samachara
www.samachara.com
ವ್ಲಾದಿಮಿರ್‌ ಪುಟಿನ್‌-5: ಸರಣಿ ಕೊಲೆಗಳ ನೆರಳಿನಲ್ಲೇ ಹೊಸ ರಷ್ಯಾ ಕಟ್ಟಿನಿಲ್ಲಿಸಿದ ನಾಯಕ!
SPECIAL SERIES

ವ್ಲಾದಿಮಿರ್‌ ಪುಟಿನ್‌-5: ಸರಣಿ ಕೊಲೆಗಳ ನೆರಳಿನಲ್ಲೇ ಹೊಸ ರಷ್ಯಾ ಕಟ್ಟಿನಿಲ್ಲಿಸಿದ ನಾಯಕ!

ರಷ್ಯಾಗೆ ಹೊಸ ಭಾಷ್ಯ ಬರೆಯಲು ಮುಂದಾದ ಪುಟಿನ್‌ ಅಮೆರಿಕಾದ ಹಣೆಬರಹವನ್ನೂ ಬದಲಾಯಿಸಿದ್ದರು. ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆಯಲ್ಲಿದ್ದ ಹಿಲರಿ ಕ್ಲಿಂಟನ್‌ರನ್ನು ಪಕ್ಕಕ್ಕಿಟ್ಟು ಟ್ರಂಪ್‌ ಹೆಗಲ ಮೇಲೆ ಅಮೆರಿಕಾದ ಭಾರವನ್ನು ಹೊರಿಸಿದರು.

ವಿಶ್ವದ ಪ್ರಬಲ ವ್ಯಕ್ತಿಯನ್ನು ತಮ್ಮವನನನ್ನಾಗಿಸಿಕೊಂಡ ಪುಟಿನ್‌, ವಿಶ್ವದ ಯಾವುದೇ ವ್ಯಕ್ತಿಯಿಂದಲೂ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ ಎನ್ನುವಷ್ಟು ಬೆಂಬಲವನ್ನು ಪಡೆದುಕೊಂಡಿದ್ದರು. ರಷ್ಯಾದಲ್ಲಷ್ಟೇ ಅಲ್ಲದೇ ಇತರೆ ದೇಶಗಳ ರಾಜಕೀಯದ ಮೇಲೂ ಪ್ರಭಾವ ಬೀರಬಲ್ಲ ಶಕ್ತಿ ಪುಟಿನ್‌ ಕೈಯ್ಯಲ್ಲಿತ್ತು. 2016ರ ನವೆಂಬರ್‌ 8ರಂದು ನಡೆದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಈ ಅಂಶವನ್ನು ನಿಜವಾಗಿಸಿತ್ತು. ವಿಶ್ವದ ದೊಡ್ಡಣ್ಣ ಎಂದೆನಿಸಿಕೊಂಡಿದ್ದ ಅಮೆರಿಕಾವನ್ನು ಆಳಬೇಕಾದವರು ಯಾರು ಎಂಬುದನ್ನು ಪುಟಿನ್‌ ನಿರ್ಧರಿಸಿದ್ದರು.

ಅಮೆರಿಕಾ ಚುನಾವಣೆಯಲ್ಲಿ ಪುಟಿನ್‌:

ವ್ಲಾದಿಮಿರ್‌ ಪುಟಿನ್‌-5: ಸರಣಿ ಕೊಲೆಗಳ ನೆರಳಿನಲ್ಲೇ ಹೊಸ ರಷ್ಯಾ ಕಟ್ಟಿನಿಲ್ಲಿಸಿದ ನಾಯಕ!

