samachara
www.samachara.com
‘ಗೋ ರಾಜಕೀಯ’- ಭಾಗ 4: ‘ಭಜರಂಗದಳ’ದವರ ಗೋ ರಕ್ಷಣೆ ಮತ್ತು ತಳಮಟ್ಟದ ವಾಸ್ತವಗಳು!
SPECIAL SERIES

‘ಗೋ ರಾಜಕೀಯ’- ಭಾಗ 4: ‘ಭಜರಂಗದಳ’ದವರ ಗೋ ರಕ್ಷಣೆ ಮತ್ತು ತಳಮಟ್ಟದ ವಾಸ್ತವಗಳು!

ದೇಶದಲ್ಲಿ ಗೋ ಮಾಂಸ ವಿಚಾರವಾಗಿ ಮುಸ್ಲಿಮರ ಮೇಲೆ ಪದೇ ಪದೇ ದಾಳಿಗಳು ನಡೆಯತ್ತಿರುತ್ತವೆ. ಆದರೆ ಗೋ ಮಾಂಸ ರಫ್ತಿನ ಹಿಂದಿರುವವರು ಯಾರು ಎಂದು ಹುಡುಕುತ್ತಾ ಹೋದರೆ ಸಿಗುವುದು ಹಿಂದೂಗಳೇ.

ದೇಶದ ಬೃಹತ್ ಬೀಫ್ ರಫ್ತು ಕಂಪೆನಿಗಳಲ್ಲಿ ಒಂದೋ ಹಿಂದೂಗಳು ಪಾಲುದಾರರಾಗಿದ್ದಾರೆ; ಇಲ್ಲವೇ ಮಾಲಿಕರಾಗಿದ್ದಾರೆ.ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಒಡೆತನಕ್ಕೆ ಸೇರಿದ ಹಿಂದ್ ಆಗ್ರೋ ಇಂಡಸ್ಟ್ರೀಸ್, ಸುನೀಲ್ ಸೂದ್ ಪಾಲುದಾರಿಕೆಯ ಅಲ್ ನೂರ್ ಎಕ್ಸ್‌ಪೋರ್ಟ್ಗಳು ಬೀಫ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿವೆ.

ಇನ್ನು ದೇಶದಲ್ಲಿ ಬೀಫ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಪ್ 6 ಕಂಪೆನಿಗಳಲ್ಲಿ 4 ಹಿಂದೂಗಳ ಒಡೆತನದಲ್ಲಿವೆ. ಸತೀಶ್ ಮತ್ತು ಅತುಲ್ ಸಬರ್ವಾಲ್ ಒಡೆತನದ ಅಲ್ ಕಬೀರ್ ಎಕ್ಸ್‌ಪೋರ್ಟ್ಸ್ ಪ್ರೈ. ಲಿ., ಸುನೀಲ್ ಕಪೂರ್ ಅವರ ಅರೇಬಿಯನ್ ಎಕ್ಸ್‌ಪೋರ್ಟ್ಸ್ ಪ್ರೈ. ಲಿ., ಮದನ್ ಅಬೋಟ್ಗೆ ಸೇರಿದ ಎಂಕೆಆರ್ ಫ್ರೋಜನ್ ಫುಡ್ ಎಕ್ಸ್‌ಪೋರ್ಟ್ಸ್ ಪ್ರೈ. ಲಿ., ಎ. ಎಸ್ ಬಿಂದ್ರಾರ ಪಿಎಂಎಲ್ ಇಂಡಸ್ಟ್ರೀಸ್ ಪ್ರೈ. ಲಿ.

