samachara
www.samachara.com
‘ವ್ಲಾದಿಮಿರ್‌ ಪುಟಿನ್‌-1’: ವಿಶ್ವದ ಅತ್ಯಂತ ಪ್ರಭಾವಶಾಲಿ ಅಧ್ಯಕ್ಷನ ಕತೆಗಿದು ಮುನ್ನುಡಿ!
SPECIAL SERIES

‘ವ್ಲಾದಿಮಿರ್‌ ಪುಟಿನ್‌-1’: ವಿಶ್ವದ ಅತ್ಯಂತ ಪ್ರಭಾವಶಾಲಿ ಅಧ್ಯಕ್ಷನ ಕತೆಗಿದು ಮುನ್ನುಡಿ!

ರಷ್ಯಾದ ಮೂಲೆ ಮೂಲೆಯಲ್ಲೂ ಸದ್ಯ ಕೇಳಿ ಬರುತ್ತಿರುವ ಉದ್ಗಾರ; ‘ವ್ಲಾದಿಮಿರ್‌ ಪುಟಿನ್’. ಈ ಜಯಘೋಷಕ್ಕೆ ಕಾರಣ ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್‌ ಮತ್ತೆ ಗೆಲವು ದಾಖಲಿಸಿರುವುದು. ಅದೂ ಭಾರಿ ಅಂತರದಲ್ಲಿ... 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2 ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿಳಿದಿದ್ದಾರೆ. ರಷ್ಯಾ- ಭಾರತ ವಾರ್ಷಿಕ ಸಮಿತ್‌ ಹಿನ್ನೆಲೆಯಲ್ಲಿ ಅವರು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಇದು ಭಾರತ ಮತ್ತು ಅಮೆರಿಕಾ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೆ ಭಾರಿ ಪರಿಣಾಮಗಳನ್ನು ಬೀರಲಿದೆ ಎಂದು ವಿಶ್ಲೇಷಣೆಗಳು ಕೇಳಿಬರುತ್ತಿವೆ. ಇವೆಲ್ಲಕ್ಕಿಂತ ಮುಂಚೆ, ಪುಟಿನ್ ಯಾರು? ಇವತ್ತು ಜಗತ್ತಿನ ಪ್ರಭಾವಶಾಲಿ ನಾಯಕನಾಗಿ ಆತ ಬೆಳೆದು ಬಂದಿದ್ದು ಹೇಗೆ? #ಸಮಾಚಾರ_ಸ್ಪೆಷಲ್_ಸೀರಿಸ್‌ನ ಮೊದಲ ಭಾಗ ಇಲ್ಲಿದೆ. ಇದು ರೋಮಾನಂಚ ಮೂಡಿಸುವ ವ್ಯಕ್ತಿಚಿತ್ರವೊಂದಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ.

ವಿಶ್ವದ ಅತ್ಯಂತ ಪವರ್‌ಫುಲ್ ವ್ಯಕ್ತಿ ಯಾರು? ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌? ಭಾರತದ ಪ್ರಧಾನಿ ನರೇಂದ್ರ ಮೋದಿ? ನೀವೂ ಹಾಗಂದುಕೊಂಡಿದ್ದರೆ ನಿಮ್ಮ ಮಾಹಿತಿ ತಪ್ಪು. ಸದ್ಯ ವಿಶ್ವದ ಪ್ರಬಲ, ಪ್ರಭಾವಿ ನಾಯಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್! ಇದರಲ್ಲಿ ಯಾವುದೇ ಅನುಮಾನ ಬೇಡ.

ಭಾನುವಾರ ನಡೆದ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಮತ್ತೆ ರಷ್ಯಾದ ಅಧ್ಯಕ್ಷ ಹುದ್ದೆಗೆ ಏರಿದ್ದಾರೆ. ಶೇ.71ರಷ್ಟು ಮತಗಳನ್ನು ತನ್ನದಾಗಿಸಿಕೊಂಡು, 2024ರವರೆಗೂ ರಷ್ಯಾ ಸರಕಾರವನ್ನು ಮುನ್ನೆಡೆಸಲು ಜನರ ಒಪ್ಪಿಗೆ ಪಡೆದುಕೊಂಡಿದ್ದಾರೆ. ಅಭೂತಪೂರ್ವ ಗೆಲುವನ್ನು ದಾಖಲಿಸಿರುವ ಪುಟಿನ್‌ಗೆ ಎದುರಾಳಿಗಳಾಗಿ ನಿಂತಿದ್ದ 7 ಜನ ಅಭ್ಯರ್ಥಿಗಳಿಗೆ ಕನಿಷ್ಟ ಮತಗಳೂ ಲಭ್ಯವಾಗಿಲ್ಲ. ಇದೊಂತರ ಒನ್‌ಸೈಡೆಡ್‌ ಚುನಾವಣೆ ಎಂಬುದನ್ನು ಅಂಕಿಅಂಶಗಳನು ಹೇಳುತ್ತಿವೆ.

ಸುಮಾರು 18 ವರ್ಷಗಳಿಂದ ಅಧ್ಯಕ್ಷ ಮತ್ತು ಪ್ರಧಾನಿಯಾಗಿ ರಷ್ಯಾ ಆಳ್ವಿಕೆ ನಡೆಸುತ್ತಾ ಬಂದಿರುವ ಪುಟಿನ್‌, ದೇಶದ ಮಹಾನ್‌ ನಾಯಕ ಜೋಸೆಫ್‌ ಸ್ಟಾಲಿನ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಳೆದ 4 ವರ್ಷಗಳಿಂದ ವಿಶ್ವದ ಪ್ರಬಲ ವ್ಯಕ್ತಿ ಎಂಬ ಪಟ್ಟವನ್ನು ಅಲಂಕರಿಸಿರುವ ಪುಟಿನ್‌ಗೆ, ಅಮೆರಿಕಾದ ಡೊನಾಲ್ಡ್‌ ಟ್ರಂಪ್‌ ಕೂಡ ಸರಿಸಾಟಿಯಲ್ಲ. ಅಷ್ಟಕ್ಕೂ, ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಸೋಲಲು ಹಾಗೂ ಟ್ರಂಪ್‌ ಗೆಲ್ಲಲು ವ್ಲಾದಿಮಿರ್‌ ಪುಟಿನ್‌ ಕಾರಣ ಎಂಬ ಮಾತುಗಳಿವೆ. ಈ ಕುರಿತು ತನಿಖೆ ನಡೆಯುತ್ತಿದೆ.

1990ರ ದಶಕದಲ್ಲಿ ಸೋವಿಯತ್‌ ಒಕ್ಕೂಟ ಛಿದ್ರವಾಗಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡು ಹಿನ್ನೆಲೆಗೆ ಸರಿದಿತ್ತು. ಆದರೆ ಎರಡು ದಶಕಗಳ ಅಂತರದಲ್ಲಿ ರಷ್ಯಾ ಮತ್ತೊಮ್ಮೆ ಮೈಕೊಡವಿ ನಿಂತಿದೆ. ಜಾಗತಿಕ ಶಕ್ತಿಗಳಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿಸಿಕೊಂಡಿದೆ. ಅದಕ್ಕೆ ಕಾರಣ ವ್ಲಾದಿಮಿರ್‌ ಪುಟಿನ್‌.

ಪುಟಿನ್ ಬೆಳೆದು ಬಂದ ಹಾದಿಯನ್ನು ನೋಡಿದರೆ, ಅಲ್ಲಿ ರೋಚಕ ಅನ್ನಿಸುವ ಸಂಗತಿಗಳಿವೆ. ಕುತೂಹಲಕಾರಿ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ, ಪುಟಿನ್ ಬದುಕಿನ ಹಾದಿಯನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಇದು ಜಗತ್ತಿನ ಅತ್ಯಂತ ಪ್ರಭಾವಶಾಲಿ ನಾಯಕನ ಬಾಲ್ಯ, ಯವ್ವನ, ರಾಜಕೀಯ ಪ್ರವೇಶ ಹಾಗೂ ಅಧಿಕಾರ ವೈಖರಿಗಳನ್ನು ಪರಿಚಯಿಸುವ ಸರಣಿ ಮಾಲಿಕೆ.

ಬಾಲ್ಯ:

ವ್ಲಾದಿಮಿರ್‌ ಪುಟಿನ್‌ ಜನಿಸಿದ್ದು 1952ರ ಅಕ್ಟೋಬರ್‌ 7ರಂದು. ಯುಎಸ್‌ಎಸ್‌ಆರ್‌ನ ಲೆನಿನ್‌ ಗ್ರಾದ್ (ಸಧ್ಯ ಸೆಂಟ್‌ ಪೀಟರ್‌ಬರ್ಗ್‌) ಪುಟಿನ್‌ನ ಜನ್ಮಸ್ಥಳ. ವ್ಲಾದಿಮಿರ್‌ ಸ್ಪಿರಿಡೊನೊವಿಚ್‌ ಪುಟಿನ್‌ ಮತ್ತು ಮಾರಿನೊ ಇವಾನೋವ್ನಾ ಪುಟಿನಾ ದಂಪತಿಗಳ ಮೂರನೇ ಮಗನಾಗಿ ಜನಿಸಿದ ಪುಟಿನ್‌ನ ಪೂರ್ಣ ಹೆಸರು ವ್ಲಾದಿಮಿರ್‌ ವ್ಲಾದಿಮಿರೋವಿಚ್‌ ಪುಟಿನ್‌.

ಪುಟಿನ್‌ ಹುಟ್ಟುವ ಮುಂಚೆ ಆತನ ಅಣ್ಣಂದಿರಾದ ವಿಕ್ಟರ್‌ ಮತ್ತು ಆಲ್ಬೆರ್ಟ್‌ರನ್ನು ಸಾವು ತಬ್ಬಿಕೊಂಡಿತ್ತು. ಆಲ್ಬರ್ಟ್‌ ಶಿಶುವಾಗಿದ್ದಾಗಲೇ ಮೃತಪಟ್ಟರೆ, ಎರಡನೇ ಮಹಾಯುದ್ಧ ತಂದಿತ್ತ ಗಂಟಲು ಮಾರಿ ರೋಗ (ಡಿಫ್ತೀರಿಯಾ) ವಿಕ್ಟರ್‌ನನ್ನು ಬಲಿ ಪಡೆದುಕೊಂಡಿತ್ತು.

ಪುಟಿನ್‌ನ ತಾಯಿ ಪುಟಿನಾ ಕಾರ್ಖಾನೆಯೊಂದರಲ್ಲಿನ ಕೆಲಸಗಾರ್ತಿ. ತಂದೆ ಸ್ಪಿರಿಡೊನೊವಿಚ್‌ ಪುಟಿನ್‌ 2ನೇ ಮಹಾಯುದ್ಧದ ವೇಳೆಯಲ್ಲಿ ಒತ್ತಾಯದಿಂದ ನೌಕಾದಳಕ್ಕೆ ಸೇರಲ್ಪಟ್ಟು, ಜಲಾಂತರ್ಗಾಮಿ ನೌಕಾಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಅದಕ್ಕೂ ಮುಂಚೆ ವಿಶೇಷ ಸೇನಾ ದಳವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. 1942ರ ವೇಳೆಗೆ ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯ ಪಾಲಾದ. ಆತ ಸುಧಾರಿಸಿಕೊಳ್ಳುವುದಕ್ಕೆ ಕೆಲವು ವರ್ಷಗಳೇ ಬೇಕಾಯಿತು. 1941ರ ವೇಳೆಯಲ್ಲೇ ಪುಟಿನ್‌ನ ಅಜ್ಜಿ ಜರ್ಮನ್‌ ಸೈನಿಕರಿಂದ ಸಾವಿಗೀಡಾಗಿದ್ದಳು. ಮಾಹಾಯುದ್ಧದ ಆರಂಭದ ವೇಳೆಯಲ್ಲೇ ಕಣ್ಮರೆಯಾಗಿದ್ದ ಪುಟಿನ್‌ ಚಿಕ್ಕಪ್ಪಂದಿರು ಮತ್ತೆಂದೂ ಬರಲೇ ಇಲ್ಲ.

ಬಾಲಕ ಪುಟಿನ್‌. 
ಬಾಲಕ ಪುಟಿನ್‌. 

ಹೀಗೆ ಮಹಾಯುದ್ಧದಿಂದ ಅಪಾಯಕ್ಕೆ ಒಳಗಾಗಿ ಇನ್ನೂ ಚೇತರಿಕೆ ಕಂಡಿರದ ಕುಟುಂಬದಲ್ಲಿ ಜನಿಸಿದ ಪುಟಿನ್‌, ವಿದ್ಯಾಭ್ಯಾಸ ಅರಂಭಿಸಿದ್ದು 1960ರಲ್ಲಿ. ತನ್ನ ಮನೆಯ ಹತ್ತಿರವೇ ಇದ್ದ ಶಾಲೆಯಲ್ಲಿ ಕಲಿಕೆಯ ಪ್ರಕ್ರಿಯೆ ಆರಂಭಿಸಿದ ಪುಟಿನ್‌ ಆಗ ಯುಎಸ್‌ಎಸ್‌ಆರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿದ್ದ ‘ಯುವ ಪ್ರವರ್ತಕರ ಸಂಘಟನೆ’ಯ ಭಾಗವಾಗಲು ಇಚ್ಚಿಸಿರಲಿಲ್ಲ. ಲೆನಿನ್‌ ಪತ್ನಿ ಪ್ರಾರಂಬಿಸಿದ ಈ ಮಕ್ಕಳ ಸಂಘಟನೆ ನಮ್ಮ ಸ್ಕೌಟ್ಸ್‌ ಮತ್ತು ಗೈಡ್ಸ್‌ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಸುಮಾರು 50,000ಕ್ಕಿಂತಲೂ ಹೆಚ್ಚಿನ ಮಕ್ಕಳು ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.

ಆ ಸಮಯಕ್ಕೆ ಸಮಾಜ ಸೇವೆಯ ಕಡೆಗೆ ಗಮನ ಇರದಿದ್ದ ಪುಟಿನ್‌ನನ್ನು ಕ್ರೀಡೆ ಕೈಬೀಸಿ ಸೆಳೆದಿತ್ತು. ಸಂಬೋ ಮತ್ತು ಜುಡೋ ಎಂಬ ಕ್ರೀಡೆಗಳ ಅಭ್ಯಾಸದಲ್ಲಿ ತೊಡಗಿದ ಪುಟಿನ್‌, ಜಡೋನಲ್ಲಿ ಬ್ಲಾಕ್‌ ಬೆಲ್ಟ್‌ ಪಡೆದ. ನಂತರ ಸಂಬೋನಲ್ಲಿ ನ್ಯಾಷನಲ್‌ ಮಾಸ್ಟರ್‌ ಎಂಬ ಬಿರುದು ಗಳಿಸಿದ. ಕ್ರೀಡೆಯ ಜತೆಗೆ ಪತ್ತೆದಾರಿಕೆಯ ಹುಚ್ಚನ್ನು ಮೈಗೂಡಿಸಿಕೊಂಡಿದ್ದ ಪುಟಿನ್‌ಗೆ ಸಿನಿಮಾಗಳಲ್ಲಿ ಬರುವ ಗುಪ್ತಚರ ಇಲಾಖೆಯ ಅಧಿಕಾರಗಳ ಪಾತ್ರವನ್ನು ಅನುಕರಿಸುವುದು ಖುಷಿ ನೀಡುವ ವಿಷಯವಾಗಿತ್ತು.

ಸೆಂಟ್‌ ಪೀಟರ್ಸ್‌ಬರ್ಗ್‌ ಶಾಲೆಯಲ್ಲಿ ಜರ್ಮನ್‌ ಭಾಷೆಯನ್ನು ಅಧ್ಯಯನ ಮಾಡಿದ ಪುಟಿನ್‌ನ ನಾಲಿಗೆಯಿಂದ ಜರ್ಮನ್‌ ಪದಗಳು ಸುಲಲಿತವಾಗಿ ಹೊರಬರುತ್ತಿದ್ದವು. ಅತನ ಶಿಕ್ಷಕಿಯೊಬ್ಬರು ಹೇಳುವಂತೆ, “ಪುಟಿನ್‌ನಲ್ಲಿ ಭಾಷಾ ಜ್ಞಾನ ಅಗಾಧವಾಗಿತ್ತು.”

ಯವ್ವನದ ದಿನಗಳು:

ಸೆಂಟ್‌ ಪೀಟರ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಪುಟಿನ್‌ ಕಾನೂನು ಪದವಿಗೆ ದಾಖಲಾಗುವ ವೇಳೆಗೆ ಕಾಲ 1970ರಲ್ಲಿತ್ತು. 'ಅಂತರರಾಷ್ಟ್ರೀಯ ಕಾನೂನು ವ್ಯವಸ್ಥೆಯಲ್ಲಿ ಉತ್ತಮವೆನಿಸುವ ರಾಷ್ಟ್ರ ವ್ಯವಹಾರಿಕ ನೀತಿಗಳು' ಎನ್ನುವ ವಿಯಷದ ಕುರಿತು ಪ್ರಬಂಧ ಬರೆಯುವ ಸಂದರ್ಭದಲ್ಲಿ ಪುಟಿನ್‌ ಕಮ್ಯುನಿಸ್ಟ್‌ ಪಾರ್ಟಿಯ ಪರಿಚಯವನ್ನು ಮಾಡಿಕೊಂಡ. 1975ರಲ್ಲಿ ಪದವಿ ಗಳಿಸಿದ ಪುಟಿನ್‌ಗೆ ವ್ಯವಹಾರಿಕ ನೀತಿಗಳನ್ನು ಭೋದಿಸುತ್ತಿದ್ದ ಅನಟೊಲಿ ಸೋಬ್ಚಕ್‌ ಎನ್ನುವ ಸಹ ಪ್ರಾಧ್ಯಾಪಕ ಹಾಗೂ ರಷ್ಯನ್‌ ರಾಜಕಾರಣಿಯೊಬ್ಬರ ಗೆಳೆತನ ದೊರೆತದ್ದು ಪುಟಿನ್‌ನ ಬದುಕಿನ ದಾರಿಯನ್ನು ಬದಲಿಸಿತ್ತು.

ಗುಪ್ತಚರ ಇಲಾಖೆಯಲ್ಲಿ ಪುಟಿನ್‌:

ಕೆಜಿಬಿ ಸಮವಸ್ತ್ರದಲ್ಲಿ ಪುಟಿನ್‌
ಕೆಜಿಬಿ ಸಮವಸ್ತ್ರದಲ್ಲಿ ಪುಟಿನ್‌

ಕಾನೂನು ಪದವಿ ಗಳಿಸಿದ ಪುಟಿನ್‌ಗೆ ಅದೇ ವರ್ಷ 'ಕೆಜಿಬಿ' ಎಂದು ಕರೆಯಲ್ಪಡುವ ರಷ್ಯಾದ ರಾಜ್ಯ ಭದ್ರತಾ ಸಂಸ್ಥೆಯಲ್ಲಿ ಕೆಲಸ ದೊರೆಯಿತು. ಲೆನಿನ್‌ಗ್ರಾದ್‌ನಲ್ಲಿಯೇ ತರಭೇತಿ ಪಡೆದ ಪುಟಿನ್‌ ಎರಡನೇ ದರ್ಜೆಯ ಮುಖ್ಯ ನಿರ್ದೇಶಕನಾಗಿ ಕೆಲಸ ಆರಂಭಿಸಿದ. ಆತನ ಚಿಕ್ಕಂದಿನ ಕನಸೂ ಸಹ ಗುಪ್ತಚರನಾಗಿ ಕಾರ್ಯ ನಿರ್ವಹಿಸುವುದೇ ಅಗಿತ್ತು. ತನ್ನಿಚ್ಚೆಯ ಕೆಲಸವನ್ನೇ ಆರಂಭಿಸಿದ ಪುಟಿನ್‌ಗೆ ವಿದೇಶಿಗರು ಮತ್ತು ಹೊರದೇಶಗಳಿಂದ ಬಂದಿರುವ ಕಂಪನಿಗಳ ಮೇಲೆ ನಿಗಾ ವಹಿಸುವ ಕರ್ತವ್ಯವನ್ನು ವಹಿಸಲಾಗಿತ್ತು.

ಕೆಲಸದ ಮೇಲೆಯೇ ಪುಟಿನ್‌ 1985ರಲ್ಲಿ ಪೂರ್ವ ಜರ್ಮನಿಗೆ ತೆರಳಬೇಕಾಯಿತು. ಜರ್ಮನಿಯಲ್ಲಿನ ಡ್ರೆಸ್ಡೆನ್‌ ಪ್ರದೇಶದ ಸ್ಥಳೀಯ ಗುಪ್ತಚರ ಇಲಾಖೆಯಲ್ಲಿ ಕಾರ್ಯಾರಂಭ ಮಾಡಿದ ಪುಟಿನ್‌ ಕಾರ್ಯಕ್ಷಮತೆಗೆ ಮೆಚ್ಚಿ ಲೆಫ್ಟಿನೆಂಟ್‌ ಕೊಲೊನೆಲ್‌ ಹುದ್ದೆ ನೀಡಲಾಯಿತು. ಇಲಾಖೆಯ ಮುಖ್ಯಸ್ಥ ಸ್ಥಾನವನ್ನು ವಹಿಸಿದ ಪುಟಿನ್‌ಗೆ ಜರ್ಮನ್‌ ಸರಕಾರದಿಂದ ನೀಡಲ್ಪಡುತ್ತಿದ್ದ ಕಂಚಿನ ಪದಕ ದೊರೆಯಿತು. 1990ರಲ್ಲಿ ಜರ್ಮನಿಯ ಕಮ್ಯುನಿಸ್ಟ್‌ ಸರಕಾರ ಕುಸಿತ ಕಂಡ ನಂತರ ಪುಟಿನ್‌ ಸೆಂಟ್‌ ಪೀಟರ್‌ಬರ್ಗ್‌ಗೆ ಹಿಂತಿರುಗಬೇಕಾಯಿತು.

ವಿದ್ಯಾಭ್ಯಾಸ ಮತ್ತು ಕೆಲಸಗಳ ನಡುವೆ ಪುಟಿನ್‌ ವೈಯಕ್ತಿಕ ಜೀವನ ಕೂಡ ಬದಲಾಗಿತ್ತು. 1980ರ ವೇಳೆಗೆ ತನ್ನ ಸ್ನೇಹಿತೆಯೊಬ್ಬಳಿಂದ ಪರಿಚಿತವಾದ ಲ್ಯೂಡ್ಬಿಯಾ ಶೆಕ್ರೆವ್ನಿವಾಳ ಮೇಲೆ ಪುಟಿನ್‌ಗೆ ಪ್ರೀತಿ ಅಂಕುರಿಸಿತ್ತು. ಆಕೆಯಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತು ಪುಟಿನ್‌ ತನ್ನ ವೃತ್ತಿಯ ಮಧ್ಯೆಯ ಸ್ವಲ್ಪ ಸಮಯವನ್ನು ಪ್ರೀತಿಗಾಗಿ ತೆಗೆದಿರಿಸಿದ್ದ.

ಮೂರು ವರ್ಷಗಳ ಕಾಲ ಪ್ರಣಯಿಗಳಾಗಿದ್ದ ಪುಟಿನ್‌ ಮತ್ತು ಲ್ಯೂಡ್ಬಿಯಾ 1983ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 1985ರಲ್ಲಿ ಜನಿಸಿದ ತಮ್ಮ ಮೊದಲ ಮಗಳಿಗೆ ಮಾರಿಯಾ ಪುಟಿನಾ ಎಂದು ಹೆಸರಿಡಲಾಯಿತು. ಅದು ಪುಟಿನ್‌ ತನ್ನ ತಾಯಿಯ ನೆನಪಿನಿಂದಾಗಿ ಇಟ್ಟಿದ್ದ ಹೆಸರು. 1986ರ ಅಂತ್ಯದ ವೇಳೆಗೆ ಜನಿಸಿದ ಎರಡನೇ ಮಗಳಿಗೆ ಲ್ಯೂಡ್ಬಿಯಾ, ತನ್ನ ತಾಯಿಯ ಹೆಸರಾದ ಕಾಟಿರಿನಾ ಎಂದು ನಾಮಕರಣ ಮಾಡಿದ್ದಳು.

ಪುಟಿನ್‌ನ ಇಬ್ಬರು ಮಕ್ಕಳು. 
ಪುಟಿನ್‌ನ ಇಬ್ಬರು ಮಕ್ಕಳು. 

1990ರ ಅವಧಿಯಲ್ಲಿ ಸೆಂಟ್‌ ಪೀಟರ್‌ಬರ್ಗ್‌ಗೆ ಹಿಂತಿರುಗಿದ ಪುಟಿನ್‌ ಹೊಸ ಕೆಲಸದ ಹುಡುಕಾಟದಲ್ಲಿ ತೊಡಗಿದ. ಲಿನಿನ್‌ಗ್ರಾದ್‌ ವಿಶ್ವವಿದ್ಯಾಲಯದಲ್ಲಿನ ಅಂತರರಾಷ್ಟ್ರೀಯ ವ್ಯವಹಾರ ಇಲಾಖೆಯ ಮುಖ್ಯಸ್ಥನ ಸಹಾಯಕನಾಗಿ ದುಡಿಯುವ ಕೆಲಸ ದೊರೆಯಿತು. ಪಿಎಚ್‌ಡಿ ಪೂರ್ಣಗೊಳಿಸುವ ಕನಸಿಗೆ ಈ ಕೆಲಸ ಸಹಾಯಕವಾಗಿಯೇ ಇತ್ತು.

