samachara
www.samachara.com
ಟಿವಿಗಳಿಗೆ ತಾಕಲಾಟ; ಮನರಂಜನೆ ಕ್ಷೇತ್ರದಲ್ಲಿ ‘ನೆಟ್‌ಫ್ಲಿಕ್ಸ್’ ನಾಗಾಲೋಟ!
ವೆಬ್

ಟಿವಿಗಳಿಗೆ ತಾಕಲಾಟ; ಮನರಂಜನೆ ಕ್ಷೇತ್ರದಲ್ಲಿ ‘ನೆಟ್‌ಫ್ಲಿಕ್ಸ್’ ನಾಗಾಲೋಟ!

ಅಮೆರಿಕಾದಲ್ಲಿಂದು ಎಲ್ಲಾ ದೃಶ್ಯ ಮಾಧ್ಯಮಗಳನ್ನು ಮೀರಿ ನೆಟ್‌ಫ್ಲಿಕ್ಸ್ ಬೆಳೆದು ನಿಂತಿದೆ. ಅಲ್ಲಿ ಶೇ. 27. 2 ರಷ್ಟು ಜನ ತಮ್ಮ ಟಿವಿಗಳಿಗೆ ಅವಳವಡಿಸಿಕೊಂಡಿದ್ದ ಕೇಬಲ್ ಕಿತ್ತು ಹಾಕಿದ್ದಾರೆ. ಮನರಂಜನೆ ಕ್ಷೇತ್ರದ ಈ ಹೊಸ ಬೆಳವಣಿಗೆ ಸುತ್ತಾ...

ಭಾರತದಲ್ಲಿ ನಟ ನವಾಜುದ್ದೀನ್ ಸಿದ್ಧಿಕಿ ನಟನೆಯ ‘ಸೇಕ್ರೆಡ್ ಗೇಮ್ಸ್’ ಧಾರಾವಾಹಿ ಒಂದು ಸಣ್ಣ ಚರ್ಚೆಯನ್ನು ಹುಟ್ಟು ಹಾಕಿದೆ. ವಿಶೇಷವೆಂದರೆ ಇದು ಯಾವುದೇ ಸಾಂಪ್ರದಾಯಿಕ ಟಿವಿ ಮಾಧ್ಯಮದಲ್ಲೂ ಬಿಡುಗಡೆಯಾಗಿಲ್ಲ. ಬದಲಾಗಿ ಇದನ್ನು ನೇರವಾಗಿ ಜನರ ಮುಂದಿಟ್ಟಿದ್ದು ‘ನೆಟ್‌ಫ್ಲಿಕ್ಸ್’.

ಇದೇ ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ದಿನಗಳ ಹಿಂದೆ ಅನುರಾಗ್ ಕಶ್ಯಪ್, ಝೋಯಾ ಅಖ್ತರ್, ದಿಬಾಕರ್ ಬ್ಯಾನರ್ಜಿ, ಕರಣ್ ಜೋಹರ್‌ರಂಥ ಘಟಾನುಘಟಿ ನಿರ್ದೇಶಕರನ್ನು ಒಳಗೊಂಡಿದ್ದ ‘ಲಸ್ಟ್ ಸ್ಟೋರೀಸ್’ ಎಂಬ ಸಿನಿಮಾ ಬಿಡುಗಡೆಯಾಗಿತ್ತು.

ಹೀಗೆ ಆನ್‌ಲೈನ್‌ ಮೂಲಕವೇ ಸಿನಿಮಾ, ಧಾರಾವಾಹಿಗಳನ್ನು ನೇರವಾಗಿ ಜನರ ಮುಂದಿಡುವ ಮೂಲಕ ಸಾಂಪ್ರದಾಯಿಕ ಟಿವಿಗಳಿಗೆ ಪರ್ಯಾಯ ಮಾದರಿಯನ್ನು ಪರಿಚಯಿಸಿದೆ ನೆಟ್‌ಫ್ಲಿಕ್ಸ್.

ನೆಟ್‌ಫ್ಲಿಕ್ಸ್ ಒಂದು ಕಾಲದಲ್ಲಿ ಅಮೆರಿಕಾದಲ್ಲಿ ಡಿವಿಡಿಗಳನ್ನು ಬಾಡಿಗೆಗೆ ನೀಡುವ ಉದ್ಯಮ ಆರಂಭಿಸಿತ್ತು. 2012ನೇ ಇಸವಿಯ ಹೊತ್ತಿಗೆ ಇದೇ ಕಂಪನಿ ನೇರವಾಗಿ ಧಾರಾವಾಹಿ, ಸಿನಿಮಾಗಳನ್ನು ನಿರ್ಮಿಸಿ ಮನೆ ಮನೆಗೆ ತಲುಪಿಸುವ ಹೊಸ ಮನರಂಜನೆಯ ಮಾರುಕಟ್ಟೆಯನ್ನು ಕಂಡುಕೊಂಡಿತು. ಇದು ಅಮೆರಿಕಾದ ಮಂದಿಗೆ ಟಿವಿ ವಾಹಿನಿಗಳ ಸಿದ್ಧ ಮಾದರಿಗಿಂತ ಆಕರ್ಷಕವಾಗಿ ಕಂಡಿತು. ಪರಿಣಾಮ ಇವತ್ತು ಕಣ್ಣ ಮುಂದಿದೆ.

