ಅಕಾಸ್ಟಾ ಎಂಬ ಪತ್ರಕರ್ತ; ಟ್ರಂಪ್ ಎಂಬ ಅಧ್ಯಕ್ಷ: ಭಾರತದಲ್ಲಿವತ್ತು ಕಾಣಸಿಗದ ಅಪರೂಪದ ಮುಖಾಮುಖಿ!
ಟಿವಿ

ಅಕಾಸ್ಟಾ ಎಂಬ ಪತ್ರಕರ್ತ; ಟ್ರಂಪ್ ಎಂಬ ಅಧ್ಯಕ್ಷ: ಭಾರತದಲ್ಲಿವತ್ತು ಕಾಣಸಿಗದ ಅಪರೂಪದ ಮುಖಾಮುಖಿ!

ದುರಂತವೆಂದರೆ ನಮ್ಮಲ್ಲಿ ಅಧ್ಯಕ್ಷರನ್ನೇ ಪ್ರಶ್ನಿಸುವ  ಅಕಾಸ್ಟಾ ರೀತಿಯ ಪತ್ರಕರ್ತರೂ ಇಲ್ಲ; ಕನಿಷ್ಟ ಟ್ರಂಪ್‌ ರೀತಿಯಲ್ಲಿ ಪತ್ರಕರ್ತರನ್ನು ಮುಖಾಮುಖಿಯಾಗುವ ನಾಯಕರೂ ಇಲ್ಲ. 

ಗುರುವಾರ ಬೆಂಗಳೂರಿಗೆ ಬಂದಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂಬ ಮಾತುಗಳನ್ನು ಆಡುತ್ತಲೇ, ಭಾರತದ ಮಾಧ್ಯಮಗಳ ಬಗ್ಗೆಯೂ ಉಲ್ಲೇಖಿಸಿದ್ದರು.

“ದೆಹಲಿಯ ಮಾಧ್ಯಮಗಳು ನಾನು ಕೇಳಿದ ಪ್ರಶ್ನೆಯನ್ನು ವರದಿ ಮಾಡುತ್ತಿಲ್ಲ. ನೀವು (ಮಾಧ್ಯಮಗಳು) ದೊಡ್ಡ ಮಟ್ಟದ ಒತ್ತಡ ಮತ್ತು ಅಭದ್ರತೆಯಲ್ಲಿದ್ದೀರಿ. ಈಗ ನಿಧಾನಕ್ಕೆ ಹೊರಬಂದು ಕನಿಷ್ಠ ಬರೆಯಲು, ಬೆಂಬಲಿಸಲು ಆರಂಭಿಸಿದ್ದೀರಿ. (ಹಾಗಂಥ)ನೀವು ಯಾವತ್ತೂ ವಿರೋಧ ಪಕ್ಷಗಳನ್ನು ಬೆಂಬಲಿಸಿದ್ದಿಲ್ಲ. ಇವತ್ತೇ ನೀವು ಹೀಗಿದ್ದೀರಿ, ನಾಳೆ (ಅಧಿಕಾರಕ್ಕೆ ಬಂದರೆ) ಮೋದಿ ಮತ್ತೆ ನಿಮ್ಮನ್ನು ನಿಯಂತ್ರಿಸುತ್ತಾರೆ. ಈ ದೇಶದಲ್ಲಿ ಏನು ನಡೆಯಲಿದೆ?,” ಎಂದು ಪ್ರಶ್ನಿಸಿದ್ದರು.

ಅವರು ಇಂಥಹದ್ದೊಂದು ಮಾತುಗಳನ್ನು ಆಡುವ ಕೆಲವೇ ಗಂಟೆಗಳ ಮುಂಚೆ ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ನೇರ ವಾಗ್ವಾದಕ್ಕೆ ಇಳಿದಿದ್ದರು ‘ಸಿಎನ್‌ಎನ್‌’ ವಾಹಿನಿಯ ಪತ್ರಕರ್ತ ಜಿಮ್ ಅಕಾಸ್ಟಾ.

