‘ಮೋದಿ ಸವೆಸಿದ ಹಾದಿ’-5: ಹರೇನ್ ಪಾಂಡ್ಯ ಹತ್ಯೆ ನೆನಪಿನಲ್ಲಿ ಗುಜರಾತಿನ ಗದ್ದುಗೆ ಕತೆಗೆ ಉಪಸಂಹಾರ!
SPECIAL SERIES

‘ಮೋದಿ ಸವೆಸಿದ ಹಾದಿ’-5: ಹರೇನ್ ಪಾಂಡ್ಯ ಹತ್ಯೆ ನೆನಪಿನಲ್ಲಿ ಗುಜರಾತಿನ ಗದ್ದುಗೆ ಕತೆಗೆ ಉಪಸಂಹಾರ!

'ಮೋದಿ ಸವೆಸಿದ ಹಾದಿ'ಯ ಕೊನೆಯ ಭಾಗಕ್ಕೆ ಬಂದು ನಿಂತಿದ್ದೇವೆ.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ಮೋದಿ, ಆರ್ ಎಸ್ಎಸ್ ಸಂಘಟನೆ ಮೂಲಕ ವಿಚಾರಗಳನ್ನು ಬೆಳೆಸಿಕೊಂಡು, ಉತ್ತಮ ಸಂಘಟಕ ಎನ್ನಿಸಿಕೊಂಡು, ನಂತರ ಬಿಜೆಪಿ ಪ್ರವೇಶಿಸಿ, ಪಕ್ಷದ ಹುದ್ದೆಗಳಲ್ಲಿ ಹಂತಹಂತವಾಗಿ ಏರುವ ಮೂಲಕ ಗುಜರಾತ್ ಮುಖ್ಯಮಂತ್ರಿಯಾಗಿ, ನಂತರ ದೇಶದ ಪ್ರಧಾನಿಯಾಗಿ ಎರಡು ವರ್ಷಗಳ ಆಡಳಿತವನ್ನು ಪೂರೈಸಿದ್ದಾರೆ. ಇದು ವ್ಯಕ್ತಿಯೊಬ್ಬನ ಬದುಕಿನಲ್ಲಿ ಸುದೀರ್ಘ ಪ್ರಯಾಣದ ಹಾದಿ.

ಅವೆಲ್ಲವನ್ನೂ ಸಮಗ್ರವಾಗಿ ಐದು ಸಂಚಿಕೆಗಳ ಮಿತಿಯಲ್ಲಿ ನಿರೂಪಿಸುವುದು ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ 'ಸಮಾಚಾರ' ತನ್ನೀ ಸರಣಿಯನ್ನು ಮೋದಿ ಗುಜರಾತ್ ರಾಜ್ಯವನ್ನು ಆವರಿಸಿಕೊಂಡ ಬಗೆ ಹಾಗೂ ಅಲ್ಲಿಂದ ಪ್ರಧಾನಿ ಹಾದಿ ಎಡೆಗೆ ಕನಸುಗಳನ್ನು ಕಟ್ಟುತ್ತಿದ್ದ ದಿನಗಳಿಗೆ ಮಾತ್ರವೇ ಸೀಮಿತಗೊಳಿಸುತ್ತಿದೆ.

ಈಗಾಗಲೇ ಮೋದಿ ಹುಟ್ಟು, ಬೆಳವಣಿಗೆ, ಆರ್ ಎಸ್ಎಸ್ ಸಂಘಟನೆಯಲ್ಲಿ ಬೆಳೆದ ರೀತಿ, ಗುಜರಾತ್ ರಾಜ್ಯ ಬಿಜೆಪಿಯಲ್ಲಿ ರಾಜಕೀಯವಾಗಿ ಬೆಳೆದ ಬಗೆಯನ್ನು ಎಳೆಎಳೆಯಾಗಿ ಸರಣಿ ಬಿಡಿಸಿಟ್ಟಿದೆ. ಜತೆಗೆ, ಮೋದಿ ರಾಷ್ಟ್ರನಾಯಕರಾಗಿ ಬೆಳೆಯಲು ಬಳಸಿಕೊಂಡ ಪ್ರಚಾರ ತಂತ್ರಗಳನ್ನು ನಿಮಗೆ ಪರಿಚಯಿಸಲಾಗಿದೆ.

