samachara
www.samachara.com
‘ಟಾರ್ಗೆಟ್ ಎಂಬಿಪಿ’: ಸೈಕಲ್‌ ರವಿ ಜತೆ ಸಂಬಂಧ ಕಟ್ಟಿದ ಹೊಣೆಗೇಡಿ ಮಾಧ್ಯಮಗಳು
ಎಡದಿಂದ, ಟಿವಿ9 ಸ್ಕ್ರೀನ್ ಗ್ರಾಬ್, ಎಂಬಿ ಪಾಟೀಲ್ ಮತ್ತು ಸೈಕಲ್‌ ರವಿ
ಟಿವಿ

‘ಟಾರ್ಗೆಟ್ ಎಂಬಿಪಿ’: ಸೈಕಲ್‌ ರವಿ ಜತೆ ಸಂಬಂಧ ಕಟ್ಟಿದ ಹೊಣೆಗೇಡಿ ಮಾಧ್ಯಮಗಳು

ಸಿಡಿಆರ್ ಬಹಿರಂಗಗೊಳಿಸಬಾರದು, ಸಿಕ್ಕಿದ ಫೋನ್‌ ನಂಬರ್‌ನ್ನು ಟ್ರೂಕಾಲರ್‌ನಲ್ಲಾದರೂ ಪರಿಶೀಲನೆ ಮಾಡಬಹುದು ಎಂಬ ಕನಿಷ್ಟ ಜ್ಞಾನವನ್ನೂ ಮಾಧ್ಯಮಗಳು ಮರೆತವು. ಪರಿಣಾಮ ಸುಳ್ಳು ಸುದ್ದಿಯ ಉತ್ಪಾದನೆ. 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಸಾರ್ವಜನಿಕರ ಮುಂದೆ ಮಾಹಿತಿಯನ್ನು ಇಡಬೇಕಾದ ಮಾಧ್ಯಮಗಳು ಮತ್ತು ಪತ್ರಕರ್ತರು ಹೊಣೆಗಾರಿಕೆ ಮರೆತರೆ, ಸಿಕ್ಕ ಮಾಹಿತಿಯನ್ನು ಪರಿಶೀಲನೆ ಮಾಡದೆ ಪ್ರಸಾರ ಮಾಡಿದರೆ ಏನಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ‘ಸೈಕಲ್ ರವಿ ಮತ್ತು ಎಂ.ಬಿ. ಪಾಟೀಲ್ ಪ್ರಕರಣ’.

ಎಂ.ಬಿ. ಪಾಟೀಲ್ ಕಾಂಗ್ರೆಸ್‌ನ ಪ್ರಭಾವಿ ನಾಯಕರ; ಬಬಲೇಶ್ವರ ಕ್ಷೇತ್ರದ ಶಾಸಕರ. ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಿರಲಿಲ್ಲ. ಈ ಕಾರಣಕ್ಕೆ ಅವರು ಅಸಮಧಾನಗೊಂಡಿದ್ದರು. ಮತ್ತು ಅದನ್ನು ಬಹಿರಂಗವಾಗಿ ಹೊರಗೆಡವಿದ್ದರು.

ಇದಾಗಿ ಕೆಲವು ದಿನಕ್ಕೆ ತಮಿಳುನಾಡಿನ ಡಿಂಡಿಗಲ್ ಮೂಲದ ಸೈಕಲ್ ರವಿ ಎಂಬ ಪಾತಕಿಯ ಜತೆ ಎಂ.ಬಿ. ಪಾಟೀಲ್ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿಯೊಂದು ಮಾಧ್ಯಮಗಳಲ್ಲಿ ಹರಿದಾಡಲು ಆರಂಭಿಸಿತ್ತು. ಹೇಳಿ ಕೇಳಿ ಮಾಜಿ ಸಚಿವರೊಬ್ಬರು ಪಾತಕಿಯ ಜತೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಪ್ರಕರಣವಿದು. ಅಲ್ಲಿಗೆ ಈ ಸುದ್ದಿ ದೊಡ್ಡ ಮಟ್ಟದ ಪ್ರಚಾರವನ್ನು ಪಡೆದುಕೊಂಡಿತ್ತು.

