samachara
www.samachara.com
ವ್ಲಾದಿಮಿರ್‌ ಪುಟಿನ್‌-3: ಕುಸಿದ ರಷ್ಯಾವನ್ನು ಎತ್ತಿನಿಲ್ಲಿಸಿದರೂ ಜನ ವಿರೋಧ ಎದುರಿಸಬೇಕಾಯ್ತು!
SPECIAL SERIES

ವ್ಲಾದಿಮಿರ್‌ ಪುಟಿನ್‌-3: ಕುಸಿದ ರಷ್ಯಾವನ್ನು ಎತ್ತಿನಿಲ್ಲಿಸಿದರೂ ಜನ ವಿರೋಧ ಎದುರಿಸಬೇಕಾಯ್ತು!

ಸೋವಿಯತ್‌ ರಷ್ಯಾ ಕುಸಿತದ ನಂತರ ಏಳಿಗೆಗೆ ಬಂದಾತ ಪುಟಿನ್‌. ಕುಸಿದು ಬಿದ್ದ ದೇಶಕ್ಕೆ ಹೊಸ ಉತ್ಥಾನವನ್ನು ಕಲ್ಪಿಸಿದಾತ ಕೂಡ. ಎಲ್ಲವೂ ಮುಗಿದೇ ಹೋಯಿತು ಎನ್ನುವಾಗ ತಲೆ ಎತ್ತಿ ನಿಂತ ಹೊಸ ನಾಯಕನೀತ. 

ರಷ್ಯಾದ ಅಧ್ಯಕ್ಷ ಸ್ಥಾನಕ್ಕೆ ಪುಟಿನ್‌ ಎರಡನೇ ಬಾರಿಗೆ ಆಯ್ಕೆಯಾಗಿದ್ದರು. ಶೇ.71ರಷ್ಟು ರಷ್ಯನ್‌ ಪ್ರಜೆಗಳು ಪುಟಿನ್‌ಗೆ ಮತ ಹಾಕಿ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಅದಾಗಲೇ ಬಲಿಷ್ಠ ರಷ್ಯಾ ನಿರ್ಮಾಣಕ್ಕೆ ಬೇಕಾಗಿದ್ದ ಎಲ್ಲಾ ಅಡಿಪಾಯಗಳನ್ನು ಸಿದ್ಧಪಡಿಸಿಕೊಂಡಿದ್ದ ಪುಟಿನ್‌, 2004ರ ಮಾರ್ಚ್‌ 14ರಂದು ಎರಡನೇ ಬಾರಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಪ್ರಮಾಣ ವಚನ ಸ್ವೀಕರಿಸಿ ಕೆಲ ತಿಂಗಳುಗಳು ಕಳೆಯುವ ಮೊದಲೆ ಪುಟಿನ್‌ರ ಜನಪ್ರಿಯತೆಗೆ ಭಂಗ ತಂದ ಘಟನೆಯೊಂದು ನಡೆದುಹೋಯಿತು. ಬೆಸ್ಲೆನ್‌ ಎಂಬ ನಗರದಲ್ಲಿನ ಶಾಲೆಯೊಂದಕ್ಕೆ ನುಗ್ಗಿದ್ದ ಉಗ್ರಗಾಮಿಗಳು 777 ಮಕ್ಕಳು ಸೇರಿದಂತೆ ಒಟ್ಟು 2100 ಜನರನ್ನು ಮೂರು ದಿನಗಳ ಕಾಲ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.

ಅಂತರರಾಷ್ಟ್ರೀಯ ಮಾಧ್ಯಮಗಳು ಪುಟಿನ್‌ ವಿರುದ್ಧ ವರದಿಗಳನ್ನು ಬರೆದವು. ಎರಡು ವರ್ಷಗಳ ಹಿಂದೆ ಕೂಡ ಇಂತಹದ್ದೊಂದು ಪ್ರಕರಣ ನಡೆದಿತ್ತು. ಮತ್ತೆ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಪುಟಿನ್‌ರ ರಾಜಕೀಯ ಅಸಮರ್ಥತೆಯನ್ನು ಬಿಂಬಿಸುತ್ತಿದೆ ಎಂದೆಲ್ಲಾ ವಿಶ್ಲೇಷಣೆಗಳು ಶುರುವಾದವು.

ಮೂರು ದಿನಗಳ ಸತತ ಕಾರ್ಯಾಚರಣೆಯಿಂದ ಒತ್ತೆಯಾಳುಗಳನ್ನು ಬಿಡಿಸಲಾಯಿತಾದರೂ 334 ಜನ ಸಾವನ್ನಪ್ಪಿದರು. ಅದರಲ್ಲಿ 186 ಜನ ಮಕ್ಕಳೂ ಸೇರಿದ್ದರು. ಈ ಘಟನೆ ಪುಟಿನ್‌ ಮೇಲೆ ರಷ್ಯಾ ಜನ ಇರಿಸಿದ್ದ ನಂಬಿಕೆ ಕಡಿಮೆ ಮಾಡಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಕೆಲ ದಿನಗಳ ನಂತರ ರಷ್ಯಾದಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಶೇ.83ರಷ್ಟು ಜನ ಪುಟಿನ್‌ ಪರವಾಗಿ ಮಾತನಾಡಿದ್ದರು. ನಾಯಕನ ಮೇಲಿನ ಜನರ ನಂಬಿಕೆ ಅಚಲವಾಗಿತ್ತು.

ಬೆಸ್ಲೆನ್‌ ಶಾಲೆ ಮೇಲೆ ನಡೆದ ದಾಳಿಯ ತೀವ್ರತೆಯನ್ನು ಇದೊಂದು ಚಿತ್ರ ಸಾರಿ ಹೇಳುತ್ತದೆ. 
ಬೆಸ್ಲೆನ್‌ ಶಾಲೆ ಮೇಲೆ ನಡೆದ ದಾಳಿಯ ತೀವ್ರತೆಯನ್ನು ಇದೊಂದು ಚಿತ್ರ ಸಾರಿ ಹೇಳುತ್ತದೆ. 

ಈ ಮಧ್ಯೆಯೇ ಪುಟಿನ್‌ ರಷ್ಯಾದ ಅತಿದೊಡ್ಡ ತೈಲ ಉತ್ಪಾದನಾ ಕಂಪನಿಯಾಗಿದ್ದ 'ಯುಕೋಸ್‌'ಅನ್ನು ಮುಟ್ಟುಗೋಲು ಹಾಕಿಕೊಂಡರು. ರಷ್ಯಾದಲ್ಲಿ ತೈಲೋತ್ಪಾದನೆಯಿಂದ ಬರುತ್ತಿದ್ದ ಅದಾಯದ ಶೇ.20ರಷ್ಟು ಪಾಲನ್ನು ನೀಡುತ್ತಿದ್ದ ಈ ಕಂಪನಿಯ ಮಾಲೀಕ ಮೈಕಲ್‌ ಕೊಡೊರ್ಕೊವಸ್ಕಿ, ರಷ್ಯಾದ 10ನೇ ಅತಿದೊಡ್ಡ ಶ್ರೀಮಂತ ಎನಿಸಿಕೊಂಡಿದ್ದ. ವಿಶ್ವದ ಶ್ರೀಮಂತರ ಪೈಕಿ 16ನೇ ಸ್ಥಾನದಲ್ಲಿದ್ದ. ಆತನ ಕಂಪನಿ ಉತ್ಪಾದಿಸುತ್ತಿದ್ದ ತೈಲದ ಪ್ರಮಾಣ ಲಿಬಿಯಾ ಅಥವಾ ಇರಾಕ್‌ ರಾಷ್ಟ್ರಗಳ ಒಟ್ಟು ತೈಲೋತ್ಪಾದನೆಯ ಪ್ರಮಾಣವನ್ನು ಮುಟ್ಟುತ್ತಿತ್ತು.

ಸರಿಯಾಗಿ ತೆರಿಗೆ ನೀಡದೇ, ಪಡೆದ ಸಾಲವನ್ನೂ ಕೂಡ ಹಿಂತಿರುಗಿಸಿಲ್ಲ ಎಂಬ ಕಾರಣದಿಂದ ಈ ಕಂಪನಿಯನ್ನು ಪುಟಿನ್‌ ವಶಕ್ಕೆ ಪಡೆದಿದ್ದರು. ಅಂತರರಾಷ್ಟ್ರೀಯ ಮಾಧ್ಯಮಗಳು ತಮ್ಮ ವಿರುದ್ಧ ಭಿತ್ತರಿಸುತ್ತಿದ್ದ ಸುದ್ದಿಗಳಿಗೆ ಪುಟಿನ್‌ ಸೊಪ್ಪು ಹಾಕಲಿಲ್ಲ. ಪುಟಿನ್‌ರ ಈ ನಡೆ ಬಂಡವಾಳ ರಾಷ್ಟ್ರೀಕರಣದ ಮೊದಲ ಹೆಜ್ಜೆಯಾಗಿ ಕಾಣಿಸಿತ್ತು.

ಜಾಗೃತರಾದ ರಷ್ಯನ್ಸ್:

ಪುಟಿನ್‌ರ ಕ್ರೆಮ್ಲಿನ್‌ ಭಾಷಣ. 
ಪುಟಿನ್‌ರ ಕ್ರೆಮ್ಲಿನ್‌ ಭಾಷಣ. 

ಎರಡನೇ ಬಾರಿ ಅಧ್ಯಕ್ಷರಾದ ಬಳಿಕ 2005ರಲ್ಲಿ ಮಾಸ್ಕೋ ನಗರದ ಹೃದಯ ಭಾಗದಲ್ಲಿರುವ ಕ್ರೆಮ್ಲಿನ್‌ ಕಟ್ಟಡದಲ್ಲಿ ಪುಟಿನ್‌ ನಡೆಸಿದ ಭಾಷಣ ರಷ್ಯಾ ಜನತೆಗೆ ಹೊಸದೊಂದು ಹುರುಪನ್ನು ತಂದುಕೊಟ್ಟಿತು. ಸೋವಿಯತ್‌ ಒಕ್ಕೂಟದ ಪತನ 20ನೇ ಶತಮಾನ ಕಂಡ ಮಹಾ ದುರಂತ ಎಂದು ಬಣ್ಣಿಸಿದ ಪುಟಿನ್‌, ಮತ್ತೆ ರಷ್ಯಾವನ್ನು ಕಟ್ಟಲು ಜನರನ್ನು ಪ್ರೇರೇಪಿಸಿದ್ದರು. ಈ ಕುಸಿತ ರಷ್ಯಾವನ್ನು ಹಾಳು ಮಾಡಿದೆ. ಆದ್ದರಿಂದ ನಮ್ಮ ಗುರಿ ಸ್ಪಷ್ಟವಾಗಬೇಕು. ನಾವು ಅತ್ಯುತ್ತಮ ಗುಣಮಟ್ಟದ ಜೀವನವನ್ನು ನಡೆಸಬೇಕು. ದೇಶ ಸುಭದ್ರವಾಗಿ ಮತ್ತೆ ವಿಶ್ವ ಶಕ್ತಿಗಳಲ್ಲಿ ಒಂದಾಗಬೇಕು ಎಂಬ ಪುಟಿನ್‌ ಹೇಳಿಕೆಗೆ ರಷ್ಯಾ ಜನತೆ ಸ್ಪಂದಿಸಿತ್ತು.

ಅದೇ ವರ್ಷ ಪುಟಿನ್‌ ಹಲವಾರು ಅಬಿವೃದ್ಧಿ ಕ್ರಮಗಳನ್ನು ಕೈಗೊಂಡಿದ್ದರು. ಆರೋಗ್ಯ ಸುಧಾರಣೆ, ಶಿಕ್ಷಣ, ವಸತಿ ನಿರ್ಮಾಣ, ಕೃಷಿ ಅಭಿವೃದ್ಧಿ ಇತ್ಯಾದಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪುಟಿನ್‌ರ ಯೋಜನೆ ಸಿದ್ಧವಾಗಿತ್ತು.

ರಷ್ಯಾದ ಅನ್ನಾ ಪೊಲಿಟ್ಕೋಸ್ಕವ್ಯಾ ಎಂಬ ಪತ್ರಕರ್ತೆಯೊಬ್ಬಳು ಆಘಾತಕಾರಿ ಸುದ್ದಿಯೊಂದನ್ನು ಹೊರಗೆಡವಿದ್ದಳು. ಸೈನ್ಯದಲ್ಲಿ ಬೃಹತ್‌ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆನ್ನಾ ನೀಡಿದ ಸುದ್ಧಿಗೆ ಅಂತರರಾಷ್ಟ್ರಿಯ ಮಾಧ್ಯಮಗಳು ಇನ್ನಷ್ಟು ದೊಡ್ಡದಾಗಿಯೇ ಪ್ರಚಾರವನ್ನು ನೀಡಿದವು. ಆದರೆ ಪುಟಿನ್‌ ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ಗಮನ ನೀಡಿರಲಿಲ್ಲ.

ಆದರೆ 2007ರ ಅಕ್ಟೋಬರ್‌ 7 ಪುಟಿನ್‌ ಜನ್ಮದಿನದಂದೇ ಅನ್ನಾ ಗುಂಡೇಟಿಗೆ ಬಲಿಯಾಗಿದ್ದಳು. ಅವಳ ಸಾವಿನ ಬಳಿಕ ಪುಟಿನ್‌ ವಿರುದ್ಧ ಹಲವಾರು ಮಾಧ್ಯಮಗಳು ಮಾತನಾಡತೊಡಗಿದವು. ಹೊಸದಾಗಿ ಪ್ರಾರಂಭಗೊಂಡ ಹಲವು ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಬಾಯಿಗೆ ಬೀಗ ಜಡಿಯಲು ಪುಟಿನ್‌ರಿಂದ ಸಾಧ್ಯವಾಗಲಿಲ್ಲ. ಸ್ವತಃ ಪುಟಿನ್‌ ಹೇಳುವಂತೆ, ‘ಅನ್ನಾಳ ಬರವಣಿಗೆಗಿಂತ ಆಕೆಯ ಸಾವು ಸರಕಾರಕ್ಕೆ ಹೆಚ್ಚಿನ ತೊಡಕನ್ನು ಹುಟ್ಟುಹಾಕಿತ್ತು’.

ಪುಟಿನ್‌ ಸಿದ್ಧಾಂತಗಳೊಂದಿಗೆ ಸಹಮತವಿರದಿದ್ದ ಹಲವಾರು ಭಿನ್ನಮತೀಯ ಪಕ್ಷಗಳು 2007ರ ಆರಂಭದಲ್ಲಿ 'ಭಿನ್ನಮತೀಯರ ಮೆರವಣಿಗೆ' ಹೆಸರಿನಲ್ಲಿ ಜಾಥಾವೊಂದನ್ನು ಸಂಘಟಿಸಿದ್ದವು. ಪುಟಿನ್‌ ಹಲವಾರು ಎಚ್ಚರಿಕೆಗಳನ್ನು ನೀಡಿದ್ದರೂ ಸಹ ಮರೆವಣಿಗೆಯ ಸಿದ್ಧತಾ ಕಾರ್ಯಗಳು ನಿಂತಿರಲಿಲ್ಲ. ರಷ್ಯಾದ ಹಲವಾರು ನಗರಗಳಲ್ಲಿ ನಡೆದ ಮೆರವಣಿಗೆ ವೇಳೆಗೆ ಕಾನೂನುಗಳನ್ನು ಮೀರಿ ವರ್ತಿಸಿದ 150ಕ್ಕೂ ಅಧಿಕ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು. ಈ ಸಂಧರ್ಭದಲ್ಲಿ ಪುಟಿನ್‌ ವಿರುದ್ಧ ದೊಡ್ಡ ವಾಗ್ದಾಳಿಯೇ ನಡೆದಿತ್ತು.

ಅದೇ 2007ರ ಡಿಸೆಂಬರ್‌ ಅಂತ್ಯದಲ್ಲಿ ಮತ್ತೊಂದು ಚುನಾವಣೆ ಎದುರಾಯಿತು. ಈ ಬಾರಿಯೂ ಕೂಡ ಗೆದ್ದುದ್ದು ಪುಟಿನ್‌ ಅಧ್ಯಕ್ಷತೆಯಲ್ಲಿದ್ದ ಯುನೈಟೆಡ್‌ ರಷ್ಯಾ ಪಕ್ಷವೇ. ಆದರೆ ಹಲವಾರು ಕಾರಣಗಳಿಂದ ಪುಟಿನ್‌ ಬಗೆಗಿನ ಅಭಿಮಾನ ಕಡಿಮೆಯಾಗಿತ್ತು. 2004ರಲ್ಲಿ ಶೇ.71ರಷ್ಟು ಮತಗಳನ್ನು ಗಳಿಸಿ ಅಧಿಕಾರದ ಚುಕಾಣಿ ಹಿಡಿದಿದ್ದ ಪಕ್ಷಕ್ಕೆ 2007ರ ಕೊನೆಯಲ್ಲಿ ಶೇ. 64ರಷ್ಟು ಮತಗಳು ದೊರೆತಿದ್ದವು. ಡಿಮಿಟ್ರಿ ಮಡ್ವೆಡೆವ್‌ಗೆ ಡ್ಯೂಮಾ ಸದಸ್ಯರು ಹೆಚ್ಚಿನ ಬೆಂಬಲ ಸೂಚಿಸಿದರು. ರಷ್ಯಾದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮಡ್ವೆಡೇವ್‌, ವ್ಲಾದಿಮಿರ್‌ ಪುಟಿನ್‌ಗೆ ಪ್ರಧಾನ ಮಂತ್ರಿಯ ಸ್ಥಾನವನ್ನು ನೀಡಿದರು.

ನವೋತ್ಥಾನದ ಹಾದಿಯಲ್ಲಿ ರಷ್ಯಾ:

ಪ್ರಧಾನಿಯಾಗಿ ನಿಂತ ಪುಟಿನ್‌ ದೇಶದ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡಿದರು. ಕೃಷಿಯನ್ನು ಆಧ್ಯತೆಯ ಕ್ಷೇತ್ರವನ್ನಾಗಿಸಿಕೊಂಡರು. ಅದರ ಜೊತೆಗೆ ಸೈನ್ಯ, ವಸತಿ ಇತ್ಯಾದಿಗಳ ಕಡೆಗೂ ಹೆಚ್ಚಿನ ಗಮನ ಕೇಂದ್ರೀಕರಿಸಿದರು. ಮಡ್ವೆಡೆವ್‌ ಮತ್ತು ಪುಟಿನ್‌ ನೇತೃತ್ವದ ಸರಕಾರ ಯಶಸ್ವಿಯಾಗಿ ಸಾಗುತ್ತಿತ್ತು.

ಪುಟಿನ್‌ ಅಧ್ಯಕ್ಷರಾಗಿದ್ದ 2000-2008ರ ಅವಧಿಯಲ್ಲಿ ರಷ್ಯಾ ದೊಡ್ಡ ಸುಧಾರಣೆಯನ್ನೆ ಕಂಡಿತ್ತು. 2000ಕ್ಕಿಂತ ಹಿಂದಿನ ದಿನಗಳಿಗೆ ಹೋಲಿಸಿದರೆ ರಷ್ಯಾ ಜನರ ಕೊಳ್ಳುವ ಶಕ್ತಿ ಶೇ.72ರಷ್ಟು ಏರಿಕೆಯಾಗಿತ್ತು. ಪುಟಿನ್‌ ಆಡಳಿತಕ್ಕೆ ಬರುವ ಮುಂಚೆ ದುಬಾರಿ ಎನಿಸಿದ್ದ ಆಹಾರ ವಸ್ತುಗಳು,ಹೆಚ್ಚಿನ ತೈಲಬೆಲೆ, ಹಿಡಿತಕ್ಕೆ ಸಿಗದ ಆರ್ಥಿಕ ಬೆಳವಣಿಗೆ ಎಲ್ಲವೂ ಸುಧಾರಿಸಿದ್ದವು. ಆರ್ಥಿಕ ನೀತಿಗಳು ರಷ್ಯಾದ ಆರ್ಥಿಕತೆಯನ್ನು ತಹಬದಿಗೆ ತಂದಿದ್ದವು. ಹಣಕಾಸಿನ ದೃಷ್ಠಿಯಿಂದ ಜರ್ಜರಿತವಾಗಿದ್ದ ರಷ್ಯಾ ಚೇತರಿಕೆ ಕಂಡಿತ್ತು.

ದೇಶದ ಬೆಳವಣಿಗೆ ದರ ಪುಟಿನ್‌ರ ಕಾಲಘಟ್ಟದಲ್ಲಿ ಶೇ.7ಕ್ಕೆ ಏರಿಕೆಯಾಗಿತ್ತು. ಬೃಹತ್‌ ಆರ್ಥಿಕ ಹಿಂಜರಿತದಲ್ಲಿ ನಲುಗುತ್ತಿದ್ದ ರಷ್ಯಾ ಜಗತ್ತಿನ 7ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ನಿಂತಿತ್ತು. 1990ರಲ್ಲಿ ಸೋವಿಯತ್‌ ಒಕ್ಕೂಟ ಕುಸಿಯುವುದಕ್ಕೂ ಮೊದಲು ಇಡೀ ಒಕ್ಕೂಟದ ದೇಶಿಯ ಉತ್ಪನ್ನದ ಪ್ರಮಾಣ ಏನಿತ್ತೋ, ಅದಕ್ಕಿಂತ ಹೆಚ್ಚಿನ ಉತ್ಪಾದನೆಯನ್ನು ಪುಟಿನ್‌ ಆಡಳಿತಾವಧಿ ಕಂಡಿತ್ತು. ಒಟ್ಟಾರೆಯಾಗಿ ಇಡೀ ರಷ್ಯಾ ಪುಟಿನ್‌ರ ಎಂಟು ವರ್ಷಗಳ ಆಳ್ವಿಕೆಯಲ್ಲಿ ಹೊಸದೊಂದು ಉತ್ಥಾನವನ್ನು ಕಂಡಿತ್ತು.

ಪುಟಿನ್‌ ಎರಡನೇ ಬಾರಿ ಪ್ರಧಾನ ಮಂತ್ರಿಯಾಗಿ ಅಡಳಿತ ನಡೆಸುತ್ತಿದ್ದ ಬೆನ್ನಲ್ಲೇ 2012ರ ಅಧ್ಷಕ್ಷೀಯ ಚುನಾವಣೆಗೆ ಪುಟಿನ್‌ ಹೆಸರು ಅದಾಗಲೇ ಸೂಚಿಸಲಾಗಿತ್ತು. ಪುಟಿನ್‌ ಗೆದ್ದೆ ಗೆಲ್ಲುತ್ತಾರೆ ಎಂಬ ಭರವಸೆಗೂ ಸಹ ಯಾವುದೇ ಕೊರತೆಯಿರಲಿಲ್ಲ. ಏತನ್ಮಧ್ಯೆ ರಷ್ಯಾ ಅಧ್ಯಕ್ಷ ಮಡ್ವೆಡೆವ್‌ ಅಧ್ಯಕ್ಷರ ಆಡಳಿತಾವಧಿಯನ್ನು 4ರಿಂದ 6 ವರ್ಷಗಳಿಗೆ ಏರಿಸಿದರು. 2011ರ ಸೆಪ್ಟೆಂಬರ್‌ 24ರಂದು ಪುಟಿನ್‌ ಮೂರನೇ ಬಾರಿ ಚುನಾವಣೆ ಎದುರಿಸಿ ಗೆಲುವನ್ನು ಸಹ ದಾಖಲಿಸಿದರು. ಆದರೆ ಪ್ರಾರಂಭದಲ್ಲಿಯೇ ಪುಟಿನ್‌ಗೆ ದೊಡ್ಡ ವಿಘ್ನವೊಂದು ಎದುರಾಗಿತ್ತು. ಲಕ್ಷಾಂತರ ರಷ್ಯನ್‌ ಪ್ರಜೆಗಳು ಪುಟಿನ್‌ ವಿರುದ್ಧ ತಿರುಗಿ ಬಿದ್ದಿದ್ದರು.

ಅಲ್ಲಿಂದ ಮುಂದೆ ನಡೆದಿದ್ದು, ಮತ್ತೊಂದು ಸಾರ್ವಜನಿಕ ಹೋರಾಟ. ಪುಟಿನ್ ಹಾದಿಯಲ್ಲಿ ಅಧಿಕಾರದ ಸಮಸ್ಯೆ ಯಾವತ್ತೂ ಎದುರಾಗದಿದ್ದರೂ, ಜನಾಭಿಪ್ರಾಯವನ್ನು ಸದಾ ಕಾಲ ಉಳಿಸಿಕೊಳ್ಳಲು ಎದುರಾದ ಸಂಗತಿಗಳು, ವಿಶ್ವದ ಪ್ರಬಲ ನಾಯಕನೊಬ್ಬ ಹುಟ್ಟಲು ಕಾರಣವಾದವು.

(ನಾಳೆಗೆ)