ಅಮೆರಿಕಾದಲ್ಲಿಂದು ಎಲ್ಲಾ ಮಾಧ್ಯಮಗಳನ್ನು ಮೀರಿ ನೆಟ್‌ಫ್ಲಿಕ್ಸ್ ಬೆಳೆದು ನಿಂತಿದೆ. ವಾಲ್‌ಸ್ಟ್ರೀಟ್‌ನ ಅಧ್ಯಯನ ಸಂಸ್ಥೆಯೊಂದಾದ ‘ಕೋವನ್’ ಪ್ರಕಾರ ಇವತ್ತಿಗೆ ಅಲ್ಲಿ ಶೇಕಡಾ 27.2 ರಷ್ಟು ಜನರು ತಮ್ಮ ಟಿವಿಗಳಿಂದ ಕೇಬಲ್ ಕಿತ್ತು ಅಂತರ್ಜಾಲ ಸಂಪರ್ಕ ಕಲ್ಪಿಸಿ ನೆಟ್‌ಫ್ಲಿಕ್ಸ್‌ ಚಾನಲ್ ನೋಡುತ್ತಿದ್ದಾರೆ. ಇಂದು ಅಮೆರಿಕಾವಷ್ಟೇ ಅಲ್ಲ ಸಾವಿರಾರು ಸಿನಿಮಾ, ಧಾರಾವಾಹಿಗಳು ನೆಟ್‌ಫ್ಲಿಕ್ಸ್ ಮೂಲಕ 190 ದೇಶದ ಜನರ ಮನೆ ತಲುಪುತ್ತಿವೆ.

ಟಿವಿಗಳ ಚಹರೆಯನ್ನೇ ಬದಲಿಸಿದ ಅಂತರ್ಜಾಲದ ವಿಡಿಯೋ ಸೇವೆ. 
ಟಿವಿಗಳ ಚಹರೆಯನ್ನೇ ಬದಲಿಸಿದ ಅಂತರ್ಜಾಲದ ವಿಡಿಯೋ ಸೇವೆ. 

ಹೀಗೆ ಮೂಲ ಮನರಂಜನೆಯ ಸರಕನ್ನು ನೇರವಾಗಿ ಜನರ ಮುಂದಿಡುವ ಮಾದರಿಯಲ್ಲಿ ಬೆಳೆದು ಬಂದ ನೆಟ್‌ಫ್ಲಿಕ್ಸ್‌ ಈ ವರ್ಷ ಇವುಗಳ ಮೇಲೆ ಹೂಡಿಕೆ ಮಾಡಲಿರುವ ಹಣ ಬರೋಬ್ಬರಿ 8 ಬಿಲಿಯನ್ ಅಮೆರಿಕನ್ ಡಾಲರ್. ಅಂದರೆ ಸುಮಾರು 55,000 ಕೋಟಿ ರೂಪಾಯಿ. ಸ್ವಲ್ಪ ತಿಂಗಳಿಗೂ ಮುಂಚೆ ಹಾಲಿವುಡ್‌ಗೆ ಮಾತ್ರ ಸೀಮಿತವಾಗಿದ್ದ ನೆಟ್‌ಫ್ಲಿಕ್ಸ್‌ ತನ್ನ ಮಾರುಕಟ್ಟೆಯನ್ನು ಇಂದು ಬಾಲಿವುಡ್ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ವಿಸ್ತರಣೆ ಮಾಡುತ್ತಿದೆ.

