samachara
www.samachara.com
‘ಹೃದಯ ಮಿಡಿವ ಕತೆ’: ಅಮ್ಮಾ, ನಿಮ್ಮ ಮನೆಗಳಲ್ಲಿ ನನ್ನ ಕಂದನಾ ಕಂಡಿರೇನೆ? 
ಪಾಸಿಟಿವ್

‘ಹೃದಯ ಮಿಡಿವ ಕತೆ’: ಅಮ್ಮಾ, ನಿಮ್ಮ ಮನೆಗಳಲ್ಲಿ ನನ್ನ ಕಂದನಾ ಕಂಡಿರೇನೆ? 

4 ವರ್ಷದವಳಿದ್ದಾಗ ಕಾಣೆಯಾದ ಕ್ವಿಫಿಂಗ್‌ 24 ವರ್ಷಗಳ ಬಳಿಕ ‘ಕಾಂಗ್‌ಯಾಂಗ್‌’ ಹೆಸರಿನಲ್ಲಿ ಬಂದು ಎದುರಿಗೆ ನಿಂತಿದ್ದಳು. ಇವಳೇ ನಮ್ಮ ಮಗಳ ಎಂಬ ಯಾವ ಖಾತರಿ ಕೂಡ ವಾಂಗ್‌ ದಂಪತಿಗಳಿಗೆ ಇರಲಿಲ್ಲ. ಡಿಎನ್‌ಎ ಪರೀಕ್ಷೆ ಸತ್ಯವನ್ನು ಹೊರಗೆಡವಿತ್ತು.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಅದು 1994ರ ಜನವರಿ ತಿಂಗಳು. ಚೈನಾದ ಚಂಗ್ದು ಎನ್ನುವ ನಗರದಲ್ಲಿ ವಾಂಗ್‌ ಮಿಂಗ್‌ಕ್ವಿಂಗ್‌ ಎಂಬ ಹಣ್ಣಿನ ವ್ಯಾಪಾರಿಯಿದ್ದ. ಆತ ಹೆಂಡತಿ ಲಿಯು ಡೆಂಗಿಂಗ್. ಅವರಿಬ್ಬರಿಗೆ ಪುಟ್ಟ ಮಗಳಿದ್ದಳು. ಆಕೆಯ ಹೆಸರು ಕ್ವಿಫೆಂಗ್‌. ಒಂದು ದಿನ ತನ್ನ ನಾಲ್ಕು ವರ್ಷದ ಪುಟ್ಟ ಮಗಳು ಕ್ವಿಫೆಂಗ್‌ಳನ್ನು ಪಕ್ಕದಲ್ಲೇ ಆಟವಾಡಿಕೊಂಡಿರಲು ಬಿಟ್ಟಿದ್ದ ವಾಂಗ್‌ ಗ್ರಾಹಕರಿಗೆ ಹಣ್ಣು ಮಾರುವುದರಲ್ಲಿ ನಿರತನಾಗಿದ್ದ. ಕೆಲ ನಿಮಿಷಗಳಲ್ಲಿಯೇ ಆಟವಾಡುತ್ತಿದ್ದ ಮಗಳು ಜನ ಸಾಗರದ ಮಧ್ಯೆ ಕಾಣೆಯಾಗಿದ್ದಳು. ಸುತ್ತ ಮುತ್ತ ಎಲ್ಲಾ ವಿಚಾರಿಸಿ, ಇಡೀ ನಗರವನ್ನು ಜಾಲಾಡಿದರೂ ನಾಲ್ಕು ವರ್ಷದ ಮುದ್ದು ಮಗಳು ಕ್ವಿಫೆಂಗ್ ಸಿಗಲೇ ಇಲ್ಲ.
ನಾಲ್ಕು ವರ್ಷದ ಕ್ವಿಫಿಂಗ್‌ ಪೋಟೊ.
ನಾಲ್ಕು ವರ್ಷದ ಕ್ವಿಫಿಂಗ್‌ ಪೋಟೊ.

ತಾಯಿ ತಂದೆ ಇಬ್ಬರಿಗೂ ಮಗಳದೇ ಚಿಂತೆ ತಲೆಗೆ ಹತ್ತಿತ್ತು. ಇನ್ನೂ ಜಗತ್ತನ್ನ ಅರಿಯದ ಪುಟ್ಟ ಕಂದ ಎಲ್ಲಿದ್ದಾಳೋ, ಯಾರ ಜತೆಗಿದ್ದಾಳೋ ಎನ್ನುವುದೇ ಅವರ ಕೊರಗಾಗಿತ್ತು.

