samachara
www.samachara.com
‘ಫೋಕಸ್ ಶಿಫ್ಟ್’: ದಶಕದ ಬಿಕ್ಕಟ್ಟನ್ನು ಎದುರಿಸುತ್ತಿದೆ ಕನ್ನಡದ ಸುದ್ದಿವಾಹಿನಿ ಮಾರುಕಟ್ಟೆ
ಟಿವಿ

‘ಫೋಕಸ್ ಶಿಫ್ಟ್’: ದಶಕದ ಬಿಕ್ಕಟ್ಟನ್ನು ಎದುರಿಸುತ್ತಿದೆ ಕನ್ನಡದ ಸುದ್ದಿವಾಹಿನಿ ಮಾರುಕಟ್ಟೆ

ಕನ್ನಡದ ಐದಾರು ಸುದ್ದಿ ವಾಹಿನಿಗಳನ್ನು ಹೊರತುಪಡಿಸಿದರೆ, ಉಳಿದವುಗಳ ಅಸ್ಥಿತ್ವದ ಪ್ರಶ್ನೆ ಎದ್ದಿದೆ. ಭವಿಷ್ಯ ಮಂಕಾಗಿದೆ. ಕನಿಷ್ಟ 300 ಮಂದಿ ತಾಂತ್ರಿಕ ಸಿಬ್ಬಂದಿ ಹಾಗೂ ಪತ್ರಕರ್ತರು ಈಗ ಕೆಲಸ ಹುಡುಕಿಕೊಂಡು ಅಲೆಯುತ್ತಿದ್ದಾರೆ.

Team Samachara

ಕನ್ನಡದ ಮತ್ತೊಂದು ಸುದ್ದಿ ವಾಹಿನಿಯಲ್ಲಿ ಸಂಬಳ ವಿಚಾರಕ್ಕೆ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನಡುವೆ ಮಾತಿನ ಚಕಮಕಿ ನಡೆದಿದೆ. ಸೋಮವಾರ ರಾತ್ರಿ ನಡೆದ ಈ ಘಟನೆಯ ವಿಡಿಯೋಗಳೀಗ ಮಾಧ್ಯಮ ವಲಯದಲ್ಲಿ ಹರಿದಾಡುತ್ತಿವೆ.

ಈ ಹಿಂದೆ ವಿಧಾನ ಪರಿಷತ್ ಸದಸ್ಯ ಕೆ. ಪಿ. ನಂಜುಂಡಿ ಮಾಲೀಕತ್ವದ ‘ಟಿವಿ1’ ಸುದ್ದಿ ವಾಹಿನಿಯಲ್ಲಿ ಇದೇ ರೀತಿಯಲ್ಲಿ ಸಿಬ್ಬಂದಿಗಳು ಸಂಬಳ ನೀಡಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿತ್ತು. ಇದೀಗ ಇಂತಹದ್ದೇ ಬೆಳವಣಿಗೆಗೆ ಸಾಕ್ಷಿಯಾಗಿದೆ ‘ಫೋಕಸ್ ಟಿವಿ ಕನ್ನಡ’.

ಕನ್ನಡದ ಗೀತ ರಚನೆಕಾರ, ಕಾರ್ಯಕ್ರಮಗಳ ನಿರ್ಮಾಪಕ ಹೇಮಂತ್ ಮಾಲೀಕತ್ವದ ಫೋಕಸ್ ಟಿವಿ ಕನ್ನಡದ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗಿತ್ತು. ಮೊದಲ ಬಾರಿಗೆ ಮಹಿಳಾ ಸಂಪಾದಕರ ಕೈಗೆ ಚುಕ್ಕಾಣಿ ನೀಡಿತ್ತು. ‘ಲೋಗೋ ಲಾಂಚ್’ ಹೆಸರಿನಲ್ಲಿ ಅದ್ಧೂರಿಯಾಗಿ ಸೆಟ್ಟೇರಿತ್ತು. ಸುಮಾರು 16 ತಿಂಗಳುಗಳ ಕಾಲ ಕಾರ್ಯಾಚರಣೆ ನಡೆಸಿದ ವಾಹಿನಿ ಕಳೆದ ಎರಡು ತಿಂಗಳ ಹಿಂದಿನಿಂದ ಆರ್ಥಿಕ ಮುಗ್ಗಟ್ಟಿದೆ ಸಿಲುಕಿದೆ. ಸಿಬ್ಬಂದಿಗಳು, ಪತ್ರಕರ್ತರು ಸಂಬಳ ನೀಡಿ ಎಂದು ತರಾಟೆಗೆ ತೆಗೆದುಕೊಳ್ಳುವ ಹಂತವನ್ನು ತಲುಪಿದೆ.

