samachara
www.samachara.com
‘ಗೋ ರಾಜಕೀಯ’- ಭಾಗ 5: ಗೋವು ಎಂಬ ಭಾವನಾತ್ಮಕ ಸಂಗತಿ ಮತ್ತು ನಿಷೇಧ ಎಂಬ ‘ಬ್ರಾಂಡಿಂಗ್’!
SPECIAL SERIES

‘ಗೋ ರಾಜಕೀಯ’- ಭಾಗ 5: ಗೋವು ಎಂಬ ಭಾವನಾತ್ಮಕ ಸಂಗತಿ ಮತ್ತು ನಿಷೇಧ ಎಂಬ ‘ಬ್ರಾಂಡಿಂಗ್’!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ತಾನೇ ಆಡಿ ಬೆಳೆಸಿದ ಕೂಸು ಈಗ ತನಗೇ ಮುಳುವಾಗಿದೆ ಎಂಬ ಮಾತು ಈ ಸಂದರ್ಭದಲ್ಲಿ ಬಿಜೆಪಿಗೆ ಸರಿಯಾಗಿ ಒಪ್ಪುತ್ತದೆ.

ಒಂದು ಕಾಲದಲ್ಲಿ ಗೋ ರಕ್ಷಣೆಯ ಅಮಲನ್ನು ಯುವಕರ ತಲೆಯಲ್ಲಿ ತುಂಬಿ, ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡಿತು. ಇವತ್ತು ಅದೇ 'ಗೋ ರಕ್ಷಕರು' ಪ್ರಧಾನಿ ನರೇಂದ್ರ ಮೋದಿ ಮಾತಾಗಲಿ, ಸಂಘ ಪರಿವಾರದ ಮಾತನ್ನಾಗಲಿ ಕೇಳುವ ಸ್ಥಿತಿಯಲ್ಲಿ ಇಲ್ಲ. ಯಾವ ಮೂಲೆಯಲ್ಲಿ? ಯಾರು? ಯಾವಾಗ? ಯಾರಿಗೆ? ಹೊಡೆಯುತ್ತಾರೆ ಎಂಬುದು ಯಾವ ನಾಯಕನಿಗೂ ತಿಳಿಯದ ಸ್ಥಿತಿಗೆ ಅದು ಬಂದು ನಿಂತಿದೆ. ಭಜರಂಗದಳದ ಬೃಹತ್ ನೆಟ್ವರ್ಕ್ ಅದರ ಶಕ್ತಿಯೂ ಹೌದು, ಇವತ್ತಿಗೆ ಬಲಹೀನತೆಯೂ ಹೌದು.

ಇಲ್ಲಿವರೆಗೆ ಮುಸ್ಲಿಮರ ಮೇಲಷ್ಟೇ ಹಲ್ಲೆ ಮಾಡುತ್ತಿದ್ದಾಗ ಸುಮ್ಮನ್ನಿದ್ದ ಬಿಜೆಪಿ ಈಗ ಅನಿವಾರ್ಯವಾಗಿ ದಲಿತರ ಮೇಲೆ ಹಲ್ಲೆಯುವಾಗ ಅನಿವಾರ್ಯವಾಗಿ ಬಾಯಿ ಬಿಡಬೇಕಾಗಿ ಬಂದಿದೆ. ಅದರಲ್ಲೂ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದಲಿತರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ ಎನ್ನುವ ಕೂಗಿದೆ. ಈ ನಡುವೆಯೇ, ಗೋ ರಕ್ಷಕರು ಗುಜರಾತಿನ ಉನಾದಲ್ಲಿ ನಾಲ್ವರು ದಲಿತರ ಮೇಲೆ ನಡೆಸಿದ ಹಲ್ಲೆ ದೇಶದಾದ್ಯಂತ ಕಿಚ್ಚೆಬ್ಬಿಸಿತು. ಲಕ್ಷಾಂತರ ದಲಿತರು ಇದರ ವಿರುದ್ಧ ಬೀದಿಗಿಳಿದಿದ್ದು ಪ್ರತಿಭಟನೆಗಳು ಇನ್ನೂ ನಡೆಯುತ್ತಲೇ ಇವೆ. ತಮ್ಮದೇ ತವರು ರಾಜ್ಯದಲ್ಲಿ ದಲಿತರು ರೊಚ್ಚಿಗೆದ್ದರೂ, ಪ್ರಧಾನಿ ಮೋದಿ ಅವರು ತಮ್ಮ ಎಂದಿನ ಮೋಡಿ ಮಾಡುವ ಮಾತುಗಳನ್ನು ಯಾಕೆ ಆಡಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಕೊನೆಗೆ ದಾರಿ ಕಾಣದೆ ಪ್ರಧಾನಿ, ಟೌನ್ ಹಾಲ್ ಸಭೆ ಮತ್ತು ಹೈದರಾಬಾದಿನಲ್ಲಿ ನಕಲಿ ಗೋ ರಕ್ಷಕರ (ಅಸಲಿ?) ವಿರುದ್ಧ ಹರಿಹಾಯ್ದಿದ್ದಾರೆ.

