samachara
www.samachara.com
‘ಗೋ ರಾಜಕೀಯ’- ಭಾಗ 2: ಗೋ ಹತ್ಯೆ ನಿಷೇಧ ಕಾನೂನು ಜಾರಿ ಹಿಂದೆ ‘ಅಜೆಂಡಾ’ಗಳ ವಾಸನೆ!
SPECIAL SERIES

‘ಗೋ ರಾಜಕೀಯ’- ಭಾಗ 2: ಗೋ ಹತ್ಯೆ ನಿಷೇಧ ಕಾನೂನು ಜಾರಿ ಹಿಂದೆ ‘ಅಜೆಂಡಾ’ಗಳ ವಾಸನೆ!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಹುಲಿ ಕಡವೆಯನ್ನು ಬೇಟೆಯಾಡುತ್ತದೆ; ಚಿರತೆ ಜಿಂಕೆಯನ್ನು ಬೇಟೆಯಾಡುತ್ತದೆ. ಇದು ಆಯಾ ಪ್ರಾಣಿಗಳ ಆಹಾರ ಕ್ರಮ; ನೈಸರ್ಗಿಕ ನಿಯಮ. ಜಗತ್ತಿನ ಬಹುತೇಕರು ಮಾಂಸವನ್ನು ಆಹಾರವಾಗಿ ಬಳಸುತ್ತಾರೆ.

ಭಾರತದಲ್ಲಿ ಮೀನು, ಮಾಂಸವನ್ನು ಪೌಷ್ಠಿಕಾಂಶದ ಮೂಲವಾಗಿ ಬಳಸುವವರು ಸಂಖ್ಯೆಯೇ ಶೇ. 70ಕ್ಕೂ ಹೆಚ್ಚಿದೆ. ಮಾಂಸಾಹಾರ ಎಂಬುದು ಆರೋಗ್ಯ ಅಥವಾ ರುಚಿಯ ಕಾರಣಕ್ಕೆ ಇರಬಹುದು. ಒಟ್ಟಾರೆ, ನಾಗರೀಕತೆಯ ಬೆಳವಣಿಗೆಯಲ್ಲಿ ಮಾಂಸಾಹಾರ ಎಂಬುದು ಒಂದು ಜನ ಸಂಸ್ಕೃತಿಯಾಗಿ ಬೆಳೆದಿದೆ.

ಹಾಗಿದ್ದು ಗೋವುಗಳನ್ನು ಕೊಯ್ದು, ಸಂಸ್ಕರಿಸಿ ತಿನ್ನುವುದು ಹತ್ಯೆಯಾಗಿ ಹೇಗೆ ಬದಲಾಯಿತು?ಹಿಂದೂಗಳನ್ನು ಮೆಚ್ಚಿಸಲು ಮೊಘಲರು ಹೂಡಿದ ತಂತ್ರ ಮತ್ತು ಮೇಲ್ವರ್ಗದ ಹಿಂದೂಗಳು, ಬೌದ್ಧ ಧರ್ಮವನ್ನು ಎದುರಿಸಲು ಕಟ್ಟಿಕೊಂಡ ಸ್ವಯಂಕೃತ ನಿಯಮಗಳು ಇವತ್ತಿನ ಸಮಾಜದಲ್ಲಿ ಕಾನೂನು ರೂಪ ಪಡೆದುಕೊಂಡು ಬಿಟ್ಟವು.ಗೋ ಹತ್ಯೆ ನಿಷೇಧವನ್ನು ಮೂಲಭೂತ ಹಕ್ಕುಗಳ ಅಡಿಯಲ್ಲಿ ಸೇರಿಸಬೇಕೆಂಬ ಒತ್ತಾಯ ಸಂವಿಧಾನ ರಚಿಸುವಾಗ ಕೇಳಿ ಬಂತು.

