ಅಲ್ಲೋಸೊರಸ್ ಮತ್ತು ಡಿಪ್ಲೋಡೊಕಸ್ ಜಾತಿಯ ಡೈನೋಸರಸ್ ಅಸ್ಥಿಪಂಜರಗಳು ಹರಾಜಿಗೆ ಇಡಲ್ಪಟ್ಟಿವೆ. ವಾಸಿಸುವ ಕೋಣೆಗಳ ಆಂತರಿಕ ಸೌಂದರ್ಯ ಹೆಚ್ಚಿಸಬಲ್ಲ ರೀತಿಯಲ್ಲಿ ಈ ಡೈನೋಸರಸ್ಗಳ ಅಸ್ಥಿ ಪಂಜರಗಳನ್ನು ವಿನ್ಯಾಸಗೊಳಿಸಲಾಗಿದೆ. ಡೈನೋಸರಸ್ ಪಳೆಯುಳಿಕೆಗಳಿಂದ ಅಲಂಕರಿಸಬೇಕು ಎಂದರೆ ನಿಮ್ಮ ಮನೆ ದೊಡ್ಡದಿರಬೇಕಷ್ಟೇ.

ಈ ಅಸ್ಥಿ ಪಂಜರಗಳು ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ನಲ್ಲಿವೆ. 'ಬಿನೋಚೆ ಎಟ್ ಗಿಕೆಲ್ಲೋ' ಎಂಬ ಹೆಸರಿನ ಹರಾಜು ಮಳಿಗೆಯಲ್ಲಿ ಈ ಅಸ್ಥಿ ಪಂಜರಗಳನ್ನು ಇರಿಸಲಾಗಿದ್ದು, ಮಳಿಗೆಯ ಮಾಲೀಕ ಐಸೋಪೋ ಬ್ರಿಯಾನೋ ಡೈನೋಸರಸ್ಗಳ ಮಾರಾಟದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಡೈನೋಸರಸ್ನ ಅಥವಾ ಇತರೆ ಪಳೆಯುಳಿಕೆಗಳನ್ನು ವಿಜ್ಞಾನಿಗಳೇ ಕೊಳ್ಳಬೇಕು ಎಂದೇನಿಲ್ಲ. ಇವು ಬರೀ ವೈಜ್ಞಾನಿಕ ಸಂಶೋಧನೆಗಳಿಗಷ್ಟೇ ಬಳಕೆಯಾಗಬೇಕು ಎನ್ನುವುದನ್ನು ತೊಡೆದು, ಗೃಹ ವಿನ್ಯಾಸಕ್ಕೂ ಬಳಸಿಕೊಳ್ಳಬಹುದು ಎಂಬ ಅಂಶವನ್ನು ಮುನ್ನೆಲೆ ತರುವ ಪ್ರಯತ್ನವಿದು ಎನ್ನಲಾಗಿದೆ.

ಈಗ ಸಧ್ಯ ಮಾರಾಟಕ್ಕಿರುವ ಬೃಹತ್ ಗಾತ್ರದ ಡೈನೋಸರಸ್ ಅಸ್ಥಿ ಪಂಜರಗಳ ಹರಾಜು ಪ್ರಕ್ರಿಯೆ ಜೂನ್ ತಿಂಗಳಿನಲ್ಲಿ ನಡೆಯಲಿದೆ. 1.84 ಮಿಲಿಯನ್ ಡಾಲರ್ ಬೆಲೆಗೆ ಈ ಅಸ್ಥಿ ಪಂಜರಗಳು ಮಾರಾಟವಾಗುವ ನಿರೀಕ್ಷೆಯಿದೆ.

87 ವಿಧದ ನೈಸರ್ಗಿಕ ಕಲಾಕೃತಿಗಳನ್ನು ಹರಾಜಿಗಿಡಲಾಗಿದೆ. ಅದರಲ್ಲಿ ಅಲ್ಲೋಸರಸ್ ಅಸ್ಥಿ ಪಂಜರವೂ ಒಂದು. ಸುಮಾರು 12.5 ಅಡಿ ಎತ್ತರವಿರುವ ಈ ಅಲ್ಲೋಸರಸ್ ಅಸ್ಥಿಪಂಜರ 8.03 ಲಕ್ಷ ಡಾಲರ್ಗಳಿಗೆ ಮಾರಾಟವಾಗುವ ನಿರೀಕ್ಷೆಯಿದೆ.

