ಆರ್ನಬ್‌ ಗೋಸ್ವಾಮಿ
ಪತ್ರಿಕೆ

ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಅರ್ನಾಬ್ ಗೋಸ್ವಾಮಿ ವಿರುದ್ಧ ಎಫ್‌ಐಆರ್‌

ರಿಪಬ್ಲಿಕ್‌ ಟಿವಿಯ ಮುಖ್ಯಸ್ಥರಾಗಿರುವ ಆರ್ನಬ್‌ ಗೋಸ್ವಾಮಿ 83 ಲಕ್ಷ ರೂಪಾಯಿ ಹಣವನ್ನು ಪಾವತಿಸಿರಲಿಲ್ಲ ಎಂದು ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯ್ಕ್‌ ಡೆಥ್‌ನೋಟ್‌ನಲ್ಲಿ ಹೇಳಿದ್ದಾರೆ.

ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಆರ್ನಬ್‌ ಗೋಸ್ವಾಮಿ ಹೆಸರು ಆತ್ಮಹತ್ಯೆ ಪ್ರಕರಣವೊಂದರ ಜತೆಗೆ ತಳುಕು ಹಾಕಿಕೊಂಡಿದೆ. ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯ್ಕ್‌(53) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆಥ್‌ನೋಟ್‌ನಲ್ಲಿ ಆರ್ನಬ್‌ ಗೋಸ್ವಾಮಿ ಸೇರಿದಂತೆ ಮತ್ತಿಬ್ಬರ ಹೆಸರನ್ನು ಬರೆದಿಟ್ಟಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ಅನ್ವಯ್‌ ನಾಯ್ಕ್‌, ಕಾಂಕ್ರೋಡ್‌ ಡಿಸೈನ್ಸ್ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು. ಸುಮಾರು 5.4 ಕೋಟಿ ರೂಪಾಯಿಗಳಷ್ಟು ಹಣ ಅನ್ವಯ್ ನಾಯ್ಕ್‌ರಿಗೆ ಬರಬೇಕಿತ್ತು. ಫಿರೋಜ್‌ ಶೈಖ್ ಮತ್ತು ನಿತೇಶ್‌ ಸರ್ದಾ ಎಂಬ ಇನ್ನಿಬ್ಬರು ವ್ಯಕ್ತಿಗಳ ಜತೆಗೆ ಆರ್ನಬ್‌ ಗೋಸ್ವಾಮಿ ಕಡೆಯಿಂದಲೂ ಸಹ ಹಣ ಪಾವತಿಯಾಗಬೇಕಿತ್ತು. ಆದರೆ ಸಾಲದ ಹೊರೆಯನ್ನು ಹೊತ್ತಿದ್ದ ಅನ್ವಯ್‌ ನಾಯ್ಕ್‌, ಹಣ ಮರುಪಾವತಿಯಾಗದ ಕಾರಣ ಆತ್ಮಹತ್ಯೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೆ ಒಳಗಾದ ಅನ್ವಯ್‌ ನಾಯ್ಕ್.
ಆತ್ಮಹತ್ಯೆಗೆ ಒಳಗಾದ ಅನ್ವಯ್‌ ನಾಯ್ಕ್.

ಮೃತ ಅನ್ವಯ್‌ ನಾಯ್ಕ್‌ರ ಪತ್ನಿ ದೂರು ನೀಡಿದ್ದು, ಆರ್ನಬ್‌ ಗೋಸ್ವಾಮಿ ಸೇರಿದಂತೆ ಉಳಿದಿಬ್ಬರ ಮೇಲೆ ಅಲಿಭಾಗ್ ಪೊಲೀಸರು ಪ್ರಥಮ ತನಿಖಾ ವರದಿಯನ್ನು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್‌ 306ರ ಅಡಿಯಲ್ಲಿ ಆರ್ನಬ್‌ ಗೋಸ್ವಾಮಿ ವಿರುದ್ಧ ಕೇಸು ದಾಖಲಾಗಿದೆ.