ಇವುಗಳಲ್ಲಿ ಪ್ರಮುಖವಾದವು.ಇದೆಲ್ಲಾ ಒಂದು ಕಡೆಯಾದರೆ, ಇನ್ನೊಂದು ಕಡೆ ಉತ್ತರ ಪ್ರದೇಶದ ಬಿಜೆಪಿ ಎಂಎಲ್ಎ ಒಡೆತನದಲ್ಲೇ ಬೀಫ್ ಕಂಪೆನಿಯೊಂದಿದೆ. ಮುಜಾಫುರಾಬಾದ್ ಗಲಭೆಯ ಪ್ರಮುಖ ಆರೋಪಿ, ಸದಾ ಗೋ ಹತ್ಯೆ ವಿರುದ್ಧ ಮಾತುಗಳನ್ನಾಡುವ ಸಂಗೀತ್ ಸಿಂಗ್ ಸೋಮ್ ‘ಅಲ್ ದುವಾ ಫುಡ್ ಪ್ರೊಸೆಸ್ಸರಿ ಪ್ರೈ. ಲಿ,’ ಎಂಬ ಕಂಪೆನಿಯನ್ನು ಹೊಂದಿದ್ದಾರೆ.

ಮಧ್ಯವರ್ತಿ ಮುಖವಾಡಗಳು:

ಬೀಫ್ ಉತ್ಪಾದನೆಯಾಗಬೇಕಾದರೆ ಕಸಾಯಿಖಾನೆಗೆ ದನಗಳನ್ನು ಸಾಗಿಸಬೇಕು. ಹೀಗೆ ಜಾನುವಾರುಗಳನ್ನು ಸಾಗಿಸುವ ಮಾರ್ಗವೇ ಭಜರಂಗದಳದ ಟಾರ್ಗೆಟ್. ಭಜರಂಗದಳದ ಮಾತೃ ಸಂಸ್ಥೆ ವಿಶ್ವ ಹಿಂದೂ ಪರಿಷತಿನಲ್ಲಿ ಗೋ ರಕ್ಷಾ ಪ್ರಮುಖ್ ಎಂಬ ಹುದ್ದೆಯೇ ಇದೆ. ಗೋ ರಕ್ಷಣೆಯನ್ನು ಸಂಘ ಪರಿವಾರ ಸಂಸ್ಥೆ ತನ್ನ ಅಜೆಂಡಾದಲ್ಲೇ ಸೇರಿಸಿಕೊಂಡಿದೆ.

ಪರವಾನಿಗೆ ಪಡೆದು ಗೋ ಸಾಗಿಸುವುದನ್ನು ಬಿಟ್ಟೂ, ಸಾಮಾನ್ಯವಾಗಿ ಎರಡು ರೀತಿಯಲ್ಲಿ ಜಾನುವಾರುಗಳು ಕಸಾಯಿಖಾನೆಗಳನ್ನು ಸೇರುತ್ತವೆ. ಒಂದು ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸುವುದು. ಇನ್ನೊಂದು ದನಗಳನ್ನು ಯಾರದೋ ಹಟ್ಟಿಯಿಂದ ಕದ್ದು ಸಾಗಿಸುವುದು. ಇಲ್ಲಿ ಎರಡೂ ಅಪರಾಧಗಳೇ.

ಹೀಗೆ ಅಕ್ರಮವಾಗಿ ಸಾಗಣೆ ಮಾಡುವವರ ಮೇಲೆ ಭಜರಂಗದಳದ ಯುವಕರು ದಾಳಿ ಮಾಡುತ್ತಾರೆ. ಬೇರೆ ಬೇರೆ ರಾಜ್ಯಗಳೂ ಸೇರಿದಂತೆ ಕರ್ನಾಟಕದಲ್ಲೂ ಇಂತಹ ದಾಳಿಗಳು ಹಲವಾರು ನಡೆದಿವೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಇವೆಲ್ಲಾ ಮಾಮೂಲಿ. ಹೀಗೆ ದಾಳಿಗಳನ್ನು ನಡೆಸುವವರು ಸಾರ್ವಜನಿಕರ ಬೆಂಬಲ ಗಿಟ್ಟಿಸಿ ಮುಂದೆ ರಾಜಕೀಯಕ್ಕೆ ಬಂದ ಉದಾಹರಣೆಗಳೂ ಇವೆ.

