samachara
www.samachara.com
19 ದಿನಗಳ ಅಂತರದಲ್ಲಿ ಎರಡೆರಡು ಬ್ಲ್ಯಾಕ್‌ಮೇಲ್‌; ಪದ್ಮಶ್ರೀ ಡಾಕ್ಟರ್‌ ಸೆಕ್ಸ್‌ ವಿಡಿಯೋ ಮತ್ತು ದೂರಿನ ಸಾರಾಂಶ
ಟಿವಿ

19 ದಿನಗಳ ಅಂತರದಲ್ಲಿ ಎರಡೆರಡು ಬ್ಲ್ಯಾಕ್‌ಮೇಲ್‌; ಪದ್ಮಶ್ರೀ ಡಾಕ್ಟರ್‌ ಸೆಕ್ಸ್‌ ವಿಡಿಯೋ ಮತ್ತು ದೂರಿನ ಸಾರಾಂಶ

ಪತ್ರಕರ್ತರು ಹಣದ ಬೇಡಿಕೆ ಇಡುವ, ವೈದ್ಯರಿಂದ ಹಣ ಪಡೆಯುವ ಹಾಗೂ ನಡೆಸಿದ ಮಾತುಕತೆಗಳ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿವೆ. ಜತೆಗೆ, ದಾಖಲಾಗಿರುವ FIR ಮಾಧ್ಯಮ ಸಂಸ್ಥೆಗಳ ಹೆಸರಿನಲ್ಲಿ ಸುಲಿಗೆಗೆ ಇಳಿದ ಎಳೆಯನ್ನು ತೆರೆದಿಟ್ಟಿದೆ.

Team Samachara

ಪದ್ಮಶ್ರೀ ವಿಜೇತ ಬೆಂಗಳೂರಿನ ವೈದ್ಯರ ಬ್ಲ್ಯಾಕ್‌ಮೇಲ್ ಪ್ರಕರಣದ ತನಿಖೆ ಖಾಸಗಿ ಸುದ್ದಿ ವಾಹಿನಿಗಳ ಅಂಗಳಕ್ಕೆ ಬಂದು ನಿಲ್ಲುವ ಸಾಧ್ಯತೆಗಳನ್ನು ಕಾಣಿಸುತ್ತಿವೆ.

ಪತ್ರಕರ್ತರು ಹಣದ ಬೇಡಿಕೆ ಇಡುವ, ವೈದ್ಯರಿಂದ ಹಣ ಪಡೆಯುವ ಹಾಗೂ ನಡೆಸಿದ ಮಾತುಕತೆಗಳ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿವೆ. ಜತೆಗೆ, ದಾಖಲಾಗಿರುವ ಪ್ರಥಮ ವರ್ತಮಾನ ವರದಿ, ರಾಜ್ಯದ ಮಾಧ್ಯಮ ಸಂಸ್ಥೆಗಳ ಹೆಸರಿನಲ್ಲಿ ಸುಲಿಗೆಗೆ ಇಳಿದ ಎಳೆಯನ್ನು ತೆರೆದಿಟ್ಟಿದೆ.

ಬುಧವಾರ ದಾಖಲಾದ ಪ್ರಕರಣದಲ್ಲಿ ಮಂಗಳವಾರ 'ಪಬ್ಲಿಕ್‌ ಟಿವಿ' ಇನ್‌ಪುಟ್ ವಿಭಾಗದ ಮುಖ್ಯಸ್ಥ ಹೇಮಂತ ಕಶ್ಯಪ್‌ ಬಂಧನವಾಗಿತ್ತು. ಆರೋಪಿಯನ್ನು ಗುರುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುವ ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ನಡುವೆ, ವೈದ್ಯರಿಗೆ ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದ ಸಮಯ ಟಿವಿ ಮಂಜುನಾಥ ಬೂಕನಕೆರೆ ಹಾಗೂ ಕ್ಯಾಮರಾ ವಿಭಾಗದ ಮುಖ್ಯಸ್ಥರಾಗಿರುವ ಮುರಳಿ ಎಂಬುವವರ ಬಗ್ಗೆಯೂ ದಾಖಲೆಗಳು ಪೊಲೀಸರಿಗೆ ಲಭ್ಯವಾಗಿವೆ. ಇವರುಗಳ ಬಂಧನವನ್ನು ಎದುರು ನೋಡಲಾಗುತ್ತಿದೆ.

