‘ಮೋದಿ ಸವೆಸಿದ ಹಾದಿ’-3: ಗುಜರಾತ್ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ವಾಜಪೇಯಿ ಹೆಗಲ ಮೇಲೆ ಬಂದೂಕಿಟ್ಟ ಮೋದಿ!
SPECIAL SERIES

‘ಮೋದಿ ಸವೆಸಿದ ಹಾದಿ’-3: ಗುಜರಾತ್ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ವಾಜಪೇಯಿ ಹೆಗಲ ಮೇಲೆ ಬಂದೂಕಿಟ್ಟ ಮೋದಿ!

ರಾಜಕೀಯ ಅಖಾಡದಲ್ಲಿ ಮೋದಿ ಬೆಳೆದ ಕತೆಯನ್ನು ಹೇಳುವುದು ಅಂದರೆ, 1970ರ ದಶಕದಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಹಿಂದುತ್ವದ ಪ್ರಯೋಗಗಳನ್ನು, ಪಡೆದ ಅಧಿಕಾರವನ್ನು, ಅದನ್ನು ಅನುಭವಿಸಲು ಮೂರು ನಾಯಕರು ನಡೆಸಿದ ಭಿನ್ನ ತಂತ್ರಗಳನ್ನು ಹೇಳಿದಂತೆ.

ಸ್ವಾತಂತ್ರ್ಯ ನಂತರ ನಡೆಸಿದ ಗಾಂಧಿ ಹತ್ಯೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ನಿಷೇಧ ಹೇರಲಾಯಿತು. ಈ ಸಮಯದಲ್ಲಿ ಸಂಘದ ಬಹುತೇಕ ನಾಯಕರು ಭೂಗತರಾದರು, ಇಲ್ಲವೇ ತಮ್ಮನ್ನು ತಾವು ತೆರೆಮರೆಯಲ್ಲಿ ಉಳಿಸಿಕೊಂಡು ಕೆಲಸ ಮಾಡತೊಡಗಿದರು. ಹೆಚ್ಚು ಕಡಿಮೆ ಮುಗಿದೇ ಹೋಯಿತು ಎಂಬಂತಾಗಿದ್ದ ಸಂಘಪರಿವಾರದ ಸಂಘಟನೆಗಳು 1948ರಲ್ಲಿ ಆರ್ ಎಸ್ಎಸ್ ಮೇಲಿದ್ದ ನಿಷೇಧ ತೆರವಿನ ನಂತರ ಮತ್ತೆ ಕಾರ್ಯಚಟುವಟಿಕೆಗಳನ್ನು ಶುರುಮಾಡಿದವು.

ಈ ಸಮಯದಲ್ಲಿ ಸಂಘದ ಶಾಖೆಗಳಿಗೆ 'ಬಾಲ ಸೇವಕ'ರನ್ನು ಕರೆತರುವ ಹೊಣೆ ಹೊತ್ತುಕೊಂಡಿದ್ದವರಲ್ಲಿ ಬಾಬುಭಾಯಿ ನಾಯಕ್ ಎಂಬ ಮಹಾರಾಷ್ಟ್ರ ಮೂಲದ ಪೂರ್ಣಾವಧಿ ಕಾರ್ಯಕರ್ತರೂ ಒಬ್ಬರು. ಇವರು 1958 ಸುಮಾರಿಗೆ ಗುಜರಾತಿನ ವಾಡ್ನಗರದಲ್ಲಿ ಒಂದಷ್ಟು ಬಾಲಕರನ್ನು ಕಲೆಹಾಕಿ ಸಂಘದ ಪ್ರಮಾಣ ವಚನ ಬೋಧಿಸಿದರು. ಅಂದು ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ನರೇಂದ್ರ ಮೋದಿ ಒಬ್ಬರು. ಆಗಿನ್ನೂ ಚಿಕ್ಕ ವಯಸ್ಸು.

ವಾಡ್ನಗರದ ಪ್ರವೇಶದಲ್ಲಿಯೇ ಇದ್ದ ಭಗತಾಚಾರ್ಯ ನಾರಾಯಣ ಶಾಲೆಯಲ್ಲಿ ಪ್ರೈಮರಿ ಓದುತ್ತಿದ್ದ ಬಾಲಕ ಮೋದಿ. ದಾಮೋದರ್ ದಾಸ್ ಮೂಲ್ಚಂದ್ ಮೋದಿ ಹಾಗೂ ಹೀರಾಬೆನ್ ದಂಪತಿಯ ಆರು ಮಕ್ಕಳ ಪೈಕಿ ಮೂರನೇ ಮಗ.ಮನೆಯಲ್ಲಿ ಹಾಗೂ ಶಾಲೆಯಲ್ಲಿ ಸ್ವಲ್ಪ ಹೆಚ್ಚೇ ಓವರ್ ಆ್ಯಕ್ವಿವ್ ಆಗಿದ್ದ ಮೋದಿಗೆ ವೇದಿಕೆ ಸಿಕ್ಕಿದ್ದು ಸಂಘದ ಶಾಖೆಗಳಲ್ಲಿ.

