samachara
www.samachara.com
ಬಾಗಿಲು ಮುಚ್ಚಿದ ಬೂಬಮ್ಮನ ‘ಸ್ವರಾಜ್ ಎಕ್ಸ್‌ಪ್ರೆಸ್’; ಆಡುಗೋಡಿಯಲ್ಲಿ ದೂರು ದಾಖಲು
ಟಿವಿ

ಬಾಗಿಲು ಮುಚ್ಚಿದ ಬೂಬಮ್ಮನ ‘ಸ್ವರಾಜ್ ಎಕ್ಸ್‌ಪ್ರೆಸ್’; ಆಡುಗೋಡಿಯಲ್ಲಿ ದೂರು ದಾಖಲು

ಕಂಪನಿಯು ಕಳೆದ ಎರಡು ತಿಂಗಳು ಸಂಬಳ ನೀಡದೆ, ಯಾವುದೇ ಮುನ್ಸೂಚನೆಯನ್ನೂ ನೀಡದೆ ಬಾಗಿಲು ಮುಚ್ಚಿದೆ. ನ್ಯಾಯ ಕೊಡಿಸಿ ಎಂದು ಸಿಬ್ಬಂದಿಗಳು ದೂರು ದಾಖಲಿಸಿದ್ದಾರೆ.

ಕರ್ನಾಟಕದ ಸುದ್ದಿ ವಾಹಿನಿಗಳು ಸಮ್ಮಿಶ್ರ ಸರಕಾರ ಬೀಳಿಸಲು ಗುತ್ತಿಗೆ ಪಡೆದುಕೊಂಡಿವೆ ಎಂಬ ಆರೋಪ ಹೊತ್ತ ಸಮಯದಲ್ಲೇ, ನ್ಯೂಸ್ ಚಾನಲ್ ಒಂದು ಬಾಗಿಲು ಎಳೆದುಕೊಂಡಿದೆ.

ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾದ ಸಮಯದಲ್ಲಿ ಆರಂಭಗೊಂಡಿದ್ದ ‘ಸ್ವರಾಜ್ ಎಕ್ಸ್‌ಪ್ರೆಸ್’ ವಾಹಿನಿ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಸಲಾರ್‌ಪುರಿಯಾ ಕಟ್ಟಡದಲ್ಲಿ 2018ರ ಆರಂಭದಲ್ಲಿ ವಾಹಿನಿ ಕಾರ್ಯಾರಂಭ ಮಾಡಿತ್ತು.

‘ಸ್ವರಾಜ್ ಎಕ್ಸ್‌ಪ್ರೆಸ್’ ವಾಹಿನಿ ಹೈದ್ರಾಬಾದ್ ಮೂಲದ ಟಿಟಿಸಿ ನ್ಯೂಸ್ ಅಂಡ್ ಹೀರಾ ರೀಟೈಲ್ ಎಂಬ ಹೆಸರಿನ ಕಂಪನಿಯ ಭಾಗವಾಗಿತ್ತು. ಇದನ್ನು ಉದ್ಯಮಿ, ರಾಜಕಾರಣಿ ನೌಹೀರಾ ಶೇಖ್ ಮುನ್ನಡೆಸುತ್ತಿದ್ದರು. ಇದೀಗ ಕಂಪನಿಯು ಕಳೆದ ಎರಡು ತಿಂಗಳು ಸಂಬಳ ನೀಡದೆ, ಯಾವುದೇ ಮುನ್ಸೂಚನೆಯನ್ನೂ ನೀಡದೆ ಬಾಗಿಲು ಮುಚ್ಚಿದೆ. ನ್ಯಾಯ ಕೊಡಿಸಿ ಎಂದು ಸಿಬ್ಬಂದಿಗಳು ದೂರು ದಾಖಲಿಸಿದ್ದಾರೆ. ‘ಸಮಾಚಾರ’ಕ್ಕೆ ಲಭ್ಯ ದಾಖಲೆಗಳ ಪ್ರಕಾರ, ‘ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಇದೇ ತಿಂಗಳ 11ನೇ ತಾರೀಖು ದೂರು ದಾಖಲುಗೊಂಡಿದೆ. ನೌಹೀರಾ ಶೇಖ್ ಪ್ರಮುಖ ಆರೋಪಿಯಾಗಿದ್ದರೆ, ಪತ್ರಕರ್ತರಾದ ಸಮೀಉಲ್ಲಾ, ನಾಝಿಯಾ ಕೌಸರ್ ಸೇರಿದಂತೆ ಒಟ್ಟು ಐದು ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ದೂರಿನಲ್ಲಿ ಸುಮಾರು 200 ಸಿಬ್ಬಂದಿಗಳನ್ನು ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿ. 
ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿ. 

