samachara
www.samachara.com
ಮೌಲಾನಾ ಇಮ್ದಾದುದ್ದೀನ್ ರಶೀದಿ (ಚಿತ್ರಕೃಪೆ: ಹಿಂದೂಸ್ತಾನ ಟೈಮ್ಸ್)
ಮೌಲಾನಾ ಇಮ್ದಾದುದ್ದೀನ್ ರಶೀದಿ (ಚಿತ್ರಕೃಪೆ: ಹಿಂದೂಸ್ತಾನ ಟೈಮ್ಸ್)
ಪಾಸಿಟಿವ್

ಮಗನ ಸಾವಿನ ಶೋಕದ ನಡುವೆಯೂ ಸೌಹಾರ್ಧತೆ ಮೆರೆದ ತಂದೆ

ಪ್ರತಿ ಕೋಮು ಗಲಭೆಗಳ ಹಿಂದೆ ವ್ಯವಸ್ಥಿತ ಯೋಜನೆ ಇರುತ್ತದಾರೂ, ಅದು ಹರಡಲು ಕ್ಷುಲ್ಲಕ ಕಾರಣಗಳು ಸಾಕಿರುತ್ತದೆ. ಇಂತಹ ಸಮಯದಲ್ಲಿ ಸಂಯಮ ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡುತ್ತದೆ. ಉದಾಹರಣೆ ರೂಪದಲ್ಲಿ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ. 

ವಿಶ್ವನಾಥ್ ಬಿ. ಎಂ

ವಿಶ್ವನಾಥ್ ಬಿ. ಎಂ

ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ರಾಮನವಮಿ ಮೆರವಣಿಗೆ ಕೋಮು ಹಿಂಸಾಚಾರಕ್ಕೆ ತಿರುಗಿದ್ದು ಹಳೆಯ ಕತೆ. ವಿನಾಕಾರಣ ಮೂವರ ಸಾವಿಗೆ ಕಾರಣವಾಗಿ, ಹತ್ತಕ್ಕೂ ಹೆಚ್ಚು ಜನರ ಮೇಲಿನ ಹಲ್ಲೆಗೆ ಕಾರಣವಾಗಿದ್ದ ಘಟನೆ ಈಗ ತಹಬಂದಿಗೆ ಬಂದಿದೆ.

ಇದಕ್ಕೆ ಹಲವು ಕಾರಣಗಳಿದ್ದರೂ, ಮುಖ್ಯವಾಗಿ ಈ ಹಿಂಸಾಚಾರದ ಸಮಯದಲ್ಲಿ ಮಗನನ್ನು ಕಳೆದುಕೊಂಡ ತಂದೆಯೊಬ್ಬರು ತೋರಿಸಿದ ಸಂಯಮ ಹಾಗೂ ಧರ್ಮಗಳ ಮದ್ಯ ದ್ವೇಷ ಉಂಟಾಗದಂತೆ ಶಾಂತಿ ಸ್ಥಾಪನೆಗೆ ನಡೆಸಿದ ಪ್ರಯತ್ನ ಈಗ ದೇಶದ ಗಮನ ಸೆಳೆದಿದೆ.

ಅಂಹದಾಗೆ ಅವರ ಹೆಸರು ಮೌಲಾನಾ ಇಮ್ದಾದುದ್ದೀನ್ ರಶೀದಿ. ಪಶ್ಚಿಮ ಬಂಗಾಳದ ಅಸನ್ಸೋಲ್‌ ಎಂಬ ಪ್ರದೇಶದವರು.

ತಮ್ಮ ಹದಿಹರೆಯದ ಪುತ್ರನನ್ನು ಕಳೆದುಕೊಂಡ ದುಃಖದ ನಡುವೆಯೂ, ಯಾರಾದರೂ ಹಿಂದೂಗಳ ಮೇಲೆ ಪ್ರತಿ ದಾಳಿ ನಡೆಸಿದಲ್ಲಿ ಊರು ಬಿಟ್ಟು ಹೋಗುವುದಾಗಿ ಹೇಳಿ ಅಲ್ಲಿನ ಕದಡಿದ ಧಾರ್ಮಿಕ ವಾತಾವರಣವನ್ನು ತಿಳಿಗೊಳಿಸಲು ಮುಂದಾದ ಇಮಾಮ್‌ ನಿರ್ಧಾರಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ.

