samachara
www.samachara.com
ಜೀನಿಯಸ್ ಮ್ಯಾನ್- 2: ವಯಸ್ಸಲ್ಲದ ವಯಸ್ಸಲ್ಲಿ ಐನ್‌ಸ್ಟೈನ್ ಬರೆದ ಸಿದ್ದಾಂತವನ್ನು ಅರಗಿಸಿಕೊಳ್ಳುವವರು ಯಾರೂ ಇರಲಿಲ್ಲ!
SPECIAL SERIES

ಜೀನಿಯಸ್ ಮ್ಯಾನ್- 2: ವಯಸ್ಸಲ್ಲದ ವಯಸ್ಸಲ್ಲಿ ಐನ್‌ಸ್ಟೈನ್ ಬರೆದ ಸಿದ್ದಾಂತವನ್ನು ಅರಗಿಸಿಕೊಳ್ಳುವವರು ಯಾರೂ ಇರಲಿಲ್ಲ!

ವಿಜ್ಙಾನಿ ಐನ್‌ಸ್ಟೈನ್‌ರನ್ನು ಮನುಕುಲ ಕಂಡ ಅತ್ಯಂತ ಬುದ್ಧಿವಂತರು. ಆದರೆ ಐನ್‌ಸ್ಟೈನ್‌ಗೂ ಮೊದಲು ನ್ಯೂಟನ್ ತನ್ನ ಸಿದ್ಧಾಂತದಲ್ಲಿ ವಿಶ್ವದ ಯಾವುದೇ ಎರಡು ವಸ್ತುಗಳ ನಡುವೆ ಗುರುತ್ವದ ಆಕರ್ಷಣಾ ಬಲ ವರ್ತಿಸುತ್ತಲೇ ಇರುತ್ತದೆ ಎಂದಿದ್ದ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ವಿಜ್ಙಾನಿ ಐನ್‌ಸ್ಟೈನ್‌ರನ್ನು ಮನುಕುಲ ಕಂಡ ಅತ್ಯಂತ ಬುದ್ಧಿವಂತರು; ಅವರಲ್ಲೇನೋ ವಿಶೇಷವಿದೆ ಎಂದು ಕರೆಯುವುದಕ್ಕೆ ಅವರು ವಿಜ್ಞಾನದ ನಂಬಿಕೆಯ ಬುಡವನ್ನು ಅಲ್ಲಾಡಿಸಿದ್ದು ಪ್ರಮುಖ ಕಾರಣ. ಐನ್‌ಸ್ಟೈನ್‌ಗೂ ಮೊದಲು ನ್ಯೂಟನ್ ತನ್ನ ಸಿದ್ಧಾಂತದಲ್ಲಿ ವಿಶ್ವದ ಯಾವುದೇ ಎರಡು ವಸ್ತುಗಳ ನಡುವೆ ಗುರುತ್ವದ ಆಕರ್ಷಣಾ ಬಲ ವರ್ತಿಸುತ್ತಲೇ ಇರುತ್ತದೆ ಎಂದಿದ್ದ. ಆದರೆ ಅದನ್ನು ತಲೆ ಕೆಳಗು ಮಾಡಿದ ಐನ್‌ಸ್ಟೈನ್ ‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ (ವಿಶೇಷ ಸಾಪೇಕ್ಷ ಸಿದ್ಧಾಂತದ ಮುಂದುವರಿದ ಭಾಗ) ಮಂಡಿಸಿದರು. ಆ ಸಿದ್ಧಾಂತ ಏನು ಅದನ್ನು ನಾವಿಲ್ಲಿ ವಿವರಿಸುತ್ತಿಲ್ಲ. (ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ ಮಾಡಿ).