ಅದು ಚುನಾವಣೆಯ ಕಾವೇರಿದ್ದ ದಿನಗಳು. ಕರ್ನಾಟಕದ ಬಸ್‌ಗಳ ಮೇಲೆ, ರಸ್ತೆ ಬದಿಯ ಹೋರ್ಡಿಂಗ್‌ಗಳ ಮೇಲೆ, ಟಿವಿ ಪರದೆಯ ಮೇಲೆ ಹೊಸ ಮುಖವೊಂದು ಕಾಣಿಸಿಕೊಳ್ಳಲು ಆರಂಭಿಸಿತ್ತು. ಅದು ಆಂಧ್ರ ಮೂಲಕ ಉದ್ಯಮಿ ನೌಹೀರಾ ಶೇಖ್‌ ಅವರದ್ದಾಗಿತ್ತು. ನೌಹೀರಾ ಚುನಾವಣೆಗೂ ಮುನ್ನ ಹೊಸ ಪಕ್ಷವೊಂದನ್ನು ಕರ್ನಾಟಕದ ಜನರಿಗೆ ಪರಿಚಿಯಿಸಿದರು. ಎಂಇಪಿ ಹೆಸರಿನಲ್ಲಿ ಸುಮಾರು 100 ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಯಿತು. ಸಾಲದು ಎಂಬಂತೆ, ತಮ್ಮ ಪಕ್ಷದ ಪ್ರಚಾರಕ್ಕಾಗಿಯೇ ‘ಸ್ವರಾಜ್ ಎಕ್ಸ್‌ಪ್ರೆಸ್’ ಎಂಬ ಸುದ್ದಿ ವಾಹಿನಿಯನ್ನು ಆರಂಭಿಸಿದರು ಶೇಖ್.

ಸುದ್ದಿ ವಾಹಿನಿಯ ಹೊಣೆ ಹೊತ್ತವರು ಹಿರಿಯ ಪತ್ರಕರ್ತ ಸಮೀಉಲ್ಲಾ. ಅವರ ನೇತೃತ್ವದಲ್ಲಿ ನಾಝಿಯಾ ಕೌಸರ್ ಮತ್ತಿತರ ಪತ್ರಕರ್ತರ ತಂಡ ವಾಹಿನಿಯ ಕಾರ್ಯಾಚರಣೆಯನ್ನು ಆರಂಭಿಸಿತು. “ಆರಂಭದಲ್ಲಿ ಆಕರ್ಷಕ ಸಂಬಳ ನೀಡಿದ್ದರು. ಆದರೆ ನಂತರದ ದಿನಗಳಲ್ಲಿ ಸಂಬಳ ಬರುವುದು ನಿಂತು ಹೋಯಿತು. ಕೊನೆಗೊಂದು ದಿನ ಹೇಳದೆ ಕೇಳದೆ ವಾಹಿನಿಯನ್ನೇ ಬಂದ್ ಮಾಡಿದರು. ಇವತ್ತು ಸ್ವರಾಜ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಯಾವುದೋ ರೆಕಾರ್ಡಿಂಗ್ ಪ್ರೋಗ್ರಾಂ ಓಡುತ್ತಿರುತ್ತದೆ,’’ ಎನ್ನುತ್ತಾರೆ ದೂರುದಾರ, ಪತ್ರಕರ್ತ ಮುತ್ತುರಾಜ್.

ಸುಮಾರು 200ರಷ್ಟು ಪತ್ರಕರ್ತರು ಹಾಗೂ ಸಿಬ್ಬಂದಿಗಳು ಕೆಲಸ ಕಳೆದುಕೊಂಡಿದ್ದಾರೆ. ಪಿಎಫ್ ಸೇರಿದಂತೆ ಯಾವುದೇ ಭದ್ರತೆಯೂ ಇಲ್ಲದೆ, ಜತೆಗೆ ಕಳೆದ ಎರಡು ತಿಂಗಳು ಸಂಬಳವೂ ಇಲ್ಲದೆ ಅವರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಹಿನಿಯನ್ನು ಆರಂಭಿಸಿದ ಶೇಖ್ ಆಗಲೀ, ಅದರ ಸಂಪಾದಕೀಯ ಹೊಣೆ ಹೊತ್ತವರಾಗಲೀ ಈಗ ಕೈಗೆ ಸಿಗುತ್ತಿಲ್ಲ ಎಂಬುದು ಸಿಬ್ಬಂದಿಗಳ ಆರೋಪ. ಆ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಯಿತು ಎಂಬ ಮಾಹಿತಿ ಸಿಗುತ್ತದೆ.

