samachara
www.samachara.com
ಕೆ.ಪಿ.ನಂಜುಂಡಿ ಮತ್ತು ಟಿ.ಶಿವಪ್ರಸಾದ್
ಟಿವಿ

‘ಟಿವಿ1ರಲ್ಲಿ ತಿರುಪತಿ ಖಾಂಡ’: ನಕಲಿ ಪ್ರಸಾದ, ಅಸಲಿ ಧರ್ಮಯುದ್ಧ!

ಇಷ್ಟಕ್ಕೂ ಇಂತಹದೊಂದು ಧರ್ಮಯುದ್ಧ ಯಾಕೆ ಆರಂಭವಾಯಿತು ಎಂದು ನೋಡಿದರೆ, ಸಿಲ್ಲಿ ಅಂತ ಅನ್ನಿಸುವ ಕಾರಣ ಸಿಗುತ್ತದೆ. ಆದರೆ ಪರಿಣಾಮ ಮಾತ್ರ ಆತಂಕ ಮೂಡಿಸುವಂತಿದೆ.

ಕನ್ನಡ ಸುದ್ದಿವಾಹಿನಿಯ ಸಂಪಾದಕರೊಬ್ಬರು ಪರದೆ ಮೇಲೆ ‘ಧರ್ಮಯುದ್ಧ’ವನ್ನು ಘೋಷಿಸುವ ಮೂಲಕ ಕನ್ನಡ ಟಿವಿ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕೆ. ಪಿ. ನಂಜುಂಡಿ ಮಾಲಿಕತ್ವದಲ್ಲಿ ಇತ್ತೀಚೆಗೆ ತೆರೆಕಂಡ ಟಿವಿ1 ವಾಹಿನಿಯ ಪ್ರಧಾನ ಸಂಪಾದಕ ಶಿವಪ್ರಸಾದ್ ಹೀಗೊಂದು ಘೋಷಣೆಯನ್ನು ಶುಕ್ರವಾರ ಮಧ್ಯರಾತ್ರಿ ಮಾಡಿದ್ದಾರೆ. ಸಂಪಾದಕರೇ ಯುದ್ಧಭೂಮಿಗೆ ಇಳಿದ ಮೇಲೆ, ಉಳಿದ ಸಿಬ್ಬಂದಿಗಳೂ ಯುದ್ಧಕ್ಕೆ ಸನ್ನದ್ಧರಾಗುವುದು ಅನಿವಾರ್ಯ ಕೂಡ. ಹೀಗಾಗಿ, ಶನಿವಾರ ಮುಂಜಾನೆಯಿಂದಲೇ ಟಿವಿ 1 ತೆರೆ ಮೇಲೆ ‘ಧರ್ಮಯುದ್ಧ’ದ ದಟ್ಟ ಕಾರ್ಮೋಡಗಳು ಆವರಿಸಿಕೊಂಡಿವೆ.

ಇಷ್ಟಕ್ಕೂ ಇಂತಹದೊಂದು ಧರ್ಮಯುದ್ಧ ಯಾಕೆ ಆರಂಭವಾಯಿತು ಎಂದು ನೋಡಿದರೆ, ಸಿಲ್ಲಿ ಅಂತ ಅನ್ನಿಸುವ ಕಾರಣ ಸಿಗುತ್ತದೆ. ಆದರೆ ಪರಿಣಾಮ ಮಾತ್ರ ಆತಂಕ ಮೂಡಿಸುವಂತಿದೆ. ಟಿವಿ ವಾಹಿನಿಯ ಸಂಪಾದಕನೊಬ್ಬನ ವೈಯಕ್ತಿಕ ಲಾಲಾಸೆಗಳು ಹೇಗಿರುತ್ತವೆ ಹಾಗೂ ಟಿಆರ್‌ಪಿಗಾಗಿ ಅವರು ಏನು ಬೇಕಾದರೂ ಮಾಡಲು ಹೇಸುವುದಿಲ್ಲ ಎಂಬುದನ್ನು ಈ ಬೆಳವಣಿಗೆ ಜಾಹೀರು ಮಾಡಿದೆ.

