samachara
www.samachara.com
ಧರ್ಮಯುದ್ಧದ ಬೆನ್ನಿಗೇ ‘ಸಂಬಳ ಸಮರ’: ಪತ್ರಕರ್ತರ ಭವಿಷ್ಯದ ಮೇಲೆ ಚಪ್ಪಡಿ ಎಳೆದ ನಂಜುಂಡಿ
ಟಿವಿ

ಧರ್ಮಯುದ್ಧದ ಬೆನ್ನಿಗೇ ‘ಸಂಬಳ ಸಮರ’: ಪತ್ರಕರ್ತರ ಭವಿಷ್ಯದ ಮೇಲೆ ಚಪ್ಪಡಿ ಎಳೆದ ನಂಜುಂಡಿ

ಚುನಾವಣೆ ಮುಗಿಯುವವರೆಗೂ ಸಂಬಳ ನೀಡಲು ಸಾಧ್ಯವಿಲ್ಲ ಎಂದ ನಂಜುಂಡಿ ನಾಲ್ವರನ್ನು ತಕ್ಷಣವೇ ಕೆಲಸದಿಂದ ಕಿತ್ತು ಹಾಕಿದ್ದಾರೆ. ಅಲ್ಲಿಗೆ, ಹಲವು ತಿಂಗಳುಗಳ ಕಾಲ ಸಹಿಸಿಕೊಂಡಿದ್ದ ಪತ್ರಕರ್ತರ ಆಕ್ರೋಶ ಸ್ಫೋಟಗೊಂಡಿದೆ.

ಸಮುದಾಯವೊಂದು ಮಾತು ಮರೆತರೆ, ತನ್ನ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡರೆ ಸಾಮೂಹಿಕವಾಗಿ ಎಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಟಿವಿ 1 ಕನ್ನಡ ಸುದ್ದಿವಾಹಿನಿಯಲ್ಲಿ ಶುಕ್ರವಾರ ನಡೆದ ಘಟನೆ ಸಾಕ್ಷಿ.

ಅಂದಗಾಗೆ, ಟಿವಿ 1 ಕನ್ನಡ ಇತ್ತೀಚೆಗಷ್ಟೆ ತಿರುಪತಿ ತಿಮ್ಮಪ್ಪನ ನಾಮವನ್ನು ಇಟ್ಟುಕೊಂಡು ‘ಧರ್ಮಯುದ್ಧ’ಕ್ಕೆ ಇಳಿದಿತ್ತು. ವಾಹಿನಿಯ ಪ್ರಧಾನ ಸಂಪಾದಕ ಟಿ. ಆರ್. ಶಿವಪ್ರಸಾದ್, ಪ್ರಗತಿಪರ ಎಂಬ ಹಣೆಪಟ್ಟಿ ಕಟ್ಟಿಕೊಂಡವರೊಬ್ಬರ ಅತಾರ್ಕಿಕ ಮಾತುಗಳನ್ನೇ ಇಟ್ಟುಕೊಂಡು ಧಾರ್ಮಿಕ ನೆಲೆಯಲ್ಲಿ ತಮ್ಮ ಟಿಅರ್‌ಪಿ ಅಲೆಯನ್ನು ಸೃಷ್ಟಿಸಿಕೊಳ್ಳುವ ವಿಫಲ ಯತ್ನ ನಡೆಸಿದ್ದರು. ಅದರ ತಣ್ಣಗಾಗುವ ಹೊತ್ತಿಗೆ, ಟಿವಿ 1 ಕನ್ನಡ ವಾಹಿನಿಯ ಅಂತರಾಳದಲ್ಲಿ ‘ಸಂಬಳದ ಯುದ್ಧ’ ನಡೆದಿದೆ.

