samachara
www.samachara.com
‘ಹಣ ಕೊಡಿ, ಇಲ್ಲ ಅಂದ್ರೆ ಆನ್‌ ಏರ್ ಆಗುತ್ತೆ’: ಕಂಬಿ ಹಿಂದೆ ‘ಪಬ್ಲಿಕ್ ಟಿವಿ’ ಪತ್ರಕರ್ತ
ಟಿವಿ

‘ಹಣ ಕೊಡಿ, ಇಲ್ಲ ಅಂದ್ರೆ ಆನ್‌ ಏರ್ ಆಗುತ್ತೆ’: ಕಂಬಿ ಹಿಂದೆ ‘ಪಬ್ಲಿಕ್ ಟಿವಿ’ ಪತ್ರಕರ್ತ

ಪತ್ರಕರ್ತ ಹೇಮಂತ್ ಕಶ್ಯಪ್ ಬಂಧನ ಪ್ರಕರಣ ಕೇವಲ ಬ್ಲ್ಯಾಕ್‌ಮೇಲ್, ಸುಲಿಗೆ ಮಾತ್ರವೇ ಅಲ್ಲ ಹಲವು ಆಯಾಮಗಳ ಮೇಲೆಯೂ ಬೆಳಕು ಚೆಲ್ಲುತ್ತಿದೆ.

Team Samachara

ಕನ್ನಡ ಸುದ್ದಿ ವಾಹಿನಿಗಳ ಪತ್ರಕರ್ತರ ಮೇಲಿನ ಕಳಂಕ ಅಷ್ಟು ಸುಲಭಕ್ಕೆ ತೊಳೆದು ಹೋಗುವ ಹಾಗೆ ಕಾಣಿಸುತ್ತಿಲ್ಲ.

ಗಮನಾರ್ಹ ಬೆಳೆವಣಿಗೆಯೊಂದರಲ್ಲಿ ಮಂಗಳವಾರ 'ಪಬ್ಲಿಕ್ ಟಿವಿ'ಯ ಇನ್‌ಪುಟ್ ವಿಭಾಗದ ಮುಖ್ಯಸ್ಥ ಹೇಮಂತ್ ಕಶ್ಯಪ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾದ ಸುಲಿಗೆ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಈ ಬಂಧನ ನಡೆದಿದ್ದು, ಪ್ರಕರಣದ ಇನ್ನೊಬ್ಬ ಆರೋಪಿ 'ಸಮಯ ಟಿವಿ'ಯ ಮಂಜೇಶ್ ಅಲಿಯಾಸ್ ಮಂಜುನಾಥ್ ಎಂಬವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಪರಾಧಗಳ ಬಗ್ಗೆ ವರದಿ ಬರೆಯುತ್ತಿದ್ದ ಪತ್ರಕರ್ತರೇ ಅಪರಾಧಿಗಳಾಗಿ ಪರಪ್ಪನ ಅಗ್ರಹಾರದ ಹೊಸ್ತಿಲಿನಲ್ಲಿ ಬಂದು ನಿಂತಿದ್ದಾರೆ.

ಏನಿದು ಪ್ರಕರಣ?:

ಬೆಂಗಳೂರಿನ ಅರಮನೆ ನಗರದಲ್ಲಿ ಕ್ಲಿನಿಕ್ ಒಂದನ್ನು ನಡೆಸುತ್ತಿರುವವರು ಡಾ. ಭೋಗರಾಜ್ ರಮಣ್ ರಾವ್. ಭಾರತದ ಗ್ರಾಮೀಣ ಭಾಗದಲ್ಲಿ ಜನರ ಕೈಗೆಟುವ ಬೆಲೆಯಲ್ಲಿ ಆರೋಗ್ಯ ಸೇವೆಯನ್ನು ನೀಡುವ ಕುರಿತು ಹಲವು ವರ್ಷಗಳಿಂದ ಆಂಧ್ರ ಮೂಲದ ಡಾ. ರಾವ್ ಮಾತನಾಡಿಕೊಂಡು ಬಂದಿದ್ದಾರೆ. ಜತೆಗೆ, ಈ ಹಿನ್ನೆಲೆಯಲ್ಲಿ ಒಂದಷ್ಟು ಕೆಲಸಗಳನ್ನೂ ಮಾಡಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಪದ್ಮಶ್ರೀ ಗೌರವವೂ ಲಭ್ಯವಾಗಿದೆ. ಜತೆಗೆ, ರಸ್ತೆಯೊಂದಕ್ಕೆ ಡಾ. ರಮಣ್ ರಾವ್ ಅವರ ಹೆಸರನ್ನೂ ಇಡಲಾಗಿದೆ. ಡಾ. ರಾವ್, ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಹತ್ತಿರದಿಂದ ಬಲ್ಲವರು. ಡಾ. ರಾಜ್ ಕುಮಾರ್ ಕುಟುಂಬದ ವೈದ್ಯರು ಎಂದು ವರದಿಗಳು ಹೇಳುತ್ತಿವೆ.

ಇಂತಹದೊಂದು ಹಿನ್ನೆಲೆಯ ಹಿರಿಯ ವೈದ್ಯ ಡಾ. ರಾವ್ ಅವರ ಅಶ್ಲೀಲ ವಿಡಿಯೋ ಪತ್ರಕರ್ತ ಹೇಮಂತ್ ಕಶ್ಯಪ್‌ಗೆ ಲಭ್ಯವಾಗಿತ್ತು. ಇದನ್ನು ಬಳಸಿಕೊಂಡು ಆತ, ‘ಹಣ ಕೊಡಿ ಇಲ್ಲ ಅಂದ್ರೆ ವಿಡಿಯೋ ಆನ್‌ ಏರ್ ಆಗುತ್ತೆ’ ಎಂದು ಬೆದರಿಕೆ ಹಾಕಿದ್ದ. ಹಣವನ್ನು ಸುಲಿಗೆ ಮಾಡಿದ್ದ. ದುರಾಸೆಗೆ ಬಿದ್ದು ಮತ್ತೆ ಹಣ ಪೀಕಲು ಮುಂದಾದಾಗ ಬಂಧನಕ್ಕೆ ಒಳಗಾದ ಎಂಬುದು ಸದ್ಯ ಸಿಗುತ್ತಿರುವ ಮಾಹಿತಿ.

“ವಿಡಿಯೋ ಇಟ್ಟುಕೊಂಡು ಇವರು ಬ್ಲ್ಯಾಕ್‌ಮೇಲ್ ಮಾಡಲು ಹೊರಟರು. ಒಟ್ಟು ಮೂರು ಕಂತುಗಳಲ್ಲಿ ಐದು ಲಕ್ಷ (2+2+1) ಹಣವನ್ನು ಈತ ಡಾಕ್ಟರ್ ಕ್ಲಿನಿಕ್‌ನಲ್ಲಿಯೇ ಪಡೆದುಕೊಂಡಿದ್ದ. ಅದೂ ಸಾಲದೆ ಮತ್ತೆ 50 ಲಕ್ಷಕ್ಕೆ ಬೇಡಿಕೆ ಇಟ್ಟ ಸಮಯದಲ್ಲಿ ಸದಾಶಿವನಗರ ಪೊಲೀಸ್ ಠಾಣೆಗೆ ಡಾ. ರಾವ್ ದೂರು ನೀಡಿದರು. ಆರೋಪಿಗೆ ಹಣ ನೀಡುವುದಾಗಿ ಕರೆಸಿಕೊಂಡು ಬಂಧಿಸಲಾಯಿತು.’’ 
ದೇವರಾಜ್, ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು.  

ಯಾರೀತ ಹೇಮಂತ್?