ಈ ಸಮಯದಲ್ಲಿ ಪ್ರಧಾನಿ ಹುದ್ದೆಗೆ ಮೋದಿ ಸ್ಪರ್ಧಿಸುವ ಮೊದಲು ಗುಜರಾತ್ ರಾಜ್ಯ ಬಿಜೆಪಿಯಲ್ಲಿ ನಡೆದ ಕೆಲವೊಂದು ಘಟನೆಗಳನ್ನು ಹೇಳದಿದ್ದರೆ ಸರಣಿ ಅಪೂರ್ಣವಾಗುತ್ತದೆ.

ಅದು, 1999ರ ಇಸವಿ. ದೇಶದಲ್ಲಿ ಕಾರ್ಗಿಲ್ ಯುದ್ಧೋತ್ಸಾಹ ಮನೆ ಮಾಡಿದ್ದ ಸಮಯ. ಗುಜರಾತ್ ಬಿಜೆಪಿಯಿಂದ ಹೊರಗೆ ಹಾಕಿಸಿಕೊಂಡ ಮೋದಿ, ರಾಷ್ಟ್ರೀಯ ಬಿಜೆಪಿಯ ವಕ್ತಾರರಾಗಿ ಟಿವಿ ಪ್ಯಾನಲ್ಗಳಿಗೆ ವಕ್ತಾರರಾಗಿ ಹೋಗುತ್ತಿದ್ದರು. ಇತ್ತ, ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲದಿಂದ ಆಡಳಿತಕ್ಕೆ ಬಂದಿದ್ದ ಶಂಕರ್ ಸಿಂಗ್ ವಘೇಲಾ ಸರಕಾರ ಮಗುಚಿ ಬಿದ್ದಿತ್ತು.

ಮತ್ತೆ ಕೇಶುಭಾಯಿ ಪಟೇಲ್ ನೇತೃತ್ವದ ಸರಕಾರ ಶುರುವಾಗಿತ್ತು. ಈ ಸಮಯದಲ್ಲಿ ಗುಜರಾತ್ ಬಿಜೆಪಿಯಲ್ಲಿ ಮಿಂಚುತ್ತಿದ್ದವರು ಹರೇನ್ ಪಾಂಡ್ಯ, ಗೋರ್ಧನ್ ಝಡಾಪಿಯಾ ಮತ್ತಿತರ ಮಂತ್ರಿಗಳು. ಮುಂದಿನ ರಾಜ್ಯ ಬಿಜೆಪಿ ನಾಯಕರು ಎಂದು ಇವರನ್ನು ಸಂಘ ಕೂಡ ಗುರುತಿಸಿತ್ತು.

ಆದರೆ, 2001ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಾಗೂ 2 ಉಪಚುನಾವಣೆಗಳಲ್ಲಿ ಬಿಜೆಪಿ ಸೋತು ಹೋಗಿತ್ತು. ಇದಕ್ಕಾಗಿಯೇ ಕಾಯುತ್ತಿದ್ದ ಮೋದಿ, ಹೈ ಕಮಾಂಡ್ ಕೃಪಾಕಟಾಕ್ಷದಿಂದ ಗುಜರಾತ್ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಬಂದಿಳಿದರು.

ನಂತರ ನಡೆದಿದ್ದು 2002ರ ಗುಜರಾತ್ ಕೋಮು ಗಲಭೆ. ಮೊದಲ ಬಾರಿಗೆ ಕೋಮು ಸಂಘರ್ಷವೊಂದು ರಾಷ್ಟ್ರೀಯ ವಾಹಿನಿಗಳಲ್ಲಿ ನೇರ ಪ್ರಸಾರ ಪಡೆದುಕೊಂಡಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಂದಿನ ಪ್ರಧಾನಿ ವಾಜಪೇಯಿ ಮುಂದಾದರೂ, ಬಿಜೆಪಿ ಹಾಗೂ ಆರ್ ಎಸ್ಎಸ್ ನಾಯಕರು ಮೋದಿ ಬೆನ್ನಿಗೆ ನಿಲ್ಲುವ ಮೂಲಕ ರಕ್ಷಿಸಿದರು.

