samachara
www.samachara.com
‘ಗೋ ರಾಜಕೀಯ’- ಭಾಗ 3: ಗೋ ರಕ್ಷಣೆಗೂ ಮುನ್ನ ಬೀಫ್ ರಫ್ತು ಉದ್ಯಮದ ಅಂತರಾಳಕ್ಕೆ ಕಾಲಿಟ್ಟು ನೋಡಿ!
SPECIAL SERIES

‘ಗೋ ರಾಜಕೀಯ’- ಭಾಗ 3: ಗೋ ರಕ್ಷಣೆಗೂ ಮುನ್ನ ಬೀಫ್ ರಫ್ತು ಉದ್ಯಮದ ಅಂತರಾಳಕ್ಕೆ ಕಾಲಿಟ್ಟು ನೋಡಿ!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ರಾಜಕೀಯ ತಂತ್ರವೊಂದು ಸಾಮಾನ್ಯ ಜನರನ್ನು ಹೇಗೆ ಹಾದಿ ತಪ್ಪಿಸಬಹುದು ಎಂಬುದಕ್ಕೆ ಇದಕ್ಕಿಂದ ಉತ್ತಮ ಉದಾಹರಣೆ ಬೇಕಾಗಿಲ್ಲ. ದೇಶದ 22 ರಾಜ್ಯಗಳಲ್ಲಿ ಗೋ ಹತ್ಯೆಗೆ ನಿಷೇಧವಿದೆ. ಹೀಗಿದ್ದೂ ಜಾಗತಿಕವಾಗಿ ಬೀಫ್ ಉತ್ಪಾದನೆಯಲ್ಲಿ ಭಾರತವೇ ಮುಂಚೂಣಿಯಲ್ಲಿದೆ.

ದೇಶದ ಬೀಫ್ ಉತ್ಪಾದನೆಯಲ್ಲಿ ಕೋಣ ಮತ್ತು ಎಮ್ಮೆಯ ಮಾಂಸ ಮಾತ್ರ ಸೇರಿದೆ ಎನ್ನುವ ಮಾಹಿತಿ ನೀಡುತ್ತದೆ, ‘ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ' (ಅಪೆದ). ಆದರೆ ಇದು ಸುಳ್ಳು ಎಂಬುದು ಎಲ್ಲರಿಗೂ ಗೊತ್ತಿದೆ.

“ಮುದಿಯಾದ, ಗೊಡ್ಡು ದನಗಳನ್ನು ಕಸಾಯಿ ಮಾಡಲು ಅವಕಾಶಗಳಿವೆ. ಕರ್ನಾಟಕದಲ್ಲಿ ಪಶು ವೈದ್ಯರ ಅನುಮತಿ ಪಡೆದು ದನಗಳನ್ನು ಕಡಿಯಬಹುದು,” ಎನ್ನುತ್ತಾರೆ ಇದೇ ಉದ್ಯಮ ನಡೆಸುವ ಮಂಗಳೂರಿನ ಯಾಸೀನ್ ಕುದ್ರೋಳಿ.ದೇಶದಲ್ಲಿ ಒಟ್ಟು 8.8 ಕೋಟಿ ಎಮ್ಮೆ-ಕೋಣಗಳಿದ್ದು, ವಿಶ್ವದಲ್ಲಿರುವ ಬಫೆಲೋಗಳಲ್ಲಿ ಭಾರತದ ಪಾಲು ಶೇಕಡಾ 58. ದೇಶದಲ್ಲಿ ಹಲವಾರು ಅತ್ಯಾಧುನಿಕ ಕಸಾಯಿಖಾನೆ ಮತ್ತು ಸಂಸ್ಕರಿಸುವ ಘಟಕಗಳಿದ್ದು, ಒಂದು ಪೂರ್ಣ ಪ್ರಮಾಣದ ಯಾಂತ್ರೀಕೃತ ಘಟಕವೂ ಇದೆ.

