samachara
www.samachara.com
ಜೀನಿಯಸ್ ಮ್ಯಾನ್- 5: ಗಾಂಧಿಯನ್ನು ಎಂದೂ ಭೇಟಿಯಾಗದ ಐನ್‌ಸ್ಟೈನ್ ಸತ್ತಾಗ ಮೆದುಳೇ ನಾಪತ್ತೆಯಾಗಿತ್ತು!
SPECIAL SERIES

ಜೀನಿಯಸ್ ಮ್ಯಾನ್- 5: ಗಾಂಧಿಯನ್ನು ಎಂದೂ ಭೇಟಿಯಾಗದ ಐನ್‌ಸ್ಟೈನ್ ಸತ್ತಾಗ ಮೆದುಳೇ ನಾಪತ್ತೆಯಾಗಿತ್ತು!

ಹಿಟ್ಲರನ ಆಟಾಟೋಪಕ್ಕೆ ಬ್ರೇಕ್ ಹಾಕಲು ಅಣು ಬಾಂಬ್ ತಯಾರಿಸುವಂತೆ ಅಮೆರಿಕಾ ಅಧ್ಯಕ್ಷ ರೂಸ್ವೆಲ್ಟ್‌ಗೆ ಪತ್ರ ಕಳಿಸಿದ್ದು ತಮ್ಮ ಜೀವನದ ಬಹುದೊಡ್ಡ ತಪ್ಪೆ೦ದು ಐನ್‌ಸ್ಟೈನ್ ತಮ್ಮನ್ನೇ ತಾವು ಹಳಿದುಕೊಳ್ಳುತ್ತಿದ್ದರು.

ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮಿಂದ ಒಳ್ಳೆಯದಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಒಂದಷ್ಟು ಪ್ರಯತ್ನಗಳನ್ನೂ ಮಾಡುತ್ತಾರೆ. ಕೊನೆಗೊಂದು ದಿನ ಒಳ್ಳೆಯದು ಮಾಡಬೇಕು ಎಂದು ಹೊರಟ್ಟಿದ್ದೇ ಕೆಡುಕಿಗೆ ಕಾರಣವಾಯ್ತು ಎಂದು ಗೊತ್ತಾದಾಗ ಮನಸ್ಥಿತಿ ಹೇಗಿದ್ದರಬಹುದು?

ಐನ್‌ಸ್ಟೈನ್ ವಿಚಾರದಲ್ಲೂ ಅದೇ ಆಯಿತು. ಹಿಟ್ಲರನ ಆಟಾಟೋಪಕ್ಕೆ ಬ್ರೇಕ್ ಹಾಕಲು ಅಣು ಬಾಂಬ್ ತಯಾರಿಸುವಂತೆ ಅಮೆರಿಕಾ ಅಧ್ಯಕ್ಷ ರೂಸ್ವೆಲ್ಟ್‌ಗೆ ಪತ್ರ ಕಳಿಸಿದ್ದು ತಮ್ಮ ಜೀವನದ ಬಹುದೊಡ್ಡ ತಪ್ಪೆ೦ದು ಐನ್‌ಸ್ಟೈನ್ ತಮ್ಮನ್ನೇ ತಾವು ಹಳಿದುಕೊಳ್ಳುತ್ತಿದ್ದರು.

ಲಕ್ಷಾಂತರ ಜನರ ಸಾವಿಗೆ ಕಾರಣನಾದೆನಲ್ಲಾ ಎಂಬ ಕೊರಗು ಅವರಲ್ಲಿತ್ತು. ಇದೇ ವಿಚಾರವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಅವರು ಸಾಯುವವರೆಗೂ ಆ ಸಮಸ್ಯೆಯಿಂದ ಹೊರ ಬರಲೇ ಇಲ್ಲ.