ಅದು 2016ರ ಸಮಯ, ಅಮೆರಿಕಾದಲ್ಲಿ ಬರಾಕ್‌ ಒಬಾಮಾರ ಅಧಿಕಾರಾವಧಿ ಕೊನೆಗೊಂಡು ಚುನಾವಣೆಯೂ ಸಹ ಸನ್ನಿಹಿತವಾಗಿತ್ತು. ಪುಟಿನ್‌ರಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬಲ್ಲ ಶಕ್ತಿ ಇದ್ದದ್ದು ಅಮೆರಿಕಾದ ಅಧ್ಯಕ್ಷತೆಯನ್ನು ವಹಿಸಿದ್ದವರಿಗೆ ಮಾತ್ರ. ಪುಟಿನ್‌ರನ್ನು ವಿರೋಧಿಸುವ ವ್ಯಕ್ತಿ ಅಮೆರಿಕಾದ ಅಧ್ಯಕ್ಷತೆ ವಹಿಸುವುದು ಪುಟಿನ್‌ರಿಗೆ ಇಷ್ಟವಿರಲಿಲ್ಲ. ಆ ಚುನಾವಣೆಯಲ್ಲಿ ಸ್ಪರ್ಧೆಗೆ ನಿಂತಿದ್ದವರ ಪೈಕಿ ಅಮೆರಿಕಾದ ಅಧ್ಯಕ್ಷ ಗಾಧಿಗೆ ಆಯ್ಕೆಯಾಗಬಲ್ಲ ವರ್ಚಸ್ಸು ಇದ್ದದ್ದು ಹಿಲರಿ ಕ್ಲಿಂಟನ್‌ಗೆ.

ಹಿಲರಿ ಕ್ಲಿಂಟನ್‌ ಅಮೆರಿಕಾದ ಮಾಜಿ ಅಧ್ಯಕ್ಷರಾಗಿದ್ದ ಬಿಲ್‌ ಕ್ಲಿಂಟನ್‌ ಪತ್ನಿ. ಅಮೆರಿಕಾದ ಪ್ರಮುಖ ಕಾರ್ಯದರ್ಶಿಯಾಗಿದ್ದ ಮೊದಲ ಮಹಿಳೆ ಹಿಲರಿ ಕ್ಲಿಂಟನ್‌ರ ವಿರುದ್ಧ ಪುಟಿನ್‌ರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ‘2012ರಲ್ಲಿ ಪುಟಿನ್‌ ವಿರುದ್ಧ ರಷ್ಯಾದಲ್ಲಿ ನಡೆದಿದ್ದ ಪ್ರತಿಭಟನೆಗಳ ಹಿಂದೆ ಹಿಲರಿ ಕೈವಾಡವಿದೆ ಎಂದು ಪುಟಿನ್‌ ಭಾವಿಸಿದಂತಿದೆ’ ಎಂದು ಸ್ವತಃ ಹಿಲರಿ ಕ್ಲಿಂಟನ್‌ರೇ ಹೇಳಿದ್ದರು. ಪುಟಿನ್ ತಲೆಯಲ್ಲಿಯೂ ಕೂಡ ಹಿಲರಿ ಕ್ಲಿಂಟನ್‌ ಏನಾದರೂ ಅಮೆರಿಕಾ ಅಧ್ಯಕ್ಷತೆಯನ್ನು ವಹಿಸಿದರೆ ಮುಂದೆ ತಮ್ಮ ಯೋಜನೆಗಳಿಗೆ ತೊಡಕು ಉಂಟಾಗಬಹುದು ಎನ್ನುವ ಯೋಚನೆಯಿತ್ತು. ಜತೆಗೆ ರಷ್ಯಾದ ಮೇಲೆ ಅಮೆರಿಕಾ ಹೇರಿದ್ದ ಆರ್ಥಿಕ ದಿಗ್ಬಂಧನವನ್ನೂ ಕೂಡ ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ ಎನ್ನುವ ಉದ್ದೇಶದಿಂದ ಪುಟಿನ್‌ ಅಮೆರಿಕಾದ ಚುನಾವಣೆಯಲ್ಲಿ ಮೂಗು ತೂರಿಸಿದ್ದರು.

ರಷ್ಯಾ ಗುಪ್ತಚರ ಇಲಾಖೆ ಸಿಬ್ಬಂದಿಗಳು ಹೇಳುವಂತೆ ಅಮೆರಿಕಾದ ಚುನಾವಣೆ ನಡೆಯುವುದಕ್ಕೂ ಹಲವಾರು ತಿಂಗಳುಗಳ ಮುಂಚೆಯಿಂದಲೇ ರಷ್ಯಾ ಹಿಲರ್‌ ಕ್ಲಿಂಟನ್‌ ವಿರುದ್ಧ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತ್ತು. ಅಮೆರಿಕನ್ನರ ಮನಸ್ಸನ್ನು ಹಿಲರಿ ಕ್ಲಿಂಟನ್‌ನಿಂದ ಟ್ರಂಪ್‌ ಕಡೆಗೆ ತಿರುಗಿಸಲು ಪುಟಿನ್‌ ಬಳಸಿದ್ದು ಒಂದು ಸಿಂಪಲ್‌ ಟ್ರಿಕ್‌, ಅನೇಕ ಈ-ಮೇಲ್‌ಗಳನ್ನು ಒಂದೇ ಬಾರಿಗೆ ಲಕ್ಷಾಂತರ ಅಮೆರಿಕನ್‌ ಜನಕ್ಕೆ ಕಳುಹಿಸಲಾಗುತ್ತಿತ್ತು. ಒಬ್ಬೊಬ್ಬರ ಖಾತೆಗೂ ಹತ್ತಾರು ಈ-ಮೇಲ್‌ಗಳು ಬಂದು ಬೀಳುತ್ತಿದ್ದವು. ಎಲ್ಲವನ್ನು ಅಲ್ಲದಿದ್ದರೂ ಕಡೇ ಪಕ್ಷ ಒಂದನ್ನಾದರೂ ಓದುತ್ತಾರೆ ಎನ್ನುವ ತರ್ಕ ಈ ಯೋಜನೆಯ ಹಿಂದಿತ್ತು.