ಮನರಂಜನೆ ಕ್ಷೇತ್ರದ ರೂಪಾಂತರ:

ಜಾಗತಿಕವಾಗಿ ಮುದ್ರಣ ಮಾಧ್ಯಮ ತನ್ನ ಪತ್ರಿಕೆಗಳನ್ನು ಆನ್‌ಲೈನ್ ಪುಟಗಳಿಗೆ (ಇ-ಪೇಪರ್) ಬದಲಾಯಿಸಿದಂತೆ ಇದೀಗ ಧಾರಾವಾಹಿ, ಸಿನಿಮಾಗಳು ಆನ್‌ಲೈನ್‌ಗೆ ರೂಪಾಂತರಗೊಳ್ಳುತ್ತಿವೆ. ಟಿವಿ ವಾಹಿನಿಗಳನ್ನು ನಡೆಸುವವರು ಕೂಡ ತಮ್ಮ ಧಾರಾವಾಹಿ, ಸಿನಿಮಾಗಳನ್ನು ಅಂತರ್ಜಾಲದಲ್ಲಿ ನೀಡಲು ಮುಂದಾಗಿದ್ದಾರೆ. ಪರಿಣಾಮ ಸ್ಟಾರ್ ಸಂಸ್ಥೆಯ ಹಾಟ್‌ಸ್ಟಾರ್‌, ಜೀ ಸಂಸ್ಥೆಯ ಓಝೀ, ವಯಾಕಾಮ್ 18 ಕಡೆಯಿಂದ ವೂಟ್ ನಂತಹ ಜಾಲತಾಣಗಳು ಹುಟ್ಟಿಕೊಂಡಿವೆ. ಅವು ಟಿವಿಗಳಲ್ಲಿ ಬರುವ ಧಾರವಾಹಿ, ರಿಯಾಲಿಟಿ ಶೋಗಳನ್ನು ಅಂತರ್ಜಾಲದಲ್ಲಿ ಹರಿಯ ಬಿಟ್ಟಿವೆ. ಅಷ್ಟೆ ಅಲ್ಲ, ಈ ಜಾಲತಾಣಗಳ ಜನಪ್ರಿಯತೆ ಹೆಚ್ಚಿಸಲು ಸದರಿ ಆಪ್‌ಗಳಿಗಾಗಿಯೇ ವಿಶೇಷ ಸರಣಿಗಳನ್ನು ನಿರ್ಮಿಸುತ್ತಿವೆ.

ಇವುಗಳ ಕಥೆ ಹೀಗಾದರೆ, ನೆಟ್‌ಫ್ಲಿಕ್ಸ್‌ನಿಂದ ಪ್ರೇರಣೆ ಪಡೆದು ಹಲವು ಬೃಹತ್ ಸಂಸ್ಥೆಗಳು ವಿಡಿಯೋ ನಿರ್ಮಾಣ ಕ್ಷೇತ್ರಕ್ಕೆ ದಾಗುಂಡಿ ಇಡುತ್ತಿವೆ.

ಅವುಗಳಲ್ಲಿ ಪ್ರಮುಖವಾದುದು ಆಪಲ್, ವಾಲ್ಟ್ ಡಿಸ್ನಿ ಮತ್ತು ಅಮೆಝಾನ್. ಅಮೆಝಾನ್ ತನ್ನ ‘ಪ್ರೈಮ್ ವಿಡಿಯೋ’ ಹೆಸರಿನಲ್ಲಿ ಒರಿಜಿನಲ್ ಕಂಟೆಂಟ್ ಮೇಲೆ ಹಣ ಹೂಡುತ್ತಿದೆ. ವಿಡಿಯೋ ನಿರ್ಮಾಣ ಕ್ಷೇತ್ರದ ನಿಪುಣರು ಮತ್ತು ಅತ್ಯುತ್ತಮ ವಿಡಿಯೋ ಸರಕುಗಳ ಮೇಲೆ ಅದು ಹಣ ಚೆಲ್ಲಲಿದೆ.

ಆಪಲ್ ಕೂಡ ಇದೇ ಕ್ಷೇತ್ರಕ್ಕೆ ಕಾಲಿಡುತ್ತಿದ್ದು ಅಮೆರಿಕಾ ಟಿವಿ ಮಾಧ್ಯಮ ಲೋಕದ ಸೂಪರ್ ಸ್ಟಾರ್ ಓಪ್ರಾ ವಿನ್‌ಫ್ರೇಯನ್ನು ಬುಟ್ಟಿಗೆ ಹಾಕಿಕೊಂಡಿದೆ. ಟಿವಿ ಪರದೆಯನ್ನು ಹಲವು ವರ್ಷಗಳ ಕಾಲ ಆಳಿದ ಆಳಿದ ಓಪ್ರಾ ತಮ್ಮ ಪೋಷಾಕು ಬದಲಿಸಿ ಆನ್‌ಲೈನ್‌ಗೆ ಕಾಲಿಡಲಿದ್ದಾರೆ. ಆಪಲ್ ಮತ್ತು ಓಪ್ರಾ ನಡುವೆ ಹಲವು ವರ್ಷಗಳ ಅವಧಿಗೆ ಬಹುಕೋಟಿ ಒಪ್ಪಂದ ನಡೆದಿದೆ.