ಐನ್‌ಸ್ಟೈನ್ಗೆ ಸಾಮಾಜಿಕವಾಗಿ ಏನಾದರೂ ಮಾಡಲೇಬೇಕು ಎಂಬ ತುಡಿತ ಇತ್ತು. ಎರಡನೇ ಮಹಾಯುದ್ಧ ಮುಗಿದ ನಂತರ ಇನ್ನೆಂದೂ ಅಣು ಬಾಂಬ್ ಸ್ಪೋಟವಾಗಬಾರದು ಎಂಬ ತೀರ್ಮಾನಕ್ಕೆ ಬಂದ ಅವರು ಅಣ್ವಸ್ತ್ರಗಳ ನಿಯ೦ತ್ರಣಕ್ಕೆ ಬರ್ಟ್ರಾ೦ಡ್ ರಸೆಲ್, ನೀಲ್ಸ್ ಬೋರ್ ಇತ್ಯಾದಿ ಗಣ್ಯ ವಿಜ್ಞಾನಿಗಳ ಜೊತೆ ಸೇರಿ 1955ರಲ್ಲಿ ಪ್ರಣಾಳಿಕೆಯೊಂದನ್ನು ಹೊರತ೦ದಿದ್ದರು.

ಐನ್‌ಸ್ಟೈನ್ ಜರ್ಮನಿ ಬಿಟ್ಟು ಅಮೆರಿಕಾಗೆ ಬಂದಿದ್ದಾಗಲೂ ಅವರಿಗೆ ಜೀವ ಬೆದರಿಕೆಗಳಿತ್ತು. ಎಚ್ಚರಿಕೆಯಿಂದಿರಿ, ಇಲ್ಲೂ ನಾಜಿಗಳಿದ್ದಾರೆ. ಆದಷ್ಟು ಸಾರ್ವಜನಿಕ ಸಮಾರಂಭಗಳಿಂದ ದೂರವಿರಿ, ಮೌನವಾಗಿರಿ ಎಂದು ಸೂಚಿಸಲಾಗಿತ್ತು.

ಆದರೆ ಐನ್‌ಸ್ಟೈನ್, ‘ಅನ್ಯಾಯಗಳಾದಾಗ ಒಪ್ಪಿಕೊಂಡು ಸುಮ್ಮನಿರುವ ಜಾಯಮಾನ ತಮ್ಮದಲ್ಲ’ ಎಂದು ಪ್ರತ್ಯುತ್ತರ ನೀಡಿದ್ದರು. ಐನ್‌ಸ್ಟೈನ್ ಮೊದಲಿನಿಂದಲೂ ಅಮೆರಿಕಾದ ಕಪ್ಪು ಜನಾಂಗದ ಪರವಾಗಿ ಹೋರಾಡುತ್ತಿದ್ದರು. ಸಮಾರಂಭಗಳಲ್ಲಿ ಭಾಗವಹಿಸಿ ಈ ಹೋರಾಟಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಒಮ್ಮೆ ತಮ್ಮದೇ ಹಣದಿಂದ ಕಪ್ಪು ಜನಾಂಗದ ವಿದ್ಯಾರ್ಥಿಯೊಬ್ಬರ ಕಾಲೇಜು ಫೀಸನ್ನೂ ಭರಿಸಿದ್ದರು.

ಎರಡನೇ ಮಹಾಯುದ್ಧ ಕಾಲದಲ್ಲಿ ಯೆಹೂದಿ ಜನರ ಕಷ್ಟಗಳನ್ನು ಗ೦ಭೀರವಾಗಿ ತೆಗೆದುಕೊ೦ಡರು. ಆದರೆ ಯುದ್ಧ ಮುಗಿದ ನಂತರ ಯೆಹೂದಿಗಳಿಗೇ ಬೇರೆ ರಾಷ್ಟ್ರ (ಇಸ್ರೇಲ್)ಸ್ಥಾಪನೆಯನ್ನು ಅವರು ಅಲ್ಲಗೆಳೆದರು. ಪ್ಯಾಲೆಸ್ಟೈನಿನ ಅರಬ್ ಜನರ ಜೊತೆ ಬದುಕಲು ಕಲಿಯಬೇಕೆ೦ದು ಹೇಳುತ್ತಿದ್ದರು. ವಿಚಿತ್ರ ಎಂದರೆ ಇದೇ ಇಸ್ರೇಲ್ ರಾಷ್ಟ್ರಾಧ್ಯಕ್ಷರಾಗಲು ಅವರಿಗೆ 1952ರಲ್ಲಿ ಆಹ್ವಾನ ಬ೦ದಿತು.