ಜಾನ್‌ ಪೊಡೆಸ್ಟಾ, ಈತ ಹಿಲರಿ ಕ್ಲಿಂಟನ್‌ರ ಚುನಾವಣಾ ಅಭಿಯಾನವನ್ನು ನಡೆಸುತ್ತಿದ್ದ ತಂಡದ ಮುಖ್ಯಸ್ಥ. 2016ರ ಮಾರ್ಚ್‌ 19ರಂದು ಈತನ ವೈಯಕ್ತಿಕ ಈ-ಮೇಲ್‌ ಖಾತೆಗೆ ಗೂಗಲ್‌ ಸಂಸ್ಥೆ ನೀಡುವ ಎಚ್ಚರಿಕಾ ಸಂದೇಶದಂತೆಯೇ ಇದ್ದ ಸಂದೇಶವೊಂದು ಬಂದಿತ್ತು. ಪೊಡೆಸ್ಟಾ ಅದನ್ನು ತೆರೆದು ನೋಡಿದ್ದರು ಕೂಡ. 'ಸ್ಪಿಯರ್ ಫಿಶಿಂಗ್‌' ಎನ್ನುವ ತಂತ್ರವನ್ನು ಬಳಸಿ ಕಳುಹಿಸಲಾಗಿದ್ದ ಈ ಸಂದೇಶ ಪೊಡೆಸ್ಟಾರ ಖಾತೆಯಲ್ಲಿದ್ದ ಗುಪ್ತ ಮಾಹಿತಿಗಳನ್ನು ಫ್ಯಾನ್ಸಿ ಬಿಯರ್‌ ಎನ್ನುವ ತಂಡದ ಮುಂದೆ ತೆರೆದಿಟ್ಟಿತ್ತು. ಪೊಡೆಸ್ಟಾರ 60,000ಕ್ಕೂ ಹೆಚ್ಚು ಈ-ಮೇಲ್‌ಗಳು ಕಳುವಾಗಿದ್ದವು. ಬರೀ ಪೊಡೆಸ್ಟಾ ಮಾತ್ರವಲ್ಲದೇ ಅಮೆರಿಕಾದ ಹಲವಾರು ಪ್ರಮುಖ ವ್ಯಕ್ತಿಗಳ ಈ-ಮೇಲ್‌ ಖಾತೆಗಳು ಇದೇ ರೀತಿ ಹ್ಯಾಕ್‌ ಆಗಿದ್ದವು. ಈ ಸಂಚಿನ ಹಿಂದೆ ಇದ್ದದ್ದು ರಷ್ಯಾದ ಗುಪ್ತಚರ ಇಲಾಖೆ.