ಗಲಭೆಯಲ್ಲಿ ಗಾಯಗೊಂಡಿದ್ದ ಇಮಾಮ್ ಮಗ ಸಿಬ್ತುಲ್ಲಾ ರಶೀದಿ ಅಸನ್ಸೋಲ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಆತನು ಈ ಬಾರಿಯ 10ನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದ. 16 ವರ್ಷದ ಮಗನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಇಮಾಮ್ ಎರಡೂ ಕೋಮುಗಳ ನಡುವೆ ಶಾಂತಿ ಹಾಗೂ ಸೌಹಾರ್ಧತೆಗೆ ಮನವಿ ಮಾಡಿಕೊಂಡಿದ್ದಾರೆ.

“ಅಸನ್ಸೋಲ್‌ ಗಲಭೆ ನಂತರ ನನ್ನ ಮಗ ಕಣ್ಮರೆಯಾದ. ನಾನು ಪೊಲೀಸರಿಗೆ ಆತ ಕಾಣೆಯಾದ ಕುರಿತು ದೂರು ದಾಖಲಿಸಿದೆ. ನಾಲ್ಕು ದಿನಗಳ ಹಿಂದೆ ಆತನ ಮೃತದೇಹ ಪತ್ತೆಯಾದ ನಂತರ ಆತ ಗಲಭೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಅತೀವ ನೋವಾಯಿತು,”ಎಂದಿದ್ದಾರೆ.

ಈದ್ಗಾ ಮೈದಾನದಲ್ಲಿ ಸಿಬ್ತುಲ್ಲಾ ಅಂತ್ಯಸಂಸ್ಕಾರಕ್ಕೆ ಸಾವಿರಾರು ಜನರು ಸೇರಿದ್ದರು. ಈ ಸಂದರ್ಭದಲ್ಲಿ “ಮುಸ್ಲಿಂರು ಹಿಂದೂಗಳ ಮೇಲೆ ಯಾವುದೇ ರೀತಿಯ ಪ್ರತೀಕಾರ ತೋರಿದರೆ, ಕೋಮು ಗಲಭೆ ನಡೆದರೆ ನಾನು ಅಸನ್ಸೋಲ್ ಬಿಟ್ಟು ಹೋಗುತ್ತೇನೆ ಎಂದು ಈಗಾಗಲೇ ಸಭೆಗೆ ಹೇಳಿದ್ದೇನೆ. ನೀವು ನನ್ನನ್ನು ಪ್ರೀತಿಸುವುದಾದರೆ, ಯಾವತ್ತೂ ಹೀಗೆ ಮಾಡಲಾರಿರಿ,” ಎಂದು ಹೇಳುವ ಮೂಲಕ ಹಿಂದೂ-ಮುಸ್ಲಿಂ ಮದ್ಯ ದ್ವೇಷ ಉಂಟಾಗದಂತೆ ನೋಡಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಅಸನ್ಸೋಲ್‌ ಹಾಗೂ ರಾಣಿಗಂಜ್ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ನಿಷೇದಾಜ್ಞೆ ಹೇರಲಾಯಿತು. ಆದರೆ ನಿಷೇಧಾಜ್ಞೆ ಉಲ್ಲಂಘಿಸಿ ಅಸನ್ಸೋಲ್‌ಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮತ್ತಷ್ಟು ಪ್ರಚೋದನಕಾರಿ ಮಾತುಗಳನ್ನಾಡಿದ್ದರು.

ಈ ಮಾತುಗಳನ್ನು ವಿರೋಧಿಸಿ ನಟ ಪ್ರಕಾಶ್ ರಾಜ್ ವಿರೋಧಿಸಿ ಮಾತನಾಡಿದ ಟ್ವೀಟ್ ಇಲ್ಲಿದೆ.

“ಗಲಭೆಯ ನಂತರದಲ್ಲಿ ಕೋಪಗೊಂಡ ಯುವಕರನ್ನು ಶಾಂತಗೊಳಿಸುವಲ್ಲಿ ಇಮಾಮ್ ಯಶಸ್ವಿಯಾಗಿದ್ದಾರೆ. ನಾವು ಆತನ ಬಗ್ಗೆ ಹೆಮ್ಮೆಪಡುತ್ತೇವೆ. ಮಗನ ಅಗಲುವಿಕೆಯ ನೋವಿನ ಹೊರತಾಗಿಯೂ ಅವರು ಸಮಾಜದಲ್ಲಿನ ಶಾಂತಿಗಾಗಿ ಮನವಿ ಮಾಡಿದ್ದಾರೆ,” ಎನ್ನುತ್ತಾರೆ ಅಸನ್ಸೋಲ್ ಮೇಯರ್ ಜಿತೇಂದ್ರ ತಿವಾರಿ.