ಇದಕ್ಕೆ ಪೂರಕವಾಗಿ ಎಂ.ಬಿ. ಪಾಟೀಲರ ಸಿಡಿಆರ್ (ಕಾಲ್‌ ರೆಕಾರ್ಡ್‌ ಡಿಟೇಲ್) ದಾಖಲೆಗಳನ್ನು ಪ್ರಸಾರ ಮಾಡಲು ಮಾಧ್ಯಮಗಳು ಆರಂಭಿಸಿದ್ದವು. ಕನ್ನಡದ ನಂಬರ್‌ ವನ್ ವಾಹಿನಿ ಟಿವಿ9 ಸೇರಿದಂತೆ ಹಲವರು ವಾಹಿನಿಗಳು ಸಿಡಿಆರ್‌ನಲ್ಲಿದ್ದ ಫೋನ್ ನಂಬರ್‌ಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ ವರದಿ ಪ್ರಸಾರ ಮಾಡಿದವು.

ಟಿವಿ9ನಲ್ಲಿ ಈ ಸುದ್ದಿ ಪ್ರಸಾರದ ವೇಳೆ ಫೋನೋ ಮೂಲಕ ಮಾಹಿತಿ ನೀಡಿದ ವರದಿಗಾರ, “ಪಾತಕಿ ಜತೆ ಎಂ.ಬಿ.ಪಾಟೀಲ್ 80 ಸಲ ಮಾತುಕತೆ ನಡೆಸಿದ್ದಾರೆ. ಸೈಕಲ್ ರವಿಗೆ ಎಂ.ಬಿ. ಪಾಟೀಲ್ರ ಕಡೆಯಿಂದ 54 ಕರೆ, 2 ಮೆಸೇಜ್‌ಗಳು ಹೋಗಿವೆ. 24 ಸಲ ಪಾಟೀಲರಿಗೆ ರವಿ ಕರೆ ಮಾಡಿದ್ದಾನೆ,” ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಮಾಹಿತಿ ನೀಡಿದ್ದ.

ಟ್ರೂಕಾಲರ್‌ನಲ್ಲಿ ನಂಬರ್‌ ಬಗ್ಗೆ ಸಿಕ್ಕಿದ ಮಾಹಿತಿ.
ಟ್ರೂಕಾಲರ್‌ನಲ್ಲಿ ನಂಬರ್‌ ಬಗ್ಗೆ ಸಿಕ್ಕಿದ ಮಾಹಿತಿ.

“ಸಚಿವರಾಗಿದ್ದಾಗ ಪಾತಕಿ ಜತೆಗೆ ಯಾಕೆ ಸಂಬಂಧ ಇಟ್ಟುಕೊಂಡಿದ್ದರು ಎಂಬುದು ತಿಳಿದಿಲ್ಲ. ರವಿ ಮೇಲೆ ಶೂಟೌಟ್‌ ಆದಾಗ ಒಟ್ಟು 11 ಮೊಬೈಲ್‌ಗಳು ಪತ್ತೆಯಾಗಿದ್ದವು. ಕರ್ನಾಟಕದ 18 ಮತ್ತು ತಮಿಳುನಾಡಿನ 20 ಸೇರಿ 38 ಸಿಮ್‌ಗಳು ಸಿಕ್ಕಿದ್ದವು. ಸೈಕಲ್‌ ರವಿಯ 97411***99 ನಂಬರ್‌ಗೆ ಎಂ.ಬಿ. ಪಾಟೀಲ್ ಅವರ 77609***77 ಮೊಬೈಲ್‌ನಿಂದ ಕರೆಗಳು ಹೋಗಿದ್ದವು. 2016 ಮಾರ್ಚ್‌ 12ರ ತನಕವೂ ಕರೆಗಳು ಹೋಗಿದ್ದು ಅಲ್ಲಿಯವರೆಗೂ ಸಂಪರ್ಕ ಗಟ್ಟಿಯಾಗಿತ್ತು. ಯಾವ ಉದ್ದೇಶದಿಂದ ಸಂಪರ್ಕ ನಡೆಸಿದ್ದರು ಎಂಬುದು ಗೊತ್ತಿಲ್ಲ,” ಎಂದೆಲ್ಲಾ ಆನ್‌ಏರ್ ಮಾತುಕತೆ ನಡೆದಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ವರದಿಗಾರ ‘ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಂ.ಬಿ. ಪಾಟೀಲ್‌ರಿಗೆ ನೋಟಿಸ್‌ ನೀಡುವ ಸಾಧ್ಯತೆ ಇದೆ’ ಎಂಬ ಗಾಳಿಪಟವನ್ನೂ ಇದೇ ಸಂದರ್ಭದಲ್ಲಿ ಹಾರಿಬಿಟ್ಟ ಕೂಡ.

“ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಂ.ಬಿ. ಪಾಟೀಲ್‌ ಯಾವ ಸೈಕಲ್‌ ರವಿನೂ ನನಗೆ ಗೊತ್ತಿಲ್ಲ. ನನಗೆ ಇಂಥ ಕೆಟ್ಟ ಜನರ ಜೊತೆ ಯಾವತ್ತೂ ಸಂಬಂಧ ಇರುವುದಿಲ್ಲ.,” ಎಂದಿದ್ದರು.

ಎಂ.ಬಿ. ಪಾಟೀಲ್ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆ
ಎಂ.ಬಿ. ಪಾಟೀಲ್ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆ

ನಂತರ ವಿವರವಾದ ಪತ್ರಿಕಾ ಪ್ರಕಟಣೆ ಹೊರಡಿಸಿದ ಶಾಸಕರು, ವಾಹಿನಿಗಳಲ್ಲಿ ಸೈಕಲ್‌ ರವಿಯದ್ದು ಎಂದು ತೋರಿಸಲಾದ ನಂಬರ್‌ ರವಿದ್ದಲ್ಲ. ಮಂಡ್ಯದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಅವರಿಗೆ ಸೇರಿದ ನಂಬರ್ ಇದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದ ಸಚ್ಚಿದಾನಂದ ನನ್ನ ಆತ್ಮೀಯ ಗೆಳೆಯರಾಗಿದ್ದಾರೆ. ಅವರ ನಂಬರನ್ನು ಸೈಕಲ್‌ ರವಿ ನಂಬರ್ ಎಂದು ಭಾವಿಸಿ ತಪ್ಪು ಸುದ್ದಿಯನ್ನು ಪ್ರಸಾರ ಮಾಡಿ ಮಾಧ್ಯಮಗಳು ನನ್ನ ಚಾರಿತ್ರ್ಯವಧೆಗೆ ಮುಂದಾಗಿವೆ. ಈ ರೀತಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ಮೇಲೆ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ ಎಂದು ಹೇಳಿದರು.

ಚಾರಿತ್ರ್ಯಹರಣ:

ಹಾಗೆ ನೋಡಿದರೆ ಈ ರೀತಿ ಚಾರಿತ್ರ್ಯ ಹರಣ ನಡೆದಿದೆ ಎಂದು ಈ ಹಿಂದೆಯೇ ಆರೋಪಿಸಿದ್ದವರು ಎಂ.ಬಿ. ಪಾಟೀಲ್. ಅವರ ಪುತ್ರ ಈ ಹಿಂದೆ ಅಮೆರಿಕಾದಲ್ಲಿ ಉದ್ಯಮ ನಡೆಸಲು ‘ಗ್ರೀನ್ ಕಾರ್ಡ್‌’ಗೆ ಅರ್ಜಿ ಸಲ್ಲಿಸಿದ್ದನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು.

ಆಗ ನೇರ ಪ್ರಸಾರದಲ್ಲಿ ಪ್ರತಿಕ್ರಿಯೆ ಕೇಳಿದಾಗ ವ್ಯಗ್ರರಾಗಿದ್ದ ಎಂ.ಬಿ. ಪಾಟೀಲ್, “ನೀವು ರಾಸ್ಕಲ್ಸ್‌. ನಾನು ಹೇಳುತ್ತಿದ್ದೇನೆ, ಇನ್ನೊಬ್ಬರ ಚಾರಿತ್ರ್ಯಹರಣ ಮಾಡಲು ಹೊರಡುತ್ತಿದ್ದೀರಲ್ಲ, ನೀವುಗಳು ರಾಸ್ಕಲ್ಸ್‌. ನೀವು ಬ್ಲಡಿ ರಾಸ್ಕಲ್ಸ್‌” ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

ಸುದ್ದಿಯನ್ನು ಪರಿಶೀಲನೆ ಮಾಡದೆ ಈ ರೀತಿ ಹಾಕಬಾರದು. ನಿಮಗೆ ಅಷ್ಟು ಬುದ್ಧಿ ಬರಲಿಲ್ಲವೇ. ನೀವು ನನ್ನ ಹೆಂಡತಿಯನ್ನೂ ಬಿಡುವುದಿಲ್ಲವಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು. ನೇರಪ್ರಸಾರದಲ್ಲಿ ಕೇಳಿದ ಸ್ಪಷ್ಟನೆಗಳಿಗೆ ಕಿಡಿಕಾರಿದ್ದ ಅವರು, ‘ಪ್ರಸಾರ ಮಾಡುವ ಮೊದಲೇ ಪ್ರತಿಕ್ರಿಯೆ ಕೇಳಬೇಕಾಗಿತ್ತು’ ಎಂದು ಹರಿಹಾಯ್ದಿದ್ದರು. ನಿಮ್ಮ ವಿರುದ್ಧ ನಾನು ಮತ್ತು ಆಶಾ ಪಾಟೀಲ್ ಮಾನನಷ್ಟ ಮೊಕದ್ದಮೆ ದಾಖಲಿಸಿ ನಾನು ನಿಮಗೆ ಬುದ್ಧಿ ಕಲಿಸುತ್ತೇನೆ ಎಂದು ಗುಡುಗಿದ್ದರು. ‘ನಿಮಗೆಲ್ಲಾ ಪಾಠ ಕಲಿಸುತ್ತೇನೆ. ಇನ್ನೊಮ್ಮೆ ಈ ಥರ ಯಾವ ಕುಟುಂಬಕ್ಕೂ ಆಗಬಾರದು. ಬೇರೆಯವರಿಗೆ ಯಾರಿಗೂ ಇನ್ನೊಮ್ಮೆ ಈ ರೀತಿ ನೀವು ಮಾಡಬಾರದು,’ ಎಂದು ಅಂದೇ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದರು.

