‘ಮೋದಿ ಸವೆಸಿದ ಹಾದಿ-4’: ಎರಡು ವರ್ಷಗಳ ಸಾಧನೆ ಸುದ್ದಿಗಳನ್ನು ಓದುತ್ತಿರುವ ಈ ಹೊತ್ತಿನಲ್ಲಿ ಗಮನಿಸಬೇಕಿರುವ ಪಿಆರ್ ಏಜೆನ್ಸಿ ‘ಸತ್ಯ’ಗಳು!
SPECIAL SERIES

‘ಮೋದಿ ಸವೆಸಿದ ಹಾದಿ-4’: ಎರಡು ವರ್ಷಗಳ ಸಾಧನೆ ಸುದ್ದಿಗಳನ್ನು ಓದುತ್ತಿರುವ ಈ ಹೊತ್ತಿನಲ್ಲಿ ಗಮನಿಸಬೇಕಿರುವ ಪಿಆರ್ ಏಜೆನ್ಸಿ ‘ಸತ್ಯ’ಗಳು!

ನರೇಂದ್ರ ಮೋದಿ ದೇಶದ ಪ್ರಧಾನಿ ಆಗುವುದಕ್ಕೆ ಬಳಸಿಕೊಂಡ ಹಲವು ಮೆಟ್ಟಿಲುಗಳಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಸ್ಥಾನ ಪ್ರಮುಖವಾದುದು.ಇವತ್ತಿಗೆ ಮೋದಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳು ಕಳೆಯುತ್ತಿವೆ.

ಈ ಸಮಯದಲ್ಲಿ ದೇಶದ ಜನ ಎರಡು ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎನ್ನುವುದಕ್ಕಿಂತ ನರೇಂದ್ರ ಮೋದಿ ಎಂಬ 'ವಿಕಾಸ್ ಪುರುಷ' ದೇಶವನ್ನು ಬದಲಿಸಬಲ್ಲ ಎಂಬ ಅದಮ್ಯ ಭರವಸೆಯಿಂದ ಮತ ಹಾಕಲು ಕಾರಣವಾದ ಅಂಶಗಳೇನು ಎಂಬುದನ್ನು ಗಮನಿಸಬೇಕಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ನಡೆಸಿದ ಅಭಿವೃದ್ಧಿ ಯೋಜನೆಗಳ ಫಲ ಇದು ಎಂಬ ಮೇಲ್ಮಟ್ಟದ ವಾದವೊಂದಿದೆ. ಇದು ನಿಜವಾ?

ಅದು 2003. ಗುಜರಾತ್ ಕೋಮು ಸಂಘರ್ಷದ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಮೋದಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಭೂಮಿ ನೀಡುವ ಯೋಜನೆಯನ್ನು ಅವರು ಮೊದಲು ಕೈಗೆತ್ತಿಕೊಂಡರು.

ರಾಜ್ಯದ ರಾಜಧಾನಿ ಅಹಮದಾಬಾದ್ ನಗರದಿಂದ 400 ಕಿ. ಮೀ ದೂರದಲ್ಲಿದ್ದ ಬಾವ್ ನಗರ ಜಿಲ್ಲೆಯ ಮಲುವಾ ಎಂಬ ಗ್ರಾಮದ ಸುಮಾರು 700 ಎಕರೆ ಭೂಮಿಯನ್ನು ಸಿಮೆಂಟ್ ಫ್ಯಾಕ್ಟರಿಯೊಂದಕ್ಕೆ ನೀಡಿ ಸರಕಾರ ಆದೇಶ ಹೊರಡಿಸಿತ್ತು. ಸದರಿ ಸಿಮೆಂಟ್ ಕಂಪನಿ, ಸಿಐಐನಲ್ಲಿ ನಡೆದ ಮೋದಿ ಅಪಮಾನಕ್ಕೆ ಉತ್ತರ ಕೊಡಲು ಹುಟ್ಟಿಕೊಂಡ 'ರಿಸರ್ಜೆಂಟ್ ಗ್ರೂಪ್ ಆಫ್ ಗುಜರಾತ್'ನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿರ್ಮಾ ಕಂಪನಿಯ ಕಾರ್ಸನ್ ಪಟೇಲ್ ಎಂಬ ಉದ್ಯಮಿಗೆ ಸೇರಿದ್ದಾಗಿತ್ತು.

