samachara
www.samachara.com
ಕಣ್ಮರೆಯಾಗಿದ್ದ ಕಾಡೆಮ್ಮೆಗಳ ರಕ್ಷಣೆಗೆ ನಿಂತ ಯುರೋಪಿಯನ್ನರು!
ಪಾಸಿಟಿವ್

ಕಣ್ಮರೆಯಾಗಿದ್ದ ಕಾಡೆಮ್ಮೆಗಳ ರಕ್ಷಣೆಗೆ ನಿಂತ ಯುರೋಪಿಯನ್ನರು!

ಇದು ಯುರೋಪ್ ಖಂಡದಲ್ಲಿ ಕಾಡೆಮ್ಮೆಗಳ ರಕ್ಷಣೆಗೆ ನಡೆಸುತ್ತಿರುವ ಕಸರತ್ತುಗಳ ಕತೆ. ಒಂದು ಕಾಲದಲ್ಲಿ ನಾಶಕ್ಕೆ ಒಳಗಾದ ಈ ಸಂತತಿ ಮತ್ತೆ ಮನುಷ್ಯರ ಕನಿಕರದ ಕಾರಣಕ್ಕೆ ಮರುಹುಟ್ಟು ಪಡೆದುಕೊಳ್ಳುತ್ತಿದೆ. 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಹಿಂದೊಮ್ಮೆ ಯುರೋಪ್‌ ಖಂಡದ ತುಂಬೆಲ್ಲಾ ಕಾಡೆಮ್ಮೆಗಳೇ ತುಂಬಿದ್ದವು. ಆದರೆ ಮಾನವನ ದುರಾಸೆಗೀಡಾಗಿ ಅಳಿವಿನಂಚಿಗೆ ಬಂದು ನಿಂತಿದ್ದವು. 20ನೇ ಶತಮಾನದ ಪ್ರಾರಂಭದಲ್ಲಿ  ಯುರೋಪ್‌ನಲ್ಲಿನ್ನು ಕಾಡೆಮ್ಮೆಗಳೇ ಇಲ್ಲ ಎನ್ನುವಂತಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಯುರೋಪ್‌ ಖಂಡಕ್ಕೆ ಕಾಡೆಮ್ಮೆಗಳು ಮರಳಿ ಕಾಲಿಡುತ್ತಿವೆ. ಅದಕ್ಕಾಗಿ ನಡೆಸಿದ ಪ್ರಯತ್ನದ ಕತೆ ಇಲ್ಲಿದೆ.  

ಅದು ಸರಿ ಸುಮಾರು 1927ರ ಸಮಯ. ಒಂದು ಕಾಲದಲ್ಲಿ ಕಾಡೆಮ್ಮೆಗಳನ್ನು ಹೇರಳವಾಗಿದ್ದ ಭೂಖಂಡದಲ್ಲಿ ಕೊನೆಯ ಕಾಡೆಮ್ಮೆ ನೆದರ್‌ಲ್ಯಾಂಡ್‌ನಲ್ಲಿ ಕೊನೆಯ ಕಾಡೆಮ್ಮೆ ಕಾಣಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ವಿನಾಶ ಕಂಡ ಸಂತತಿಯನ್ನು ಮತ್ತೆ ಬೆಳೆಸಲು ಪ್ರಯತ್ನವೊಂದು ಆರಂಭವಾಗಿತು.

1950ರ ದಶಕದಲ್ಲಿ ಮೊದಲ ಬಾರಿಗೆ ಪೋಲ್ಯಾಂಡ್‌ನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿತು. ಯುರೋಪ್‌ನ ಪಶ್ಚಿಮ ಭಾಗಗಳಲ್ಲೂ ಕೂಡ ಇದೇ ಮಾದರಿಯ ಪ್ರಯತ್ನ ಜಾರಿಗೆ ಬಂದಿತ್ತು. ಕಳೆದೊಂದು ದಶಕದಲ್ಲಿ ಕಾಡೆಮ್ಮೆಗಳನ್ನು ಮರಳಿ ಕಾಣುವಂತೆ ಮಾಡುವ ಪ್ರಯತ್ನಕ್ಕೆ ಎಲ್ಲಿಲ್ಲದ ವೇಗ ಕಾಣಿಸಿಕೊಂಡಿತ್ತು. ಈ ಪ್ರಯತ್ನದ ಕಾರಣದಿಂದಾಗಿ ಅಳಿವಿನಂಚನ್ನು ತಲುಪಿದ್ದ ಕಾಡೆಮ್ಮೆಗಳು ಈಗ ಮತ್ತೆ ಯುರೋಪಿನ ನೆಲದ ಮೇಲೆ ಹೊಸ ಬದುಕು ಆರಂಭಿಸಿವೆ. .