ನಡೆದಿದ್ದೇನು?:

ಬೆಂಗಳೂರಿನ ಯಶವಂತಪುರದಲ್ಲಿರುವ ಟಿವಿ 1 ಕನ್ನಡ ವಾಹಿನಿಯು ವಿಶ್ವಕರ್ಮ ಸಮುದಾಯದ ನಾಯಕ, ಬಿಜೆಪಿ ಸೇರಿರುವ ನಂಜುಂಡಿ ಮಾಲೀಕತ್ವದ ಸಂಸ್ಥೆ. ಇತ್ತೀಚೆಗಷ್ಟೆ ತೆರೆಕಂಡ ವಾಹಿನಿಯನ್ನು ಮುನ್ನಡೆಸಲು ಟಿವಿ 9 ಕರ್ನಾಟಕದ ಮಾಜಿ ಪತ್ರಕರ್ತ ಟಿ. ಆರ್‌. ಶಿವಪ್ರಸಾದ್‌ಗೆ ಹೊಣೆಗಾರಿಕೆ ನೀಡಲಾಗಿತ್ತು. ವಾಹಿನಿ ಆರಂಭಕ್ಕೂ ಮುನ್ನ ಒಮ್ಮೆ ಫೇಸ್‌ಬುಕ್‌ ಲೈವ್‌ನಲ್ಲಿ ಉಳಿದ ವಾಹಿನಿಗಳಿಗೆ ಠಕ್ಕರ್ ಕೊಡಲು ಹೊರಟ ಶಿವಪ್ರಸಾದ್, ‘ನಾವು ಪ್ರತಿ ತಿಂಗಳು 5ನೇ ತಾರೀಖಿಗೆ ಸಂಬಳ ಹಾಕುತ್ತೇವೆ’ ಎಂದಿದ್ದರು. ಆದರೆ ಅದು ಬಾಹ್ಯ ಹೇಳಿಕೆಗೆ ಮಾತ್ರವೇ ಸೀಮಿತವಾಗಿತ್ತು.

ಈ ತಿಂಗಳು 10ನೇ ತಾರಿಖು ಕಳೆದರೂ ಸಾಕಷ್ಟು ಸಿಬ್ಬಂದಿಗಳು, ಪತ್ರಕರ್ತರಿಗೆ ಇಲ್ಲಿ ಸಂಬಳವಾಗಿರಲಿಲ್ಲ. ಈ ವಾರದ ಆರಂಭದಲ್ಲಿ ಸಂಬಳ ಕೇಳಿದ ಇಬ್ಬರು ವಿಡಿಯೋ ಎಡಿಟರ್‌ಗಳನ್ನು ಮನೆಗೆ ಕಳುಹಿಸಲಾಗುತ್ತು.

ಶುಕ್ರವಾರ ನಾಲ್ವರು ಪತ್ರಕರ್ತರು ಸಂಬಳ ಕೊಡಿ, ಇಲ್ಲವೇ ಕನಿಷ್ಟ ಮುಂಗಡ ನೀಡಿ, ಮನೆ ಬಾಡಿಗೆ ಕಟ್ಟಬೇಕಿದೆ ಎಂದು ಕೆ. ಪಿ. ನಂಜುಂಡಿ ಬಳಿ ಕೇಳಿಕೊಂಡಿದ್ದಾರೆ. ಚುನಾವಣೆ ಮುಗಿಯುವವರೆಗೂ ಸಂಬಳ ನೀಡಲು ಸಾಧ್ಯವಿಲ್ಲ ಎಂದ ನಂಜುಂಡಿ ನಾಲ್ವರನ್ನು ತಕ್ಷಣವೇ ಕೆಲಸದಿಂದ ಕಿತ್ತು ಹಾಕಿದ್ದಾರೆ. ಅಲ್ಲಿಗೆ, ಹಲವು ತಿಂಗಳುಗಳ ಕಾಲ ಸಹಿಸಿಕೊಂಡಿದ್ದ ಪತ್ರಕರ್ತರ ಆಕ್ರೋಶ ಸ್ಫೋಟಗೊಂಡಿದೆ.

