samachara
www.samachara.com
ಜೀನಿಯಸ್ ಮ್ಯಾನ್- 4: ಹಿಟ್ಲರ್ ಮಣಿಸಲು ಕಂಡುಹಿಡಿದ ಅಣ್ವಸ್ತ್ರವೇ ಅವರ ಇನ್ನಿಲ್ಲದ ಖಿನ್ನತೆಗೆ ಕಾರಣವಾಯಿತು
SPECIAL SERIES

ಜೀನಿಯಸ್ ಮ್ಯಾನ್- 4: ಹಿಟ್ಲರ್ ಮಣಿಸಲು ಕಂಡುಹಿಡಿದ ಅಣ್ವಸ್ತ್ರವೇ ಅವರ ಇನ್ನಿಲ್ಲದ ಖಿನ್ನತೆಗೆ ಕಾರಣವಾಯಿತು

‘ಜೀನಿಯಸ್ ಮ್ಯಾನ್’ ಮಾತ್ರವಾಗಿರಲಿಲ್ಲ. ಅವರೊಳಗೊಬ್ಬ ನಿಜವಾದ ಮಾನವತಾವಾದಿ ಇದ್ದ; ತಪ್ಪುಗಳನ್ನು ಧಿಕ್ಕರಿಸುವ ಗಟ್ಟಿತನದ ಮನುಷ್ಯನಿದ್ದ. ಅಡಾಲ್ಫ್ ಹಿಟ್ಲರ್ ನಂತಹ ಕ್ರೂರಿಯನ್ನು ಸಾರಾಸಗಟಾಗಿ ತಿರಸ್ಕರಿಸುವ ಧೈರ್ಯ ಅವರಿಗಿತ್ತು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಎಲ್ಲಾ ವಿಜ್ಞಾನಿಗಳದ್ದು ಒಂದು ತೂಕವಾದರೆ ಆಲ್ಬರ್ಟ್ ಐನ್‌ಸ್ಟೈನ್ ತೂಕವೇ ಬೇರೆ.

ಬಹುತೇಕ ವಿಜ್ಞಾನಿಗಳು ಅಗೋಚರ ಜೀವಿಗಳಂತೆ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದು ಬಿಡುತ್ತಾರೆ. ತನ್ನ ಸುತ್ತ ಮುತ್ತ ನಡೆಯುವ ಘಟನೆಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸದೆ, ತಾವಾಯಿತು ತನ್ನ ಕೆಲಸವಾಯಿತು ಎಂದು ಇದ್ದು ಬಿಡುವುದು ವಿಜ್ಞಾನಿಗಳ ಮೂಲಭೂತ ಗುಣ. ಸಂಶೋಧನೆಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ಕಾರಣಕ್ಕೆ ಈ ಸ್ವಭಾವ ವಿಜ್ಞಾನಿಗಳಿಗೆ ಬಂದಿರಬಹುದು.

ಆದರೆ ಇದಕ್ಕೆ ಅಪಸ್ವರದಂತೆ ಬದುಕಿದವರು ಐನ್‌ಸ್ಟೈನ್. ತಮ್ಮ ಸುತ್ತ ಮುತ್ತಲಿನ ಸಮಾಜದೊಂದಿಗೆ ಮುಖಾಮುಖಿಯಾಗುತ್ತಾ, ತಮ್ಮ ಪ್ರತಿಕ್ರಿಯೆಯನ್ನು ಕಾಲ ಕಾಲಕ್ಕೆ ದಾಖಲಿಸುತ್ತಾ ಅವರು ಮುನ್ನಡೆದರು. ನಮಗೆ ಈ ಕಾರಣಕ್ಕೆ ಐನ್‌ಸ್ಟೈನ್ ವಿಜ್ಞಾನದಾಚೆಗೂ ನೆನಪಾಗುತ್ತಾರೆ; ಕಾಡುತ್ತಾರೆ.

