ನಿತ್ಯ ಪೂಜೆ ಭಟ್ಟರ ಶಾಸ್ತ್ರ ಕೇಳಿ ‘ಕಸ್ತೂರಿ ವಾಹಿನಿ’ಯ ವಾಸ್ತು ಬದಲಾವಣೆ!
ಟಿವಿ

ನಿತ್ಯ ಪೂಜೆ ಭಟ್ಟರ ಶಾಸ್ತ್ರ ಕೇಳಿ ‘ಕಸ್ತೂರಿ ವಾಹಿನಿ’ಯ ವಾಸ್ತು ಬದಲಾವಣೆ!

ಎಚ್.ಡಿ. ಕುಮಾರಸ್ವಾಮಿ ಸಿಎಂ ಆದ ದಿನದಿಂದಲೂ ದೇವರು- ದೇವಸ್ಥಾನಗಳಿಗೆ ಸುತ್ತುವುದು ನಿಂತಿಲ್ಲ. ಅವರ ಈ ನಂಬಿಕೆ ತಮ್ಮ ಒಡೆತನದಲ್ಲಿರುವ ವಾಹಿನಿಯ ಕಚೇರಿ ಬದಲಾವಣೆಗೂ ಕಾರಣವಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. 

ಸಿಎಂ ಕುಮಾರಸ್ವಾಮಿ ಕುಟುಂಬದ ಒಡೆತನದಲ್ಲಿರುವ ಕಸ್ತೂರಿ ಟಿವಿ ಹಾಗೂ ಕಸ್ತೂರಿ ನ್ಯೂಸ್ 24ಗಳು ಸದ್ಯದಲ್ಲಿಯೇ ಕಸ್ತೂರ್‌ ಬಾ ರಸ್ತೆಯಿಂದ ಉತ್ತರ ಹಳ್ಳಿಗೆ ಶಿಫ್ಟ್ ಅಗಲಿವೆ. ಇದಕ್ಕೆ ಕಾರಣ ಮತ್ತದೇ ‘ವಾಸ್ತು ಸಮಸ್ಯೆ’.

ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ದಿನದಿಂದ ರಾಜ್ಯದ ಜನ ಟಿವಿ ಪರದೆಗಳ ಮೇಲೆ ಗುಡಿ- ಗುಂಡಾರಗಳ ದರ್ಶನವನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಅವರ ಕುಟುಂಬದ ಧಾರ್ಮಿಕ ನಂಬಿಕೆಗಳು ಹಿಂದೆ ಯಾವತ್ತೂ ಇಲ್ಲದಷ್ಟು ಪ್ರಚಾರದಲ್ಲಿವೆ. ಅವರ ನಂಬಿಕೆಗಳು ಅವರ ಉದ್ಯಮದಲ್ಲಿಯೂ ಬದಲಾವಣೆಗೆ ಕಾರಣವಾಗುತ್ತಿವೆ.

ಕುಮಾರಸ್ವಾಮಿ ಅವರ ಆಪ್ತ ಮೂಲಗಳ ಪ್ರಕಾರ, “ಕಮಲಾಕರ ಭಟ್ಟರ ಮಾತಿನಂತೆ ಕಸ್ತೂರಿ ಟಿವಿ ಹಾಗೂ ಕಸ್ತೂರಿ ನ್ಯೂಸ್ 24 ಕಚೇರಿಗಳನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆ. ಉತ್ತರಹಳ್ಳಿಯಲ್ಲಿ ಹೊಸ ಕಟ್ಟಡವೊಂದನ್ನು ಅದಕ್ಕಾಗಿಯೇ ಖರೀದಿಸಿದ್ದಾರೆ. ಅಲ್ಲಿ ಪೂಜೆಯೂ ಮುಗಿದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ 20 ಅಥವಾ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಎರಡೂ ವಾಹಿನಿಗಳ ಕಾರ್ಯಾಚರಣೆ ಹೊಸ ಕಚೇರಿಯಿಂದ ನಡೆಯಲಿದೆ.’’