ರಷ್ಯಾ ಮಾಧ್ಯಮಗಳಲ್ಲಿ ಹಿಲರಿ ಕ್ಲಿಂಟನ್‌ ವಿರುದ್ಧದ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಡೊನಾಲ್ಡ್‌ ಟ್ರಂಪ್‌ ಪರವಾದ ಕಾರ್ಯಕ್ರಮಗಳು ರಷ್ಯನ್ನರಿಗೆ ಕಾಣಿಸುತ್ತಿದ್ದವು. ಮೂಲದಲ್ಲಿ ಟ್ರಂಪ್‌ ಗೆಲ್ಲಬೇಕೆಂಬ ಅಭಿಲಾಷೆಯೇನು ಪುಟಿನ್‌ರಿಗೆ ಇರಲಿಲ್ಲ. ಪುಟಿನ್‌ಗೆ ಬೇಕಾಗಿದ್ದದ್ದು ಹಿಲರಿ ಕ್ಲಿಂಟನ್‌ರ ಸೋಲು ಅಷ್ಟೇ. ಈ ಸಂಚಿನ ಫಲವಾಗಿ ರಷ್ಯಾದ ಎರಡೂ ಅಭಿಲಾಷೆಗಳು ಸಿದ್ಧಿಸಿದ್ದವು. ಅಂದುಕೊಂಡಂತೆ ಹಿಲರಿ ಕ್ಲಿಂಟನ್‌ ಸೋತಿದ್ದರು. ಆಗಿನ್ನು ಬರಾಕ್‌ ಒಬಾಮಾ ಅಧ್ಯಕ್ಷತೆಯಲ್ಲಿದ್ದ ಅಮೆರಿಕಾ, ರಷ್ಯಾ ಮೇಲೆ ಹೇರಿದ್ದ ಆರ್ಥಿಕ ದಿಗ್ಬಂಧನವನ್ನು ಹಿಂದಕ್ಕೆ ತೆಗೆದುಕೊಂಡಿತ್ತು.

ಸತ್ತವರ ಸಂಖ್ಯೆಯೆಷ್ಟು?:

ಪುಟಿನ್‌ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ಪತ್ರಕರ್ತರು
ಪುಟಿನ್‌ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ಪತ್ರಕರ್ತರು

ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗಿದ ಪುಟಿನ್‌ರ ಅಭಿವೃದ್ಧಿ ತಾನಾಗೇ ತಾನೇ ಆಗಿದ್ದೇನಲ್ಲ. ಪುಟಿನ್‌ರ ಈ ಏಳಿಗೆಯ ಹಿಂದೆ ಹತ್ತಿರತ್ತಿರ 150 ಪತ್ರಕರ್ತರ, ಬರಹಗಾರರ ನೆತ್ತರು ನೆಲಕ್ಕೆ ಚೆಲ್ಲಿದೆ. ಇದೂ ಸಹ ಸರಿಯಾದ ಲೆಕ್ಕವೇನಲ್ಲ. ಪತ್ರಿಕಾ ಸ್ವಾತಂತ್ರ್ಯದ ದೃಷ್ಠಿಯಲ್ಲಿ ಸಧ್ಯ ರಷ್ಯಾ 180 ರಾಷ್ಟ್ರಗಳ ಪೈಕಿ 148ನೇ ಸ್ಥಾನದಲ್ಲಿದೆ. ಪುಟಿನ್‌ ಅಧಿಕಾರ ಸ್ಥಾಪಿಸಿದಾಗಿನಿಂದಲೂ ಪತ್ರಕರ್ತರ ನೆತ್ತಿಯ ಮೇಲೆ ತೂಗುತ್ತಲೇ ಇದ್ದ ಕತ್ತಿ ಇವತ್ತಿಗೂ ತನ್ನ ಕಾರ್ಯವನ್ನು ನಿಲ್ಲಿಸಿಲ್ಲ.

ಪುಟಿನ್‌ 2000ದಲ್ಲಿ ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ತನಿಖಾ ಪತ್ರಕರ್ತ ಆರ್ತೋಮ್‌ ಬೋರೋವಿಕ್‌ ಎಂಬಾತ ಅನುಮಾನಾಸ್ಪದ ರೀತಿಯಲ್ಲಿ ವಿಮಾನ ಅಫಘಾತದಲ್ಲಿ ಮೃತಪಟ್ಟಿದ್ದ. ಸ್ವತಂತ್ರ ಮಾಧ್ಯಮ ಸಂಸ್ಥೆಯ ಸಂಪಾದಕ ಇಗೋರ್‌ ದೋಮ್ನಿಕೋವ್‌ ಮೇಲೆ ದಾಳಿ ನಡೆದು, ನಂತರ ಆತ ಸಾವನ್ನಪ್ಪಿದ್ದ. ಸ್ವತಂತ್ರ ರೇಡಿಯೋ ಒಂದರ ಮಾಲೀಕ ನೊವಿಕೊವ್‌ನ ಕೊಲೆಯಾಯಿತು. ಈ ಕುರಿತ ತನಿಖೆ ಕೊನೆಗೊಳ್ಳಲೇ ಇಲ್ಲ. ಬಿಬಿಸಿಯ ಮಾಜಿ ವರದಿಗಾರ ಖಟ್ಲೊನಿ ಬರಹಗಳ ಜತೆಗೆ ಕವಿತೆಗಳಿಂದಲೂ ಗುರುತಿಸಿಕೊಂಡವನು. ಆತನ ಸಾವು ಕೂಡ ಯಾವ ಕಾರಣಕ್ಕಾಯಿತು ಎಂದೇ ತಿಳಿಯಲಿಲ್ಲ. ಕ್ಯಾಮೆರಾ ಮ್ಯಾನ್‌ ಆಡಂ ನಿಗೂಢವಾಗಿ ಸಾವನ್ನಪ್ಪಿದ. ಫೋಟೋಗ್ರಾಫರ್‌ ವಾಲೆರಿ ಸಾವನ್ನಪ್ಪಿದ. ಇಂತಹ ಸಾಲು ಸಾಲು ಸಾವುಗಳು ಪುಟಿನ್‌ ಆಡಳಿತಾವಧಿಯಲ್ಲಿ ಸಾಮಾನ್ಯ ಎನಿಸಿರುವಂತವು.