ಬುಧವಾರ ಅಮೆರಿಕಾ ಮಧ್ಯಂತರ ಚುನಾವಣೆ ಮುಗಿಯುತ್ತಿದ್ದಂತೆ ಟ್ರಂಪ್‌ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಇಲ್ಲಿಗೆ ಆಗಮಿಸಿದ ಅಕಾಸ್ಟಾ ಅಧ್ಯಕ್ಷರ ಮುಂದೆ ಖಾರವಾದ ಪ್ರಶ್ನೆಗಳನ್ನಿಟ್ಟರು. “ನಿಮ್ಮ ಚುನಾವಣಾ ಪ್ರಚಾರದಲ್ಲಿ ವಲಸಿಗರು ಗೋಡೆ ಹತ್ತುವಂತ ಚಿತ್ರಗಳನ್ನು ಬಿತ್ತರಿಸಿದ್ರಿ?” ಎಂದು ಪ್ರಶ್ನಿಸಿದರು. ಅಲ್ಲಿಂದ ಆರಂಭವಾಯಿತು ವಾಗ್ಯುದ್ಧ.

ಅಕಾಸ್ಟಾ ಪ್ರಶ್ನೆಗೆ ಮುಖ ಊದಿಸಿಕೊಂಡ ಟ್ರಂಪ್‌ “ನಾನು ದೇಶವನ್ನು ಮುನ್ನಡೆಸುತ್ತೇನೆ. ನೀನು ಸಿಎನ್‌ಎನ್‌ ನಡೆಸು. ನೀನು ಅದನ್ನು ಸರಿಯಾಗಿ ನಡೆಸಿದರೆ ನಿಮ್ಮ ರೇಟಿಂಗ್‌ ಮತ್ತಷ್ಟು ಹೆಚ್ಚಾಗುತ್ತದೆ,” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಅಕಾಸ್ಟಾ ಮತ್ತೂ ಪ್ರಶ್ನೆಗಳನ್ನು ಕೇಳಿದಾಗ, “ಸಾಕು ನಿಲ್ಲಿಸು” ಎಂದು ಅಬ್ಬರಿಸಿದರು ಟ್ರಂಪ್. ಆದರೆ ಅಕಾಸ್ಟಾ ಬಾಯಿ ಮುಚ್ಚಲು ಸಿದ್ಧವಿರಲಿಲ್ಲ. “ನಿನ್ನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಕ್ಕೆ ಸಿಎನ್‌ಎನ್‌ಗೆ ನಾಚಿಕೆಯಾಗಬೇಕು,” ಎಂದು ಜರೆದರು ಅಧ್ಯಕ್ಷರು. “ನೀನೊಬ್ಬ ಒರಟ, ಭಯಾನಕ ವ್ಯಕ್ತಿ” ಎಂದು ಆತನನ್ನು ಮೂದಲಿಸಿದರು. ಅಷ್ಟೊತ್ತಿಗೆ ಅಕಾಸ್ಟಾ ಕೈಯಿಂದ ಮೈಕ್ರೋಫೋನ್‌ ಕಿತ್ತುಕೊಂಡಾಗಿತ್ತು. “ಸಿಎನ್‌ಎನ್‌ ವಾಹಿನಿಯಲ್ಲಿ ನಿನ್ನಂಥವರು ಕೆಲಸ ಮಾಡಲು ಯೋಗ್ಯರಲ್ಲ,” ಎಂದು ಅಧ್ಯಕ್ಷರು ತಮ್ಮ ಹೀಗಳಿಕೆಯನ್ನು ಮುಂದುವರಿಸಿದ್ದರು. ಇದಕ್ಕೆ ಸಮಜಾಯಿಷಿಯನ್ನು ಅಕಾಸ್ಟಾ ನೀಡುತ್ತಿದ್ದರೆ, “ನೀನು ಸುಳ್ಳು ಸುದ್ದಿಯನ್ನು ನೀಡುತ್ತಿ. ಸಿಎನ್‌ಎನ್‌ ಈ ತರಹದ ಹಲವು (ಸುಳ್ಳು) ಸುದ್ದಿಗಳನ್ನು ನೀಡುತ್ತದೆ. ನೀವು ಜನರ ಶತ್ರುಗಳು,” ಎಂದು ಮತ್ತೆ ಆಕ್ರೋಶ ವ್ಯಕ್ತಪಡಿಸಿದರು.