ಕಸ್ತೂರಿ ಟಿವಿ ಮನೋರಂಜನಾ ವಾಹಿನಿ ರೂಪದಲ್ಲಿ 2007ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಆರಂಭವಾಯಿತು. ಆ ಸಮಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅಂದಿನ 20-20 ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಬೆಂಗಳೂರಿನ ಎಂ. ಜಿ. ರಸ್ತೆಗೆ ಅಂಟಿಕೊಂಡಿರುವ ಕಸ್ತೂರ್‌ ಬಾ ರಸ್ತೆಯಲ್ಲಿ ವಾಹಿನಿಗೆ ಚಾಲನೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಕಸ್ತೂರಿ ನ್ಯೂಸ್ 24 ಹೆಸರಿನಲ್ಲಿ ಸುದ್ದಿ ವಾಹಿನಿಯೊಂದನ್ನು ಆರಂಭಿಸಿದರು ಕುಮಾರಸ್ವಾಮಿ. ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕಸ್ತೂರಿ ಟಿವಿ ಆಗಲೀ, ಕಸ್ತೂರಿ ನ್ಯೂಸ್ 24 ಆಗಲಿ ಹೆಚ್ಚು ಜನರಿಗೆ ತಲುಪುತ್ತಿಲ್ಲ. ಅವುಗಳ ರೇಟಿಂಗ್ ಮೇಲಕ್ಕೆ ಏರುತ್ತಿಲ್ಲ. ಸಂಪಾದಕೀಯ ವಿಭಾಗದಲ್ಲಿ ಹಲವು ಬದಲಾವಣೆಗಳನ್ನು ಮಾಡಿದರೂ ಫಲ ಮಾತ್ರ ಕಾಣಿಸುತ್ತಿಲ್ಲ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ವಾಹಿನಿಗಳ ದೆಸೆ ಬದಲಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಕುಟುಂಬ ಶಾಸ್ತ್ರದ ಮೊರೆ ಹೋಗಿದೆ.

“ದೇವೇಗೌಡರ ಕುಟುಂಬ ನಂಬುವ ಹಲವು ಜ್ಯೋತಿಷಿಗಳಲ್ಲಿ ಕಮಲಾಕರ ಭಟ್ಟರು ಕೂಡ ಒಬ್ಬರು. ಅವರ ಮಾತಿನ ಪ್ರಕಾರ ಕಚೇರಿಯ ವಾಸ್ತು ಸರಿ ಇಲ್ಲದ ಕಾರಣ ವಾಹಿನಿಗಳು ಏಳಿಗೆ ಕಾಣಿಸುತ್ತಿಲ್ಲ. ಹೀಗಾಗಿ ಹೊಸ ಕಚೇರಿಗೆ ಸ್ಥಳಾಂತರ ಮಾಡುವುದು ಒಳ್ಳೆಯದು ಎಂಬ ಸಲಹೆ ಬಂತು,’’ ಎಂದು ವಿವರಿಸುತ್ತಾರೆ ಅನಿತಾ ಕುಮಾರಸ್ವಾಮಿ ಅವರ ಆಪ್ತರೊಬ್ಬರು.