ಹೇಮಂತ್ ಕಶ್ಯಪ್ ಬೆಂಗಳೂರು ಮಾಧ್ಯಮ ಲೋಕದಲ್ಲಿ ಚಿರಪರಿಚಿತ ಹೆಸರು. ವೃತ್ತಿ ಮಾತ್ರ ಅಲ್ಲ ತನ್ನ ಐಶಾರಾಮಿ ಜೀವನ ಶೈಲಿಯ ಕಾರಣಕ್ಕೆ ಗುರುತಿಸಿಕೊಂಡಾತ. 'ಬೆಂಗಳೂರು ಮಿರರ್‌' ಪತ್ರಿಕೆಗೆ ವರದಿ ಮಾಡುತ್ತಿದ್ದ ಹೇಮಂತ್ ಕೆಲವು ವರ್ಷಗಳ ಹಿಂದೆ ಪಬ್ಲಿಕ್ ಟಿವಿ ಸೇರಿಕೊಂಡಿದ್ದ. ಈತನಿಗೆ 'ಇನ್‌ಪುಟ್‌'ನಂತಹ ಮಹತ್ವದ ಹುದ್ದೆಯನ್ನು ಅಲ್ಲಿ ನೀಡಲಾಗಿತ್ತು.

''ಹೇಮಂತ್ ಅಪರಾಧ ವರದಿಗಾರಿಕೆ ಹೆಸರಿನಲ್ಲಿ ಕೆಲವು ಐಪಿಎಸ್ ಅಧಿಕಾರಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಹತ್ತಿರವಾಗಿದ್ದ. ಇದನ್ನೇ ಬಳಸಿಕೊಂಡು ಆತ ಸುದ್ದಿಗಳನ್ನು ಹೆಕ್ಕುತ್ತಿದ್ದ. ಈತನ ಜೀವನ ಶೈಲಿಯನ್ನು ನೋಡುತ್ತಿದ್ದರೆ ಸಂಬಳದ ಹಣದಲ್ಲಿ ಅಂತಹ ಬದುಕು ಕಟ್ಟಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ನಮಗೆ ಏಳುತ್ತಿತ್ತು. ಇದೀಗ ಪ್ರಕರಣ ಹೊರಬೀಳುವ ಮೂಲಕ ಇಂತಹ ಶೋಕಿಲಾಲ ಪತ್ರಕರ್ತನ ಅಸಲಿ ಮುಖ ಪರಿಚಯವಾದಂತಾಗಿದೆ,'' ಎನ್ನುತ್ತಾರೆ ಅಪರಾಧ ವಿಭಾಗದ ವರದಿಗಾರರೊಬ್ಬರು.

ಡಾ. ರಮಣ್ ರಾವ್ ಅವರ ಸುಲಿಗೆ ಪ್ರಕರಣದಲ್ಲಿ ಹೇಮಂತ್ ಜತೆಗೆ ಇನ್ನೂ ಕೆಲವು ಪತ್ರಕರ್ತರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.

"ಅಶ್ಲೀಲ ವಿಡಿಯೋ ಇಟ್ಟುಕೊಂಡು ಹಲವರು ಡಾ. ರಾವ್ ಹತ್ತಿರ ಹಣ ಪೀಕಿದ್ದಾರೆ. ಅವರು (ಪತ್ರಕರ್ತರು) ಹಣ ಪಡೆದುಕೊಳ್ಳುವ ದೃಶ್ಯಾವಳಿಗಳೂ ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಬಂಧ ಇನ್ನಷ್ಟು ಬಂಧನಗಳು ನಡೆಯಬಹುದು,'' ಎನ್ನುತ್ತವೆ ಮೂಲಗಳು.

