samachara
www.samachara.com
ನೆಟ್‌ಫ್ಲಿಕ್ಸ್‌ ಪ್ರತಿಸ್ಪರ್ಧಿ: ‘ಆಪಲ್‌ ಟಿವಿ +’ಗೆ ಅದ್ಧೂರಿ ಚಾಲನೆ ನೀಡಿದ ಓಪ್ರಾ, ಸ್ಪಿಲ್‌ಬರ್ಗ್
ವೆಬ್

ನೆಟ್‌ಫ್ಲಿಕ್ಸ್‌ ಪ್ರತಿಸ್ಪರ್ಧಿ: ‘ಆಪಲ್‌ ಟಿವಿ +’ಗೆ ಅದ್ಧೂರಿ ಚಾಲನೆ ನೀಡಿದ ಓಪ್ರಾ, ಸ್ಪಿಲ್‌ಬರ್ಗ್

ಸೋಮವಾರ ಒಂದೇ ವೇದಿಕೆ ಮೇಲೆ ಖ್ಯಾತ ಹಾಲಿವುಡ್‌ ಮತ್ತು ಅಮೆರಿಕಾ ಟಿವಿ ಲೋಕದ ತಾರೆಗಳನ್ನು ಕರೆ ತಂದಿರುವ ಆಪಲ್‌ ತನ್ನ ಹೊಸ ವಿಡಿಯೋ ಸ್ಟ್ರೀಮಿಂಗ್‌ ಸೇವೆಗೆ ಅದ್ಧೂರಿ ಚಾಲನೆ ನೀಡಿದೆ.

Team Samachara

ಹೊಸ ತಲೆಮಾರಿನ ತಂತ್ರಜ್ಞಾನಗಳ ಮೂಲಕ ಆಗಾಗ ಧೂಳೆಬ್ಬಿಸುವ ಟೆಕ್‌ ದೈತ್ಯ ಆಪಲ್‌ ಇದೀಗ ನೆಟ್‌ಫ್ಲಿಕ್ಸ್‌ ಜತೆ ಸ್ಪರ್ಧೆಗಿಳಿದಿದೆ. ಭಾರಿ ಹೂಡಿಕೆ ಮತ್ತು ಬೆಳವಣಿಗೆ ಕಾಣುತ್ತಿರುವ ವಿಡಿಯೋ ಸ್ಟ್ರೀಮಿಂಗ್‌ ಕ್ಷೇತ್ರಕ್ಕೆ ಅದು ‘ಆಪಲ್‌ ಟಿವಿ ಪ್ಲಸ್‌’ ಹೆಸರಿನಲ್ಲಿ ಸೋಮವಾರ ದಾಗುಂಡಿ ಇಟ್ಟಿದೆ.

ಒಂದು ಕಾಲದಲ್ಲಿ ಆಪಲ್‌ ಐಟ್ಯೂನ್ಸ್‌ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಇದೇ ಸ್ವರೂಪದ ಮಾದರಿಯೊಂದನ್ನು ಹುಟ್ಟುಹಾಕಿತ್ತು. ಆದರೆ ವಿಡಿಯೋ ಕ್ಷೇತ್ರಕ್ಕೆ ಮಾತ್ರ ಅದು ಪ್ರವೇಶಿಸಿರಲಿಲ್ಲ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್, ಎಚ್‌ಬಿಒ ನೌ ಮೊದಲಾದ ಬೃಹತ್‌ ಜಾಗತಿಕ ಕಂಪನಿಗಳು ಸ್ಥಾಪನೆಯಾಗಿ ನೆಲೆಯೂರಿದ ನಂತರ ಅದೀಗ ತಡವಾಗಿ ಈ ಕ್ಷೇತ್ರ ಪ್ರವೇಶಿಸಿದೆ.

