samachara
www.samachara.com
ಟಿವಿ 9 ಕರ್ನಾಟಕದ 12 ಮಂದಿ ನಿಜಕ್ಕೂ 50 ಲಕ್ಷ ಲಂಚ ಕೇಳಿದರಾ? 
ಟಿವಿ

ಟಿವಿ 9 ಕರ್ನಾಟಕದ 12 ಮಂದಿ ನಿಜಕ್ಕೂ 50 ಲಕ್ಷ ಲಂಚ ಕೇಳಿದರಾ? 

ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸುವುದು ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ದಾರಿಗಳಲ್ಲಿ ಒಂದು. ಆದರೆ ವರದಿ ಮಾಡಿದ ಬೆನ್ನಿಗೇ ಸುಲಿಗೆ ಆರೋಪ ಬರುವಂತೆ ಮಾಡಿಕೊಳ್ಳುವುದು ‘ಸೆಲ್ಫ್ ಸೂಸೈಡ್’.

Team Samachara

ವಾರಾಂತ್ಯದಲ್ಲಿ; ಭ್ರಷ್ಟ ಅಧಿಕಾರಿಗಳ ಮೇಲಿನ ಎಸಿಬಿ ದಾಳಿ ಜನರನ್ನು ಅಚ್ಚರಿಗೆ ದೂಡಿದ ಸಮಯದಲ್ಲಿ ಕನ್ನಡದ ಜನಪ್ರಿಯ ಸುದ್ದಿ ವಾಹಿನಿ ‘ಟಿವಿ9 ಕರ್ನಾಟಕ’ ಬೇರೆಯದೇ ಲಹರಿಯಲ್ಲಿತ್ತು. ಶನಿವಾರ ಪ್ರಸಾರ ಮಾಡಿದ ಕಾರ್ಯಕ್ರಮವೊಂದರ ಕಾರಣಕ್ಕೆ ಬೆಂಗಳೂರಿನ ರೇನಿಯಸ್ ಸ್ಟ್ರೀಟ್‌ನಲ್ಲಿರುವ ಕಚೇರಿ ಮುಂದೆ ಪ್ರತಿಭಟನೆ ಆರಂಭವಾಗಿತ್ತು. ಅದರ ನೇತೃತ್ವವನ್ನು ಜೆಡಿಎಸ್‌ ಯುವ ಮುಖಂಡ, ಎಂಎಲ್‌ಸಿ ಎಚ್. ಎಂ. ರಮೇಶ್ ಗೌಡ ವಹಿಸಿದ್ದರು.

ಜೆಡಿಎಸ್‌ನ ಮಹತ್ವಾಕಾಂಕ್ಷಿ ಯುವ ರಾಜಕಾರಣಿ, ಎಂಎಲ್‌ಸಿ ರಮೇಶ್ ಗೌಡ ಬಗೆಗಿನ ಸ್ಟೋರಿಯೊಂದರ ಪರಿಣಾಮಗಳಿವು. “420 ಎಂದರೇನ್ರಿ?” ಎಂದು ಟಿವಿ 9ನ ಪರಿಚಿತ ನಿರೂಪಕ ಹರಿಪ್ರಸಾದ್‌ನನ್ನು ಕೇಳುತ್ತಾರೆ ರಮೇಶ್‌ ಗೌಡ. “ಐಪಿಸಿ 420 ಎಂದರೆ ಸೆಕ್ಷನ್,’’ ಅಂತ ಕ್ಷೀಣದನಿಯಲ್ಲಿ ಉತ್ತರ ಹೊರಬೀಳುತ್ತದೆ. ದಾಖಲೆ ಕೊಡಿ ಅನ್ನುತ್ತಾರೆ ಗೌಡ. ಮಾತುಕತೆ ಮುಂದುವರಿಯುತ್ತವೆ; ಅದನ್ನು ಯಲಹಂಕದ ಜೆಡಿಎಸ್‌ ಘಟಕ ಫೇಸ್‌ಬುಕ್‌ನಲ್ಲಿ ಲೈವ್‌ ನೀಡುತ್ತದೆ.

