samachara
www.samachara.com
ಹನಿಟ್ರ್ಯಾಪ್: ಮಂಗಳೂರಿನ ಪತ್ರಕರ್ತರೇಕೆ ಪೊಲೀಸ್ ಠಾಣೆ ಮೆಟ್ಟಿಲೇರಿದರು? 
ಟಿವಿ

ಹನಿಟ್ರ್ಯಾಪ್: ಮಂಗಳೂರಿನ ಪತ್ರಕರ್ತರೇಕೆ ಪೊಲೀಸ್ ಠಾಣೆ ಮೆಟ್ಟಿಲೇರಿದರು? 

ಒಂದು ಹನಿಟ್ರ್ಯಾಪ್ ಪ್ರಕರಣ, ಧರ್ಮ ರಕ್ಷಣೆಯ ಗುತ್ತಿಗೆ ಪಡೆದವರ ಬ್ಲ್ಯಾಕ್ ಮೇಲೆ ಪುರಾಣ ಹಾಗೂ ಪತ್ರಕರ್ತರ ನಡುವೆ ಅದು ಮೂಡಿಸಿದ ವಿರಸದ ಕತೆ ಇದು. 

Team Samachara

ಹಿಂದು ಮಹಾ ಸಭಾ ಸಂಘಟನೆಯ ಮುಖಂಡನೊಬ್ಬನ ನೇತೃತ್ವದಲ್ಲಿ ನಡೆದ ‘ಹನಿ ಟ್ರ್ಯಾಪ್’ ಪ್ರಕರಣ, ಈಗ ಮಂಗಳೂರಿನ ಪತ್ರಕರ್ತರ ಹಾದಿಬೀದಿ ಕಿತ್ತಾಟಕ್ಕೆ ಎಡೆಮಾಡಿಕೊಟ್ಟಿದೆ.

ಮಂಗಳೂರಿನ ಪಬ್ಲಿಕ್ ಟಿವಿ ವರದಿಗಾರ ಸುಖಪಾಲ್‌ ಪೊಳಲಿ ಹಾಗೂ ಪ್ರಜಾ ಟಿವಿ ವರದಿಗಾರ ಗಿರಿಧರ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ದೂರು ನೀಡಿದಾತ ಮಂಗಳೂರು ಮೂಲದ ‘ಪೊಲೀಸ್ ವಾರ್ತೆ’ ಎಂಬ ವೆಬ್‌ಸೈಟ್‌ ನಡೆಸುವ 26 ವರ್ಷದ ಯುವ ಪತ್ರಕರ್ತ ರಂಜಿತ್ ಮಡಂತ್ಯಾರು.

ಕಡಲ ತಡಿಯಲ್ಲಿ ಪತ್ರಕರ್ತರೇಕೆ ಪೊಲೀಸ್ ಠಾಣೆ ಮೆಟ್ಟಿಲೇರಿದರು ಎಂದು ಹುಡುಕಿಕೊಂಡು ಹೊರಟರೆ, ಒಂದು ಹನಿಟ್ರ್ಯಾಪ್ ಪ್ರಕರಣ, ಧರ್ಮ ರಕ್ಷಣೆಯ ಗುತ್ತಿಗೆ ಪಡೆದವರ ಬ್ಲ್ಯಾಕ್ ಮೇಲೆ ಪುರಾಣ ಹಾಗೂ ಪತ್ರಕರ್ತರ ನಡುವೆ ಅದು ಮೂಡಿಸಿದ ವಿರಸದ ವಿಚಾರ ಹೊರಬೀಳುತ್ತದೆ.

ಅದು ಗುತ್ತಿಗೆದಾರರ ಹನಿಟ್ರ್ಯಾಪ್:

ವಾರದ ಹಿಂದೆ ಮಂಗಳೂರಿನಲ್ಲಿ ವಾಸವಿದ್ದ ಕೇರಳ ಮೂಲದ ಶಶಿ ಎಂಬ 65 ವರ್ಷದ ವ್ಯಕ್ತಿಯೊಬ್ಬರ ಸುತ್ತ ಸುದ್ದಿಯೊಂದು ಹೊರಬಿದ್ದಿತ್ತು. ವೃದ್ಧ ಲೈಂಗಿಕ ತೃಷೆಗಾಗಿ ಯುವತಿಯನ್ನು ಬಳಸಿಕೊಳ್ಳುತ್ತಿದ್ದಾನೆ. ಜತೆಗೆ ಅದನ್ನು ಚಿತ್ರೀಕರಣ ಕೂಡ ಮಾಡಿಕೊಂಡು ಇಟ್ಟುಕೊಂಡಿದ್ದಾನೆ. ಆತನನ್ನು ಲೈಂಗಿಕ ಆಮಿಷ ತೋರಿಸಿ ಕಾರಿನಲ್ಲಿ ಕರೆದುಕೊಂಡು ಬಂದ ಸಮಾಜ ಸೇವಕರು ಟಿವಿ ಕ್ಯಾಮೆರಾಗಳ ಮುಂದೆ ಹೈಡ್ರಾಮಾ ನಡೆಸಿದ್ದರು. ನಂತರ ಬರ್ಕೆ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿತ್ತು. ಆದರೆ ದೂರುದಾರರು ಇಲ್ಲದ ಹಿನ್ನೆಲೆಯಲ್ಲಿ ಗುತ್ತಿಗೆದಾರರಾಗಿದ್ದ ಶಶಿ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ.

ಆದರೆ, ಅಂದು ಮಾಧ್ಯಮಗಳ ಮುಂದೆ ಹೈಡ್ರಾಮ ನಡೆಸಲು ಕರೆದೊಯ್ದ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡೆ ಶ್ರೀಲತಾ, ಹಿಂದೂ ಮಹಾ ಸಭಾದ ಮುಖಂಡ ರಾಜೇಶ್ ಪವಿತ್ರನ್, ಬಿಜೆಪಿ ಕಾರ್ಯಕರ್ತರಾದ ರಾಕೇಶ್ ಮತ್ತು ಸುಜಿತ್ ಎಂಬುವವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಶಶಿ ದೂರು ನೀಡಿದ್ದರು. ಈ ಬಗೆಗೆ ಸೂಕ್ತ ಸಾಕ್ಷ್ಯಾಧಾರಗಳೂ ಸಿಕ್ಕ ಪೊಲೀಸರು ‘ಹನಿಟ್ರ್ಯಾಪ್’ ಪ್ರಕರಣ ದಾಖಲಿಸಿದ್ದರು.

ಕೇರಳ ಮೂಲದ ಶಶಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಾಧ್ಯಮಗಳು ಆತನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ವಿಕೃತ ಕಾಮಿ ಎಂಬಂತೆ ತೋರಿಸಿದ್ದವು. ‘ವೃದ್ಧನೊಬ್ಬನ ಕಾಮ ಪುರಾಣ’ ಎಂಬ ತಲೆಬರಹಗಳು ರಾರಾಜಿಸಿದವು. ಆದರೆ ಪ್ರಕರಣ ಬೆನ್ನಿಗೆ ಬಿದ್ದ ‘ಪೊಲೀಸ್ ವಾರ್ತೆ’ ವೆಬ್‌ಸೈಟ್‌ನ ರಂಜಿತ್, ಇದೊಂದು ಹನಿಟ್ರ್ಯಾಪ್ ಪ್ರಕರಣ ಎಂಬ ಸುದ್ದಿಯನ್ನು ಬ್ರೇಕ್ ಮಾಡಿದರು. ಈ ಸಮಯದಲ್ಲಿ ‘ಪಬ್ಲಿಕ್ ಟಿವಿ’ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಶ್ರೀಲತಾಳ ಫೊಟೋವನ್ನು ಬಳಸಿದರು.

ಹನಿಟ್ರ್ಯಾಪ್: ಮಂಗಳೂರಿನ ಪತ್ರಕರ್ತರೇಕೆ ಪೊಲೀಸ್ ಠಾಣೆ ಮೆಟ್ಟಿಲೇರಿದರು? 

ಫೊಟೋ ಸೌಜನ್ಯದ ನೆಪ:

“ಹನಿಟ್ರ್ಯಾಪ್ ಪ್ರಕರಣವನ್ನು ಸುದ್ದಿ ಮಾಡಿದ್ದ ರಂಜಿತ್ ನಮ್ಮ ಫೊಟೋವನ್ನು ಬಳಸಿದ್ದ. ಸೌಜನ್ಯಕ್ಕೂ ನಮ್ಮ ಹತ್ತಿರ ಕೇಳಲಿಲ್ಲ,’’ ಎನ್ನುತ್ತಾರೆ ಗಿರಿಧರ್ ಶೆಟ್ಟಿ. ಇವರು ಮಾಧ್ಯಮಗಳ ಮತ್ತೊಂದು ಮಾಧ್ಯಮಗಳಿಂದ ಕಂಟೆಂಟ್ ಎತ್ತಿಕೊಳ್ಳುವಾಗ ನೀಡುವ ‘ಸೌಜನ್ಯ’ದ ಕುರಿತು ಮಾತನಾಡುತ್ತಿದ್ದಾರೆ. ಇವತ್ತು ಟಿವಿ ವಾಹಿನಿಗಳು ‘ಸಮಾಚಾರ’ವೂ ಸೇರಿದಂತೆ ಹಲವು ವೆಬ್‌ಸೈಟ್‌ ವರದಿಗಳನ್ನು ಯಥಾವತ್ತಾಗಿ ಬಳಸುತ್ತವೆ. ಸೌಜನ್ಯ ನೀಡುವ ವೃತ್ತಿಪರತೆಯನ್ನು ಅವು ಪ್ರದರ್ಶಿಸಿದ್ದು ಕಡಿಮೆ. ಕನ್ನಡ ಪತ್ರಿಕೋದ್ಯಮದಲ್ಲಿ ಅಂತಹದೊಂದು ಸಂಪ್ರದಾಯವನ್ನು ಮುಖ್ಯವಾಹಿನಿ ಮಾಧ್ಯಮಗಳೇ ಪಾಲಿಸುತ್ತಿಲ್ಲ. ಹೀಗಿರುವಾಗ ‘ಪೊಲೀಸ್ ವಾರ್ತೆ’ ವೆಬ್‌ಸೈಟ್‌ನಿಂದ ಅದನ್ನು ನಿರೀಕ್ಷೆ ಮಾಡಲು ಹೇಗೆ ಸಾಧ್ಯ?

ಆದರೆ ವಿಚಾರ ಬರೀ ಫೊಟೋ ಬಳಕೆಗೆ ಮಾತ್ರವೇ ಸೀಮಿತವಾಗಲಿಲ್ಲ. “ಇದನ್ನು ಕೇಳಲು ರಂಜಿತ್‌ಗೆ ಕರೆ ಮಾಡಿದಾಗ ಆತ ಪೊಲೀಸರಿಗೆ ದೂರು ನೀಡುತ್ತೀನಿ ಅಂದ. ಕೊಡಿ ಹೋಗು ಅಂದೆವು,’’ ಎನ್ನುತ್ತಾರೆ ಗಿರಿಧರ್ ಶೆಟ್ಟಿ.

ಇದಾದ ಮಾರನೇ ದಿನ, ಸೆ. 27ರಂದು ಮಂಗಳೂರಿನ ಕ್ಯಾಂಪ್ಕೋ ಕಚೇರಿಯ ಪತ್ರಿಕಾಗೋಷ್ಠಿ ಮುಗಿಸಿ ಹೊರಬಂದಾಗ ರಂಜಿತ್ ಮೇಲೆ ಗಿರಿಧರ್ ಶೆಟ್ಟಿ ಹಾಗೂ ಸುಖಪಾಲ್ ಪೊಳಲಿ ಅವ್ಯಾಚ್ಯವಾಗಿ ನಿಂದಿಸಿದ್ದಾರೆ. ಜತೆಗೆ ಹಲ್ಲೆ ನಡೆಸಿದ್ದಾರೆ ಎಂದು ದಾಖಲಾದ ದೂರಿನಲ್ಲಿ ಹೇಳಲಾಗಿದೆ. “ಮಾರನೇ ದಿನ ಮಾತುಕತೆ ನಡೆದಿದ್ದು ನಿಜ. ಅದು ಫೊಟೋ ವಿಚಾರಕ್ಕೆ ಹೊರತು ಬೇರೆ ಕಾರಣಕ್ಕೆ ಅಲ್ಲ,’’ ಎನ್ನುತ್ತಾರೆ ಗಿರಿಧರ್.

