samachara
www.samachara.com
ವ್ಲಾದಿಮಿರ್‌ ಪುಟಿನ್‌- 4: ಮೂರನೇ ಬಾರಿಗೆ ಭಾರಿ ವಿರೋಧ; ಸರ್ವಾಧಿಕಾರಿಯ ಹಾದಿಯಲ್ಲಿ ಅಧ್ಯಕ್ಷ!
SPECIAL SERIES

ವ್ಲಾದಿಮಿರ್‌ ಪುಟಿನ್‌- 4: ಮೂರನೇ ಬಾರಿಗೆ ಭಾರಿ ವಿರೋಧ; ಸರ್ವಾಧಿಕಾರಿಯ ಹಾದಿಯಲ್ಲಿ ಅಧ್ಯಕ್ಷ!

2011ರ ಚುನಾವಣೆಯಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂದು ಸಾವಿರಾರು ರಷ್ಯನ್ನರು ಬೀದಿಗಿಳಿದಿದ್ದರು. ಬಂಧನಕ್ಕೂ ಒಳಗಾಗಿದ್ದರು. ಆದರೆ ಈ ಹೋರಾಟಗಳಾವವೂ ಪುಟಿನ್‌ ಮೂರನೇ ಬಾರಿಗೆ ರಷ್ಯಾ ಅಧ್ಯಕ್ಷರಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. 

ಅದು 2011ರ ಸೆಪ್ಟೆಂಬರ್‌ 24ನೇ ತಾರೀಖು. ಪುಟಿನ್‌ ಎರಡನೇ ಬಾರಿಗೆ ಫ್ರಧಾನ ಮಂತ್ರಿಯಾಗಿ ಅಧಿಕಾರ ಹಿಡಿದಿದ್ದ ಕೊನೆಯ ದಿನಗಳವು. ಅಂದಿನ ರಷ್ಯಾ ಅಧ್ಯಕ್ಷರಾಗಿದ್ದ ಮಡ್ವೆಡೆವ್‌, ಯುನೈಟೆಡ್‌ ರಷ್ಯಾ ಪಕ್ಷದ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿ ವ್ಲಾದಿಮಿರ್‌ ಪುಟಿನ್‌ ಎಂದು ಘೋಷಿಸಿದ್ದರು. ಅದಾಗಲೇ 2 ಬಾರಿ ರಷ್ಯಾದ ಪೂರ್ಣಾವಧಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪುಟಿನ್‌ ಮೂರನೇ ಬಾರಿಗೆ ಅಧ್ಯಕ್ಷ ಗಾಧಿ ಹಿಡಿಯಲು ಸಿದ್ಧರಾಗಿದ್ದರು. ಜತೆಗೆ ಭಾರಿ ವಿವಾದವೂ ಹುಟ್ಟಿಕೊಂಡಿತು. 

ಅದೇ ವರ್ಷದ ಡಿಸೆಂಬರ್‌ 4ರಂದು ಚುನಾವಣೆ ನಡೆಯಿತು. ಅದರ ಬೆನ್ನಲ್ಲೇ ಚುನಾವಣೆಯಲ್ಲಿ ಮೋಸ ನಡೆದಿದೆ ಎಂಬ ದೊಡ್ಡ ಮಟ್ಟದ ಕೂಗು ಪುಟಿನ್‌ ಹಾಗೂ ಯುನೈಟೆಡ್‌ ರಷ್ಯಾ ಪಕ್ಷದ ವಿರುದ್ಧ ಕೇಳಿ ಬಂದಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಎದ್ದು ನಿಂತ ಈ ವಿರೋಧಕ್ಕೆ ಪುಟಿನ್‌ ಸೊಪ್ಪು ಹಾಕಲಿಲ್ಲ. 10,000ಕ್ಕೂ ಹೆಚ್ಚಿನ ರಷ್ಯಾ ಜನತೆ ಪುಟಿನ್‌ ವಿರುದ್ಧ ಬೀದಿಗಿಳಿದಿತ್ತು. ಪುಟಿನ್‌ ವಿರೋಧಿ ಆಂದೋಲನ ದೇಶದೆಲ್ಲೆಡೆ ಸ್ಪೋಟಿಸಿತ್ತು. ಸಾಲು ಸಾಲು ಪ್ರತಿರೋಧಗಳು ಎಲ್ಲೆಡೆ ವ್ಯಕ್ತವಾಗಿದ್ದವು. ಅಲ್ಲಿಂದ ಐದಾರು ತಿಂಗಳು ರಷ್ಯಾ ಅಕ್ಷರಶಃ ಪ್ರತಿಭಟನೆಗಳ ತವರಾಯಿತು.

2012ರ ಮೇ 6ನೇ ತಾರೀಖು ಮಾಸ್ಕೋ ನಗರ ಬೃಹತ್‌ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಸುಮಾರು 20,000 ಮಂದಿ ಪುಟಿನ್‌ ವಿರೋಧಿಗಳು ಮಾಸ್ಕೋ ನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಅಂದು ಪೊಲೀಸ್‌ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 80 ಜನ ಗಾಯಗೊಂಡಿದ್ದರು. 450 ಜನ ಬಂಧನಕ್ಕೆ ಒಳಗಾಗಿದ್ದರು. ಮಾರನೇ ದಿನವೂ ಪ್ರತಿಭಟನೆ ಮುಂದುವರೆದು 150 ಮಂದಿ ಬಂಧನಕ್ಕೆ ಒಳಗಾಗಿದ್ದರು.

ಇದರ ನಂತರವೇ ಪುಟಿನ್‌ ಅಭಿಮಾನಿಗಳ ಬಳಗ ರಷ್ಯಾದ ಅತಿದೊಡ್ಡ ಲುಜ್ನಿಕಿ ಕ್ರೀಡಾಂಗಣಕ್ಕೆ ಹರಿದು ಬಂದಿತ್ತು. ಆ ದಿನ ಸುಮಾರು 1,30,000 ಜನ ಸೇರಿದ್ದರೆಂದು ಅಂದಾಜಿಸಲಾಗಿತ್ತು. ಆದರೆ ಅದರಲ್ಲಿ ಬಂದಿದ್ದವರೆಷ್ಟೋ ಮಂದಿಗೆ ದುಡ್ಡು ಕೊಟ್ಟು ಕರೆಸಲಾಗಿತ್ತು. ಮತ್ತೆಷ್ಟೋ ಮಂದಿ ತಮ್ಮ ಮಾಲೀಕರ ಒತ್ತಾಯದ ಕಾರಣಕ್ಕಾಗಿ ಬರುವಂತಾಗಿತ್ತು.

ಪುಟಿನ್‌ ವಿರೋಧಿ ಹೋರಾಟ
ಪುಟಿನ್‌ ವಿರೋಧಿ ಹೋರಾಟ

ಸಾಲು ಸಾಲು ವಿರೋಧಗಳ ನಡುವೆ ಮೇ.7 ರಂದು ಪುಟಿನ್‌ 3ನೇ ಬಾರಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಕ್ರೆಮ್ಲಿನ್‌ ನಗರದಲ್ಲಿ ತಮ್ಮ 3ನೇ ಬಾರಿಯ ಅಧ್ಯಕ್ಷ ಪದವಿಯನ್ನು ಪ್ರಾರಂಭಿಸಿದ ಪುಟಿನ್‌, ಅಂದೇ 14 ಶಾಸನಗಳನ್ನು ಜಾರಿಗೆ ತಂದರು. ಮಾಧ್ಯಮಗಳು ಅವನ್ನು 'ಮೇ ಶಾಸನ'ಗಳೆಂದೇ ಬಿಂಬಿಸಿದ್ದವು. ದೀರ್ಘಾವಧಿಯ ಆಲೋಚನೆಗಳನ್ನು ಈ ಶಾಸನಗಳು ಹೊಂದಿದ್ದವು. ವಸತಿ, ಶಿಕ್ಷಣ, ಕೌಶಲ್ಯ ತರಭೇತಿಗಳು, ಯುರೋಪಿಯನ್‌ ಒಕ್ಕೂಟಗಳ ಜತೆಗಿನ ಸಂಬಂಧ ಇತ್ಯಾದಿ ಸೇರಿದಂತೆ ಪುಟಿನ್‌ ತಮ್ಮ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಶಾಸನಗಳ ರೂಪದಲ್ಲಿ ಜಾರಿಗೊಳಿಸಿದ್ದರು.

ಸಾಕಷ್ಟು ವಿರೋಧದ ನಡುವೆಯೂ ಯಶಸ್ವಿಯಾಗಿ ಅಧಿಕಾರಕ್ಕೇರಿದ ಪುಟಿನ್‌ಗೆ, ಬೆಂಬಲವೂ ಹರಿದು ಬಂತು. ಅಧಿಕಾರದ ಜತೆಗೆ ಸಿಗುವ ಮಾನ್ಯತೆ ಅದು. ದೇಶದ ದೊಡ್ಡ ಶ್ರೀಮಂತರು ಪುಟಿನ್‌ ಬೆನ್ನಿಗಿದ್ದರು. ಕೋಟ್ಯಾಂತರ ಜನ ರಷ್ಯನ್‌ ಪ್ರಜೆಗಳು ಪುಟಿನ್‌ ಹೆಸರಿನಿಂದಲೇ ರೋಮಾಂಚಿತರಾಗುತ್ತಿದ್ದರು. ಅದಾಗಲೇ ಪುಟಿನ್‌ ರಷ್ಯಾದ ಮಾಧ್ಯಮಗಳನ್ನು ಕೊಂಡಾಗಿತ್ತು. ತಮ್ಮ ವಿರುದ್ಧ ಬರೆಯುವ ಕೈಗಳನ್ನು ಕಟ್ಟಿಹಾಕಲಾಗಿತ್ತು. ಎಲ್ಲವನ್ನೂ ತಮ್ಮದಾಗಿಸಿಕೊಂಡ ಪುಟಿನ್‌ ದೃಷ್ಟಿ ಮೊದಲು ಹರಿದಿದ್ದು ಉಕ್ರೇನ್‌ ಕಡೆಗೆ.

ಅದು 2014. ಉಕ್ರೇನಿನ ಗಡಿಯೊಳಗೆ ರಷ್ಯಾ ಸೈನ್ಯ ನುಗ್ಗಿತ್ತು. ಅದುವೆರಗೂ ಉಕ್ರೇನಿನ ಅಧ್ಯಕ್ಷರಾಗಿದ್ದ ವಿಕ್ಟರ್‌ ಯಾನುಕೊವಿಚ್‌ ಅಧಿಕಾರದಿಂದ ಕುಸಿದ ಕೂಡಲೇ ರಷ್ಯಾ ಸೈನ್ಯ ಉಕ್ರೇನ್‌ನ ಕ್ರಿಮಿಯಾ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು. ನಂತರ ನಡೆದ ಕ್ರಿಮಿಯಾ ಜನಾಭಿಪ್ರಾಯ ಸಂಗ್ರಹದಲ್ಲಿ ಕ್ರಿಮಿಯನ್ನರು ರಷ್ಯಾದ ಭಾಗವಾಗುವ ಕಡೆ ಒಲವು ತೋರುವಂತೆ ಪುಟಿನ್ ಮಾಡಿದ್ದರು. ಈ ಜಾಭಿಪ್ರಾಯ ಕುರಿತ ವಿವಾದಗಳು ನಿರ್ದಿಷ್ಟ ಸ್ವರೂಪ ಪಡೆಯುವ ಮೊದಲೇ ಕ್ರಿಮಿಯಾ ರಷ್ಯಾ ಗಡಿಯೊಳಗೆ ಸೇರಿಸಿಕೊಂಡಿತ್ತು.

ಇದೇ ವೇಳೆ ಉಕ್ರೇನ್‌ನ ಸರಕಾರದೊಂದಿಗೆ ಪುಟಿನ್‌ ಬೆಂಬಲಿತ ಪ್ರತ್ಯೇಕತಾದಿಗಳು ಸಶಸ್ತ್ರಯುದ್ಧಕ್ಕೆ ಮುಂದಾಗಿದ್ದರು. ಮುಂದುವರಿದು ಡೊನ್ಯೋಸ್ಕ್(Donetsk) ಮತ್ತು ಲುಗಾನ್ಸ್ಕ್‌ ಪ್ರದೇಶಗಳನ್ನು ಸ್ವತಂತ್ರವೆಂದು ಘೋಷಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ರಷ್ಯಾ ಸೈನ್ಯ ಈ ಪ್ರದೇಶಗಳ ಗಡಿಯೊಳಗೆ ಪ್ರವೇಶಿಸಿತು. ನಂತರವೂ ಕೂಡ ರಷ್ಯನ್‌ ಯುದ್ಧ ವಾಹನಗಳು ಉಕ್ರೇನ್‌ ಗಡಿಯೊಳಗೆ ಸಂಚರಿಸುತ್ತಿವೆ ಎಂದು ಸುದ್ದಿಯಾಗುತ್ತಿತ್ತು. ಅಪಾರ ಪ್ರಮಾಣದ ಸೈನಿಕರು ಈ ವೇಳೆ ಹತರಾಗಿದ್ದರು. ಉಕ್ರೇನ್‌ನ ಸಾರ್ವಭೌಮತ್ವಕ್ಕೆ ರಷ್ಯಾ ದಕ್ಕೆ ತರುತ್ತಿದೆ ಎಂದು ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಆರೋಪ ಮಾಡಿದ್ದವು. ಆದರೂ ಸಹ ಉಕ್ರೇನ್‌ ಗಡಿಯೊಳಗಿನ ರಷ್ಯಾ ಸೈನ್ಯಕ್ಕೆ ಯಾವುದೇ ತೊಂದರೆ ಉಂಟಾಗಿರಲಿಲ್ಲ.

ಉಕ್ರೇನ್‌ನಲ್ಲಿ ಬೀಡು ಬಿಟ್ಟಿದ್ದ ರಷ್ಯನ್‌ ಯುದ್ಧ ವಾಹನಗಳು
ಉಕ್ರೇನ್‌ನಲ್ಲಿ ಬೀಡು ಬಿಟ್ಟಿದ್ದ ರಷ್ಯನ್‌ ಯುದ್ಧ ವಾಹನಗಳು

2015ರ ಅಕ್ಟೋಬರ್‌ನಲ್ಲಿ ಉಕ್ರೇನ್‌ನಲ್ಲಿ ಬೀಡು ಬಿಟ್ಟಿದ್ದ ರಷ್ಯನ್‌ ಸೈನ್ಯದ ಆಯ್ದ ಭಾಗ ಸಿರಿಯಾ ಕಡೆಗೆ ತೆರಳಿತು. ಈ ಬೆಳವಣಿಗೆ ಏಕೆ ಎಂಬ ಪ್ರಶ್ನೆಗೆ ಸಿರಿಯಾದ ಪ್ರಧಾನಿ ಭಾಷಲ್‌ ಅಲ್‌ಅಸದ್‌ಗೆ ಬೆಂಬಲವನ್ನು ನೀಡುವ ಸಲುವಾಗಿ ಎಂಬ ಉತ್ತರ ರಷ್ಯಾ ಸೈನ್ಯದಿಂದ ಕೇಳಿಬಂದಿತ್ತು. ವ್ಲಾದಿಮಿರ್‌ ಪುಟಿನ್‌ ಒಡೆದ ರಷ್ಯಾ ಸಂಯುಕ್ತ ಸಂಸ್ಥಾನವನ್ನು ಮತ್ತೆ ಒಂದುಗೂಡಿಸುವ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆಯೇ ಎನ್ನುವ ಊಹಾಪೋಹಗಳು ನಿಜವಾಗುವ ಹಾದಿಯಲ್ಲಿದ್ದವು.

ಸಿರಿಯಾ ಅಧ್ಯಕ್ಷರ ಬೆಂಬಲ ನೀಡಬೇಕೆಂಬ ಮನವಿಗೆ ಓಗೊಟ್ಟ ರಷ್ಯಾ, ಸಿರಿಯಾದಲ್ಲಿನ ಜಿಹಾದಿಗಳ ಮೇಲೆ ಆಧುನಿಕ ಅಸ್ತ್ರಗಳನ್ನು ಪ್ರಯೋಗಿಸಿತ್ತು. ರಷ್ಯಾದ ವಾಯುದಳ, ನೌಕಾದಳವೂ ಜಿಹಾದಿಗಳ ವಿರುದ್ಧ ತಿರುಗಿಬಿದ್ದಿತ್ತು. ಅಂದಿನಿಂದ ಪ್ರಾರಂಭವಾದ ಸಿರಿಯಾದ ನೆತ್ತರ ಹೊಳೆ ಉಗ್ರಗಾಮಿಗಳ ಜತೆಗೆ ಸಾಮಾನ್ಯ ನಾಗರೀಕರನ್ನೂ ನುಂಗತೊಡಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬಂದ ವಿರೋಧಕ್ಕೆ ಪುಟಿನ್‌ ತಲೆ ಕೆಡಿಸಿಕೊಳ್ಳಲಿಲ್ಲ.

ಒಂದು ಕಡೆ ಇತರೆ ದೇಶಗಳ ಮೇಲೆ ಪ್ರಾಬಲ್ಯವನ್ನು ಸಾಧಿಸುತ್ತಾ ಹೊರಟ ಪುಟಿನ್‌ ರಷ್ಯಾವನ್ನು ಕೂಡ ಸದೃಢವಾಗಿಸುತ್ತಾ ಹೊರಟಿದ್ದರು. ರಷ್ಯಾದ ತೈಲ ರಫ್ತು ಉದ್ಯಮ ದೊಡ್ಡದಾಗಿ ಬೆಳೆದು ನಿಂತಿತು. ಅಣು ಶಕ್ತಿ ಉತ್ಪಾದನೆಗಾಗಿ ಪುಟಿನ್‌ 4,200 ಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹಣವನ್ನು ಮೀಸಲಿರಿಸಿದ್ದರು. ರಷ್ಯಾದಲ್ಲಿ ಪ್ರಮುಖ ತೈಲ ಮತ್ತು ಅನಿಲ ಸಂಸ್ಕರಣಾಗಾರಗಳು, ಜಲವಿದ್ಯುತ್‌ ಸ್ಥಾವರಗಳು, ಅಣು ಸ್ಥಾವರಗಳು, ಬಂದರುಗಳು ನಿರ್ಮಾಣವಾದವು. ರಷ್ಯಾದಲ್ಲಷ್ಟೇ ಅಲ್ಲದೇ ಹೊರದೇಶಗಳಲ್ಲೂ ಸ್ಥಾವರಗಳ ಸ್ಥಾಪನೆಗೆ ರಷ್ಯಾ ಮುಂದಾಯಿತು. ರಷ್ಯಾ ಮತ್ತು ಚೈನಾ ಜತೆಯಾಗಿ ಹಲವು ಯೋಜನೆಗಳನ್ನು ಕೈಗೊಂಡವು.

2014ರಲ್ಲಿ ವ್ಯವಸ್ಥಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕಾ ಸಂಸ್ಥೆ ವ್ಲಾದಿಮಿರ್‌ ಪುಟಿನ್‌ರನ್ನು ವ್ಯವಸ್ಥಿತ ಅಪರಾಧ ಮತ್ತು ಭ್ರಷ್ಟಾಚಾರಗಳ ವರ್ಷದ ವ್ಯಕ್ತಿ ಎಂದು ಕರೆಯಿತು. ಇದರ ಹಿಂದೆಯೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಮತ್ತು ರಷ್ಯಾ ವಿರುದ್ಧ ಹೇರಿದ್ದ ಅಂತರರಾಷ್ಟ್ರೀಯ ನಿರ್ಬಂಧದ ಕಾರಣದಿಂದಾಗಿ ರಷ್ಯಾದ ಕರೆನ್ಸಿ ರೂಬೆಲ್‌ ಬಾರಿ ಪ್ರಮಾಣದ ಕುಸಿತ ಕಂಡಿತು. ಇದಕ್ಕೆ ಪ್ರತ್ಯುತ್ತರವಾಗಿ ಪುಟಿನ್‌ ಪಾಶ್ಚಿಮಾತ್ಯ ದೇಶಗಳ ಮೇಲೆ ತಾವು ಸಹ ನಿರ್ಬಂಧ ಹೇರಿದರು. ಪರ್ಯಾಯವಾಗಿ ಪೂರ್ವಾತ್ಯ ದೇಶಗಳೊಂದಿಗೆ ಸಂಬಂಧ ಬೆಸೆಯುವತ್ತ ಪುಟಿನ್‌ ಮುಖ ಮಾಡಿದರು. ಚೈನಾ ಪುಟಿನ್‌ನ ಯೋಜನೆಗಳಿಗೆ ಬೆಂಬಲವಾಗಿ ನಿಂತಿತು.

ದೇಶಗಳೊಂದಿಗೆ ಸಂಬಂಧ ಬೆಳೆಯುವುದರ ಜತೆಗೆ ರಷ್ಯಾದ ಸೈನ್ಯ ಕೂಡ ಬೆಳೆಯುತ್ತಾ ಸಾಗಿತ್ತು. ತಮ್ಮ ಅಧಿಕಾರಾವಧಿಯ ಪ್ರಾರಂಭದಿಂದಲೇ ಪುಟಿನ್‌ ಸೈನ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಾ ಬಂದಿದ್ದರು. ಆದರೂ ರಷ್ಯಾ ಸೈನ್ಯದ ಸಮಗ್ರ ಸುಧಾರಣೆ ಆರಂಭವಾದದ್ದು 2008ರಲ್ಲಿ. ದಿನದಿಂದ ದಿನಕ್ಕೆ ರಷ್ಯಾ ಸೈನ್ಯ ಅಧುನಿಕವಾಗುತ್ತಾ ಸಾಗಿತು. ಸೈನಿಕರ ಸಂಖ್ಯೆಯನ್ನು 10 ಲಕ್ಷಕ್ಕೆ ಸೀಮಿತಗೊಳಿಸಿದರು. ಹೆಚ್ಚಿನ ಸೈನಿಕರ ಬದಲಾಗಿ ಉತ್ತಮವಾದ ಶಸ್ತ್ರಾಸ್ತ್ರಗಳ ಬಳಕೆಯನ್ನು ಆರಂಭಿಸಿದರು.

ರಷ್ಯಾ ಸೈನಿಕರ ಪಥಸಂಚಲನ.
ರಷ್ಯಾ ಸೈನಿಕರ ಪಥಸಂಚಲನ.

ನ್ಯೂಯಾರ್ಕ್‌ ಮೂಲದ ಮಾನವ ಹಕ್ಕುಗಳ ಸಂಘಟನೆಯೊಂದು ತನ್ನ ವರದಿಯಲ್ಲಿ 'ಪುಟಿನ್‌ 2012ರಲ್ಲಿ ಮತ್ತೆ ಆಧಿಕಾರವನ್ನು ಹಿಡಿದಾಗಿನಿಂದ ತಂದಿರುವ ಕಾನೂನುಗಳು ಮಾನವ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ' ಎಂದು ಬರೆದಿತ್ತು. ಈ ಮಾತು ನಿಜವೆಂಬಂತೆ, ಪುಟಿನ್‌ ಸರಕಾರೇತರ ಸೇವಾ ಸಂಸ್ಥೆಗಳ ತಪಾಸಣೆಗೆ ಮುಂದಾಗಿದ್ದರು. ತಮ್ಮ ವಿರುದ್ಧ ಮಾತನಾಡುವವರಲ್ಲಿ ಭಯವನ್ನು ಹುಟ್ಟುಹಾಕಿದ್ದರು. ಪುಟಿನ್‌ಗೆ ಪ್ರತಿರೋಧ ವ್ಯಕ್ತಪಡಿಸಿದ ಎಷ್ಟೋ ಜನ ಜೈಲು ಪಾಲಾದರು. 'ವಿದೇಶಿ ಏಜೆಂಟ್‌ ಕಾನೂನು' ತಂದು ವಿದೇಶಗಳಿಂದ ಸಹಾಯಧನ ಪಡೆಯುತ್ತಿದ್ದ ಸಂಸ್ಥೆಗಳನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಂಡರು. ಲೈಗಿಂಕ ಅಲ್ಪಸಂಖ್ಯಾತರ ಅಸ್ತಿತ್ವವನ್ನು ಹತ್ತಿಕ್ಕುವ ಕಾನೂನನ್ನು ತಂದು ಪುಟಿನ್‌ ಮಾನವ ಹಕ್ಕುಗಳ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾದರು.

ರಷ್ಯಾದ ಹಲವಾರು ಸಮುದಾಯಗಳು ಪುಟಿನ್‌ ವಿರುದ್ಧ ಮುನಿಸಿಕೊಂಡಿದ್ದವು. ಈ ವಿಷಯಗಳು ರಷ್ಯಾದ ಬಹುಪಾಲು ನಾಗರೀಕರನ್ನು ತಲುಪಲೇ ಇಲ್ಲ. ಕಾರಣ, ದೇಶದಲ್ಲಿನ ಮುಖ್ಯವಾಹಿನಿಯ ಮಾಧ್ಯಮಗಳು ಪುಟಿನ್‌ನ ಕೈಗೊಂಬೆಗಳಾಂತಾಗಿದ್ದವು. ವಿಶ್ವದ ಪ್ರಬಲ ವ್ಯಕ್ತಿಗಳ ಸಾಲಿನಲ್ಲಿ ಪುಟಿನ್‌ ಮೇಲಕ್ಕೇರುತ್ತಾ ಸಾಗಿದಂತೆ ರಷ್ಯಾ ಪತ್ರಿಕಾ ಸ್ವಾತಂತ್ರವನ್ನು ಕಳೆದುಕೊಳ್ಳುತ್ತಾ ಬಂತು. ಪತ್ರಿಕಾ ಸ್ವಾತಂತ್ರ ಸೂಚ್ಯಾಂಕ ಹೇಳುವಂತೆ 2013ರಲ್ಲಿ 179 ದೇಶಗಳ ಪೈಕಿ ರಷ್ಯಾ 148ನೇ ಸ್ಥಾನದಲ್ಲಿತ್ತು. 2015ರಲ್ಲಿ ಬಂದ ವರದಿಯೊಂದು ಹೇಳುವಂತೆ ಕಡಿಮೆ ಪತ್ರಿಕಾ ಸ್ವಾತಂತ್ರ ಹೊಂದಿರುವ 100 ದೇಶಗಳ ಪೈಕಿ ರಷ್ಯಾ 83ನೇ ಸ್ಥಾನದಲ್ಲಿತ್ತು. ಇಂದಿಗೂ ಈ ಪರಿಸ್ಥಿತಿಯೇನು ಬದಲಾಗಿಲ್ಲ.

ಸತತ ನಾಲ್ಕು ವರ್ಷಗಳಿಂದ ಜಗತ್ತಿನ ಪ್ರಬಲ ವ್ಯಕ್ತಿ ಎಂದೆನ್ನಿಸಿಕೊಂಡಿರುವ ಪುಟಿನ್‌, ಅಮೆರಿಕಾದ ಜಾಗತಿಕ ಪ್ರಾಬಲ್ಯವನ್ನು ಕಿತ್ತೊಗಿದು ಆ ಸ್ಥಾನದಲ್ಲಿ ರಷ್ಯಾವನ್ನು ತಂದಿಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇದರ ಭಾಗವಾಗಿಯೇ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್‌ ತಮ್ಮ ಕೈಚಳಕ ತೋರಿಸಿದ್ದರು ಎಂಬ ಮಾತುಗಳಿವೆ. ಅದು ಪುಟಿನ್ ಯಾಕೆ ಜಗತ್ತಿನ ಪ್ರಭಾವಶಾಲಿ ನಾಯಕ ಎಂಬುದನ್ನು ಬಿಡಿಸಿಡುವ ಮತ್ತೊಂದು ಕುತೂಹಲಕಾರಿ ಕತೆ.

(ನಾಳೆಗೆ)