700 ಎಕರೆ ಭೂಮಿಯಲ್ಲಿ ಸುಮಾರು 300 ಎಕರೆ ಭೂಮಿ ನೀರಾವರಿ ಜಮೀನಾಗಿತ್ತು. ಯೋಜನೆ ವಿರುದ್ಧ ಸ್ಥಳೀಯ ರೈತರು ಸಿಡಿದೆದ್ದರು. ಅಲ್ಲಿಂದ 5 ಸಾವಿರ ರೈತರು ಅಹಮದಾಬಾದ್ಗೆ ಪಾದಯಾತ್ರೆ ಮಾಡಿದರು. ಕೊನೆಗೆ, ಪರಿಸರ ಮತ್ತು ಅರಣ್ಯ ಇಲಾಖೆ ಮಧ್ಯ ಪ್ರವೇಶದಿಂದಾಗಿ ಮೋದಿ ಸರಕಾರ ಯೋಜನೆಗೆ ಭೂಮಿ ನೀಡುವ ತೀರ್ಮಾನದಿಂದ ಹಿಂದೆ ಸರಿಯಿತು. ಜತೆಗೆ, ರೈತರ ಪರವಾಗಿ ನಿಂತರು ಎಂಬ ಕಾರಣಕ್ಕೆ ತನ್ನದೇ ಪಕ್ಷದ ಶಾಸಕ ಕಲ್ಸಾರಿಯಾನನ್ನು ಉಚ್ಚಾಟಿಸಲಾಯಿತು.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೋದಿ ಮುಂದಿಟ್ಟ ಅಭಿವೃದ್ಧಿ ಯೋಜನೆಗಳು ಹಾಗೂ ಅದಕ್ಕೆ ಎದುರಾದ ಇಂತಹ ಹಲವು ವಿರೋಧಗಳು ಇತಿಹಾಸದಲ್ಲಿ ದಾಖಲಾಗಿ ಹೋಗಿವೆ. 2013ರ ಸುಮಾರಿಗೆ ಗುಜರಾತ್ ರಾಜ್ಯಕ್ಕಿಂತಲೂ ಮಹಾರಾಷ್ಟ್ರ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಪ್ರಮುಖ ರಾಜ್ಯ ಎನ್ನಿಸಿಕೊಂಡಿತ್ತು.

ಮೋದಿ ಮುಖ್ಯಮಂತ್ರಿ ಆಗಿದ್ದಾಗಿನ ಅವಧಿಯಲ್ಲಿ ಯೋಜನಾ ಆಯೋಗ ನೀಡಿದ ರೇಟಿಂಗ್ನಲ್ಲಿ ಕುಸಿದು ಬಿದ್ದಿತ್ತು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳದಂತಹ ಪುಟ್ಟ ರಾಜ್ಯ ಗುಜರಾತ್ ರಾಜ್ಯಕ್ಕಿಂತಲೂ 16 ಪಟ್ಟು ಮೇಲಿತ್ತು.

ಹೀಗಿದ್ದರೂ, ಮೋದಿ ಇಡೀ ದೇಶಕ್ಕೆ 'ಗುಜರಾತ್ ಅಭಿವೃದ್ಧಿ ಮಾದರಿ'ಯನ್ನು ಹರಡಿದ್ದರು ಮತ್ತು ವಿದ್ಯಾವಂತ ಮಧ್ಯಮ ವರ್ಗ ಅದನ್ನು ಒಪ್ಪಿ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡುವಂತೆ ಮನವೊಲಿಸಿದ್ದರು. ಅದು ಸಾಧ್ಯವಾಗಿದ್ದಾದರೂ ಹೇಗೆ?ಅದನ್ನು ಹುಡುಕಿಕೊಂಡು ಹೊರಟರೆ ಮೊದಲು ಎದುರಾಗುವುದು ಮೋದಿ ಒಳಗಿರುವ ಒಬ್ಬ ಚತುರ ಆಡಳಿತಗಾರ, ನಂತರ ಸಿಗುವುದು ಮೋದಿ ತಮ್ಮನ್ನು ತಾವು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಒಪ್ಪುವ ಬೆಲೆಯಲ್ಲಿ, ಮಾದರಿಯಲ್ಲಿ ಮಾರಿಕೊಳ್ಳಲು ಸಿದ್ಧಿಸಿಕೊಂಡ ಕಲೆ, ತದನಂತರ ಎಟಕುವುದು ಮೋದಿ ಸುತ್ತ ಕಳೆದ ಒಂದು ದಶಕದ ಅವಧಿಯಲ್ಲಿ ಕೆಲಸ ಮಾಡಿಕೊಂಡು ಬಂದ 'ಪಬ್ಲಿಕ್ ರಿಲೇಶನ್' ಕಂಪನಿಗಳು ಉರುಳಿಸಿದ ದಾಳಗಳು.