ಅನ್ವಯ್‌ ನಾಯ್ಕ್‌ ಅವರಿಗೆ ಸೇರಿದ, ಅಲಿಭಾಗ್‌ ತಾಲೂಕಿನ ಕವಿರ್‌ ಎಂಬ ಹಳ್ಳಿಯ ಬಳಿಯ ಫಾರ್ಮ್‌ಹೌಸ್‌ನಲ್ಲಿ ಅನ್ವಯ್‌ ನಾಯ್ಕ್‌ ಹಾಗೂ ಅವರ ತಾಯಿ ಕುಮುದ್‌ ಅವರ ಮೃತದೇಹಗಳು ಶನಿವಾರ ಬೆಳಗ್ಗೆ 8.30ರ ಹೊತ್ತಿಗೆ ಪತ್ತೆಯಾಗಿದ್ದವು. ತಾಯಿ ಕುಮುದ್‌ ಅವರ ದೇಹ ನೆಲ ಮಹಡಿಯಲ್ಲಿದ್ದ ಮಂಚದ ಮೇಲಿದ್ದರೆ, ಅನ್ವಯ್‌ ನಾಯ್ಕ್‌ ದೇಹ ಮೊದಲನೇ ಮಹಡಿಯಲ್ಲಿ ಒಳ ಮಾಳಿಗೆಯಲ್ಲಿ ತೂಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ನಡೆದಾಗ ಅನ್ವಯ್‌ ನಾಯ್ಕ್‌ರ ಪತ್ನಿ ಅಕ್ಷತಾ ನಾಯ್ಕ್‌ ಮುಂಬೈನಲ್ಲಿದ್ದರು ಎನ್ನಲಾಗಿದೆ. ವಿಷಯ ತಿಳಿದು ಅಕ್ಷತಾ ನಾಯ್ಕ್‌ ಅಲಿಭಾಗ್‌ ಪೋಲೀಸರಿಗೆ ದೂರು ನೀಡಿದ್ದಾರೆ. ಆದರೆ ಅನ್ವಯ್‌ ನಾಯ್ಕ್‌ ತಾಯಿ ಕುಮುದ್‌ ಅವರ ಸಾವಿಗೆ ಏನು ಕಾರಣ ಎಂಬುದು ಇನ್ನೂ ನಿಗೂಢವಾಗಿದೆ.

ಪ್ರಥಮ ತನಿಖಾ ವರದಿ ಹೇಳುವಂತೆ ರಿಪಬ್ಲಿಕ್‌ ಟಿವಿಯ ಮುಖ್ಯಸ್ಥರಾಗಿರುವ ಆರ್ನಬ್‌ ಗೋಸ್ವಾಮಿ ಅನ್ವಯ್‌ ನಾಯ್ಕ್‌ ಅವರಿಗೆ ನೀಡಬೇಕಾಗಿದ್ದ 83 ಲಕ್ಷ ರೂಪಾಯಿ ಹಣವನ್ನು ಇನ್ನೂ ಪಾವತಿಸಿರಲಿಲ್ಲ. ಬಾಂಬೆ ಡೈಯಿಂಗ್‌ ಸ್ಟೂಡಿಯೋ ಯೋಜನೆಯನ್ನು ಪೂರ್ಣಗೊಳಿಸಿದ್ದ ಅನ್ವಯ್‌ ನಾಯ್ಕ್‌ ಅವರಿಗೆ ಈ ಮೊತ್ತ ತಲುಪಬೇಕಿತ್ತು. ಫಿರೋಜ್‌ ಶೈಕ್‌ ಅನ್ವಯ್‌ ನಾಯ್ಕ್‌ಅವರಿಗೆ 4 ಕೋಟಿ ರೂಪಾಯಿಗಳನ್ನು ನೀಡಬೇಕಿತ್ತು. ಮತ್ತೊಬ್ಬ ಆರೋಪಿಯಾಗಿರುವ ನಿತೇಶ್ ಸರ್ದಾ ಕಡೆಯಿಂದ 55 ಲಕ್ಷ ರೂಪಾಯಿಗಳು ಸಂದಾಯವಾಗಬೇಕಿತ್ತು.