ಸದ್ಯ ದೇಶದಲ್ಲಿ 24 ಸಂಸ್ಕರಣ ಘಟಕಗಳಿದ್ದು, 13 ಘಟಕಗಳು ಕೇವಲ ರಫ್ತು ಉದ್ಯಮವನ್ನೇ ನಡೆಸುತ್ತವೆ. ಕಳೆದ ವರ್ಷ ದೇಶದಲ್ಲಿ 3 ಹೊಸ ರಫ್ತು ಕಂಪೆನಿಗಳಿಗೆ ಕೇಂದ್ರ ಸರಕಾರ ಪರವಾನಗೆ ನೀಡಿದೆ. ಸದ್ಯ ದೇಶದಲ್ಲಿ ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳು ಬೀಫ್ ಉತ್ಪಾದನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿವೆ.ದೇಶದಲ್ಲಿ ಬಾಸುಮತಿ ಅಕ್ಕಿಯನ್ನೂ ಹಿಂದಿಕ್ಕಿ ಬೀಫ್ ರಫ್ತಿನಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.

2015ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ 27 ಸಾವಿರ ಕೋಟಿ ಮೌಲ್ಯದ 13 ಲಕ್ಷ ಟನ್ ಬೀಫ್ ರಫ್ತಾಗಿದೆ ಎಂಬ ಮಾಹಿತಿಯನ್ನು ‘ಅಪೆದ’ ನೀಡುತ್ತದೆ. ಆದರೆ ಅಮೆರಿಕಾ ಕೃಷಿ ಇಲಾಖೆ ಪ್ರಕಾರ ಭಾರತ 24 ಲಕ್ಷ ಟನ್ ಬೀಫನ್ನ ಕಳೆದ ವರ್ಷ ರಫ್ತು ಮಾಡಿದೆ. ಎರಡೂ ಅಂಕಿ ಅಂಶಗಳಲ್ಲಿ ವ್ಯತ್ಯಾಸವಿದ್ದರೂ ಭಾರತ ನಂಬರ್ ವನ್ ಸ್ಥಾನದಲ್ಲಿರುವುದಂತೂ ಸತ್ಯ.

ಒಟ್ಟಾರೆ ಜಾಗತಿಕ ಬೀಫ್ ಉತ್ಫಾದನೆಯಲ್ಲಿ ಕಾಲು ಭಾಗ (ಶೇಕಡಾ 23.5) ಭಾರತದ ಪಾಲಿದೆ.ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುಂಚೆ ಬೀಫ್ ಉತ್ಪಾದನೆಯ ವಿರುದ್ಧ ‘ಪಿಂಕ್ ರೆವಲ್ಯೂಷನ್’ ಎಂದು ಕಿಡಿ ಕಾರುತ್ತಿದ್ದರು. ವಾಸ್ತವ ಏನೆಂದರೆ, ಅವರೇ ಪ್ರಧಾನಿಯಾದ ಬಳಿಕ ದೇಶದ ಬಿಫ್ ಉತ್ಪಾದನೆ ಏರುಗತಿಯಲ್ಲಿದ್ದು ಶೇಕಡಾ 14ರ ದರದಲ್ಲಿ ಬೆಳವಣಿಗೆ ಕಾಣುತ್ತಿದೆ.

