samachara
www.samachara.com
ಪತ್ರಕರ್ತರೊಬ್ಬರ ರಾಜೀನಾಮೆ ಮತ್ತು ನೀಡಿದ ‘ಸಕಾರಣ’ಗಳ ಸುತ್ತ...
ಟಿವಿ

ಪತ್ರಕರ್ತರೊಬ್ಬರ ರಾಜೀನಾಮೆ ಮತ್ತು ನೀಡಿದ ‘ಸಕಾರಣ’ಗಳ ಸುತ್ತ...

ಪತ್ರಕರ್ತರು ರಾಜೀನಾಮೆ ನೀಡುವುದು, ವೃತ್ತಿ ತೊರೆಯುವುದು ಸಾಮಾನ್ಯ ವಿಚಾರ. ಆದರೆ, ಅದಕ್ಕೆ ನೀಡುವ ಕಾರಣಗಳೇ ಕೆಲವೊಮ್ಮೆ ಸುದ್ದಿಯಾಗುತ್ತವೆ. ಕರ್ನಾಟಕದಲ್ಲಿ ನಡೆದಿರುವುದು ಅದೇ...

ಪ್ರಾಕೃತಿಕ ವಿಕೋಪ ಪೀಡಿತ ಕೇರಳದಲ್ಲಿ ಪತ್ರಕರ್ತರೊಬ್ಬರು ತಮ್ಮ ಮಗಳ ನಿಶ್ಚಿತಾರ್ಥವನ್ನು ಮುಂದೂಡಿ ಅದರ ಹಣವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಸುದ್ದಿಯಾಗಿದ್ದಾರೆ. ಸಿಪಿಐಎಂನ ಮುಖವಾಣಿ ದೇಶಾಭಿಮಾನಿಯ ಸ್ಥಾನಿಕ ಸಂಪಾದಕ ಮನೋಜ್ ಪುತ್ರಿಯ ನಿಶ್ಚಿತಾರ್ಥ ವಕೀಲ ಗೋಕುಲ್‌ ಪುತ್ರ ಸುಧಾಕರನ್‌ ಜತೆ ಇದೇ ಭಾನುವಾರ ಆಗಸ್ಟ್‌ 19ರಂದು ಕಣ್ಣೂರಿನಲ್ಲಿ ನೆರವೇರಬೇಕಿತ್ತು. ಇದೀಗ ಅವರು ತಮ್ಮ ಬೀಗರ ಕುಟುಂಬದ ಜತೆ ಮಾತನಾಡಿ ನಿಶ್ಚಿತಾರ್ಥವನ್ನು ರದ್ದುಗೊಳಿಸಿ ಪರಿಹಾರ ನಿಧಿಗೆ ಹಣ ನೀಡಿರುವುದಾಗಿ ಫೇಸ್‌ಬುಕ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಇದೇ ಹೊತ್ತಲ್ಲಿ ಕರ್ನಾಟಕದ ಪತ್ರಕರ್ತರೊಬ್ಬರು ಇದೇ ಫೇಸ್‌ಬುಕ್‌ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಚಾನಲ್‌ ಒಂದರಲ್ಲಿ ಪ್ರಮುಖ ಹುದ್ದೆ ‘ಇನ್‌ಪುಟ್‌ ಎಡಿಟರ್‌’ ಆಗಿದ್ದ ಪತ್ರಕರ್ತ ಕುಮಾರ್‌ ರೈತ ರಾಜೀನಾಮೆ ನೀಡಿ ಮಾಧ್ಯಮ ವಲಯದಾಚೆಗೂ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಇಲ್ಲಿಯೂ ಇವರ ರಾಜೀನಾಮೆಗೆ ಕಾರಣವಾಗಿದ್ದು ಮತ್ತದೇ ಪ್ರವಾಹ ಮತ್ತು ಭೂಕುಸಿತ. ಆದರೆ ಸ್ಥಳ ಮಾತ್ರ ಬೇರೆ; ಕರ್ನಾಟಕದ ಕೊಡಗು.