ಪುಟಿನ್‌ ಮತ್ತು ಇತರೆ ರಾಷ್ಟ್ರಗಳು:

ಪುಟಿನ್‌ ಅಧಿಕಾರಕ್ಕೆ ಏರಿದಾಗಿನಿಂದಲೂ ಇತರೆ ರಾಷ್ಟ್ರಗಳ ಜತೆ ಬಾಂಧವ್ಯವನ್ನು ಬೆಸೆದುಕೊಳ್ಳಲು ಉತ್ಸುಕರಾಗಿದ್ದರು. ರಷ್ಯಾವನ್ನು ವಿಶ್ವದ ಮುನ್ನೆಲೆಗೆ ತರಲು ಈ ನಡೆಯ ಅಗತ್ಯವೂ ಇತ್ತು. ಬಣ್ಣಗಳ ಹೆಸರಿನ ಸಾಲು ಸಾಲು ಕ್ರಾಂತಿಗಳನ್ನು ರಷ್ಯಾ ನಡೆಸಿತ್ತು. 2003ರಲ್ಲಿ ಜಾರ್ಜಿಯಾದಲ್ಲಿ ನಡೆಸಿದ ಗುಲಾಬಿ ಕ್ರಾಂತಿ, 2004ರಲ್ಲಿ ಉಕ್ರೇನ್‌ನಲ್ಲಿ ನಡೆಸಿದ ಕೇಸರಿ ಕ್ರಾಂತಿ ಮತ್ತು ಕರ್ಜಿಸ್ಥಾನದಲ್ಲಿ 2005ರಲ್ಲಿ ನಡೆಸಿದ ತುಲಿಪ್‌ ಕ್ರಾಂತಿ, ಆ ದೇಶಗಳ ಜತೆ ಪುಟಿನ್‌ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಲು ಕಾರಣವಾಗಿತ್ತು. ಅಮೆರಿಕಾದ ಟ್ವಿನ್‌ ಟವರ್ಸ್‌ ಕಟ್ಟಡದ ಮೇಲೆ ಒಸಾಮಾ ಬಿನ್‌ ಲಾಡೆನ್‌ ದಾಳಿ ನಡೆಸಿದ ಸಂದರ್ಭದಲ್ಲಿ ಪುಟಿನ್‌ ಅಮೆರಿಕಾಗೆ ಸಹಾಯಹಸ್ತವನ್ನೂ ಕೂಡ ಚಾಚಿದ್ದರು. ಆದರೆ 2003ರಲ್ಲಿ ಇರಾಕ್‌ನಲ್ಲಿ ಯುದ್ಧ ಸಂಭವಿಸಿದ ನಂತರದಿಂದ ಪುಟಿನ್‌ ಪಾಶ್ಚಿಮಾತ್ಯ ದೇಶಗಳೊಂದಿಗೆ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ್ದರು.

