗಾಗಿ ಕಾಲ್ನಡಿಗೆ

ಹೀಗೆ ಹಾದಿಯಲ್ಲಿ ಸಾಗಿ ಬರುವಾಗ ವೃದ್ಧರೊಬ್ಬರು ಗುಂಪಿಗೆ ಎದುರಾಗಿದ್ದರು. ಅವರ ಸೊಸೆಯನ್ನು ಸ್ಥಳಿಯ ಪೊಲೀಸ್‌ ಅಧಿಕಾರಿಯೊಬ್ಬ ಅಪಹರಿಸಿ, ಅವರಲ್ಲೇ ಒಬ್ಬನಿಗೆ ಕೊಟ್ಟು ಮದುವೆ ಮಾಡಿದ್ದ. ಇದರಿಂದ ನೊಂದ ಆ ಮಹಿಳೆಯ ಗಂಡ ಮತ್ತು ಆತನ ತಮ್ಮ ತಾಲಿಬಾನ್‌ ಗುಂಪಿಗೆ ಸೇರಿಕೊಂಡರು. ಇದಾಗಿ ವಾರ ಕಳೆಯುವ ಮೊದಲೇ ಅವರಿಬ್ಬರ ಹೆಣಗಳು ಮನೆಯ ಮುಂದೆ ಬಂದಿದ್ದವು. ಹಳ್ಳಿ ಹಳ್ಳಿಗೂ ಇಂತಹ ಕತೆಗಳು ಸಿಗುತ್ತವೆ. ಒಳನಾಡುಗಳಲ್ಲಿ ತಾಲಿಬಾನ್ ಮತ್ತು ಸರಕಾರ ಇಬ್ಬರೂ ಕೂಡ ಶೋಷಕರ ಸ್ಥಾನದಲ್ಲಿ ನಿಲ್ಲುತ್ತಾರೆ. ಕೆಲವೊಮ್ಮೆ ಮೊದಲು ಗುಂಡು ಹಾರಿಸಿದ್ದು ಯಾರು ಎಂದೇ ತಿಳಿಯುವುದಿಲ್ಲ. ಈ ವಿಷಯವನ್ನೂ ಕೂಡ ತಂಡ ಮಾತಿನ ಮಧ್ಯೆ ಬಳಸಿಕೊಳ್ಳುತ್ತದೆ.

ಜನರ ಮುಂದೆ ನಿಂತು ಮಾತನಾಡುವಾಗ, ಪ್ರಾರ್ಥನೆಯೊಂದಿಗೆ ಮಾತುಗಳನ್ನು ಆರಂಭಿಸಿ ತಾವು ಯಾರು ಎನ್ನುವುದನ್ನು ಗುಂಪು ಪ್ರಸ್ತುತ ಪಡಿಸುತ್ತದೆ. “ನಮ್ಮ ಬದುಕು ದುಸ್ಥರಗೊಂಡಿದೆ,” ಎಂದು ತಂಡದ ಸದಸ್ಯ ಬಾಚಾಖಾನ್‌ ಮೌಲಾದಾದ್‌ ಚಿಕ್ಕ ಮೈಕ್‌ ಹಿಡಿದು ಕೂಗುತ್ತಾರೆ. ನಂತರದಲ್ಲಿ ಹಿಂದಿರುವ ಗುಂಪು “ಯುದ್ಧದಿಂದಾಗಿ, ಯುದ್ಧದಿಂಗಾಗಿ” ಎಂದು ಜೋರು ದನಿಯಲ್ಲಿ ಉಚ್ಚರಿಸುತ್ತದೆ.

ಸುಮಾರು 27ರ ಪ್ರಾಯದ ಮೌಲಾದಾದ್‌, ಅವರ ಮನೆಯಲ್ಲಿ ಅವರೇ ಹಿರಿಯ ವ್ಯಕ್ತಿ. ರಂಜಾನ್ ಮುಗಿದು ಒಂದು ವಾರಕ್ಕೆ ತಂಗಿಯ ಮದುವೆ ನಿಶ್ಚಯವಾಗಿದೆ. ಆದರೆ ಅದಕ್ಕಿಂತಲೂ ಈ ಕಾರ್ಯ ಮುಖ್ಯ ಎಂದು ಮೌಲಾದಾದ್‌ ಭಾವಿಸಿದ್ದಾರೆ.