ಈ ವರ್ಷ ಬೀಫ್ ರಫ್ತಿನ ಮೌಲ್ಯ 30 ಸಾವಿರ ಕೋಟಿ ದಾಟುವ ನಿರೀಕ್ಷೆಯಿದೆ. ಭಾರತದಿಂದ ರಫ್ತಾಗುವ ಶೇಕಡಾ 80 ಬೀಫ್ ಏಷಿಯಾ ದೇಶಗಳಲ್ಲೇ ಬಿಕರಿಯಾಗುತ್ತದೆ. ವಿಯೆಟ್ನಾಂ, ಮಲೇಷಿಯಾ, ಈಜಿಪ್ಟ್, ಸೌದಿ ಅರೇಬಿಯಾ, ಯುಎಇ, ಇರಾಕ್ ದೇಶಗಳು ಭಾರತದಿಂದ ದೊಡ್ಡ ಮಟ್ಟದಲ್ಲಿ ಬೀಫ್ ಖರೀದಿಸುತ್ತವೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಕಸಾಯಿಖಾನೆಗಳ ಮೇಲಿನ ನಿರ್ಬಂಧದ ನಂತರ ಉದ್ಯಮದ ಒಳಸುಳಿಗಳು ಬದಲಾಗಿವೆ. ಈ ಕುರಿತು ಅಂಕಿ ಅಂಶಗಳಿನ್ನೂ ಅಭ್ಯವಾಗಬೇಕಿದೆ.

ಉದ್ಯಮದ ಒಳಸುಳಿಗಳು:

ಎಲ್ಲಾ ಉದ್ಯಮಗಳೂ ಒಂದು ರೀತಿ ನಡೆದರೆ, ಬೀಫ್ ಉದ್ಯಮ ನಡೆಯುವುದೇ ಮತ್ತೊಂದು ರೀತಿ. ಇದು ಒಂತರಾ ಹಲವು ಸ್ತರಗಳ ಉದ್ಯಮ. “ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಒಟ್ಟು 5 ಅಧಿಕೃತ ಕಸಾಯಿಖಾನೆಗಳಿವೆ. ಮಂಗಳೂರು, ಬೆಂಗಳೂರು, ಮೈಸೂರು, ಮಂಡ್ಯ ಹೊರವಲಯ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಕಸಾಯಿಖಾನೆಗಳಿವೆ.

ಭಟ್ಕಳದಲ್ಲಿಯೂ ಹಿಂದೆ ಇತ್ತು; ಆದರೆ ಈಗ ಮುಚ್ಚಿದೆ,” ಎನ್ನುವ ಮಾಹಿತಿಯನ್ನು ಕರ್ನಾಟಕ ಮಾಂಸ ಉತ್ಪಾದಕರ ಸಂಘದ ಉಪಾಧ್ಯಕ್ಷ ಅಲಿ ಹಸನ್ ಹಂಚಿಕೊಳ್ಳುತ್ತಾರೆ. ಇವಲ್ಲದೇ ಅನಧಿಕೃತ ಕಸಾಯಿಖಾನೆಗಳು ಸಾಕಷ್ಟಿವೆ ಎನ್ನುವ ಮಾಹಿತಿಯನ್ನೂ ಅವರು ನೀಡುತ್ತಾರೆ.

“ಬೀಫ್ಗೆ ವಿಪರೀತ ಬೇಡಿಕೆ ಇದೆ, ಇರುವುದು ಐದೇ ಕಸಾಯಿಖಾನೆಗಳು. ಹಾಗಾದರೆ ಉಳಿದ ಮಾಂಸ ಎಲ್ಲಿಂದ ಬರುತ್ತದೆ ಎಂಬುದನ್ನು ನೀವೇ ಊಹಿಸಿ,” ಎನ್ನುತ್ತಾರೆ ಅವರು.