ಅವರೊಬ್ಬ ‘ಜೀನಿಯಸ್ ಮ್ಯಾನ್’ ಮಾತ್ರವಾಗಿರಲಿಲ್ಲ. ಅವರೊಳಗೊಬ್ಬ ನಿಜವಾದ ಮಾನವತಾವಾದಿ ಇದ್ದ; ತಪ್ಪುಗಳನ್ನು ಧಿಕ್ಕರಿಸುವ ಗಟ್ಟಿತನದ ಮನುಷ್ಯನಿದ್ದ. ಅಡಾಲ್ಫ್ ಹಿಟ್ಲರ್ ನಂತಹ ಕ್ರೂರಿಯನ್ನು ಸಾರಾಸಗಟಾಗಿ ತಿರಸ್ಕರಿಸುವ ಧೈರ್ಯ ಅವರಿಗಿತ್ತು.

ಐನ್‌ಸ್ಟೈನ್ ವಿಜ್ಞಾನದ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದ ಕಾಲದಲ್ಲೇ ಎರಡನೇ ಮಹಾಯುದ್ಧ ಶುರುವಾಯಿತು. ಅದು ಫೆಬ್ರವರಿ 1933. ಐನ್‌ಸ್ಟೈನ್ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ಅಧ್ಯಯನ ಸಂಬಂಧ ಎರಡು ತಿಂಗಳ ಭೇಟಿಗಾಗಿ ಬಂದಿದ್ದರು. ಐನ್‌ಸ್ಟೈನ್ಗೆ ಅಮೆರಿಕಾ ಹೊಸದಲ್ಲ. ಆದರೆ ಈ ಬಾರಿಯ ಭೇಟಿ ಅವರ ಭವಿಷ್ಯವನ್ನ ಬದಲಿಸಲಿತ್ತು. ಐನ್‌ಸ್ಟೈನ್ ಅಮೆರಿಕಾ ಹಡಗು ಹತ್ತುವ ಸ್ವಲ್ಪ ದಿನಗಳ ಮುಂಚೆ ಆತ ಜರ್ಮನಿಯ ಚಾನ್ಸಲರ್ ಹುದ್ದೆಗೆ ಬಂದು ಕೂತಿದ್ದ; ಆತನ ಹೆಸರು ಅಡಾಲ್ಫ್ ಹಿಟ್ಲರ್.

ಜಗತ್ತು ಕಂಡ ಸರ್ವಾಧಿಕಾರಿ. ನಿಮಗಿಲ್ಲಿ ಐನ್‌ಸ್ಟೈನ್ ಜಾತಿ ಹೇಳಲೇಬೇಕು. ಐನ್‌ಸ್ಟೈನ್ ಯಹೂದಿಯಾಗಿದ್ದರು. ಧರ್ಮವನ್ನು ತಾನು ಮೀರಬೇಕು ಎಂದು ಐನ್‌ಸ್ಟೈನ್ ಪ್ರಯತ್ನಪಟ್ಟರೂ ಧರ್ಮ ಅವರನ್ನು ಬಿಡಲೇ ಇಲ್ಲ. ಅದರ ಮೊದಲ ದೃಷ್ಟಾಂತ ಜರ್ಮನಿಯಿಂದ ಆರಂಭವಾಯಿತು.

ಹಿಟ್ಲರ್ ಅಧಿಕಾರಕ್ಕೆ ಬರುತ್ತಿದ್ದಂತೆ ಐನ್‌ಸ್ಟೈನ್ಗೆ ಅದರ ಗಂಭೀರತೆಗಳು ಅರ್ಥವಾಗಿದ್ದವು. ಹಿಟ್ಲರ್ ನಡೆಯುವ ದಾರಿ ಎಲ್ಲಿ ಕೊನೆಗಾಣಲಿದೆ ಎಂಬುದು ಐನ್‌ಸ್ಟೈನ್ ತಲೆಯಲ್ಲಿ ಸ್ಪಷ್ಟವಾಗಿತ್ತು.