ಮುಂದೆ, ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಿತು.ಈ ವೇಳೆ ಶುರುವಾದ ಗುಜರಾತ್ ಕೋಮು ಗಲಭೆ ಕುರಿತ ಸ್ವತಂತ್ರ ತನಿಖಾ ಆಯೋಗದ ಮುಂದೆ ಮೋದಿ ಕ್ಯಾಬಿನೆಟ್ ಮಂತ್ರಿಯೊಬ್ಬರು ಸಾಕ್ಷಿಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಕೊನೆಗೆ ಅದು ಹರೇನ್ ಪಾಂಡ್ಯ ಎಂದು ಮಾಧ್ಯಮಗಳ ಮೂಲಕ ಬಹಿರಂಗವಾಯಿತು.

ಹಿಂದೆ, ಪಾಂಡ್ಯ ಸ್ಪರ್ಧಿಸುತ್ತಿದ್ದ ಅಹಮದಾಬಾದ್ ನಗರದ ಎಲ್ಲಿಸ್ ಬ್ರಿಡ್ಜ್ ಕ್ಷೇತ್ರದಲ್ಲಿ ಮೋದಿ ಉಮೇದುವಾರಿಕೆ ಬಯಸಿದ್ದರು. ಈ ಸಮಯದಲ್ಲಿ ಪಾಂಡ್ಯ ಒಪ್ಪಿರಲಿಲ್ಲ. ಇದೀಗ ತನಿಖಾ ಆಯೋಗದ ಮುಂದೆ ಪಾಂಡ್ಯ ಸಾಕ್ಷಿ ನುಡಿದಿದ್ದಾರೆ ಎಂಬುದು ಬಹಿರಂಗವಾಗುತ್ತಿದ್ದಂತೆ, ಮೋದಿ ಹಳೆಯ ಸಿಟ್ಟನ್ನು ತೀರಿಸಿಕೊಳ್ಳಲು ಅವಕಾಶವೊಂದು ಸಿಕ್ಕಂತಾಯಿತು. ಪಾಂಡ್ಯರನ್ನು ಸಂಪುಟದಿಂದ ಕೈ ಬಿಡಲಾಯಿತು.

ಮೂಲತಃ ವಿಶ್ವ ಹಿಂದೂ ಪರಿಷತ್ ಮೂಲಕ ಬಿಜೆಪಿಗೆ ಬಂದಿದ್ದ ಪಾಂಡ್ಯ, ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳಲಿಲ್ಲ. ಇದು ಗುಜರಾತ್ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಜಂಗೀ ಕುಸ್ತಿಗೆ ಅಖಾಡವನ್ನು ರೆಡಿಮಾಡಿತು. ಹೀಗಾಗಿ ಬಿಜೆಪಿ ಹಿರಿಯ ನಾಯಕರು ಪಾಂಡ್ಯರನ್ನು ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯನನ್ನಾಗಿ ನೇಮಿಸಿ, ಗುಜರಾತ್ನಿಂದ ಸ್ಥಳಾಂತರಿಸಲು ಮುಂದಾದರು.


       ಪಾಂಡ್ಯ ಅಂತಿಮ ದರ್ಶನದ ಕ್ಷಣಗಳು.
ಪಾಂಡ್ಯ ಅಂತಿಮ ದರ್ಶನದ ಕ್ಷಣಗಳು.

ಪಾಂಡ್ಯರಿಗೆ ದಿಲ್ಲಿಯಿಂದ ಆದೇಶ ಬಂದ ಮಾರನೇ ದಿನವೇ ಅಹಮದಾಬಾದ್ನ ಲಾ ಗಾರ್ಡನ್ನಲ್ಲಿ ವಾಕ್ ಮುಗಿಸಿ ಬರುವಾಗ ಕೊಲೆಯಾಗಿ ಹೋದರು.

ಗುಜರಾತ್ ಪೊಲೀಸರು ಇದು ಪಾಕಿಸ್ತಾನದ ಐಎಸ್ಐ ಹಾಗೂ ಲಷ್ಕರ್-ಎ- ತೋಯ್ಬಾ ಜಂಟಿಯಾಗಿ ನಡೆಸಿದ ಕೃತ್ಯ ಎಂದರು. ಆದರೆ, ಪಾಂಡ್ಯ ಕುಟುಂಬ ಮೋದಿ ವಿರುದ್ಧ ಅನುಮಾನ ವ್ಯಕ್ತಪಡಿಸಿತು. ಪ್ರಕರಣದ ತನಿಖೆ ಸಿಬಿಐಗೆ ವಹಿಸಲಾಯಿತು. ಎಂಟು ವರ್ಷಗಳ ನಂತರ ಪ್ರಕರಣದ ಕುರಿತು ತೀರ್ಪು ನೀಡಿದ ಗುಜರಾತ್ ಹೈ ಕೋರ್ಟ್ ತನಿಖಾ ಸಂಸ್ಥೆಗಳು ಹೆಸರಿಸಿದ್ದ ಪ್ರತಿಯೊಬ್ಬ ಆರೋಪಿಯನ್ನು ದೋಷಮುಕ್ತಗೊಳಿಸಿತು.