ಕಸಾಯಿಖಾನೆಗಳಲ್ಲದೇ ದನದ ಮಾಂಸವನ್ನು ಮಾರಾಟ ಮಾಡಲು ಅಂಗಡಿಗಳಿಗೂ ಸರಕಾರ ಪರವಾನಿಗೆ ನೀಡಿರುತ್ತದೆ. ಉದಾಹರಣೆಗೆ ಮಂಗಳೂರು ನಗರದಲ್ಲಿ ಈ ರೀತಿ ಪರವಾನಿಗೆ ಪಡೆದ 28 ಅಂಗಡಿಗಳಿವೆ. “ಇವತ್ತು ಬೀಫ್ ಬಿಸಿನೆಸ್ ಹಿಂದಿನಂತಿಲ್ಲ. ಬೇಕಾದಷ್ಟು ದನಗಳು ಸಿಗುವುದಿಲ್ಲ. ಕಸಾಯಿಖಾನೆಗೆ ನೇರವಾಗಿ ತರುವವರು ತುಂಬಾ ಕಡಿಮೆ. ಹೀಗಾಗಿ ಲೈಸೆನ್ಸ್ ಪಡೆದ ಅಂಗಡಿಗಳಿಗೆ ಮಾಂಸ ಬೇಕಾದರೆ ಅವರೇ ದನ ಹುಡುಕಿ ತಂದು ಕಸಾಯಿಖಾನೆಯಲ್ಲಿ ಕಡಿಯುತ್ತಾರೆ,” ಎನ್ನುತ್ತಾರೆ ಯಾಸೀನ್ ಕುದ್ರೋಳಿ.

ಇವರಿಗೆ ದನ ತಂದುಕೊಡಲೇಂದೇ ಒಂದಷ್ಟು ಬ್ರೋಕರುಗಳು ಇರುತ್ತಾರೆ. ಇವರೆಲ್ಲಾ ಊರೂರು ಸುತ್ತಿ ಮುದಿ, ಗೊಡ್ಡು ದನಗಳನ್ನು ತುಂಬಿ ತಂದು ಅಂಗಡಿ ಮಾಲಿಕರಿಗೆ ಮಾರುತ್ತಾರೆ. ಹೀಗೆ ಹಳ್ಳಿಗಳಿಂದ ತರುವ ಮೊದಲು, “ಜಾನುವಾರಿಗೆ 13 ವರ್ಷ ಮೀರಿರಲೇಬೇಕು, ದನ ಕರು ಹಾಕುವುದಿಲ್ಲ, ಮುದಿಯಾಗಿದೆ ಎನ್ನುವುದಕ್ಕೆ ಅಲ್ಲಿನ ಸ್ಥಳೀಯ ವೈದ್ಯಾಧಿಕಾರಿ ದೃಢೀಕರಣ ಪತ್ರ ನೀಡಬೇಕು. ಪತ್ರದಲ್ಲಿ ದನಗಳ ಆಯಸ್ಸು, ಉದ್ದ, ಅಗಲ, ಕೊಂಬಿನ ಉದ್ದ, ಬಣ್ಣ ಎಲ್ಲಾ ವಿವರಗಳನ್ನೂ ನಮೂದಿಸಿರುತ್ತಾರೆ. ಇವುಗಳ ಸಾಗಾಟಕ್ಕೂ ನಿಯಮಗಳಿವೆ. ಒಂದು ಟೆಂಪೋದಲ್ಲಿ 6 ದನಗಳನ್ನು ನಿಲ್ಲಿಸಿ ಸಾಗಿಸಬೇಕು. ಅಲ್ಲಿ ಅವುಗಳಿಗೆ ಬೇಕಾದ ಮೇವು, ನೀರಿನ ವ್ಯವಸ್ಥೆ ಇರಬೇಕು,” ಎನ್ನುತ್ತಾರೆ ಅಲಿ ಹಸನ್.

ಆದರೆ ಇದೆಲ್ಲಾ ಪಾಲನೆಯಾಗುವುದಿಲ್ಲ ಎನ್ನುವುದು ಬೇರೆ ಮಾತು.ಹೀಗೆ ಬಂದ ದನ ಕಸಾಯಿಖಾನೆಯಲ್ಲಿ ಪಶು ವೈದ್ಯಾಧಿಕಾರಿಯಿಂದ ಮತ್ತೊಮ್ಮೆ ತಪಾಸಣೆಗೆ ಒಳಗಾಗುತ್ತದೆ.