“ಮಗನನ್ನು ಕಳೆದುಕೊಂಡ ತಂದೆಯಿಂದ ಇಂತಹ ಒಂದು ನಿರ್ಧಾರವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಇಮಾಮ್ ಕೇವಲ ಪ.ಬಂಗಾಳಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಅವರು ಮಗನ ಅಂತಿಮ ಸಂಸ್ಕಾರವನ್ನು ಮುಗಿಸಿ ಮಾತನಾಡುವಾಗ ನಾನೂ ಅಲ್ಲಿದ್ದೆ. ಆಗ ಜನರು ಇಮಾಮ್ ಮಾತುಗಳನ್ನು ಕೇಳಿ ಅಕ್ಷರಶಃ ಭಾವುಕರಾಗಿ ಅತ್ತುಬಿಟ್ಟರು. ಅವರ ಮಗನ ಮೃತದೇಹ ಸಿಕ್ಕ ನಂತರ ಅಲ್ಲಿನ ಯುವಕರು ತುಂಬಾ ಆಕ್ರೋಶಭರಿತರಾಗಿದ್ದರು. ಆದರೆ ಇಮಾಮ್‌ರ ಸಮಯೋಚಿತವಾದ ಒಂದು ಹೇಳಿಕೆಯಿಂದ ಶಾಂತಿ ಕಾಪಾಡಲು ಸಹಾಯವಾಯಿತು. ಇಲ್ಲದಿದ್ದರೆ ಅಸನ್ಸೋಲ್‌ ಬೆಂಕಿಯಾಗುತ್ತಿತ್ತು,” ಎನ್ನುತ್ತಾರೆ ಅಸನ್ಸೋಲ್‌ನ ವಾರ್ಡ್ ಕೌನ್ಸಿಲರ್ ಮೊಹಮ್ಮದ್ ನಸೀಮ್ ಅನ್ಸಾರಿ.

ಅವರು ಯಾಕೆ ಯಾರ ಮೇಲೆಯೂ ಶಂಕೆ ವ್ಯಕ್ತಪಡಿಸುತ್ತಿಲ್ಲ ಎನ್ನುವುದಕ್ಕೆ ಈ ರೀತಿ ಕಾರಣವನ್ನೂ ನೀಡಿದ್ದಾರೆ.

“ನಾನು ನನ್ನ ಮಗನ ಕೊಲೆಯನ್ನು ಕಣ್ಣಾರೆ ನೋಡಿಲ್ಲ. ಹೀಗಾಗಿ ಯಾರತ್ತಲೂ ಬೊಟ್ಟು ಮಾಡಿ, ಯಾರನ್ನೂ ಇದರಲ್ಲಿ ಶಂಕಿತ ಎಂದು ನಾನು ಹೇಳುವುದಿಲ್ಲ. ಯಾವುದೇ ಮುಗ್ಧ ವ್ಯಕ್ತಿಗೂ ತೊಂದರೆ ಆಗುವುದು ನನಗೆ ಇಷ್ಟವಿಲ್ಲ. ಪೊಲೀಸ್ ತನಿಖೆಯ ನಂತರ ತಪ್ಪಿತಸ್ಥ ಯಾರು ಎಂದು ತಿಳಿಯುತ್ತದೆ,” ಎಂದಿದ್ದಾರೆ.

“ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಆದರೆ ಅದು ಎರಡು ಸಮುದಾಯದ ಮದ್ಯದ ಶಾಂತಿಯನ್ನು ಹಾಳುಗೆಡುವಲು ಕಾರಣವಾಗಬಾರದು. ಯಾರು ಅಲ್ಲಾನನ್ನು ಪ್ರೀತಿಸುವರೋ ಹಾಗೂ ಭಯ ಪಡುವರೋ ಅವರು ಯಾವತ್ತೂ ಪ್ರತೀಕಾರಕ್ಕೆ ಮುಂದಾಗುವುದಿಲ್ಲ . ಕ್ಷಮೆಯೇ ಇಸ್ಲಾಂನ ಪ್ರಮುಖ ಪಾಠ," ಎಂದಿದ್ದಾರೆ.