ಇದಾದ ಬೆನ್ನಿಗೆ ‘ಎನ್‌ಬಿಸಿ’ ವಾಹಿನಿಯ ಪೀಟರ್‌ ಅಲೆಕ್ಸಾಂಡರ್‌ ತಮ್ಮ ಪತ್ರಕರ್ತ ಗೆಳೆಯ ಅಕಾಸ್ಟಾ ಬೆಂಬಲಕ್ಕೆ ಧಾವಿಸಿದರು. ಆಗ ಟ್ರಂಪ್‌ “ಸತ್ಯವಾಗಿ ಹೇಳಬೇಕೆಂದರೆ ನಾನು ನಿಮ್ಮ ಅಭಿಯಾನಿಯೂ ಅಲ್ಲ,” ಎಂದು ಅವರನ್ನೂ ಛೇಡಿಸಿದರು. ಬರೋಬ್ಬರಿ 1 ಗಂಟೆ 26 ನಿಮಿಷಗಳ ಕಾಲ ಈ ಪತ್ರಿಕಾಗೋಷ್ಠಿ ನಡೆಯಿತು. ಮತ್ತು ಗೋಷ್ಠಿಯುದ್ಧಕ್ಕೂ ಅಲ್ಲಿದ್ದ ಪತ್ರಕರ್ತರು ಅಧ್ಯಕ್ಷರನ್ನು ಮುಜುಗರಕ್ಕೀಡು ಮಾಡುವ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಇದಕ್ಕೆ ಅಕಾಸ್ಟಾ ಹಾಕಿದ ಅಡಿಪಾಯ ಕಾರಣವಾಗಿತ್ತು.

ಪತ್ರಿಕಾಗೋಷ್ಠಿ ಮುಗಿದು ಸ್ವಲ್ಪ ಹೊತ್ತಿನಲ್ಲೇ ಇನ್ನೊಂದು ಕಾರ್ಯಕ್ರಮದ ನಿಮಿತ್ತ ಶ್ವೇತ ಭವನ ಪ್ರವೇಶಿಸಲು ಬಂದ ಅಕಾಸ್ಟಾರನ್ನು ಗೇಟ್‌ನ ಮುಂಭಾಗವೇ ತಡೆಯಲಾಯಿತು. ಅಷ್ಟೊತ್ತಿಗಾಗಲೇ ಅವರ ಮಾಧ್ಯಮ ಪ್ರವೇಶ ಪತ್ರವನ್ನು ರದ್ದುಗೊಳಿಸಲಾಗಿತ್ತು. ಹಾಗಂಥ ಅಕಾಸ್ಟಾ ಈ ರೀತಿ ವರ್ತಿಸುವುದು, ಖ್ಯಾತನಾಮರನ್ನು ಮುಖಕ್ಕೆ ಹೊಡೆದಂಥ ಪ್ರಶ್ನಿಸುವುದು ಇದೇ ಮೊದಲೇನೂ ಆಗಿರಲಿಲ್ಲ.