ಆದರೆ ಹಿಂದೂ ನಾಯಕರ ಒತ್ತಡವನ್ನು ಬಿ. ಆರ್. ಅಂಬೇಡ್ಕರ್ ಮತ್ತು ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ವಿರೋಧಿಸಿದರು. ಕೊನೆಗೆ ಸಂವಿಧಾನದ ರಾಜ್ಯ ಪಟ್ಟಿಯ 7ನೇ ಪರಿಚ್ಛೇದದಲ್ಲಿ “ರಾಜ್ಯ ಸರಕಾರಕ್ಕೆ ಜಾನುವಾರುಗಳು ಸಂರಕ್ಷಣೆ ಮತ್ತು ಹತ್ಯೆ ತಡೆಯಲು ಕಾನೂನು ರಚಿಸುವ ಸಂಪೂರ್ಣ ಅಧಿಕಾರ ನೀಡಲಾಯಿತು.” ರಾಜ್ಯ ನಿರ್ದೇಶಕ ತತ್ವಗಳ 48ನೇ ಪರಿಚ್ಛೇದದಲ್ಲಿ “ರಾಜ್ಯವು ಕೃಷಿಯನ್ನು ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸಬೇಕು. ವಿಶೇಷವಾಗಿ ಜಾನುವಾರು ತಳಿ ಸಂರಕ್ಷಿಸಿ ಸುಧಾರಣೆಗೊಳಿಸುವ ಕ್ರಮ ಕೈಗೊಳ್ಳುವುದರ ಜತೆಗೆ ಹಸುಗಳು ಮತ್ತು ಎಮ್ಮೆಗಳು ಹಾಗೂ ಇತರ ಹಾಲು ಕೊಡುವ, ಭಾರ ಎಳೆಯುವ ಜಾನುವಾರುಗಳ ಹತ್ಯೆಯನ್ನು ನಿಷೇಧಿಸುವ ಕ್ರಮ ಕೈಗೊಳ್ಳಬೇಕು,” ಎಂದು ಹೇಳಲಾಯಿತು.

ರಾಜ್ಯವಾರು ಗೋ ಹತ್ಯೆ ನಿಷೇಧ:

ಇದರಿಂದಾಗಿ ಇಡೀ ದೇಶಕ್ಕೆ ಅನ್ವಯಿಸುವ ಗೋ ಹತ್ಯಾ ನಿಷೇಧ ಕಾನೂನು ಭಾರತದಲ್ಲಿ ಜಾರಿಯಾಗಲಿಲ್ಲ.

ಸದ್ಯ ದೇಶದಲ್ಲಿ ಹಲವು ರಾಜ್ಯಗಳು ಪೂರ್ಣಪ್ರಮಾಣದಲ್ಲಿ ಜಾನುವಾರು (ದನ-ಎತ್ತು, ಎಮ್ಮೆ-ಕೋಣ) ಹತ್ಯೆಯನ್ನು ನಿಷೇಧಿಸಿ ಕಾನೂನು ಜಾರಿಗೆ ತಂದಿವೆ. ದೆಹಲಿ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಈ ರೀತಿಯ ಕಾನೂನು ಬಳಕೆಯಲ್ಲಿದೆ.ಕೆಲವು ರಾಜ್ಯಗಳಲ್ಲಿ ಎಲ್ಲಾ ರೀತಿಯ ಜಾನುವಾರು ಹತ್ಯೆಗೆ ಅವಕಾಶ ನೀಡಲಾಗಿದೆ.

ಅರುಣಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್, ತ್ರಿಪುರ, ಲಕ್ಷದ್ವೀಪ ಈ ಪಟ್ಟಿಯಲ್ಲಿವೆ. “ದೇಶದಲ್ಲೇ ಕೇರಳದಲ್ಲಿ ಜಾನುವಾರು ಹತ್ಯೆ ಕಾನೂನುಗಳು ತೀರಾ ಸಡಿಲವಾಗಿದ್ದು, ರಾಜ್ಯದಲ್ಲಿ ಬೀಫ್ ಉದ್ಯಮ ದೊಡ್ಡ ಮಟ್ಟದಲ್ಲಿದೆ. ಈ ಕಾರಣಕ್ಕೆ ಹತ್ಯೆ ಮಾಡಲೆಂದೇ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶಗಳಿಂದ ಜಾನುವಾರುಗಳನ್ನು ಕೇರಳಕ್ಕೆ ಸಾಗಿಸಲಾಗುತ್ತದೆ,” ಎನ್ನುತ್ತಾರೆ ರಾಜ್ಯ ಮಾಂಸ ಮಾರಾಟಗಾರರ ಸಂಘದ ಉಪಾಧ್ಯಕ್ಷ ಅಲಿ ಹಸನ್.

