ಆಕಾಶಕ್ಕೆ ಹಾರಿದ್ದವರು 165 ದಿನಗಳ ನಂತರ ಮರಳಿ ಬಂದರು!
ಪಾಸಿಟಿವ್

ಆಕಾಶಕ್ಕೆ ಹಾರಿದ್ದವರು 165 ದಿನಗಳ ನಂತರ ಮರಳಿ ಬಂದರು!

ಭೂಮಿಯಿಂದ ಬಹುದೂರದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಶೋಧನೆಯಲ್ಲಿ ತೊಡಗಿ ಅಲ್ಲಿಯೇ ಸರಿ ಸುಮಾರು ಆರು ತಿಂಗಳ ಕಾಲ ತಂಗಿದ್ದ ಮೂರು ಜನ ಗಗನಯಾತ್ರಿಗಳು ಭೂಮಿಗೆ ಮರಳಿದ್ದಾರೆ.

ಭೂಮಿಯಿಂದ ಬಹುದೂರದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಶೋಧನೆಯಲ್ಲಿ ತೊಡಗಿ ಅಲ್ಲಿಯೇ ಸರಿ ಸುಮಾರು ಆರು ತಿಂಗಳ ಕಾಲ ತಂಗಿದ್ದ ಮೂರು ಜನ ಗಗನಯಾತ್ರಿಗಳು ಮರಳಿ ಭೂಮಿಯನ್ನು ಸ್ಪರ್ಶಿಸಿದ್ದಾರೆ. ಅವರಿದ್ದ ಪ್ಯಾರಾಚೂಟ್‌ ಕಝಕಿಸ್ತಾನದಲ್ಲಿ ನೆಲ ಮುಟ್ಟಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ 55ರಲ್ಲಿ ಸುಮಾರು 6 ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಅಮೆರಿಕಾದ ನಾಸಾ ಬಾಹ್ಯಾಕಾಶ ಸಂಸ್ಥೆಯ ಗಗನ ಯಾತ್ರಿ ಸ್ಕಾಟ್‌ ಟಿಂಗಲ್‌, ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಏಜೆನ್ಸಿಯ ಗಗನ ಯಾತ್ರಿ ನೋರಿಶಿಂಗೆ ಕನಾಯ್‌ ಮತ್ತು ರಷ್ಯಾದ ಬಾಹ್ಯಕಾಶ ಸಂಸ್ಥೆ ರೊಸ್ಕೊಸ್ಮೋಸ್‌ (ROSCOSMOS)ನ ಗಗನ ಯಾತ್ರಿ ಆಂಟನ್‌ ಶ್ಕಪ್ಲೇರೊವ್‌ ಕಝಿಕಿಸ್ತಾನ ದೇಶದ ಗ್ರಾಮೀಣ ಭಾಗದ ಪುಟ್ಟ ನಗರವೊಂದರ ಬಳಿ ಭೂಸ್ಪರ್ಶ ಮಾಡಿದ್ದಾರೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ 55ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಮಾನ ತಂತ್ರಜ್ಞರು ಮತ್ತು ಗಗನ ಯಾತ್ರಿಗಳಾದ ಟಿಂಗಲ್‌, ಕನಾಯ್‌ ಮತ್ತು ಶ್ಕಪ್ಲೆರೋವ್‌ ಭಾನುವಾರ ಬೆಳಿಗ್ಗೆ 5.16ಕ್ಕೆ ಅಲ್ಲಿಂದ ಭೂಮಿಯತ್ತ ಪ್ರಯಾಣ ಆರಂಭಿಸಿದ್ದರು ಎಂದು ನಾಸಾ ಹೇಳಿದೆ.

ಟಿಂಗಲ್‌ ಮತ್ತು ಕನಾಯ್‌ರಿಗೆ ಈ ಗಗನ ಯಾನ ಮೊದಲ ಅನುಭವವಾಗಿದ್ದು, ರಷ್ಯಾದ ಶ್ಕಪ್ಲೆರೋವ್‌ ಇದಕ್ಕೂ ಮುಂಚೆ 532 ದಿನಗಳನ್ನು ಆಕಾಶದಲ್ಲಿ ಕಳೆದಿದ್ದಾರೆ.