ಆದರೆ ನಾನು ಆ ಪದವಿಗೆ ಸೂಕ್ತ ವ್ಯಕ್ತಿಯಲ್ಲ, ನನಗೆ ರಾಜಕೀಯ ಬರುವುದಿಲ್ಲ ಎಂದು ಐನ್‌ಸ್ಟೈನ್ ಅಧ್ಯಕ್ಷನಾಗುವ ಅವಕಾಶವನ್ನು ತಿರಸ್ಕರಿಸಿದರು.೧೯೫೦ರ ಅಮೆರಿಕಾ-ಸೋವಿಯತ್ ರಷ್ಯಾ ಶೀತಲ ಸಮರದ ಸಮಯದಲ್ಲಿ ಅಮೆರಿಕಾದ ಕಮ್ಯೂನಿಸ್ಟರನ್ನು ಶಿಕ್ಷಿಸುತ್ತೇನೆಂದು ಜೋ ಮೆಕಾರ್ಥಿ ಎ೦ಬ ಸೆನೆಟರ್ ಹಾಲಿವುಡ್ ಚಿತ್ರ ನಟರು, ಪ್ರಾಧ್ಯಾಪಕರು,ವಿಜ್ಞಾನಿಗಳು, ಲೇಖಕರನ್ನೆಲ್ಲಾ ಕರೆಸಿ ವಿಚಾರಣೆ ಮಾಡುತ್ತಿದ್ದ.

ಜರ್ಮನಿಯಲ್ಲಿ ನಾಜಿಗಳು ಹೀಗೆಯೇ ಮೇಲೆ ಬ೦ದಿದ್ದನ್ನು ಹತ್ತಿರದಿ೦ದ ನೋಡಿದ್ದ ಐನ್‌ಸ್ಟೈನ್ಗೆ ಇದು ಸರ್ವಾಧಿಕಾರಿಯಾಗುವ ಮುನ್ಸೂಚನೆ ಎಂದು ಗೊತ್ತಾಗಿತ್ತು. ಇದನ್ನು ಎದುರಿಸಲು ಗಾ೦ಧೀಜಿಯವರ ವಿಧಾನವನ್ನು ಅನುಸರಿಸಬೇಕು ಎ೦ದು ಹೇಳುತ್ತಿದ್ದರು. ಆಗ ಅಮೆರಿಕದ ಗುಪ್ತಚಾರ ಸ೦ಸ್ಥೆ ಎಫ್.ಬಿ.ಐ ಐನ್‌ಸ್ಟೈನ್ ಬಗ್ಗೆಯೇ 1800 ಪುಟಗಳು ಮಾಹಿತಿ ಕಲೆ ಹಾಕಿತ್ತು.