ಟಿವಿ ಮಾಧ್ಯಮದಿಂದ ತಮ್ಮ ನಿರ್ಗಮನವನ್ನು ಫೇಸ್‌ಬುಕ್‌ನಲ್ಲಿ ಘೋಷಿಸಿಕೊಂಡಿರುವ ಅವರು, “ಜನರ ನೋವಿಗೆ ಕನ್ನಡಿಯಾಗದ ಟಿವಿ ಪತ್ರಿಕೋದ್ಯಮಕ್ಕೆ ವಿದಾಯ ಹೇಳುತ್ತಿದ್ದೇನೆ. ಭಯಾನಕ ಮಳೆ, ಗಾಳಿ, ಪ್ರವಾಹದಿಂದ ಜನ ತತ್ತರಿಸುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಹಾಯ ಹಸ್ತಕ್ಕಾಗಿ ನಾಲ್ಕೂ ದಿಕ್ಕುಗಳನ್ನು ನೋಡುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಇವರ ನೋವಿಗೆ, ಅಕ್ರಂದನಕ್ಕೆ, ಕಣ್ಣು-ಕಿವಿ-ಬಾಯಿಯಾಗಿ ಕೆಲಸ ಮಾಡಬೇಕಾದ ನ್ಯೂಸ್ ಟಿವಿ ಚಾನೆಲ್‌ಗಳು ಮರಳಿ ಬಾರದ ಲೋಕಕ್ಕೆ ಹೊರಟು ಹೋದವರ ಬಗ್ಗೆಯೇ ಹೇಳುತ್ತಾ ಕುಳಿತಿವೆ,” ಎಂದು ಆಕ್ರೋಶ ಹೊರ ಹಾಕಿದ್ದಾರೆ.

“ಸತ್ತವರ ವಿಷಯ ತೋರಿಸಬಾರದು ಎಂಬುದು ನನ್ನ ನಿಲುವಲ್ಲ. ಆದರೆ ಈ ನೆಲದ ನೋವು, ಸಂಕಟ ಆದ್ಯತೆ ವಿಷಯವಾಗಬೇಕಿತ್ತು. ಆದಾಗಲಿಲ್ಲ ಎಂಬುದೇ ನನ್ನ ದುಃಖ. ನಾಳೆಯ ಬದುಕಿಗೆ ಏನು ಮಾಡುವುದು ಎಂಬಂಥ ಆರ್ಥಿಕ ಸ್ಥಿತಿಯಲ್ಲಿರುವ ನಾನು ಕೂಲಿ ಮಾಡಿದರೂ ಸರಿ ಮತ್ತೆ ಟಿವಿ ಮಾಧ್ಯಮಕ್ಕೆ ಕಾಲಿಡಬಾರದು ಎಂದು ನಿರ್ಧರಿಸಿದ್ದೇನೆ,” ಎಂಬ ತಮ್ಮ ಧೃಡ ನಿರ್ಧಾರವನ್ನು ಬಿಚ್ಚಿಟ್ಟಿದ್ದಾರೆ.

‘ಸಮಾಚಾರ’ದ ಜತೆ ಮಾತನಾಡಿದ ಅವರು, “ನಾನು ಸುದ್ದಿ ಟಿವಿಗೆ ರಾಜೀನಾಮೆ ನೀಡಿದ್ದೇನೆ. ಆದರೆ ಇದಕ್ಕೆ ಸುದ್ದಿ ಟಿವಿ ಕಾರಣವಲ್ಲ. ಒಟ್ಟು ಟಿವಿ ಮಾಧ್ಯಮದ ವ್ಯವಸ್ಥೆ ಬಗ್ಗೆ ಬೇಸರ ಬಂದು ಈ ನಿರ್ಧಾರಕ್ಕೆ ಬಂದಿದ್ದೇನೆ,” ಎಂದು ತಿಳಿಸಿದ್ದಾರೆ.