ವಿಚಿತ್ರ ಅಂದರೆ ಒಂದೇ ವರ್ಷದಲ್ಲಿ ನಾಲ್ಕು ಸಿದ್ಧಾಂತ ಬರೆದಿದ್ದ ಐನ್‌ಸ್ಟೈನ್ ‘ವಿಶೇಷ ಸಾಪೇಕ್ಷ ಸಿದ್ಧಾಂತ’ಕ್ಕೆ ಉಲ್ಲೇಖ(ರೆಫೆರೆನ್ಸ್)ಗಳನ್ನೇ ಮಾಡಿರಲಿಲ್ಲ. ಅದು ಐನ್‌ಸ್ಟೈನ್ ಸ್ವಂತ ಸಿದ್ಧಾಂತವಾಗಿತ್ತು ಮತ್ತು ಅದಕ್ಕೆ ಯಾವ ಹಿನ್ನಲೆಗಳೂ ಇರಲಿಲ್ಲ. ಅದೇ ಕಾರಣಕ್ಕೋ ಏನೋ ಆ ಸಿದ್ಧಾಂತವನ್ನು ಸಾಮಾನ್ಯರು ಬಿಡಿ ಜಗತ್ತಿನ ಮೇಧಾವಿ ವಿಜ್ಞಾನಿಗಳೇ ನಂಬಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರಿಗದು ಅರ್ಥವಾಗಿರಲಿಲ್ಲ. ಅದಕ್ಕೆ ಐನ್‌ಸ್ಟೈನ್‌ ಹಿನ್ನಲೆಯೂ ಕಾರಣವಾಗಿತ್ತು.

ಈ ಸಿದ್ಧಾಂತಗಳನ್ನು ಮಂಡಿಸಿದಾಗ ಅವರು ಪಿಎಚ್ಡಿ ಪಡೆದಿರಲಿಲ್ಲ, ಕನಿಷ್ಠ ಪ್ರೊಫೆಸರ್ ಆಗಿರಲಿಲ್ಲ. ಪೇಟೆಂಟ್ ಕಚೇರಿಯಲ್ಲಿ ಸಾಮಾನ್ಯ ನೌಕರಿಯಲ್ಲಿದ್ದರು ಅಷ್ಟೆ.1915, ನವೆಂಬರ್ 25..

ಅದಾಗಲೇ ಸಮೀಕರಣ ಮತ್ತು ‘ವಿಶೇಷ ಸಾಪೇಕ್ಷ ಸಿದ್ಧಾಂತ’ ನೀಡಿ 10 ವರ್ಷ ಕಳೆದಿತ್ತು. ವಿಜ್ಞಾನಿಗಳು ಸೇರಿ ಯಾರಿಗೂ ಅರ್ಥವಾಗದ ಹಿನ್ನಲೆಯಲ್ಲಿ ಧೂಳು ಹಿಡಿಯುತ್ತಿದ್ದ ಸಿದ್ಧಾಂತಕ್ಕೆ ಗಣಿತದ ಸಮೀಕರಣಗಳನ್ನು ಮಂಡಿಸಲಾಯಿತು. ಗುರುತ್ವಾಕರ್ಷಣ ಅಲೆಗಳು ಸೇರಿದಂತೆ ತಮ್ಮ ಸಿದ್ಧಾಂತದ ಬಗ್ಗೆ ನಾಲ್ಕು ದಿನಗಳ ಕಾಲ ಐನ್‌ಸ್ಟೈನ್‌ಮಾತನಾಡಿದರು.

ಇಷ್ಟೆಲ್ಲಾ ವಿವರಿಸಿ ಹೇಳಿದರೂ ಆಲಿಸಿದ ವಿಜ್ಞಾನಿಗಳಿಗೂ ಇದು ಕಬ್ಬಿಣದ ಕಡಲೆಯಾಗಿತ್ತು. ಯಾರಿಗೂ ಅರ್ಥವಾಗಲೇ ಇಲ್ಲ. ಮತ್ತೆ ಈ ಪುಣ್ಯಾತ್ಮ ಸುಳ್ಳು ಹೆಳುತ್ತಿದ್ದಾನೆ ಎಂದೇ ಎಲ್ಲರೂ ಉಪೇಕ್ಷಿಸಿದರು.‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ ದೇಶವಾಗಲೀ (Space), ಕಾಲವಾಗಲೀ (Time) ಯಾವುದೂ ನಿರಪೇಕ್ಷವಾದುವುಗಳಲ್ಲ (Absolute); ಎರಡೂ ಸಾಪೇಕ್ಷ ಎಂದು ಸಾರುವ ಪ್ರಯತ್ನ ಮಾಡಿದ್ದರು.