ಸುಲಿಗೆ ಯಾಕೆ, ಹೇಗೆ?:

ಮಾರ್ಚ್‌ 19ರಂದು ಸಂಜೆ 4 ಗಂಟೆ ಸುಮಾರಿಗೆ ಸದಾಶಿವನಗರದ ಪೊಲೀಸ್‌ ಠಾಣೆಗೆ ಬಂದ ವೈದ್ಯ ಡಾ. ಬಿ. ರಮಣ ರಾವ್‌, ನಿರ್ದಿಷ್ಟವಾಗಿ ಎರಡು ಖಾಸಗಿ ಸುದ್ದಿವಾಹಿನಿಗಳ ಹೆಸರು ಹೇಳಿಕೊಂಡ ಮೂವರಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗುತ್ತಿರುವುದಾಗಿ ದೂರು ನೀಡಿದ್ದಾರೆ.

'ಸುಮಾರು 19 ದಿನಗಳ ಹಿಂದೆ ಟಿವಿ 9 ಹಿರಿಯ ವರದಿಗಾರ ಎಂದು ಹೇಳಿಕೊಂಡ ಹೇಮಂತ್‌ ತನ್ನ ನಂಬರ್‌ (ಇದೂ ಕೂಡ ನಮೂದಾಗಿದೆ) ನಿಂದ ಸಂಜೆ 4 ಗಂಟೆಗೆ ವಾಟ್ಸಾಪ್‌ ಕರೆ ಮಾಡಿ ತುರ್ತಾಗಿ ಮಾತನಾಡಬೇಕು ಎಂದು ತಿಳಿಸಿದ. ನಂತರ ಆತನನ್ನು ಕ್ಲಿನಿಕ್‌ಗೆ ಕರೆಸಿಕೊಂಡು ಮಾತನಾಡಿದೆ. ನನ್ನ ಬಗ್ಗೆ ಕೆಟ್ಟ ವಿಡಿಯೋ, ಸೆಕ್ಸ್‌ ವಿಡಿಯೋ ಇದೆ. ಇದನ್ನು ಟಿವಿಯಲ್ಲಿ ಪ್ರಸಾರ ಮಾಡಿದರೆ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತದೆ. ಇದು ಒಟ್ಟು ಐದು ಜನ ಟಿವಿ 9 ವರದಿಗಾರರ ಬಳಿ ಇದೆ. ಅವರೆಲ್ಲರಿಗೂ ತಲಾ 10 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಮುಂದಿಟ್ಟ. ಇದಾದ ನಂತರ 2-3 ಬಾರಿ ಕ್ಲಿನಿಕ್‌ಗೆ ಬಂದು ಮಾತುಕತೆ ನಡೆಸಿದರು. ಕೊನೆಗೆ ನನ್ನ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಹೆದರಿ ತಲಾ 1 ಲಕ್ಷದಂತೆ ಒಟ್ಟು 5 ಲಕ್ಷ ರೂಪಾಯಿಗಳನ್ನು ಹಂತಹಂತವಾಗಿ ಕೊಟ್ಟು ಕಳುಹಿಸಿದೆ' ಎಂದು ಡಾ. ರಮಣ ರಾವ್‌ ದೂರಿನಲ್ಲಿ ವಿವರಿಸಿದ್ದಾರೆ.

"ಇವತ್ತು ಮುಖಗಳನ್ನು ಮಾರ್ಫಿಂಗ್ ಮಾಡಿ ವಿಡಿಯೋ ತಯಾರಿಸುತ್ತಾರೆ. ಬಹುಶಃ ನಂದೂ ಕೂಡ ಇಂತಹದ್ದೇ ತಂತ್ರಜ್ಞಾನ ಬಳಸಿ ತಯಾರಿಸಿರಬಹುದು ಎಂದು ಭಯದಿಂದ ಹಣ ನೀಡಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಹಣ ನೀಡಿದ್ದಕ್ಕೆ ಸಾಕ್ಷಿ ಲಭ್ಯವಾಗಿದೆ. ಹಾಗಂತ ವೈದ್ಯರು ಹೇಳುವುದನ್ನು ಪೂರ್ತಿ ನಂಬುವುದೂ ಕಷ್ಟ ಇದೆ,'' ಎನ್ನುತ್ತವೆ ಪೊಲೀಸ್‌ ಮೂಲಗಳು.