ಸಾರಾಂಶದಲ್ಲಿ, ನೀವು ನನ್ನ ವಿರುದ್ಧ ಸ್ಟೋರಿ ಮಾಡಿ, ಆದರೆ ನನ್ನ ಪ್ರತಿಕ್ರಿಯೆಯನ್ನೂ ದಾಖಲಿಸಿಕೊಳ್ಳಿ. ಆಮೇಲೆ ತಪ್ಪು ಎಂದು ಕಂಡುಬಂದರೆ ನೀವು ವರದಿ ಮಾಡಿ ಎನ್ನುತ್ತಾರೆ ಗೌಡ. ಇದಕ್ಕೆ ಹರಿಪ್ರಸಾದ್ ಕಡೆಯಿಂದ, “ನಾವು ಡಿಬೇಟ್ ಮಾಡುತ್ತಿಲ್ಲ. ಅದು ಕಾರ್ಯಕ್ರಮ. ಮಧ್ಯದಲ್ಲಿ ನೀವು ಹೇಳಿದ್ದನ್ನು ತೋರಿಸಲು ಸಾಧ್ಯವಿಲ್ಲ. ಈಗ ಮಾತನಾಡಿ, ನಾಳೆ ತೋರಿಸುತ್ತೇವೆ,’’ ಎಂದು ವಾಹಿನಿ ಪರವಾಗಿ ಪ್ರತಿಭಟನೆಗೆ ಬಂದವರನ್ನು ಸಂಭಾಳಿಸುವ ಪ್ರಯತ್ನ ನಡೆಯುತ್ತದೆ.

ಇಷ್ಟೆಲ್ಲಾ ನಡೆದಿದ್ದು, ಶನಿವಾರ ರಾತ್ರಿ 8.30ರ ಸುಮಾರಿಗೆ. ಇದಾಗಿ 24 ಗಂಟೆ ಕಳೆಯುವ ಮೊದಲೇ ಟಿವಿ 9 ಕರ್ನಾಟಕದ ವಿರುದ್ಧ ರಮೇಶ್ ಗೌಡ ತಮ್ಮ ರಾಜೇಶ್ ಎಚ್. ಎಂ. ನೀಡಿದ ದೂರು ಐಪಿಸಿ 154 ಅಡಿಯಲ್ಲಿ ಮಹಾಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತದೆ. ಕ್ರಮವಾಗಿ, ಶಿವು, ಹರಿಪ್ರಸಾದ್, ಸುನೀಲ್, ವಿನಯ್, ಸೌಮ್ಯ ಹೆಗಡೆ, ಜಗದೀಶ್, ಅಮರ್ ಪ್ರಸಾದ್‌, ಶ್ರೀಕಾಂತ್ ಮಾಗಂಟಿ, ಅಬ್ದುಲ್ ಹಕೀಂ, ನಾಗಭೂಷಣ್, ರಂಗನಾಥ್ ಬಾರಧ್ವಾಜ್‌ ಹಾಗೂ ಮಹೇಂದ್ರ ಮಿಶ್ರಾ ಎಂಬುವವರನ್ನು ಆರೋಪಿಗಳನ್ನಾಗಿ ಮಾಡಲಾಗುತ್ತದೆ.

ಸದ್ಯ ದೂರುದಾರರ ಮೊಬೈಲ್ ಸ್ವಿಚ್‌ ಆಫ್‌ ಆಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ.

ದೂರಿನಲ್ಲಿ ಏನಿದೆ?:

ಟಿವಿ 9 ಕರ್ನಾಟಕದಲ್ಲಿ ಭಿತ್ತರವಾಗುತ್ತಿದ್ದ 'ಅಭಿಯಾನ’ವನ್ನು ನಿಲ್ಲಿಸಲು 50 ಲಕ್ಷ ರೂಪಾಯಿಯ ಬೇಡಿಕೆ ವಾಹಿನಿ ಕಡೆಯಿಂದ ಬಂತು ಎಂಬುದು ಆರೋಪ. ‘ಈ ಸಮಯದಲ್ಲಿ ಸಿಬ್ಬಂದಿಗಳು ವಾಹಿನಿಯ ಮುಖ್ಯಸ್ಥ ಮಹೇಂದ್ರ ಮಿಶ್ರಾ ಜತೆ ವಾಟ್ಸಾಪ್‌ ಕರೆಯಲ್ಲಿ ಮಾತನಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟರು. ನಂತರ ಮಾರನೇ ದಿನ ಮಧ್ಯಾಹ್ನ ಟಿವಿ 9 ಸಿಬ್ಬಂದಿಯೊಬ್ಬರ ನಂಬರ್‌ನಿಂದ ಎರಡು ಪ್ರತ್ಯೇಕ ಕರೆಗಳು ಬಂದಿವೆ. ಅಲ್ಲಿಯೂ ಹಣದ ಬೇಡಿಕೆ ಮುಂದಿಡಲಾಗಿದೆ’ ಎಂಬುದನ್ನು ದೂರಿನಲ್ಲಿ ವಿವರಿಸಲಾಗಿದೆ.

ದೂರಿನ ಸಂಕ್ಷಿಪ್ತ ಮಾಹಿತಿ. 
ದೂರಿನ ಸಂಕ್ಷಿಪ್ತ ಮಾಹಿತಿ. 

‘ಸಮಾಚಾರ’ದ ಜತೆ ಮಾತನಾಡಿದ ರಮೇಶ್ ಗೌಡ, “ನಾನು ರಾಜಕಾರಣಿ. ಈವರೆಗೆ ಯಾವುದೇ ಕ್ರಿಮಿನಲ್ ಪ್ರಕರಣಗಳು ನನ್ನ ಮೇಲಿಲ್ಲ. ಹೀಗಿರುವಾಗ ಹಿಂದೆ ಯಾವಾಗಲೋ ನಡೆದು ಹೋದ ರಿಯಲ್ ಎಸ್ಟೇಟ್ ವಿಚಾರವೊಂದನ್ನು ಇಟ್ಟುಕೊಂಡು ತೇಜೋವಧೆಗೆ ಇಳಿದಾಗ ಕೇಳೋಣ ಎಂದು ಕಚೇರಿಯ ಬಳಿ ಹೋಗಿದ್ದೆವು. ಈ ಸಮಯದಲ್ಲಿ 50 ಲಕ್ಷಕ್ಕೆ ಬೇಡಿಕೆ ಇಟ್ಟರು. ಇದು ನಮ್ಮ ಬಳಿ ವಿಡಿಯೋ ಚಿತ್ರೀಕರಣವಾಗಿದೆ. ಮಾರನೇ ದಿನ ಬಂದ ಕರೆಗಳನ್ನೂ ರೆಕಾರ್ಡ್‌ ಮಾಡಿ ಪೊಲೀಸರಿಗೆ ಕೊಟ್ಟಿದ್ದೇವೆ. ಮುಂದಿನ ಕ್ರಮವನ್ನು ಕಾನೂನಿನ ಅಡಿಯಲ್ಲಿ ತನಿಖಾ ಸಂಸ್ಥೆ ಜರುಗಿಸಬೇಕು,’’ ಎಂದರು.

ರಮೇಶ್ ಗೌಡ ಅವರ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಈ ಮೊದಲೇ ಟಿವಿ 5 ಕನ್ನಡ ವಾಹಿನಿ ವರದಿಯೊಂದನ್ನು ಪ್ರಸಾರ ಮಾಡಿದೆ. ಹೀಗಾಗಿ ರಮೇಶ್ ಗೌಡ ವಿರುದ್ಧ ಇದೇ ಮೊದಲನೇ ಮಾಧ್ಯಮ ಸ್ಟೋರಿ ಆಗಿರಲಿಲ್ಲ. ಆದರೆ, ಈ ಬಾರಿ ಸ್ಟೋರಿಗೆ ನಿಲ್ಲದೆ, ಸ್ಟೋರಿ ಹಿಂದೆ ಸುಲಿಗೆಯ ಆರೋಪವೂ ಕೇಳಿಬಂದಿದೆ. ಅದಕ್ಕೆ ಪ್ರಾಥಮಿಕ ಸಾಕ್ಷಿಗಳ ರೂಪದಲ್ಲಿ ಎರಡು ಪ್ರತ್ಯೇಕ ರೆಕಾರ್ಡೆಡ್‌ ಕರೆಗಳು ಹರಿದಾಡುತ್ತಿವೆ.