ಆರಂಭದಲ್ಲಿ ಆಪಲ್ ಒಂದು ಬಿಲಿಯನ್ ಡಾಲರ್‌ಗಳನ್ನು (6,900 ಕೋಟಿ ರೂಪಾಯಿ)ಗಳನ್ನು ನೆಟ್‌ಫ್ಲಿಕ್ಸ್ ಮಾದರಿಯ ವಿಡಿಯೋ ನಿರ್ಮಾಣಕ್ಕೆ ಹೂಡಿಕೆ ಮಾಡಲಿದೆ. ಅತ್ತ ವಾಲ್ಟ್ ಡಿಸ್ನಿ ಕಂಪನಿ ಕೂಡ ತನ್ನ ಜನಪ್ರಿಯ ಹಳೆಯ ವಿಡಿಯೋಗಳನ್ನು ಆನ್‌ಲೈನ್‌ಗೆ ತರುವ, ಅನ್‌ಲೈನ್‌ಗಾಗಿಯೇ ಹೊಸ ವಿಡಿಯೋಗಳನ್ನು ತಯಾರಿಸುವ ಯೋಜನೆಯಲ್ಲಿ ತೊಡಗಿಸಿಕೊಂಡಿದೆ.

ಒಟ್ಟಾರೆ ಈ ವರ್ಷ 15 ಬಿಲಿಯನ್ ಡಾಲರ್ ಹೂಡಿಕೆಯನ್ನು ಈ ಕ್ಷೇತ್ರ ಕಾಣಲಿದೆ. ಈ ರೀತಿಯ ವೆಬ್‌ಸೈಟ್‌ಗಳಿಗೆ ಸದ್ಯ 6.8 ಕೋಟಿ ಚಂದದಾರರಿದ್ದಾರೆ. ಈ ಸಂಖ್ಯೆ ಮುಂದಿನ 2 ವರ್ಷಗಳಲ್ಲಿ 10 ಕೋಟಿ ತಲುಪಲಿದೆ ಎನ್ನುವುದು ಜಿಬಿಎಚ್ ಇನ್‌ಸೈಟ್ಸ್ನ ಚೀಫ್ ಸ್ಟ್ರಾಟೆಜಿಸ್ಟ್ ಡೇನಿಯಲ್ ಐವ್ಸ್ ಅಂದಾಜು.

ಹಾಗೆ ನೋಡಿದರೆ ಯೂಟ್ಯೂಬ್‌ನಲ್ಲಿ ಜಾಹೀರಾತುಗಳನ್ನು ಆಧರಿಸಿ ಅತ್ಯುತ್ತಮ ವಿಡಿಯೋಗಳನ್ನು ನಿರ್ಮಿಸುವ ಪರಿಪಾಠ ಬೆಳೆದು ಬಂದಿತ್ತು. ಆದರೆ ಇಲ್ಲಿ ನಕಲಿಗಳ, ಜನರನ್ನು ಹಾದಿ ತಪ್ಪಿಸಿ ದುಡ್ಡು ಸಂಪಾದಿಸುವವರ ಹಾವಳಿ ಜಾಸ್ತಿಯಾದ ನಂತರ ಒರಿಜಿನಲ್ ಕಂಟೆಂಟ್ ಬೇಡಿಕೆಯಲ್ಲಿ ಕುಸಿತ ಕಂಡು ಬಂದಿತ್ತು.

ಇವೆಲ್ಲದರ ಒಟ್ಟು ಪರಿಣಾಮ ಎಂಬಂತೆ ಅತ್ತ ಯೂಟ್ಯೂಬ್ ಇತ್ತ ಸಾಂಪ್ರದಾಯಿಕ ಟಿವಿಗಳಿಗೆ ಪರ್ಯಾಯವಾಗಿ ಆನ್‌ಲೈನ್‌ನಲ್ಲಿ ನೆಟ್‌ಫ್ಲಿಕ್ಸ್ ಮಾದರಿಯ ಹೊಸ ಮಾರುಕಟ್ಟೆಯೊಂದು ಸೃಷ್ಟಿಯಾಗಿದೆ. ಈ ಮಾರುಕಟ್ಟೆ ಬೆಳೆಯುತ್ತಿರುವ ವೇಗ, ಕಾಣುತ್ತಿರುವ ಹೂಡಿಕೆಗಳನ್ನು ನೋಡಿದರೆ ಮುಂದಿನ ಎರಡು ಮೂರು ವರ್ಷಗಳಲ್ಲಿ ಇದು ಟಿವಿ ವಾಹಿನಿಗಳನ್ನೇ ಪಕ್ಕಕ್ಕೆ ಎತ್ತಿಟ್ಟರೂ ಅಚ್ಚರಿಯಿಲ್ಲ.