ವಿಶೇಷ ಅಂದರೆ, ಮೊದಲು ಬ್ಲ್ಯಾಕ್‌ಮೇಲ್‌ಗೆ ಒಳಗಾದ ವೈದ್ಯರು ಹಣ ನೀಡಿ ಸುಮ್ಮನಾಗುವ ಮನಸ್ಸಿನಲ್ಲಿ ಇದ್ದಂತಿತ್ತು. ಆದರೆ. ಮಾ. 19ರಂದು ಕ್ಲಿನಿಕ್‌ಗೆ ಸಮಯ ಟಿವಿಯ ಹೆಸರು ಹೇಳಿಕೊಂಡು, ಇದೇ ಸೆಕ್ಸ್‌ ವಿಡಿಯೋ ವಿಚಾರ ಮುಂದಿಟ್ಟುಕೊಂಡು ಪತ್ರಕರ್ತ ಮಂಜುನಾಥ್ ಬೂಕನಕರೆ ಮತ್ತು ಕ್ಯಾಮೆರಾ ಮುಖ್ಯಸ್ಥ ಮುರಳಿ ವೈದ್ಯರನ್ನು ಭೇಟಿಯಾಗಿದ್ದಾರೆ. ಈ ಸಮಯದಲ್ಲಿ 'ಸೆಟಲ್‌ಮೆಂಟ್' ಮಾಡುವುದಾಗಿ ಹೇಳಿದಾಗ ಹೇಮಂತ್ ಕೂಡ ಬರುವುದಾಗಿ ಕ್ಲಿನಿಕ್‌ಗೆ ಸಂಜೆ 6.30ರ ಸುಮಾರಿಗೆ ಬಂದಿದ್ದಾನೆ. ಅಷ್ಟೊತ್ತಿಗೆ ಮಫ್ತಿಯಲ್ಲಿ ಬಂದಿದ್ದ ಪೊಲೀಸರು ಆತನನ್ನು ಬಂಧಿಸಿದರು' ಎಂದು ದೂರಿನ ಸಾರಾಂಶದಲ್ಲಿ ತಿಳಿಸಲಾಗಿದೆ.

ಡಾ. ಬಿ. ರಮಣ ರಾವ್‌ ತಮ್ಮ ಮೇಲೆ ನಡೆದ ಬ್ಲ್ಯಾಕ್‌ಮೇಲ್‌ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನ ಸಾರಾಂಶ.
ಡಾ. ಬಿ. ರಮಣ ರಾವ್‌ ತಮ್ಮ ಮೇಲೆ ನಡೆದ ಬ್ಲ್ಯಾಕ್‌ಮೇಲ್‌ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನ ಸಾರಾಂಶ.

ಗಮನ ಸೆಳೆಯುವ ಅಂಶ ಏನೆಂದರೆ, ವೈದ್ಯರನ್ನು ಭೇಟಿಯಾಗಲು ಹೋದ ಮಂಜುನಾಥ್ ಹಾಗೂ ಮುರಳಿ ಸಂಸ್ಥೆಯ ಕ್ಯಾಮೆರಾ ಹಾಗೂ ಲೋಗೊವನ್ನು ಜತೆಗೆ ಕೊಂಡೊಯ್ದಿದ್ದಾರೆ. ಮೊದಲು ಅವರು ಅಶ್ಲೀಲ ವಿಡಿಯೋ ವಿಚಾರದಲ್ಲಿ ವೈದ್ಯರ ಪ್ರತಿಕ್ರಿಯೆಯನ್ನು ಕೇಳಿದ್ದಾರೆ. 'ಇದೊಂದು ರೀತಿ ಬೈಟ್ ಕೊಡಿ ಇಲ್ಲಾ ದುಡ್ಡು ಕೊಡಿ' ಅನ್ನುವ ಬೇಡಿಕೆ ಮುಂದಿಡುವ ರೀತಿ ಎನ್ನುತ್ತಾರೆ ಪೊಲೀಸರು.