ಕೆಲ ದಿನಗಳಲ್ಲಿಯೇ ಪುಟಿನ್‌ ಲೆನಿನ್‌ಗ್ರಾದ್ ನಗರಪಾಲಿಕೆ ಅಧ್ಯಕ್ಷರ ಸಲಹೆಗಾರನಾಗುವ ಅವಕಾಶ ದೊರೆಯಿತು. 1991ರ ಜೂನ್‌ ವೇಳೆಗೆ ಪುಟಿನ್‌ ಸೆಂಟ್‌ ಪೀಟರ್‌ಬರ್ಗ್‌ ಸಿಟಿ ಹಾಲ್‌ನ ಅಂತರರಾಷ್ಟ್ರೀಯ ವ್ಯವಹಾರಗಳ ಮಂಡಳಿಯ ಅಧ್ಯಕ್ಷ ಸ್ಥಾನ ದೊರೆಯಿತು. 1994ರಲ್ಲಿ ಪುಟಿನ್‌ ಸೆಂಟ್ ಪೀಟರ್‌ಬರ್ಗ್‌ ನಗರ ಸರಕಾರದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ. ಈ ಮಧ್ಯೆ ಪುಟಿನ್‌ ಕೆಜಿಬಿಯ ಕೆಲಸಕ್ಕೆ ಪೂರ್ಣವಾಗಿ ಮುಕ್ತಾಯ ಹಾಡಿದ್ದ.

ಇವಿಷ್ಟು ಪುಟಿನ್‌ ಅಧಿಕಾರದ ಗದ್ದುಗೆಯ ಕಡೆಗೆ ಸಾಗುವುದಕ್ಕಿಂತ ಮೊದಲ ದಿನಗಳು. ತಾನು ವೃತ್ತಿ ಆರಂಭಿಸಿದ ಎಲ್ಲಾ ಕಡೆಯಲ್ಲೂ ಪುಟಿನ್‌ ಅಸ್ಮಿತೆ ಬೆಳೆಯುತ್ತಾ ಸಾಗಿತ್ತು. ಸೆಂಟ್‌ ಪೀಟರ್‌ಬರ್ಗ್‌ ನಗರದ ಪ್ರಮುಖ ವ್ಯಕ್ತಿಯಾಗಿದ್ದ ಪುಟಿನ್‌ಗೆ ಮುಂದಿನ ದಿನಗಳು ಭಾಗ್ಯದ ಬಾಗಿಲನ್ನು ತೆರೆದವು. ಮುಂದೆ ಪುಟಿನ್‌ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಾ ಹೋದವು. ಜತೆಗೆ, ಆತನ ಬಗೆಗಿನ ನಟೋರಿಟಿಗಳಿಗೂ ಸಾಕ್ಷಿ ಸಿಗತೊಡಗಿತು. ಅದು ಮೈನವಿರೇಳಿಸುವ ಮತ್ತೊಂದು ಅಧ್ಯಾಯ.

ವ್ಲಾದಿಮಿರ್‌ ಪುಟಿನ್‌-2; ಮೇಯರ್ ಸಲಹೆಗಾರ ಹುದ್ದೆಯಿಂದ ರಷ್ಯಾ ಅಧ್ಯಕ್ಷಗಾದಿವರೆಗೆ

ವ್ಲಾದಿಮಿರ್‌ ಪುಟಿನ್‌-3: ಕುಸಿದ ರಷ್ಯಾವನ್ನು ಎತ್ತಿನಿಲ್ಲಿಸಿದರೂ ಜನ ವಿರೋಧ ಎದುರಿಸಬೇಕಾಯ್ತು!

ವ್ಲಾದಿಮಿರ್‌ ಪುಟಿನ್‌- 4: ಮೂರನೇ ಬಾರಿಗೆ ಭಾರಿ ವಿರೋಧ; ಸರ್ವಾಧಿಕಾರಿಯ ಹಾದಿಯಲ್ಲಿ ಅಧ್ಯಕ್ಷ!

ವ್ಲಾದಿಮಿರ್‌ ಪುಟಿನ್‌-5: ಸರಣಿ ಕೊಲೆಗಳ ನೆರಳಿನಲ್ಲೇ ಹೊಸ ರಷ್ಯಾ ಕಟ್ಟಿನಿಲ್ಲಿಸಿದ ನಾಯಕ!