ಇದೇ ಸಾಲಿನಲ್ಲಿದ್ದ ‘ವಿಐಪಿ ನ್ಯೂಸ್’ ಹೆಸರಿನ ಸುದ್ದಿ ವಾಹಿನಿ ಕೆಲವು ದಿನಗಳ ಹಿಂದೆ ಬಾಗಿಲು ಎಳೆದುಕೊಂಡಿದೆ. ‘ಉದಯ ನ್ಯೂಸ್’ ಕಾರ್ಯಾಚರಣೆ ನಿಲ್ಲಿಸಿದೆ. ‘ಸುದ್ದಿ ಟಿವಿ’ಯಲ್ಲಿ ಎರಡು ತಿಂಗಳಿನಿಂದ ಸರಿಯಾಗಿ ಸಂಬಳ ಆಗುತ್ತಿಲ್ಲ. ಜನಶ್ರೀ, ಸಮಯ ಟಿವಿಗಳು ಮುಚ್ಚಿವೆ. ‘ಸ್ವರಾಜ್ ಎಕ್ಸ್‌ಪ್ರೆಸ್‌’ನಲ್ಲಿ ಅತಂತ್ರತೆ ಮುಂದುವರಿದಿದೆ.

ಒಟ್ಟಾರೆ, ಕನ್ನಡದ ಐದಾರು ಸುದ್ದಿ ವಾಹಿನಿಗಳನ್ನು ಹೊರತುಪಡಿಸಿದರೆ, ಉಳಿದವುಗಳ ಅಸ್ಥಿತ್ವದ ಪ್ರಶ್ನೆ ಎದ್ದಿದೆ. ಭವಿಷ್ಯ ಮಂಕಾಗಿದೆ. ಕನಿಷ್ಟ 300 ತಾಂತ್ರಿಕ ಸಿಬ್ಬಂದಿ ಹಾಗೂ ಪತ್ರಕರ್ತರು ಈಗ ಕೆಲಸ ಹುಡುಕಿಕೊಂಡು ‘ಸುದ್ದಿ ವಾಹಿನಿ ಮಾರುಕಟ್ಟೆ’ಯಲ್ಲಿ ಅಲೆಯುತ್ತಿದ್ದಾರೆ. ಬಹುಶಃ ಇದು ಕಳೆದ ಒಂದು ವರ್ಷದ ಅಂತರದಲ್ಲಿ ಕನ್ನಡದ ಸುದ್ದಿ ಮಾಧ್ಯಮ ಕ್ಷೇತ್ರ ಎದುರಿಸುತ್ತಿರುವ ತೀವ್ರ ಬಿಕ್ಕಟ್ಟಿನ ದಿನಗಳಿವು. ಇದನ್ನು ಎದುರಿಸಲು ಒಂದು ವಾಹಿನಿಯ ಎರಡು ತಿಂಗಳ ಸಂಬಳದ ಆಚೆಗೆ ಮಾಲೀಕರು, ಸಿಬ್ಬಂದಿಗಳು, ಪತ್ರಕರ್ತರು ಆಲೋಚನೆ ಮಾಡಬೇಕಿದೆ.

“ಒಂದು ವಾಹಿನಿಯನ್ನು ಕನಿಷ್ಟ ನಾಲ್ಕು ಡಿಟಿಎಚ್‌ಗಳಿಗೆ ನೀಡಬೇಕು ಎಂದರೆ ಒಂದೂವರೆ ಕೋಟಿ ಬೇಕು. ಎಂಎಸ್‌ಓ (ಮಲ್ಟಿಪಲ್ ಸಿಸ್ಟಂ ಆಪರೇಟರ್ಸ್‌) ಗಳಿಗೆ- ಹಿಂದೆ ಇವರನ್ನು ಕೇಬಲ್ ಆಪರೇಟರ್ಸ್ ಎಂದು ಕರೆಯಲಾಗುತ್ತಿತ್ತು - 50 ಲಕ್ಷ ಕೊಡಬೇಕು. ಸಂಬಳ ಕನಿಷ್ಟ 50ರಿಂದ 60 ಲಕ್ಷ ಬೇಕಾಗುತ್ತದೆ. ಇಂಟರ್‌ನೆಟ್, ಪವರ್ ಬಿಲ್ ಮತ್ತಿತರ ಖರ್ಚುಗಳು 30 ಲಕ್ಷ ಹೋಗುತ್ತದೆ. ಒಟ್ಟಾರೆ ಒಂದು ಸುದ್ದಿ ವಾಹಿನಿಯ ಒಂದು ತಿಂಗಳ ನಿರ್ವಹಣೆಗೆ 1.3 ಕೋಟಿ ರೂಪಾಯಿ ಬೇಕಾಗುತ್ತದೆ. ಇಷ್ಟು ಖರ್ಚು ಮಾಡಿದರೂ, ವರಮಾನ 30 ಲಕ್ಷ ತೆಗೆಯುವುದು ಕಷ್ಟವಿದೆ. ಹೀಗಿರುವಾಗ ಸುದ್ದಿ ವಾಹಿನಿಗಳು ಎಂತಹ ಬಿಕ್ಕಟ್ಟಿನಲ್ಲಿ ಇರಬಹುದು ನೀವೇ ಆಲೋಚನೆ ಮಾಡಿ,’’ ಎಂದರು ಫೋಕಸ್ ಟಿವಿ ಕನ್ನಡ ಎಂಡಿ ಹೇಮಂತ್.