ಯಾವುದೇ ಸುದ್ದಿ ವಾಹಿನಿಯಲ್ಲೂ ಕ್ಯಾಮೆರಾ ಹಾಗೂ ಲೋಗೊಗಳು 'ಶೂಟ್‌ ಪ್ಲಾನ್‌'ಗೆ ಸಹಿ ಮಾಡದೆ ಹೊರಬೀಳಲು ಸಾಧ್ಯವೇ ಇಲ್ಲ. ಸಹಜವಾಗಿಯೇ ಇದು ಬ್ಲ್ಯಾಕ್‌ಮೇಲ್ ಪ್ರಕರಣದ ಬೇರುಗಳು ಇನ್ನಷ್ಟು ಆಳಕ್ಕೆ ಇಳಿಯುವ ಸಾಧ್ಯತೆಯನ್ನು ಮುಂದಿಡುತ್ತದೆ. ಹೇಮಂತ್ ಕರೆಸಿಕೊಂಡವರು ಮಂಜುನಾಥ್‌ ಹಾಗೂ ಮುರಳಿಯವರನ್ನು ಯಾಕೆ ಬಿಟ್ಟು ಕಳುಹಿಸಿದರು ಎಂಬ ಪ್ರಶ್ನೆಯೂ ಇದೇ ಸಮಯದಲ್ಲಿ ಹುಟ್ಟಿಕೊಳ್ಳುತ್ತದೆ.

ಸಾಂಸ್ಥಿಕಗೊಂಡ ಭ್ರಷ್ಟಾಚಾರ:

ಭ್ರಷ್ಟಾಚಾರ ಎಂಬುದು ಇವತ್ತು ಎಲ್ಲಾ ಸರಕಾರರಿಂದ ಹಿಡಿದು ಖಾಸಗಿವರೆಗೆ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ಹೀಗಿರುವಾಗ ಮಾಧ್ಯಮ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿನ ಭ್ರಷ್ಟಾಚಾರದ ಸ್ವರೂಪ ನಾನಾ ಬಗೆಯಲ್ಲಿದ್ದು, ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ. ಈಗ ಹೊರಬಿದ್ದಿರುವ ಪ್ರಕರಣ ಸುದ್ದಿ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ಗೆ ಸಂಬಂಧಪಟ್ಟಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹೇಮಂತ್ ಕಶ್ಯಪ್ ಚನ್ನಪಟ್ಟಣದಲ್ಲಿ ಅರೆಕಾಲಿಕ ವರದಿಗಾರನಾಗಿ ಮಾಧ್ಯಮ ಲೋಕಕ್ಕೆ ಕಾಲಿಟ್ಟ ಎನ್ನುತ್ತಾರೆ ಆತನನ್ನು ಹತ್ತಿರದಿಂದ ಬಲ್ಲವರು. ನಂತರ ಟಿವಿ 9, ಬೆಂಗಳೂರು ಮಿರರ್‌, ನ್ಯೂಸ್‌ 9 ಇದೀಗ ಪಬ್ಲಿಕ್‌ ಟಿವಿಯ ಉನ್ನತ ಹುದ್ದೆಯಲ್ಲಿ ವೃತ್ತಿ ಬದುಕು ಕಟ್ಟಿಕೊಂಡಿದ್ದ. "ಹೇಮಂತ್‌ಗೆ ಬರವಣಿಗೆ ತುಂಬಾ ಚೆನ್ನಾಗಿ ಇರಲಿಲ್ಲ. ಇಂಗ್ಲಿಷ್ ಕೂಡ ತುಂಬಾ ಚೆನ್ನಾಗಿ ಬರೆಯಲು ಗೊತ್ತಿರಲಿಲ್ಲ. ಆದರೆ ಆತ ತನ್ನ ನಡವಳಿಕೆಗಳಿಂದ ಅಧಿಕಾರಿಗಳ ಜತೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದ. ಅವರೇ ಆತನ ಅನೇಕ ಸ್ಕೂಪ್‌ ಸುದ್ದಿಗಳ ಮೂಲಗಳಾಗಿದ್ದರು,'' ಎಂದು ನೆನಪಿಸಿಕೊಳ್ಳುತ್ತಾರೆ ಹೇಮಂತ್ ಸಹೋದ್ಯೋಗಿಯೊಬ್ಬರು.