ರಮೇಶ್ ಗೌಡ ವಿರುದ್ಧ ಇರುವ ಕೆಲವು ದಾಖಲೆಗಳನ್ನು ಟಿವಿ9ಗೆ ಮೂಲಗಳು ನೀಡಿದ್ದವು ಎಂಬುದು ಲಭ್ಯವಾಗುವ ಆಂತರಿಕ ಮಾಹಿತಿ. ಇದೇ ‘ಮೂಲ’ಗಳು ಇದೇ ದಾಖಲೆಗಳ ಸಮೇತ ಇನ್ನೊಂದು ವಾಹಿನಿ ಬಾಗಿಲು ತಟ್ಟಿದ್ದವು. ಆದರೆ ಅಲ್ಲಿ ಸ್ಟೋರಿಗೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಟಿವಿ9ಗೆ ಬಂದು ದಾಖಲೆ ಎಡ ತಾಕಿತ್ತು. ನಂತರ ಅದು ಕಾರ್ಯಕ್ರಮ ರೂಪದಲ್ಲಿ ಪ್ರಸಾರವಾಯಿತು. ಇದನ್ನು ಕಾರ್ಯಕ್ರಮದ ರೂಪದಲ್ಲಿಯೇ ಟಿವಿ 9 ಕರ್ನಾಟಕ ಯಾಕೆ ಪ್ರಸಾರ ಮಾಡಲು ಸಿದ್ದತೆ ಮಾಡಿಕೊಂಡಿತು? ಇದಕ್ಕಾಗಿ ಆರೋಪಿ ಸ್ಥಾನದಲ್ಲಿರುವ ರಮೇಶ್ ಗೌಡ ಸ್ವಯಂ ಪ್ರೇರಣೆಯಿಂದ ಮುಂದೆ ಬಂದರೂ ಯಾಕೆ ಪ್ರತಿಕ್ರಿಯೆ ಪಡೆದುಕೊಳ್ಳಲಿಲ್ಲ? ಎಂಬ ನೈತಿಕ ಪ್ರಶ್ನೆಗಳು ಮೇಲ್ನೋಟಕ್ಕೆ ಹುಟ್ಟುತ್ತವೆ. ಆದರೆ, ಅದೆಲ್ಲವನ್ನೂ ಮೀರಿ, 50 ಲಕ್ಷದ ಬೇಡಿಕೆ, ‘ನಮ್ಮಿಂದಲೇ ಎಂಎಲ್‌ಎ’ ಎಂಬ ಪ್ರಜಾಪ್ರಭುತ್ವ ವಿರೋಧಿ ಆರೋಪಗಳು ವಾಹಿನಿಯ ಸಿಬ್ಬಂದಿಗಳ ಮೇಲೆ ಬಂದಿದೆ. ಇದು ‘ಉತ್ತಮ ಸಮಾಜ’ದ ಟ್ಯಾಗ್‌ ಲೈನ್‌ಗೆ ಅಪಚಾರ ಎಸಗುವ ಆರೋಪ ಕೂಡ.