ಗಾಂಧೀಜಿಯ ಮಾದರಿ ಎಂದು ಐನ್‌ಸ್ಟೈನ್ ಸುಮ್ಮನೆ ಹೇಳಿರಲಿಲ್ಲ. ಈ ಮೇಧಾವಿಗೆ ಗಾಂಧಿ ಮಾದರಿ ಇಷ್ಟವಾಗಿತ್ತು. ಗಾಂಧಿ ಬಗ್ಗೆ ಅಭಿಮಾನವೂ ಇತ್ತು. ಐನ್‌ಸ್ಟೈನ್ ಸತ್ತಾಗ ಅವರ ಕೋಣೆಯಲ್ಲಿ ಸಿಕ್ಕಿದ ಒಂದೇ ಫೋಟೋ ಮಹಾತ್ಮ ಗಾಂಧಿಯದಾಗಿತ್ತು. ಗಾಂಧೀಜಿಗೆ ಐನ್‌ಸ್ಟೈನ್ ಪತ್ರ ಬರೆಯುತ್ತಿದ್ದರು. ಗಾಂಧಿ ಅದಕ್ಕೆ ಉತ್ತರಿಸುತ್ತಿದ್ದರು. ಆದರೆ ಅವರಿಬ್ಬರಿಗೆ ಭೇಟಿಯಾಗುವ ಸೌಭಾಗ್ಯ ಮಾತ್ರ ಬರಲೇ ಇಲ್ಲ. ಎರಡು ಬಾರಿ ನಿಗದಿಯಾಗಿದ್ದ ಭೇಟಿ ರದ್ದಾಗಿತ್ತು.

1948ರಲ್ಲಿ ಫೆಬ್ರವರಿಯಲ್ಲಿ ಗಾಂಧೀಜಿ ವಾಷಿಂಗ್ಟನ್ ಹೋಗುವವರಿದ್ದರು. ಅಲ್ಲಿ ಐನ್‌ಸ್ಟೈನ್ ಭೇಟಿ ನಿಗದಿಯಾಗಿತ್ತು. ಆದರೆ ಜನವರಿ 30ರಂದೇ ಮಹಾತ್ಮ ಗಾಂಧಿಯನ್ನು ಧಾರ್ಮಿಕ ಮತಾಂಧ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ್ದ.

ಕೊನೆಗೂ ಮೇಧಾವಿಗಳಿಗೆ ಸಂಧಿಸಲಾಗಲೇ ಇಲ್ಲ.ವಿಸ್ಮಯದ ವಿಚಾರವೆಂದರೆ 1999, ಡಿಸೆಂಬರ್ 31ರಂದು ಟೈಮ್ ಮ್ಯಾಗಜೀನ್ ‘ಶತಮಾನದ ವ್ಯಕ್ತಿ’ ಎಂಬ ಸಂಚಿಕೆ ಹೊರ ತಂದಾಗ ಅದರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ಜಯಶಾಲಿಯಾಗಿದ್ದರು. ರನ್ನರ್ ಅಪ್ ಇದೇ ಮಹಾತ್ಮ ಗಾಂಧಿಯಾಗಿದ್ದರು.


       ಕವಿ ರವೀಂದ್ರನಾಥ್ ಟಾಗೋರ್ ಜತೆ ಆಲ್ಬರ್ಟ್ ಐನ್ಸ್ಟೈನ್; ಇಬ್ಬರೂ ನೊಬೆಲ್ ವಿಜೇತರು
ಕವಿ ರವೀಂದ್ರನಾಥ್ ಟಾಗೋರ್ ಜತೆ ಆಲ್ಬರ್ಟ್ ಐನ್ಸ್ಟೈನ್; ಇಬ್ಬರೂ ನೊಬೆಲ್ ವಿಜೇತರು