ಭಾನುವಾರ ಅಸನ್ಸೋಲ್‌ಗೆ ಭೇಟಿ ನೀಡಿದ ಬಿಜೆಪಿ ಸಂಸದರ ತಂಡವು ತಮ್ಮನ್ನು ಮಾತನಾಡಿಸಲು ಕೂಡ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, “ಯಾರಾದರೂ ನನ್ನನ್ನು ಭೇಟಿ ಮಾಡಲು ಬಂದಾಗ ನಾನು ಅವರೊಂದಿಗೆ ಮಾತನಾಡುತ್ತೇನೆ ಆದರೆ ಅಂತಹ ಸಭೆಗಳ ಮೂಲಕ ರಾಜಕೀಯ ಮೈಲೇಜ್ ಪಡೆಯಲು ನಾನು ಅವರಿಗೆ ಅವಕಾಶ ಮಾಡಿಕೊಡುವುದಿಲ್ಲ,” ಎಂದಿದ್ದಾರೆ.

ಇಮಾಮ್ ರಶೀದಿಯ ಸಂದೇಶದಿಂದ ಸ್ಪೂರ್ತಿ ಪಡೆದ ಕೆಲವು ಸ್ಥಳೀಯ ಮುಸ್ಲಿಂರು. “ನೂರಾನಿ ಮಸೀದಿ ಪ್ರದೇಶದ ಶಿಟ್ಲಾ ದಂಗಲ್ ಪ್ರದೇಶದಲ್ಲಿ ವಾಸಿಸುವ ಹಿಂದು ಕುಟುಂಬಗಳಿಗೆ ಸೇರಿದ ಅಂಗಡಿಗಳು ಮತ್ತು ಆಸ್ತಿಗಳನ್ನು ಕಾಪಾಡಲು ಮುಂದಾಗಿದ್ದಾರೆ. ಜೊತೆಗೆ ಹೊರಗಿನವರು ತೊಂದರೆಗಳನ್ನು ಸೃಷ್ಟಿಸದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಎಂ.ಡಿ.ಕಲಾಂ ಹೇಳಿದ್ದಾರೆ.

“ಗಲಭೆ ನಡೆದಾಗ ನಾನು ಪಟ್ಟಣದಲ್ಲಿ ಇರಲಿಲ್ಲ. ಆದರೆ ಅಂಗಡಿಯಲ್ಲಿ ನನ್ನ ಅಮೂಲ್ಯವಾದ ಆಭರಣಗಳಿದ್ದವು. ಗಲಭೆಯಿಂದ ನನ್ನ ಆಸ್ತಿಪಾಸ್ತಿಗೆ ಹಾನಿಯಾಗುತ್ತದೆ ಎಂದು ನಾನು ಹೆದರಿದ್ದೆ. ಆದರೆ ನನ್ನ ನೆರೆಹೊರೆಯ ಮುಸ್ಲಿಂರು ನಮ್ಮನ್ನು ರಕ್ಷಿಸಿ, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ನನಗೆ ಭರವಸೆ ನೀಡಿದರು,” ಎಂದು ಸ್ಥಳೀಯ ಆಭರಣಕಾರ ಆರ್.ಕೆ ವರ್ಮಾ ತಮ್ಮ ಅಂಗಡಿ ರಕ್ಷಿಸಿದ ಮುಸ್ಲಿಂರಿಗೆ ಧನ್ಯವಾದ ಸಲ್ಲಿಸಿದರು.

ಕಳೆದ ವರ್ಷದಲ್ಲಿ ಕೋಮು ಹಿಂಸಾಚಾರದ ಪ್ರಮಾಣವು ದೇಶದಲ್ಲಿ ಶೇಕಡಾ 15ರಷ್ಟು ಹೆಚ್ಚಾಗಿದೆ. ಅತೀ ಹೆಚ್ಚು ಕೋಮು ಗಲಭೆಗಳು ನಡೆದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನವು ಮೂರನೇ ಸ್ಥಾನದಲ್ಲಿದೆ. ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ಗಳು ಅನುಕ್ರಮವಾಗಿ ನಂತರದ ಸ್ಥಾನ ಪಡೆದಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಮಾಮ್ ಅವರ ಸಂಯಮದ ಹಾಗೂ ಶಾಂತಿಯುತ ನಡೆ ಎಲ್ಲರಿಗೂ ಅನುಕರಣೀಯ ಎನ್ನಬಹುದು.