ಸಂಬಳ ಕೇಳಿದ್ದಕ್ಕೆ ಟರ್ಮಿನೇಶನ್. ನೀಡಿದ ಕಾರಣ ಅಸಮರ್ಪಕ ಕೆಲಸ. ಇದು ಪತ್ರಕರ್ತರ ಭವಿಷ್ಯದ ಮೇಲೆ ಚಪ್ಪಡಿ ಎಳೆಯುವ ಕೆಲಸ. 
ಸಂಬಳ ಕೇಳಿದ್ದಕ್ಕೆ ಟರ್ಮಿನೇಶನ್. ನೀಡಿದ ಕಾರಣ ಅಸಮರ್ಪಕ ಕೆಲಸ. ಇದು ಪತ್ರಕರ್ತರ ಭವಿಷ್ಯದ ಮೇಲೆ ಚಪ್ಪಡಿ ಎಳೆಯುವ ಕೆಲಸ. 

ಮೊದಲು ಉಡಾಫೆಯಿಂದ ನಡೆದುಕೊಂಡ ನಂಜುಂಡಿ, ಸಂಬಳ ಕೇಳಿದವರನ್ನು ಹೊರದಬ್ಬುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನಾಲ್ವರು ಪತ್ರಕರ್ತರ ಜತೆಗೆ ಉಳಿದ ಪತ್ರಕರ್ತರೂ ದನಿಗೂಡಿಸುವ ಮೂಲಕ ನಂಜುಂಡಿ ನಿರೀಕ್ಷೆ ಮೀರಿ, ವಾಹಿನಿ ಒಳಗೆ ‘ಸಂಬಳದ ಯುದ್ಧ’ ಘೋಷಣೆಯಾಗಿದೆ. ಈ ಸಮಯದಲ್ಲಿ ನಡೆದ ಕೆಲವು ಮಾತುಕತೆಯ ವಿಡಿಯೋಗಳು ಈಗಾಗಲೇ ಹೊರಬಿದ್ದಿವೆ.

“ಪಿಎಫ್‌, ಇಎಸ್‌ಐ, ಆಫರ್ ಲೆಟರ್ ಯಾವುದು ಇಲ್ಲದೆ ಇಷ್ಟು ದಿನ ಕೆಲಸ ಮಾಡಿದ್ದೇವೆ. ಈಗ ಟರ್ಮಿನೇಶನ್ ಲೆಟರ್ ಬೇರೆ ಕೊಟ್ಟಿದ್ದಾರೆ. ಇದನ್ನು ಇಟ್ಟುಕೊಂಡು ಕಾನೂನು ಹೋರಾಟ ಮಾಡುತ್ತೇವೆ,’’ ಎಂದು ಹಿರಿಯ ಪತ್ರಕರೊಬ್ಬರು ಹೇಳಿದರು.

ಪತ್ರಕರ್ತರ ಇಂತಹ ಕಾರಣಕ್ಕಾಗಿ ಕಾನೂನು ಹೋರಾಟವನ್ನು ಸಮಯ ಸುದ್ದಿವಾಹಿನಿಯಲ್ಲಿ ಐದು ವರ್ಷಗಳ ಹಿಂದೆಯೇ ನಡೆಸಿದ್ದರು. ಅಂತಿಮವಾಗಿ ಹೋರಾಟಕ್ಕಿಳಿದವರನ್ನು ಸಮುದಾಯ ಕಣ್ಣೆತ್ತಿಯೂ ನೋಡಿರಲಿಲ್ಲ, ಕನಿಷ್ಟ ಜತೆಗೆ ನಿಲ್ಲುವ ನೈತಿಕತೆಯನ್ನು ತೋರಿಸಿರಲಿಲ್ಲ. ಬದಲಿಗೆ, ನ್ಯಾಯಕ್ಕಾಗಿ ದನಿ ಎತ್ತಿದವರನ್ನು ಉಳಿದ ಸಂಸ್ಥೆಗಳು ‘ಅಪಾಯಕಾರಿಗಳು’ ಎಂದು ನೋಡುವ ಪರಿಪಾಠ ಇದೆ.