ಇದು ಅರ್ಥವಾಗದ ಹಿನ್ನೆಲೆಯಲ್ಲಿ ಐನ್‌ಸ್ಟೈನ್ ಏನೋ ತಲೆಬುಡವಿಲ್ಲದ್ದು ಮಾತನಾಡುತ್ತಿದ್ದಾನೆ. ಈತನಿಗೆ ಏನೋ ತಲೆ ಕೆಟ್ಟಿದೆ ಎಂದೂ ವಿಜ್ಞಾನಿಗಳೇ ಅಂದುಕೊಂಡಿದ್ದರು.ಪ್ರಯೋಗಗಳ ಮೂಲಕ ರುಜುವಾತಾಗದ ಸಿದ್ಧಾಂತ ಕೇವಲ ಸಿದ್ಧಾಂತ ಮಾತ್ರ. ಹಾಳೆಯ ಮೇಲೆ ಸಮೀಕರಣಗಳನ್ನು ಬರೆದು ಸಿದ್ಧಾಂತಗಳನ್ನು ನಿರೂಪಿಸಬಹುದು.

ಆದರೆ, ಪ್ರಯೋಗ ಅವನ್ನು ದೃಢಪಡಿಸಬೇಕು. 1919ರಲ್ಲಿ ಐನ್‌ಸ್ಟೈನ್‌ರ ಸಿದ್ಧಾಂತ ಮೊದಲ ಬಾರಿಗೆ ಪರೀಕ್ಷೆಗೆ ಒಳಪಟ್ಟಿತು. ಅವತ್ತು ಸೂರ್ಯ ಗ್ರಹಣದ ಸಂದರ್ಭ ಐನ್‌ಸ್ಟೈನ್‌ ಸಿದ್ಧಾಂತವನ್ನು ಪರೀಕ್ಷೆಗೊಳಪಡಿಸಿ ಚಿತ್ರಗಳ ಸಹಿತ ಇಂಗ್ಲೆಂಡಿನ ಖ್ಯಾತ ವಿಜ್ಞಾನಿ ಸರ್‍ ಆರ್ಥರ್‍ ಎಡಿಂಗ್ಟನ್‍ ನಿರೂಪಿಸಿದರು. ಅದನ್ನು ನಿಯತಕಾಲಿಕೆಗಳಲ್ಲಿ ಪ್ರಕಟಿಸಿದರು ಕೂಡಾ. ಅವತ್ತು ಐನ್‌ಸ್ಟೈನ್‌ ಜಗತ್ತಿನ ವಿಜ್ಞಾನಿಗಳ ಕಣ್ಣುಗಳಲ್ಲಿ ಬೆರಗು ಹುಟ್ಟಿಸಿದ್ದರು.