ಸೋಮವಾರ ಒಂದೇ ವೇದಿಕೆ ಮೇಲೆ ಖ್ಯಾತ ಹಾಲಿವುಡ್‌ ಮತ್ತು ಅಮೆರಿಕಾ ಟಿವಿ ಲೋಕದ ತಾರೆಗಳನ್ನು ಕರೆ ತಂದಿರುವ ಆಪಲ್‌ ತನ್ನ ಹೊಸ ವಿಡಿಯೋ ಸ್ಟ್ರೀಮಿಂಗ್‌ ಸೇವೆಗೆ ಅದ್ಧೂರಿ ಚಾಲನೆ ನೀಡಿದೆ.

ಅಮೆರಿಕಾ ಟಿವಿ ಲೋಕದ ಜೀವಂತ ದಂತಕಥೆ ಓಪ್ರಾ ವಿನ್‌ಫ್ರೇ, ಹಾಲಿವುಡ್‌ ಸಿನಿಮಾ ಕ್ಷೇತ್ರದ ಸೂಪರ್‌ ಸ್ಟಾರ್‌ ನಿರ್ದೇಶಕರುಗಳಾದ ಸ್ಟೀವನ್‌ ಸ್ಪಿಲ್‌ಬರ್ಗ್‌, ಜೆ. ಜೆ. ಅಬ್ರಾಮ್ಸ್‌, ನಟರಾದ ಒಕ್ಟಾವಿಯಾ ಸ್ಪೆನ್ಸರ್‌, ಜೆನ್ನಿಫರ್‌ ಅನಿಸ್ಟಾನ್‌ ಮೊದಲಾದವರ ಸರಕುಗಳನ್ನು ತನ್ನ ಆಪ್‌ ಮೂಲಕ ಏಕಕಾಲದಲ್ಲಿ ವೀಕ್ಷಕರ ಮುಂದಿಟ್ಟಿದೆ.

ಆಪಲ್‌ ಟಿವಿ + ಉದ್ಘಾಟನಾ ಕಾರ್ಯಕ್ರಮದ ನಂತರ ಆಪಲ್‌ ಕ್ಯಾಂಪಸ್‌ನಲ್ಲಿ ಸಿಇಒ ಟಿಮ್‌ ಕುಕ್‌, ಓಪ್ರಾ ವಿನ್‌ಫ್ರೇ ಮತ್ತು ಸ್ಟೀವನ್‌ ಸ್ಪಿಲ್‌ಬರ್ಗ್.
ಆಪಲ್‌ ಟಿವಿ + ಉದ್ಘಾಟನಾ ಕಾರ್ಯಕ್ರಮದ ನಂತರ ಆಪಲ್‌ ಕ್ಯಾಂಪಸ್‌ನಲ್ಲಿ ಸಿಇಒ ಟಿಮ್‌ ಕುಕ್‌, ಓಪ್ರಾ ವಿನ್‌ಫ್ರೇ ಮತ್ತು ಸ್ಟೀವನ್‌ ಸ್ಪಿಲ್‌ಬರ್ಗ್.
/ವೆರೈಟಿ

ಆಪಲ್‌ ಪಾಲಿನ ಹೊಸ ಬೂಸ್ಟ್‌?

ವರ್ಷಗಳ ಕಾಲ ದಾಖಲೆಯ ಲಾಭವನ್ನು ಜೇಬಿಗಿಳಿಸಿಕೊಂಡ ಬಂದ ಕಂಪನಿ ಆಪಲ್‌. ಆದರೆ ಇತ್ತೀಚೆಗೆ ಐಫೋನ್‌ಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡು ಬಂದಿತ್ತು. ಅಮೆರಿಕಾದ ಶೇರು ಪೇಟೆಯಲ್ಲೂ ಕಂಪನಿಯ ಶೇರುಗಳು ಇಳಿಕೆಯ ಹಾದಿ ಹಿಡಿದಿದ್ದವು. ಆಪಲ್‌ ವಾಚ್‌ಗಳಿಗೆ ಉತ್ತಮ ಬೇಡಿಕೆ ಇದ್ದಾಗಲೂ ಮೊಬೈಲ್‌ ಮಾರಾಟ ಕುಸಿತದ ಹಾದಿ ಹಿಡಿದಿದ್ದು ಕಂಪನಿ ಪಾಲಿಗೆ ಋಣಾತ್ಮಕ ಸುದ್ದಿಯಾಗಿತ್ತು.