ಕಾಸ್ಟ್ರೋಗೆ ಮುಜುಗರದ ಪ್ರಶ್ನೆ ಕೇಳಿದ್ದ ಅಕಾಸ್ಟಾ

ಅದು 2016 ಮಾರ್ಚ್‌. ಕ್ಯೂಬಾ ರಾಜಧಾನಿ ಹವಾನಾಕ್ಕೆ ಅಮೆರಿಕಾ ಅಧ್ಯಕ್ಷ ಬರಾಕ್‌ ಒಬಾಮಾ ಐತಿಹಾಸಿಕ ಭೇಟಿ ನೀಡಿದ್ದರು. ಭೇಟಿ ಹಿನ್ನೆಲೆಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉಭಯ ದೇಶಗಳ ನಾಯಕರು ಹಮ್ಮಿಕೊಂಡಿದ್ದರು. ಪೋಡಿಯಂ ಬಳಿ ದೇಶದ ಅಧ್ಯಕ್ಷ ರೌಲ್‌ ಕ್ಯಾಸ್ಟ್ರೋ ನಿಂತಿದ್ದರು. ಎದ್ದು ನಿಂತ ಅಕಾಸ್ಟಾ “ ನೀವ್ಯಾಕೆ ಕ್ಯೂಬಾದ ರಾಜಕೀಯ ವಿರೋಧಿಗಳನ್ನು ಬಂಧಿಸಿಟ್ಟಿದ್ದೀರಿ? ಅವರನ್ನು ಯಾಕೆ ನೀವು ಬಿಡುಗಡೆ ಮಾಡಬಾರದು?” ಎಂದು ಪ್ರಶ್ನಿಸಿಯೇ ಬಿಟ್ಟರು.

ತಮ್ಮ ದೇಶದ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಿದ್ದ ಕ್ಯಾಸ್ಟೋಗೆ 1950ರ ನಂತರ ವಿದೇಶಿ ವರದಿಗಾರರೊಬ್ಬರು ಕೇಳಿದ ಮೊದಲ ಪ್ರಶ್ನೆ ಅದಾಗಿತ್ತು. ಹೀಗೊಂದು ಪ್ರಶ್ನೆ ಕೇಳಲು ಕಾರಣವೂ ಇತ್ತು. ಅಕಾಸ್ಟಾ ತಂದೆ ಕೂಡ ಕ್ಯೂಬಾದಿಂದ ಗಡಿಪಾರಾದವರಾಗಿದ್ದರು.

ಆದರೆ ಇಲ್ಲಿ ಪ್ರಶ್ನೆ ಕೇಳಿದ ಅಕಾಸ್ಟಾ ಕೈಯಿಂದ ಯಾರೂ ಮೈಕ್ರೋಫೋನ್‌ ಕಿತ್ತುಕೊಳ್ಳಲಿಲ್ಲ. ಅವರ ಪ್ರವೇಶ ಪತ್ರಗಳನ್ನೂ ರದ್ದುಗೊಳಿಸಲಿಲ್ಲ. ಬದಲಿಗೆ ಕ್ಯಾಸ್ಟ್ರೋ, “ನನಗೆ ರಾಜಕೀಯ ಕೈದಿಗಳ ಪಟ್ಟಿ ನೀಡು. ನಾನು ಅವರನ್ನು ತಕ್ಷಣವೇ ಬಿಡುಗಡೆ ಮಾಡುತ್ತೇನೆ,” ಎಂದು ಬಿಟ್ಟರು.

ಇದೆಲ್ಲಾ ನಡೆದು ಇಂದಿಗೆ ಎರಡು ವರ್ಷಗಳು ಕಳೆದಿವೆ. ಮಾಧ್ಯಮಗಳು ಬದಲಾಗಿವೆ. ರಾಜಕೀಯಗಳೂ ಬದಲಾಗಿವೆ. ಮೈಕ್‌ ಕಿತ್ತುಕೊಳ್ಳಲು ಬಂದ ಯುವತಿಯ ಮೇಲೆ ಕೈ ಇಟ್ಟ ಕ್ಷುಲ್ಲಕ ಆರೋಪ ಹೊರಿಸಿ ಅಕಾಸ್ಟಾ ಶ್ವೇತ ಭವನ ಪ್ರವೇಶವನ್ನು ತಡೆ ಹಿಡಿಯಲಾಗಿದೆ. ಶ್ವೇತ ಭವನದ ವಾದ ‘ಸುಳ್ಳು’ ಎಂದು ಅಕಾಸ್ಟಾ ಹೇಳುತ್ತಿದ್ದಂತೆ ತಿರುಚಿದ ವಿಡಿಯೋವನ್ನು ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ಬಿಡುಗಡೆ ಮಾಡಿದ್ದಾರೆ. ಬೆನ್ನಿಗೆ ಶ್ವೇತ ಭವನದ ವಿರುದ್ಧ ಮಾಧ್ಯಮ ಮತ್ತು ಜನ ಸಮೂಹದಿಂದ ಆಕ್ರೋಶ ವ್ಯಕ್ತವಾಗಿದೆ.