"ಆರೋಪಿ ಹೇಮಂತ್‌ನನ್ನು ಬುಧವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಪ್ರಕರಣದ ಇನ್ನೊಬ್ಬ ಆರೋಪಿ ಮಂಜೇಶ್ ಅಲಿಯಾಸ್ ಮಂಜುನಾಥ್‌ ಬಂಧನಕ್ಕೆ ಕಾಯುತ್ತಿದ್ದೇವೆ,'' ಎಂದು 'ಸಮಾಚಾರ'ಕ್ಕೆ ಮಾಹಿತಿ ನೀಡಿದರು ಡಿಸಿಪಿ ದೇವರಾಜ್.

ಅಂತರ ಕಾಯ್ದುಕೊಂಡ ಸಂಸ್ಥೆ:

ಹೇಮಂತ್ ಕಶ್ಯಪ ಬಂಧನ ಬೆನ್ನಲ್ಲೇ ಪಬ್ಲಿಕ್ ಟಿವಿ ಕಡೆಯಿಂದ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಬರೆದ ಪತ್ರ. 
ಹೇಮಂತ್ ಕಶ್ಯಪ ಬಂಧನ ಬೆನ್ನಲ್ಲೇ ಪಬ್ಲಿಕ್ ಟಿವಿ ಕಡೆಯಿಂದ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಬರೆದ ಪತ್ರ. 
/ಸಮಾಚಾರ. 

ಪತ್ರಕರ್ತ ಹೇಮಂತ್ ಬಂಧನ ಸುದ್ದಿ ಮಾಧ್ಯಮ ಲೋಕದ ಗಮನ ಸೆಳೆದಿದೆ. 'ಪಬ್ಲಿಕ್ ಟಿವಿ' ಆರೋಪಿಯಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ. 'ಸಮಾಚಾರ'ಕ್ಕೆ ಪ್ರತಿಕ್ರಿಯೆ ನೀಡಿದ ‘ರೈಟ್‌ಮನ್‌ ಮೀಡಿಯಾ’ ಸಂಸ್ಥೆಯ ಸಿಇಓ ಅರುಣ್ ಕುಮಾರ್, "ಹೇಮಂತ್ ಕಶ್ಯಪ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಸಂಸ್ಥೆ ಕಡೆಯಿಂದ ಪೊಲೀಸ್ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದೇವೆ. ಪ್ರಕರಣದಲ್ಲಿ ಸಂಸ್ಥೆಯ ಯಾರೇ ಸಿಬ್ಬಂದಿ ಭಾಗಿಯಾಗಿದ್ದರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಿ ಎಂದು ಕೋರಿದ್ದೇವೆ,'' ಎಂದರು.

ಪಬ್ಲಿಕ್ ಟಿವಿ ಆಯುಕ್ತರಿಗೆ ಬರೆದ ಪತ್ರ ಲಭ್ಯವಾಗಿದ್ದು, ಸಂಸ್ಥೆಯ ಸಿಇಓ ಅರುಣ್ ಕುಮಾರ್ ಜತೆಯಲ್ಲಿ ಕಾರ್ಯನಿರ್ವಾಹಣ ಸಂಪಾದಕ ಅಜ್ಮತ್ ಅವರ ಸಹಿಯೂ ಇದೆ. ಹಿಂದೆ, ‘ಬೆಂಗಳೂರು ಮಿರರ್‌’ ಪತ್ರಿಕೆಯಲ್ಲಿ ಅಜ್ಮತ್ ಹಾಗೂ ಹೇಮಂತ್ ಸಹೋದ್ಯೋಗಿಗಳಾಗಿದ್ದವರು ಮತ್ತು ಇಬ್ಬರೂ ಒಟ್ಟಿಗೆ ‘ಪಬ್ಲಿಕ್ ಟಿವಿ’ಗೆ ಸೇರ್ಪಡೆಗೊಂಡವರು ಎಂಬುದು ವಿಶೇಷ.