ಅಲ್ಪಸಂಖ್ಯಾತರ ವಾಹಿನಿ:

‘ಸ್ವರಾಜ್ ಎಕ್ಸ್‌ಪ್ರೆಸ್’ ಆರಂಭವಾದಾಗ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಏಕೈಕ ವಾಹಿನಿ ಇದು ಎಂದು ಬಿಂಬಿಸುವ ಪ್ರಯತ್ನವೊಂದು ನಡೆದಿತ್ತು. “ಎಲ್ಲಾ ಬ್ರಾಹ್ಮಣರೇ ತುಂಬಿ ಹೋಗಿರುವ ಕನ್ನಡ ಮಾಧ್ಯಮದಲ್ಲಿ ಮುಸ್ಲಿಂ ಪತ್ರಕರ್ತರನ್ನು ಬೆಳೆಸುವುದು ನಮ್ಮ ಹೊಣೆಗಾರಿಕೆ. ಒಳ್ಳೆಯ ಸಂಬಳವನ್ನೂ ನೀಡುತ್ತಿದ್ದೇವೆ,’’ ಎಂದು ಇದರ ಸಂಪಾದಕೀಯ ವಿಭಾಗದ ಹೊಣೆ ಹೊತ್ತವರು ಹೇಳಿಕೊಂಡಿದ್ದರು. ಪೂರಕವಾಗಿ ಮುಸ್ಲಿಂ ಸಮುದಾಯದ ಪ್ರತಿನಿಧಿ ಪಕ್ಷವೊಂದರ ಪದಾಧಿಕಾರಿಗಳು ವಾಹಿನಿ ಬೆನ್ನಿಗೆ ನಿಂತಿದ್ದರು.

ಆದರೆ, ವಾಹಿನಿಗೆ ಬಂಡವಾಳ ಹೂಡಿದ ಶೇಖ್ ಬಗೆಗೆ ಹಲವು ಆರೋಪಗಳಿದ್ದವು. ಆಕೆ ಹಿನ್ನೆಲೆಯ ಕುರಿತು ‘ಸಮಾಚಾರ’, ಉದ್ಯಮ, ಹವಾಲಾ, ಮಹಿಳಾ ಸಬಲೀಕರಣ’: ರಾಜಕೀಯ ಅಖಾಡದ ಹೊಸ ಮುಖ ನೌಹೀರಾ ಶೇಖ್‌ ಎಂಬ ವಿಸ್ತೃತ ವರದಿಯೊಂದನ್ನು ಪ್ರಕಟಿಸಿತ್ತು.

ಇವತ್ತಿಗೆ ಅತ್ತ ಅಲ್ಪಸಂಖ್ಯಾತರ ವಾಹಿನಿಯೂ ಆಗದೆ, ಇತ್ತ ಸುದ್ದಿ ವಾಹಿನಿ ಆಗಿಯೂ ಬೆಳೆಯದೆ ಬಾಗಿಲು ಎಳೆದುಕೊಂಡಿದೆ ‘ಸ್ವರಾಜ್ ಎಕ್ಸ್‌ಪ್ರೆಸ್’. ಇದರಿಂದ ದೊಡ್ಡ ಮಟ್ಟದಲ್ಲಿ ತೊಂದರೆಗೆ ಸಿಲುಕಿರುವವರು ಸಿದ್ಧಾಂತವನ್ನು ನಂಬಿಕೊಂಡು ಹೋದ ಪತ್ರಕರ್ತರು ಹಾಗೂ ಸಿಬ್ಬಂದಿಗಳು.

“ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಬೇಕು ಎಂಬುದು ಆಡಳಿತ ಮಂಡಳಿಯ ತೀರ್ಮಾನವಾಗಿತ್ತು. ಹಣಕಾಸಿನ ವಿಚಾರದಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದರು. ತಿಂಗಳ ಖರ್ಚು ವೆಚ್ಚಗಳನ್ನು ಕಡಿತಗೊಳಿಸಲು ಅವರು ಮುಂದಾದರು. ಅದೇ ಸಮಯದಲ್ಲಿ ಪರವಾನಗಿಗಾಗಿ ಮಾಡಿಕೊಂಡ ಒಪ್ಪಂದವೂ ರದ್ಧಾಗಿದೆ ಎಂಬುದು ಇತ್ತೀಚೆಗೆ ಗೊತ್ತಾಯಿತು. ವಾಹಿನಿಯನ್ನು ಸ್ಥಗಿತಗೊಳಿಸುವುದು ಆಡಳಿತ ಮಂಡಳಿಯ ತೀರ್ಮಾನ,’’ ಎನ್ನುತ್ತಾರೆ ಸ್ವರಾಜ್ ಎಕ್ಸ್‌ಪ್ರೆಸ್‌ನ ಎಡಿಟರ್ ಇನ್ ಚೀಫ್ ಆಗಿದ್ದ ಸಮೀಉಲ್ಲಾ.

‘ಸಮಾಚಾರ’ದ ಜತೆ ಮಾತನಾಡಿದ ಅವರು, ಅವರ ಮೇಲೆ ದಾಖಲಾದ ದೂರಿನ ಕುರಿತು ಅಚ್ಚರಿ ವ್ಯಕ್ತಪಡಿಸಿದರು. “ನಾನು ಸಂಪಾದಕೀಯ ವಿಭಾಗದ ಹೊಣೆ ಹೊತ್ತವನು. ಚಿಕ್ಕ ಪತ್ರಿಕೆಯಿಂದ ನನ್ನ ವೃತ್ತಿ ಬದುಕು ಆರಂಭಿಸಿ ಇಷ್ಟು ವರ್ಷಗಳ ಕಾಲ ಪತ್ರಿಕೋದ್ಯಮ ಮಾಡಿಕೊಂಡು ಬಂದವನು. ಪಿಎಫ್ ವಿಚಾರಕ್ಕೆ ನನ್ನ ಎಳೆದು ತಂದರೆ ಏನು ಹೇಳಲು ಸಾಧ್ಯ. ಆಗದವರು ಅನಾವಶ್ಯಕವಾಗಿ ನನ್ನ ಸುತ್ತ ವಿವಾದ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ,’’ ಎಂದು ಅವರು ವಿವರಿಸಿದರು.

ಸದ್ಯ ಕೆಲಸ ಕಳೆದುಕೊಂಡಿರುವ ಸ್ವರಾಜ್ ಎಕ್ಸ್‌ಪ್ರೆಸ್ ಸಿಬ್ಬಂದಿಗಳ ಬಗೆಗೆ ಕಾಳಜಿ ವ್ಯಕ್ತಪಡಿಸಿದ ಸಮೀಉಲ್ಲಾ, “ನಾನು ಪತ್ರಕರ್ತ. ನನ್ನ ಸಮುದಾಯದ ಬಗ್ಗೆ ನನಗೆ ಮಮಕಾರ, ಕಾಳಜಿ ಇದೆ. ಈಗ ಕೆಲಸ ಇಲ್ಲದವರಿಗೆ ಏನಾದರೂ ಮಾಡಬೇಕು. ಅದನ್ನು ಬಿಟ್ಟು ವಿವಾದ ಮಾಡಿಕೊಂಡು ಕುಳಿತರೆ ಯಾರಿಗೂ ಉಪಯೋಗವಿಲ್ಲ,’’ ಎಂದರು.

ಒಟ್ಟಾರೆ, ವರ್ಷ ತುಂಬುವ ಮೊದಲೇ ಸ್ವರಾಜ್ ಎಕ್ಸ್‌ಪ್ರೆಸ್ ಸ್ಥಗಿತಗೊಂಡಿದೆ. ಸಿಬ್ಬಂದಿಗಳು ಕಷ್ಟದಲ್ಲಿದ್ದಾರೆ. ಸುದ್ದಿ ವಾಹಿನಿ ವ್ಯವಹಾರ ಕಷ್ಟ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಅಪಾಯಕಾರಿಯಾಗಿಯೂ ಪರಿಣಮಿಸುತ್ತಿದೆ. ಇಂತಹ ಎಚ್ಚರಿಕೆ ಗಂಟೆಗಳನ್ನು ಕರ್ನಾಟಕದ ಪತ್ರಿಕೋದ್ಯಮ ಹೇಗೆ ಎದುರುಗೊಳ್ಳುತ್ತದೆ ಎಂಬುದರ ಮೇಲೆ ಭವಿಷ್ಯ ನಿಂತಿದೆ.