2005ರ ಮಾರ್ಚ್‌ನಲ್ಲಿ ಉಡುಪಿ ಸಮೀಪ ದನದ ವ್ಯಾಪಾರಿಗಳಿಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಅವತ್ತು ಭಾರೀ ಸುದ್ದಿಯಾಗಿತ್ತು. ವಿಧಾನ ಮಂಡಲದಲ್ಲೂ ಸದ್ದು ಮಾಡಿದ ಈ ಘಟನೆಯಲ್ಲಿ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾನಸಿಕವಾಗಿ ಮತ್ತು ಸಾಮಾಜಿಕ ಅವಮಾನದಿಂದ ಜರ್ಝರಿತಗೊಂಡ ದನದ ವ್ಯಾಪಾರಿಗಳು ಕಾನೂನು ಹೋರಾಟದಲ್ಲಿ ಮುಂದೆ ಬರಲಿಲ್ಲ. ಕೊನೆಗೆ 2008ರಲ್ಲಿ ಈ ಪ್ರಕರಣದ 12 ಆರೋಪಿಗಳು ಖುಲಾಸೆಗೊಂಡರು. ಒಬ್ಬ ಆರೋಪಿ ಅಪಘಾತದಿಂದ ಮೃತಪಟ್ಟಿದ್ದ. ಇವರಲ್ಲಿ ಒಬ್ಬ ಮುಂದೆ ಉಡುಪಿ ನಗರಸಭೆ ಸದಸ್ಯನಾದ.

ಇದು ಉದಾಹರಣೆ ಮಾತ್ರ. ಇಂತಹ ಘಟನೆಗಳು ಕರಾವಳಿಯಲ್ಲಿ ಪ್ರತಿನಿತ್ಯ ನಡೆಯುತ್ತಿವೆ. ಮಂಗಳೂರಿಗೆ ಸಮೀಪದಲ್ಲಿರುವ ಕೇರಳ ಬೀಫ್ ವಿಚಾರದಲ್ಲಿ ಸಡಿಲ ಕಾನೂನುಗಳನ್ನು ಹೊಂದಿರುವುದರಿಂದ ಹೊರ ರಾಜ್ಯಕ್ಕೆ ಅಕ್ರಮ ಸಾಗಟ ಮೊದಲಿನಿಂದಲೂ ಇದೆ. ಮಂಗಳೂರು ಅಲ್ಲದೇ, ಚಿಕ್ಕಮಗಳೂರು, ಹಾಸನ, ಕೊಡಗಿನಿಂದಲೂ ಕೇರಳಕ್ಕೆ ದನ ಸಾಗಿಸಲಾಗುತ್ತದೆ. ಹೀಗೆ ಸಾಗಿಸುವ ಮಾಹಿತಿ ಬಂದಾಗೆಲ್ಲಾ ಭಜರಂಗದಳ ಕಾರ್ಯಕರ್ತರು ದಾಳಿ ಮಾಡಿ ಹಲ್ಲೆ ನಡೆಸಿದ್ದಿದೆ.

ಆದರೆ “ಈಗ ದಾಳಿಗಳು ಕಡಿಮೆಯಾಗಿವೆ. ಪ್ರಕರಣಗಳೆಲ್ಲಾ ದಾಖಲಾದ ನಂತರ ಯುವಕರು ದಾಳಿಗೆ ಅಷ್ಟಾಗಿ ಮನಸ್ಸು ಮಾಡುವುದಿಲ್ಲ,” ಎನ್ನುತ್ತಾರೆ ಬಂಟ್ವಾಳದ ಪಜೀರಿನ ಭಜರಂಗದಳದ ಗೋಶಾಲೆ ಸಮಿತಿ ಸದಸ್ಯರಾಗಿರುವ ವಾಮನ್ ರಾಜ್.ಆದರೆ ಇದಕ್ಕೆ ಬೇರೆಯದೇ ಕಾರಣಗಳಿವೆ ಎನ್ನುತ್ತಾರೆ ಮಂಗಳೂರು ಮೂಲದ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು.