ಮಧ್ಯಾಹ್ನ ಒಂದು ಗಂಟೆಯ ವಾರ್ತಾ ಸಂಚಿಕೆಯಲ್ಲಿ ಹಾಗೂ ರಾತ್ರಿ 9 ಗಂಟೆಯ 'ಬಿಗ್ ಬುಲೆಟಿನ್‌'ನಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್. ರಂಗನಾಥ್ ಈ ಕುರಿತು ಸ್ಪಷ್ಟೀಕರಣ ನೀಡಲಿದ್ದಾರೆ ಎಂದು ಅರುಣ್ ಕುಮಾರ್ ತಿಳಿಸಿದರು.

ಪೊಲೀಸರು ಹೇಮಂತ್ ಕಶ್ಯಪ್ ಬಂಧಿಸಲು ಮುಂದಾದಾಗ ಆತ ಬೆದರಿಕೆ ಹಾಕಿದ್ದ ಎಂದು ಡಿಸಿಪಿ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ್ದರು. 'ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನನಗೆ ಗೊತ್ತು. ನನ್ನನ್ನು ಇಲ್ಲಿಯೇ ಬಿಟ್ಟುಬಿಡಿ. ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಹೇಮಂತ್ ಬೆದರಿಕೆ ಹಾಕಿದ್ದ' ಎಂದು ವರದಿ ಹೇಳಿತ್ತು.

ನೆಕ್ಸಸ್‌ಗಳೇ ಸಮಸ್ಯೆ:

ಮಾಧ್ಯಮ ಲೋಕದಲ್ಲಿ ಇಂತಹ ಪ್ರಕರಣಗಳು ಹೊರಬಿದ್ದಾಗ ಮಾತ್ರವೇ ಒಳಗಿನ ಹುಳುಕುಗಳ ಕುರಿತು ಒಂದಷ್ಟು ಚರ್ಚೆ ನಡೆಯುತ್ತದೆ. ಒತ್ತಡದ ನಡುವೆಯೂ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡು ಎಚ್ಚರಿಕೆಯ ಸಂದೇಶ ರವಾನಿಸುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ.

ರಾಜಕೀಯ ವಿಭಾಗದ ವರದಿಗಾರರು ಕೊನೆಗೆ ರಾಜಕಾರಣಿಗಳಂತೆ ಆಡುವುದು, ಅಪರಾಧ ವಿಭಾಗದ ವರದಿಗಾರರು ಪೊಲೀಸರಂತೆ ವರ್ತಿಸಲು ಆರಂಭಿಸುವುದು ಸಾಂಸ್ಥಿಕ ಸಮಸ್ಯೆಯೊಂದರ ಬಾಹ್ಯ ರೂಪಗಳಷ್ಟೆ. ಬಹುತೇಕ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಸರಿಯಾದ ತರಬೇತಿ, ನೈತಿಕ ಚೌಕಟ್ಟುಗಳಲ್ಲಿ ಗುರುತಿಸಿಕೊಳ್ಳುವ ಕುರಿತು ಮಾಹಿತಿ ನೀಡುವ ಕೆಲಸಗಳೇ ನಡೆಯುವುದಿಲ್ಲ.

"ಕರ್ನಾಟಕದಲ್ಲಿ ಪತ್ರಕರ್ತರು ಕೆಲಸಕ್ಕೆ ಸೇರಿದ ನಂತರ ತರಬೇತಿಗಳಿಗೆ ಒಳಗಾಗುವ ಸಂಪ್ರದಾಯವೇ ಇದ್ದಂತೆ ಕಾಣಿಸುವುದಿಲ್ಲ,'' ಎನ್ನುತ್ತಾರೆ ಈ ಕುರಿತು ಅಧ್ಯಯನ ಮಾಡಿರುವ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು.

ಒಂದು ಕಡೆ ತರಬೇತಿ ಕೊರತೆ ಕಾಡುತ್ತಿದ್ದರೆ, ಗೊತ್ತಿದ್ದೂ ಭ್ರಷ್ಟ ಪತ್ರಕರ್ತರಿಗೆ ಕೆಲವು ಐಪಿಎಸ್‌ ಅಧಿಕಾರಿಗಳು ಮಣೆ ಹಾಕುವುದು ಕೂಡ ಅಪರಾಧ ವಿಭಾಗದ ವರದಿಗಾರರ ಕ್ಷಮತೆಗೆ ಸವಾಲು ಒಡ್ಡುತ್ತಿದೆ.