ಇನ್ನುಳಿದ ರಾಜ್ಯಗಳಲ್ಲಿ ನಿಯಂತ್ರಿತ ಜಾನುವಾರು ಹತ್ಯೆಗೆ ಅವಕಾಶ ನೀಡಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವೂ ಇದೆ. ಇಲ್ಲೆಲ್ಲಾ ವಯಸ್ಸಿನ ಆಧಾರದಲ್ಲಿ, ಕೆಲವೊಂದು ಜಾನುವಾರುಗಳ ಹತ್ಯೆಗೆ ಮಾತ್ರ ಅವಕಾಶ ನೀಡಲಾಗಿದೆ. ಗೋ ಹತ್ಯೆಗೆ ಶಿಕ್ಷೆಯ ಪ್ರಮಾಣಗಳೂ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದು, ಯಾವುದೇ ರಾಜ್ಯ ಕೂಡಾ ಸ್ಪಷ್ಟವಾಗಿ ಬೀಫ್ ಸೇವನೆಯನ್ನು ನಿಷೇಧಿಸಿಲ್ಲ ಎಂಬುದು ಗಮನಾರ್ಹ.

ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ:

ಪೂರ್ಣ ಪ್ರಮಾಣದಲ್ಲಿ ಗೋ ಹತ್ಯೆ ನಿಷೇಧವಿಲ್ಲದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವಿದೆ. ರಾಜ್ಯದಲ್ಲಿ ‘ಗೋ ಸಂರಕ್ಷಣಾ ಕಾಯಿದೆ - 1964’ ಜಾರಿಯಲ್ಲಿದೆ. ಇದರ ಪ್ರಕಾರ, “ಪಶು ವೈದ್ಯಾಧಿಕಾರಿಯವರ ಒಪ್ಪಿಗೆ ಮೇರೆಗೆ, 13 ವರ್ಷ ಮೇಲ್ಪಟ್ಟ ಜಾನುವಾರುಗಳ್ನು ಲಿಖಿತ ದೃಢೀಕರಣಪತ್ರ ಪಡೆದ ನಂತರವಷ್ಟೇ ಹತ್ಯೆ ಮಾಡಬಹುದಾಗಿದೆ,” ಎನ್ನುತ್ತಾರೆ ಅಲಿ ಹಸನ್.ಇವುಗಳಲ್ಲಿ ಎಮ್ಮೆ, ಕೋಣ, ಎತ್ತುಗಳು ಇರಬಹುದಷ್ಟೇ.

ಇನ್ನು ದನಗಳನ್ನು ಹತ್ಯೆ ಮಾಡಬೇಕೆಂದಾದರೆ, ಅವುಗಳು ಹಾಲು ನೀಡುವ, ಇಲ್ಲವೇ ಕರು ಹಾಕುವ ಸಾಮರ್ಥ್ಯವನ್ನು ಕಳೆದುಕೊಂಡಿರಬೇಕು ಅಥವಾ ಗಾಯಗೊಂಡು ನಿರುಪಯುಕ್ತವಾಗಿರಬೇಕು ಎಂದು ಕಾನೂನಿನಲ್ಲಿ ಹೇಳಲಾಗಿದೆ. ಆದರೆ “ಮಾಂಸಕ್ಕಾಗಿ ಹಸುಗಳನ್ನು ಕಸಾಯಿಖಾನೆಗಳಿಗಿಂತ ಹೆಚ್ಚಾಗಿ ಖಾಸಗಿಯಾಗಿಯೇ ಕೊಲ್ಲುತ್ತಾರೆ. ಇದರಿಂದ ಕಾಯಿದೆಯ ಪಾಲನೆ ಕಡಿಮೆ,” ಎನ್ನುವುದು ಅಲಿ ಹಸನ್ ಅಭಿಪ್ರಾಯ.