“ಇಲ್ಲಿನ ಭಜರಂಗದಳ ಕಾರ್ಯಕರ್ತರು ಪೊಲೀಸರೆಲ್ಲಾ ‘ಮಾಮೂಲಿ’ ಪಡೆಯುವಲ್ಲಿ ನಿರತರಾಗಿದ್ದಾರೆ,” ಎಂದು ಆಪಾದಿಸುತ್ತಾರೆ ದನದ ವ್ಯಾಪಾರಿಯೊಬ್ಬರು. ಇತ್ತೀಚೆಗೆ ಯಾವ ಭಜರಂಗದಳದ ಕಾರ್ಯಕರ್ತರೂ ದಾಳಿ ಮಾಡಲು ಬರುವುದಿಲ್ಲ ಕಾರಣ ಅವರೆಲ್ಲಾ ಕಳ್ಳ ಸಾಗಣೆ ಮಾಡುವವರ ಜೊತೆ ಕೈ ಜೋಡಿಸಿದ್ದಾರೆ ಎಂದು ಅವರು ಆಪಾದಿಸುತ್ತಾರೆ. 10 ಗಾಡಿಗಳು ಹೋದರೆ ಒಂದು ಗಾಡಿಯನ್ನಷ್ಟೇ ಪೊಲೀಸರು ತಡೆಯುವ ಪ್ರಯತ್ನ ಮಾಡುತ್ತಾರೆ ಎನ್ನುವ ಮಾಹಿತಿಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಇದಿಷ್ಟೇ ಅಲ್ಲ. ಹಣಗಳಿಸಲು ಭಜರಂಗದಳ ಬೇರೆ ಬೇರೆ ಮಾರ್ಗ ಅನುಸರಿಸಿದೆ ಎಂಬ ಮಾಹಿತಿಗೂ ಲಭ್ಯವಾಗುತ್ತವೆ. “ಭಜರಂಗದಳದವರು ಒಮ್ಮೊಮ್ಮೆ ಬೇಕೆಂದೇ ದಾಳಿ ಮಾಡುತ್ತಾರೆ. ತಂದೆ ದನಗಳು ಮಾರಿದರೆ, ಮಗ ಬೇಕೆಂದೇ ಜನ ಸೇರಿಸಿ ಅವುಗಳನ್ನು ಸಾಗಿಸುವಾಗ ದಾಳಿ ಮಾಡುತ್ತಾನೆ. ಇದರಿಂದ ತಂದೆಗೆ ದನ ವಾಪಸ್ಸು ಸಿಗುತ್ತದೆ; ಜೊತೆಗೆ ಹಣವೂ,” ಎನ್ನುತ್ತಾರೆ ಕರಾವಳಿಯ ದನದ ವ್ಯಾಪಾರಿಯೊಬ್ಬರು. ಹೀಗಾದಾಗ “ಪೆಟ್ಟು ತಿಂದು ಹಾಸ್ಪಿಟಲಿನಲ್ಲಿ ಮಲಗಬೇಕು, ಕೇಸೂ ನಮ್ಮ ಮೇಲೆಯೇ,” ಎನ್ನುವುದು ಅವರ ಮಾತು.

ಇದಲ್ಲದೇ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವುದೇ 5 ಕಸಾಯಿಖಾನೆಗಳು. ಆದರೆ ಬೇಡಿಕೆ ಈಡೇರಿಸಲು ಸ್ಥಳೀಯವಾಗಿ ಅಕ್ರಮ ಕಸಾಯಿಖಾನೆಗಳು ನಡೆಯುತ್ತವೆ. “ಪೊಲೀಸರಿಗೆ ಮತ್ತು ಭಜರಂಗದಳ ಕಾರ್ಯಕರ್ತರಿಗೆ ಗೊತ್ತಾಗದೆ ಇವೆಲ್ಲಾ ನಡೆಯಲು ಸಾಧ್ಯವೇ ಇಲ್ಲ,” ಎನ್ನುತ್ತಾರೆ ಯಾಸೀನ್ ಕುದ್ರೋಳಿ. “ಈ ಕಸಾಯಿಖಾನೆಗಳಿಂದ ನಿರಂತರ ಮಾಮೂಲಿ ಪೊಲೀಸರಿಗೆ ಮತ್ತು ಭಜರಂಗದಳಕ್ಕೆ ಸಂದಾಯವಾಗುತ್ತದೆ,” ಎನ್ನುತ್ತಾರೆ ಮಂಗಳೂರಿನ ಪತ್ರಕರ್ತರೊಬ್ಬರು.