ಇದಕ್ಕೆ ರಂಜಿತ್ ನೀಡುವ ವಿವರಣೆ ಬೇರೆಯದೇ ಇದೆ. “ಅವರಿಬ್ಬರು ಹಿರಿಯ ಪತ್ರಕರ್ತರು. ಹನಿಟ್ರ್ಯಾಪ್ ಸುದ್ದಿಯನ್ನು ಸಮಾಜ ಸೇವೆ ಅಂತ ಸುದ್ದಿ ಮಾಡಿದ್ದರು. ಹಿಂದೂ ಮಹಾ ಸಭಾ ಮುಖಂಡರ ಪರವಾಗಿ ಸ್ಟೋರಿ ಮಾಡಿದ್ದರು. ಆದರೆ ನಾನು ತನಿಖೆ ನಡೆಸಿ, ಪೊಲೀಸ್ ಮೂಲಗಳ ಮಾಹಿತಿ ಪಡೆದು ನಿಜಕ್ಕೂ ನಡೆದಿದ್ದು ಏನು ಅಂತ ಬರೆದೆ. ಅದು ಅವರನ್ನು ಕೆರಳಿತು. ನನ್ನ ಮೇಲೆ ಹಲ್ಲೆ ನಡೆಸಿದರು,’’ ಎನ್ನುತ್ತಾರೆ ರಂಜಿತ್.

ಪತ್ರಕರ್ತರ ವಿರುದ್ಧ ದಾಖಲಾದ ದೂರು. 
ಪತ್ರಕರ್ತರ ವಿರುದ್ಧ ದಾಖಲಾದ ದೂರು. 

ಇದು ಇಗೋ ಪ್ರಶ್ನೆ:

“ಮಂಗಳೂರಿನ ಪತ್ರಿಕೋದ್ಯಮ ತೀರ ಹದಗೆಟ್ಟು ಹೋಗಿದೆ. ಸುಖಪಾಲ್ ಪೊಳಲಿ ಬಗ್ಗೆ ಈ ಹಿಂದೆಯೇ ಹಲವು ಆರೋಪಗಳು ಬಂದಿವೆ. ಆದರೆ ಅವರ ವಾಹಿನಿಯ ಮುಖ್ಯಸ್ಥರು ಈ ಬಗ್ಗೆ ಗಮನ ಹರಿಸಿದಂತೆ ಕಾಣಿಸುತ್ತಿಲ್ಲ. ಹೀಗಿರುವಾಗ ಅವರ ಸ್ಟೋರಿಗೆ ವಿರುದ್ಧ ಯುವ ಪತ್ರಕರ್ತನೊಬ್ಬ ಸುದ್ದಿ ಬರೆದಾಗ ಅವರ ಇಗೋ ಹರ್ಟ್‌ ಆದ ಹಾಗಿದೆ. ಅವರ ಉಡಾಳತನ ಎಷ್ಟಿದೆ ಎಂದರೆ, ಹಲ್ಲೆ ಮಾಡಲು ಮುಂದಾಗಿದ್ದಾರೆ. ಈಗಲಾದರೂ ಇವರ ವರ್ತನೆಗಳ ಬಗ್ಗೆ ಪಬ್ಲಿಕ್ ಟಿವಿಯ ಆಡಳಿತ ಮಂಡಳಿ ಗಮನಹರಿಸಬೇಕು,’’ ಎನ್ನುತ್ತಾರೆ ಜಿಲ್ಲೆಯ ಹಿರಿಯ ವರದಿಗಾರರೊಬ್ಬರು.

ಪ್ರಕರಣದ ಎಲ್ಲರನ್ನೂ ಹತ್ತಿರದಿಂದ ಬಲ್ಲ ಇವರು, “ಪತ್ರಕರ್ತರ ವೃತ್ತಿಯ ಘನತೆಯನ್ನು ಇವರೆಲ್ಲಾ ಸೇರಿ ಕಡಿಮೆ ಮಾಡುತ್ತಿದ್ದಾರೆ ಹೊರತು ಬೇರೆ ಏನೂ ಅಲ್ಲ,’’ ಎಂದು ಘಟನೆಯನ್ನು ವ್ಯಾಖ್ಯಾನಿಸುತ್ತಾರೆ. ಸದ್ಯ ಸಕಾರವಾಗಿ ಟ್ರಾಲ್‌ಗಳ ದಾಳಿಗೆ ಗುರಿಯಾಗಿರುವ ಎಚ್. ಆರ್. ರಂಗನಾಥ್ ಗಮನಿಸಬೇಕಿದೆ.

Also read: ಪುಟ್ಟಗೌರಿ ಹಾದಿಯಲ್ಲಿ ಹಿರಿಯ ಪತ್ರಕರ್ತ ಎಚ್. ಆರ್. ರಂಗನಾಥ್!