“ಇವತ್ತು ಬೆಳಿಗ್ಗೆ, ಈ ಜಾನುವಾರು ಕಡಿಯಲು ಅರ್ಹ ಎಂದು ಗುರುತು ಹಾಕಿದರೆ, ಮರು ದಿನ ಬೆಳಿಗ್ಗೆ 5.30 ರಿಂದ 10.30ರ ಒಳಗೆ ಕಡಿಯಬೇಕು. ಕಡಿದು ಆದ ಮೇಲೆ ಮಾಂಸವನ್ನು ಮತ್ತೆ ಟೆಸ್ಟ್ ಮಾಡಿ, ಇದು ಮಾಂಸಕ್ಕೆ ಅರ್ಹ ಎಂದು ಹೇಳಿದ ನಂತರವಷ್ಟೆ, ಬೀಫ್ ವ್ಯಾಪಾರಿಗಳು ಮಾರಾಟಕ್ಕೆ ತೆಗೆದುಕೊಳ್ಳಬೇಕು,” ಎಂಬ ನಿಯಮಗಳಿರುವುದನ್ನು ಯಾಸೀನ್ ಕುದ್ರೋಳಿ ವಿವರಿಸುತ್ತಾರೆ.

“ಮಾಂಸಕ್ಕೆ ಅರ್ಹ ಅಲ್ಲ ಎಂದಾದಲ್ಲಿ ಮುಸ್ಲಿಮರ ಹರಕೆಗಳಾದ ಅಕಿಕಾ ಮತ್ತು ಸದಕಾಗಳಿಗೆ ಬಳಸುತ್ತಾರೆ,” ಎಂಬ ಮಾಹಿತಿಯನ್ನು ಅಲಿ ಹಸನ್ ನೀಡುತ್ತಾರೆ.

ಒಂದು ದನವನ್ನು ಹೀಗೆ ಕಸಾಯಿಖಾನೆಯಲ್ಲಿ ಕಡಿಯಲು 160-180 ರೂಪಾಯಿ ನೀಡಬೇಕು. ಪ್ರತಿ ವರ್ಷ ಕಸಾಯಿಖಾನೆಯನ್ನು ಹರಾಜು ಹಾಕಲಾಗುತ್ತದೆ. ಅದನ್ನು ಕೊಂಡವರು ಆ ವರ್ಷ ಕಸಾಯಿಖಾನೆ ನಿರ್ವಹಿಸುತ್ತಾರೆ. ಸದ್ಯ ಕರ್ನಾಟಕದಲ್ಲಿ ಬೋನ್ ಮಾಂಸ 200, ಹಾಗೂ ಬೋನ್ ಲೆಸ್ 250ರ ಆಸುಪಾಸಿನಲ್ಲಿ ಮಾರಾಟವಾಗುತ್ತದೆ. ಬೇಡಿಕೆ ಜಾಸ್ತಿಯಾದಾಗ ಮಾತ್ರ 10-20 ರೂಪಾಯಿ ಏರಿಕೆಯಾಗುತ್ತದೆ.

ಕಸಾಯಿಖಾನೆಗಳಲ್ಲಿ ಮಾಂಸ ವ್ಯಾಪಾರದ ಜತೆಗೆ ಚರ್ಮದ ವ್ಯಾಪಾರವೂ ನಡೆಯುತ್ತದೆ. “ಜಾನುವಾರುಗಳ ಚರ್ಮ ಸುಲಿದು ಉಪ್ಪು ಹಾಕಿ ಇಡುತ್ತೇವೆ. ನಂತರ ತಮಿಳುನಾಡಿನ ಈರೋಡ್, ಆಂಬುರ್, ಪೆರ್ನಾಂಬುಟ್, ರಾಣಿಪೇಟೆಗೆ ಕೊಡುತ್ತೇವೆ. ಇಲ್ಲಿ ಚರ್ಮ ಸಂಸ್ಕರಿಸುವು 150 ಕಂಪೆನಿಗಳಿವೆ. ಅಲ್ಲಿ ಸಂಸ್ಕರಿಸಿದ ಚರ್ಮ ಚೆನ್ನೈ ತಲುಪುತ್ತದೆ. ಅಲ್ಲಿಗೆ ವಿದೇಶಗಳಿಂದ ಖರೀದಿಗೆ ಬರುತ್ತಾರೆ,” ಎನ್ನುತ್ತಾರೆ ಯಾಸೀನ್ ಕುದ್ರೋಳಿ.