       ಗೂಗಲ್ ಹುಡುಕಾಟದಲ್ಲಿ ಸಿಕ್ಕ ಮೋದಿ ಭಾವಚಿತ್ರ.
ಗೂಗಲ್ ಹುಡುಕಾಟದಲ್ಲಿ ಸಿಕ್ಕ ಮೋದಿ ಭಾವಚಿತ್ರ.

'ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ದಿನಾ ಬೆಳಗ್ಗೆ ಅರ್ಧ ಗಂಟೆ ಅಂತರ್ಜಾಲದಲ್ಲಿ ಐಐಟಿ ವಿಧ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ' ಎಂಬುದರಿಂದ ಶುರುವಾಗಿ, 'ಮೋದಿ ವಾರಣಾಸಿ ಬಸ್ ನಿಲ್ದಾಣವನ್ನು ನ್ಯೂಯಾರ್ಕ್ ಬಸ್ ನಿಲ್ದಾಣದ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಾರೆ, ಅಹಮದಾಬಾದ್ ರಸ್ತೆಗಳು ಸಿಂಗಪೂರ್ ಮಾದರಿಯಲ್ಲಿ ಮರು ನಿರ್ಮಾಣ ಮಾಡಲಾಗಿದೆ, ಉತ್ತರಖಾಂಡ್ ರಾಜ್ಯದಲ್ಲಿ ಪ್ರವಾಹ ಬಂದಾಗ ಮೋದಿ 1500 ಜನರನ್ನು ಖುದ್ದಾಗಿ ಹೋಗಿ ರಕ್ಷಣೆ ಮಾಡಿದರು' ಎಂಬಿತ್ಯಾದಿ ಸುದ್ದಿಗಳನ್ನು ನೀವು ಓದಿದ್ದೀರಾ, ಕೇಳಿದ್ದೀರಾ.

ಆ ಮೂಲಕ ಮೋದಿ ಎಂದರೆ ಒಂದು ರೀತಿಯ 'ಇಮೇಜ್' ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಆದರೆ, ಈ ಎಲ್ಲಾ ಕಟ್ಟುಕತೆಗಳನ್ನು ಸುದ್ದಿಗಳ ರೂಪದಲ್ಲಿ, ವರದಿಗಳ ರೂಪದಲ್ಲಿ ದೊಡ್ಡ ದೊಡ್ಡ ಮಾಧ್ಯಮಗಳು ಮುದ್ರಿಸುವಂತೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಂತೆ ನೋಡಿಕೊಂಡವರು ಮೋದಿ ಜತೆಗಿರುವ, ಅಮೆರಿಕಾ ಮೂಲಕ 'ಆಪ್ಕೊ' ಎಂಬ ಪಿಆರ್ ಏಜೆನ್ಸಿ.

ನೀವು ಇವತ್ತು ಗೂಗಲ್ ಹುಡುಕಾಟದಲ್ಲಿ ನರೇಂದ್ರ ಮೋದಿ ಎಂದು ಇಂಗ್ಲಿಷ್ನಲ್ಲಿ ಕೊಟ್ಟರೆ, ವೃತ್ತಿಪರ ಫೊಟೋಗ್ರಾಫರ್ಸ್ ತೆಗೆದ ಮೋದಿ ಚಿತ್ರಗಳು ನಿಮಗೆ ಸಿಗುತ್ತವೆ. ಸೂಕ್ಷ್ಮವಾಗಿ ಗಮನಿಸಿ ನೋಡಿ, ಅವುಗಳಲ್ಲಿ ಬಹುತೇಕ ಚಿತ್ರಗಳು ಪ್ರಜ್ಞಾಪೂರ್ವಕವಾಗಿ ತೆಗೆದ, ಸಿನೆಮಾಗೆ ನಡೆಸಿದ ಫೊಟೋ ಶೂಟ್ ರೀತಿಯ ಛಾಯಾಚಿತ್ರಗಳಾಗಿವೆ.