ಸತತ ಪ್ರಯತ್ನದ ಫಲವಾಗಿ 7000 ಕಾಡೆಮ್ಮೆಗಳೀಗ ಯುರೋಪ್‌ ಖಂಡದಲ್ಲಿ ಕಾಣಸಿಗುತ್ತಿವೆ. ಕಾಡೆಮ್ಮೆಗಳನ್ನು ಉಳಿಸುವ ಸಲುವಾಗಿ ಅರಣ್ಯ ಇಲಾಖೆಯೇ ಈ ಕಾಡೆಮ್ಮೆಗಳಗೆ ಮೇವು ಒದಗಿಸುತ್ತಿದೆ.

ಕಣ್ಮರೆಯಾಗಿದ್ದ ಕಾಡೆಮ್ಮೆಗಳ ರಕ್ಷಣೆಗೆ ನಿಂತ ಯುರೋಪಿಯನ್ನರು!

ಉತ್ತರ ಹಾಲೆಂಡ್‌ನ ಜುಯಿಡ್‌-ಕೆನ್ನೆಮರ್‌ಲ್ಯಾಂಡ್‌ ರಾಷ್ಟ್ರೀಯ ಉದ್ಯಾನವನದಲ್ಲಿನ ಮರಳಿನ ದಿಬ್ಬಗಳು ಹಾಗೂ ನೈಸರ್ಗಿಕ ಹೊಂಡಗಳಿರುವ ಕ್ರಾನ್ಸ್‌ವ್ಲಾಕ್‌ನ 330 ಹೆಕ್ಟೇರ್‌ನಷ್ಟು ಪ್ರದೇಶವನ್ನು ಕಾಡೆಮ್ಮೆಗಳಿಗಾಗಿ ಮೀಸಲಿಡಲಾಗಿದೆ. 22 ಕಾಡೆಮ್ಮೆಗಳ ಗುಂಪು ಈ ಕಾಡಿನಲ್ಲಿದೆ. ಕಾಡೆಮ್ಮೆಗಳ ಸಂತತಿಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಈ ಭೂಪ್ರದೇಶದಲ್ಲಿ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ.

ಕೆನಡಾ ಕೂಡ ಶತಮಾನದ ನಂತರ ಬ್ಯಾನ್ಫ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡೆಮ್ಮೆಗಳ ಅಭಿವೃದ್ಧಿ ಕೈಗೊಂಡಿದೆ. ನೆದರ್‌ಲ್ಯಾಂಡ್‌ ಕೂಡ ಈ ಕುರಿತು ಗಂಭೀರ ಅಧ್ಯಯನಗಳನ್ನು ಕೈಗೊಂಡಿದೆ. ಕಾಡೆಮ್ಮೆಗಳು ಯಾವ ಪ್ರದೇಶದಲ್ಲಿ ವಾಸಿಸಲು ಸೂಕ್ತ ಎನ್ನುವುದರ ಕುರಿತು ಸಂಶೋಧನೆಗಳು ನಡೆಯುತ್ತಿವೆ.

ಸ್ವೀಡನ್‌, ಸ್ವಿಟ್ಜರ್‌ಲ್ಯಾಂಡ್‌ ಮತ್ತು ಲಂಡನ್‌ನ ಪರಿಸರ ಸಂಸ್ಥೆಗಳೂ ಕೂಡ ಕಾಡೆಮ್ಮೆಗಳ ಅಭಿವೃದ್ಧಿಯಲ್ಲಿ ಆಸಕ್ತಿಯನ್ನು ವಹಿಸುತ್ತಿವೆ. ಈಗಾಗಲೇ ಸ್ಪೈನ್‌, ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ನಡೆಯುತ್ತಿರುವ ಕಾಡೆಮ್ಮೆ ಯೋಜನೆಗಳಿಗೆ ತಮ್ಮ ಕೊಡುಗೆಯನ್ನು ನೀಡುತ್ತಿವೆ.

ಕಣ್ಮರೆಯಾಗಿದ್ದ ಕಾಡೆಮ್ಮೆಗಳ ರಕ್ಷಣೆಗೆ ನಿಂತ ಯುರೋಪಿಯನ್ನರು!

“ಹಲವಾರು ದಶಕಗಳಿಂದ ಯುರೋಪಿಯನ್‌ ಕಾಡೆಮ್ಮೆಗಳು ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಎಂಬ ನಂಬಿಕೆಯಿದೆ. ಆದರೆ ಇದು ಸತ್ಯ ಎನ್ನಲು ಪುರಾವೆಗಳಿಲ್ಲ.ಚಳಿಗಾಲದಲ್ಲಿ ಕಾಡೆಮ್ಮಗಳಿಗೆ ನಾವೇ ಮೇವು ಪೂರೈಸಬೇಕಿದೆ. ಈ ಕಾರಣಕ್ಕಾಗಿ ಅವು ಕಾಡಿನಲ್ಲಿ ವಾಸಿಸಲು ಸೂಕ್ತವಲ್ಲ ಎನಿಸುತ್ತದೆ,” ಎನ್ನುತ್ತಾರೆ ಕಾಡೆಮ್ಮೆ ಯೋಜನೆಯ ನಾಯಕ ಯುನ್ನೋ ಕೆಂಪ್‌.