ರಾಯ್‌ಗಢ ಜೆಲ್ಲೆಯ ಪೋಲಿಸ್‌ ಅಧಿಕಾರಿ ಅನಿಲ್‌ ಪರಸ್ಕರ್‌ ಹೇಳುವ ಪ್ರಕಾರ, ಅನ್ವಯ್‌ ನಾಯ್ಕ್‌ ತಮ್ಮ ಡೆಥ್‌ ನೋಟ್‌ನಲ್ಲಿ ಈ ಮೂರೂ ಜನರ ಹೆಸರನ್ನು ಬರೆದಿದ್ದಾರೆ. ಆದ ಕಾರಣ ಅನ್ವಯ್‌ ನಾಯ್ಕ್‌ ಸಾವಿಗೆ ಇವರೇ ಹೊಣೆಯಾಗಲಿದ್ದಾರೆ. ಆದರೆ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಯಾರನ್ನೂ ಕೂಡ ಬಂಧಿಸಿಲ್ಲ.

ಆದರೆ ರಿಪಬ್ಲಿಕ್‌ ಟಿವಿ ಈ ಆರೋಪವನ್ನು ಅಲ್ಲಗೆಳೆದಿದೆ. ರಿಪಬ್ಲಿಕ್‌ ಟಿವಿಯ ಸಂಪಾದಕ ನಿರಂಜನ್‌ ನಾರಾಯಣಸ್ವಾಮಿ ಈ ಪ್ರಕರಣದಲ್ಲಿ ಸಂಯಮ ಮೀರದಂತೆ ಇತರೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ. “ರಿಪಬ್ಲಿಕ್‌ ಟಿವಿಯ ಹೆಸರು ಕೆಡಿಸುವ ಸಲುವಾಗಿ ಹಲವಾರು ಜನ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅನ್ವಯ್‌ ನಾಯ್ಕ್‌ ಆತ್ಮಹತ್ಯೆಯನ್ನು ರಿಪಬ್ಲಿಕ್‌ ಟಿವಿಯ ಅಪಪ್ರಚಾರಕ್ಕೆಂದು ಬಳಸಿದರೆ ಕಾನೂನು ಕ್ರಮ ಜರಗಿಸಲಾಗುವುದು” ಎಂದು ನಿರಂಜನ್‌ ಹೇಳಿದ್ದಾರೆ.

“ಅನ್ವಯ್‌ ನಾಯ್ಕ್‌ ಅವರಿಗೆ ರಿಪಬ್ಲಿಕ್‌ ಟಿವಿ 2016ರ ಡಿಸೆಂಬರ್‌ ವೇಳೆಗೆ ಇಂಟೀರಿಯರ್‌ ಡಿಸೈನಿಂಗ್‌ ಗುತ್ತಿಗೆ ನೀಡಿತ್ತು. ಈಗ ರಿಪಬ್ಲಿಕ್‌ ಟಿವಿ ಯಾವುದೇ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಅಗತ್ಯ ಬಿದ್ದಾಗ ಆ ದಾಖಲೆಗಳನ್ನು ರಿಪಬ್ಲಿಕ್‌ ಟಿವಿ ಬಹಿರಂಗ ಪಡಿಸಲಿದೆ” ಎಂದು ನಿರಂಜನ್‌ ತಿಳಿಸಿದ್ದಾರೆ.

ಕಳೆದ ವರ್ಷ ಬೆನೆಟ್ ಕೊಲೆಮನ್‌ ಅಂಡ್ ಕಂಪನಿ ಆರ್ನಬ್‌ ಗೋಸ್ವಾಮಿ ಮತ್ತು ಪ್ರೇಮಾ ಶ್ರೀದೇವಿ ವಿರುದ್ಧ ದೂರು ದಾಖಲಿಸಿತ್ತು. ಬಿಸಿಸಿಎಲ್‌ ಕಂಪೆನಿಗೆ ಸೇರಿದ ‘ಟೈಮ್ಸ್‌ ನೌ’ ಚಾನೆಲ್‌ನ ಹಕ್ಕು ಸ್ವಾಮ್ಯಗಳನ್ನು ಆರ್ನಬ್‌ ಗೋಸ್ವಾಮಿ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಕೇಸು ದಾಖಲಾಗಿತ್ತು. ಈಗ ಮತ್ತೊಂದು ಆರೋಪ ಆರ್ನಬ್‌ ಗೋಸ್ವಾಮಿ ಹೆಗಲಿಗೇರಿದೆ.