ಹಾಗಾಗಿ ಅಮೆರಿಕಾಗೆ ಬಂದಿಳಿದವರಿಗೆ ಈ ಬಾರಿ ನಾನು ಮತ್ತೆಂದೂ ಜರ್ಮನಿಗೆ ಹೋಗುವುದಿಲ್ಲ ಅಂತ ಅನಿಸಿತ್ತು. ಹಾಗೆಯೇ ಆಯಿತು ಕೂಡ.

ಅಮೆರಿಕಾ ಪ್ರವಾಸ ಮುಗಿಸಿ ಎರಡನೇ ಪತ್ನಿ ಎಲ್ಸಾ ಜೊತೆ ಮಾರ್ಚ್ ನಲ್ಲಿ ಐನ್‌ಸ್ಟೈನ್ ಬೆಲ್ಜಿಯಂ ಹಡಗು ಹತ್ತಿದರು. ಪ್ರಯಾಣದ ವೇಳೆ ಅವರಿಗೆ ಅಘಾತಕರ ಸುದ್ದಿ ಕಾದಿತ್ತು. ಮಹಾನ್ ವಿಜ್ಞಾನಿ ಐನ್‌ಸ್ಟೈನ್ ಮನೆ ಮೇಲೆಯೇ ನಾಜಿಗಳು ದಾಳಿ ಮಾಡಿದ್ದರು. ಐನ್‌ಸ್ಟೈನ್ ಖಾಸಗಿ ದೋಣಿಯನ್ನು ವಶಕ್ಕೆ ಪಡೆದಿದ್ದರು. ಅದು ಐನ್‌ಸ್ಟೈನ್ ಮೆಚ್ಚಿನ ದೋಣಿಯಾಗಿತ್ತು. ಮಾರ್ಚ್ 28 ರಂದು ಬೆಲ್ಜಿಯಂ ಬಂದರು ನಗರ ಆಂಟ್ವರ್ಪ್ ನಲ್ಲಿ ಇಳಿದವರು ನೇರವಾಗಿ ಜರ್ಮನ್ ರಾಯಭಾರ ಕಚೇರಿಗೆ ಹೋಗಿ ತಮ್ಮ ಪಾಸ್ಪೋರ್ಟ್ ವಾಪಾಸ್ ನೀಡಿ ಜರ್ಮನ್ ಪೌರತ್ವಕ್ಕೆ ಗುಡ್ ಬಾಯ್ ಹೇಳಿದ್ದರು.

ಕೆಲವು ವರ್ಷಗಳ ನಂತರ ನಾಜಿಗಳು ಐನ್‌ಸ್ಟೈನ್ ಬೋಟನ್ನು ಮಾರಿ, ಅವರ ಮನೆಯನ್ನೇ ಹಿಟ್ಲರ್ ಯುವ ಶಿಬಿರವಾಗಿ ಪರಿವರ್ತಿಸಿದ್ದರು. ಅದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಹಿಟ್ಲರ್ ಹೊಸ ಕಾನೂನು ಹೊರಡಿಸಿದ. ಯಹೂದಿಗಳು ಯಾವುದೇ ಸರಕಾರಿ ನೌಕರಿಯಲ್ಲಿರುವಂತಿಲ್ಲ ಎಂಬುದು ಆ ಆದೇಶವಾಗಿತ್ತು. ಹೀಗೆ ಐನ್‌ಸ್ಟೈನ್ ಕೂಡಾ ತಮ್ಮ ಪ್ರಾಧ್ಯಾಪಕ ಹುದ್ದೆ ಕಳೆದುಕೊಂಡಿದ್ದರು.