ನಡೆದಿದ್ದೇನು?:

ಇದು ಟಿವಿ1 ಹಾಗೂ ಶಿವ ಪ್ರಸಾದ್ ಆಯ್ದುಕೊಂಡ ಚರ್ಚಾ ವಿಷಯ. 
ಇದು ಟಿವಿ1 ಹಾಗೂ ಶಿವ ಪ್ರಸಾದ್ ಆಯ್ದುಕೊಂಡ ಚರ್ಚಾ ವಿಷಯ. 

ಶುಕ್ರವಾರ ಸಂಜೆ 7 ಗಂಟೆಗೆ ಟಿವಿ 1ರಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕ್ರಿಶ್ಚಿಯನ್ ಲಾಬಿ ತುಂಬಿಕೊಂಡಿದೆ ಎಂಬ ‘ಕಂಟೆಂಟ್’ ಇಟ್ಟುಕೊಂಡು ಪ್ಯಾನಲ್‌ ಚರ್ಚೆಯೊಂದನ್ನು ಶುರುಮಾಡಲಾಗಿತ್ತು. ಕನ್ನಡದ ವಾಹಿನಿಗಳಲ್ಲಿ ತಿರುಪತಿಯ ಬಗೆಗಿನ ಸ್ಟೋರಿಗಳು ಟಿಆರ್‌ಪಿ ತಂದುಕೊಡುತ್ತವೆ ಎಂಬ ಮಿಥ್‌ ಒಂದಿದೆ. ಹೀಗಾಗಿ ಒಂದಲ್ಲ ಒಂದು ವಾಹಿನಿ ಆಗಾಗ್ಗೆ ತಿರುಪತಿಯನ್ನು ಹಾಗೂ ಅಲ್ಲಿ ಕೊಡುವ ಲಾಡುಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತವೆ. ಬಹುಶಃ ಹೊಸತಾಗಿ ಆರಂಭಗೊಂಡ ಟಿವಿ1 ಕೂಡ ಇಂತದ್ದೇ ಒಂದು ಕಾರಣ ಇಟ್ಟುಕೊಂಡು ತಿಮ್ಮಪ್ಪನ ಕುರಿತು ಪ್ಯಾನಲ್ ಚರ್ಚೆ ಹಮ್ಮಿಕೊಂಡಿತ್ತು.

ಚರ್ಚೆಯಲ್ಲಿ ಉದಯ್ ಧರ್ಮಸ್ಥಳ ಎಂಬ ತಮ್ಮನ್ನು ತಾವು ವಾಸ್ತವ ಧರ್ಮ ಚಿಂತಕ ಎಂದು ಕರೆದುಕೊಳ್ಳುವ ಆಧ್ಯಾತ್ಮಿಕ ಚಿಂತಕ, ಅನುಪಮ ಎಂಬ ಬಲಪಂಥೀಯ ಚಿಂತಕಿ ಹಾಗೂ ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಪಾಲ್ಗೊಂಡಿದ್ದರು. ಸಂಪಾದಕ ಶಿವಪ್ರಸಾದ್ ಚರ್ಚೆಯನ್ನು ನಡೆಸಿಕೊಡುತ್ತಿದ್ದರು.

ಈ ಸಮಯದಲ್ಲಿ, ತಿಮ್ಮಪ್ಪನ ನಾಮದ ಕುರಿತು ನಡೆದ ನ್ಯಾಯಾಂಗ ಹೋರಾಟವನ್ನು ವಿವರಿಸಲು ಮುಂದಾದರು ನರಸಿಂಹ ಮೂರ್ತಿ. ಮಾತಿನ ನಡುವೆ ನಾಮ ವಿ, ಯು, ಡಬ್ಲ್ಯೂ ಹೀಗೆ ಯಾವುದೋ ಒಂದು ಶೇಪ್‌ನಲ್ಲಿ ಇರಬೇಕು ಎಂದು ಕೆಲವರು ಸುಪ್ರಿಂ ಕೋರ್ಟ್‌ವರೆಗೂ ಹೋಗಿದ್ದರು. ‘ಅದು ವಿನಾ, ಡ್ಬ್ಯೂನಾ, ಸೆಕ್ಸಾ, ಪಕ್ಸಾ ನಂಗೆ ಸರಿಯಾಗಿ ನೆನಪಿಲ್ಲ’ ಎಂದು ಬಿಟ್ಟರು.