ಇದಾಗಿ ಹಲವು ತಿಂಗಳುಗಳು ಕಳೆದಿವೆ. ಮತ್ತೆ ಅವರ ಮೇಲೆ ಸುಳ್ಳು ಆಪಾದನೆಯೊಂದು ಕೇಳಿ ಬಂದಿದೆ. ಅದು ಇದೇ ಮಾಧ್ಯಮಗಳಿಂದ. ಈ ಬಾರಿ ಮತ್ತೆ ಮೊಕದ್ದಮೆ ದಾಖಲಿಸುವುದಾಗಿ ಅವರು ಹೇಳಿದ್ದಾರೆ. ಅವರು ಈ ಬಾರಿ ಮೊಕದ್ದಮೆ ದಾಖಲಿಸುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ, ನಾವು ಮಾತ್ರ ಬದಲಾಗುವುದಿಲ್ಲ ಎಂಬುದನ್ನು ಎಂ.ಬಿ. ಪಾಟೀಲರ ಪ್ರಕರಣದ ಮೂಲಕ ಮಾಧ್ಯಮಗಳು ನಿರೂಪಿಸಲು ಹೊರಟಂತೆ ಕಾಣಿಸುತ್ತಿದೆ.

ಇಲ್ಲದಿದ್ದರೆ ಕನಿಷ್ಟ ಸಿಡಿಆರ್ ಬಹಿರಂಗಗೊಳಿಸಬಾರದು. ಸಿಕ್ಕಿದ ಫೋನ್‌ ನಂಬರ್‌ನ್ನು ಟ್ರೂಕಾಲರ್‌ನಲ್ಲಾದರೂ ಪರಿಶೀಲನೆ ಮಾಡಬಹುದು ಎಂಬ ಕನಿಷ್ಟ ಜ್ಞಾನವನ್ನು ವರದಿಗಾರರು ಹೊಂದಿದ್ದರೆ ನಕಲಿ ಸುದ್ದಿಯೊಂದು ಉತ್ಪಾದನೆಯಾಗುವುದು ತಪ್ಪುತ್ತಿತ್ತು. ಕಳೆದು ಹೋಗುತ್ತಿರುವ ವಿಶ್ವಾಸಾರ್ಹತೆಯನ್ನು ಕೊಂಚ ಮಟ್ಟಿಗಾದರೂ ಉಳಿಸಿಕೊಳ್ಳಬಹುದಾಗಿತ್ತು. ಅಂದಹಾಗೆ, ಸಿಸಿಬಿ ವಿಚಾರಣೆ ವೇಳೆ ಸಿಕ್ಕಿದ ಸಿಡಿಆರ್‌ ಎಂದು ವಾಹಿನಿಗಳು ತೋರಿಸಿದ ಕಾಲ್‌ ಡೀಟೆಲ್ ಸಿಕ್ಕಿದ್ದಾದರೂ ಎಲ್ಲಿಂದ? ಖಾಸಗಿ ಮಾಹಿತಿಯಾಗಿರುವ ಇದನ್ನು ಸೋರಿಕೆ ಮಾಡಿದವರು ಯಾರು? ಸೈಕಲ್ ರವಿ ಹೆಸರಿನಲ್ಲಿ ಸುಳ್ಳು ಸುದ್ದಿಗಳ ಉತ್ಪಾದನೆಗೆ ಪರೋಕ್ಷ ಬೆಂಬಲ ನೀಡುತ್ತಿರುವ ಸಿಸಿಬಿ ಅಧಿಕಾರಿಗಳು ಉತ್ತರಿಸಬೇಕಿದೆ.