ಹೊಸ ನ್ಯೂಟನ್ ಹುಟ್ಟಿಕೊಂಡ ಎಂದೇ ಪತ್ರಿಕೆಗಳೆಲ್ಲಾ ಗುಣಗಾನ ಮಾಡಿದವು. ಹೀಗಿದ್ದೂ ಅದರ ಸುತ್ತಾ ವಿವಾದಗಳು ಮುಗಿದಿರಲಿಲ್ಲ.ಅವತ್ತಿಗೆ ಸಿದ್ಧಾಂತ ನೀಡಿ 14 ವರ್ಷವಾದರೂ ಅರ್ಥವಾಗಿದ್ದು ಮೂವರಿಗೆ ಮಾತ್ರ. ಒಬ್ಬರು ಇದೇ ಸರ್‍ ಆರ್ಥರ್‍ ಎಡಿಂಗ್ಟನ್‍, ಇನ್ನೊಬ್ಬರು ಇಟಲಿಯ ಎನ್ರಿಕೋ ಫರ್ಮಿ ಮತ್ತು ಸ್ವತಃ ಐನ್‌ಸ್ಟೈನ್‌.ಆದರೆ ಎಡಿಂಗ್ಟನ್ ಹೇಳಿದ ನಂತರ ಆ ಸಿದ್ಧಾಂತಕ್ಕೆ ಹೊಸ ಬಲ ಬಂತು. ಅಲ್ಲಿಂದ ನಿಧಾನಕ್ಕೆ ಒಬ್ಬೊಬ್ಬರೇ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರು. ಮುಂದೆ ಆಧುನಿಕ ಭೌತ ಶಾಸ್ತ್ರಕ್ಕೆ ಇದು ಭದ್ರ ತಳಹದಿಯಾಯಿತು.


       ಐನ್ ಸ್ಟೈನ್ ಮತ್ತು ಸರ್ ಆರ್ಥರ್ ಎಡಿಂಗ್ಟನ್ (ಎಡ ಭಾಗದಲ್ಲಿ ಕುಳಿತವರು)
ಐನ್ ಸ್ಟೈನ್ ಮತ್ತು ಸರ್ ಆರ್ಥರ್ ಎಡಿಂಗ್ಟನ್ (ಎಡ ಭಾಗದಲ್ಲಿ ಕುಳಿತವರು)

ಆದರೆ ಇದರಲ್ಲಿ ಇನ್ನೂ ಕೆಲವು ಥಿಯರಿಗಳು ಸಾಕ್ಷವಿಲ್ಲದೇ ಹಾಗೇ ಉಳಿದುಕೊಂಡಿದ್ದವು. ಅವು ಸತ್ಯವೋ ಸುಳ್ಳೋ ಎಂದು ಹೇಳಲು ಸಾಮಾನ್ಯರು ಬಿಡಿ ವಿಶ್ವದ ಯಾವ ಘಟಾನುಘಟಿ ವಿಜ್ಞಾನಿಗಳಿಗೂ ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ 2015ರಲ್ಲಿ ನಡೆದ ಗುರುತ್ವ ತರಂಗಗಳ ಸಂಶೋಧನೆ ಐನ್‌ಸ್ಟೈನ್‌ ಹೇಳಿದ ಸಿದ್ಧಾಂತ ಸತ್ಯ ಎಂದು 100 ವರ್ಷಗಳ ನಂತರ ಸಾಕ್ಷಿ ಸಮೇತ ಸಾಬೀತು ಮಾಡಿತ್ತು ಎಂಬುದು ಗಮನಾರ್ಹ.

ತಮ್ಮ ಅಧ್ಭುತ ಸಂಶೋಧನೆಯ ಹೊರತಾಗಿಯೂ ಐನ್‌ಸ್ಟೈನ್‌ಗೆ ಸಾಪೇಕ್ಷ ಸಿದ್ಧಾಂತಕ್ಕೆ ನೋಬೆಲ್ ಪ್ರಶಸ್ತಿ ಸಿಗಲೇ ಇಲ್ಲ. ಬದಲಾಗಿ ಇದರ ಮುಂದೆ ಚಿಲ್ಲರೆ ಎನಿಸಬಹುದಾದ ‘ಫೋಟೋ ಎಲೆಕ್ಟ್ರಿಕ್ ಇಫೆಕ್ಟ್’ಗೆ ಅದೂ 16 ವರ್ಷ ಬಿಟ್ಟು 1921ರಲ್ಲಿ ನೊಬೆಲ್ ಪ್ರಶಸ್ತಿ ಬಂತು.