ಒಟ್ಟು 165 ದಿನಗಳನ್ನು ಆಗಸದಲ್ಲಿ ಕಳೆದಿರುವ ಈ ಮೂರೂ ಜನ ಗಗನ ಯಾತ್ರಿಗಳು, ಈ ಅವಧಿಯಲ್ಲಿ ನೂರಾರು ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ವಿವಿಧ ವಸ್ತುಗಳ ಮೇಲೆ ಪರೀಕ್ಷೆ ನಡೆಸಿರುವ ಈ ಗಗನ ಯಾತ್ರಿಗಳು, ಪ್ರಾಣಿಗಳ ಅಸ್ಥಿಮಜ್ಜೆಯ ಮೇಲೆ ಸೂಕ್ಷ್ಮ ಗುರುತ್ವವು ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಕುರಿತು ವರದಿ ತಯಾರಿಸಲಿದ್ದಾರೆ. ಭೂಮಿಯಿಂದ ಹೊರಗೆ ಗಿಡಗಳು ಬೆಳೆಯಬಲ್ಲವೇ ಎನ್ನುವುದರ ಕುರಿತು ಸಂಶೋಧನೆ ನಡೆಸಿದ್ದಾರೆ.

ಟಿಂಗಲ್‌ ಮತ್ತು ಕನಾಯ್‌ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ 55ರಲ್ಲಿ ಅಷ್ಟೇ ಅಲ್ಲದೇ ಬೇರೆ ಬೇರೆ ರೋಬೋಟಿಕ್‌ ವಲಯಗಳಿಗೂ ಕೂಡ ತೆರೆಳಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಂಶೋಧನೆಗಳಲ್ಲಿ ಭಾಗಿಯಾಗುವುದಕ್ಕೆ ಮೊದಲು ಇಬ್ಬರೂ ಕೂಡ ನಾಸಾ ನಡೆಸಿದ ಹಲವಾರು ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಭಾಗಿಯಾಗಿದ್ದರು.

ಮೊದಲ ಬಾರಿ ಆಕಾಶಕ್ಕೆ ಎಜಿಗಿದವರ ಕತೆ ಹೀಗಾದರೆ, ಅದಾಗಲೇ ಹಲವು ಬಾರಿ ಆಕಾಶದಲ್ಲಿ ಸುತ್ತಿರುವ ರೊಸ್ಕೊಸ್ಮೋಸ್‌ನ ಆಂಟನ್‌ ಶ್ಕಪ್ಲೆರೋವ್‌ ಫೆಬ್ರವರಿ ತಿಂಗಳಲ್ಲಿ ತನ್ನ ಸಹ ಗಗನಯಾತ್ರಿ ಅಲೆಗ್ಸಾಂಡರ್‌ ಮಿಸುರ್ಕಿನ್‌ ಜತೆ ಆಕಾಶ ನೌಕೆಯನ್ನು ಮುನ್ನಡೆಸಿ, ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಅಕಾಶದಲ್ಲಿರುವ ಜ್ವೆಜ್ಡಾ ಸರ್ವೀಸ್‌ ಮಾಡ್ಯೂಲ್‌ನ ಸಂವಹನ ಆಂಟೆನಾಗಳಿಗೆ ಹೊಸ ವಿದ್ಯುನ್ಮಾನ ಬಾಕ್ಸ್‌ಗಳನ್ನು ಅಳವಡಿಸಿ, ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದಾರೆ. ಈ ಕಾರ್ಯ ಸುಮಾರು 8 ಗಂಟೆ 13 ನಿಮಿಷಗಳ ಅವಧಿಯನ್ನು ತೆಗೆದುಕೊಂಡಿತ್ತು. ರಷ್ಯಾದ ಬಾಹ್ಯಾಕಾಶ ಇತಿಹಾಸದಲ್ಲಿ ಗಗನಯಾತ್ರಿಯೊಬ್ಬ ಇಷ್ಟು ಸುದೀರ್ಘ ಅವಧಿ ಅಕಾಶದಲ್ಲಿ ಕಾರ್ಯ ನಿರ್ವಹಿಸಿದ್ದು ಅದೇ ಮೊದಲು.