ವಾಂಗ್‌ ಸುಮ್ಮನೇ ಕೈ ಚೆಲ್ಲಿ ಕೂರಲಿಲ್ಲ. ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟ. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ತಾನೇ ಕಳೆದು ಹೋದ ಪುಟ್ಟ ಮಗಳನ್ನು ಹುಡುಕುವ ಕಾರ್ಯಕ್ಕೆ ನಿಂತ. ಸುತ್ತ ಮುತ್ತಲಿನ ಹಳ್ಳಿ, ಪಟ್ಟಣ, ನಗರಗಳಿಗೆಲ್ಲಾ ಹೋಗಿ ಬಂದ. ಮಗಳ ಸುಳಿವೇ ಸಿಗಲಿಲ್ಲ. ದೂರದ ಊರುಗಳಿಗೂ ಆತನ ಹುಡುಕುವಿಕೆ ವಿಸ್ತರಿಸಿತ್ತು.

ತನ್ನ ಮಗಳು ಕಾಣೆಯಾಗಿದ್ದಾಳೆ ಎಂಬ ಭಿತ್ತಿ ಪತ್ರವನ್ನು ಸಿದ್ಧ ಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ಮುಂದಾದ. ಹೀಗೆ ಮಗಳನ್ನು ಹುಡುಕುವ ಕಾಯಕದಲ್ಲಿ ವಾಂಗ್‌ ಸತತ 20 ವರ್ಷಗಳ ಕಾಲ ಕಳೆದಿದ್ದ. ಮಗಳು ಸಿಗಲೇ ಇಲ್ಲ. ಇದರ ಜತೆಗೆ ಮತ್ತೊಂದು ಚಿಂತೆ ವಾಂಗ್‌ ದಂಪತಿಗಳಲ್ಲಿ ಕಾಡತೊಡಗಿತ್ತು. ಎಳೆ ವಯಸ್ಸಿನಲ್ಲೇ ಕಾಣೆಯಾದ ಮಗಳಿಗೆ ಈಗ 24ರ ಪ್ರಾಯವಾಗಿರುತ್ತದೆ. ಬದುಕಿದ್ದರೆ, ಯಾರೊಟ್ಟಿಗೋ ಅನ್ಯೂನ್ಯತೆಯಿಂದ ಬೆಳೆದಿರುವ ಮಗಳು ನಮ್ಮನ್ನು ತನ್ನ ಅಮ್ಮ ಅಪ್ಪ ಎಂದು ಸ್ವೀಕರಿಸುತ್ತಾಳೆಯೇ ಎನ್ನುವ ಸಂದೇಹ ಬಲವಾಗಿ ಕಾಡತೊಡಗಿತ್ತು.

ಮಗಳು ಕಾಣೆಯಾಗಿದ್ದಾಳೆ ಎಂಬ ಭಿತ್ತಿ ಪತ್ರ
ಮಗಳು ಕಾಣೆಯಾಗಿದ್ದಾಳೆ ಎಂಬ ಭಿತ್ತಿ ಪತ್ರ

ಮಗಳು ಬದುಕಿದ್ದಾಳೆ ಎಂಬ ಖಾತರಿಯಾದರೂ ಏನು ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ತಮ್ಮನ್ನು ಅಪ್ಪ ಅಮ್ಮ ಎಂದು ಸ್ವೀಕರಸಿದಿದ್ದರೂ ಬೇಡ, ಮಗಳು ಬದುಕಿದ್ದಾಳೆ ಎನ್ನುವ ಸಂಗತಿ ತಿಳಿದರೆ ಸಾಕು ಎನ್ನುವ ಮನಸ್ಥಿತಿ ವಾಂಗ್‌ ದಂಪತಿಗಳಲ್ಲಿ ಮೂಡಿತ್ತು.

ಹೀಗೆ ಒಂದೇ ಕಡೆ ಕುಳಿತು ಹುಡುಕುತ್ತಿದ್ದರೆ ಮಗಳು ಖಂಡಿತ ಸಿಗುವುದಿಲ್ಲ ಎಂದು ಅರಿತ ವಾಂಗ್‌, 2015ರಲ್ಲಿ ಚೈನಾದ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ ಅತಿ ದೊಡ್ಡ ಕಂಪನಿ 'ದಿದಿ ಚುಕ್ಸಿಂಗ್‌'ನಲ್ಲಿ ಕಾರು ಚಾಲಕನಾಗಿ ಉದ್ಯೋಗ ಆರಂಭಿಸಿದ. ಈ ಕಂಪನಿ ಚೈನಾದ ಎಲ್ಲಾ ಭಾಗಗಳಿಗೂ ಟ್ಯಾಕ್ಸಿ ಸೇವೆ ಒದಗಿಸುತ್ತಿತ್ತು. ದೇಶದ ನಾನಾ ಭಾಗಗಳಿಂದ ಬರುತ್ತಿದ್ದ ಜನರಲ್ಲಿ ತನ್ನ ಮಗಳ ಬಗ್ಗೆ ವಿಚಾರಿಸಿಬಹುದೆಂಬ ಕಾರಣಕ್ಕಾಗಿಯೇ ವಾಂಗ್‌ ಚಾಲಕನಾಗಿ ಕೆಲಸ ಆರಂಭಿಸಿದ್ದ.