ಇದೇ ಕುಮಾರ್‌ ರೈತ ಈ ಹಿಂದೆಯೂ ಒಮ್ಮೆ ಸುವರ್ಣ ನ್ಯೂಸ್‌ಗೆ ರಾಜೀನಾಮೆ ನೀಡಿದ್ದರು. “ಬಳ್ಳಾರಿಯಲ್ಲಿ ವರದಿಗಾರನಾಗಿದ್ದ ವೇಳೆ 2010ರಲ್ಲಿ ನನ್ನ ಮೇಲೆ ಕೊಲೆ ಯತ್ನ ನಡೆಯಿತು. ನನ್ನ ಕಣ್ಣೇ ಹೋಯಿತು ಎಂಬ ಪರಿಸ್ಥಿತಿ ಇತ್ತು. ಅವತ್ತು ನನ್ನ ಕಾಲು ಮುರಿದಿದ್ದರು. ಬುರುಡೆ ಒಡೆದಿದ್ದರು. ಹೊಟ್ಟೆಯ ಚರ್ಮ ಕಿತ್ತುಕೊಂಡು ಬಂದಿತ್ತು. ಇಂಥ ಹೊತ್ತಲ್ಲಿ ವಿಮ್ಸ್‌ ಆಸ್ಪತ್ರೆಯಲ್ಲಿ ಮಲಗಿದ್ದಾಗ ಕರೆ ಮಾಡಿದ ಅವತ್ತಿನ ಸುವರ್ಣ ನ್ಯೂಸ್‌ ಸಂಪಾದಕ ಎಚ್‌.ಆರ್‌. ರಂಗನಾಥ್ ‘ನೀನು ಗಣಿ ದಣಿಗಳ ಮನೆಯಲ್ಲಿ ಮಲಗಿದ್ದಿಯಂತೆ’ ಎಂದು ಫೋನ್‌ ಮಾಡಿ ಹೇಳಿದರು. ಅವತ್ತೇ ನಾನು ರಾಜೀನಾಮೆ ನೀಡಿದ್ದೆ. ಅಂದು ನಾನು ಸುಮಾರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಮಲಗಿದ್ದೆ. ಡಿಸ್ಚಾರ್ಜ್‌ ಆದ ಮೇಲೆಯೂ ಹಾಸಿಗೆಯಲ್ಲೇ ಇದ್ದೆ. ಇಂಥ ಪರಿಸ್ಥಿತಿಯಲ್ಲೂ ಒಂದು ನಯಾಪೈಸೆಯನ್ನೂ ನೀಡದ ವಾಹಿನಿ (ವಾಹಿನಿಗಳು) ಇವತ್ತು ಕೊಡಗಿಗೆ ಫಂಡ್‌ ಸಂಗ್ರಹಿಸುತ್ತಿವೆ. ಅವತ್ತು ಆದ ಗಾಯದ ಕಲೆಗಳು ಇನ್ನೂ ನನ್ನ ಮೈಯಲ್ಲಿ ಹಾಗೇ ಉಳಿದುಕೊಂಡಿವೆ,” ಎಂದು ಹಳೆಯ ನೆನಪೊಂದನ್ನು ಬಿಚ್ಚಿಟ್ಟರು ರೈತ.

ಹಣ, ಪರಿಹಾರ ಸಾಮಾಗ್ರಿ ಸಂಗ್ರಹಿಸುವುದು ನಮ್ಮ ಕರ್ತವ್ಯವಲ್ಲ. ಅದಕ್ಕೆ ಸಂಘ ಸಂಸ್ಥೆಗಳು, ಸರಕಾರ ಇದೆ. ಅದರ ಬಗ್ಗೆ ವರದಿ ಮಾಡಿ ಸರಕಾರದ ಕಣ್ಣು ತೆರೆಸುವ, ಎಚ್ಚರಿಸುವ ಕೆಲಸವನ್ನು ನಾವು ಮಾಡಬೇಕಾಗಿತ್ತು. ಆದರೆ ಅದನ್ನು ಮಾಡದೆ, ಸತ್ತವರ ಹೆಣ ಹೊತ್ತಿಸಿ ಆದ ಮೇಲೆ ಜನರ ನೋವಿನ ಬಗ್ಗೆ ಮಾತನಾಡುತ್ತಿವೆ. ಕುರಿ ಬಿದ್ದ ಹಾಗೆ ಎಲ್ಲರೂ ಈಗ ನೆರೆ ಪರಿಹಾರ ಎಂದು ಶುರು ಹಚ್ಚಿಕೊಂಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪತ್ರಿಕೋದ್ಯಮದ ಬಗ್ಗೆ ನನಗೆ ಯಾವ ಸಿಟ್ಟೂ ಇಲ್ಲ ಎನ್ನುತ್ತಾರೆ ಅವರು. ಇಂದಿಗೂ ಮುದ್ರಣ ಮಾಧ್ಯಮಗಳಿಗೆ ವಿವೇಚನೆ ಇದೆ. ಕೆಲವು ವೆಬ್‌ಸೈಟ್‌ಗಳಿಗೆ ಜನರ ಬಗ್ಗೆ ಕಾಳಜಿ ಇದೆ. ಆದರೆ ಟಿವಿ ಮಾಧ್ಯಮಗಳು, ಅದರಲ್ಲೂ ಕನ್ನಡದ ಸುದ್ದಿ ವಾಹಿನಿಗಳು ಉಪಯೋಗಕ್ಕೆ ಬಾರದ್ದನ್ನೇ ತೋರಿಸುತ್ತವೆ ಎಂದು ಹರಿಹಾಯ್ದರು.