ಸಮಸ್ಯೆ ಇರುವುದೇನೋ ನಿಜ, ಆದರೆ ಅದಕ್ಕೆ ಕಚೇರಿ ಸ್ಥಳಾಂತರ ಪರಿಹಾರ ಅಲ್ಲ ಅನ್ನುತ್ತಾರೆ ಕಸ್ತೂರಿ ನ್ಯೂಸ್ 24ನ ಹಿರಿಯ ಸಿಬ್ಬಂದಿಯೊಬ್ಬರು. ಹಲವು ವರ್ಷಗಳಿಂದ ವಾಹಿನಿಯಲ್ಲಿ ದುಡಿಯುತ್ತಿರುವ ಅವರು ರೇಟಿಂಗ್ ಸಮಸ್ಯೆಗೆ ಆಂತರಿಕ ಸಮಸ್ಯೆಗಳನ್ನು ಮುಂದಿಡುತ್ತಾರೆ. “ಯಾವುದೇ ವಾಹಿನಿ ರೇಟಿಂಗ್ ಬರಬೇಕು ಎಂದರೆ ಕನೆಕ್ಟಿವಿಟಿ ಇರಬೇಕು. ಡೆನ್, ಹಾಥ್ ವೇ ತರಹದ ಎಂಎಸ್‌ಓಗಳನ್ನು ಬಿಟ್ಟರೆ ಬೇರೆ ಕಡೆಗಳಲ್ಲಿ ಕಸ್ತೂರಿ ನ್ಯೂಸ್ 24 ಆಗಲೀ, ಕಸ್ತೂರಿ ಟಿವಿ ಆಗಲಿ ಬರುತ್ತಿಲ್ಲ. ಇದರಿಂದ ಏನೇ ಕಂಟೆಂಟ್ ಕೊಟ್ಟರೂ ಟಿಆರ್‌ಪಿ ಏರುತ್ತಿಲ್ಲ. ಈ ಕಾರಣಕ್ಕಾಗಿಯೇ ಹಲವರು ಸಂಪಾದಕರ ಸ್ಥಾನವನ್ನು ತಿರಸ್ಕರಿಸಿದ್ದಾರೆ,’’ ಎನ್ನುತ್ತಾರೆ ಅವರು.

ವಾಹಿನಿಯ ರೇಟಿಂಗ್‌ ಹಾಗೂ ಏಳಿಗೆಗೆ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದ ಅಗತ್ಯವನ್ನು ಅಲ್ಲಿನ ಸಿಬ್ಬಂದಿಗಳು ಮುಂದಿಡುತ್ತಾರೆ. ಆದರೆ “ನಮ್ಮ ಮಾನವ ಸಂಪನ್ಮೂಲ ವಿಭಾಗ ಮಾತ್ರ ವ್ಯವಸ್ಥಾಪಕ ನಿರ್ದೇಶಕರಿಗೆ ದಿಕ್ಕು ತಪ್ಪಿಸುತ್ತಿದೆ. ಕನೆಕ್ಟಿವಿಟಿ ಬಗ್ಗೆ ಅವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರಿಂದಾಗಿ ಸಂಪಾದಕೀಯ ವಿಭಾಗದ ಹೊಣೆಯನ್ನು ಯಾರೂ ಹೆಚ್ಚು ದಿನ ಹೊತ್ತುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿರಂತರತೆ ಇಲ್ಲದ ಕಾರಣಕ್ಕೆ ರೇಟಿಂಗ್ ಸೊರಗುತ್ತಿದೆ,’’ ಎಂದು ಅವರುಗಳು ವಿವರಿಸುತ್ತಾರೆ.

ಆದರೆ, ಆಡಳಿತ ಮಂಡಳಿ ಇಲ್ಲಿಯೂ ವಾಸ್ತು ಸಮಸ್ಯೆಯನ್ನು ಕಂಡುಕೊಂಡಿದೆ. ಇದಕ್ಕಾಗಿ ಈಗ ಕಚೇರಿಯನ್ನೇ ಸ್ಥಳಾಂತರಿಸಲು ಹೊರಟಿದೆ. ಜ್ಯೋತಿಷಿಗಳ ಮಾತು ಕೇಳಿಕೊಂಡು ಅಧಿಕೃತ ನಿವಾಸಕ್ಕೆ ಕಾಲಿಡದ ಸಿಎಂ ಕುಮಾರಸ್ವಾಮಿ ಹಾಗೂ ಅವರ ಕುಟುಂಬದಿಂದ ಇದಕ್ಕಿಂತ ಹೆಚ್ಚಿನದೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಕೂಡ. ಎತ್ತಿಗೆ ಜ್ವರ ಬಂದಾಗ ಬರೆ ಬೀಳುವುದು ಎಮ್ಮೆಗೇ ಎಂಬುದನ್ನು ಸಿಬ್ಬಂದಿಗಳು ಅರ್ಥ ಮಾಡಿಕೊಳ್ಳಬೇಕಿದೆ, ಅಷ್ಟೆ.