ಮೊದಲಿಗೆ 2007ರ ಏಪ್ರಿಲ್‌ ತಿಂಗಳಿನಲ್ಲಿ ಕ್ರಾನ್ಸ್‌ವ್ಲಾಕ್‌ ಪ್ರದೇಶದಲ್ಲಿ 3 ಕಾಡೆಮ್ಮಗಳನ್ನು ತಂದುಬಿಡಲಾಗಿತ್ತು. ನಂತರ 2008ರಲ್ಲಿ ಮತ್ತೆ ಕಾಡೆಮ್ಮೆಗಳನ್ನು ಕರೆತರಲಾಗಿತ್ತು. ಕಾಡೆಮ್ಮೆಗಳನ್ನು ಮತ್ತೆ ನೆಲೆಯೂರಿಸಲು ನಡೆಸಿದ 10 ವರ್ಷಗಳ ದೀರ್ಘ ಪ್ರಯತ್ನದಿಂದಾಗಿ ಇಂದು ಕಾಡೆಮ್ಮೆಗಳ ದೊಡ್ಡ ಗುಂಪೊಂದು ಕಾಣಸಿಗುತ್ತಿದೆ.

“ಕಾಡೆಮ್ಮೆಗಳು ಯುರೋಪ್‌ ಭೂಭಾಗದ ದೊಡ್ಡ ಸಂಖ್ಯೆಯ ಪ್ರಾಣಿ ವರ್ಗ. ಈ ಪ್ರಾಣಿ ವರ್ಗಕ್ಕೆ ಹೆಚ್ಚಿನ ಪ್ರಮಾಣದ ಆಹಾರದ ಅಗತ್ಯವಿದೆ. ಕೇಲವ ಹುಲ್ಲನ್ನಷ್ಟೇ ತಿಂದು ಕಾಡೆಮ್ಮೆಗಳು ಬದುಕುವುದಿಲ್ಲ.,” ಎನ್ನುತ್ತಾರೆ ಕೆಂಪ್‌. ಮುಂದುವರಿದು, “ನೈಸರ್ಗಿಕ ಸಮತೋಲನವನ್ನು ಕಾಪಾಡುವ ಸಲುವಾಗಿ ಜಿಂಕೆ, ಜಾನುವಾರು ಮತ್ತು ಮೊಲಗಳನ್ನು ಈ ಪ್ರದೇಶದಲ್ಲಿ ಬಿಡಲಾಗಿದೆ,” ಎಂದು ಹೇಳುತ್ತಾರೆ.

ಕಾಡೆಮ್ಮೆಗಳ ಕುರಿತು ನಡೆದಿರುವ ಅಧ್ಯಯನಗಳಿಂದ ಕಂಡುಕೊಂಡಿರುವ ಬಹುಮುಖ್ಯ ಅಂಶವೆಂದರೆ ಕಾಡೆಮ್ಮೆಗಳು ಪೂರಕ ಆಹಾರವನ್ನು ಒದಗಿಸದಿದ್ದರೂ ಕೂಡ ಬದುಕಬಲ್ಲವು ಎನ್ನುವುದಾದಾಗಿದೆ. ಚಳಿಗಾಲದಲ್ಲಿ ಪ್ರಕೃತಿಯಲ್ಲಿ ದೊರೆಯುವ ಅಲ್ಪ ಆಹಾರವನ್ನು, ಹುಲ್ಲು, ಚಿಕ್ಕ ಪುಟ್ಟ ಗಿಡಗಳು, ಸಸ್ಯಗಳನ್ನು ತಿಂದು ಬದುಕಬಲ್ಲವು. ಯುರೋಪಿನ ಜನನಿಭಿಡ ಪ್ರದೇಶಗಳಲ್ಲಿ ವಾಸಿಸುವ ಕಾಡೆಮ್ಮೆಗಳು ಮಾನವನ ಜತೆ ಹೊಂದಿಕೊಂಡು ಬದುಕಬಲ್ಲವು.

ಕಣ್ಮರೆಯಾಗಿದ್ದ ಕಾಡೆಮ್ಮೆಗಳ ರಕ್ಷಣೆಗೆ ನಿಂತ ಯುರೋಪಿಯನ್ನರು!