‘ಜರ್ಮನ್ ವಿದ್ಯಾರ್ಥಿ ಯೂನಿಯನ್’ ಪ್ರತಿಪರರ ಪುಸ್ತಕ ಸುಡುವ ಕ್ಯಾಂಪೇನ್ ಕೈಗೆತ್ತಿಕೊಂಡಾಗ ಅದರಲ್ಲಿ ಐನ್‌ಸ್ಟೈನ್ ಪುಸ್ತಕಗಳೂ ಇದ್ದವು. ಅಲ್ಲಿನ ನಿಯತಕಾಲಿಕೆಯೊಂದು ಗಲ್ಲಿಗೇರಿಸಬೇಕಾದವರ ಪಟ್ಟಿ ಮಾಡಿ ಅದರಲ್ಲಿ ಐನ್‌ಸ್ಟೈನ್ ತಲೆಗೆ 5 ಸಾವಿರ ಅಮೆರಿಕನ್ ಡಾಲರ್ ಬೆಲೆ ಕಟ್ಟಿತ್ತು.ಜರ್ಮನ್ ಪೌರತ್ವ ಕಿತ್ತೆಸೆದಿದ್ದ ಐನ್‌ಸ್ಟೈನ್ ನಿರಾಶ್ರಿತರಾಗಿದ್ದರು. ಮನೆಯಿಲ್ಲ, ಕೈಯಲ್ಲಿ ಕೆಲಸವಿಲ್ಲ. ಉಳಿದವರಾಗಿದ್ದರೆ ತಮ್ಮ ಸ್ವಂತ ಜೀವನದ ಬಗ್ಗೆಯೇ ಆಲೋಚನೆ ಮಾಡುತ್ತಿದ್ದರೇನೋ? ಆದರೆ ಐನ್‌ಸ್ಟೈನ್ ಜರ್ಮನಿನಲ್ಲಿ ಅವತ್ತು ಸಿಕ್ಕಿ ಹಾಕಿಕೊಂಡಿದ್ದ ಯುವ ವಿಜ್ಞಾನಿಗಳ ಭವಿಷ್ಯದ ಬಗ್ಗೆ ಭೀತಿಗೊಳಗಾಗಿದ್ದರು.

ಜರ್ಮನಿಗೆ ವಾಪಾಸಾಗದ ಐನ್‌ಸ್ಟೈನ್ ಬೆಲ್ಜಿಯಂನಲ್ಲೇ ಬಾಡಿಗೆ ಮನೆ ಪಡೆದು ಉಳಿದುಕೊಂಡರು. ನಂತರ ಖಾಸಗೀ ಆಹ್ವಾನದ ಮೇಲೆ ಆರು ವಾರಗಳ ಭೇಟಿಗೆ ಇಂಗ್ಲೆಂಡಿಗೆ ಹೊರಟು ನಿಂತರು. ಅವರನ್ನು ಸ್ನೇಹಿತ, ನೇವಿ ಕಮಾಂಡರ್ ಒಲಿವೆರ್ ಲಾಕರ್ ಲ್ಯಾಮ್ಸನ್ ಕರೆಸಿಕೊಂಡಿದ್ದರು. ಐನ್‌ಸ್ಟೈನ್ಗೆ ಇರಲು ಮನೆ ವ್ಯವಸ್ಥೆ ಮಾಡಿದ ಆತ, ವಿಜ್ಞಾನಿಯ ರಕ್ಷಣೆಗಾಗಿ ಇಬ್ಬರನ್ನು ನೇಮಿಸಿದ್ದ. ಮುಂದೆ ಲ್ಯಾಮ್ಸನ್ ಐನ್‌ಸ್ಟೈನ್ ರನ್ನು ವಿನ್ಸ್ ಸ್ಟನ್ ಚರ್ಚಿಲ್ (ಮುಂದೆ ಇಂಗ್ಲೆಂಡ್ ಅಧ್ಯಕ್ಷರಾದರು) ಭೇಟಿ ಮಾಡಿಸಿದಾಗ ಜರ್ಮನಿಯಲ್ಲಿರುವ ಯುವ ವಿಜ್ಞಾನಿಗಳನ್ನು ಹೊರಗೆ ಕರೆದುಕೊಂಡು ಬರುವಂತೆ ಬೇಡಿಕೆ ಇಟ್ಟರು.