ಅಷ್ಟೆ, ಪಕ್ಕದಲ್ಲಿ ಕುಳಿತಿದ್ದ ಶಿವಪ್ರಸಾದ್‌ಗೆ ತಮ್ಮ ಹಿನ್ನೆಲೆ ನೆನಪಾಯಿತು. ಉದಯ್ ಧರ್ಮಸ್ಥಳ ಕಾಲಲ್ಲಿರುವ ಚಪ್ಪಲಿ ತೆಗೆದುಕೊಳ್ಳಲು ಮುಂದಾದರು. ಅಶ್ಲೀಲ ಪದಗಳ ಪ್ರಯೋಗ ನಡೆಯಿತು. “ನೀವು ತಾಕತ್ತಿದ್ದರೆ ಕ್ರಿಶ್ಚಿಯನ್ ದೇವರ ಬಗ್ಗೆ ಹೀಗೆ ಮಾತನಾಡಿ. ಪೈಗಂಬರ್ ಸೆಕ್ಸ್‌ ಅಂತ ಹೇಳಿ ನೋಡಿ, ನಿಮ್ಮನ್ನು ಕೊಚ್ಚಿ ಹಾಕ್ತಾರೆ,’’ ಎಂದು ಸ್ವತಃ ಶಿವಪ್ರಸಾದ್ ತಮ್ಮ ಮಿತಿಯನ್ನು ಮರೆತು ಹಿಂದೂ ಧರ್ಮದ ರಕ್ಷಣೆಯ ಹೊಣೆಯನ್ನು ಹೊತ್ತುಕೊಂಡರು.

ಅಲ್ಲಿಂದ ಮುಂದಿನ ಐದಾರು ಗಂಟೆಗಳ ಕಾಲ ನಡೆದಿದ್ದು ಕೆಲಸಕ್ಕೆ ಬಾರದ, ಆದರೆ ಧರ್ಮಗಳ ನಡುವೆ ಬೆಂಕಿ ಹಚ್ಚಲು ಬೇಕಾದ ಚರ್ಚೆ.

ನರಸಿಂಹ ಮೂರ್ತಿ ಕ್ಷಮೆ ಕೇಳಬೇಕು ಎಂಬುದು ಉಳಿದ ಅತಿಥಿಗಳ ಹಾಗೂ ಟಿವಿ 1 ಸಂಪಾದಕನ ಆಗ್ರಹವಾಗಿತ್ತು. ನರಸಿಂಹ ಮೂರ್ತಿ ತಾವು ಹಾಗೆ ಹೇಳೇ ಇಲ್ಲ ಎಂದು ಪಟ್ಟುಹಿಡಿದು ಕುಳಿತರು. 'ಹೊರಗೆ ಜನ ಸೇರುತ್ತಿದ್ದಾರೆ’, ‘ರಾಜ್ಯಾದ್ಯಂತ ಆಕ್ರೋಶ ಹೆಚ್ಚಾಗುತ್ತಿದೆ’, ‘ಕೋಟ್ಯಾಂತರ ಜನರ ಭಾವನೆಗೆ ಧಕ್ಕೆ’ ಎಂಬಂತಹ ತಲೆಬರಹಗಳು ತೆರೆಯ ಮೇಲೆ ರಾರಾಜಿಸತೊಡಗಿದವು. ಈ ಸಮಯದಲ್ಲಿ ಟಿವಿ1 ಕಚೇರಿಗೆ ಬಂದ ಯಶವಂತಪುರ ಪೊಲೀಸ್‌ ಇನ್ಸ್‌ಪೆಕ್ಟರ್‌ ಚರ್ಚೆಯನ್ನು ನಿಲ್ಲಿಸುವಂತೆ ಕೈ ಮುಗಿದು ಬೇಡಿಕೊಂಡರು, ಸಿಬ್ಬಂದಿಗಳಿಗೂ ಸಾಕು ಸಾಕು ಅನ್ನಿಸಿತ್ತು. ಆದರೆ ಶಿವಪ್ರಸಾದ್‌ ಯುದ್ಧ ಘೋಷಿಸಿಯಾಗಿತ್ತು.