“ಸೇನೆಯಲ್ಲಿ ಬಳಸುವಂತಹ 2.2 ಮೀಟರ್‌ ಎತ್ತರದ ಬೇಲಿಯನ್ನು ಹಾಕಬೇಕು. ಕಾಡೆಮ್ಮೆಗಳು ಬೇಲಿಯನ್ನು ಹಾರಬಲ್ಲವು. ಅಷ್ಟೇ ಬಲಿಷ್ಟ ಪ್ರಾಣಿಗಳೂ ಹೌದು. ಅದಕ್ಕಾಗಿಯೇ ಹೆಚ್ಚು ಶಕ್ತಿಯತ ವಿದ್ಯುತ್‌ ಬೇಲಿಯನ್ನು ಹಾಕಬೇಕಿದೆ. ಈಗ 1.2 ಮೀಟರ್‌ನಷ್ಟು ಎತ್ತರದ ಬೇಲಿಯಿದೆ,” ಎನ್ನುತ್ತಾರೆ ಕೆಂಪ್.

ಮೊದಲಿಗೆ ಕಾರುಗಳಲ್ಲಿ ಚಲಿಸಿ ದೂರದಿಂದ ಕಾಡೆಮ್ಮೆಗಳ ಚಲನವಲನಗಳನ್ನು ವೀಕ್ಷಿಸಲಾಗುತ್ತಿತ್ತು. ಈಗ ಕಾಡೆಮ್ಮೆಗಳ ಕಾಲು ಹಾದಿಯಲ್ಲಿಯೇ ಚಲಿಸುತ್ತೇವೆ. ಸಾರ್ವಜನಿಕರಿಗೂ ಕೂಡ ಕಾಡೆಮ್ಮೆಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ಕಾಡೆಮ್ಮೆಗಳಿಂದ ಕಡಿಮೆಯೆಂದರೂ 50 ಮೀಟರ್‌ ದೂರವಿರಬೇಕು. ಕಾಡೆಮ್ಮೆಗಳು ಸೂಕ್ಷ್ಮ ಪ್ರಾಣಿಗಳಾದ್ದರಿಂದ ಹೆದರಿ ಮೇಲೇರಿ ಬರಬಹುದು ಎನ್ನುವ ಕಾರಣಕ್ಕಾಗಿ ಈ ಸೂಚನೆ ನೀಡಲಾಗಿದೆ.

ಇನ್ನೇನು ಯುರೋಪಿಯನ್‌ ಕಾಡೆಮ್ಮೆಗಳು ಇಡೀ ಜಗತ್ತಿನಿಂದ ಕಣ್ಮರಯಾದವು ಎನ್ನುತ್ತಿರುವಲ್ಲಿಯೇ ನಡೆದ ಈ ಸಂರಕ್ಷಣಾ ಕ್ರಮಗಳು ಇಂದು ಕಾಡೆಮ್ಮೆಗಳ ಸಂಖ್ಯೆಯನ್ನು 7000ಕ್ಕೇ ಎರಿಸಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈನ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯೂ ಇದೆ. ಹಿಂದೊಮ್ಮೆ ತನ್ನ ಪ್ರವೃತ್ತಿಯೆಂದೋ, ಹಣದಾಸೆಗೋ ಅಥವಾ ಮಾಂಸಕ್ಕಾಗಿ ಎಂದೋ ಪ್ರಾಣಿಗಳನ್ನು ಕೊಂದ ಮಾನವ, ಆ ಪ್ರಾಣಿಗಳ ಸಂತತಿಯೇ ನಾಶವಾಗುತ್ತಿದೆ ಎಂದಾಗ ಕನಿಕರ ವ್ಯಕ್ತಪಡಿಸಲು ಆರಂಭಿಸುತ್ತಾರೆ. ಹೀಗೆ ಅಳಿವಿನಂಚಿಗೆ ತಲುಪಿದ ಎಷ್ಟೋ ವನ್ಯ ಸಂಸತಿಗಳಲ್ಲಿ ಯುರೋಪಿನ್‌ ಕಾಡೆಮ್ಮೆಯೂ ಒಂದಾಗಿತ್ತು. ಈಗ ಈ ಸಂತತಿಯ ಸಂಖ್ಯೆ ಹೆಚ್ಚುತ್ತಿರುವು ಆಶಾದಾಯಕ ಸಂಗತಿಯೇ. ಭೂಮಿ ಮೇಲಿನ ಸಮತೋಲನ ಮನುಷ್ಯನೊಬ್ಬನಿಂದಲೇ ಕಾಪಾಡಲು ಸಾಧ್ಯವಿಲ್ಲ ಎಂಬ ಪಾಠವೂ ಇದರ ಹಿಂದಿದೆ.

ಮಾಹಿತಿ ಮೂಲ : ಗಾರ್ಡಿಯನ್‌