ಭಾರತೀಯರೊಂದಿಗೆ ಐನ್‌ಸ್ಟೈನ್ಗೆ ವಿಶೇಷವಾದ ಸಂಬಂಧಗಳಿದ್ದವು. ರಾಷ್ಟ್ರಗೀತೆ ಬರೆದ ಕವಿ ರವೀಂದ್ರನಾಥ್ ಟಾಗೋರ್ ಸಾಹಿತ್ಯವನ್ನು ಅವರು ಮೆಚ್ಚಿಕೊಂಡಿದ್ದರು. ಅವರಿಗೂ ಪತ್ರಗಳನ್ನು ಬರೆಯುತ್ತಿದ್ದರು. ಹಲವು ಬಾರಿ ಇವರಿಬ್ಬರ ಭೇಟಿಯಾಗಿತ್ತು. ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಜೊತೆಗೆ ಐನ್‌ಸ್ಟೈನ್ ನೀಡಿದ ‘ಬೋಸ್- ಐನ್‌ಸ್ಟೈನ್ ಸ್ಟಾಟಿಸ್ಟಿಕ್ಸ್’ ವಿಜ್ಞಾನದ ಜನಪ್ರಿಯ ಸಿದ್ಧಾಂತಗಳಲ್ಲೊಂದು. 1949ರಲ್ಲಿ ಜವಹರ್ ಲಾಲ್ ನೆಹರೂ, ಮಗಳು ಇಂದಿರಾ ಗಾಂಧಿಯೊಂದಿಗೆ ಐನ್‌ಸ್ಟೈನ್ ವಾಸಿಸುತ್ತಿದ್ದ ಪ್ರಿನ್ಸ್ ಟನ್ ಮನೆಗೆ ಭೇಟಿ ನೀಡಿದ್ದರು. ಸೋಜಿಗದ ಸಂಗತಿ ಎಂದರೆ ಜಗತ್ತಲ್ಲೆಲ್ಲಾ ಉಪನ್ಯಾಸ ನೀಡಿದ ಐನ್‌ಸ್ಟೈನ್ ಒಮ್ಮೆಯೂ ಭಾರತಕ್ಕೆ ಬರಲೇ ಇಲ್ಲ.


       ಪ್ರಿನ್ಸ್ ಟನ್ ಮನೆಯಲ್ಲಿ ಇಂದಿರಾ ಗಾಂಧಿ ಮತ್ತು ಜವಹರ್ ಲಾಲ್ ನೆಹರೂ ಆಲ್ಬರ್ಟ್ ಐನ್ಸ್ಟೈನ್ರನ್ನು ಭೇಟಿಯಾಗಿದ್ದಾಗ ತೆಗೆದ ಚಿತ್ರ.
ಪ್ರಿನ್ಸ್ ಟನ್ ಮನೆಯಲ್ಲಿ ಇಂದಿರಾ ಗಾಂಧಿ ಮತ್ತು ಜವಹರ್ ಲಾಲ್ ನೆಹರೂ ಆಲ್ಬರ್ಟ್ ಐನ್ಸ್ಟೈನ್ರನ್ನು ಭೇಟಿಯಾಗಿದ್ದಾಗ ತೆಗೆದ ಚಿತ್ರ.

ಐನ್‌ಸ್ಟೈನ್ ‘ಸೆಲೆಬ್ರಿಟಿ’ ಇಮೇಜ್ ಹೊಂದಿದ್ದ ಕೆಲವೇ ಕೆಲವು ವಿಜ್ಞಾನಿಗಳಲ್ಲಿ ಒಬ್ಬರು. ಅವರಿಗೆ ಚಾರ್ಲಿ ಚಾಪ್ಲಿನ್ ಹತ್ತಿರದ ಗೆಳೆಯಾರಾಗಿದ್ದರು.  ಐನ್‌ಸ್ಟೈನ್ಗಾಗಿ ಚಾಪ್ಲಿನ್ ತಮ್ಮ ‘ಸಿಟಿ ಆಫ್ ಲೈಟ್ಸ್’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಅವತ್ತಿಗೆ ಐನ್‌ಸ್ಟೈನ್ ಇಮೇಜ್ ಯಾವ ಮಟ್ಟಕ್ಕೆ ಇತ್ತು ಅಂದರೆ, ಅವರ ಸಲಹೆ ಮೇರೆಗೆ ಅಮೆರಿಕಾ ಅಣು ಬಾಂಬ್ ತಯಾರಿಸಿತ್ತು. ಟರ್ಕಿ ಪ್ರಧಾನಿ ಸಾವಿರಾರು ಯುವ ವಿಜ್ಞಾನಿಗಳಿಗೆ ಕೆಲಸ ಕೊಟ್ಟಿದ್ದರು. ವಿನ್ಸ್ಟನ್ ಚರ್ಚಿಲ್ ಶೀಘ್ರ ಕಾರ್ಯ ಪ್ರವೃತ್ತರಾಗಿ ಜರ್ಮನಿಯಿಂದ ಸಾವಿರಾರು ವಿಜ್ಞಾನಿಗಳನ್ನು ಕರೆಸಿಕೊಂಡಿದ್ದರು. ಅದೆಲ್ಲಾ ಐನ್‌ಸ್ಟೈನ್ಗೆ ಮಾತ್ರ ಸಾಧ್ಯವಿತ್ತು.