ಕೊನೆಗೆ, 11 ಗಂಟೆ ಹೊತ್ತಿಗೆ ಯಾವ ಕ್ಷಮೆಯನ್ನೂ ಕೇಳದ ನರಸಿಂಹ ಮೂರ್ತಿ ಪೊಲೀಸರ ರಕ್ಷಣೆಯಲ್ಲಿ ಮನೆಗೆ ಹೋದರು. ಈ ಸಮಯದಲ್ಲಿ ಕರೆ ಮಾಡಿದ ವೀಕ್ಷಕರಿಂದ ಅಶ್ಲೀಲ ಪದ ಪ್ರಯೋಗಗಳು ನಡೆದವು. ನರಸಿಂಹ ಮೂರ್ತಿ ಅವರನ್ನು ದರಿದ್ರ, ಹೀನ ಅಂತೆಲ್ಲಾ ಪದ ಪ್ರಯೋಗಗಳು ನಡೆದವು. ಯಾವಾಗ ಅಟ್ರಾಸಿಟಿ ಕೇಸು ದಾಖಲಿಸುವ ಸಾಧ್ಯತೆಯ ಮಾಹಿತಿ ಸಿಕ್ಕಿತೋ, ಧರ್ಮಯುದ್ಧ ಕೊಂಚ ಮಂಕಾಯಿತು. ‘ಹಿಂದೂ ಧರ್ಮ ರಕ್ಷಣೆಗೆ ಯಾರು ಬರ್ತಾರೋ, ಬಿಡ್ತಾರೋ. ನಾನಂತೂ ರೆಡಿ ಇದೀನಿ. ನನ್ನ ಮೇಲೆ ಕೇಸು ದಾಖಲಿಸಿದರೂ ಹೆದರುವುದಿಲ್ಲ’ ಎಂಬ ಮಾತುಗಳನ್ನು ಶಿವಪ್ರಸಾದ್ ಆಡಿದರು. ಅದೇ ಧರ್ಮಯುದ್ಧ ಶನಿವಾರ ಬೆಳಗ್ಗೆಯೂ ಮುಂದುವರೆದಿದೆ.

‘ಸಮಾಚಾರ’ ಜತೆ ಮಾತನಾಡಿದ ಸರಸಿಂಹ ಮೂರ್ತಿ, “ನಿಜ, ನಾನು ಮಾತಿನ ಓಘದಲ್ಲಿ ಸೆಕ್ಸ್‌ ಅನ್ನುವ ಪದ ಬಳಿಸಿದೆ. ಹಾಗಂತ ಅದನ್ನು ತಿಮ್ಮಪ್ಪನಿಗೆ ಹೇಳಲಿಲ್ಲ. ಆದರೆ ಶಿವಪ್ರಸಾದ್ ಮತ್ತು ಉದಯ್ ಧರ್ಮಸ್ಥಳ ಧರ್ಮಗಳನ್ನು ಎಳೆದು ತಂದರು. ನನ್ನನ್ನು ಬಳಸಿಕೊಂಡು ಧರ್ಮಗಳ ನಡುವೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದರು,’’ ಎಂದರು.

ನಕಲಿ ಶಿವಪ್ರಸಾದ:

ಶಿವಪ್ರಸಾದ್ ಬಗ್ಗೆ ಬಂದ ಒಂದು ಹಳೇ ವರದಿ. 
ಶಿವಪ್ರಸಾದ್ ಬಗ್ಗೆ ಬಂದ ಒಂದು ಹಳೇ ವರದಿ. 

ಶಿವಪ್ರಸಾದ್‌ ಟಿವಿ9 ಕರ್ನಾಟಕದಲ್ಲಿ ದಿಲ್ಲಿ ವರದಿಗಾರರಾಗಿದ್ದವರು. ತಮ್ಮ ಸಹೋದ್ಯೋಗಿಗೇ ಸುಪಾರಿ ನೀಡಿದ ಆರೋಪಕ್ಕೆ ಗುರಿಯಾಗಿದ್ದರು. ಅಷ್ಟೆ ಅಲ್ಲ, ನಕಲಿ ಪಾಸ್‌ಪೋರ್ಟ್‌ ಪ್ರಿಂಟ್ ಮಾಡುವ ಹಗರಣದಲ್ಲಿ ತಗಲಾಕ್ಕೊಂಡು ತನಿಖೆ ಎದುರಿಸಿದವರು. ಆ ಕಾರಣಕ್ಕೆ ಕೆಲಸ ಕಳೆದುಕೊಂಡು ಬೀದಿಗೆ ಬಂದವರು. ಅದಾದ ಮೇಲೆ ಸಮಯ ಟಿವಿ, ಜನಶ್ರೀ ಕೊನೆಗೆ ಟಿವಿ1ವರೆಗೆ ಬಂದವರು ‘ಧರ್ಮ ರಕ್ಷಕ’ನ ಸ್ಥಾನಮಾನಕ್ಕಾಗಿ ಈಗ ಬಡಿದಾಡುತ್ತಿದ್ದಾರೆ.

