ಮೀಟ್‌ ಮಾರ್ವಿಯಾ ಮಲೀಕ್‌: ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ನ್ಯೂಸ್ ಆಂಕರ್‌
ಟಿವಿ

ಮೀಟ್‌ ಮಾರ್ವಿಯಾ ಮಲೀಕ್‌: ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ನ್ಯೂಸ್ ಆಂಕರ್‌

#MarviaMalik; ಸತತ 4 ದಿನಗಳಿಂದ ಪಾಕಿಸ್ತಾನದಲ್ಲಿ ಟ್ವಿಟ್ಟರ್‌ ಟ್ರೆಂಡಿಂಗ್‌ನಲ್ಲಿರುವ ಈ ಹೆಸರು ಇತಿಹಾಸ ಸೃಷ್ಟಿಸಿದೆ. ಪಾಕಿಸ್ತಾನದ ವಾಹಿನಿಯೊಂದು ತೃತೀಯ ಲಿಂಗಿ ಆಂಕರ್‌ ನೇಮಿಸುವ ಮೂಲಕ ಹೊಸ ಸಾಧ್ಯತೆಗೆ ಭಾಷ್ಯ ಬರೆದಿದೆ. 

ಇದು ಪಾಕಿಸ್ತಾನವಷ್ಟೇ ಅಲ್ಲದೇ ಇಡೀ ಜಗತ್ತಿಗೆ ಮಾದರಿ ಮತ್ತು ಐತಿಹಾಸಿಕ ದಾಖಲೆ ಅಂದರೆ ತಪ್ಪಾಗಲಾರದು. ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿ ‘ಕೊಹಿನೂರ್‌ ನ್ಯೂಸ್‌’ ತೃತೀಯ ಲಿಂಗಿ ಮಾರ್ವಿಯಾ ಮಲಿಕ್‌ ಎಂಬುವವರನ್ನು ಆಂಕರ್‌ ಹುದ್ದೆಗೇರಿಸಿದೆ.

ಈ ಮೂಲಕ ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಆಂಕರ್‌ ಎಂಬ ಹೆಗ್ಗಳಿಕೆ ಮಾರ್ವಿಯಾ ಮಲಿಕ್‌ ಪಾಲಾಗಿದೆ. ಸಾಮಾನ್ಯವಾಗಿ ಲಿಂಗ ಬೇಧ ನೀತಿ ಜಗತ್ತಿನಾದ್ಯಂತ ಇಂದಿಗೂ ಚಾಲ್ತಿಯಲ್ಲಿದೆ. ಜತೆಗೆ ತೃತೀಯ ಲಿಂಗಿಗಳನ್ನು ಅಸ್ಪೃಶ್ಯರಂತೆ ಕಾಣುವ ಸಾಮಾಜಿಕ ಪಿಡುಗಿನಿಂದ ಜಗತ್ತು ಇನ್ನೂ ಹೊರಬಂದಿಲ್ಲ.

ಆದರೆ ಮಾರ್ವಿಯಾ ಮಲಿಕ್‌ರ ಈ ಸಾಧನೆಗೆ ಮತ್ತು ಕೊಹಿನೂರ್‌ ನ್ಯೂಸ್‌ ತಳೆದ ಐತಿಹಾಸಿಕ ನಿರ್ಣಯಕ್ಕೆ ಜಾಗತಿಕ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ. ತೃತೀಯ ಲಿಂಗಿಗಳ ಸ್ಥಾನಮಾನದ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ತೃತೀಯ ಲಿಂಗಿಗಳ ಸಾಮಾಜಿಕ ಸ್ಥಿತಿ-ಗತಿ:

2017ರ ವರದಿಯೊಂದರ ಪ್ರಕಾರ ಪಾಕಿಸ್ತಾನದಲ್ಲಿ ಐದು ಲಕ್ಷ ತೃತೀಯ ಲಿಂಗಿಗಳಿದ್ದಾರೆ. ಪಾಕಿಸ್ತಾನದ ತೃತೀಯ ಲಿಂಗಿಗಳ ಸ್ಥಿತಿಗೂ ಭಾರತದಲ್ಲಿರುವ ತೃತೀಯ ಲಿಂಗಿಗಳ ಸ್ಥಿತಿಗೂ ದೊಡ್ಡ ಬದಲಾವಣೆಗಳೇನಿಲ್ಲ. ಎರಡೂ ದೇಶಗಳಲ್ಲಿ ಸಾಮಾಜಿಕ, ಆರ್ಥಿಕ ನೆಲೆಗಟ್ಟಿನಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ.