“ಶೂಟ್ ಮಾಡುವುದಿದ್ದರೆ ನನ್ನನ್ನು ಶೂಟ್ ಮಾಡಿ, ದಲಿತರನ್ನಲ್ಲ,” ಎಂಬ ಉಗ್ರ ಭಾಷಣ ಮಾಡಿದ್ದಾರೆ. ದಲಿತರ ಓಟ್ ಬ್ಯಾಂಕ್ ಪ್ರಮಾಣ ಗೊತ್ತಿದ್ದವರಿಗೆ ನರೇಂದ್ರ ಮೋದಿಯವರ ಉಗ್ರಾವತಾರದ ಭಾಷಣದ ಹಿಂದಿನ ಉದ್ದೇಶ ಅರ್ಥವಾಗಿರುತ್ತದೆ.

ಇವತ್ತು ಯಾರು ಏನೇ ಅಂದರೂ, ಗೋ ಹತ್ಯೆ ನಿಲ್ಲಿಸುವ, ಕಾನೂನಿ ಅಡಿಯಲ್ಲಿ ಸಂಪೂರ್ಣವಾಗಿ ನಿಷೇಧಿಸುವ ಸ್ಥಿತಿಯಲ್ಲಿ ಭಾರತವೂ ಇಲ್ಲ. ಭಾರತದ ಜಾನುವಾರು ಮಾರುಕಟ್ಟೆ ಆ ಸ್ಥಿತಿಗೆ ಈಗಾಗಲೇ ಬಂದಾಗಿದೆ. 2012ರ ಜಾನುವಾರು ಗಣತಿಯ ಪ್ರಕಾರ ದೇಶದಲ್ಲಿ 19 ಕೋಟಿ ಗೋವುಗಳು ಮತ್ತು 11 ಕೋಟಿ ಎಮ್ಮೆ-ಕೋಣಗಳಿವೆ. ಇದರಲ್ಲಿ ದನಗಳು ಮತ್ತು ಎತ್ತುಗಳ ಸಂಖ್ಯೆ ಕ್ರಮವಾಗಿ 9 ಮತ್ತು 6 ಕೋಟಿ. ಇನ್ನು ಎಮ್ಮೆಗಳು 9 ಕೋಟಿ ಇದ್ದರೆ, ಕೋಣಗಳ ಸಂಖ್ಯೆ ಕೇವಲ 1.6 ಕೋಟಿ.

ದೇಶದಲ್ಲಿ ಹಾಲು ಸಂಬಂಧಿತ ವ್ಯವಹಾರಗಳದ್ದೇ ಸಿಂಹ ಪಾಲು ಎಂಬುದನ್ನು ಈ ಅಂಕಿ ಅಂಶಗಳು ಹೇಳುತ್ತಿವೆ. ಇದೇ ವೇಳೆ ಗಂಡು ಹೆಣ್ಣು ಜಾನುವಾರುಗಳು ಸಮಾನವಾಗಬೇಕಾಗಿದ್ದ ಜಾಗದಲ್ಲಿ ವಿಪರೀತ ಅಂತರ ಕಾಣಿಸುತ್ತಿದೆ. ಎತ್ತುಗಳು ಮತ್ತು ಕೋಣಗಳು ಕಸಾಯಿಖಾನೆ ಪಾಲಾಗಿವೆ ಎಂಬುದನ್ನು ಇವು ಸೂಚಿಸುತ್ತಿವೆ.