ಇಂತಹ ಹೊತ್ತಲ್ಲಿ ಆಪಲ್‌ ಹೊಸ ಉತ್ಪನ್ನದೊಂದಿಗೆ ತನ್ನ ಅಭಿಮಾನಿಗಳು, ಗ್ರಾಹಕರ ಮುಂದೆ ಬಂದಿದ್ದು ಕಂಪನಿಗೆ ಹೊಸ ಬೂಸ್ಟ್‌ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನೆಟ್‌ಫ್ಲಿಕ್ಸ್‌, ಅಮೆಜಾನ್‌ಗೆ ಆಪಲ್‌, ಬಿಬಿಸಿ ಸವಾಲು:

ಸದ್ಯದ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್‌ ಮಾರುಕಟ್ಟೆಯನ್ನು ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಆಳುತ್ತಿವೆ. ಈ ಕಂಪನಿಗಳ ಏಕಸ್ವಾಮ್ಯವನ್ನು ಒಡೆಯಲು ಕೆಲವು ತಿಂಗಳ ಹಿಂದೆ ‘ಬ್ರಿಟ್‌ಬಾಕ್ಸ್‌’ ಹೆಸರಿನಲ್ಲಿ ಬ್ರಿಟನ್‌ನ ಪ್ರಮುಖ ಬ್ರಾಡ್‌ಕಾಸ್ಟ್‌ ಕಂಪನಿಗಳಾದ ಬಿಬಿಸಿ ಮತ್ತು ಐಟಿವಿ ಒಂದಾಗಿದ್ದವು. ಇದೀಗ ಇದೇ ಕ್ಷೇತ್ರಕ್ಕೆ ಆಪಲ್‌ನ ಪ್ರವೇಶವಾಗಿದೆ.

ಹೀಗಾಗಿ ಈ ಕ್ಷೇತ್ರದ ಮುಂದಿನ ದಿನಗಳಲ್ಲಿ ಭಾರೀ ಸ್ಪರ್ಧೆಯನ್ನು ಕಾಣಲಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ನಂತೆ ಆಪಲ್‌ಗೂ ತಿಂಗಳ ಚಂದಾ ಇರಲಿದೆ. ಆದರೆ ಎಷ್ಟು ಎಂಬ ವಿವರವನ್ನು ಸೋಮವಾರದ ಕಾರ್ಯಕ್ರಮದಲ್ಲಿ ಘೋಷಿಸಿಲ್ಲ.

ಆಪಲ್‌ ಟಿವಿ ಪ್ಲಸ್‌ನಲ್ಲಿ ಎಕ್ಸ್‌ಕ್ಲೂಸಿವ್‌ ಟಿವಿ ಪ್ರೋಗ್ರಾಂಗಳು ಇರಲಿವೆ. ಜಾಹೀರಾತು ರಹಿತ ವಿಡಿಯೋ ಸೇವೆಗಳನ್ನು 100 ದೇಶಗಳ ಜನರು ವೀಕ್ಷಿಸಬಹುದಾಗಿದೆ. ಇದರ ಜತೆಗೆ ಎಚ್‌ಬಿಒ, ಶೋಟೈಮ್ಸ್‌, ಸ್ಟಾರ್ಜ್‌, ಸಿಬಿಎಸ್‌ನ ಕಾರ್ಯಕ್ರಮಗಳೂ ಪ್ರಸಾರವಾಗಲಿವೆ.