ಸ್ಯಾಂಡರ್ಸ್‌ ಬಿಡುಗಡೆ ಮಾಡಿದ ವಿಡಿಯೋದ ಅಸಲಿಯತ್ತು ಪರಿಶೀಲನೆಯಲ್ಲಿ ನಿರತರಾದ ತಜ್ಞರು.
ಸ್ಯಾಂಡರ್ಸ್‌ ಬಿಡುಗಡೆ ಮಾಡಿದ ವಿಡಿಯೋದ ಅಸಲಿಯತ್ತು ಪರಿಶೀಲನೆಯಲ್ಲಿ ನಿರತರಾದ ತಜ್ಞರು.
/ಯುಎಸ್‌ಎ ಟುಡೇ

ಅಕಾಸ್ಟಾ-ಟ್ರಂಪ್‌ ಮುಖಾಮುಖಿ ಮತ್ತು ಕೊಲೆ ಬೆದರಿಕೆಗಳು

ಶ್ವೇತ ಭವನದಿಂದ ಹೊರ ಬಿದ್ದ ಅಕಾಸ್ಟಾರನ್ನು ಅಧ್ಯಕ್ಷರ ನಿವಾಸದ ಆಕ್ರಮಣಕಾರಿ ಪತ್ರಕರ್ತ ಎಂದೇ ಕರೆಯಲಾಗುತ್ತದೆ. ಅದಕ್ಕೆ ಅವರು ಆಗಾಗ ಅಧ್ಯಕ್ಷರ ಜತೆ ಜಗಳವಾಡುವುದೇ ಕಾರಣ. 2016ರ ನಂತರ ಅವರು ಅಲ್ಲಿನ ಅಧಿಕಾರಿಗಳ ಜತೆ, ಸ್ಯಾಂಡರ್ಸ್‌ ಜತೆ ಕಾವೇರಿದ ಸಂಭಾಷಣೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಹಲವು ಬಾರಿ ಟ್ರಂಪ್‌ರನ್ನೇ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಪರಿಣಾಮ ದೊಡ್ಡ ಅಭಿಮಾನಿ ವರ್ಗವನ್ನು ಅವರು ಸಂಪಾದಿಸಿದ್ದಾರೆ. ಅಷ್ಟೇ ದೊಡ್ಡ ವಿರೋಧಿಗಳ ಗುಂಪೂ ಅವರಿಗಿದೆ. ಅವೆಲ್ಲಾ ಇದೀಗ ಮತ್ತಷ್ಟು ವಿಸ್ತಾರಗೊಂಡಿವೆ.

ಪರಿಣಾಮ ‘ನನಗೆ ಲೆಕ್ಕ ಇಡಲು ಸಾಧ್ಯವಿಲ್ಲದಷ್ಟು ಕೊಲೆ ಬೆದರಿಕೆಗಳು ಬರುತ್ತಿವೆ’ ಎಂದು ಅವರು ಈ ವರ್ಷದ ಆರಂಭದಲ್ಲೊಮ್ಮೆ ಹೇಳಿದ್ದರು. ‘ವಾರಕ್ಕೊಮ್ಮೆಯಾದರೂ ನನಗೆ ಕೊಲೆ ಬೆದರಿಕೆ ಬರಲೇಬೇಕು’ ಎನ್ನುತ್ತಾರೆ ಅಕಾಸ್ಟಾ. 2007ರಲ್ಲಿ ಸಿಎನ್‌ಎನ್‌ ಸೇರಿದ ಅವರು ಅದಕ್ಕೂ ಮೊದಲು ಹಲವು ಸ್ಥಳೀಯ ವಾಹಿನಿಗಳಲ್ಲಿ ಕೆಲಸ ಮಾಡಿದ್ದರು.