ಈ ಗಗನಯಾತ್ರಿಗಳು ಆಕಾಶದಲ್ಲಿ ಕೇವಲ ಸಂಶೋಧನೆಗಳನ್ನಷ್ಟೇ ನಡೆಸಿಲ್ಲ. ಅಷ್ಟೇ ಪ್ರಮಾಣದ ಸಂತಸದ ಕ್ಷಣಗಳನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಕಾಶ ಕೇಂದ್ರದಲ್ಲಿ ಫುಟ್‌ಬಾಲ್‌ ಆಡಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಆಂಟನ್‌ ತಮ್ಮ ಫುಟ್‌ಬಾಲ್‌ ಕೌಶಲ್ಯ ಮೆರೆದಿರುವ ವೀಡಿಯೋ ತುಣುಕೊಂದನ್ನು ರೊಸ್ಸೊಸ್ಮೋಸ್‌ ಸಂಸ್ಥೆ ಜಾಲತಾಣಕ್ಕೆ ಸೇರಿಸಿದೆ. ಗಗನ ಯಾತ್ರಿಗಳ ಈ ಚೆಂಡಾಟಕ್ಕಾಗಿ ಪ್ರಖ್ಯಾತ ಟೂರ್ನಿಗಳಲ್ಲಿ ಬಳಸುವ ಅಧಿಕೃತ ಚಂಡನ್ನೇ ಕಳಿಸಲಾಗಿತ್ತು. ಈಗ ಆ ಚೆಂಡು ಕೂಡ ಗಗನವನ್ನು ಸುತ್ತಿ ಭೂಮಿಗೆ ಮರಳಿದೆ.

ಬಾಹ್ಯಾಕಾಶದಲ್ಲಿ ಚೆಂಡಿನಾಟ.
ಬಾಹ್ಯಾಕಾಶದಲ್ಲಿ ಚೆಂಡಿನಾಟ.

ಫುಟ್‌ಬಾಲ್‌ನ ಜತೆಜತೆಗೆ ಸಂಗೀತದ ಸ್ವಾಧವನ್ನೂ ಕೂಡ ಗಗನ ಯಾತ್ರಿಗಳು ಅನುಭವಿಸಿದ್ದಾರೆ. ಗಿಟಾರ್‌ ಹಿಡಿದು ಹಾಡಿ ಸಂತಸ ಪಟ್ಟಿದ್ದಾರೆ. ಈ ಫೋಟೊವನ್ನು ಟಿಂಗಲ್‌ ತಮ್ಮ ಟ್ವಿಟ್ಟರ್‌ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಅಂತರಿಕ್ಷದಲ್ಲಿ ಸಂಗೀತ ಗೋಷ್ಠಿ.
ಅಂತರಿಕ್ಷದಲ್ಲಿ ಸಂಗೀತ ಗೋಷ್ಠಿ.

ಇದೀಗ ತಾನೇ ಒಂದು ಬಾಹ್ಯಾಕಾಶ ಯಾತ್ರೆ ಮುಗಿದಿರುವ ಬೆನ್ನಲ್ಲೇ ಮತ್ತೊಂದು ನೌಕೆಯನ್ನು ಆಕಾಶಕ್ಕೆ ಹಾರಿಸಲು ನಾಸಾ ಸಿದ್ಧಗೊಂಡಿದೆ. ಮೂರು ಜನ ಹೊಸ ಗಗನಯಾತ್ರಿಗಳು ಈ ನೌಕೆಯನ್ನೇರಿ ಆಕಾಶ ಸುತ್ತಲಿದ್ದಾರೆ.