ಪದ್ಮ ಶ್ರೀ ವೈದ್ಯರ ಬ್ಲ್ಯಾಕ್‌ಮೇಲ್‌ ಪ್ರಕರಣದಲ್ಲಿ ಆರೋಪಿಗಳಾದ ಹೇಮಂತ್‌ ಕಶ್ಯಪ್‌, ಮಂಜುನಾಥ್ ಬೂಕನಕೆರೆ ಮತ್ತು ಕ್ಯಾಮರಾಮನ್‌ ಮುರಳಿ.
ಪದ್ಮ ಶ್ರೀ ವೈದ್ಯರ ಬ್ಲ್ಯಾಕ್‌ಮೇಲ್‌ ಪ್ರಕರಣದಲ್ಲಿ ಆರೋಪಿಗಳಾದ ಹೇಮಂತ್‌ ಕಶ್ಯಪ್‌, ಮಂಜುನಾಥ್ ಬೂಕನಕೆರೆ ಮತ್ತು ಕ್ಯಾಮರಾಮನ್‌ ಮುರಳಿ.

24*7 ಸುದ್ದಿ ವಾಹಿನಿಯೊಂದರಲ್ಲಿ ಇನ್‌ಪುಟ್‌ನಂತಹ ಹುದ್ದೆಯಲ್ಲಿದ್ದಾತ ಹೇಗೆ ಕಚೇರಿಯಲ್ಲಿಯೂ ತಿಳಿಸದೆ 2-3 ಬಾರಿ ವೈದ್ಯರನ್ನು ಭೇಟಿಯಾಗುತ್ತಾನೆ? ಈ ವಿಚಾರದಲ್ಲಿ ಆತನೇ ಎಲ್ಲಾ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ನಂಬುವುದು ಕಷ್ಟ. ಅಷ್ಟಕ್ಕೂ ವಿಡಿಯೋ ಇದ್ದರೆ ಅದು ಹೇಮಂತ್ ಕೈಗೆ ಸಿಕ್ಕಿದ್ದು ಹೇಗೆ, ಯಾವಾಗ ಎಂಬುದು ಮುಖ್ಯವಾಗುತ್ತದೆ ಎಂಬ ಸಹಜ ಪತ್ರಕರ್ತರ ಅನುಮಾನಗಳನ್ನು ಅವರು ಮುಂದಿಡುತ್ತಾರೆ.

ಇನ್ನು, ಪ್ರಕರಣದಲ್ಲಿ ಆರೋಪಿಯಾಗಿರುವ ಪತ್ರಕರ್ತ ಮಂಜುನಾಥ ಬೂಕನಕೆರೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿ. ಅವರ ಹುಟ್ಟೂರಿನಲ್ಲಿ ಶಾಲೆಯೊಂದಕ್ಕಾಗಿ ಕೆಲಸ ಮಾಡಿದ, ಹಲೋ ಮೈಸೂರು, ಆಂದೋಲನ ಪತ್ರಿಕೆಗಳಲ್ಲಿ ವೃತ್ತಿ ನಿರ್ವಹಿಸಿದ ಹಿನ್ನೆಲೆ ಇದೆ. "ನಮ್ಮ ಪಾಲಿಗೆ ಆತನನ್ನು ಬೂಮ ಎಂದು ಕರೆಯುತ್ತಿದ್ದೆವು. ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಇತ್ತು. ಹಣಕಾಸಿನ ಅಡಚಣೆಗಳಿದ್ದವು. ಅವೇ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿರಬಹುದು,'' ಎನ್ನುತ್ತಾರೆ ಮಂಜುನಾಥ್ ಬಲ್ಲವರು.