ಪಾಕಿಸ್ತಾನದಲ್ಲಿ ತೃತೀಯ ಲಿಂಗಿಗಳ ಸಮಾನತೆಗೆ ಹೋರಾಟ ಮಾಡುತ್ತಿರುವವರಲ್ಲಿ ಕ್ವಾಜಾ ಸಾರಾ ಮುಂಚೂಣಿಯಲ್ಲಿರುವ ಕಾರ್ಯಕರ್ತೆ. ಜತೆಗೆ ತೃತೀಯ ಲಿಂಗಿಯೂ ಆಗಿರುವ ಸಾರಾ ಪಾಸ್‌ಪೋರ್ಟ್‌ ಪಡೆದ ಪಾಕಿಸ್ತಾನದ ಮೊದಲ ತೃತೀಯ ಲಿಂಗಿ. ಪಾಕಿಸ್ತಾನ ಮಾಧ್ಯಮಗಳ ವರದಿ ಪ್ರಕಾರ ಹಜ್‌ ಸ್ವಯಂಸೇವಕ ಹುದ್ದೆಗೂ ತೃತೀಯ ಲಿಂಗಿಗಳನ್ನು ಪಾಕಿಸ್ತಾನದಲ್ಲಿ ನೇಮಿಸಲಾಗಿದೆ. ಈ ವಿಚಾರಕ್ಕೆ ಬಂದರೆ ಪಾಕಿಸ್ತಾನಕ್ಕಿಂತಲೂ ಭಾರತವೇ ಹಿಂದಿದೆ.

ಪಾಕಿಸ್ತಾನ 2018ನೇ ವರ್ಷದಲ್ಲಿ ಈ ರೀತಿಯ ಹಲವು ಐತಿಹಾಸಿಕ ನಿರ್ಣಯಗಳನ್ನು ತಳೆದಿದೆ. ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕೃಷ್ಣ ಕುಮಾರಿ ಎಂಬ ದಲಿತ ಸಮುದಾಯದ ಮಹಿಳೆ ಸೆನೇಟರ್‌ ಹುದ್ದೆಗೆ ಏರಿದ್ದರು. ಪಾಕಿಸ್ತಾನದ ಇತಿಹಾಸದಲ್ಲೇ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬರು ಸೆನೇಟರ್‌ ಹುದ್ದೆ ಪಡೆದ ನಿದರ್ಶನ ಇದು. ಅದೇ ರೀತಿ, ಪಾಕಿಸ್ತಾನದ ಫ್ಯಾಷನ್‌ ಡಿಸೈನ್‌ ಕೌನ್ಸಿಲ್‌ ತನ್ನ ಷೋ ಸ್ಟಾಪರ್‌ ಆಗಿ ತೃತೀಯ ಲಿಂಗಿಯೊಬ್ಬರಿಗೆ ಅವಕಾಶ ನೀಡಿದ್ದಾಗಿ ‘ಫ್ರೀ ಕಾಶ್ಮೀರ್‌’ ಪತ್ರಿಕೆ ವರದಿ ಮಾಡಿದೆ.

ಜತೆಗೆ ಇದೇ ಮಾರ್ಚ್‌ ತಿಂಗಳಲ್ಲಿ ಪಾಕಿಸ್ತಾನದ ಆಡಳಿತ ‘ತೃತೀಯ ಲಿಂಗಿಗಳ ಲೈಂಗಿಕ, ದೈಹಿಕ ಹಲ್ಲೆ ಮತ್ತು ಕಿರುಕುಳದ ವಿರುದ್ಧ ರಕ್ಷಣಾ ಕಾಯ್ದೆಯನ್ನು ಮಂಡಿಸಿದೆ. ಇವೆಲ್ಲವನ್ನೂ ಗಮನಿಸಿದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪಾಕಿಸ್ತಾನ ಕೂಡ ಗೊಡ್ಡು ಪರಂಪರೆಯನ್ನು ಬದಿಗೊತ್ತಿ ಸಮಾಜ ಪರ ನಿಲುವುಗಳನ್ನು ಜಾರಿಗೆ ತರಲು ಮುಂದಾಗಿದೆ ಅನಿಸುತ್ತಿದೆ ಮತ್ತು ಅದು ಸ್ವಾಗತಾರ್ಹವೂ ಹೌದು.

ಈ ಕಾಯ್ದೆಯ ಅನ್ವಯ, ತೃತೀಯ ಲಿಂಗಿಗಳನ್ನು ಅಪಹರಿಸುವುದು, ಒಪ್ಪಿತವಲ್ಲದ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುವುದು, ವಿದ್ಯಾ ಸಂಸ್ಥೆಗಳಲ್ಲಿ ಸೇರಿಸಿಕೊಳ್ಳದಿರುವುದು ಮತ್ತಿತರ ಅಂಶಗಳಲ್ಲಿ ಭಾಗಿಯಾದಲ್ಲಿ ಕಠಿಣ ಕಾನೂನು ಸಜೆ ವಿಧಿಸಲಾಗುತ್ತದೆ. ಈ ರೀತಿಯ ಕಾನೂನು ತರಲು ದಶಕಗಳೇ ಹಿಡಿದಿದೆ. ಆದರೆ ಪಾಕಿಸ್ತಾನದ ಬದಲಾದ ಮನಸ್ಥಿತಿ ಮತ್ತು ರಾಜಕೀಯ ಇಚ್ಚಾಶಕ್ತಿ ಇದರಿಂದ ಸ್ಪಷ್ಟವಾಗುತ್ತದೆ.