ಆಗ ರ್ಚಚಿಲ್ ತಮ್ಮ ಗೆಳೆಯ ವಿಜ್ಞಾನಿ ಫ್ರೆಡ್ರಿಕ್ ಲಿಂಡ್ಮನ್ ಕಳುಹಿಸಿ ವಿಜ್ಞಾನಿಗಳನ್ನು ಕರೆಸಿಕೊಂಡು ಬ್ರಿಟಿಷ್ ವಿಶ್ವವಿದ್ಯಾಲಯಗಳಿಗೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಇದೇ ರೀತಿ ಟರ್ಕಿ ಪ್ರಧಾನಿಗೂ ಮನವಿ ಮಾಡಿಕೊಳ್ಳುವ ಮೂಲಕ ಯುವವಿಜ್ಞಾನಿಗಳಿಗೆ ದೊಡ್ಡ ಮಟ್ಟದಲ್ಲಿ ಕೆಲಸ ಕೊಡಿಸಿದ್ದರು. ಹೀಗಿದ್ದೂ ಐನ್‌ಸ್ಟೈನ್ ಮಾತ್ರ ಕೆಲಸವಿಲ್ಲದೆ ಪರದಾಡುತ್ತಿದ್ದರು. ಅವರಿಗೆ ತಮ್ಮ ಭವಿಷ್ಯಕ್ಕಿಂತ ವಿಜ್ಞಾನದ ಭವಿಷ್ಯವೇ ಮುಖ್ಯವಾಗಿತ್ತು.


       ನ್ಯಾಯಾಧೀಶ ಫಿಲಿಫ್ ಫಾರ್ಮಲ್ ಕೈಯಿಂದ ಅಮೆರಿಕಾ ಪೌರತ್ವ ಸ್ವೀಕರಿಸುತ್ತಿರುವ ಆಲ್ಬರ್ಟ್ ಐನ್ಸ್ಟೈನ್
ನ್ಯಾಯಾಧೀಶ ಫಿಲಿಫ್ ಫಾರ್ಮಲ್ ಕೈಯಿಂದ ಅಮೆರಿಕಾ ಪೌರತ್ವ ಸ್ವೀಕರಿಸುತ್ತಿರುವ ಆಲ್ಬರ್ಟ್ ಐನ್ಸ್ಟೈನ್

ಐನ್‌ಸ್ಟೈನ್ ಇಂಗ್ಲೆಂಡ್ ಪೌರತ್ವ ಸಿಗಲಿಲ್ಲ. ಅದಕ್ಕಾಗಿ ಮಾಡಿದ್ದ ನಿರ್ಣಯ ಸಂಸತ್ನಲ್ಲಿ ಬಿದ್ದು ಹೋಯ್ತು. ಈ ವೇಳೆಗೆ ಇಂಗ್ಲೆಂಡ್ನಾದ್ಯಂತ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದ ಐನ್‌ಸ್ಟೈನ್ ಯುರೋಪ್ ವಿಪ್ಲವದ ಪರಿಸ್ಥಿತಿಯನ್ನು ಜನರಿಗೆ ತಿಳಿಸಿ ಹೇಳಿದ್ದರು.

ಮುಂದೆ ಅಮೆರಿಕಾದ ‘ಪ್ರಿನ್ಸ್‌ಟನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ’ಯಲ್ಲಿ ಸ್ಕಾಲರ್ ಕೆಲಸ ಸಿಕ್ಕಿತು. ಹೀಗಿದ್ದೂ ಅವರ ಹಣೆಬಹದ ಬಗ್ಗೆ ನಿಖರತೆಗಳಿರಲಿಲ್ಲ. ಅದಾಗಲೇ ಆಕ್ಸ್ ಫರ್ಡ್ ಸೇರಿದಂತೆ ಖ್ಯಾತನಾಮ ವಿಶ್ವವಿದ್ಯಾನಿಲಯಗಳಿಂದ ಆಫರ್ಗಳು ಬರುತ್ತಿದ್ದವು. ಕೊನೆಗೆ ಅದನ್ನೆಲ್ಲಾ ತಿರಸ್ಕರಿಸಿದ ಐನ್‌ಸ್ಟೈನ್  1935ರಲ್ಲಿ ಅಮೆರಿಕಾದಲ್ಲೇ ನೆಲೆನಿಲ್ಲುವ ನಿರ್ಧಾರಕ್ಕೆ ಬಂದು ಪೌರತ್ವಕ್ಕೆ ಅರ್ಜಿ ಹಾಕಿದರು. ಅಲ್ಲಿಯವರೆಗೆ ಅವರು ಯಾವುದೇ ರಾಷ್ಟ್ರದ ಪ್ರಜೆಯಾಗಿರಲಿಲ್ಲ. 1955ರಲ್ಲಿ ಸಾಯುವವರೆಗೂ ಇದೇ ಪ್ರಿನ್ಸ್‌ಟನ್ ಕಾಲೇಜಿನ ಜೊತೆಯಲ್ಲಿಯೇ ಉಳಿದುಕೊಂಡರು.