ಮತ್ತೊಂದು ನೈಸರ್ಗಿಕ ಕಲಾಕೃತಿ ಡಿಪ್ಲೊಡೊಕಸ್ ತಲೆಯಿಂದ ಬಾಲದವರೆಗೂ ಸುಮಾರು 12 ಮೀಟರ್ ಉದ್ದವಿದ್ದು, 6.18 ಲಕ್ಷ ಡಾಲರ್ಗೆ ಮಾರಾಟವಾಗುವ ಸಾಧ್ಯತೆಯಿದೆ. ಇಷ್ಟಕ್ಕೇ ಮಾರಾಟವಾಗುತ್ತವೆ ಎಂದೇನೂ ಇಲ್ಲ. ಹರಾಜು ಕೂಗುವವರ ಮೇಲೆ ಮಾರಾಟದ ಬೆಲೆ ನಿರ್ಧಾರಗೊಳ್ಳಲ್ಲಿದೆ.

"ಇತ್ತೀಚಿನ ದಿನಗಳಲ್ಲಿ ಡೈನೋಸರಸ್ಗಳನ್ನು ಗೃಹಾಲಂಕಾರಕ್ಕೆ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನೆಯ ಅಂದ ಹೆಚ್ಚಿಸಲು ನಾನಾ ವಿಧದ ಬಣ್ಣವನ್ನು ಬಳಸುವಂತೆ ಡೈನೋಸರಸ್ಗಳ ನೈಜ ಮೂಳೆಗಳನ್ನು ಬಳಸಲಾಗುತ್ತಿದೆ. ಈ ಪಳೆಯುಳಿಕೆಗಳು ಮನೆಯೊಳಗಿನ ವಾತಾವರಣವನ್ನು ತಂಪಾಗಿರಿಸುತ್ತವೆ," ಎನ್ನುತ್ತಾರೆ ತಜ್ಞರೊಬ್ಬರು.

ಅವರೇ ಹೇಳುವಂತೆ ಹಾಲಿವುಡ್ ತಾರೆಯರಾದ ಲಿಯೋನಾರ್ಡೋ ಡಿಕ್ಯಾಪ್ರಿಯೋ ಮತ್ತು ನಿಕೋಲಸ್ ಕೇಜ್ ಈ ಇತಿಹಾಸ ಪೂರ್ವ ಪಳೆಯುಳಿಕೆಗಳನ್ನು ಕೊಂಡಿದ್ದಾರೆ. ಅವುಗಳ ಮೂಲಕ ತಮ್ಮ ಮನೆಗಳನ್ನು ಅಲಂಕರಿಸಿಕೊಂಡಿದ್ದಾರೆ.

ಟೈರಾನೋಸರಸ್ ರೆಕ್ಸ್ನ ಹತ್ತಿರದ ಸೋದರ ಸಂಬಂಧಿ ಟೈರನೋಸರಸ್ ಬಾಟ್ಟೆರ್ನ ತಲೆಬುರುಡೆಯನ್ನು ನಿಕೋಲಸ್ ಕೇಜ್ 2007ರಲ್ಲಿ ಕೊಂಡುಕೊಂಡಿದ್ದರು. ಮಂಗೋಲಿಯಾದಲ್ಲಿ ದೊರೆತಿದ್ದ ಈ ತಲೆಬುರುಡೆಯನ್ನು ಯಾರೋ ಅಪಹರಿಸಿ, ಮಾರಾಟ ಮಾಡಿದ್ದರು ಎಂಬ ಅಂಶ ಬಯಲಾದ ನಂತರ ಅದನ್ನು ಮಂಗೋಲಿಯಾಗೆ ಹಿಂತಿರುಗಿಸಿದ್ದರು.

"ಇತ್ತಿಚಿನ 2-3 ವರ್ಷಗಳಲ್ಲಿ ಚೀನೀಯರಿಗೆ ಪ್ರಾಗ್ಜೀವ ಶಾಸ್ತ್ರದ ಕುರಿತ ಆಸಕ್ತಿ ಹೆಚ್ಚಾಗುತ್ತಿದೆ. ಚೈನಾಗೆ ಸಂಬಂಧ ಪಟ್ಟ ದೊಡ್ಡ ದೊಡ್ಡ ಡೈನೋಸರಸ್ಗಳ ಮಾದರಿಗಳನ್ನು ಹುಡುಕುತ್ತಿದ್ದಾರೆ. ಹುಡುಕಾಟದ ವೇಳೆ ದೊರೆತ ಪಳೆಯುಳಿಕೆಗಳನ್ನು ಕೊಂಡು, ವಸ್ತು ಸಂಗ್ರಹಾಲಕ್ಕೋ ಅಥವಾ ವೈಯಕ್ತಿಕ ಬಳಕೆಗೂ ಉಪಯೋಗಿಸಿಕೊಳ್ಳುತ್ತಿದ್ದಾರೆ." ಎನ್ನುತ್ತಾರೆ ಹರಾಜು ಮಳಿಗೆಯ ಮಾಲೀಕ ಬ್ರಿಯಾನೊ.