ವಾಂಗ್‌ ದಂಪತಿಗಳು.
ವಾಂಗ್‌ ದಂಪತಿಗಳು.

ತನ್ನ ಕಾರಿನ ಮೇಲೆ ವಾಂಗ್‌ 'ಮಗಳು ಕಾಣೆಯಾಗಿದ್ದಾಳೆ' ಎಂಬ ಭಿತ್ತಿಪತ್ರವನ್ನು ತೂಗು ಹಾಕಿದ. ತನ್ನ ಬಳಿ ಬರುವ ಗ್ರಾಹಕರೆಲ್ಲರ ಬಳಿ ತನ್ನ ಕಳೆದು ಹೋದ ಮಗಳ ಬಗ್ಗೆ ಹೇಳಿ, ನೀವೆಲ್ಲಾದರೂ ಅವಳನ್ನು ಕಂಡಿದ್ದೀರಾ ಎಂದು ಪ್ರಶ್ನಿಸುತ್ತಿದ್ದ. ಹೀಗೆ ಸಹಸ್ರಾರು ಜನರು ವಾಂಗ್‌ನ ಪುತ್ರಿಶೋಕದ ಕತೆ ಕೇಳಿ ಮರುಗುತ್ತಿದ್ದರು. ಕಂಡರೆ ಖಂಡಿತ ತಿಳಿಸುತ್ತೇವೆ ಎಂಬ ಭರವಸೆಯನ್ನು ನೀಡಿ, ತೆರಳುತ್ತಿದ್ದರು. ಹೀಗೆ ಭರವಸೆಗಳ ಮಹಾಪೂರವೇ ವಾಂಗ್‌ ಬಳಿಗೆ ಹರಿದು ಬರುತ್ತಿತ್ತು. ಆದರೆ ಮಗಳು ಮಾತ್ರ ಬರಲಿಲ್ಲ.

ಮಗಳು ಕಳೆದು 24 ವರ್ಷವಾದರೂ ಇನ್ನೂ ತನ್ನ ಮಗಳನ್ನು ಹುಡುಕುವಲ್ಲೇ ಕಾಲ ಸವೆಸುತ್ತಿರುವ ವಾಂಗ್‌ನ ಬಗ್ಗೆ ಸ್ಥಳೀಯ ಸುದ್ಧಿ ಪತ್ರಿಕೆಯೊಂದು ವರದಿ ಮಾಡಿತ್ತು. ವಾಂಗ್‌ ಮಗಳ ನಾಲ್ಕು ವರ್ಷದ ಪೊಟೋವನ್ನು ಮುದ್ರಿಸಿ, ಈ ಮಗುವಿನ ಚಿತ್ರದೊಂದಿಗೆ ಹೋಲಿಕೆಯಿರುವ 28 ವರ್ಷದ ಯುವತಿಯರು ಯಾರಾದರೂ ಕಂಡರೆ ವಾಂಗ್‌ಗೆ ತಿಳಿಸಿ ಎಂದು ಬರೆದಿತ್ತು. ನಂತರದ ದಿನಗಳಲ್ಲಿ ಈ ಸುದ್ದಿ ಇನ್ನಿತರ ರಾಷ್ಟ್ರೀಯ ಪತ್ರಿಕೆಗಳಲ್ಲೂ ಕಾಣಿಸಿಕೊಂಡಿತು.

ವಾಂಗ್‌ಗೆ ಮಗಳ ಮೇಲಿದ್ದ ಮೋಹವನ್ನು ಕಂಡು ಬೆರಗಾದ ಫೋರೆನ್ಸಿಕ್‌ ಕಲಾವಿದ ಲಿನ್ ಯುಯುಯ್‌, ನಾಲ್ಕು ವರ್ಷದ ಮುಗುವಿದ್ದಾಗಲೇ ಕಳೆದು ಹೋಗಿದ್ಗ ವಾಂಗ್‌ ಮಗಳು ಕ್ವಿಫಿಂಗ್‌, 24 ವರ್ಷಗಳು ಕಳೆದ ಬಳಿಕ, ಅಂದರೆ 2017ರಲ್ಲಿ ಹೇಗಿರಬಹುದು ಎಂದು ಎರಡು ಚಿತ್ರಗಳನ್ನು ಬರೆದುಕೊಟ್ಟ. ಈ ಚಿತ್ರಗಳು ಚೈನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಸುದ್ದಿಯೂ ಆದವು.