ಕಾಲ್ನಡಿಗೆಯಲ್ಲಿ ಭಾಗಿಯಾಗಿರುವವರಲ್ಲಿ 17 ವರ್ಷದ ಮೊಹಮ್ಮದ್‌ ತಾಹಿರ್‌ ಎಲ್ಲರಿಗಿಂತಲೂ ಚಿಕ್ಕವನು. ತುರ್ತು ಚಿಕಿತ್ಸೆಯ ವಸ್ತುಗಳು, 2 ಊರುಗೋಲು, ಕೊಡೆಗಳು, ಪ್ಲಾಸ್ಟಿಕ್‌ ಹೊದಿಕೆ, ಮೊಬೈಲ್‌ಗಳನ್ನು ಚಾರ್ಜ್ ಮಾಡಲು ಸೋಲಾರ್‌ ಸಾಧನ ಇತ್ಯಾದಿಗಳನ್ನು ಹೊತ್ತು ಸದಾ ಮುಂದಿರುತ್ತಾನೆ. ಇವುಗಳ ಜತೆಗೆ ಪುಸ್ತಕಗಳು, ಬಾಚಣಿಕೆ, ಸೋಪು, ಹಲ್ಲುಜ್ಜುವ ಬ್ರಷ್‌, ಹೇರ್‌ ಜೆಲ್‌ ಇತ್ಯಾದಿಗಳ ಸಹಿತ ವಿಟಮಿನ್‌ ಸಿ ಮಾತ್ರೆಗಳು ಕೂಡ ಅವನ ಬಳಿಯಿವೆ.

ತಂಡದೊಳಗಿರುವ ಹೆಚ್ಚು ಹರ್ಷಚಿತ್ತ ಸದಸ್ಯ ಎಂದರೆ ಬಹುಲಾಲ್ ಪಾಟ್ಯಾಲ್‌. ಮೆಡಿಕಲ್‌ ಸ್ಟೋರ್‌ನ ಮಾಲಿಕರಾದ ಬಹುಲಾಲ್‌, ಈ ಮೆರವಣಿಗೆಯ ವಿಷಯವನ್ನು ತಿಳಿದು ತನ್ನ ಮೂರು ತಿಂಗಳ ಹಸುಗೂಸಿನ ಪಾಲನೆಯನ್ನು ಬದಿಗೊತ್ತಿ ಬಂದಿದ್ದಾರೆ. ತಂಡದ ಸದಸ್ಯರಿಗೆಲ್ಲರಿಗೂ ಈ ಬಹುಲಾಲ್‌ ಪಾಟ್ಯಾಲರೇ ಡಾಕ್ಟರ್‌. ಬಹುಲಾಲ್‌ ತಾವು ಬರುವಾಗಲೇ ಅಗತ್ಯವೆನಿಸುವ ಎಲ್ಲಾ ಔಷಧಿಗಳ ಮೂಟೆಯನ್ನೇ ಹೊತ್ತು ತಂದಿದ್ದಾರೆ. ಮಸೀದಿಗಳಲ್ಲಿ ತಂಗಿದ ವೇಳೆ ತಂಡದ ಸದಸ್ಯರ ಆರೋಗ್ಯವನ್ನು ಗಮನಿಸಿಕೊಳ್ಳುತ್ತಾರೆ.

“ಈ ಕಾಲ್ನಡಿಗೆಯನ್ನು ಮುಗಿಸಿ ಮನೆಗೆ ತೆರಳುವುದರೊಳಗೆ ತೂಕವನ್ನು ಇಳಿಸಿಕೊಂಡು ಬರದಿದ್ದರೆ ಮನೆಯೊಳಗೆ ಸೇರಿಸುವುದಿಲ್ಲ ಎಂದು ಹೆಂಡತಿ ಎಚ್ಚರಿಸಿದ್ದಾಳೆ,” ಎಂದು ನಗುತ್ತಾರೆ ಬಹುಲಾಲ್.

ಚಿಕಿತ್ಸೆಯಲ್ಲಿ ನಿರತರಾಗಿರುವ ಬಹುಲಾಲ್‌ ಪಾಟ್ಯಾಲ್‌.
ಚಿಕಿತ್ಸೆಯಲ್ಲಿ ನಿರತರಾಗಿರುವ ಬಹುಲಾಲ್‌ ಪಾಟ್ಯಾಲ್‌.