ನಂತರದ ದಿನಗಳಲ್ಲಿ ಪುಟಿನ್‌ ಮನಸ್ಸು ಪೂರ್ವಾತ್ಯ ದೇಶಗಳ ಕಡೆಗೆ ತಿರುಗಿತ್ತು. ಚೈನಾದೊಟ್ಟಿಗೆ ಉತ್ತಮ ಸಂಬಂಧ ಹೊಂದುವಲ್ಲಿ ಪುಟಿನ್‌ ಯಶಸ್ವಿಯಾಗಿದ್ದರು. ಹಲವಾರು ಯೋಜನೆಗಳನ್ನು ರಷ್ಯಾ ಮತ್ತು ಚೈನಾ ಜತೆಗೂಡಿ ಕೈಗೊಂಡವು. ಭಾರತದ ಜತೆಗೂ ಸಹ ಪುಟಿನ್‌ಗೆ ಯಾವುದೇ ವೈಮನಸ್ಯವಿಲ್ಲ.

2012ರಲ್ಲಿ ಪುಟಿನ್‌ 'ದಿ ಹಿಂದು' ವೃತ್ತ ಪತ್ರಿಕೆಗೆ ಲೇಖನವೊಂದನ್ನು ಬರೆದಿದ್ದರು. ಆ ಲೇಖನದಲ್ಲಿ 2000ದಲ್ಲಿ ಭಾರತ ಮತ್ತು ರಷ್ಯಾ ಒಟ್ಟಾಗಿ ಕೈಗೊಂಡ ಯೋಜನೆಗಳು ನಿಜವಾಗಿಯೂ ಐತಿಹಾಸಿಕ ಹೆಜ್ಜೆಗಳಾಗಿವೆ ಎಂದಿದ್ದರು. ಅದೇ ವರ್ಷ ಪುಟಿನ್‌ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಭಾರತದ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಪುಟಿನ್‌ರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಬ್ರಿಕ್‌ ರಾಷ್ಟ್ರಗಳೆನಿಕೊಂಡಿರುವ ಚೈನಾ, ಭಾರತ, ಬ್ರೆಜಿಲ್‌ ಮತ್ತು ರಷ್ಯಾಗಳ ನಡುವೆ ಹಿಂದಿನಿಂದಲೂ ಸಹ ಉತ್ತಮ ಬಾಂಧವ್ಯವಿತ್ತು. ವಿಯೆಟ್ನಾಂ, ಕೀನ್ಯಾ, ಬಾಂಗ್ಲಾದೇಶ, ಗ್ರೀಸ್, ಥೈಲ್ಯಾಂಡ್‌, ಲೆಬೆನಾನ್‌, ಫಿಲಿಪೈನ್ಸ್‌ ಇತ್ಯಾದಿ ರಾಷ್ಟ್ರಗಳೂ ಕೂಡ ಪುಟಿನ್‌ ಬೆಂಬಲಕ್ಕೆ ನಿಂತಿವೆ.

ಪುಟಿನ್ ಮತ್ತು ಮನಮೋಹನ್‌ ಸಿಂಗ್
ಪುಟಿನ್ ಮತ್ತು ಮನಮೋಹನ್‌ ಸಿಂಗ್

ಮೂರನೇ ಮಹಾಯುದ್ಧ?:

ಪುಟಿನ್‌ರ ವಿರುದ್ಧ ಮಾತನಾಡುವ ದೇಶಗಳ ಪೈಕಿ ಪೋಲ್ಯಾಂಡ್‌, ಅಮೆರಿಕಾ, ಬ್ರಿಟನ್‌ ಇತ್ಯಾದಿ ಪಾಶ್ಚಿಮಾತ್ಯ ದೇಶಗಳೇ ಮುನ್ನಲೆಯಲ್ಲಿ ಕಾಣಿಸುತ್ತವೆ. ಎರಡನೇ ಮಾಹಾಯುದ್ಧದ ಕಾಲದಿಂದಲೂ ಕೂಡ ಈ ವೈರತ್ವ ನಡೆದೇ ಬಂದಿದೆ. ಈ ವೈರತ್ವವೇ ಇಂದು ಜಗತ್ತಿನಾದ್ಯಂತ ಮೂರನೇ ಮಹಾಯುದ್ಧದ ಭಯವನ್ನು ಬಿತ್ತರಿಸಿದೆ.