ಕಾರಣ ಇಷ್ಟೆ, ಸಾಪೇಕ್ಷ ಸಿದ್ಧಾಂತ ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ.1915ರ ಹೊತ್ತಿಗೆಲ್ಲಾ ಐನ್‌ಸ್ಟೈನ್‌ ವಿಶ್ವದ ಮುಂಚೂಣಿ ವಿಜ್ಞಾನಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಸ್ವಿಟ್ಜರ್ಲ್ಯಾಂಡ್ನ ಬರ್ನ್ ವಿಶ್ವವಿದ್ಯಾಲಯದಲ್ಲಿ ಲೆಕ್ಚರ್ ಕೆಲಸ ಸಿಕ್ಕಿತು. ಮುಂದಿನದು ಆಲ್ಬರ್ಟ್ ಐನ್‌ಸ್ಟೈನ್‌ ಯುಗ. ಯುರೋಪ್ನಾದ್ಯಂತ ಬೇರೆ ಬೇರೆ ವಿಶ್ವವಿದ್ಯಾಲಯಗಳನ್ನು ಸುತ್ತಿದರು.

ಜರ್ಮನಿಯ ‘ಪ್ರಶಿಯಾ ಅಕಾಡೆಮಿ ಆಫ್ ಸೈನ್ಸ್’ನ ಸದಸ್ಯರಾದರು. ಜರ್ಮನ್ ಫಿಸಿಕಲ್ ಸೊಸೈಟಿಯ ಅಧ್ಯಕ್ಷರಾದರು. ಐನ್‌ಸ್ಟೈನ್‌ಗೆ ದೊರೆತ ಪ್ರಶಸ್ತಿಗಳಿಗಂತೂ ಲೆಕ್ಕವೇ ಇಲ್ಲ.ಮುಂದೆ ಜಗದ್ವಿಖ್ಯಾತರಾಗುತ್ತಿದ್ದಂತೆ, ಅಮೆರಿಕಾ ಜಪಾನ್, ಸಿಂಗಾಪೂರ್ ಹೀಗೆ ಏಷ್ಯಾದ ದೇಶಗಳಲ್ಲೆಲ್ಲಾ ಐನ್‌ಸ್ಟೈನ್‌ ತಮ್ಮ ಉಪನ್ಯಾಸ ನೀಡಿದರು. ಅದರಲ್ಲೂ ಐನ್‌ಸ್ಟೈನ್‌ 1921ರಲ್ಲಿ ಅಮೆರಿಕಾಗೆ ಭೇಟಿ ನೀಡಿದ್ದು ಇವತ್ತಿನ ಸಿನಿಮಾ ಸೆಲೆಬ್ರಿಟಿಗಳ ಮಟ್ಟಕ್ಕಿತ್ತು. ಎರಡನೇ ಬಾರಿಗೆ ಅಮೆರಿಕಾಗೆ ಬಂದಾಗ ಐನ್‌ಸ್ಟೈನ್‌ ಭೇಟಿಯನ್ನು ಗುಪ್ತವಾಗಿಡಲಾಗಿತ್ತು. ಹೀಗಿದ್ದೂ ಉಪನ್ಯಾಸ ನೀಡಲು ಆಹ್ವಾನಗಳು, ನೂರಾರು ಟೆಲಿಗ್ರಾಮ್ಗಳು ಐನ್‌ಸ್ಟೈನ್‌ಗೆ ಬರುತ್ತಿದ್ದವಂತೆ.