ಮಧ್ಯರಾತ್ರಿ ಚೆಕ್‌:

ಸಂಜೆ ಹೊತ್ತಿಗೆ ಈ ಘಟನೆ ನಡೆದಿದೆಯಾದರೂ ಅದಕ್ಕೊಂದು ತಕ್ಷಣದ ತಾರ್ಕಿಕ ಅಂತ್ಯ ಅಂತ ಸಿಕ್ಕಿದ್ದು ಶನಿವಾರ ಮುಂಜಾನೆ 4 ಗಂಟೆ ಹೊತ್ತಿಗೆ. ನಾಲ್ವರು ಪತ್ರಕರ್ತರಿಗೆ ದನಿಯಾದ ಉಳಿದವರು ಸೇರಿದಂತೆ ಒಟ್ಟು 23 ಜನ ಒಂದೇಟಿಗೆ ವಾಹಿನಿಗೆ ರಾಜೀನಾಮೆ ನೀಡಿದ್ದಾರೆ.

ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಶಿವಪ್ರಸಾದ್, “ನೀವಿನ್ನೂ ಬೆಳೆಯಬೇಕಾದವರು. ನಾಲ್ವರ ಕಾರಣಕ್ಕೆ ಎಮೋಷನಲ್ ಆಗಿ ವರ್ತಿಸಬೇಡಿ. ರಾಜೀನಾಮೆ ವಾಪಾಸ್ ತೆಗೆದುಕೊಳ್ಳಿ ಎಂದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು,’’ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. ಕೊನೆಗೆ ಐವರು ಪತ್ರಕರ್ತರಿಗೆ ಟರ್ಮಿನೇಶನ್ ಹಾಗೂ ಉಳಿದವರ ರಾಜೀನಾಮೆ ಅಂಗೀಕರಿಸಿದ ಕೆ. ಪಿ ನಂಜುಂಡಿ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಸಂಬಳದ ಚೆಕ್‌ ನೀಡಿ ಸಾಗಹಾಕಿದ್ದಾರೆ.

ಶನಿವಾರ ಬೆಳಗ್ಗೆ ‘ಸಮಾಚಾರ’ದ ಜತೆ ಮಾತನಾಡಿದ ಕೆ. ಪಿ. ನಂಜುಂಡಿ, “ಘಟನೆ ನಡೆದಿದೆ. ಕೆಲಸ ಬೇಡ ಎಂದು ಅವರು ಬಿಟ್ಟು ಹೋಗಿದ್ದಾರೆ. ಚುನಾವಣೆ ಮುಗಿಯುತ್ತಲೇ ಒಂದಷ್ಟು ದಿನ ಕೆಲಸ ಬಿಡುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ನಮ್ಮ ಮಾನವ ಸಂಪನ್ಮೂನ ಅಧಿಕಾರಿ ಅವರುಗಳ ಸಂಬಳ ಹಿಡಿದಿಟ್ಟಿದ್ದರು. ಆದರೆ ಗಲಾಟೆ ಮಾಡಿ ಸಂಬಳ ತೆಗೆದುಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ,’’ ಎಂದು ಸಮಾಜಾಯಿಷಿ ನೀಡಿದರು.

ಆರೋಪಗಳೇನು?:

ಟಿವಿ 1 ವಾಹಿನಿಯಲ್ಲಿ ನಡೆದ ಬೆಳವಣಿಗೆಗಳು ಬರೀ ಸಂಬಳಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಕೆ. ಪಿ. ನಂಜುಂಡಿ ಪತ್ರಕರ್ತರನ್ನು ‘ಪುಟಗೋಸಿಗಳು, ಸೋ... ಮಕ್ಕಳು, ಅಯೋಗ್ಯರು’ ಎಂದೆಲ್ಲಾ ಕರೆದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಇಲ್ಲಿನ ಸಿಬ್ಬಂದಿಗಳು ನೀಡುತ್ತಿದ್ದಾರೆ.