“ಜೆರ್ಸಿ ಗಂಡು ಕರು ಹುಟ್ಟಿದರೆ ಏನು ಮಾಡವುದು? ಅದನ್ನು ಕಸಾಯಿಖಾನೆಗೆ ಮಾರಲು ಮನಸು ಬರುವುದಿಲ್ಲ. ಸಣ್ಣ ಕರುವಿದ್ದಾಗ ಹುಳಕ್ಕೆ ಮದ್ದೇ ನೀಡುವುದಿಲ್ಲ. ಆಗ ಅದಾಗಿಯೇ ಹುಳ ಬಿದ್ದು ಸತ್ತು ಹೋಗುತ್ತದೆ.

ಹೀಗೆ ಮಾಡುವುದು ಅನಿವಾರ್ಯ,” ಎನ್ನುತ್ತಾರೆ ಹೈನುಗಾರಿಕೆಯಿಂದಲೇ ಹೊಸ ಮನೆಯೊಂದನ್ನು ದಕ್ಷಿಣ ಕನ್ನಡದಲ್ಲಿ ಕಟ್ಟಿರುವ ಮಹಿಳೆಯೊಬ್ಬರ ಕುಟುಂಬದವರು. ವಿದೇಶಿ ತಳಿಗಳನ್ನು ಹಾಲಿಗಾಗಿ ನೆಚ್ಚಿಕೊಂಡು ಪಶು ಸಂಗೋಪನೆ ಆರಂಭಿಸಿದ ಪರಿಣಾಮಗಳಿವು.ಇವತ್ತು ದೇಶದಲ್ಲಿ ಹಾಲು ಮಾರುಕಟ್ಟೆ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ, ಬೇಡವೆಂದರೂ ಉಕ್ಕಿ ಉಕ್ಕಿ ಬರುವ ಹಾಲಿನ ಪ್ರವಾಹದ್ದೇ ಸಮಸ್ಯೆಯಾಗಿದೆ.

ಸುಮಾರು 1 ಕೋಟಿ ದನಗಳು ಮತ್ತು 35 ಲಕ್ಷ ಬಫೆಲೋಗಳಿರುವ ಕರ್ನಾಟಕದಲ್ಲೇ, ಪ್ರತಿ ನಿತ್ಯ 72 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಸರಕಾರ ರೈತರಿಗೆ ಲೀಟರಿಗೆ ನಾಲ್ಕು ರೂಪಾಯಿ ಸಬ್ಸಿಡಿ ನೀಡಲು ಆರಂಭಿಸಿದ ನಂತರ ಹಾಲಿನ ಹೊಳೆಯೇ ಹರಿದಿದೆ. ಕೆಲವು ವರ್ಷಗಳ ಹಿಂದೆ 55 ಲಕ್ಷ ಲೀಟರ್ ಇದ್ದ ಉತ್ಪಾದನೆ ಈ ಮಟ್ಟಕ್ಕೆ ಬಂದು ನಿಂತಿದೆ. ಬಂದ ಹಾಲಿನ ವಿಲೇವಾರಿಯೇ ಸಮಸ್ಯೆಯಾಗಿದ್ದು ಅನಿವಾರ್ಯವಾಗಿ ಶಾಲಾ ಮಕ್ಕಳಿಗೆ ಹಾಲು ನೀಡುವ ಕಾರ್ಯಕ್ರಮ ಆರಂಭಿಸಲಾಗಿದೆ.

ಇವತ್ತು ಕೋಟಿ ಕೋಟಿ ಕುಟುಂಬಗಳು, ಪಶು ಸಂಗೋಪನೆ ನಂಬಿ ಬದುಕುತ್ತಿವೆ. ಕೋಟ್ಯಾಂತರ ಜನ ಸರಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ದನ ಖರೀದಿಗೆ ಸರಕಾರಗಳು ನೀಡುವ ಸಹಾಯ, ವಿಮೆ, ಬ್ಯಾಂಕ್ ಸಾಲ, ಹೀಗೆ ಇಡೀ ಗೋವಿನ ಸುತ್ತ ವಿಶಿಷ್ಟ ವ್ಯವಹಾರ ಚಕ್ರವೊಂದರ ಸೃಷ್ಟಿಯಾಗಿದೆ.