       ಚಾರ್ಲಿ ಚಾಪ್ಲಿನ್ ‘ಸಿಟಿ ಲೈಟ್ಸ್’ ಸಿನಿಮಾದ ಪ್ರೀಮಿಯರ್ ಶೋಗೆ ಪತ್ನಿ ಎಲ್ಸಾ ಲೋವೆಂತಲ್ ಜತೆ ಬಂದಿದ್ದ ಆಲ್ಬರ್ಟ್ ಐನ್ಸ್ಟೈನ್
ಚಾರ್ಲಿ ಚಾಪ್ಲಿನ್ ‘ಸಿಟಿ ಲೈಟ್ಸ್’ ಸಿನಿಮಾದ ಪ್ರೀಮಿಯರ್ ಶೋಗೆ ಪತ್ನಿ ಎಲ್ಸಾ ಲೋವೆಂತಲ್ ಜತೆ ಬಂದಿದ್ದ ಆಲ್ಬರ್ಟ್ ಐನ್ಸ್ಟೈನ್

ಇಷ್ಟೆಲ್ಲಾ ಇದ್ದ ಐನ್‌ಸ್ಟೈನ್ ಬದುಕು ಚೆನ್ನಾಗಿರಬೇಕಾಗಿತ್ತು; ಆದರೆ ಹಾಗಿರಲಿಲ್ಲ. ಐನ್‌ಸ್ಟೈನ್ ಅಧಿಕೃತವಾಗಿ ಇಬ್ಬರನ್ನು ಮದುವೆಯಾಗಿದ್ದರು. ಆದರೆ ಅವರಿಗೆ ಇತರರ ಜೊತೆ ಸಂಬಂಧಗಳಿದ್ದವು. ಅವರದೇ ಪತ್ರಗಳು ಅವನ್ನು ಬಹಿರಂಗಪಡಿಸಿದ್ದವು. ಅವರ ಕಾರ್ಯದರ್ಶಿ ಬೆಟ್ಟಿ ನ್ಯೂಮನ್ ಸೇರಿದಂತೆ ಇತರ 6 ಮಹಿಳೆಯರ ಜೊತೆ ಅವರು ಸಮಯ ಕಳೆದಿದ್ದನ್ನು ಬೇರೆ ಬೇರೆಯವರ ಜೊತೆ ಪತ್ರಗಳಲ್ಲಿ ಹಂಚಿಕೊಂಡಿದ್ದರು.

ಮೊದಲ ಪತ್ನಿಯೊಂದಿಗೆ ದಾಂಪತ್ಯ ಕೊನೆಗೊಂಡ ಬಳಕ ಮೊದಲ ಮಗ ಹಾನ್ಸ್ ಆಲ್ಬರ್ಟ್ ಅಪ್ಪನ ವಿರುದ್ಧ ತಿರುಗಿ ಬಿದ್ದಿದ್ದ. ಮಿಲೇವಾಗೆ ವಿಚ್ಛೇದನ ನೀಡಿದಕ್ಕಾಗಿ ಆತ ತಂದೆಯನ್ನು ದೂರುತ್ತಿದ್ದ. ಕೊನೆಗೆ ನೊಬೆಲ್ ಪ್ರಶಸ್ತಿ ಬಂದಾಗ ಐನ್‌ಸ್ಟೈನ್ ಅದರಲ್ಲೊಂದಿಷ್ಟು ಹಣ ಮಿಲೇವಾ ಹೆಸರಿನಲ್ಲಿ ಇಡುಗಂಟಾಗಿ ಇಟ್ಟಿದ್ದರು. ಅದರ ಬಡ್ಡಿ ಆಕೆಗೆ ಬಂದು ಸೇರುವಂತೆ ವ್ಯವಸ್ಥೆ ಮಾಡಿದ್ದರು.

