samachara
www.samachara.com
ವ್ಲಾದಿಮಿರ್‌ ಪುಟಿನ್‌-2; ಮೇಯರ್ ಸಲಹೆಗಾರ ಹುದ್ದೆಯಿಂದ ರಷ್ಯಾ ಅಧ್ಯಕ್ಷಗಾದಿವರೆಗೆ
SPECIAL SERIES

ವ್ಲಾದಿಮಿರ್‌ ಪುಟಿನ್‌-2; ಮೇಯರ್ ಸಲಹೆಗಾರ ಹುದ್ದೆಯಿಂದ ರಷ್ಯಾ ಅಧ್ಯಕ್ಷಗಾದಿವರೆಗೆ

ವಿಶ್ವದ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಪುಟಿನ್‌ ಹತ್ತಿರ ಸೋಲು ಸುಳಿದದ್ದೇ ಕಡಿಮೆ. ದೊಡ್ಡ ಕನಸನ್ನು ಹೊತ್ತಿದ್ದ ಅವರಿಗೆ ಅವಕಾಶಗಳ ಹೊಳೆ ಅವರಿದ್ದಲ್ಲಿಗೇ ಹರಿದು ಬಂದಿತ್ತು.

ಚಿಕ್ಕ ವಯಸ್ಸಿನಲ್ಲೇ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದ ಪುಟಿನ್‌ ಬದುಕಿನ ಬಹುತೇಕ ದಿನಗಳೆಲ್ಲವೂ ಫಲಪ್ರದವೇ ಆಗಿದ್ದವು. ಪುಟಿನ್‌ ತಮ್ಮ ಜೀವನದಲ್ಲಿ ಎಂದಿಗೂ ಕೂಡ ಇಳಿಮುಖ ಕಂಡವರೇ ಅಲ್ಲ. ಸೆಂಟ್‌ ಪೀಟರ್‌ಬರ್ಗ್‌ನ ಮೇಯರ್‌ ಸಬ್‌ಚಕ್‌ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಹುದ್ದೆಯಲ್ಲಿದ್ದ ಪುಟಿನ್‌ ಅವರನ್ನು ದೊಡ್ಡ ಹುದ್ದೆಯೊಂದು ತಾನಾಗಿಯೇ ಹುಡುಕಿಕೊಂಡು ಬಂದಿತ್ತು.

ಅದು 1996ರ ಜೂನ್‌, ಪುಟಿನ್‌ಗೆ ಮಾಸ್ಕೋಗೆ ಬರುವಂತೆ ಕರೆ ಬಂತು. ಮಾಸ್ಕೋಗೆ ಹೋದ ಪುಟಿನ್‌ಗೆ ದೊರೆತದ್ದು ಪಾವೆಲ್‌ ಬೊರೊಡಿನ್‌ನ ಅಧಿಕಾರದ ಅಡಿಯಲ್ಲಿದ್ದ ‘ಅಧ್ಯಕ್ಷೀಯ ಆಸ್ತಿ ನಿರ್ವಹಣಾ ಇಲಾಖೆ’ಯ ಉಪ ಮುಖ್ಯಸ್ಥನ ಹುದ್ದೆ.

1997ರ ಮಾರ್ಚ್‌ವರೆಗೂ ಪುಟಿನ್‌ ಅದೇ ಹುದ್ದೆಯಲ್ಲೇ ಇದ್ದರು. ಅದೇ ವರ್ಷದ ಮಾರ್ಚ್‌ನಲ್ಲಿ ರಷ್ಯಾದ ಅಧ್ಯಕ್ಷ ಬೋರಿಸ್‌ ಎಲ್ಟ್‌ಸಿನ್‌ ಪುಟಿನ್‌ರನ್ನು ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥರನ್ನಾಗಿ ನೇಮಿಸಿದರು. ಈ ಹುದ್ದೆ ಪುಟಿನ್‌ ರಷ್ಯಾ ಅಧ್ಯಕ್ಷರಿಗೆ ಮತ್ತಷ್ಟು ಹತ್ತಿರವಾಗಲು ಸಹಕಾರಿಯಾಯಿತು. ಎಲ್ಟ್‌ಸಿನ್‌ರಿಗೆ ಅತೀವ್ರವಾದ ನಿಷ್ಠೆಯನ್ನು ತೋರಿಸಿದ ಪುಟಿನ್‌, ಅವರ ಮನಸನ್ನು ಗೆಲ್ಲುವಲ್ಲಿ ಸಫಲರಾದರು.

ಈ ಮಧ್ಯೆ ಪುಟಿನ್‌ ಮಂಡಿಸಿದ 'ಮಾರುಕಟ್ಟೆ ಸಂಬಂಧಗಳ ಅಡಿಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಹೇಗೆ ಯುದ್ಧ ತಂತ್ರಗಳ ಯೋಜನೆಯಲ್ಲಿ ಬಳಸಿಕೊಳ್ಳಬಹುದು’ ಎಂಬ ಪ್ರಬಂಧ ಯುವ ತಲೆಮಾರಿನ ಹಲವಾರು ಪ್ರತಿಭಾವಂತರು ಈ ಕುರಿತು ಚಿಂತಿಸುವಂತೆ ಮಾಡಿತ್ತು.

ಮಿಟಿನಾ ಹಿಂದಿಕ್ಕಿದ ಪುಟಿನ್:

ವಿಕ್ಟೋರಿಯಾ ಮಿಟಿನಾ ಎಂಬಾಕೆ ಅಂದಿನ ಅಧ್ಯಕ್ಷರ ಕಚೇರಿಯ ಮುಖ್ಯಸ್ಥೆಯಾಗಿದ್ದಳು. 1998ರ ಮೇ ವೇಳಗೆ ಪುಟಿನ್‌ ಆಕೆಯನ್ನು ಹಿಂದೆ ತಳ್ಳಿ ಆ ಹುದ್ದೆಯನ್ನು ಹಿಡಿದರು. ಕೇವಲ 2 ತಿಂಗಳುಗಳಲ್ಲಿಯೇ ಪುಟಿನ್‌ ರಷ್ಯಾ ಅಧ್ಯಕ್ಷರು ಕೈಗೊಳ್ಳುವ ಒಪ್ಪಂದಗಳನ್ನು ಸಿಧ್ಧಪಡಿಸುವ ಸಮಿತಿಯ ಮುಖ್ಯಸ್ಥನ ಹುದ್ದೆಗೇರಿದರು. ಪುಟಿನ್‌ಗೂ ಹಿಂದೆ ಈ ಸ್ಥಾನದಲ್ಲಿದ್ದ ಸೆರ್ಜೇ ಶಾಕ್ರೈ ಎಂಬಾತ 46 ಒಪ್ಪಂದಗಳ ಯೋಜನೆಯನ್ನು ಅಧ್ಯಕ್ಷರ ಮುಂದಿರಿಸಿದ್ದ. ಅಧಿಕಾರವನ್ನು ವಶಪಡಿಸಿಕೊಂಡ ಪುಟಿನ್ ಒಂದು ಯೋಜನೆಯನ್ನೂ ಕೂಡ ಅಧ್ಯಕ್ಷರ ಮುಂದಿಡಲಿಲ್ಲ. ಬದಲಾಗಿ ಸರ್ಜೇ ಶಾಕ್ರೈನ ಎಲ್ಲಾ ಯೋಜನೆಗಳನ್ನೂ ಕೈಬಿಟ್ಟರು. ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬೇಕಿದ್ದ ಎಲ್ಲಾ ಕಸರತ್ತುಗಳನ್ನು ಪುಟಿನ್‌ ಮಾಡತೊಡಗಿದ್ದರು.

ಪುಟಿನ್‌ರನ್ನು ಮತ್ತೊಂದು ಅವಕಾಶ ಕೈಬೀಸಿ ಕರೆದಿತ್ತು. ಪುಟಿನ್‌ ಮೇಲೆ ಅಚಲವಾದ ನಂಬಿಕೆಯಿರಿಸಿದ್ದ ಅಂದಿನ ರಷ್ಯಾ ಅಧ್ಯಕ್ಷ ಎಲ್ಟ್‌ಸಿನ್‌ ರಷ್ಯಾ ಸಂಯುಕ್ತ ಸಂಸ್ಥಾನಗಳ ಭದ್ರತಾ ಸಂಸ್ಥೆಯ ನಿರ್ದೇಶಕರ ಪಟ್ಟವನ್ನು ಪುಟಿನ್‌ ಹೆಗಲಿಗಿರಿಸಿದರು. ಈ ಸಂಸ್ಥೆ ಮುಂದೆ ಪುಟಿನ್‌ ಕೆಲಸ ನಿರ್ವಹಿಸಿದ್ದ ಕೆಜಿಬಿಯನ್ನು ಕಿತ್ತುಹಾಕಿತು.

ಪುಟಿನ್‌ಗೆ ಒಲಿದ ಪ್ರಧಾನಿ ಹುದ್ದೆ:

ಅದು 1999ರ ಆಗಸ್ಟ್‌ 9ನೇ ದಿನ, ಅಧ್ಯಕ್ಷ ಎಲ್ಟ್‌ಸಿನ್‌ ಪುಟಿನ್‌ಗೆ ರಷ್ಯಾದ ಉಪ ಪ್ರಧಾನ ಮಂತ್ರಿಯ ಸ್ಥಾನವನ್ನು ನೀಡಿದರು. ಇದಾದ ಕೇವಲ ಒಂದು ವಾರಕ್ಕೆ, ಅಂದರೆ ಆಗಸ್ಟ್‌ 16ರಂದು ರಷ್ಯಾ ಅಧ್ಯಕ್ಷ ಎಲ್ಟ್‌ಸಿನ್‌ ಪುಟಿನ್‌ರನ್ನು ರಷ್ಯಾದ ಪ್ರಧಾನ ಮಂತ್ರಿಯನ್ನಾಗಿ ಘೋಷಿಸಿದರು. ಈಗ ಪುಟಿನ್‌ ರಷ್ಯಾದ ಎರಡನೇ ಪ್ರಮುಖ ವ್ಯಕ್ತಿಯಾಗಿದ್ದರು. ಅಧ್ಯಕ್ಷರ ನಂತರದ ಶಕ್ತಿಶಾಲಿ ಸ್ಥಾನ ಅದು.

334 ಸದಸ್ಯ ಸ್ಥಾನಗಳನ್ನು ಹೊಂದಿರುವ ಡ್ಯೂಮಾ(ರಷ್ಯಾ ಸಂಸತ್ತು)ದಲ್ಲಿ ಪ್ರಧಾನಿಯಾಗಲು ಒಟ್ಟು 226 ಸಂಸತ್‌ ಸದಸ್ಯರ ಓಟುಗಳ ಅಗತ್ಯವಿತ್ತು. ಪುಟಿನ್‌ಗೆ 233 ಓಟುಗಳು ದೊರೆತಿದ್ದವು. 84 ಸದಸ್ಯರು ಪುಟಿನ್‌ ವಿರುದ್ಧ ಮತ ಚಲಾಯಿಸಿದ್ದರು. ಉಳಿದ 17 ಸದಸ್ಯರು ತಟಸ್ಥವಾಗಿದ್ದರು. ಅಗತ್ಯವಿರುವ ಬೆಂಬಲ ಪಡೆದು ಪ್ರಧಾನಿಯಾಗಿದ್ದ ಪುಟಿನ್‌ ಹೆಸರು ಅದುವರೆಗೂ ಬಹುಪಾಲು ಸಾಮಾನ್ಯ ಜನರಿಗೆ ಗೊತ್ತೇ ಇರಲಿಲ್ಲ.

ಅಧ್ಯಕ್ಷ ಎಲ್ಟ್‌ಸಿನ್‌ರ ನಿಷ್ಠಾವಂತ ಶಿಷ್ಯನಾಗಿದ್ದ ಪುಟಿನ್‌ ಪ್ರಧಾನಿಯಾದ ನಂತರ ಅವರ ಸಚಿವ ಸಂಪುಟವನ್ನೂ ಸಹ ಎಲ್ಟ್‌ಸಿನ್‌ರೇ ರೂಪಿಸಿದ್ದರು. ಈ ವೇಳೆ ಮಾತನಾಡಿದ್ದ ಎಲ್ಟ್‌ಸಿನ್‌, ಪುಟಿನ್‌ ತನ್ನ ಉತ್ತರಾಧಿಕಾರಿ ಆಗಬೇಕೆಂಬ ಆಕಾಂಕ್ಷೆಯನ್ನು ಹೊರಹಾಕಿದ್ದರು.

ರಷ್ಯಾದ ಅಧ್ಯಕ್ಷ ಎಲ್ಟ್‌ಸಿನ್ ಮತ್ತು ಪ್ರಧಾನಮಂತ್ರಿ ಪುಟಿನ್‌
ರಷ್ಯಾದ ಅಧ್ಯಕ್ಷ ಎಲ್ಟ್‌ಸಿನ್ ಮತ್ತು ಪ್ರಧಾನಮಂತ್ರಿ ಪುಟಿನ್‌

ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿ ಅಧಿಕಾರದ ಗಾಧಿ ಹಿಡಿದಿದ್ದ ಅಧ್ಯಕ್ಷ ಎಲ್ಟ್‌ಸಿನ್‌ರ ವಿರುದ್ಧ ಹಲವರು ಅದಾಗಲೇ ಕತ್ತಿ ಮಸೆಯುತ್ತಿದ್ದರು. ಅವರ ನಿಷ್ಠಾವಂತನಾಗಿದ್ದ ಪ್ರಧಾನ ಮಂತ್ರಿ ಪುಟಿನ್‌ ಕಡೆಗೂ ಅವರ ವಿರೋಧ ಗಟ್ಟಿಯಾಗಿಯೇ ವ್ಯಕ್ತವಾಗುತ್ತಿತ್ತು. ಎಲ್ಟ್‌ಸಿನ್‌ರ ನಂತರ ಅಧ್ಯಕ್ಷ ಸ್ಥಾನವನ್ನು ಪಡೆಯಬೇಕೆಂಬ ಕನಸಿದ್ದವರೆಲ್ಲಾ ಪುಟಿನ್‌ಗೆ ಎದುರಾಗಿ ನಿಂತಿದ್ದರು.

ದಿನದಿಂದ ದಿನಕ್ಕೆ ಏಳಿಗೆ ಕಾಣುತ್ತಿದ್ದ ಪುಟಿನ್‌ಗೆ ಈ ತೊಡಕುಗಳನ್ನೆಲ್ಲಾ ನಿವಾರಿಸಿಕೊಳ್ಳುವ ಅಗತ್ಯವಿತ್ತು. ಅದಾಗಲೇ ರಷ್ಯಾದೊಂದಿಗೆ ಒಂದು ಯುದ್ಧವನ್ನು ಪೂರೈಸಿದ್ದ ಇಚ್ಕೇರಿಯಾದ ಚೆಚೆನ್‌ ರಿಪಬ್ಲಿಕ್‌ನಲ್ಲಿನ ಬಂಡುಕೋರರ ವಿರುದ್ಧ ಪುಟಿನ್‌ ಎರಡನೇ ಯುದ್ಧವನ್ನು ಘೋಷಿಸಿದ್ದರು. ಪುಟಿನ್‌ರ ದಿಟ್ಟ ನಡೆಗಳು ಜನರ ಮನಸ್ಸಿನಲ್ಲಿ ಅವರ ಕುರಿತಾಗಿ ಅಭಿಮಾನ ಬೆಳೆಯುವಂತೆ ಮಾಡಿದ್ದವು. ಜನಾಭಿಪ್ರಾಯವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಸಾಗಿದ ಪುಟಿನ್‌ ತಮ್ಮ ವಿರೋಧಿಗಳನ್ನೂ ಹಿಂದೆ ಸರಿಸುತ್ತಾ ನಡೆದರು.

ಅದುವರೆಗೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿರದಿದ್ದ ಪುಟಿನ್‌ ಅದಾಗ ತಾನೇ ರೂಪುಗೊಂಡಿದ್ದ ಯುನಿಟಿ ಪಕ್ಷದೊಂದಿಗೆ ಸೇರಿದರು. ಅದಾಗಲೇ ಜನಮನ್ನಣೆ ಗಳಿಸಿದ್ದ ಯುನಿಟಿ ಪಕ್ಷ 1999ರ ಡ್ಯೂಮಾ ಚುನಾವಣೆಯಲ್ಲಿ ಶೇ.23.3ರಷ್ಟು ಜನರ ಮತಗಳನ್ನು ಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ರಷ್ಯಾದ ಹಂಗಾಮಿ ಅಧ್ಯಕ್ಷ ಸ್ಥಾನದಲ್ಲಿ:

ಹಂಗಾಮಿ ಅಧ್ಯಕ್ಷನಾದ ಸಂದರ್ಭದಲ್ಲಿ ಪುಟಿನ್
ಹಂಗಾಮಿ ಅಧ್ಯಕ್ಷನಾದ ಸಂದರ್ಭದಲ್ಲಿ ಪುಟಿನ್

ಅದು 1999ರ ಕೊನೆಯ ದಿನ, ಇದ್ದಕ್ಕಿದ್ದಂತೆಯೇ ರಷ್ಯಾದ ಅಧ್ಯಕ್ಷ ಎಲ್ಟ್‌ಸಿನ್‌ ತಮ್ಮ ಪದವಿಗೆ ರಾಜೀನಾಮೆ ನೀಡಿದ್ದರು. ರಷ್ಯಾ ಸಂವಿಧಾನದಂತೆ ಪ್ರಧಾನಿಯಾಗಿದ್ದ ಪುಟಿನ್‌ 1999ರ ಡಿಸೆಂಬರ್‌ 31ರಂದ ಹಂಗಾಮಿ ಅಧ್ಯಕ್ಷರಾಗಿ ನೇಮಕವಾದರು. ಅಧ್ಯಕ್ಷರಾಗಿ ಪುಟಿನ್‌ ಕೈಗೊಂಡ ಮೊದಲ ಕೆಲಸವೆಂದರೆ ಚೆಚೆನ್ಯಾ ಭಾಗದಲ್ಲಿದ್ದ ರಷ್ಯಾ ಸೈನಿಕ ತುಕಡಿಗಳನ್ನು ಭೇಟಿಯಾಗಿ ಅವುಗಳ ಅಭಿವೃದ್ಧಿಗೆ ಮುಂದಾಗಿದ್ದು.

ರಷ್ಯಾದ ಹಂಗಾಮಿ ಅಧ್ಯಕ್ಷರಾಗಿ ನಿಂತ ಪುಟಿನ್‌ ಮೊದಲ ಅಧ್ಯಕ್ಷೀಯ ತೀರ್ಪೊಂದಕ್ಕೆ ಸಹಿ ಹಾಕಿದ್ದರು. ಈ ತೀರ್ಪಿನ ಪ್ರಕಾರ ತಮ್ಮ ಆಡಳಿತಾವಧಿಯನ್ನು ಮುಗಿಸಿದ ಅಧ್ಯಕ್ಷರ ಮತ್ತು ಅವರ ಕುಟುಂಬದ ಮೇಲಿನ ಎಲ್ಲಾ ಅರೋಪಗಳನ್ನು ಕೈಬಿಡಲಾಗುತ್ತಿತ್ತು. ಈ ಶಾಸನವೇ ಪುಟಿನ್‌ಗೆ ಮೊದಲ ಮುಳ್ಳಾಯಿತು. ಪುಟಿನ್‌ ಅಧಿಕಾರದಲ್ಲಿ ಮೇಲೇರಲು ಮುಖ್ಯ ಕಾರಣರಾಗಿದ್ದ ಮಾಜಿ ಅಧ್ಯಕ್ಷ ಎಲ್ಟ್‌ಸಿನ್ ಮತ್ತವರ ಕುಟುಂಬದ ಮೇಲೆ 'ಮಲ್ಬೇಕ್ಸ್‌' ಲಂಚ ಪ್ರಕರಣದ ಅರೋಪವಿತ್ತು. ಪುಟಿನ್‌ ವಿರೋಧಿಗಳು ಈ ಶಾಸನವನ್ನು ತಂದು ಪುಟಿನ್‌ ತಮ್ಮ ಗುರುದಕ್ಷಿಣೆಯನ್ನು ನೀಡುತ್ತಿದ್ದಾರೆ ಎಂದೇ ವಾದಿಸಿದರು. ಮಣಿದ ಪುಟಿನ್‌ 2001ರ ಫೆಬ್ರವರಿಯಲ್ಲಿ ಮತ್ತೊಂದು ಶಾಸನಕ್ಕೆ ಕಾನೂನಿನ ಅನುಷ್ಠಾನಕ್ಕೆ ಸಹಿ ಹಾಕಿ, ಹಿಂದಿನ ಶಾಸನವನ್ನು ಬದಲಾಯಿಸಿದರು.