ವಾಹಿನಿ ಆರಂಭದಿಂದಲೂ ಇಲ್ಲಿ ಸರಿಯಾದ ಸೌಕರ್ಯಗಳಿಲ್ಲದೆ ಮಾಧ್ಯಮ ಕೃಷಿಯನ್ನು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಕ್ಯಾಬ್ ವ್ಯವಸ್ಥೆಯಿಂದ ಆರಂಭವಾಗಿ ನಿರೂಪಕಿಯರು ಧರಿಸುವ ಉಡುಗೆವರೆಗೆ ಅತ್ಯಂತ ಕೆಟ್ಟ ಸ್ಥಿತಿ ಇಲ್ಲಿತ್ತು. ಆದರೂ, “ಅನಿವಾರ್ಯ ಕಾರಣಗಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡಿಕೊಂಡು ಬಂದೆವು. ಅವುಗಳ ಮೇಲೆ ಹೀನಾಯವಾದ ಮಾತುಗಳಿಗೂ ಕಿವಿಯಾದೆವು. ಇವೆಲ್ಲವಕ್ಕೂ ಒಂದು ಅಂತ್ಯ ಈಗ ನಾವು ಕೆಲಸ ಬಿಟ್ಟು ಬಂದಿದ್ದೇವೆ. ನಮ್ಮ ಸಮಸ್ಯೆಯನ್ನು ಉಳಿದ ಸಂಸ್ಥೆಗಳು ಹೇಗೆ ಅರ್ಥಮಾಡಿಕೊಳ್ಳುತ್ತವೆ ಎಂಬ ಆತಂಕ ಇದೆ. ಬೇರೆ ವಾಹಿನಿಗಳಲ್ಲಿ ನಮಗೆ ಕೆಲಸ ಸಿಗುವುದು ಕಷ್ಟ ಎಂಬ ಪರಿಸ್ಥಿತಿ ಇದೆ,’’ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ಪತ್ರಕರ್ತರು.

ಟಿವಿ 1 ಆಂತರಿಕ ಸಮಸ್ಯೆಗಳೇನಿದ್ದವು ಎಂಬುದನ್ನು ‘ಎನ್‌ ಸುದ್ದಿ’ ಜಾಲತಾಣ ಅಲ್ಲಿ ಕೆಲಸ ಮಾಡಿದವರ ಮಾತುಗಳಲ್ಲಿಯೇ ಇಲ್ಲಿ, ಇಲ್ಲಿ ಕಟ್ಟಿಕೊಟ್ಟಿದೆ.

“ಕೆಲವು ದಿನಗಳ ಹಿಂದೆ ಮಹಿಳಾ ಸಹೋದ್ಯೋಗಿಗಳ ಜತೆ ಅಶ್ಲೀಲವಾಗಿ ನಡೆದುಕೊಂಡ ಪ್ರೀತಂ ಕೆಮ್ಮಾಯಿ ಎಂಬ ಹಿರಿಯ ಪತ್ರಕರ್ತನನ್ನು ಹೊರಹಾಕಲಾಗಿತ್ತು. ಶುಕ್ರವಾರ ನಮ್ಮ ಗಲಾಟೆ ಹೊತ್ತಿಗೆ ಆತನನ್ನು ಮತ್ತೆ ಕೆರೆಸಿಕೊಳ್ಳಲಾಗಿದೆ. ಒಂದು ಕಡೆ ಮಹಿಳಾ ಸಬಲೀಕರಣ ಎಂದು ಮಾತನಾಡುವ ನಂಜುಂಡಿ ವಾಸ್ತವದಲ್ಲಿ ನಡೆದುಕೊಳ್ಳುವ ರೀತಿ ಇದು,’’ ಎಂದು ಪತ್ರಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸಂಕೀರ್ಣ ಪರಿಸ್ಥಿತಿ:

ಹಾಗೆ ನೋಡಿದರೆ ಇದು ಟಿವಿ 1 ಸಮಸ್ಯೆಯಾಗಿ ಮಾತ್ರವೇ ಕಾಣಿಸುತ್ತಿಲ್ಲ. ಜಿ6 ಹೆಸರಿನಲ್ಲಿ ವಾಹಿನಿಯೊಂದನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಆಪ್ತ ಉದ್ಯಮಿ ಮಕ್ಕಳಾದ ಸುಮನಾ ಗುಪ್ತಾ ಹಾಗೂ ನರೇಶ್ ಗುಪ್ತಾ ಎಂಬುವವರು ಆರಂಭಿಸಿದ್ದರು. ಇದಕ್ಕಾಗಿ ಸುಮಾರು 30 ಪತ್ರಕರ್ತರು, ತಾಂತ್ರಿಕ ಸಿಬ್ಬಂದಿ ನಾನಾ ವಾಹಿನಿಗಳನ್ನು ಬಿಟ್ಟು ಬಂದಿದ್ದರು. ಆದರೆ ವಾಹಿನಿ ಟೇಕ್ ಆಫ್‌ ಆಗಲಿಲ್ಲ. ಈಗ ಬಹುತೇಕರು ಕೆಲಸ ಇಲ್ಲದೆ ಹೊರಗೆ ಉಳಿದಿದ್ದಾರೆ. ಕೆಲವರಿಗೆ ಮಾತ್ರ ಹೊಸ ಉದ್ಯೋಗಾವಕಾಶಗಳು ಸಿಕ್ಕಿವೆ.