"ಐಪಿಎಸ್‌ ಅಧಿಕಾರಿಗಳ ಕಚೇರಿಯಲ್ಲಿಯೇ ಕೆಲವು ಪತ್ರಕರ್ತರು ದಿನ ಕಳೆಯುತ್ತಿರುತ್ತಾರೆ. ಅವರ ನಡುವೆ ಎಂತಹ ಸಂಬಂಧ ಇರುತ್ತದೆ ಎಂಬುದು ಹೊರಗೆ ಕಾಣಿಸುವುದಿಲ್ಲ. ಇಂತಹ ಕಳಂಕಿತರು ತಮ್ಮ ಅಕ್ರಮ ಸಂಪರ್ಕಗಳ ಕಾರಣಕ್ಕೆ ಸುದ್ದಿಗಳನ್ನು ಉಳಿದವರಿಗಿಂತ ಮುಂಚೆ ನೀಡುತ್ತಾರೆ. ಕೊನೆಗೆ ಉಳಿದ ಪತ್ರಕರ್ತರು ಅನಿವಾರ್ಯವಾಗಿ ಇಂತಹ ಹಾದಿ ಹಿಡಿಯುವ ವಾತಾವರಣ ಸೃಷ್ಟಿಯಾಗಿದೆ,'' ಎಂದು ವೃತ್ತಿ ಬದುಕಿನ ಸಮಸ್ಯೆಗಳನ್ನು ಮುಂದಿಡುತ್ತಾರೆ ಪತ್ರಕರ್ತರೊಬ್ಬರು.

"ಪತ್ರಕರ್ತರು ಮತ್ತು ಪೊಲೀಸರ ನಡುವಿನ ನೆಕ್ಸಸ್‌ಗಳೇ ಸಮಸ್ಯೆ. ಪೊಲೀಸರು ಪೊಲೀಸರಾಗಿ, ಪತ್ರಕರ್ತರು ಪತ್ರಕರ್ತರಾಗಿ ಸ್ವತಂತ್ರವಾಗಿ ಕೆಲಸ ಮಾಡಬೇಕು. ಅದು ಬಿಟ್ಟು ಒಬ್ಬರ ಅಜೆಂಡಾಕ್ಕೆ ಇನ್ನೊಬ್ಬರು ಕೆಲಸ ಮಾಡಲು ಹೋದಾಗ ಸಮಸ್ಯೆಯಾಗುತ್ತದೆ,'' ಎನ್ನುತ್ತಾರೆ ಡಿಸಿಪಿ ದೇವರಾಜ್.

ಹೀಗಾಗಿ ಪತ್ರಕರ್ತ ಹೇಮಂತ್ ಕಶ್ಯಪ್ ಬಂಧನ ಪ್ರಕರಣ ಕೇವಲ ಬ್ಲ್ಯಾಕ್‌ಮೇಲ್, ಸುಲಿಗೆ ಮಾತ್ರವೇ ಅಲ್ಲ ಇಂತಹ ಹಲವು ಆಯಾಮಗಳ ಮೇಲೆಯೂ ಬೆಳಕು ಚೆಲ್ಲುತ್ತಿದೆ.

Also read: 19 ದಿನಗಳ ಅಂತರದಲ್ಲಿ ಎರಡೆರಡು ಬ್ಲ್ಯಾಕ್‌ಮೇಲ್‌; ಪದ್ಮಶ್ರೀ ಡಾಕ್ಟರ್‌ ಸೆಕ್ಸ್‌ ವಿಡಿಯೋ ಮತ್ತು ದೂರಿನ ಸಾರಾಂಶ