ಇದರ ಜತೆಗೆ ಪುಟಿನ್‌ಗೆ ಮತ್ತೊಂದು ತೊಡಕು ಎದುರಾಗಿತ್ತು. ಪುಟಿನ್‌ 1992ರಲ್ಲಿ ಸೆಂಟ್‌ ಪೀಟರ್‌ಬರ್ಗ್‌ನಲ್ಲಿನ ಕೆಜಿಬಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಲೋಹಗಳ ರಫ್ತಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರವನ್ನು ನಡೆಸಿದ್ದರು ಎಂಬ ಅಂಶ ಬಯಲಾಯಿತು. ಮರೀನಾ ಸ್ಯಾಲೆ ಎಂಬಾಕೆ ಪುಟಿನ್‌ ವಿರುದ್ಧ ಈ ಆರೋಪವನ್ನು ಮಾಡಿದ್ದಳು. ಈ ಭ್ರಷ್ಟಾಚಾರದ ಆರೋಪ ಪುಟಿನ್‌ ವಿರೋಧಿಗಳ ಕಿವಿ ತಲುಪಿ, ದೊಡ್ಡ ಮಟ್ಟದ ಸುದ್ದಿಯಾಗುವ ಮೊದಲೇ ಸತ್ತುಹೋಯಿತು. ಪುಟಿನ್‌ ತಮ್ಮ ಅಧಿಕಾರವನ್ನು ಬಳಸಿ ಮರೀನಾಳ ಬಾಯಿ ಮುಚ್ಚಿಸಿದ್ದರು. ಪುಟಿನ್‌ ವಿರುದ್ಧ ಆರೋಪ ಮಾಡಿದ ಕಾರಣಕ್ಕಾಗಿ ಮರೀನಾ ಸೆಂಟ್‌ ಪೀಟರ್‌ಬರ್ಗ್‌ನಿಂದ ವಲಸೆ ಹೋಗಬೇಕಾಯಿತು.

ರಷ್ಯಾ ಅಧ್ಯಕ್ಷ ಪಟ್ಟ:

ಪುಟಿನ್‌ ಹಂಗಾಮಿ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಚುನಾವಣೆಯೂ ಘೋಷಣೆಯಾಯಿತು. 2000ದ ಮಾರ್ಚ್‌ನಲ್ಲಿ ಚುನಾವಣೆ ನಡೆಯುವುದಾಗಿ ನಿರ್ಧಾರವಾಯಿತು. ಪುಟಿನ್‌ ಕೂಡ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದವರ ಪೈಕಿ ಮುಂಚೂಣಿಯಲ್ಲಿದ್ದರು. ಶೇ. 53ರಷ್ಟು ಮತಗಳನ್ನು ಪುಟಿನ್‌ ಪರವಾಗಿ ಚಲಾಯಿಸಿದ್ದ ರಷ್ಯನ್‌ ಪ್ರಜೆಗಳು ಅಧಿಕೃತವಾಗಿ ಪುಟಿನ್‌ಗೆ ಅಧಿಕಾರವನ್ನು ನೀಡಿದ್ದರು. 2000ರ ಮೇ 7ರಂದು ಪುಟಿನ್‌ ರಷ್ಯಾದ ಅಧ್ಯಕ್ಷರಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಪುಟಿನ್‌
ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಪುಟಿನ್‌

ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಪುಟಿನ್‌, ರಷ್ಯಾ ದೇಶ ಜಗತ್ತಿನ ಮುಂಚೂಣಿಗೆ ಬರಲು ಬೇಕಾದ ಸಿದ್ಧತೆಗಳ ಕಡೆಗೆ ಗಮನ ನೀಡಿದ್ದರು. 1991ರಲ್ಲಿ ಯುಎಸ್‌ಎಸ್‌ಆರ್‌ ಛಿದ್ರಗೊಂಡು ಜಾಗತಿಕವಾಗಿ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದ ರಷ್ಯಾ ಮತ್ತೆ ವಿಶ್ವದ ಮುನ್ನೆಲೆ ನಾಯಕನಾಗಬೇಕೆಂಬ ಕನಸು ಪುಟಿನ್‌ರಲ್ಲಿ ಗಟ್ಟಿಗೊಂಡಿತ್ತು. ಅದಕ್ಕೆ ಮುಂಚಿತವಾಗಿ ಪುಟಿನ್‌ ರಷ್ಯಾವನ್ನು ಪುನರ್‌ರೂಪಿಸುವ ಕಾರ್ಯಕ್ಕೆ ಕೈಹಾಕಿದ್ದರು. ರಷ್ಯಾವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಶ್ರೀಮಂತ ಹಾಗೂ ಬಲಿಷ್ಠ ವರ್ಗದ ಜತೆ ಹಲವಾರು ರೀತಿಯ ಕರಾರು, ವ್ಯಾಪಾರಗಳನ್ನು ಕುದುರಿಸಿಕೊಂಡು, ಬೆಂಬಲಿಗರನ್ನಾಗಿ ರೂಪಿಸಿಕೊಳ್ಳುವಲ್ಲಿ ಪುಟಿನ್‌ ಗೆದ್ದರು. ಈ ಅವಧಿಯಲ್ಲಿಯೇ ಪುಟಿನ್‌ ಪರವಾಗಿದ್ದ ಹೊಸ ಬೃಹತ್‌ ಉದ್ಯಮಿಗಳ ವರ್ಗವೊಂದು ರಷ್ಯಾದಲ್ಲಿ ಜನ್ಮ ತಳೆಯಿತು. ಗೆನಾಡಿ ಟಿಮ್ಚೆಂಕೋ, ವ್ಲಾದಿಮಿರ್‌ ಯಕುನಿನ್‌, ಯುರಿ ಕೋವಾಲ್ಚುಕ್‌, ಸೆರ್ಜೇ ಚೆಮೆಜೋವ್‌ ಸೇರಿದಂತೆ ಇತರ ನವ ತಲೆಮಾರಿನ ದೊಡ್ಡ ದೊಡ್ಡ ಉದ್ಯಮದಾರರು ಪುಟಿನ್‌ನ ಆಪ್ತ ವರ್ಗದೊಳಗೆ ಸೇರಿಕೊಂಡರು.

ಪುಟಿನ್‌ ಕಿರೀಟಕ್ಕೆ ಮತ್ತೊಂದು ಗರಿ:

ಅದು 2003ರ ಕಾಲಘಟ್ಟ, ರಷ್ಯಾ ಪಕ್ಕದ ದೇಶ ಚೆಚೆನ್ಯಾದಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಲಾಯಿತು. ಬಹುಪಾಲು ಚೆಚೆನ್ಯಾ ಪ್ರಜೆಗಳು ಹೊಸ ಸಂವಿಧಾನವನ್ನು ಅಳವಡಿಸಿಕೊಂಡು ರಷ್ಯಾದ ಭಾಗವಾಗಲು ಇಚ್ಚಿಸಿದ್ದರು. ರಷ್ಯಾದ ಭಾಗವಾದರೂ ಸಹ ಚೆಚೆನ್ಯಾಗೆ ತನ್ನ ಸ್ವಂತ ಅಡಳಿತವನ್ನು ರೂಪಿಸಿಕೊಳ್ಳುವ ಅಧಿಕಾರವಿತ್ತು. ಎರಡನೇ ಚಚನ್ಯಾ ಯುದ್ಧದಲ್ಲಿ ಪುಟಿನ್‌ ಕಳುಹಿಸಿದ ರಷ್ಯಾ ಸೇನೆ ಅಲ್ಲಿದ್ದ ಬಂಡುಕೋರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದಾಗ್ಯೂ ಕೂಡ ಚೆಚೆನ್‌ ಬಂಡಾಯಗಾರರು ತಮ್ಮ ದಾಳಿಗಳನ್ನು ಮುಂದುವರೆಸಿದ್ದರು. ಅವರಿಂದ ಪೂರ್ತಿ ಮುಕ್ತವಾಗುವ ಉದ್ದೇಶ ಮತ್ತು ಪುಟಿನ್‌ ಮಾಡಿದ ಸಹಾಯದಿಂದಾಗಿ ಚೆಚನ್ಯಾ ಜನರು ರಷ್ಯಾದೊಂದಿಗೆ ಗುರುತಿಸಿಕೊಳ್ಳಲು ಮನಸ್ಸು ಮಾಡಿದ್ದರು. ಈ ಬೆಳವಣಿಗೆ ಪುಟಿನ್‌ರ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದಂತಾಯಿತು.

ಪುಟಿನ್‌ ದಿನದಿಂದ ದಿನಕ್ಕೆ ತಾವು ಬೆಳೆಯುವುದರ ಜತೆಗೆ ಜಾಗತಿಕ ಮಟ್ಟದಲ್ಲಿ ರಷ್ಯಾದ ಪ್ರಭಾವವನ್ನೂ ಸಹ ದ್ವಿಗುಣಗೊಳಿಸುತ್ತಾ ಸಾಗಿದ್ದರು. 1991ರಲ್ಲಿ ಕುಸಿತ ಕಂಡು ನೆಲಕಚ್ಚಿದ್ದ ರಷ್ಯಾ ಮತ್ತೆ ಜಗತ್ತಿನ ಇತರೆ ದೇಶಗಳು ತನ್ನತ್ತ ತಿರುಗಿನೋಡುವಂತೆ ಬೆಳೆಯತೊಡಗಿತ್ತು. ಅಷ್ಟರಲ್ಲಾಗಲೇ ನಾಲ್ಕು ವರ್ಷಗಳ ಅಧ್ಯಕ್ಷೀಯ ಅವಧಿಯನ್ನು ಪೂರೈಸಿದ್ದ ಪುಟಿನ್‌ ಮುಂದಿನ ಹಂತದ ಚುನಾವಣೆಯ ಸಿದ್ಧತೆಯಲ್ಲಿ ನಿರತರಾಗಿದ್ದರು.

ಅದು 2004ರ ಮಾರ್ಚ್‌ 14ನೇ ದಿನ, ರಷ್ಯಾದ ಅದ್ಯಕ್ಷೀಯ ಚುನಾವಣೆ ನಡೆದಿತ್ತು. ಪುಟಿನ್‌ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಶೇ.71ರಷ್ಟು ಮತಗಳು ಪುಟಿನ್‌ ಪರವಾಗಿ ಬಂದಿದ್ದವು. ಅದಾಗಲೇ ರಷ್ಯಾವನ್ನು ವಿಶ್ವ ಶಕ್ತಿಯನ್ನಾಗಿಸುವತ್ತ ಮೊದಲ ಸಿದ್ಧತೆಗಳನ್ನು ನಡೆಸಿಕೊಂಡಿದ್ದ ಪುಟಿನ್‌, ಮೊದಲ ಅಧಿಕಾರಾವಧಿಯಲ್ಲೇ ಅದಕ್ಕೆ ಬೇಕಾದ ಅಡಿಪಾಯವನ್ನೂ ಗಟ್ಟಿಗೊಳಿಸಿಕೊಂಡಿದ್ದರು. ರಷ್ಯಾವನ್ನು ಕಟ್ಟಲು ಬೇಕಾದ ಅಧಿಕಾರವನ್ನು ಮತ್ತೆ ಜನರೇ ಪುಟಿನ್‌ ಕೈಗಿತ್ತಿದ್ದರು.

(ನಾಳೆಗೆ)