ಸಮಾಜದ ಹುಳುಕುಗಳನ್ನು ಬೆಳಕಿಗೆ ತರುವ, ಒತ್ತಿ ಹೇಳುವ ಕೆಲಸ ಮಾಡುತ್ತಿರುವ ಬಹುತೇಕ ಮಾಧ್ಯಮಗಳೂ ಕೂಡ ತೃತೀಯ ಲಿಂಗಿಗಳನ್ನು ಅಸ್ಪೃಶ್ಯರಂತೆಯೇ ಕಾಣುತ್ತವೆ. ಆದರೆ ಪಾಕಿಸ್ತಾನದ ಸುದ್ದಿ ವಾಹಿನಿ ತೆಗೆದುಕೊಂಡ ಈ ನಿರ್ಣಯದಿಂದ ಭಾರತದ ಮಾಧ್ಯಮಗಳೂ ಪಾಠ ಕಲಿಯಬೇಕಿದೆ.

ಜಾಲತಾಣಗಳಲ್ಲಿ ಪ್ರಶಂಸೆ:

ಮಾರ್ವಿಯಾ ಮಲಿಕ್‌ ಕೊಹಿನೂರ್‌ ನ್ಯೂಸ್‌ನಲ್ಲಿ ಆಂಕರ್‌ ಆಗಿ ಕಾಣಿಸಿಕೊಂಡ ಬೆನ್ನಲ್ಲೇ, ಕೇವಲ ಪಾಕಿಸ್ತಾನವಷ್ಟೇ ಅಲ್ಲದೇ ಹಲವು ದೇಶಗಳಲ್ಲಿ ಚರ್ಚೆಗೆ ಒಳಗಾದರು. ಅವರ ಸಾಧನೆಗೆ ಪ್ರಶಂಸೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದವು. ಕಳೆದ ಶುಕ್ರವಾರ ಪಾಕಿಸ್ತಾನದ ಟಾಪ್‌ ಟ್ವಿಟ್ಟರ್‌ ಟ್ರೆಂಡ್‌ ಕೂಡ #MarviaMalik ಆಗಿತ್ತು. ಸಾಮಾಜಿಕ ಜಾಲತಾಣಗಳ ಕೆಲ ಟ್ವೀಟ್‌ಗಳು ಹೀಗಿದೆ.

ಇದೇ ರೀತಿ ಸಾವಿರಾರು ಟ್ವೀಟ್‌ಗಳು ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳು ಕಳೆದ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುತ್ತಿವೆ. ಸಾಮಾಜಿಕ ಬದಲಾವಣೆಯ ಬಗೆಗಿನ ಚರ್ಚೆಗೂ ಇದು ಹೊಸತನವನ್ನು ನೀಡಿದೆ. ತನ್ನಂತೆಯೇ ತೃತೀಯ ಲಿಂಗಿಗಳಾಗಿರುವ ಎಲ್ಲರ ಮುಖವಾಣಿಯಾಗಿ ಮತ್ತು ಸ್ಪೂರ್ತಿಯಾಗಿ ನಿಲ್ಲಲು ಮಾರ್ವಿಯಾ ಮಲಿಕ್‌ ಹಲವು ವರ್ಷಗಳಿಂದ ಶ್ರಮಿಸಿದ್ದಾರೆ. ಈಗ ಅವರ ಶ್ರಮಕ್ಕೆ ಫಲ ಸಿಕ್ಕಿದೆ.

ಈ ಹಿಂದೆ ಮಾರ್ವಿಯಾ ಮಲಿಕ್‌ ಮಾಡೆಲ್‌ ಆಗಿ ‘ಇಮೇಜ್‌’ ಎಂಬ ಸಂಸ್ಥೆಯ ಜತೆ ಕೆಲಸ ಮಾಡುತ್ತಿದ್ದರು.

ತೃತೀಯ ಲಿಂಗಿಗಳ ಸಮಾನತೆಯ ಬಗ್ಗೆ ಮತ್ತು ಸಾಮಾಜಿಕ ಸ್ಥಿತಿಗತಿಗಳ ಮಾತನಾಡುತ್ತಿದ್ದ ಮಾಧ್ಯಮಗಳಿಗೆ ಕೊಹಿನೂರ್‌ ನ್ಯೂಸ್‌ ಮಾದರಿಯೊಂದನ್ನು ಸೃಷ್ಟಿಸಿದೆ. ಆದರೆ ಕೇವಲ ಮಾರ್ವಿಯಾ ಮಲಿಕ್‌ ಒಬ್ಬರಿಂದ ಇಡೀ ತೃತೀಯ ಲಿಂಗಿಗಳ ಸಮೂಹ ಸಮಾಜದ ಮುಖ್ಯವಾಣಿಗೆ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಇನ್ನಷ್ಟು ಮಾರ್ವಿಯಾ ಮಲಿಕ್‌ಗಳು ಬರಬೇಕಿದೆ ಮತ್ತು ಕೊಹಿನೂರ್‌ ನ್ಯೂಸ್‌ ತೋರಿದ ಐತಿಹಾಸಿಕ ನಿರ್ಣಯವನ್ನು ಮತ್ತಿತರ ಸಂಸ್ಥೆಗಳು ತೆಗೆದುಕೊಳ್ಳಬೇಕಿದೆ.