ಸಿಎನ್‌ಎನ್‌ ಸೇರಿದ ನಂತರ 2016 ರಲ್ಲಿ ಮೊದಲ ಬಾರಿಗೆ ಚುನಾವಣಾ ಪ್ರಚಾರದ ವೇಳೆ ಅಕಾಸ್ಟಾ ಮತ್ತು ಟ್ರಂಪ್‌ ಮುಖಾಮುಖಿಯಾಗಿತ್ತು. ‘ನಾನು ನಿನ್ನನ್ನು ಟಿವಿಯಲ್ಲಿ ನೋಡಿದ್ದೇನೆ’ ಎಂದಿದ್ದರು ಟ್ರಂಪ್‌. ‘ನೀನು ನೈಜ ಸೌಂದರ್ಯವಂತ’ ಎಂದು ಅಕಾಸ್ಟಾರನ್ನು ಹೊಗಳಿದ್ದರು. ಆದರೆ ಇದಕ್ಕೆ ಬಾಗದ ಅಕಾಸ್ಟಾ ಟ್ರಂಪ್‌ರನ್ನು ಕ್ಲಿಷ್ಟ ಪ್ರಶ್ನೆಗಳ ಇಕ್ಕಳದಲ್ಲಿ ಸಿಲುಕಿಸುತ್ತಲೇ ಬಂದಿದ್ದಾರೆ.

“ಯಾವಾಗ ಮಾಧ್ಯಮಗಳನ್ನು ‘ಸುಳ್ಳು ಸುದ್ದಿ’, ‘ಅಮೆರಿಕಾದ ಜನರ ವೈರಿಗಳು’ ಎಂದು ಟ್ರಂಪ್‌ ಕರೆದರೋ, ಅವತ್ತು ನಾನು ಅವರಿಗೆ ಕಠಿಣ ಪ್ರಶ್ನೆಗಳನ್ನು ಕೇಳಬೇಕು ಎಂದು ನಿರ್ಧರಿಸಿದೆ,” ಎಂದು 2017ರಲ್ಲಿ ‘ದಿ ವಾಷಿಂಗ್ಟನ್‌ ಪೋಸ್ಟ್‌’ಗೆ ತಿಳಿಸಿದ್ದರು ಅಕಾಸ್ಟಾ. ಅಲ್ಲಿಂದ ಮುಖಾಮುಖಿ ಸಂಘರ್ಷಗಳು ಆರಂಭವಾಯಿತು. ಇದು ಹೇಗಿರುತ್ತದೆ ಎಂಬುದಕ್ಕೆ ಈ ಕೆಳಗಿನ ಘಟನೆ ಉದಾಹರಣೆಯಾಗಿದೆ.

2017ರಲ್ಲಿ ಚಾರ್ಲೊಟ್ಟೆವಿಲ್ಲೆಯಲ್ಲಿ ಟ್ರಂಪ್‌ ರ್ಯಾಲಿ ನಡೆಯುತ್ತಿತ್ತು. ಇದರಲ್ಲಿ ಟ್ರಂಪ್‌, ‘ಎರಡೂ ಕಡೆಯಲ್ಲಿ ಕೆಲವು ಒಳ್ಳೆಯ ವ್ಯಕ್ತಿಗಳು ಇರುತ್ತಾರೆ’ ಎಂದಿದ್ದರು. ಆಗ ಇದರ ವರದಿ ಬರೆದಿದ್ದ ಅಕಾಸ್ಟಾ, “ಇಲ್ಲ ಸರ್‌. ನಾಝಿಗಳಲ್ಲಿ ಒಳ್ಳೆಯ ವ್ಯಕ್ತಿಗಳೇ ಇಲ್ಲ,” ಎಂದು ಕಟುವಾದ ಶಬ್ದಗಳಲ್ಲಿ ಪ್ರತ್ಯುತ್ತರ ನೀಡಿದ್ದರು. ಇದೇ ರೀತಿ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ ಜತೆಗಿನ ಟ್ರಂಪ್‌ ಸಭೆಯ ಸಂದರ್ಭದಲ್ಲಿಯೂ ಅಧ್ಯಕ್ಷರನ್ನು ಅಕಾಸ್ಟಾ ಇಕ್ಕಟ್ಟಿಗೆ ಸಿಲುಕಿಸಿದ್ದರು. ಆಗ ಟ್ರಂಪ್‌ರ 2020ರ ಚುನಾವಣೆಯ ಪ್ರಚಾರದ ಮ್ಯಾನೇಜರ್‌ ಬ್ರಾಡ್‌ ಪಾರ್ಸ್ಕೇಲ್‌, ಅಕಾಸ್ಟಾ ಅನುಮತಿ ಪತ್ರಗಳನ್ನು ರದ್ದು ಪಡಿಸಲು ಕೇಳಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಅಕಾಸ್ಟಾ “ಪ್ರೀತಿಯ ಬ್ರಾಡ್‌, ಸರ್ವಾಧಿಕಾರಿಗಳು ಮಾತ್ರ ಪ್ರೆಸ್‌ ಕ್ರೆಡೆನ್ಶಿಯಲ್ಸ್‌ ಕಿತ್ತುಕೊಳ್ಳುತ್ತಾರೆ. ಪ್ರಜಾಪ್ರಭುತ್ವವಾದಿಗಳಲ್ಲ ಎಂದಿದ್ದರು."