ಭಾರತದಲ್ಲಿ ಹಾಲು ಸಾವಿರಾರು ಕೋಟಿಯ ಬಹುರಾಷ್ಟ್ರೀಯ ಉದ್ಯಮ. ಅಮುಲ್ ವಾರ್ಷಿಕ 20 ಸಾವಿರ ಕೋಟಿ ಆದಾಯ ಗಳಿಸುತ್ತಿದ್ದರೆ, ಕರ್ನಾಟಕದ ಕೆಎಂಎಫ್ 10 ಸಾವಿರ ಕೋಟಿಗೂ ಮಿಕ್ಕಿ ಆದಾಯ ಗಳಿಸುತ್ತಿದೆ. ಇವುಗಳಿಗೆ ಹಾಲು ತಂದು ಹಾಕುವ ರೈತರ ಬಳಿ ಗಂಡು ಕರುಗಳನ್ನೂ, ಮುದಿಯಾದ ದನಗಳನ್ನೂ ಸಾಕಿ ಎಂದರೆ, ಸಾಕಲು ತಯಾರೆದ್ದಾರೆಯೇ?ಇಷ್ಟಕ್ಕೂ ಕಸಾಯಿಖಾನೆ ನಿಲ್ಲಿಸಿದರೆ ಕೃಷಿಕರಿಗೆ, ಬೀಫ್ ಉದ್ಯಮಿಗಳಿಗೆ ಮಾತ್ರವಲ್ಲ ಇನ್ನೂ ಹಲವರಿಗೆ ತೊಂದರೆಯಾಗಲಿದೆ. ಇವತ್ತು ಕಸಾಯಿಖಾನೆಯಿಂದಲೇ ವೈದ್ಯಕೀಯ ಲೋಕಕ್ಕೆ ಬೇಕಾದ ಹಲವು ವಸ್ತುಗಳು ದೊರಕುತ್ತವೆ. ಅವುಗಳನ್ನು ಅತ್ಯಮೂಲ್ಯ ಔಷಧಿ ತಯಾರಿಕೆ ಮತ್ತು ಶಸ್ತ್ರ ಚಿಕಿತ್ಸೆಗಳಿಗೆಲ್ಲಾ ಬಳಸುತ್ತಾರೆ. ಅವುಗಳ ಬೃಹತ್ ಪಟ್ಟಿಯನ್ನು ಇಲ್ಲಿ ನೀಡಲು ಹೋಗುವುದಿಲ್ಲ.

ಈ ಹಿಂದೆ ಕನ್ನಡದಲ್ಲಿಯೇ ಈ ಕುರಿತು ವಿಸ್ತೃತ ಲೇಖನವೊಂದು ಪ್ರಕಟವಾಗಿದೆ. ಹೀಗಿರುವಾಗ, ಗೋ ಹತ್ಯೆ ನಿಲ್ಲಿಸುವುದಾದರೂ ಹೇಗೆ? ಆ ಕುರಿತು ಮಾತನಾಡುವವರೇ ಉತ್ತರಿಸಬೇಕು.

'ಗೋ ಹತ್ಯೆ ನಿಷೇಧ'ದ ಬ್ರಾಂಡ್:

ಇದೆಲ್ಲಾ ಗೋ ಸಾಮ್ರಾಜ್ಯದ ಆರ್ಥಿಕ ಆಯಾಮವಾದರೆ, ‘ಗೋ’ ಎನ್ನುವ ಶಬ್ಧದಿಂದಲೇ, ಭಾವನಾತ್ಮಕ ನೆಲೆಯಲ್ಲಿ ಆರ್ಥಿಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡವರದ್ದು ಇನ್ನೊಂದು ಕತೆ.