ತಂಡ ರಾತ್ರಿ ವೇಳೆ ಎಲ್ಲಿ ತಂಗಿರುತ್ತದೋ ಅಲ್ಲಿನ ಸ್ಥಳಿಯರ ಜತೆ ಮಾತಿಗೆ ಇಳಿಯುತ್ತದೆ. ಮುಂದಿನ ದಿನದ ಕಾರ್ಯಯೋಜನೆಗಳನ್ನು ತಯಾರು ಮಾಡಿಕೊಳ್ಳುತ್ತದೆ. ಇವುಗಳ ಜತೆಗೆ ಯುದ್ಧ ಮತ್ತು ಶಾಂತಿ ಕುರಿತಾದ ಚರ್ಚೆಗಳೂ ಕೂಡ ನಡೆಯುತ್ತವೆ. ಮಾತನ ನಡುವೆ ಕತೆಗಳು, ಸಿಗರೇಟ್‌, ಟೀ ಇತ್ಯಾದಿಗಳ ಹಂಚಿಕೆಯಾಗುತ್ತವೆ. 65ರ ಪ್ರಾಯದ ನಿವೃತ್ತ ಸೈನ್ಯಾಧಿಕಾರಿ ಅತವುಲ್ಲಾ ಖಾನ್‌, ತಮ್ಮ ಯುದ್ಧದ ಬದುಕಿನ ಕುರಿತು ಹೇಳುತ್ತಾರೆ. ಸಮವಸ್ತ್ರದಲ್ಲಿದ್ದ ತಮ್ಮ ಫೋಟೊವನ್ನು ತೋರಿಸುತ್ತಾರೆ. ಬಾಡಿ ಬಿಲ್ಡರ್‌ ಝಲಾಂಡ್‌, ಬೇರೆ ಬೇರೆ ದೇಶಗಳಲ್ಲಿ ತಾವು ಗೆದ್ದ ಕಾಂಪಿಟೇಷನ್‌ಗಳ ವೀಡಿಯೋಗಳನ್ನು ತೋರಿಸುತ್ತಾರೆ. ಹೀಗೆ ಇನ್ನಿತ್ಯಾದಿ ಮಾತುಕತೆಗಳಾಗಿ ಎಲ್ಲರೂ ಮಲಗುವ ವೇಳೆ ರಾತ್ರಿ ಸಮಯ 2 ಗಂಟೆ ಕಳೆದಿರುತ್ತದೆ.

ತಂಡದ ಸದಸ್ಯರು.
ತಂಡದ ಸದಸ್ಯರು.

ಇಡೀ ಗುಂಪಿನಲ್ಲೇ ಹಿರಿಯರೆನಿಸಿಕೊಂಡಿರುವ ಮೊಹಮ್ಮದ್‌ಗೆ ಈಗ 65ರ ಪ್ರಾಯ. “ಯುದ್ಧ ಪ್ರಾರಂಭವಾದಾಗ ನನಗೆ 15 ವರ್ಷವಿತ್ತು. 8ನೇ ತರಗತಿ ಓದುತ್ತಿದ್ದೆ. ಇದು 40 ವರ್ಷಗಳ ಹಿಂದಿನ ಕತೆ,” ಎನ್ನುತ್ತಾರೆ ಮೊಹಮ್ಮದ್.

ಇತ್ತೀಚಿಗಷ್ಟೇ ಈ ತಂಡಕ್ಕೆ ಸೇರಿಕೊಂಡ ಹೊಸ ಸದಸ್ಯನ ಹೆಸರು ಮೊಹಮ್ಮದ್‌ ಅನ್ವರ್‌. ಅಫ್ಘಾನ್‌ನ ಪಶ್ಚಿಮ ಭಾಗದ ಹಳ್ಳಿಯೊಂದರ ನಿವಾಸಿಯಾದ ಅನ್ವರ್‌, ಈ ತಂಡದ ಹೋರಾಟಗಾಥೆಯನ್ನು ಕೇಳಿ ಮೂರು ದಿನಗಳ ಕಾಲದ ಬಸ್‌ ಪ್ರಯಾಣವನ್ನು ಮುಗಿಸಿ ಈ ತಂಡದೊಂದಿಗೆ ಸೇರಿಕೊಂಡಿದ್ದಾರೆ. “ನಾನು ನನ್ನ ಸ್ನೇಹಿತರನ್ನು ಸೇರಲು ಹೊರಟಿರುವುದಾಗಿ ನನ್ನ ಹೆಂಡತಿಗೆ ಹೇಳಿ ಬಂದಿದ್ದೇನೆ,” ಎನ್ನುತ್ತಾರೆ ಅನ್ವರ್‌.