ಶಿವಪ್ರಸಾದ್ ತಂದೆ ಯಡಿಯೂರಪ್ಪ ಜತೆಗಿದ್ದರು. ಈತ ಕೂಡ ಆರ್‌ಎಸ್‌ಎಸ್‌ ಶಾಖೆಯ ಜತೆಗೆ ಸಂಬಂಧ ಇಟ್ಟುಕೊಂಡ ವ್ಯಕ್ತಿ. ಸಹಜವಾಗಿಯೇ ಹಿಂದುತ್ವ ರಕ್ತದಲ್ಲಿಯೇ ಹರಿದಾಡುತ್ತಿದೆ. ಅದಕ್ಕಿಂತ ಹೆಚ್ಚಾಗಿ ಶಿವಪ್ರಸಾದ್‌ ಟಿವಿ ವಾಹಿನಿಗಳಿಗೆ ಅಗತ್ಯ ಮನಸ್ಥಿತಿಯನ್ನು ಜಗ್ಗಿಸಿಕೊಂಡಾತ.

ಆಗಿನ್ನೂ ಟಿವಿ 1 ವಾಹಿನಿ ಲಾಂಚ್ ಆಗದ ಸಮಯ. ಫೇಸ್‌ಬುಕ್‌ನಲ್ಲಿ ಬೆಂಗಳೂರು ಮೆಟ್ರೊದಲ್ಲಿ ಕನ್ನಡ ಎಂಬ ವಿಚಾರದಲ್ಲಿ ಲೈವ್‌ ನೀಡಲಾಗುತ್ತಿತ್ತು. ಈ ಸಮಯದಲ್ಲಿ ಬಂದ ಶಿವಪ್ರಸಾದ್ ಕನ್ನಡ ವಿಚಾರದಲ್ಲಿ ‘ಬೋ..ಮಗ’ ಎಂದು ಹೋರಾಟಕ್ಕಿಳಿದರು. ಕನ್ನಡದ ವಿಚಾರ ಬಂದಾಗ ಅಗ್ರೆಸಿವ್ ಆಗಿರಬೇಕು ಎಂದು ಸಿಬ್ಬಂದಿಗಳು ಕಿವಿ ಮಾತು ಹೇಳಿದರು.

“ನಮ್ಮ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಆತ ಕಳಿಸುವ ವಾಯ್ಸ್‌ ಮೆಸೇಜ್‌ಗಳನ್ನು ಕೇಳಿಸಿಕೊಂಡರೆ ಸ್ನಾನ ಮಾಡಬೇಕು ಅನ್ನಿಸುತ್ತದೆ. ಲಾಡಿ ಬಿಚ್ಚಿ ಕಳಿಸುತ್ತೇನೆ ಎಂದೆಲ್ಲಾ ಹೇಳುತ್ತಾರೆ. ಆ ಮನುಷ್ಯನ ನಾಲಿಗೆ ಸಹಿಸಿಕೊಳ್ಳುವುದು ಕಷ್ಟ,’’ ಎನ್ನುತ್ತಾರೆ ಟಿವಿ1 ಸಿಬ್ಬಂದಿಯೊಬ್ಬರು.

ಇಂತಹ ಹಿನ್ನೆಲೆಯ ವ್ಯಕ್ತಿಯೊಬ್ಬನ ಕೈಗೆ ವಾಹಿನಿಯೊಂದು ಸಿಕ್ಕರೆ ಎಂತಹ ಅಪಾಯಕಾರಿ ವಿಚಾರಗಳನ್ನು ಹರಡಬಹುದು ಎಂಬುದಕ್ಕೆ ಶುಕ್ರವಾರದ ಧರ್ಮಯುದ್ಧ ಒಂದು ಉದಾಹರಣೆ ಅಷ್ಟೆ.