ಇವರಿಗೆ ನಿಜವಾಗಿ, ಗೋ ಹತ್ಯೆ ನಿಷೇಧವಾಗಬೇಕೋ ಅಥವಾ ತಮ್ಮ ಮಾರುಕಟ್ಟೆ ಸೃಷ್ಟಿಸುವ ಉದ್ದೇಶವೋ ಗೊತ್ತಿಲ್ಲ. ಮಠಗಳು, ಸ್ವಾಮೀಜಿಗಳು, ಬಾಬಾ ರಾಮ್ ದೇವ್ ತರಹದ ಯೋಗ ಗುರುಗಳು, ಗೋ ಹತ್ಯೆ ನಿಷೇಧಿಸಿ ಎನ್ನುತ್ತಲೇ ತಮ್ಮ ತಮ್ಮ ಬೃಹತ್ ಆರ್ಥಿಕ, ಧಾರ್ಮಿಕ, ನಂಬಿಕೆಯ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ.ಗೋ ಸಂರಕ್ಷಣೆ ಎಂದು ಕರ್ನಾಟಕದಲ್ಲಿ ದೊಡ್ಡ ಮಟ್ಟಕ್ಕೆ ಅಭಿಯಾನ ಆರಂಭಿಸಿ, ಗೋ ಸಮ್ಮೇಳನದ ಪರಿಕಲ್ಪನೆ ಹುಟ್ಟು ಹಾಕಿದವರು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ.

ಇವತ್ತು ಅವರ ಮಠದ ಆದಾಯ ಎಷ್ಟು ಏರಿಕೆಯಾಗಿದೆ, ಅದರಲ್ಲಿ ಗೋ ಸಮ್ಮೇಳನದ ನಂತರದ ಆದಾಯ ಎಷ್ಟು ಎಂಬುದನ್ನು ಅವರೇ ಹೇಳಬೇಕು. ಕಳೆದ ಬಿಜೆಪಿ ಸರಕಾರವಿದ್ದಾಗಲೇ ರಾಮಚಂದ್ರಾಪುರ ಮಠ, ಗೋವಿನ ಆಚೆಗೂ ಧಾರ್ಮಿಕ ಉತ್ಪತ್ತಿಗಳಿಗೆ ಕೈ ಇಟ್ಟಿತು. ಈ ಹಿನ್ನೆಲೆಯಲ್ಲಿ ಗೋಖರ್ಣ ದೇವಸ್ಥಾನದ ಅಂಗಳಕ್ಕೂ ಕಾಲಿಟ್ಟಿತು. ಈ ಕುರಿತು ಬರೆಯಲು ಹೊರಟರೆ ಅದೊಂದು ಲೋಕಲೈಸ್ ಆದ ವಿಶಿಷ್ಟ 'ಗೋ ಸರಣಿ'ಯೇ ಆಗುತ್ತದೆ.

‘ಗೋ ರಾಜಕೀಯ’- ಭಾಗ 5: ಗೋವು ಎಂಬ ಭಾವನಾತ್ಮಕ ಸಂಗತಿ ಮತ್ತು ನಿಷೇಧ ಎಂಬ ‘ಬ್ರಾಂಡಿಂಗ್’!

ಇದೇ ರೀತಿ ಇನ್ನೂ ಹಲವು ಮಠಗಳು ಗೋ ಸಾಕಣೆಯಲ್ಲಿ ನಿರತವಾಗಿವೆ. ಅವುಗಳೆಲ್ಲಾ ತಕ್ಕ ಮಟ್ಟಿಗೆ ಸುಸ್ಥಿಯಲ್ಲೇ ಇವೆ. ಜನರಿಂದ ದೇಸೀ ತಳಿಗಳು ಮಾಯವಾದ ನಂತರ ಇದೀಗ ಮಠಗಳು ಗೋ ಶಾಲೆಗಳ ಮೂಲಕ ದೇಶಿ ತಳಿ ಉಳಿಸುವ ಪಣ ತೊಟ್ಟಿವೆ. ಹಲವು ಆಯುರ್ವೇದಿಕ್ ಫಾರ್ಮಸಿಗಳು, ಗೋ ಶಾಲೆಗಳು, ಗೋವಿನ ಉತ್ಪನ್ನಗಳನ್ನು ದೊಡ್ಡ ಮಟ್ಟಕ್ಕೆ ಮಾರಾಟದಲ್ಲಿಯೂ ತೊಡಗಿಸಿಕೊಂಡಿವೆ.