ಟವಿ9ನದ್ದು ಅಪರಾಧವಾ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡಬೇಕಿದೆ. ತಮ್ಮ ಬಳಿ ವಿಡಿಯೋ ಇದೆ ಎಂದು ಹೇಳಿದರೂ, ರಮೇಶ್ ಗೌಡ ಹಾಗೂ ಟಿವಿ 9 ಸಿಬ್ಬಂದಿ ಜತೆಗಿನ ಮಾತುಕತೆಯಲ್ಲಿ ಎಲ್ಲಿಯೂ ಹಣದ ವಿಚಾರ ಪ್ರಸ್ತಾಪವಾಗುವುದಿಲ್ಲ. ಆದರೆ ಈಗಾಗಲೇ ಹರಿದಾಡುತ್ತಿರುವ ಆಡಿಯೋ ಒಂದರಲ್ಲಿ ಟಿವಿ 9 ಸಿಬ್ಬಂದಿ ಎಂದು ಹೇಳಲಾಗುವ ವ್ಯಕ್ತಿಯೊಬ್ಬ 50 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟ ಮಾತುಗಳು ಲಭ್ಯವಾಗುತ್ತಿವೆ. ಇದರ ಅಸಲಿಯತ್ತು ಕೂಡ ತನಿಖೆಯಿಂದ ಹೊರಬೀಳಬೇಕಿದೆ.

ಈ ಕುರಿತು ಪ್ರತಿಕ್ರಿಯೆಗಾಗಿ ‘ಸಮಾಚಾರ’ ಆರೋಪ ಪಟ್ಟಿಯರಲ್ಲಿರುವ ಟಿವಿ9 ಪತ್ರಕರ್ತರನ್ನು, ಸಿಬ್ಬಂದಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿತು. ಬಹುತೇಕ ಸಂಖ್ಯೆಗಳು ‘ವ್ಯಾಪ್ತಿ ಪ್ರದೇಶ’ದ ಹೊರಗಿದ್ದರೆ, ಇನ್ನು ಕೆಲವರು ಕರೆಯನ್ನು ಸ್ವೀಕರಿಸಲಿಲ್ಲ. ದೂರಿನಲ್ಲಿ ದಾಖಲಾಗಿರುವ ನಂಬರ್‌ಗೆ ಕರೆ ಮಾಡಿದಾಗ, ಮಾತನಾಡುತ್ತಿದ್ದವರು, ಶಿವು ಎಂದು ಗುರುತಿಸಿಕೊಂಡರು. “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಧ್ಯಾಹ್ನ ಕಚೇರಿಗೆ ಹೋದ ನಂತರ ಮಾತನಾಡಿ ಸಂಪೂರ್ಣ ಮಾಹಿತಿ ನೀಡುತ್ತೇನೆ,’’ ಎಂದರು. ಹರಿಪ್ರಸಾದ್‌, ‘ಅರ್ಧ ಗಂಟೆಯ ನಂತರ ಮಾತನಾಡುತ್ತೇನೆ’ ಎಂದರು. ಈ ಎಲ್ಲಾ ಪ್ರತಿಕ್ರಿಯೆ ಬರುತ್ತಿದ್ದಂತೆ ಸ್ಟೋರಿಯನ್ನು ಅಪ್‌ಡೇಟ್ ಮಾಡಲಾಗುವುದು.

ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸುವುದು ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ದಾರಿಗಳಲ್ಲಿ ಒಂದು. ಆದರೆ ವರದಿ ಮಾಡಿದ ಬೆನ್ನಿಗೇ ಸುಲಿಗೆ ಆರೋಪ ಬರುವಂತೆ ಮಾಡಿಕೊಳ್ಳುವುದು ಒಂದು ರೀತಿಯ ‘ಸೆಲ್ಫ್ ಸೂಸೈಡ್’. ಇತ್ತೀಚೆಗಷ್ಟೆ 400 ಕೋಟಿಗೆ ಮಾರಾಟವಾದ ವಾಹಿನಿ, 50 ಲಕ್ಷದ ಲಂಚದ ಆರೋಪದ ಬಗೆಗೆ ಅಧಿಕೃತ ಹೇಳಿಕೆಯೊಂದನ್ನು ನೀಡಬೇಕಾದ ಸಮಯ ಇದು.

Also read: ಶ್ರೀನಿ ರಾಜು, ಪವನ್ ಕಲ್ಯಾಣ್, ಜಗನ್ ಮೋಹನ್ ರೆಡ್ಡಿ ಮತ್ತು ಟಿವಿ9 ಮಾರಾಟದ ಹಿಂದಿನ ವಿವಾದಿತ ಕಥೆ!