ಸದ್ಯ ಕರ್ನಾಟಕದಲ್ಲಿ ಚರ್ಮಕ್ಕೆ ಬೇಡಿಕೆ ಇಲ್ಲ. ಹಾಗೆ ನೋಡಿದರೆ ಕರ್ನಾಟದ ಬೀಫ್ ವಿದೇಶಗಳಿಗೆ ಹೋಗುವುದೂ ಕಡಿಮೆ. “ಇಲ್ಲಿ ಮಾಂಸದ ಬೇಡಿಕೆಯೇ ಜಾಸ್ತಿ ಇದೆ, ಪೂರೈಕೆ ಸಾಲುತ್ತಿಲ್ಲ,” ಎನ್ನುತ್ತಾರೆ ಯಾಸೀನ್. ಹಬ್ಬದ ಸಂದರ್ಭಗಳಲ್ಲಿ ಕೊರತೆ ನೀಗಿಸಲು ಪಕ್ಕದ ಹಾಸನ ಮತ್ತು ಚಿಕ್ಕಮಗಳೂರಿನ ಕಡೆಯಿಂದ ದನಗಳನ್ನು ತರಲಾಗುತ್ತದೆ ಎನ್ನುತ್ತಾರೆ ಯಾಸೀನ್.

ಹುಬ್ಬಳ್ಳಿ-ಧಾರವಾಡದಿಂದ ಫ್ರೀಜರುಗಳಲ್ಲಿ ಸ್ವಲ್ಪ ಪ್ರಮಾಣದ ಬೀಫನ್ನು ಗುಜರಾತಿಗೆ ಸಾಗಿಸಿ ಅಲ್ಲಿಂದ ಎಕ್ಸ್‌ಪೋರ್ಟ್‌ ಮಾಡಲಾಗುತ್ತದೆ. ಕರ್ನಾಟಕದ ಆಸುಪಾಸು ಕೊಚ್ಚಿ, ಗೋವಾಗಳಿಂದ ನೇರವಾಗಿ ವಿದೇಶಗಳಿಗೆ ಬೀಫ್ ರಫ್ತಾಗುತ್ತದೆ.ಇದು ಬೀಫ್ ವ್ಯವಹಾರದ ಒಂದು ಮುಖ.

ಆದರೆ ಬೀಫ್ ಉದ್ಯಮಕ್ಕೆ ಇನ್ನೊಂದು ಮುಖವಿದೆ. ಕಸಾಯಿಖಾನೆಗೆ ದನಗಳ ಕಳ್ಳ ಸಾಗಣೆ, ಅವುಗಳ ಬೆನ್ನು ಬೀಳುವ ಭಜರಂಗದಳ. ಈ ದಾಳಿಗಳನ್ನು ನಡೆಸಿಯೇ ರಾಜಕೀಯ ಪ್ರವರ್ಧಮಾನಕ್ಕೆ ಬಂದವರು; ಹೀಗೆ ಇದೊಂದು ಮಾಯಾವಿ ಬಲೆ. ಗೋ ಹತ್ಯೆಯ ರಾಜಕೀಯ ಮುಖ, ಗೋವು ಸಾಕಣೆ ಮಾಡುತ್ತಾ ಮಠ, ಮಂದಿರ ಕಟ್ಟಿದವರೆಲ್ಲಾ ಇಲ್ಲಿ ಬರುತ್ತಾರೆ. ಇದು ಬೀಫ್ ಉದ್ಯಮಕ್ಕೇ ಅಂಟಿಕೊಂಡ ಮತ್ತೊಂದು ಮುಖವಾಡದ ಕತೆ.