ಮುಂದುವರಿದು, " ಹೊಸ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಯೊರೋಪ್ ಹಾಗೂ ಅಮೆರಿಕಾದ ದೊಡ್ಡ ದೊಡ್ಡ ಶ್ರೀಮಂತರ, ಬಹುರಾಷ್ಟ್ರೀಯ ಕಂಪನಿಗಳ ಜತೆ ಪೈಪೋಟಿ ನಡೆಸಿ ಕೊಳ್ಳುವ ಮನಸ್ಥಿತಿ ಹಲವಾರು ಜನರಲ್ಲಿ ಕಾಣಿಸುತ್ತಿದೆ," ಎನ್ನುತ್ತಾರೆ.

ಹೀಗೆ ಪಳೆಯುಳಿಕೆಗಳನ್ನು ಮಾರುವ, ಕೊಳ್ಳುವ ಪ್ರಕ್ರಿಯೆ 1997ರಿಂದಲೇ ಆರಂಭವಾಗಿದೆ. ಮೊದಲ ಬಾರಿಗೆ ಚಿಕಾಗೋದಲ್ಲಿನ ವಸ್ತು ಸಂಗ್ರಹಾಲಯಕ್ಕಾಗಿ ಟೈನೋಸರಸ್ ರೆಕ್ಸ್ನ ಸಂರಕ್ಷಿತ ಪಳಯುಳಿಕೆಗಳನ್ನು 8.36 ಮಿಲಿಯನ್ ಡಾಲರ್ಗಳ ಬೆಲೆ ನೀಡಿ ಖರೀದಿಸಲಾಗಿತ್ತು.

“ಪ್ರತಿ ವರ್ಷ ಹಲವಾರು ಪಳಿಯುಳಿಕೆಗಳನ್ನು ನೆಲದಿಂದ ಹೊರತರಲಾಗುತ್ತದೆ. ಆದರೆ ಎಲ್ಲವೂ ಕೂಡ ಎಲ್ಲಾ ಅಂಗಾಂಗಗಳನ್ನು ಹೊಂದಿರುವುದಿಲ್ಲ. ಈಗ ಸಧ್ಯ ವರ್ಷಕ್ಕೆ 5 ಡೈನೋಸರಸ್ ಪಳೆಯುಳಿಕೆಗಳನ್ನು ಹರಾಜಿಗೆ ಇಡಲಾಗುತ್ತಿದೆ. ಈ ಪಳೆಯುಳಿಕೆಗಳ ಮಾರುಕಟ್ಟೆಯ ವಿಸ್ತೀರ್ಣ ತುಂಬಾ ಚಿಕ್ಕದಾಗಿದ್ದು ಎಲ್ಲರಿಗೂ ಡೈನೋಸರಸ್ ಅಸ್ಥಿ ಪಂಜರಗಳನ್ನು ಕೊಳ್ಳಲಾಗುವುದಿಲ್ಲ," ಎನ್ನುತ್ತಾರೆ ತಜ್ಞ ಎರಿಕ್ ಮೈಕೆಲ್ಲರ್.

ಈಗ ಹರಾಜಿಗಿಟ್ಟಿರುವ ಈ 2 ಪಳೆಯುಳಿಕೆಗೂ ಅಂದಾಜಿಂತ ಹೆಚ್ಚು ಬೆಲೆಯನ್ನು ಪಡೆದುಕೊಳ್ಳಬಹುದು. ಕಾರಣ ಈ ತಳಿಯ ಅಸ್ಥಿ ಪಂಜರಗಳು ಸಿಗುವುದೇ ಅಪರೂಪ. ಹೆಚ್ಚಿನ ಮೂಳೆಗಳನ್ನು ಹೊಂದಿರುವ ಈ ತಳಿಯ ತಲೆ ಬುರುಡೆ ಆಕರ್ಷಕವಾಗಿರುತ್ತದೆ. ಜನರಿಗೆ ಈ ಅಸ್ಥಿ ಪಂಜರದ ಹಲ್ಲುಗಳು ಹೆಚ್ಚು ಇಷ್ಟವಾಗುತ್ತವೆ ಎನ್ನುತ್ತಾರೆ ಮೈಕೆಲ್ಲರ್. ನಿಮಗೂ ನಿಮ್ಮ ಮನೆಯನ್ನು ಸುಂದರವಾಗಿಸಲು ಡೈನೋಸರಸ್ ಪಳೆಯುಳಿಕೆಗಳು ಬೇಕು ಎಂದೆನಿಸಿದರೆ ಹರಾಜಿನಲ್ಲಿ ಪಾಲ್ಗೊಳ್ಳಬಹುದು.