ಹೀಗೆ, ಚಿಕ್ಕದೊಂದು ವಿಚಾರದಿಂದ ಶುರುವಾಗಿ ಮೋದಿ ಮುಖ್ಯಮಂತ್ರಿ ಆಗಿದ್ದಷ್ಟು ದಿನ, 'ವೈಬ್ರೆಂಟ್ ಗುಜರಾತ್' ಹೆಸರಿನಲ್ಲಿ ಇಮೇಜ್ ಬಿಲ್ಡಿಂಗ್ ಕೆಲಸ ಮಾಡಿದ್ದು ಆಪ್ಕೊ ಇಂಟರ್ ನ್ಯಾಷನಲ್ ಎಂಬ ಕಂಪನಿ.

1984ರಲ್ಲಿ ವಾಷಿಂಗ್ಟನ್ ಮೂಲದ ಕಾನೂನು ಸಲಹೆ ನೀಡುವ ಕಂಪನಿಯೊಂದು ಶುರುಮಾಡಿದ್ದು ಆಪ್ಕೊ ಇಂಟರ್ ನ್ಯಾಷನಲ್. ವಿದೇಶದಲ್ಲಿ ಹಲವು ರಾಜಕೀಯ ನಾಯಕರ ಚರಿಷ್ಮಾ ಹೆಚ್ಚಿಸಲು ಈ ಕಂಪನಿ ಕೆಲಸ ಮಾಡಿದೆ. ಕುಸಿದು ಬಿದ್ದಿದ್ದ ವಾಲ್ ಸ್ಟ್ರೀಟ್ ಬಗ್ಗೆ ಶೇರುದಾರರಲ್ಲಿ ಭರವಸೆಯ ಇಮೇಜ್ ಕಟ್ಟಿಕೊಡುವ ಟೆಂಡರ್ ಪಡೆದುಕೊಂಡಿದ್ದು ಇದೇ ಕಂಪನಿ.

2007ರ ಸುಮಾರಿಗೆ ಮೋದಿ ಜತೆ ಒಡಂಬಡಿಕೆ ಮಾಡಿಕೊಂಡ ಆಪ್ಕೊ ಹೇಗೆಲ್ಲಾ ಕಾರ್ಯಚರಣೆಯನ್ನು ನಡೆಸಿತು ಎಂಬುದಕ್ಕೆ ಬೆಂಗಳೂರು ಮೂಲದ ಪತ್ರಕರ್ತರೊಬ್ಬರು ಕೆಳಗಿನ ಪ್ರಸಂಗವನ್ನು ಉದಾಹರಣೆಯಾಗಿ ಮುಂದಿಡುತ್ತಾರೆ."ಅದು ಲೋಕಸಭೆ ಚುನಾವಣೆಗೆ ಭಾರಿ ತಯಾರಿಗಳು ನಡೆಯುತ್ತಿದ್ದ ಸಮಯ. ಮೋದಿ ತ್ರಿಡಿ ಪ್ರೊಜೆಕ್ಟರ್ ಬಳಸಿ ತಮ್ಮ ಭಾಷಣವನ್ನು ನೇರವಾಗಿ ಜನರಿಗೆ ತಲುಪಿಸುವ ಹೊಸ ಯೋಜನೆ ರೂಪಿಸಿದ್ದಾರೆ. ಅದರ ತಂತ್ರಜ್ಞಾನ ನೆರವು ನೀಡುತ್ತಿರುವ ಕಂಪನಿ ಬೆಂಗಳೂರು ಮೂಲದ್ದು. ಅದರ ಮೇಲೊಂದು ಸ್ಟೋರಿ ಮಾಡಿ ಎಂದು ಸಂಪಾದಕರು ಹೇಳಿದರು. ಬೆಂಗಳೂರಿನಲ್ಲಿ ಕಂಪನಿಯ ಕಚೇರಿ ಇದ್ದದ್ದು ಕೂಡ ನಿಜ. ಅವರನ್ನು ಭೇಟಿ ಮಾಡಿ ಬಂದು ವರದಿ ಬರೆದೆ. ಸುದ್ದಿ ಪ್ರಕಟವಾದ ದಿನವೇ ವಾಣಿಜ್ಯಇಲಾಖೆಯಿಂದ ಕರೆ ಬಂದು. ಅಂತಹದೊಂದು ಕಂಪನಿಯೇ ಇಲ್ಲ. ಅಷ್ಟು ದೊಡ್ಡ ವಹಿವಾಟು ನಡೆಸುವವರು ಕನಿಷ್ಟ ನೋಂದಣಿ ಮಾಡಿಸಿಕೊಂಡಿರುವುದಿಲ್ಲವಾ?' ಎಂದು ಅಧಿಕಾರಿಯೊಬ್ಬರು ಕೇಳಿದರು.