“ಊದು ಬತ್ತಿ, ಸೊಳ್ಳೆ ಬತ್ತಿ, ಫೇಸ್ ಕ್ರೀಂ ಸೇರಿದಂತೆ ಸುಮಾರು 10 ಬಗೆಯ ಉತ್ಪನ್ನ ತಯಾರಿಸುತ್ತೇವೆ. ಅದರಲ್ಲಿ ಗೋವಿನ ಅರ್ಕಕ್ಕೆ ಒಳ್ಳೆಯ ಬೇಡಿಕೆ ಇದೆ. ಉಳಿದವುಗಳನ್ನು ಗೋವಿನ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಬರಲಿ ಎಂಬ ಕಾರಣಕ್ಕೆ ತಯಾರಿಸಿ ಮಾರುತ್ತೇವೆ,” ಎನ್ನುತ್ತಾರೆ ಬಂಟ್ವಾಳದ ಭಜರಂಗದಳದ ಗೋ ಶಾಲೆಯ ಸದಸ್ಯರಾದ ವಾಮನ್ ರಾಜ್.

ಆದರೆ ಎಲ್ಲರೂ ಸದಾಭಿಪ್ರಾಯ ಮೂಡಿಸಲೆಂದೇ ಮಾರುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ.ಬಾಬ ರಾಮ್ದೇವ್ ಗೋವು ಹತ್ಯೆ ನಿಷೇಧಿಸಬೇಕು ಎನ್ನುವ ಕೂಗನ್ನು ಆಗಾಗ್ಗೆ ಮೊಳಗಿಸಿ ಸುಮ್ಮನಾಗುತ್ತಿರುತ್ತಾರೆ. ಅವರದ್ದೂ ಒಂದಷ್ಟು ಗೋವಿನ ಉತ್ಪನ್ನಗಳಿವೆ. ಗೋವು, ಸ್ವದೇಶಿ ಎನ್ನುತ್ತಲೇ ಮಾರುಕಟ್ಟಗೆ ಇಳಿದ ಅವರ ಪತಂಜಲಿ ಕಂಪೆನಿ ಈ ವರ್ಷ 10 ಸಾವಿರ ಕೋಟಿ ವ್ಯವಹಾರದ ಗುರಿ ಹಾಕಿಕೊಂಡಿದೆ.

ಕಾರ್ಪೊರೇಟ್ ಸಂಸ್ಥೆಗಳಿಗೂ ಬಾಬಾ ಪತಂಜಲಿ ಕಂಪನಿ ಭರ್ಜರಿ ಪೈಪೋಟಿ ನೀಡುತ್ತಿದೆ.ಇದೇ ಭಜರಂಗದಳ, ರಾಮಚಂದ್ರಾಪುರ ಮಠ, ಬಾಬಾ ರಾಮ್ದೇವ್ ಬೆನ್ನಿಗೆ ನಿಂತವರು ಯಾರು? ಅವರೆಲ್ಲಾ ಏನಾಗಿದ್ದಾರೆ? ಯಾವ ಯಾವ ಪಕ್ಷದಲ್ಲಿದ್ದಾರೆ? ಅವರುಗಳ ಆದಾಯ ಎಷ್ಟು? ಇವರ ಗೋ ರಕ್ಷಣೆ ಕುರಿತು ಕಾಳಜಿ ಯಾವಾಗ, ಯಾಕಾಗಿ ಪ್ರಕಟವಾಗುತ್ತದೆ? ಎಂಬ ಕೆಲವು ಪ್ರಶ್ನೆಗಳನ್ನು ಭಾವನೆಗಳ ಆಚೆಗೆ ಹಾಕಿಕೊಳ್ಳಬೇಕಿದೆ.

ಒಂದಂತೂ ಸತ್ಯ, ಗೋ ನಂಬಿದರನ್ನು ಯಾವತ್ತಿಗೂ ಕೈ ಬಿಟ್ಟಿಲ್ಲ. ಮಾಂಸಾಹಾರಿಗಳಿಂದ ಶುರುವಾಗಿ ಗೋ ರಕ್ಷಣೆಗೆ ಮುಂದಾದವರವರೆಗೆ ಈ ಮಾತು ಅನ್ವಯಿಸುತ್ತದೆ.