ಫೋಕಸ್ ಟಿವಿ ಕನ್ನಡದ ಎಂಡಿ ಹೇಮಂತ್. 
ಫೋಕಸ್ ಟಿವಿ ಕನ್ನಡದ ಎಂಡಿ ಹೇಮಂತ್. 

‘ಸಮಾಚಾರ’ದ ಮುಂದೆ ತಮ್ಮ ವಾಹಿನಿಯ ಬಿಕ್ಕಟ್ಟಿನ ಮೂಲವನ್ನು ಬಿಚ್ಚಿಟ್ಟ ಹೇಮಂತ್, ಪರ್ಯಾಯ ಅಲೋಚನೆಯಲ್ಲಿ ಇದ್ದ ಹಾಗಿತ್ತು. “ನ್ಯೂಸ್ ಮೀಡಿಯಾಗೆ ಭವಿಷ್ಯ ಇಲ್ಲ. ಅಷ್ಟೂ ವಾಹಿನಿಗಳನ್ನು ಸೇರಿಸಿಕೊಂಡರೂ ಟಿಆರ್‌ಪಿ 300 ದಾಟುವುದಿಲ್ಲ. ಮೂರು ಸಾವಿರ ಟಿಆರ್‌ಪಿ ಮಾರುಕಟ್ಟೆಯಲ್ಲಿ ಸುದ್ದಿ ವಾಹಿನಿಗಳ ಪಾಲು ಶೇ. 10 ಅಷ್ಟೆ. ಹೀಗಾಗಿ ಇನ್ಫೋಟೈನ್‌ಮೆಂಟ್ ವಾಹಿನಿಯಾಗಿ ಬದಲಾಯಿಸಲು ಯೋಚನೆ ಮಾಡುತ್ತಿದ್ದೇನೆ,’’ ಎಂದರು.

ಸಾಮಾನ್ಯವಾಗಿ ಸುದ್ದಿ ವಾಹಿನಿಗಳನ್ನು ಆರಂಭಿಸುವಾಗ ಸಮಾಜಮುಖಿ ಕನಸುಗಳೇ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಆದರೆ ಮಾರುಕಟ್ಟೆಯ ವಾಸ್ತವಗಳು ನಂತರ ಅರಿವಿಗೆ ಬರುತ್ತವೆ. ಬಹುಶಃ ಫೋಕಸ್ ಟಿವಿ ವಿಚಾರದಲ್ಲಿಯೂ ಇದೇ ಆಗಿದೆ. “ಅಜೆಂಡಾಗಳು ಇಲ್ಲದಿದ್ದರೆ, ರೋಲ್ ಕಾಲ್‌ ಮಾಡದಿದ್ದರೆ ನ್ಯೂಸ್ ಚಾನಲ್‌ಗಳನ್ನು ರನ್ ಮಾಡುವುದು ಇವತ್ತಿಗೆ ಸಾಧ್ಯವೇ ಇಲ್ಲ,’’ ಎಂಬುದು ಹೇಮಂತ್ ಅವರ ಸ್ಪಷ್ಟ ಮಾತುಗಳು.

ಮುಂದಿನ ದಿನಗಳಲ್ಲಿ ಫೋಕಸ್ ಟಿವಿ ಇನ್ಫೋಟೈನ್‌ಮೆಂಟ್ ರೂಪ ಪಡೆದುಕೊಂಡು ಬದುಕುಳಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅದೇ ವೇಳೆ ಕನ್ನಡದ ಸುದ್ದಿ ವಾಹಿನಿಗಳು ಮಾರುಕಟ್ಟೆಯ ಈ ಬಿಕ್ಕಟ್ಟಿಗೆ ಪರಿಹಾರವನ್ನೂ ಕಂಡುಕೊಳ್ಳಬೇಕಿದೆ.

ಮಾರುಕಟ್ಟೆ ವಿಸ್ತಾರವಾಗದಿದ್ದರೆ ಯಾವ ಕ್ಷೇತ್ರವೂ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ಶೇ. 90ರಷ್ಟು ಮಾರುಕಟ್ಟೆಯ ವೀಕ್ಷಕರನ್ನೂ, ವಹಿವಾಟವನ್ನು ಕಾಣುತ್ತಿರುವ ಮನೋರಂಜನಾ ವಾಹಿನಿಗಳೇ ಮುಖಪುಟದ ಜಾಹೀರಾತುಗಳಿಗೆ ಮೊರೆಹೋಗಿವೆ. ಹೆಚ್ಚುತ್ತಿರುವ ಅಂತರ್ಜಾಲ ಮಾರುಕಟ್ಟೆಯ ಜತೆ ಪೈಪೋಟಿ ನಡೆಸಲು, ತಮಗಿರುವ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಇವು ನಡೆಸುತ್ತಿರುವ ಕಸರತ್ತುಗಳಿವು. ಹೀಗಿರುವಾಗ ದಶಕದ ಹಿಂದೆ ರೂಪಿಸಿದ ಸುದ್ದಿ ವಾಹಿನಿಗಳ ಸ್ವರೂಪ ಈ ಕಾಲಘಟ್ಟದಲ್ಲಿ ಬಾಳಿಕೆ ಬರಲು ಹೇಗೆ ಸಾಧ್ಯ? ಈ ಪ್ರಶ್ನೆಯನ್ನು ಸುದ್ದಿವಾಹಿನಿಗಳು ಹಾಕಿಕೊಳ್ಳಬೇಕಿದೆ. ಹೊಸತನ ಹುಡುಕಾಟ ಇಲ್ಲದಿದ್ದರೆ, ವೀಕ್ಷಕರ ಮಾರುಕಟ್ಟೆ ಬೆಳಯಲು ಸಾಧ್ಯವೇ ಇಲ್ಲ. ಸಹಜವಾಗಿಯೇ ಅದು ಬಿಕ್ಕಟ್ಟೊಂದನ್ನು ಸೃಷ್ಟಿಸಿದೆ. ಅದರ ಪರಿಣಾಮಗಳು ಸಂಬಳ ರೂಪದಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತಿವೆ ಅಷ್ಟೆ.

“ಪತ್ರಕರ್ತರು ಕೂಡ ಆಲೋಚನೆ ಮಾಡಬೇಕಿದೆ. ಮೂರ್ನಾಲ್ಕು ಸಾವಿರ ಹೆಚ್ಚು ಸಂಬಳ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಕೆಲಸ ಬದಲಾಯಿಸುವ ಮುನ್ನ ವಾಸ್ತವಗಳಿಗೆ ತೆರೆದುಕೊಳ್ಳಬೇಕು. ಮಾರುಕಟ್ಟೆ ಬಿಕ್ಕಟ್ಟು ಎದುರಿಸುತ್ತಿರುವ ದಿನಗಳಲ್ಲಿ ಸಂಬಳದ ಆಚೆಗೆ ಕೆಲಸದ ಭದ್ರತೆಗೆ ಅವರು ಒತ್ತು ನೀಡಬೇಕು. ಇಲ್ಲವಾದರೆ ಬಿಕ್ಕಟ್ಟಿಗೆ ಮೊದಲ ಬಲಿಯಾಗುವುದು ಅವರೇ,’’ ಎನ್ನುತ್ತಾರೆ ಹಿರಿಯ ಪತ್ರಕರ್ತೆಯೊಬ್ಬರು.

ಇದು ಸುದ್ದಿ ವಾಹಿನಗಳ ಮಾಲೀಕರು ಮಾತ್ರ ಅಲ್ಲ, ಪತ್ರಕರ್ತರೂ ಆಲೋಚನೆ ಮಾಡಬೇಕಿರುವ ಸಮಯ. ಐದಾರು ಲಕ್ಷ ಶೈಕ್ಷಣಿಕ ಸಾಲ ತೆಗೆದುಕೊಂಡು ಓದಿ ಹೊರಬೀಳುವ ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ತೈಲೋದ್ಯಮ ಒಂದನ್ನು ಹೊರತುಪಡಿಸಿ ಹೆಚ್ಚು ಕಡಿಮೆ ಎಲ್ಲಾ ಕ್ಷೇತ್ರಗಳೂ ಇವತ್ತು ಬಿಕ್ಕಟ್ಟು ಎದುರಿಸುತ್ತಿವೆ. ಹೀಗಿರುವಾಗ ಮಾಧ್ಯಮ ಕ್ಷೇತ್ರ ಮಾತ್ರವೇ ಭದ್ರತೆಯನ್ನು ನೀಡಬೇಕು ಎಂದು ಬಯಸುವುದು ಕಷ್ಟ ಇದೆ. ಇದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳದಿದ್ದರೆ, ಬಿಕ್ಕಟ್ಟು ಇನ್ನಷ್ಟು ತೀವ್ರವಾಗುತ್ತದೆ. ಇದಕ್ಕೆ ತಿಂಗಳ ಸಂಬಳ ಮಾತ್ರವೇ ಪರಿಹಾರ ನೀಡಲು ಸಾಧ್ಯವಿಲ್ಲ.