ಈ ರೀತಿ ಭಜರಂಗದಳ ಕಾರ್ಯಕರ್ತರು ‘ಹಪ್ತಾ ವಸೂಲಿ’ ಮಾಡುವ ವಿಚಾರವನ್ನು ರಾಷ್ಟ್ರೀಯ ಮಾಧ್ಯಮಗಳೂ ತಮ್ಮ ತನಿಖಾ ವರದಿಗಳ ಮೂಲಕ ಹೊರತರುತ್ತಿವೆ. ಇತ್ತೀಚೆಗೆ ದೇಶದೆಲ್ಲೆಡೆ ಸಂಘ ಪರಿವಾರದ ಕಾರ್ಯಕರ್ತರ ಕಿತಾಪತಿಗಳನ್ನು 'ಇಂಡಿಯಾ ಟುಡೇ'- 'ಆಪರೇಶನ್ ಹೋಲಿ ಕೌ ಹೆಸರಿನಲ್ಲಿ ಮತ್ತು ಟೈಮ್ಸ್ ನೌ ವಾಹಿನಿ 'ಕೌ ಬ್ರಿಗೇಡ್ ಎಕ್ಸ್ ಪೋಸ್ಡ್ ಎಂಬ ಹೆಸರಿನಲ್ಲಿ ಬಯಲಿಗೆಳೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭಜರಂಗದಳದ ಕಾರ್ಯಕರ್ತರು ಅಥವಾ ಪೊಲೀಸರೇ ದನ ಸಾಗಾಟವನ್ನು ತಡೆದು ಜಾನುವಾರುಗಳನ್ನು ವಶಕ್ಕೆ ಪಡೆಯುತ್ತಾರೆ. ಹೀಗೆ ವಶಕ್ಕೆ ಪಡೆದ ಜಾನುವಾರುಗಳು ಕದ್ದವಾಗಿದ್ದರೆ ಮಾಲಿಕರಿಗೆ ಹಿಂದುರುಗಿಸುತ್ತಾರೆ. ಆದರೆ ಅಕ್ರಮ ಸಾಗಾಟದ ದನಗಳಾದರೆ ಕೋರ್ಟಿಗೆ ಒಪ್ಪಿಸುತ್ತಾರೆ. ಕೊನೆಗೆ ಕೋರ್ಟ್ ಸಾಕಲು ಇಷ್ಟವಿದ್ದವರಿಗೆ, ಗೋ ಶಾಲೆಗಳಿಗೆ ದನಗಳನ್ನು ಒಪ್ಪಿಸುತ್ತದೆ. ಮಠಗಳು ಮತ್ತು ಭಜರಂಗದಳ ನಡೆಸುವ ಗೋಶಾಲೆಗಳು ಈ ದನಗಳನ್ನು ಪಡೆದುಕೊಂಡು ಸಾಕುತ್ತವೆ. ಒಪ್ಪಿಸಿದ ದನಗಳು ಹೇಗಿವೆ ಎನ್ನುವ ಮೇಲ್ವಿಚಾರಣೆ ಆಯಾ ಸ್ಥಳೀಯ ಪೊಲೀಸರದ್ದು.

‘’ಹೀಗೆ ವಶಕ್ಕೆ ಪಡೆದ ಗೋವುಗಳನ್ನೇ ಕೇರಳಕ್ಕೆ ರಾತ್ರಿ ಹೊತ್ತು ಕದ್ದು ಸಾಗಿಸುತ್ತಾರೆ,'' ಎಂಬ ಆರೋಪಗಳನ್ನು ದನದ ವ್ಯಾಪಾರಿಗಳು ಭಜರಂಗದಳದ ಮೇಲೆ ಮಾಡುತ್ತಾರೆ. ಪೊಲೀಸರು ಬಂದು ಕೇಳಿದಾಗ ಮೇಯಲು ಬಿಟ್ಟ ದನಗಳು ತಪ್ಪಿಸಿಕೊಂಡವು ಎಬುದಾಗಿ ಸುಳ್ಳು ಹೇಳುತ್ತಾರೆ ಎಂಬ ಆರೋಪಗಳನ್ನು ಇವರು ಮಾಡುತ್ತಾರೆ.

ಆದರೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸುವ ಬಂಟ್ವಾಳದ ಪಜೀರಿನ ಭಜರಂಗದಳ ಗೋಶಾಲೆ ಸಮಿತಿಯ ಸದಸ್ಯರಾಗಿರುವ ವಾಮನ್ ರಾಜ್, ''ನಾವು ಹಾಗೆ ಕಸಾಯಿಖಾನೆಗೆ ದನಗಳನ್ನು ನೀಡುವುದೇ ಇಲ್ಲ,'' ಎನ್ನುತ್ತಾರೆ.

''ಭಜರಂಗದಳ ಗೋ ರಕ್ಷಣೆಗೆ ಎಂದು ಇಳಿದು ಈಗ ಕೈ ಸುಟ್ಟುಕೊಳ್ಳವು ಪರಿಸ್ಥಿತಿಗೆ ಬಂದಿದೆ. ಬಂಟ್ವಾಳದ ಪಜೀರಿನ ಗೋಶಾಲೆಯಲ್ಲಿ ಇವತ್ತು 375 ದನಗಳಿವೆ. ಆದರೆ ಎರಡು ವರ್ಷ ಹಿಂದೆ ಇವುಗಳನ್ನು ಸಾಕುವ ಶಕ್ತಿಯೂ ಅವರ ಕೈಯಲ್ಲಿ ಇರಲಿಲ್ಲ. ಕೊನೆಗೆ ಹೇಗೇಗೋ ದುಡ್ಡು ಹೊಂದಿಸಿದೆವು,'' ಎನ್ನುತ್ತಾರೆ ವಾಮನ್ ರಾಜ್.

ಇವತ್ತು ಈ ಬೀಫ್, ಗೋ ರಕ್ಷಕರ ದಾಂಧಲೆಗಳು ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಡಿತಕ್ಕೂ ಇದು ಸಿಗದಾಗಿದೆ. ಒಂದೊಮ್ಮೆ ಗೋ ಹತ್ಯೆ ನಿಷೇಧಿಸಿದರೆ ಗೊಡ್ಡು ದನಗಳ ಹೊರೆಯೂ ತಲೆ ಮೇಲೆ ಬಿದ್ದು ರೈತರ ಆತ್ಮಹತ್ಯೆ ಹೆಚ್ಚಾಗಬಹುದು ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದ್ದರು.

ಅತ್ತ ಪಿಂಕ್ ರಿವಲ್ಯೂಷನ್ ಎಂದು ಕಿಡಿಕಾರುತ್ತಿದ್ದ ಮೋದಿಗೆ ಅದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ತನ್ನದೇ ಮಾತೃ ಸಂಸ್ಥೆಯ ಗೋ ರಕ್ಷಕರ ಕೃತ್ಯಗಳು ಸರಕಾರಕ್ಕೂ ಕೆಟ್ಟ ಹೆಸರು ತರುತ್ತಿವೆ. 'ನನ್ನನ್ನು ಕೊಲ್ಲಿ', 'ನಕಲಿ ಗೋ ರಕ್ಷಕರು' ಅಂತೆಲ್ಲಾ ಪ್ರಧಾನಿಯೊಬ್ಬರ ಬಾಯಲ್ಲಿ ಪದಗಳು ಹೊರಬರುತ್ತಿವೆ.ಗೋ ರಕ್ಷಣೆ, ಅದರ ಸುತ್ತ ಬೆಳೆದು ನಿಂತ ಅಕ್ರಮ ಉದ್ಯಮಗಳ ನಡುವೆಯೇ ಗೋವು, ಗೋ ಉತ್ಪನ್ನ ಎಂದು ‘ಟಿಪಿಕಲ್’ ಬಿಜಿನೆಸ್ ಒಂದು ತಲೆ ಎತ್ತಿದೆ. ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಈ ಉದ್ಯಮದ ಅಂತರಾಳದಲ್ಲಿ ಇನ್ನಷ್ಟು ಕುತೂಹಲಕಾರಿ ಮಾಹಿತಿ ಇವೆ.