ಇವತ್ತು ಜಗತ್ತಿನ ಎಲ್ಲಾ ಮಾಧ್ಯಮಗಳನ್ನೂ ಧೈರ್ಯಶಾಲಿ ಪತ್ರಕರ್ತ ಜಿಮ್‌ ಅಕಾಸ್ಟಾ ಆವರಿಸಿಕೊಂಡಿದ್ದಾರೆ. ಅವರಿಗೆ ಶ್ವೇತ ಭವನಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂದು ‘ಶ್ವೇತ ಭವನ ಪ್ರತಿನಿಧಿಗಳ ಸಂಘ’ ಮತ್ತು ಇತರ ಖ್ಯಾತ ಪತ್ರಕರ್ತರ ಸಂಘಟನೆಗಳು ಒತ್ತಾಯಿಸಿವೆ. ಅಲ್ಲಿನ ಪ್ರತಿಷ್ಠಿತ ಮಾಧ್ಯಮಗಳೂ ಇದಕ್ಕೆ ಧ್ವನಿಗೂಡಿಸಿವೆ.

ಒಂದು ತದ್ವಿರುದ್ಧ ಚಿತ್ರಣ- ಭಾರತದಲ್ಲಿ ಮಾತ್ರ ಸಿಗೋಕೆ ಸಾಧ್ಯ. 
ಒಂದು ತದ್ವಿರುದ್ಧ ಚಿತ್ರಣ- ಭಾರತದಲ್ಲಿ ಮಾತ್ರ ಸಿಗೋಕೆ ಸಾಧ್ಯ. 

ದುರಂತವೆಂದರೆ ನಮ್ಮಲ್ಲಿ ಅಕಾಸ್ಟಾ ರೀತಿಯ ಪತ್ರಕರ್ತರೂ ಇಲ್ಲ. ಅವರಂಥವರನ್ನು ಸಾಕುವ ಮಾಧ್ಯಮ ಸಂಸ್ಥೆಗಳೂ ಇಲ್ಲ. ಕನಿಷ್ಠ ಟ್ರಂಪ್‌ ರೀತಿಯಲ್ಲಿ ಪತ್ರಕರ್ತರನ್ನು ಮುಖಾಮುಖಿಯಾಗುವ ಪ್ರಧಾನಿಯೂ ನಮ್ಮ ಬಳಿಯಲ್ಲಿ ಇಲ್ಲ. ನಮ್ಮ ಬಳಿಯಲ್ಲಿ ಇರುವುದಿಷ್ಟೇ, ಅರ್ನಬ್‌ ಗೋಸ್ವಾಮಿ, ಚೌಧರಿಗಳು ಹಾಗೂ ಅವರ ಪ್ರಾದೇಶಿಕ ವರ್ಶನ್‌ಗಳು. ಪರಿಸ್ಥಿತಿ ಹೀಗಿರುವಾಗ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವು ಶಾಶ್ವತ ವಿರೋಧ ಪಕ್ಷವಾಗಿ ಇರಬೇಕು ಎಂದು ಬಯಸುವುದಾದರೂ ಹೇಗೆ?