ತನ್ನ ಒರಿಜಿನಲ್‌ ಕಾರ್ಯಕ್ರಮಗಳಿಗಾಗಿ ಆಪಲ್‌ 2017ರ ಅಕ್ಟೋಬರ್‌ನಿಂದ ಸುಮಾರು 7 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಹಾಗೆ ನೋಡಿದರೆ ಈ ಮೊತ್ತ ಏನೇನೂ ಅಲ್ಲ. ಕಳೆದ 7 ವರ್ಷಗಳಿಂದ ಒರಿಜಿನಲ್ ಕಾರ್ಯಕ್ರಮಗಳನ್ನು ನಿರ್ಮಿಸುತ್ತಾ ಬಂದಿರುವ ನೆಟ್‌ಫ್ಲಿಕ್ಸ್‌ ಈ ವರ್ಷ ಇದೇ ಕಾರಣಕ್ಕೆ ಸುಮಾರು 70,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಅಮೆಜಾನ್‌ ಮತ್ತು ಹುಲು ಕೂಡ ಇದೇ ರೀತಿ ಹೂಡಿಕೆ ಮಾಡುತ್ತಿವೆ.

ಇವುಗಳ ಮಧ್ಯೆ ಮೂಲತಃ ತಂತ್ರಜ್ಞಾನ ಆಧರಿತ ಕಂಪನಿ ಹೇಗೆ ಉಳಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ತಂತ್ರಜ್ಞಾನದಿಂದ ಕಂಟೆಂಟ್‌ನತ್ತ:

ಹಲವು ವರ್ಷಗಳ ಕಾಲ ಆಪಲ್‌ ಕೇವಲ ಉತ್ಪನ್ನಗಳ ಮಾರಾಟವನ್ನೇ ತನ್ನ ಉದ್ಯಮವಾಗಿ ನೆಚ್ಚಿಕೊಂಡಿತ್ತು. ಪ್ರತಿ ಬಾರಿ ಹೊಸ ಉತ್ಪನ್ನ ಬಿಡುಗಡೆಯಾದಾಗಲೂ ಆಪಲ್‌ ಗ್ರಾಹಕರು ಫೋನ್‌ ಮತ್ತು ಟ್ಯಾಬ್ಲೆಟ್‌ಗಳನ್ನು ಬದಲಾಯಿಸುತ್ತಿದ್ದರು. ಇದು ಕಂಪನಿಗೆ ದೊಡ್ಡ ಮೊತ್ತದ ಲಾಭವನ್ನು ತಂದುಕೊಡುತ್ತಿತ್ತು.

ಇದೀಗ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟಿರುವ ಸಂಸ್ಥೆ ತನ್ನ ಆಪಲ್‌ ಟಿವಿ, ಆಪಲ್‌ ವಾಚ್‌, ಐಫೋನ್‌, ಮ್ಯಾಕ್‌ ಕಂಪ್ಯೂಟರ್‌ಗಳು ಮತ್ತು ಐಪ್ಯಾಡ್‌ಗಳ ಮೂಲಕ 140 ಕೋಟಿ ಗ್ರಾಹಕರನ್ನು ಹೊಸ ರೂಪದಲ್ಲಿ ತಲುಪಲು ಮುಂದಾಗಿದೆ.

ವಿಡಿಯೋ ಸ್ಟ್ರೀಮಿಂಗ್‌ ಜತೆಗೆ ಇನ್ನೂ ಹಲವು ಸೇವೆಗಳನ್ನು ಆಪಲ್‌ ಪರಿಚಯಿಸಿದೆ. ಮಾಸಿಕ ಚಂದಾದಾರಿಕೆಯ ವಿಡಿಯೋ ಗೇಮ್‌ ಆಪ್‌ ‘ಆರ್ಕೇಡ್‌’ ಮತ್ತು ಸುದ್ದಿಗಳನ್ನು ನೀಡುವ ‘ನ್ಯೂಸ್‌ +’ ಆಪ್‌ಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಕಂಪನಿ ಹೇಳಿದೆ.