ನಂಜುಂಡಿ ಗಮನಕ್ಕೆ:

ಟಿವಿ1 ಮಾಲೀಕ ಕೆ. ಪಿ. ನಂಜುಂಡಿ. 
ಟಿವಿ1 ಮಾಲೀಕ ಕೆ. ಪಿ. ನಂಜುಂಡಿ. 

ಪತ್ರಿಕಾಧರ್ಮವನ್ನು ಪಾಲಿಸುವಾತ ಧಾರ್ಮಿಕ ವಿಚಾರಗಳಲ್ಲಿ ನಿರ್ಲಿಪ್ತನಾಗದ ಹೊರತು ನ್ಯಾಯ ಒದಗಿಸಲು ಸಾಧ್ಯವಾಗದು. ಟಿವಿ1 ಚರ್ಚೆ ಹಾಗೂ ಅದನ್ನು ನಡೆಸಿಕೊಟ್ಟ ರೀತಿಯನ್ನು ಗಮನಿಸಿದರೆ, ಯಾಕೆ ಪತ್ರಕರ್ತರಾದವರು ಯಾವ ಚೌಕಟ್ಟಿಗೂ ಸಿಲುಕಬಾರದು ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಹಿಂದೂ ಧರ್ಮದ ರಕ್ಷಣೆಯನ್ನು ಮಾಡಲು ಹೊರಡುವುದು ಅಷ್ಟೆ ಅಲ್ಲ, ಇತರೆ ಧರ್ಮಗಳ ಜತೆ ಹೋಲಿಸುವ ಮೂಲಕ ಧಾರ್ಮಿಕ ಅಸಹಿಷ್ಣುತೆಯನ್ನು ಹುಟ್ಟುಹಾಕುವ ಪ್ರಯತ್ನವನ್ನು ಶಿವಪ್ರಸಾದ್‌, ಟಿವಿ1 ಮಾಡಿದೆ. ಇದು ಅಪಾಯಕಾರಿ ಬೆಳವಣಿಗೆ.

ಟಿವಿ ಪ್ಯಾನಲ್‌ನಲ್ಲಿ ನರಸಿಂಹ ಮೂರ್ತಿ ಆಡಿದ ಮಾತುಗಳು ಎಲ್ಲೆ ಮೀರಿದ್ದವು. ಆದರೆ ಅದು ಪ್ರಜ್ಞಾಪೂರ್ವಕ ಅಂತ ಚರ್ಚೆಯ ವಿಡಿಯೋವನ್ನು ಗಮನಿಸಿದರೆ ಅನ್ನಿಸುವುದಿಲ್ಲ. ಅದನ್ನು ವಸ್ತುನಿಷ್ಟವಾಗಿ ನಿವಾರಿಸಿಕೊಂಡು ಮೂಲ ಚರ್ಚೆಯ ಎಳೆಯನ್ನು ಮುಂದಕ್ಕೆ ಒಯ್ಯಬೇಕಾದ ಸ್ಥಾನದಲ್ಲಿದ್ದ ಶಿವಪ್ರಸಾದ್ ಕೂಡ ತಮ್ಮ ಎಲ್ಲೆಗಳನ್ನು ಮೀರಿದ್ದಾರೆ. ಅಷ್ಟೆ ಅಲ್ಲ, ಅದನ್ನೇ ಇಟ್ಟುಕೊಂಡು ರಾಜ್ಯಾದ್ಯಂತ ಧಾರ್ಮಿಕ ಸಂಘರ್ಷವನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಇದನ್ನು ವಾಹಿನಿಯ ಮಾಲೀಕ ನಂಜುಂಡಿ ಗಮನಿಸಬೇಕಿದೆ. ಜತೆಗೆ, ಮುಂದಾಗಬಹುದಾದ ಅಪಾಯಕಾರಿ ಬೆಳವಣಿಗೆಯ ನೈತಿಕ ಹೊಣೆಯನ್ನು ಅವರು ಹೊರಲೇಬೇಕಾಗುತ್ತದೆ. ಇಲ್ಲದಿದ್ದರೆ ಅವರ ಎಂಎಲ್‌ಸಿ ಆಸೆಗೂ ಎಳ್ಳು-ನೀರು ಬಿಡಬೇಕಾಗುತ್ತದೆ.