ಐನ್‌ಸ್ಟೈನ್ ಕೊನೆಗಾಲ ಚೆನ್ನಾಗಿರಲಿಲ್ಲ. ಅದರಲ್ಲೂ ಎರಡನೇ ಮಹಾಯುದ್ಧದ ನೋವು ಅವರನ್ನು ಖಿನ್ನತೆಗೆ ದೂಡಿತ್ತು. “ಈ ಕಾರಣದಿಂದ ಕೊನೆಗಾಲದಲ್ಲಿ ಐನ್‌ಸ್ಟೈನ್ ಯಾವ ಮಹತ್ವದ ಸಂಶೋಧನೆಗಳನ್ನೂ ಮಾಡಲು ಸಾಧ್ಯವಾಗಲೇ ಇಲ್ಲ” ಎನ್ನುತ್ತಾರೆ ಭೌತಶಾಸ್ತ್ರ ಪ್ರಧ್ಯಾಪಕ ಕೇಶವ್ ಟಿ ಎನ್.

ಅಮೆರಿಕಾಗೆ ಬಂದ ಮೂರೇ ವರ್ಷಗಳಲ್ಲಿ ಅವರ ಎರಡನೇ ಪತ್ನಿ ಎಲ್ಸಾ ಲೋವೆಂತಲ್ ಅನಾರೋಗ್ಯದಿಂದ 1936ರಲ್ಲಿ ಸಾವನ್ನಪ್ಪಿದರು. ಅಲ್ಲಿವರೆಗೆ ದಿನನಿತ್ಯದ ಬದುಕಿನ ಅವಶ್ಯಕತೆಗಳಿಂದ ಐನ್‌ಸ್ಟೈನ್ ರನ್ನು ದೂರವಿಟ್ಟು ಅವರಿಗೆ ಬೇಕಾದಷ್ಟು ಸಮಯವನ್ನು ಎಲ್ಸಾ ಹೊಂದಿಸಿಕೊಡುತ್ತಿದ್ದರು.

ಇದಾದ ನಂತರ ಐನ್‌ಸ್ಟೈನ್ ಒಬ್ಬಂಟಿಯಾದರು. ಕೊನೆಗೆ ಇದೆಲ್ಲಾ ನೋಡಲಾಗದೆ ಅವರ ತಂಗಿ ಮಾಯಾ 1938ರಲ್ಲಿ ಇಟಲಿಯಿಂದ ಅಮೆರಿಕಾಗೆ ಬಂದು ಅಣ್ಣನ ಜತೆ ಇರಲು ಆರಂಭಿಸಿದರು. 1951ರಲ್ಲಿ ಮಾಯಾ ನಿಧನರಾಗಿ ಕಡೆಗೆ ಯಾರೂ ಇಲ್ಲ ಎಂಬ ಪರಿಸ್ಥಿತಿಗೆ ಬಂದು ನಿಂತಿದ್ದರು.