       ನ್ಯೂಯಾರ್ಕ್ ನಗರಕ್ಕೆ ಬಂದಿದ್ದ ಐನ್ ಸ್ಟೈನ್’ರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ ಸ್ವಾಗತಿಸಲಾಗಿತ್ತು
ನ್ಯೂಯಾರ್ಕ್ ನಗರಕ್ಕೆ ಬಂದಿದ್ದ ಐನ್ ಸ್ಟೈನ್’ರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ ಸ್ವಾಗತಿಸಲಾಗಿತ್ತು

ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಐನ್‌ಸ್ಟೈನ್‌ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ನೀಡಿದ ‘ಬೋಸ್-ಐನ್‌ಸ್ಟೈನ್‌ ಸ್ಟಾಟಿಸ್ಟಿಕ್ಸ್’ ಸೇರಿದಂತೆ ‘ಐನ್‌ಸ್ಟೈನ್‌ ರೆಫ್ರಿಜರೇಟರ್’, ‘ಐನ್‌ಸ್ಟೈನ್‌-ಕಾರ್ಟನ್ ಸಿದ್ಧಾಂತ’, ‘ಐನ್‌ಸ್ಟೈನ್‌-ಇನ್ಫೆಲ್ಡ್-ಹಾಫ್ಮನ್ ಇಕ್ವೇಷನ್ಸ್’, ‘ಐನ್‌ಸ್ಟೈನ್‌-ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್’ ಇವುಗಳಲ್ಲಿ ಪ್ರಮುಖವಾದವು. ಇರ್ವಿನ್ ಶ್ರೋಡಿಂಗರ್’ಗೆ ಸಂಶೋಧನೆಗೆ ಸೂಚಿಸಿದ್ದು ಐನ್‌ಸ್ಟೈನ್ ಹಿರಿಮೆಗಳಲ್ಲೊಂದು.

ಇವತ್ತು ಐನ್‌ಸ್ಟೈನ್‌ ಹೆಸರಿನಲ್ಲಿ ಕಾಲೇಜು, ಪಾರ್ಕ್ಗಳು, ಪ್ರಶಸ್ತಿಗಳೆಲ್ಲ ಸ್ಥಾಪನೆಗೊಂಡಿವೆ. ಅದಕ್ಕಿಂತ ಹೆಚ್ಚಾಗಿ ಐನ್‌ಸ್ಟೈನ್  ಎನ್ನುವ ಪದ ಜೀನಿಯಸ್ (ಬುದ್ಧಿವಂತ) ಎನ್ನುವುದಕ್ಕೆ ಪರ್ಯಾಯವಾಗಿ ಬಳಕೆಯಲ್ಲಿದೆ.1905ರಲ್ಲಿ ಐನ್‌ಸ್ಟೈನ್ ಸಿದ್ಧಾಂತ ನೀಡಿದ ನೂರನೇ ವರ್ಷಾಚರಣೆಯನ್ನು 2005ರಲ್ಲಿ ವಿಶ್ವಸಂಸ್ಥೆ ವಿಶ್ವ ಭೌತವಿಜ್ಞಾನ ವರ್ಷವನ್ನಾಗಿ ಘೋಷಿಸಿತ್ತು. ಒಬ್ಬ ವಿಜ್ಞಾನಿಗೆ ಇದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ.ಇಷ್ಟೆಲ್ಲಾ ಬುದ್ಧಿವಂತ ವಿಜ್ಞಾನಿ ಐನ್‌ಸ್ಟೈನ್ ಕ್ವಾಂಟಮ್ ಮೆಕಾನಿಕ್ಸ್ ಸಿದ್ಧಾಂತವನ್ನು ಮಾತ್ರ ಒಪ್ಪಿಕೊಳ್ಳಲೇ ಇಲ್ಲ. ಅದೆಲ್ಲಾ ಸುಳ್ಳು ಎನ್ನುತ್ತಲೇ ಸಾವಿನ ಕಡೆ ನಡೆದು ಹೋದರು ಐನ್‌ಸ್ಟೈನ್. ಆದರೆ ಐನ್‌ಸ್ಟೈನ್ ಹೇಳಿದ್ದು ಸುಳ್ಳು ಎನ್ನುವುದು ಇವತ್ತು ಸಾಬೀತಾಗಿದೆ. ಅದು ಬೆರಗು ಮೂಡಿಸುವ ವಿಜ್ಞಾನದ ಇನ್ನೊಂದು ಕತೆ...

(ನಾಳೆಗೆ)