ಪತ್ರಿಕೋದ್ಯಮ ಉದ್ಯಮ ಹೌದು. ಆದರೆ ಜನಪರವಾಗಿದ್ದುಕೊಂಡು ಉದ್ಯಮ ಮಾಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸುವ ಅವರು, ನಮ್ಮ ಪ್ರತಿಭಟನೆಗಳು ನಿರಂತರವಾಗಿರಬೇಕು. ಸುಮ್ಮನೆ ಕುಳಿತರೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದೆಂದೂ ಪತ್ರಕಾರ್ತನಾಗಿದ್ದರೂ ಟಿವಿ ಮಾಧ್ಯಮಗಳಿಗೆ ಬರಬಾರದು ಎಂದು ನಿರ್ಧರಿಸಿದ್ದೇನೆ ಎಂದರು.

ಹಾಗಂಥ ತಮ್ಮ ರಾಜೀನಾಮೆಯಿಂದ ಟಿವಿ ಮಾಧ್ಯಮ ವಲಯ ಬದಲಾಗುತ್ತದೆ ಎಂಬ ಭ್ರಮೆಯಲ್ಲಿ ಅವರಿಲ್ಲ. ನನ್ನ ರಾಜೀನಾಮೆ ಯಾರಿಗಾದರೂ ತಟ್ಟುತ್ತದೆ ಎಂದು ನಾನು ಅಂದುಕೊಂಡಿಲ್ಲ. ಇದಕ್ಕೆ ಮುಲಭೂತ ಚಿಂತನೆಗಳಲ್ಲೇ ಬದಲಾವಣೆ ಆಗಬೇಕು ಎಂಬುದು ಅವರ ಅಭಿಪ್ರಾಯ.

ಕುಮಾರ ರೈತ ಅವರ ಆಶಯ ಮತ್ತು ನಿರೀಕ್ಷೆಗಳು ಸದ್ಯದ ಪರಿಸ್ಥಿತಿಯಲ್ಲಿ ಪರಿಣಾಮಗಳನ್ನು ಬೀರುವುದು ಕಷ್ಟ ಇದೆ. ಟಿವಿ ಪತ್ರಿಕೋದ್ಯಮ ತನ್ನದೇ ಸಿಕ್ಕುಗಳಲ್ಲಿ ಸಿಲುಕಿಕೊಂಡಿದೆ. ಇದರಿಂದ ಹೊರಬರಲು ಅಷ್ಟು ಸುಲಭಕ್ಕೆ ಸಾಧ್ಯವಾಗದು. ಆದರೆ ಕುಮಾರ ರೈತ ರೀತಿಯವರ ರಾಜೀನಾಮೆ ಕನ್ನಡ ಸುದ್ದಿ ವಾಹಿನಿಗಳ ಬಲಹೀನತೆಯನ್ನು ಎತ್ತಿ ತೋರಿಸಲು ಶಕ್ತವಾಗಿದೆ, ಅಷ್ಟೆ.