ಅದಾದ ನ೦ತರ ಮಲಮಗಳು ಮಾರ್ಗೊ ಅವರಿಗೆ ಊರುಗೋಲಾದಳು. ಯೌವನದಲ್ಲಿ ಐನ್‌ಸ್ಟೈನ್ ಕೆಲಸಗಳಿಗೆ ಪ್ರೇರಣೆಯಾಗಿದ್ದ ಮೊದಲ ಹೆಂಡತಿ 1948ರಲ್ಲಿ ನಿಧನರಾದರು. ಅಪ್ಪನನ್ನು ದ್ವೇಷಿಸುತ್ತಿದ್ದ ಮೊದಲ ಮಗ ಹಾನ್ಸ್ ಆಲ್ಬರ್ಟ್ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

ಅವರೀಗ ತಂದೆಯ ಬಳಿ ಬಂದಿದ್ದರು. ಎರಡನೆಯ ಮಗ ಎಡ್ವರ್ಡ್ ಅಗಾಧ ಪ್ರತಿಭಾವಂತನಾದರೂ ಬೆಳೆಯುತ್ತ ಮನೋಖಿನ್ನತೆಯಿ೦ದ ತನ್ನ ಜೀವನದ ಹೆಚ್ಚು ಭಾಗವನ್ನು ಆಸ್ಪತ್ರೆಯಲ್ಲಿ ಕಳೆದನು.

ಏಪ್ರಿಲ್ 18ರ ಬೆಳಿಗ್ಗೆ 1.15 ಕ್ಕೆ ಆಲ್ಬರ್ಟ್ ಐನ್‌ಸ್ಟೈನ್ ತೀರಿಹೋದರು. ಆಗ ಅವರಿಗೆ 76 ವರ್ಷ. ಅವರ ಇಚ್ಚೆಯ೦ತೆ ಹತ್ತಿರದ ಟ್ರೆ೦ಟನ್ ನಗರದ ಚಿತಾಗಾರದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರ ಮಾಡಲಾಯಿತು.

ಶವಸ೦ಸ್ಕಾರದ ಸಮಯದಲ್ಲಿ ಅಲ್ಲಿ ಇದ್ದವರು ಹತ್ತಿರದ ಐದಾರು ಮ೦ದಿ ಮಾತ್ರ. ಐನ್‌ಸ್ಟೈನ್ ಸತ್ತಾಗಲೂ ಜನ ಅವರನ್ನು ಬಿಡಲಿಲ್ಲ. ಮರಣೋತ್ತರ ಪರೀಕ್ಷೆ ವೇಳೆ ಅವರ ಮೆದುಳನ್ನು ಹೇಳದೇ ಕೇಳದೆ ತೆಗೆದಿಡಲಾಗಿತ್ತು. ಕೊನೆಗೆ ಅದರ ವಿವಿಧ ಭಾಗಗಳನ್ನು ಅಧ್ಯಯನಕ್ಕಾಗಿ ಬಳಸಲಾಯಿತು.

ವಿಶ್ವದ ಅತ್ಯಂತ ಬುದ್ಧಿವಂತ ಮೆದುಳು ಎಂಬುದು ಅದನ್ನು ಎತ್ತಿಡಲು ಪ್ರಮುಖ ಕಾರಣವಾಗಿತ್ತು. ಇವತ್ತು ಐನ್‌ಸ್ಟೈನ್ ನಮ್ಮೊಂದಿಗಿಲ್ಲ. ಆದರ ಅವರು ಹಾಕಿಕೊಟ್ಟ ವಿಜ್ಞಾನದ ತಳಹದಿಯ ಮೇಲೆ ನಮ್ಮ ಬದುಕು ಇಲ್ಲಿವರೆಗೆ ನಡೆದು ಬಂದಿದೆ. ಮುಂದೊಂದು ದಿನ ಐನ್‌ಸ್ಟೈನ್ ಹೆಸರು ಜನರಿಗೆ ಮರೆತು ಹೋಗಬಹುದು; ಮುಖ್ಯವಾಗದೇ ಇರಬಹುದು. ಆದರೆ ಅವರ ಕೊಡುಗೆಗಳು ಮಾತ್ರ ಈ ಜಗತ್ತು ಇರುವಲ್ಲಿವರೆಗೆ ಇರಲಿವೆ. ಅದೇ ಅವರ ಬದುಕಿನ ಸೌಂದರ್ಯ. (ಮುಗಿಯಿತು.