ನಂತರ ಪಾಂಡ್ಯ ತಂದೆ ಮೋದಿ ವಿರುದ್ಧ ಬಹಿರಂಗ ಆರೋಪ ಮಾಡಿದರು. ಸುಪ್ರಿಂ ಕೋರ್ಟ್ ಮೊರೆ ಹೋದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.ಇದು ಮೋದಿ ಮುಖ್ಯಮಂತ್ರಿಯಾಗಿದ್ದ ಮಾದರಿ ಗುಜರಾತ್ ರಾಜ್ಯದ ಬಿಜೆಪಿ ಒಳಗೇ ನಡೆದ ಘಟನಾವಳಿಗಳು.

ಇವನ್ನೆಲ್ಲಾ ದಾಟಿ ಬಂದ ಮೋದಿ, ತಮ್ಮದೇ ಪಕ್ಷದ ಹಲವು ನಾಯಕರನ್ನು ಗುಪ್ತದಳದ ಮೂಲಕ ಹಿಂಬಾಲಿಸುವ ಕೆಲಸ ಮಾಡಿದ್ದರು ಎಂದು ಮಂತ್ರಿಯಾಗಿದ್ದ ಗೋರ್ಧನ್ ಕೂಡ ಆರೋಪ ಮಾಡಿದ್ದರು.

"ಮೋದಿ ಯಾರನ್ನೂ ಸುಲಭಕ್ಕೆ ಕ್ಷಮಿಸುವುದಿಲ್ಲ; ಮರೆಯುವುದೂ ಇಲ್ಲ,'' ಎಂದು ಗುಜರಾತ್ ಬಿಜೆಪಿ ಹಿರಿಯ ನಾಯಕರು ಹೇಳಿಕೆ ನೀಡಿದ್ದನ್ನು ನಿಯತಕಾಲಿಕಗಳು ಪ್ರಕಟಿಸಿವೆ.

ಬಹುಶಃ ಮೋದಿ ಪ್ರಧಾನಿಯಾದ ನಂತರವೂ ಗುಜರಾತ್ ಅವರನ್ನು ಮರೆತಿಲ್ಲ. ಮಾತ್ರವಲ್ಲ, ಇಡೀ ದೇಶ ಅವರು ಚುನಾವಣೆ ಸಮಯದಲ್ಲಿ ನೀಡಿದ ಆಶ್ವಾಸನೆಗಳನ್ನು ಮರೆಯುವುದಿಲ್ಲ.

ಸದ್ಯ ಕೇಂದ್ರದಲ್ಲಿ ಎರಡು ವರ್ಷಗಳ ಆಳ್ವಿಕೆ ಪೂರ್ಣಗೊಳಿಸಿದ್ದಾರೆ ಮೋದಿ. ಇಷ್ಟು ಬೇಗ ಅವರ ಆಡಳಿತವನ್ನು ಅಳೆಯುವುದು ಕಷ್ಟ. ಮುಂದಿನ ಮೂರು ವರ್ಷಗಳ ಸಮಯವಿದೆ. ಒಂದು ವೇಳೆ, ಅವರು ದೇಶದ ಜನರಿಗೆ ನೀಡಿದ ಭರವಸೆಗಳನ್ನು ಮರೆತರೆ, ಅವರ ಮೇಲೆ ಇವತ್ತಿಗೂ ವಿಶ್ವಾಸ ಇಟ್ಟುಕೊಂಡ ದೊಡ್ಡದೊಂದು ಜನವರ್ಗ ಅವರನ್ನು ಕ್ಷಮಿಸುವುದಿಲ್ಲ ಎಂದಷ್ಟೆ ಈ ಸಮಯದಲ್ಲಿ ಹೇಳಬಹುದು.

(ಮುಗಿಯಿತು)