ಗುಂಪಿನ ಸಂಖ್ಯೆ ದೊಡ್ಡದಾಗುತ್ತಿದೆ. ಆದರೆ ದಿನಚರಿ ಬದಲಾಗುತ್ತಿಲ್ಲ. ಪ್ರತಿದಿನ ಹೆದ್ದಾರಿಯ ಬದಿಯಲ್ಲಿ ಸರಿಸುಮಾರು 15 ಮೈಲಿಗಳಷ್ಟು ನಡೆಯುತ್ತಾರೆ. ಮುಂದೆ ಸಿಗುವ ಮಸೀದಿಯ ಬಳಿ ತಂಗುತ್ತಾರೆ. ಜನಸಂಖ್ಯೆ ವಿರಳವಾಗಿರುವ ಪ್ರದೇಶಗಳಲ್ಲಿ ಬೇಸರ ಕಾಡುತ್ತದೆ. ಹಗಲಿನ ಬಿಸಿಲಿಗೆ ದೇಹ ಬಳಲಿ, ಕಾಲೆಳೆದು ಸಾಗುವಂತಾಗುತ್ತದೆ. ಬಿಸಿಲಿಳಿದು ಸಂಜೆಯಾಗುತ್ತಿದ್ದಂತೆ ಮೊದಲಿನ ಹುಮ್ಮಸ್ಸು ಮರಳಿ ಬರುತ್ತದೆ.

ಹಳ್ಳಿಯೊಂದರ ಜನರು ತಂಡದ ಸದಸ್ಯರಿಗೆ ಇಫ್ತಾರ್‌ ಆಯೋಜಿಸಿದ ಚಿತ್ರ.
ಹಳ್ಳಿಯೊಂದರ ಜನರು ತಂಡದ ಸದಸ್ಯರಿಗೆ ಇಫ್ತಾರ್‌ ಆಯೋಜಿಸಿದ ಚಿತ್ರ.

ಮೆರವಣಿಗೆ ಸಾಗಿಬಂದ ಹಾದಿಯಲ್ಲಿ ತಂಡಕ್ಕೆ ಆಹಾರ ಸಿಗದಿದ್ದದ್ದು ಕೇವಲ ಒಂದು ಹಳ್ಳಿಯಲ್ಲಿ ಮಾತ್ರ. ತಾಲಿಬಾನ್‌ ಜನರೇ ಹೆಚ್ಚಾಗಿರುವ ಆ ಹಳ್ಳಿಯಲ್ಲಿ ಕೆಲವರು ಆಹಾರ ವ್ಯವಸ್ಥೆಯನ್ನೇನೋ ಮಾಡಿದ್ದರು. ಆದರೆ ಸ್ಥಳಕ್ಕೆ ಬಂದ ತಾಲಿಬಾನ್ ಸದಸ್ಯರು ಮೆರವಣಿಗೆಗಾರರ ತಂಡವನ್ನು ಅಲ್ಲಿರಲು ಬಿಡಲಿಲ್ಲ. ಇನ್ನು ಸ್ವಲ್ಪ ಹೆಚ್ಚಿನ ಮಾತುಕತೆಗಳಾಗಿದ್ದರೆ, ನಮ್ಮ ತಂಡದ ಸದಸ್ಯರ ಪ್ರಾಣಗಳೇ ಹೋಗುತ್ತಿದ್ದವು ಎನ್ನುತ್ತಾರೆ ತಂಡದವರೊಬ್ಬರು.

ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್‌ನವರೆಗೂ ನಡೆದು ಈ ಹೋರಾಟವನ್ನು ಅಂತ್ಯಗೊಳಿಸಬೇಕು ಎಂದು ತಂಡ ತೀರ್ಮಾನಿಸಿದೆ. ರಾಜಕೀಯ ವ್ಯಕ್ತಿಗಳು ನಮ್ಮ ಈ ಹೋರಾಟದ ಫಲವನ್ನು ಕಬಳಿಸಿಬಿಡಬಹುದೇ ಎಂಬ ಭಯವೂ ಕೂಡ ತಂಡದಲ್ಲಿದೆ. ದೇಶದ ಒಳನಾಡಿನಲ್ಲಿರುವ ಜನರು ಅನುಭವಿಸುತ್ತಿರುವಷ್ಟು ನೋವು ನಗರದವರಿಗಿಲ್ಲ. ಹಾಗಾಗಿ ನಮ್ಮನ್ನು ಕಾಬುಲ್‌ ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಯೋಚನೆಯೂ ಕೂಡ ತಂಡವನ್ನು ಕಾಡುತ್ತಿದೆ.