ವಾಂಗ್‌ ವಾಸಿಸುತ್ತಿದ್ದ ಚಂದ್ಗು ನಗರದಿಂದ ಸರಿಸುಮಾರು 2857 ಕಿಲೋ ಮೀಟರ್‌ಗಳಷ್ಟು ದೂರವಿದ್ದ ಜಿಲಿನ್‌ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಾಂಗ್‌ಯಿಂಗ್‌ಗೆ ಈ ಚಿತ್ರಗಳು ತಲುಪಿದ್ದವು. ಈ ಚಿತ್ರಗಳು ತನ್ನನ್ನೆ ಹೋಲುವುದನ್ನು ಕಂಡ ಆಶ್ಚರ್ಯಕ್ಕೆ ಒಳಗಾದ ಕಾಂಗ್‌ಯಿಂಗ್, ವಾಂಗ್‌ರನ್ನು ಭೇಟಿಯಾಗುವ ನಿರ್ಧಾರಕ್ಕೆ ಬಂದಳು.

2018ರ ಮಾರ್ಚ್‌ 16ರಂದು ವಾಂಗ್‌ ದಂಪತಿಗಳ ಮುಂದೆ ನಿಂತ ಕಾಂಗ್‌ಯಿಂಗ್‌ಗೆ ಇವರೇ ತನ್ನ ತಂದೆ ತಾಯಿ ಎಂದು ಗುರುತಿಸಲು ಸಾಧ್ಯವಾಗಿರಲಿಲ್ಲ. ಇವಳೇ ನನ್ನ ಮಗಳು ಕ್ವಿಫಿಂಗ್‌ ಎಂಬ ಯಾವ ಖಾತರಿಯೂ ಕೂಡ ವಾಂಗ್‌ ದಂಪತಿಗಳಿಗೆ ಇರಲಿಲ್ಲ. ಸತ್ಯವನ್ನು ಪರೀಕ್ಷಿಸುವ ಸಲುವಾಗಿ ಕಾಂಗ್‌ಯಿಂಗ್‌ ಮತ್ತು ವಾಂಗ್‌, ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದರು.

ಏಪ್ರಿಲ್‌ 2ನೇ ದಿನ, ಸೋಮವಾರ ಬಂದ ವೈದ್ಯರ ವರದಿ ಕಾಂಗ್‌ಯಿಂಗ್‌, ವಾಂಗ್‌ ದಂಪತಿಗಳ ಮಗಳು ಎನ್ನುವುದನ್ನು ಖಾತರಿ ಪಡಿಸಿತ್ತು.

ಬರೋಬ್ಬರಿ 24 ವರ್ಷಗಳ ಹಿಂದೆ ಕಳೆದು ಹೋದ ಮಗಳು ಮತ್ತೆ ಸಿಕ್ಕ ಸಂತಸಕ್ಕೆ ವಾಂಗ್‌ ದಂಪತಿಗಳ ಕಣ್ಣಿನಲ್ಲಿ ನೀರು ಜಿನುಗಿದರೆ, ತಾನೊಬ್ಬ ಅನಾಥೆ ಎಂದೇ ನಂಬಿ ಬೆಳೆದಿದ್ದ ಕಾಂಗ್‌ಯಿಂಗ್‌ಗೆ ಅನಿರೀಕ್ಷಿತವಾಗಿ ತಂದೆ ತಾಯಿಗಳು ದೊರೆತದ್ದು ಮಾತುಗಳನ್ನೇ ಕಟ್ಟಿ ಹಾಕಿತ್ತು.

ಜಗತ್ತು ನಿಂತಿರುವುದು ಸಂಬಂಧಗಳ ಮೇಲೆ, ಅವುಗಳು ಸೂಸುವ ಭಾವನೆಗಳ ಮೇಲೆ. ಇಂತಹ ಚಿಕ್ಕ ಪುಟ್ಟ ಸಂಗತಿಗಳು ಹೇಗೆ ಮನುಷ್ಯನ ಹೃದಯ ಸಂಬಂಧಗಳಿಗಾಗಿ ಮಿಡಿಯುತ್ತಿರುತ್ತದೆ ಎಂಬುದನ್ನು ಆಗಾಗ ನಿರೂಪಿಸುತ್ತವೆ.