ಸಂಪೂರ್ಣ ಗೋ ಹತ್ಯೆ ನಿಷೇಧ ಪ್ರಸ್ತಾಪ:

ಸ್ವತಂತ್ರ ಭಾರತದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸುವ ಕಾನೂನು ರಚನೆ ಸಂಬಂಧ ಮೇಲಿಂದ ಮೇಲೆ ಒತ್ತಾಯಗಳು ಕೇಳಿ ಬರುತ್ತಲೇ ಇವೆ. ಸಂವಿಧಾನ ರಚನೆ ಸಂದರ್ಭದಲ್ಲಿ ಇಂತಹದ್ದೊಂದು ಮನವಿ ಹಿಂದೂ ನಾಯಕರಿಂದ ಕೇಳಿ ಬಂದಿತ್ತು. 1979ರಲ್ಲಿ ವಿನೋಬಾ ಭಾವೆ ಆಮರಣಾಂತ ಉಪವಾಸ ಕೂತು, ‘ಗೋ ಹತ್ಯೆ ನಿಷೇಧಿಸಬೇಕು’ ಎಂದು ಪಟ್ಟು ಹಿಡಿದಾಗ, ಜನತಾ ಸರ್ಕಾರ ‘ಗೋ ಹತ್ಯೆ ನಿಷೇಧ ಮಸೂದೆ’ಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. 1982ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ರಾಜ್ಯ ಸರಕಾರಗಳಿಗೆ ಗೋ ಹತ್ಯೆ ನಿಷೇಧಿಸುವಂತೆ ಪತ್ರವೂ ಬರೆದರು.

ಇದಲ್ಲದೇ ಗೋಹತ್ಯೆ ನಿಷೇಧದ ಕನಿಷ್ಠ ಹನ್ನೆರಡು ಖಾಸಗಿ ಸದಸ್ಯರ ಗೊತ್ತುವಳಿಗಳು ಲೋಕಸಭೆಯಲ್ಲಿ ಮಂಡನೆಯಾದರೂ ಎಲ್ಲವೂ ಬಿದ್ದು ಹೋಗಿವೆ.ವಿಶೇಷ ಅಂದರೆ ಗೋಹತ್ಯೆ ನಿಷೇಧ ಕಾನೂನು ರೂಪಿಸುವಂತೆ ಪ್ರಧಾನಿ ವಾಜಪೇಯಿ ಅವರಿಗೆ ದಿಗ್ವಿಜಯ್ ಸಿಂಗ್ ಪತ್ರ ಬರೆದಿದ್ದರು. ಇದರಿಂದ 2003ರಲ್ಲಿ ಎನ್‌ಡಿಎ ಸರಕಾರದ ಜಾರಿಗೆ ತರಲು ಹೊರಟಿದ್ದ, ಗೋಹತ್ಯೆ ನಿಷೇಧ ಮಸೂದೆ ಮಿತ್ರಪಕ್ಷಗಳಾದ ತೆಲುಗುದೇಶಂ ಮತ್ತು ಡಿಎಂಕೆ ವಿರೋಧದಿಂದಾಗಿ ಸಫಲವಾಗಲಿಲ್ಲ.

ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆ - 2010:

2010ರಲ್ಲಿ ಎಲ್ಲೆಲ್ಲಿ ಬಿಜೆಪಿ ಸರಕಾರಗಳಿದೆಯೋ ಅಲ್ಲೆಲ್ಲಾ ಗೋಹತ್ಯೆಯ ನಿಷೇಧದ ಕಾಯಿದೆಯೊಂದನ್ನು ತರಲು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ತೀರ್ಮಾನ ಮಾಡಿತ್ತು. ಅದರಂತೆ ಕರ್ನಾಟಕದಲ್ಲೂ ಅಧಿಕಾರದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ‘ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆ – 2010’ನ್ನು ಜಾರಿಗೆ ತರಲು ಹೊರಟಿತು.