ಹೊಸತಾಗಿ ಆರಂಭಗೊಂಡ ಕೆಲವು ವಾಹಿನಿಗಳಲ್ಲೂ ಸಂಬಳ ಸಕಾಲಕ್ಕೆ ಆಗುತ್ತಿಲ್ಲ ಎಂಬ ಮಾಹಿತಿ ಇದೆ. ಟಿವಿ 9ನಿಂದ ಹೊರಬಿದ್ದ ಮಾರುತಿ ಮತ್ತು ರವಿ ಕುಮಾರ್ ಆರಂಭಿಸಲು ಹೊರಟ ಫರ್ಸ್ಟ್ ನ್ಯೂಸ್‌ ವಾಹಿನಿಗೂ ಆರಂಭಿಕ ಹೂಡಿಕೆದಾರರು ಕೈ ಎತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ 250 ಜನ ಪತ್ರಕರ್ತರನ್ನು ಇಟ್ಟುಕೊಂಡು ಯೂ-ಟ್ಯೂಬ್ ಚಾನಲ್ ನಡೆಸುವ ಪರಿಸ್ಥಿತಿಯಲ್ಲಿದೆ ಫರ್ಸ್ಟ್ ನ್ಯೂಸ್. ‘ಚುನಾವಣೆ ನಂತರ ವಾಹಿನಿ ಆನ್‌ ಏರ್ ಆಗುವ ನಿರೀಕ್ಷೆಯಲ್ಲಿದ್ದೇವೆ. ಸದ್ಯ ಕೆಲಸ ನಿಧಾನವಾಗಿ ನಡೆಯುತ್ತಿದೆ,’’ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡುತ್ತಾರೆ.

ಸಮಸ್ಯೆ ಎಂದರೆ, ಟಿವಿ 1ರಲ್ಲಿ ನಡೆದ ಘಟನೆಗಳು ಬಹಿರಂಗವಾದಾಗ ಈ ಕುರಿತು ಒಂದಷ್ಟು ಚರ್ಚೆಗಳು ನಡೆಯುತ್ತದೆ. ಪತ್ರಕರ್ತ ಸಮುದಾಯದ ಇಂತಹ ಅಭದ್ರತೆಗಳ ಕುರಿತು ಮಾತಿನಲ್ಲಿ ಕಾಳಜಿ ವ್ಯಕ್ತವಾಗುತ್ತದೆ. ಆದರೆ ಅದೊಂದು ಸಾಮೂಹಿಕ ಚಿಂತನೆಯಾಗಿ, ಪರಿಹಾರ ಹುಡುಕುವ ಹಾದಿಗೆ ಹೊರಳಿಕೊಳ್ಳುವುದಿಲ್ಲ.

ಸಮುದಾಯವೊಂದು ಮಾತು ಸೋತಾಗ ಮಾತ್ರವೇ ಇಂತಹದೊಂದು ಸಂಕೀರ್ಣ ಸ್ಥಿತಿ ನಿರ್ಮಾಣವಾಗುತ್ತದೆ. ಸದ್ಯ ಕನ್ನಡದ ಟಿವಿ ಪತ್ರಿಕೋದ್ಯಮದ ಇಂತಹದೊಂದು ಸ್ಥಿತಿಗೆ ಬಂದು ನಿಂತಿದೆ. ತನ್ನದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗದ ಇದರಿಂದ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯವಿದೆ?