ಟಿವಿ1 ಮಾಲೀಕ ಕೆ. ಪಿ. ನಂಜುಂಡಿ. 
ಟಿವಿ

ಕೆ. ಪಿ. ನಂಜುಂಡಿ ಸ್ಪಷ್ಟೀಕರಣ: 12 ಗಂಟೆಗಳ ಬೆಳವಣಿಗೆ ಹಿಂದೆ ‘ಕಾಣದ ಕೈಗಳು’ ಇವೆಯಂತೆ!

ತಮ್ಮ ಸಂಸ್ಥೆಯಿಂದ ಹೊರಬಿದ್ದ ಪತ್ರಕರ್ತರಿಗೆ ಎಲ್ಲಿಯೂ ಕೆಲಸ ಕೆಲಸ ನೀಡದಂತೆ ಪರೋಕ್ಷ ಸಂದೇಶವನ್ನೂ ರವಾನಿಸಿದೆ 2 ಪುಟಗಳ ಸ್ಪಷ್ಟೀಕರಣ. 

ಟಿವಿ 1 ಸಂಸ್ಥೆಯಲ್ಲಿ ಶುಕ್ರವಾರ ಸಂಜೆ 3 ಗಂಟೆಯಿಂದ ಶನಿವಾರ ಮುಂಜಾನೆ 3 ಗಂಟೆವರೆಗೆ ನಡೆದ ಬೆಳವಣಿಗೆ ಹಿಂದೆ ‘ಕಾಣದ ಕೈಗಳು’ ಕೆಲಸ ಮಾಡಿವೆ ಎಂದು ಉದ್ಯಮಿ ಕೆ. ಪಿ. ನಂಜುಂಡಿ ಆರೋಪ ಮಾಡಿದ್ದಾರೆ.

ಜತೆಗೆ; ಸಂಬಳ ಕೇಳಿದ, ಪ್ರತಿಭಟನೆ ನಡೆಸಿದ, ಆಕ್ರೋಶ ಹೊರಹಾಕಿದ, ರಾಜೀನಾಮೆ ನೀಡಿದ ಪತ್ರಕರ್ತರು ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದರು ಅವರಿಂದ ‘ಸೇವೆ’ಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಈ ಮೂಲಕ ತಮ್ಮ ಸಂಸ್ಥೆಯಿಂದ ಹೊರಬಿದ್ದ ಪತ್ರಕರ್ತರಿಗೆ ಎಲ್ಲಿಯೂ ಕೆಲಸ ಕೆಲಸ ನೀಡದಂತೆ ಪರೋಕ್ಷ ಸಂದೇಶವನ್ನೂ ಅವರು ರವಾನಿಸಿದ್ದಾರೆ.

ಕೆ. ಪಿ. ನಂಜುಂಡಿ ಪರವಾಗಿ 2 ಪುಟಗಳ ಸ್ಪಷ್ಟೀಕರಣ ನೀಡಿರುವ ಮಾನವ ಸಂಪನ್ಮೂಲ (ಎಚ್ಆರ್‌) ವಿಭಾಗದ ಯೋಗೇಶ್, ಸಂಸ್ಥೆಯ ಹಾಗೂ ಮಾಲೀಕರ ತೇಜೋವಧೆಯಾಗಿದೆ ಎಂದಿದ್ದಾರೆ. “ಪ್ರತಿ ತಿಂಗಳು ನಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಅಯಾ ತಿಂಗಳ 10ನೇ ತಾರೀಖಿನೊಳಗೆ ಸಂಬಳ ನೀಡಲಾಗಿದೆ. ಈ ತಿಂಗಳೂ ಜಿಲ್ಲಾ ವರದಿಗಾರರಿಗೆ 4ನೇ ತಾರೀಖು ಸಂಬಳ ಆಗಿದೆ. ಉಳಿದ 100 ಸಿಬ್ಬಂದಿಗಳಿಗೆ 10ನೇ ತಾರೀಖಿಗೆ ಸಂಬಳ ಅವರವರ ಖಾತೆಗಳಿಗೆ ಜಮೆಯಾಗಿದೆ. ಆದರೆ 15 ಜನರಿಗೆ ಮಾತ್ರವೇ ಸಂಬಳ ತಡೆಹಿಡಿಯಲಾಗಿತ್ತು. ಅವರು ಕೆಲಸ ಬಿಡುವುದಾಗಿ ಹೇಳಿಕೊಂಡ ಹಿನ್ನೆಲೆಯಲ್ಲಿ ಹಾಗೂ ಚುನಾವಣೆ ಇದ್ದುದರಿಂದ ಸಂಬಳವನ್ನು ನಿಧಾನವಾಗಿ ಹಾಕಲು ಸಂಪಾದಕ ಶಿವಪ್ರಸಾದ್ ಹಾಗೂ ಕೆ. ಪಿ. ನಂಜುಂಡಿ ಅವರ ಸಮಕ್ಷಮವೇ ತೀರ್ಮಾನ ಮಾಡಲಾಗಿತ್ತು,’’ ಎಂದು ಸ್ಪಷ್ಟೀಕರಣ ಪತ್ರ ಹೇಳಿದೆ.

ಟಿವಿ 1 ಎಚ್‌ಆರ್‌ ನೀಡಿದ ಸ್ಪಷ್ಟೀಕರಣದ ಮೊದಲ ಪುಟ. 
ಟಿವಿ 1 ಎಚ್‌ಆರ್‌ ನೀಡಿದ ಸ್ಪಷ್ಟೀಕರಣದ ಮೊದಲ ಪುಟ. 

ಸಾಮಾನ್ಯವಾಗಿ ಮಾನವ ಸಂಪನ್ಮೂಲ ವಿಭಾಗಗಳು ಯಾವುದೇ ಸಂಸ್ಥೆಯಾದರೂ ಅಲ್ಲಿನ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ. ಇದು ಎಚ್‌ಆರ್‌ ವೃತ್ತಿ ಧರ್ಮ ಕೂಡ.

ಆದರೆ ಟಿವಿ 1 ಸಂಸ್ಥೆಯ ಪರವಾಗಿ ಹೊರಬಿದ್ದಿರುವ ಎಚ್‌ಆರ್ ಸ್ಪಷ್ಟೀಕರಣ, ಮಾಲೀಕರ ಮೇಲಿನ ತೇಜೋವಧೆಯನ್ನು ಖಂಡಿಸಿದೆ ಹಾಗೂ ನ್ಯಾಯ ಕೇಳಿದ ಸಿಬ್ಬಂದಿಗಳಿಗೆ ಇನ್ನೆಲ್ಲಿಯೂ ಕೆಲಸ ಸಿಗಬಾರದು ಎಂಬ ಬಯಕೆಯನ್ನು ವ್ಯಕ್ತಪಡಿಸಿದೆ.

“ಕೆ. ಪಿ. ನಂಜುಂಡಿಯವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ತಮ್ಮನ ಮದುವೆ ಕಾರಣಕ್ಕೆ ನಾನು ಊರಿನಲ್ಲಿದ್ದರೂ ನನ್ನ ಸಮಕ್ಷಮ ಮಾತನಾಡದೆ ಬೇಕಂತಲೇ 5 ಜನರ ಗುಂಪು ಕಟ್ಟಿಕೊಂಡು ಎಂಡಿ ಚೇಂಬರಿಗೆ ನುಗ್ಗಲಾಗಿದೆ,’’ ಎಂದು ಯೋಗೇಶ್ ಆರೋಪ ಮಾಡುತ್ತಾರೆ.

ಹೀಗಿದ್ದ ಮೇಲೆ, ಎಚ್‌ಆರ್‌ ಇಲ್ಲದ ಸಮಯದಲ್ಲೂ ಸಂಸ್ಥೆ ಐದು ಉದ್ಯೋಗಿಗಳಿಗೆ ಟರ್ಮಿನೇಶನ್ ಲೆಟರ್ ಕೊಟ್ಟಿದ್ದು ಹೇಗೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಬಗ್ಗೆ ಸ್ಪಷ್ಟೀಕರಣ ಪತ್ರ ಎಲ್ಲಿಯೂ ಪ್ರಸ್ತಾಪ ಮಾಡುವುದಿಲ್ಲ ಎಂಬುದು ವಿಶೇಷ.

ಟಿವಿ1 ಸ್ಪಷ್ಟೀಕರಣದ ಎರಡನೇ ಪುಟ. 
ಟಿವಿ1 ಸ್ಪಷ್ಟೀಕರಣದ ಎರಡನೇ ಪುಟ. 

“ನಮಗೆ ಇವರಿಂದ ಹೆಚ್ಚಿನ ನಿರೀಕ್ಷೆಗಳೇನೂ ಇಲ್ಲ. ಕೇವಲ ಸಂಬಳ ಮಾತ್ರವೇ ಟಿವಿ1 ಸಮಸ್ಯೆಯಾಗಿರಲಿಲ್ಲ. ಮಹಿಳಾ ಸಿಬ್ಬಂದಿಗಳ ಬಗ್ಗೆ ಅವ್ಯಾಚ್ಯವಾಗಿ ಬೈಗುಳಗಳೂ ಇಲ್ಲಿ ಸಾಮಾನ್ಯವಾಗಿದ್ದವು. ಮೂಲಸೌಕರ್ಯ ನೀಡದೆ ಕೆಲಸವನ್ನು ನಿರೀಕ್ಷಿಸಲಾಗುತ್ತಿತ್ತು. ಅವುಗಳನ್ನು ಸಹಿಸಿಕೊಂಡು ನಾವು ಕೆಲಸ ಮಾಡುತ್ತಿದ್ದೆವು. ಸಂಪಾದಕರ ಮೇಲಿನ ಗೌರವ ಹಾಗೂ ಆಶಾವಾದ ನಮ್ಮನ್ನು ಕಟ್ಟಿಹಾಕಿತ್ತು. ಆದರೆ ಈಗ ಸಂಪಾದಕರೂ ಆಡಳಿತ ಮಂಡಳಿ ಜತೆಗೆ ನಿಂತುಕೊಂಡಿದ್ದಾರೆ. ಹೀಗಿರುವಾಗ ನಮಗೆ ನ್ಯಾಯ ಸಿಗಲು ಹೇಗೆ ಸಾಧ್ಯ,’’ ಎಂದು ಟಿವಿ 1 ಮಾಜಿ ಸಿಬ್ಬಂದಿಯೊಬ್ಬರು ‘ಸಮಾಚಾರ’ದ ಜತೆ ಅಳಲು ತೋಡಿಕೊಂಡರು.

ಟಿವಿ 1 ಸಂಸ್ಥೆ ನೀಡಿರುವ ಸ್ಪಷ್ಟೀಕರಣದಲ್ಲಿ ಒಟ್ಟಾರೆ ಬೆಳವಣಿಗೆಗಳ ಹಿಂದೆ ‘ಕಾಣದ ಕೈಗಳಿವೆ’ ಎಂಬ ಆರೋಪವೊಂದಿದೆ. ಇಷ್ಟರಲ್ಲಿಯೇ ಅವು ಯಾವುದು ಎಂಬುದು ಗೊತ್ತಾಗಲಿದೆ ಎಂದು ಹೇಳಿದೆ ಪತ್ರ.

ಸುಮಾರು 23 ಪತ್ರಕರ್ತರು ಹಾಗೂ ತಾಂತ್ರಿಕ ಸಿಬ್ಬಂದಿ ಟಿವಿ 1ರಿಂದ ಹೊರಬಿದ್ದಿದ್ದಾರೆ. ಅವರೀಗ ಹೊಸ ಕೆಲಸದ ನಿರೀಕ್ಷೆಯಲ್ಲಿದ್ದಾರೆ. “ಕೆಲವು ಕಡೆಗಳಿಂದ ಆಫರ್‌ ಬಂದಿವೆ. ಕೆಲಸದ ಸಮಸ್ಯೆ ಇಲ್ಲ. ಆದರೆ ಸಂಸ್ಥೆಯೊಂದು ಮಾಜಿ ಸಿಬ್ಬಂದಿಗಳ ವಿರುದ್ಧ ಅಪಪ್ರಚಾರಕ್ಕೆ ನಿಂತಿದೆ. ಅದನ್ನು ನಾವು ಎದುರಿಸಬೇಕಿದೆ. ಈಗ ಕಾಣದ ಕೈಗಳು ಎಂದು ಹೇಳುತ್ತಿದ್ದಾರೆ. ಆದರೆ ಅಕ್ವೇರಿಯಸಂ ಫಿಶ್‌ನಿಂದ ಹಿಡಿದು ಕಾಸ್ಟ್ಯೂಮ್ ಡಿಸೈನರ್‌ವರೆಗೆ ಹಣ ನೀಡದೆ ಸಂಸ್ಥೆ ನಡೆಸಿಕೊಂಡು ಬಂದಿದ್ದೇ ಎಲ್ಲಾ ಸಮಸ್ಯೆಗಳ ಮೂಲ,’’ ಎನ್ನುತ್ತಾರೆ ಟಿವಿ1ರಲ್ಲಿದ್ದ ಪತ್ರಕರ್ತೆಯೊಬ್ಬರು.

ಒಂದು ಕಡೆ ಕೆಲಸ ಕಳೆದುಕೊಂಡು, ಮೇಲೆ ‘ಅಸಮಪರ್ಕ ಕೆಲಸ ಮಾಡುವವರು’ ಎಂಬ ಪಟ್ಟವನ್ನೂ ಕಟ್ಟಿಕೊಂಡ ಹೊರಬಿದ್ದ ಇಲ್ಲಿನ ಪತ್ರಕರ್ತರ ಮುಂದೆ ಭಾರಿ ಸವಾಲೇ ಇದೆ. ಮೊದಲೇ ಸಿದ್ಧಮಾದರಿಯಿಂದ ಹೊರಬಾರದ ಕನ್ನಡ ಸುದ್ದಿಮಾಧ್ಯಮ ಮಾರುಕಟ್ಟೆ ಅವರುಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ.

ಸದ್ಯ, ಇದೇ ಮೊದಲ ಬಾರಿಗೆ ಮಾಧ್ಯಮ ಸಂಸ್ಥೆಯೊಂದು ತನ್ನ ಮಾಜಿ ಉದ್ಯೋಗಿಗಳ ಕುರಿತು ಸ್ಪಷ್ಟೀಕರಣ ನೀಡಿದೆ. ದಶಕಗಳು ಕಳೆದ ನಂತರವೂ ಬಾಲ್ಯಾವಸ್ಥೆಯಿಂದ ಹೊರಬರಲು ಇಷ್ಟಪಡದ ಕರ್ನಾಟಕದ ಟಿವಿ ಪತ್ರಿಕೋದ್ಯಮ ಇನ್ನೂ ಏನೇನು ನೋಡಬೇಕಿದೆಯೋ? ಕಾಲವೇ ಉತ್ತರ ನೀಡಲಿದೆ.