ನಂತರ ಗೊತ್ತಾಗಿದ್ದು ಏನು ಎಂದರೆ, ತ್ರಿಡಿಯಲ್ಲಿ ಮೋದಿ ಮೋಡಿ ಮಾಡುತ್ತಾರೆ ಎಂಬುದನ್ನು ಬರೆಸಲು ದೊಡ್ಡದೊಂದು ಡ್ರಾಮ ಕಂಪನಿಯನ್ನು ಸೃಷ್ಟಿಸಲಾಗಿತ್ತು. ಬಹುಶಃ ಅದರ ಹಿಂದೆ ಮೋದಿ ಪಿಆರ್ ಏಜೆನ್ಸಿಗಳು ಕೆಲಸ ಮಾಡಿರಬಹುದು. ನಾವು ಬರೆದು, ಪ್ರಕಟಿಸಿಯೂ ಆಗಿತ್ತು. ಮುಂದೆ ಏನೂ ನಡೆದೆ ಇಲ್ಲ ಎಂಬಂತೆ ಮೌನ ಕಾಯ್ದುಕೊಂಡೆವು'' ಎಂದು ವರದಿಗಾರರೊಬ್ಬರು ವಿವರಿಸುತ್ತಾರೆ.

‘ಮೋದಿ ಸವೆಸಿದ ಹಾದಿ-4’: ಎರಡು ವರ್ಷಗಳ ಸಾಧನೆ ಸುದ್ದಿಗಳನ್ನು ಓದುತ್ತಿರುವ ಈ ಹೊತ್ತಿನಲ್ಲಿ ಗಮನಿಸಬೇಕಿರುವ ಪಿಆರ್ ಏಜೆನ್ಸಿ ‘ಸತ್ಯ’ಗಳು!

ಇದು ಮೋದಿ, ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಲು ಬಳಸಿದ ತಂತ್ರಗಳ ಸ್ಯಾಂಪಲ್ ಅಷ್ಟೆ. ಸದ್ಯ ಅದನ್ನೆಲ್ಲಾ ಮೀರಿ ಮೋದಿಯನ್ನು ಜನ ನಂಬಿ ಮತ ಹಾಕಿದ್ದಾಗಿದೆ. ಅವರು ಅಧಿಕಾರಕ್ಕೇರಿ ಎರಡು ವರ್ಷಗಳೂ ಕಳೆದಿವೆ. ಈ ಸಮಯದಲ್ಲಿ ಮೋದಿ ಸಾಧನೆ ಬಗ್ಗೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ, ಅಂತರ್ಜಾಲದಲ್ಲಿ ಭಾರಿ ಸುದ್ದಿಗಳು ಹರಿದಾಡುತ್ತಿವೆ.

ಇದರಲ್ಲಿ ಎಷ್ಟು ಸ್ವಂತದ್ದು, ಎಷ್ಟು ಪಿಆರ್ ಏಜೆನ್ಸಿಗಳು ಕಡ ನೀಡಿದ್ದು? ಸತ್ಯ ಯಾವುದು, ಸುಳ್ಳುಗಳ ಕಂತೆ ಯಾವುದು? ಬಹುಶಃ ಸ್ವತಃ ಮೋದಿ ಅವರಿಗೂ ಅದನ್ನು ಬಿಡಿಸಿ ಹೇಳಲು ಕಷ್ಟವಾಗುವಷ್ಟು ಪ್ರಮಾಣದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ. ಅದು ಮೋದಿ ಪರ ಮತ್ತು ವಿರೋಧಗಳ ನಡುವೆ ಕಳೆದು ಹೋಗುತ್ತಿದೆ.

(ನಾಳೆಗೆ)