ಇದಕ್ಕೂ ಮೊದಲು 2009ರ ಫೆಬ್ರವರಿಯಲ್ಲಿ, 1964ರ ಮೂಲ ಕಾಯಿದೆಗೆ ಕೆಲವು ತಿದ್ದುಪಡಿಗಳನ್ನು ತರಲು ಸರಕಾರ ಸಿದ್ಧವಾಗಿತ್ತು. ಅದರಲ್ಲಿ ಪೊಲೀಸರಲ್ಲದೆ, ಖಾಸಗಿ ವ್ಯಕ್ತಿಗಳನ್ನೂ ಗೋಹತ್ಯಾ ನಿಷೇಧ ಕಾಯಿದೆ ಜಾರಿಗೆ ತರಲು ನೇಮಿಸುವುದು ಮತ್ತು ಕಾಯಿದೆಯನ್ವಯ ಜಿಲ್ಲಾ ಕೋರ್ಟ್ ಈ ವಿಷಯದಲ್ಲಿ ಅಂತಿಮ ಅಪೀಲು ಎಂಬ ತಿದ್ದುಪಡಿಗಳು ಈ ಪ್ರಸ್ತಾವನೆಯಲ್ಲಿತ್ತು.ಆದರೆ ಜನರ ತೀವ್ರ ವಿರೊಧದಿಂದಾಗಿ ತಿದ್ದುಪಡಿ ಮಸೂದೆ ವಾಪಸ್ ಪಡೆದು ‘ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ-2010’ ಎಂಬ ಮಸೂದೆಯನ್ನು ಮಾರ್ಚ್ 10ರಂದು ಸದನದಲ್ಲಿ ಮಂಡಿಸಿತ್ತು.

ಮುಂದೆ ಇದು ಸದನದ ಒಪ್ಪಿಗೆ ಪಡೆಯಿತಾದರೂ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಮಸೂದೆಯನ್ನು ತಿರಸ್ಕರಿಸಿ ಹಿಂದಕ್ಕೆ ಕಳುಹಿಸಿದರು.ಅದರ ಮುಖ್ಯಾಂಶಗಳು ಹೀಗಿದ್ದವು:

  • ಮಸೂದೆಯಲ್ಲಿ ದನ, ಕರು, ಎತ್ತು, ಎಮ್ಮೆ, ಕೋಣಗಳನ್ನೂ ಸೇರಿಸಿ ಜಾನುವಾರು ಎಂದು ಕರೆಯಲಾಗಿತ್ತು. ಹೀಗಾಗಿ ಎಲ್ಲಾ ಜಾನುವಾರುಗಳ ಹತ್ಯೆಯನ್ನೂ ನಿಷೇಧಿಸುವ ಕಾಯಿದೆ ಇದಾಗಿತ್ತು.
  • ಸೆಕ್ಷನ್ (8)ರ ಪ್ರಕಾರ ಮಸೂದೆಯು ‘‘ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಮಾರುವುದು, ಕೊಳ್ಳುವುದು, ಅಥವಾ ಪರಭಾರೆ ಮಾಡುವುದನ್ನು ನಿಷೇಧಿಸುತ್ತದೆ.’’ ಇವೆಲ್ಲಾ ಶಿಕ್ಷಾರ್ಹ ಅಪರಾಧಗಳೆಂದು ಮಸೂದೆಯಲ್ಲಿ ಹೇಳಲಾಗಿತ್ತು.
  • ಮಸೂದೆಯ ಸೆಕ್ಷನ್ (18)ರಲ್ಲಿ ಉಪಯೋಗವಿಲ್ಲದ ದನಗಳನ್ನು ನೋಡಿಕೊಳ್ಳಲು ಸರಕಾರ ಅಥವಾ ಸರಕಾರೇತರ ಸಂಸ್ಥೆಗಳು ಆಶ್ರಮಗಳನ್ನು ಸ್ಥಾಪಿಸುತ್ತವೆ. ರೈತರು ತಮ್ಮ ಗೊಡ್ಡು ದನಗಳನ್ನು ಕಡ್ಡಾಯವಾಗಿ ಈ ಆಶ್ರಮದಲ್ಲೇ ಬಿಡಬೇಕು. ರೈತ ಅವುಗಳನ್ನು ನೋಡಿಕೊಳ್ಳಲು ಸರಕಾರ ಅಥವಾ ಆ ಸಂಸ್ಥೆ ನಿಗದಿಪಡಿಸಿದಷ್ಟು ಶುಲ್ಕ ಪಾವತಿಸಬೇಕು ಎಂದು ಮಸೂದೆ ಹೇಳಿತ್ತು.
  • ಒಂದೊಮ್ಮೆ ದನಗಳನ್ನು ಮಾರಿಯೇ ಬಿಟ್ಟರೆ, ಮಸೂದೆಯ ಸೆಕ್ಷನ್ (12)ರಲ್ಲಿ ಯಾವ ಅಪರಾಧಕ್ಕೆ ಎಷ್ಟೆಷ್ಟು ಶಿಕ್ಷೆಯೆಂಬುದನ್ನು ನಿಗದಿಪಡಿಸಲಾಗಿತ್ತು. ಸೆಕ್ಷನ್ 4ರಡಿ, ಅಂದರೆ ಜಾನುವಾರು ಹತ್ಯೆ ಮಾಡಿದ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 25,000 ರೂ.ಗಳಿಂದ 1,00,000 ರೂ.ವರೆಗೆ ಜುಲ್ಮಾನೆಯನ್ನೂ ವಿಧಿಸಬಹುದು. ದನದ ಸಾಗಾಟ ಮಾಡುವುದು, ಮಾರಾಟ ಮಾಡುವುದು, ದನದ ಮಾಂಸ ತಿನ್ನುವುದು, ತಿನ್ನಲು ಪ್ರೋತ್ಸಾಹಿಸುವುದು ಹಾಗೂ ಇನ್ನಿತರ ಅಪರಾಧಗಳಿಗೆ ಒಂದು ವರ್ಷದಿಂದ ಮೂರು ವರ್ಷದ ಸಜೆ ಮತ್ತು 10,000 -25,000 ರೂ.ವರೆಗೆ ದಂಡ ವಿಧಿಸಬಹುದು.