ಕ್ಲಿನಿಕ್‌ನಲ್ಲಿ ಬ್ಯುಸಿ:

ಪ್ರಕರಣದಲ್ಲಿ ದೂರುದಾರಾಗಿರುವ ವೈದ್ಯ ಡಾ. ರಮಣ ರಾವ್‌ ಆಂಧ್ರದವರು. ತಮ್ಮ ಯವ್ವನದ ದಿನಗಳಲ್ಲಿ ಆಂಧ್ರದ ಹಳ್ಳಿಗಳಲ್ಲಿ ಜನರಿಗೆ ವೈದ್ಯ ಸೇವೆ ನೀಡಿದ್ದವರು. ಅವರ ಈ ಸೇವಾ ಮನೋಭಾವವೇ ನಟ ಡಾ. ರಾಜ್‌ ಕುಟುಂಬದ ಗಮನ ಸೆಳೆಯಿತು. ನಂತರ ಅವರು ಬೆಂಗಳೂರಿಗೆ ಬಂದರು ಎನ್ನುತ್ತವೆ ಕೆಲವು ಮೂಲಗಳು. ಇವರ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ‘ಅವರು ಬೆಳಗ್ಗೆಯಿಂದಲೂ ಅರಮನೆ ನಗರದಲ್ಲಿರುವ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಅವರ ಕಚೇರಿ ಸಿಬ್ಬಂದಿಗಳು 'ಸಮಾಚಾರ'ಕ್ಕೆ ತಿಳಿಸಿದರು.

"ಘಟನೆ ನಡೆದಿದ್ದು ನಿಜ. ವೈದ್ಯರು ದೂರು ನೀಡಿ ಬಂದಿದ್ದಾರೆ. ಈಗ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸ ಮುಂದುವರಿಸಿದ್ದಾರೆ. ಬಿಡುವಾದ ನಂತರ ಅವರೇ ಸಂಪರ್ಕಿಸುತ್ತಾರೆ,'' ಎಂದ ಮಹಿಳಾ ಸಿಬ್ಬಂದಿಯೊಬ್ಬರು ದೂರುವಾಣಿ ಸಂಖ್ಯೆಯನ್ನೂ ಪಡೆದುಕೊಂಡರು. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆಗೆ ಅವರು ಲಭ್ಯವಾಗಿಲ್ಲ.

ಒಟ್ಟಾರೆ, ಮಾಧ್ಯಮ ಸಂಸ್ಥೆಗಳ ಭ್ರಷ್ಟಾಚಾರದ ವಿಚಾರವನ್ನು ಮುನ್ನೆಲೆಗೆ ತಂದ ಪ್ರಕರಣದಲ್ಲಿ ಗುರುವಾರ ಸಾಕ್ಷ್ಯಾಧಾರಗಳನ್ನು ಮುಂದಿಡುವ ಪ್ರಯತ್ನ ನಡೆದಿದೆ. 'ಪಬ್ಲಿಕ್ ಟಿವಿ' ಕಡೆಯಿಂದ ಪ್ರತಿಕ್ರಿಯೆ ಹೊರಬಿದ್ದಿದೆ. ಇನ್ನಿಬ್ಬರ ಬಂಧನಕ್ಕೆ ಎದುರು ನೋಡಲಾಗುತ್ತಿದೆ. ಆದರೆ ಸಾಂಸ್ಥಿಕಗೊಂಡಿರುವ ಭ್ರಷ್ಟಾಚಾರ, ಉದ್ಯೋಗ ಅಭದ್ರತೆಗಳು, ಸ್ವ ನಿಯಂತ್ರಣದ ಪಾಠಗಳ ಸುತ್ತ ಅಗತ್ಯವಾಗಿ ಬೇಕಿರುವ ಚರ್ಚೆ ಮತ್ತು ಪರಿಹಾರಗಳ ಕಡೆಗೆ ಮಾಧ್ಯಮ ಲೋಕ ಗಮನ ಹರಿಸುವ ಕೆಲಸ ಇನ್ನಷ್ಟೆ ಆರಂಭವಾಗಬೇಕಿದೆ.

Also read: ‘ಹಣ ಕೊಡಿ, ಇಲ್ಲ ಅಂದ್ರೆ ಆನ್‌ ಏರ್ ಆಗುತ್ತೆ’: ಕಂಬಿ ಹಿಂದೆ ‘ಪಬ್ಲಿಕ್ ಟಿವಿ’ ಪತ್ರಕರ್ತ