‘ನ್ಯೂಸ್‌ +’ನಲ್ಲಿ ದಿ ನ್ಯೂಯಾರ್ಕರ್‌, ನ್ಯಾಷನಲ್‌ ಜಿಯೋಗ್ರಾಫಿಕ್‌, ಇನ್‌ಸ್ಟೈಲ್‌, ದಿ ವಾಲ್‌ ಸ್ಟೀಟ್‌ ಜರ್ನಲ್‌ ಮೊದಲಾದ 300 ಕ್ಕೂ ಹೆಚ್ಚು ನಿಯತಕಾಲಿಕೆ, ಪತ್ರಿಕೆಗಳಿವೆ. ಇದಕ್ಕೆ ತಿಂಗಳಿಗೆ 9.9 ಡಾಲರ್‌ (ಅಂದಾಜು 700 ರೂಪಾಯಿ) ಹಣ ನಿಗದಿ ಪಡಿಸಿದೆ. ಆದರೆ ಇದರಿಂದ ವಾಷಿಂಗ್ಟನ್‌ ಪೋಸ್ಟ್‌ ಮತ್ತು ನ್ಯೂಯಾರ್ಕ್‌ ಟೈಮ್ಸ್‌ ದೂರ ಉಳಿದಿವೆ.

ಇದರ ಜತೆಗೆ ‘ಆಪಲ್‌ ಕಾರ್ಡ್‌’ ಎಂಬ ಹೊಸ ಕ್ರೆಡಿಟ್‌ ಕಾರ್ಡ್‌ನ್ನು ಸಹ ಕಂಪನಿ ಪರಿಚಯಿಸಿದೆ.

ಸೇವೆಯತ್ತ ಲಾಭದ ಚಿತ್ತ:

ಸದ್ಯ ಆಪಲ್‌ನ ಐಟ್ಯೂನ್ಸ್‌ಗೆ 5.6 ಕೋಟಿ ಗ್ರಾಹಕರಿದ್ದಾರೆ. ಇದರ ಜತೆಗೆ ಮಾಸಿಕ ಚಂದಾ ನೀಡಿ ಹೆಚ್ಚಿನ ಸಂಗ್ರಹ ಸಾಮರ್ಥ್ಯವನ್ನೂ ತನ್ನ ಗ್ರಾಹಕರಿಗೆ ನೀಡುತ್ತದೆ. 2018ರ ಕೊನೆಯ ತ್ರೈಮಾಸಿಕದಲ್ಲಿ ಈ ರೀತಿಯ ಸೇವೆಗಳ ಮೂಲಕವೇ ಕಂಪನಿ ಸುಮಾರು 75 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಿತ್ತು. ಇದೇ ಅವಧಿಯಲ್ಲಿ ಕಂಪನಿಗೆ ಹಾರ್ಡ್‌ವೇರ್‌ ಮಾರಾಟದಿಂದ ಬಂದ ಹಣ ಸರಿ ಸುಮಾರು 5 ಲಕ್ಷ ಕೋಟಿ ರೂಪಾಯಿ.

ಸದ್ಯ ಹಾರ್ಡ್‌ವೇರ್‌ ಮಾರಾಟದಿಂದ ಸೇವಾ ವಲಯದತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಆಪಲ್‌ ವಿಡಿಯೋ ಮಾತ್ರವಲ್ಲದೆ ಸುದ್ದಿ, ನಿಯತಕಾಲಿಕೆಗಳು, ವಿಡಿಯೋ ಗೇಮ್‌ಗಳಲ್ಲೂ ನೆಟ್‌ಫ್ಲಿಕ್ಸ್‌ ಮಾದರಿಗಳನ್ನು ಹುಟ್ಟುಹಾಕಲು ಮುಂದಾಗಿದೆ. ಆಪಲ್‌ ಇತಿಹಾಸದಲ್ಲಿ ನಡೆದ ಪ್ರಮುಖ ಬೆಳವಣಿಗೆ ಇದಾಗಿದೆ.