ಸುಪ್ರಿಂ ಕೋರ್ಟ್ ಹೇಳುವುದೇನು?:

‘1959ರ ಮೊಹಮ್ಮದ್ ಹನೀಫ್ ಖುರೇಶಿ ವರ್ಸಸ್ ಸ್ಟೇಟ್ ಆಫ್ ಬಿಹಾರ್’, ‘1961ರ ಹಶುಮತುಲ್ಲಾ ವರ್ಸಸ್ ಸ್ಟೇಟ್ ಆಫ್ ಮಧ್ಯ ಪ್ರದೇಶ’ ಸೇರಿದಂತೆ ಹಲವು ಪ್ರಕರಣಗಲ್ಲಿ ತೀರ್ಪು ನೀಡಿರುವ ಸುಪ್ರಿಂ ಕೋರ್ಟ್, “ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿಯಿಂದ, ಉಪಯೋಗವಿಲ್ಲದ ಎತ್ತು ಮತ್ತು ಕೋಣಗಳು ಸಮಾಜಕ್ಕೆ ಹೊರೆಯಾಗಿದ್ದು, (ಜಾನುವಾರು) ಹತ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಸೂಚನೆ ಕೊಡಲು ಸಾಧ್ಯವಿಲ್ಲ,” ಎಂದು ಸ್ಪಷ್ಟವಾಗಿ ಹೇಳಿದೆ.

ನೂರಾರು ಕಾನೂನುಗಳು, ನಿಯಮಗಳಿದ್ದೂ ಪವಿತ್ರ ಗೋ ಮಾಂಸ ರಫ್ತಿನಲ್ಲಿ ಜಗತ್ತಿನಲ್ಲಿ ಭಾರತವನ್ನು ಮೀರಿಸುವವರಿಲ್ಲ. ಈ ಬೀಫ್ ಉದ್ಯಮದ್ದೇ ಇನ್ನೊಂದು ಇಂಟೆರೆಸ್ಟಿಂಗ್ ಕತೆ. ಭಜರಂಗದಳದ ಗೋ ರಕ್ಷಕರಿಂದ ಹಿಡಿದು ಮದ್ರಾಸಿನ ಚರ್ಮದ ಉದ್ಯಮದವರೆಗೆ ಇದು ಹರಡಿಕೊಂಡಿದೆ. ಆ ಕುರಿತಾದ ಕುತೂಹಲಕಾರಿ ಮಾಹಿತಿ ಮುಂದಿನ ಭಾಗದಲ್ಲಿ...