ರಷ್ಯಾ ಸಿರಿಯಾದ ಆಂತರಿಕ ಕಲಹದಲ್ಲಿ ತಲೆ ಹಾಕಿದಾಗಿನಿಂದಲೂ ಮೂರನೇ ಮಹಾಯುದ್ಧದ ಭಯ ಜಗತ್ತನ್ನು ಕಾಡಲು ಪ್ರಾರಂಭಿಸಿದೆ. ದಿನದಿಂದ ದಿನಕ್ಕೆ ಹಿಗ್ಗುತ್ತಲೇ ಇರುವ ರಷ್ಯಾದ ಸೈನ್ಯ ವಿಶ್ವದ ಎರಡನೇ ದೊಡ್ಡ ಪ್ರಬಲ ಸೈನ್ಯ ಎಂಬ ಖ್ಯಾತಿಯನ್ನೂ ತನ್ನದಾಗಿಸಿಕೊಂಡಿದೆ. ರಷ್ಯಾದ ಆಜನ್ಮ ಶತ್ರು ಎಂದೇ ಕರೆಸಿಕೊಳ್ಳುವ ಅಮೆರಿಕಾದ್ದು ಮೊದಲನೇ ಸ್ಥಾನ. ಎರಡೂ ದೇಶಗಳ ನಡುವಿನ ಶೀತಲ ಸಮರ ಹಾಗೂ ಅವುಗಳ ಬೆಂಬಲಿತ ರಾಷ್ಟ್ರಗಳ ನಡುವಿನ ಕಿತ್ತಾಟ ಯಾವ ಪ್ರಮಾಧಕ್ಕಾದರೂ ಎಡೆ ಮಾಡಿಕೊಡುವ ಸಾಧ್ಯತೆ ಅಸಂಭವವೇನಲ್ಲ.

ಒಟ್ಟಾರೆಯಾಗಿ ರಷ್ಯಾದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ರಷ್ಯಾದ ಅಧ್ಯಕ್ಷತೆಯನ್ನು ವಹಿಸಿ ಇಂದು ವಿಶ್ವದ ಪ್ರಬಲ ವ್ಯಕ್ತಿಯಾಗಿ ನಿಂತಿರುವ ಪುಟಿನ್‌ ರಷ್ಯಾವನ್ನು ಮತ್ತಷ್ಟು ಎತ್ತರಕ್ಕೇರಿಸಿ ನಿಲ್ಲಿಸಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗ ಮತ್ತೆ ಆರು ವರ್ಷಗಳ ಅಧಿಕಾರ ಪುಟಿನ್‌ರ ಕೈಯ್ಯಲ್ಲಿದೆ. ಚೈನಾ, ಭಾರತ ಸೇರಿದಂತೆ ಹಲವಾರು ಪ್ರಬಲ ರಾಷ್ಟ್ರ ಬೆಂಬಲವೂ ಪುಟಿನ್‌ರ ಬೆನ್ನಿಗಿದೆ. ವಿಶ್ವದುದ್ದಗಲಕ್ಕೂ ಭರಪೂರ ಜನ ಬೆಂಬಲವನ್ನು ಪಡೆದಿರುವ ಪುಟಿನ್‌ರ ಮುಂದಿನ ಹೆಜ್ಜೆಗಳು ಏನು ಎನ್ನುವುದನ್ನು ಕಾಲವೇ ತಿಳಿಸಲಿದೆ.

(ಮುಗಿಯಿತು)

Also read: ವ್ಲಾದಿಮಿರ್‌ ಪುಟಿನ್‌- 4: ಮೂರನೇ ಬಾರಿಗೆ ಭಾರಿ ವಿರೋಧ; ಸರ್ವಾಧಿಕಾರಿಯ ಹಾದಿಯಲ್ಲಿ ಅಧ್ಯಕ್ಷ!

Also read: ವ್ಲಾದಿಮಿರ್‌ ಪುಟಿನ್‌-3: ಕುಸಿದ ರಷ್ಯಾವನ್ನು ಎತ್ತಿನಿಲ್ಲಿಸಿದರೂ ಜನ ವಿರೋಧ ಎದುರಿಸಬೇಕಾಯ್ತು!

Also read: ವ್ಲಾದಿಮಿರ್‌ ಪುಟಿನ್‌-2; ಮೇಯರ್ ಸಲಹೆಗಾರ ಹುದ್ದೆಯಿಂದ ರಷ್ಯಾ ಅಧ್ಯಕ್ಷಗಾದಿವರೆಗೆ

Also read: ‘ವ್ಲಾದಿಮಿರ್‌ ಪುಟಿನ್‌-1’: ವಿಶ್ವದ ಅತ್ಯಂತ ಪ್ರಭಾವಶಾಲಿ ಅಧ್ಯಕ್ಷನ ಕತೆಗಿದು ಮುನ್ನುಡಿ!