ಹೀಗಿದ್ದೂ ಎರಡನೇ ಮಹಾಯುದ್ಧದ ನೆರಳು ಅವರನ್ನು ಹಿಂಬಾಲಿಸುತ್ತಿತ್ತು. 1939ರಲ್ಲಿ ಅಡಾಲ್ಫ್ ಹಿಟ್ಲರ್ ಅಣು ಬಾಂಬ್ ತಯಾರಿಸಲು ಹೊರಟಿದ್ದ. ಈ ಮಾಹಿತಿಯನ್ನು ಹಂಗೇರಿ ಮೂಲದ ವಿಜ್ಞಾನಿಗಳು ಲಿಯೋ ಝಿಲಾರ್ಡ್ ನೇತೃತ್ವದಲ್ಲಿ ಅಮೆರಿಕಾಗೆ ತಲುಪಿಸುತ್ತಾ ಈ ಅಘಾತಕಾರಿ ಬೆಳವಣಿಗೆಗಳ ಬಗ್ಗೆ ಎಚ್ಚರಿಸುತ್ತಲೇ ಇದ್ದರು. ಅಮೆರಿಕಾ ಸರಕಾರಕ್ಕೆ ಹಿಟ್ಲರ್ ನಿರ್ಧಾರಗಳ ಹಿಂದಿನ ಅಪಾಯವನ್ನು ತಿಳಿಸುವುದು ವಿಜ್ಞಾನಿಗಳಾಗಿ ತಮ್ಮ ಜವಾಬ್ದಾರಿ ಎಂದುಕೊಂಡ 1939ರಲ್ಲಿ ಎರಡನೇ ಮಹಾಯುದ್ಧ ಆರಂಭವಾಗುವುದಕ್ಕೆ ಕೆಲವೇ ತಿಂಗಳುಗಳ ಮುಂಚೆ ಐನ್‌ಸ್ಟೈನ್ ಭೇಟಿಯಾಗಿ ತಮ್ಮ ಆಘಾತ ತೋಡಿಕೊಂಡರು.

ಆಗ ಐನ್‌ಸ್ಟೈನ್ ಆ ವಿಜ್ಞಾನಿಗಳ ಜೊತೆ ಕೈ ಜೋಡಿಸಿ ಅಮೆರಿಕಾ ಅಧ್ಯಕ್ಷ ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್ಗೆ ಪತ್ರ ಬರೆದು ಅಮೆರಿಕ ತನ್ನದೇ ಆದ ಅಣ್ವಸ್ತ್ರ ಹೊಂದಲು ಸಂಶೋಧನೆಗೆ ಮುಂದಾಗಬೇಕು ಎಂದು ಕೇಳಿಕೊಂಡರು. ಒಂದೊಮ್ಮೆ ಹಿಟ್ಲರ್ ಅಣುಬಾಂಬ್ ಯಶಸ್ವಿಯಾಗಿದ್ದೇ ಆದಲ್ಲಿ ಅದು ವಿಶ್ವಕ್ಕೇ ಗಂಡಾಂತರ ಎಂಬ ಅರಿವು ಐನ್‌ಸ್ಟೈನ್ಗೆ ಇತ್ತು.