ಈ ಚಿಕ್ಕ ಹೋರಾಟವನ್ನು ಆರಂಭಿಸಿರುವವರಿಗೆ, 4 ದಶಕಗಳಿಂದ ನಡೆಯುತ್ತಲೇ ಸಂಘರ್ಷವನ್ನು ತಡೆಯುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನುವುದೂ ಗೊತ್ತು. ಈ ಹೋರಾಟಕ್ಕಿಂತ ನೂರಾರು ಪಟ್ಟು ಹೆಚ್ಚು ಬಲಿಷ್ಟ ಹಿತಾಸಕ್ತಿಗಳು ಇದರ ಸುತ್ತ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದೂ ಗೊತ್ತು. ತಾಲಿಬಾನ್‌ ದಂಗೆಕೋರರ ಇತ್ತೀಚಿನ ಗೆಲುವು, ಆಫ್ಘಾನ್‌ ಸರಕಾರದ ಭ್ರಷ್ಟಾಚಾರ, ಯುರೋಪಿಯನ್ನರು ಮತ್ತು ಅಮೆರಿಕನ್ನರು ನಡೆಸುತ್ತಿರುವ ಕಾರ್ಯಾಚರಣೆಗಳು, ಆಫ್ಘಾನ್‌ ಅನ್ನು ಚೆಸ್‌ಬೋರ್ಡ್‌ ಎಂದು ಭಾವಿಸಿರುವ ಪಾಕಿಸ್ತಾನ, ರಷ್ಯಾ, ಇರಾನ್‌- ಹೀಗೆ ಎಲ್ಲದರ ಇಂಚಿಂಚು ಮಾಹಿತಿಯೂ ಕೂಡ ಇವರ ಬಳಿಯಿದೆ.

ಇಷ್ಟೆಲ್ಲದರ ನಡುವೆಯೂ ಕೂಡ ಇವರ ವಿಶ್ವಾಸವನ್ನು ಹೆಚ್ಚಿಸುತ್ತಿರುವುದು ಆಫ್ಘಾನಿಸ್ತಾನದ ಉದ್ದಕ್ಕೂ ಹರಡಿರುವ ಇವರಂತದ್ದೇ ಜನರು. ಪ್ರತಿ ಹಳ್ಳಿಯ ಮಸೀದಿ ಬಳಿ ತಂಗಿದಾಗಲೆಲ್ಲಾ ಹಳ್ಳಿಗರಿಂದ ದೊರೆಯುವ ಸ್ವಾಗತ ಅವರೊಳಗೆ ಮತ್ತಷ್ಟು ಶಕ್ತಿಯನ್ನು ತುಂಬುತ್ತಿದೆ. ಹಳ್ಳಿಯ ಜನರೇ ಈ ತಂಡಕ್ಕೆ ಆನ್ನಾಹಾರಗಳನ್ನು ಒದಗಿಸುತ್ತಿದ್ದಾರೆ. ಅವರ ಬಟ್ಟೆಗಳನ್ನು ಒಗೆದು ಶುಚಿಗೊಳಿಸಿಕೊಡುತ್ತಿದ್ದಾರೆ. ಇದರ ಜತೆಗೆ ಹಳ್ಳಿಗರು ಹಂಚಿಕೊಳ್ಳುತ್ತಿರುವ ಕತೆಗಳು ಇಷ್ಟಕ್ಕೇ ನಿಲ್ಲಬಾರದು ಎಂಬ ಸ್ಥೈರ್ಯವನ್ನು ಹುಟ್ಟುಹಾಕುತ್ತಿವೆ.

ಮಾಹಿತಿ ಮತ್ತು ಚಿತ್ರಗಳು: ‘ದಿ ನ್ಯೂಯಾರ್ಕ್‌ ಟೈಮ್ಸ್‌’