       ಅಮೆರಿಕಾ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ಗೆ ಆಲ್ಬರ್ಟ್ ಐನ್ಸ್ಟೈನ್ ಬರೆದ ಐತಿಹಾಸಿಕ ಪತ್ರ
ಅಮೆರಿಕಾ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ಗೆ ಆಲ್ಬರ್ಟ್ ಐನ್ಸ್ಟೈನ್ ಬರೆದ ಐತಿಹಾಸಿಕ ಪತ್ರ

ಕೊನೆಗೆ ತಮ್ಮ ಸಂಪರ್ಕ ಬಳಸಿಕೊಂಡು ರೂಸ್‌ವೆಲ್ಟ್ರನ್ನು ಮತ್ತೊಮ್ಮೆ ಭೇಟಿಯಾಗಿ ಜರ್ಮನ್ ಬೆಳವಣಿಗೆಗಳ ಗಂಭೀರತೆಯನ್ನು ಅರಿವು ಮಾಡಿಕೊಟ್ಟರು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಕೊನೆಗೂ ಅಮೆರಿಕಾ ಅಣುಬಾಂಬ್ ತಯಾರಿಕೆಗೆ ಮುಂದಾಯಿತು.

ಯುದ್ಧ ವಿಪರೀತ ಕಾವು ಪಡೆದುಕೊಂಡಾಗ ಅಮೆರಿಕಾ ಇದೇ ಅಣುಬಾಂಬನ್ನು ಜಪಾನಿನ ಅವಳಿ ನಗರಗಳಾದ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಹಾಕಿದ್ದು ನಿಮಗೆಲ್ಲ ತಿಳಿದಿದೆ.

ಈ ಘಟನೆ ನಡೆದ ನಂತರ ಐನ್‌ಸ್ಟೈನ್ ತೀರಾ ನೊಂದುಕೊಂಡರು. ಲಕ್ಷಾಂತರ ಜನರ ಸಾವಿಗೆ ಪರೋಕ್ಷವಾಗಿ ನನ್ನ ಪತ್ರ ಕಾರಣವಾಯಿತಲ್ಲ ಎಂಬ ಕೊರಗು ಅವರನ್ನು ಕೊನೆಯವರೆಗೂ ಕಾಡಿತು. ಈ ಕೊರಗಲ್ಲೇ ಅವರು ಪ್ರಾಣ ತ್ಯಜಿಸಿದರು.

ಇವೆಲ್ಲಾ ಐನ್‌ಸ್ಟೈನ್ ಸಾಮಾಜಿಕ ಕೆಲಸಗಳ ಒಂದು ಮುಖವಾದರೆ, ಇನ್ನೂ ಹಲವು ವಿಚಾರಗಳಲ್ಲಿ ಅವರು ಜನಾಭಿಪ್ರಾಯ ಹುಟ್ಟುಹಾಕಿದ್ದರು. ಐನ್‌ಸ್ಟೈನ್ ವಿಜ್ಞಾನದ ಸಾಧನೆಗಳಾಚೆಗೂ ಅವುಗಳು ಜನಪ್ರಿಯವಾಗಿವೆ. ಭಾರತೀಯರೊಂದಿಗೆ ಐನ್‌ಸ್ಟೈನ್ ಸ್ನೇಹ ಸಂಬಂಧಗಳಿತ್ತು. ಹೀಗಿದ್ದ ಐನ್‌ಸ್ಟೈನ್ ಸಾಯುವಾಗ ಮಾತ್ರ ಒಬ್ಬಂಟಿಯಾಗಿದ್ದರು. ಮನಸ್ಸು ವಿಕ್ಷಿಪ್ತವಾಗಿತ್ತು. ಅದು ಅತ್ಯಂತ ನೋವಿನ ಕತೆ.

(ಕೊನೆಯ ಭಾಗ ನಾಳೆಗೆ)