ಘಂಚಿ ಎಂಬ ಕೆಳ ಸ್ಥರದ ಜಾತಿಯಿಂದ ಬಂದ ಮೋದಿ ಕುಟುಂಬ ವೃತ್ತಿಯಲ್ಲಿ ಎಣ್ಣೆ ಮಾರಾಟ ಮಾಡುತ್ತಿದ್ದವರು. ಮನೆಯ ಆರ್ಥಿಕತೆಯನ್ನು ಭರಿಸುವ ದೃಷ್ಟಿಯಿಂದ ಮೋದಿ ಶಾಲೆ ಹಾಗೂ ಶಾಖೆ ಚಟುವಟಿಕೆಗಳಲ್ಲಿ ಮಿಕ್ಕ ಸಮಯದಲ್ಲಿ ವಾಡ್ನಗರ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಲು ಶುರುಮಾಡಿದರು. ಕುಟುಂಬದಲ್ಲಿ 13ಕ್ಕೆಲ್ಲಾ ಗಂಡು ಮಕ್ಕಳ ಮದುವೆ, 18 ತುಂಬುತ್ತಿದ್ದ ಹಾಗೆ ದಾಂಪತ್ಯದ ರಿವಾಜುಗಳನ್ನು ಪಾಲಿಸಲಾಗುತ್ತಿತ್ತು. ಮೋದಿಗೆ 13 ಆಗುತ್ತಲೇ ಪಕ್ಕದ ಬ್ರಾಹ್ಮಣವಾಡದಿಂದ ಜಶೋಧಬೆನ್ ಚಿಮ್ಮನ್ ಲಾಲ್ ಎಂಬ 10 ವರ್ಷದ ಬಾಲಕಿ ಜತೆ ಮದುವೆ ಮಾಡಿಸಲಾಯಿತು.

18 ತುಂಬುವ ಹೊತ್ತಿಗೆ ಮೋದಿ ತಾಯಿ ಮಗನ ದಾಂಪತ್ಯ ಜೀವನವನ್ನು ಶುರುಮಾಡಿಸಲು ಸಿದ್ಧತೆ ಮಾಡಿಸಿಕೊಂಡಿದ್ದರು. ಆದರೆ, ಮೋದಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಮುಂದೆ ಎರಡು ವರ್ಷ ಆತ ಹಿಮಾಲಯ ಸುತ್ತುತ್ತಿದ್ದ ಎಂಬ ವರದಿಗಳಿವೆ.

ಸುತ್ತಾಟ ಮುಗಿಸಿ ಮನೆಗೆ ಬಂದ ನಂತರ ಮತ್ತೊಮ್ಮೆ ಮೋದಿ ಕುಟುಂಬ ದಾಂಪತ್ಯ ಜೀವನ ನಡೆಸುವಂತೆ ಹೇಳಿದರಾದರೂ ಪ್ರಯೋಜನಕ್ಕೆ ಬರಲಿಲ್ಲ. ಮತ್ತೆ ಮನೆ ಬಿಟ್ಟ ಮೋದಿ ಅಹಮದಾಬಾದ್ ಸಿಟಿ ಬಸ್ ನಿಲ್ದಾಣದ ಬಳಿ ಟೀ ಮಾರಾಟ ಶುರುಮಾಡಿದರು. ಅಲ್ಲಿಗೆ ಆರ್ ಎಸ್ಎಸ್ ಶಾಖೆ ಮುಗಿಸಿ ಟೀ ಕುಡಿಯಲು ಬರುವವರ ಪರಿಚಯವಾಯಿತು. ಹಳೆಯ ಸಂಘದ ಸೆಳೆತದಿಂದ ಕೆಲವೇ ದಿನಗಳಲ್ಲಿ ಅಹಮದಾಬಾದ್ ನಗರದಲ್ಲಿದ್ದ ಹೆಡ್ಗೆವಾರ್ ಭವನದಲ್ಲಿ ಮೋದಿ ಹೊಸ ಜೀವನ ಶುರುವಾಯಿತು.

ಹೆಚ್ಚು ಕಡಿಮೆ ಅದೇ ಅವಧಿಯಲ್ಲಿ ದೇಶಾದ್ಯಂತ ಆರ್ ಎಸ್ಎಸ್ 'ನವ ನಿರ್ಮಾಣ'ದ ಹೆಸರಿನಲ್ಲಿ ಸಂಘವನ್ನು ಪುನರ್ ಕಟ್ಟುವ ಕೆಲಸದಲ್ಲಿ ನಿರತವಾಗಿತ್ತು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು, ಸಂಘದ ಪಾಲಿಗೆ ಹೋರಾಟದ ಹೊಸ ಭೂಮಿಕೆ ಸಿಕ್ಕಂತಾಗಿತ್ತು. 1970ರ ಕೊನೆಯಲ್ಲಿ ನಡೆದ ಈ ಬೆಳವಣಿಗೆಗಳು ಗುಜರಾತ್ ಆರ್ ಎಸ್ಎಸ್ನಲ್ಲಿ ದೊಡ್ಡ ಮಟ್ಟದ ಚಟುವಟಿಕೆಗಳನ್ನು ಹುಟ್ಟುಹಾಕಿತ್ತು.

ಇದೇ ಸಮಯದಲ್ಲಿ ಹೆಡ್ಗೆವಾರ್ ಭವನದಲ್ಲಿ ಹಿರಿಯ ಪ್ರಚಾರಕರ ಬಟ್ಟೆ ತೊಳೆದುಕೊಂಡು, ನೆಲ ಒರಿಸಿಕೊಂಡಿದ್ದ ಮೋದಿಗೆ ಹೆಚ್ಚಿನ ಹೊಣೆಗಾರಿಕೆಗಳು ಸಿಗಲಾರಂಭಿಸಿದವು. ತುರ್ತು ಪರಿಸ್ಥಿತಿ ಸಮಯದಲ್ಲಿ ರಹಸ್ಯವಾಗಿ ಕರಪತ್ರಗಳನ್ನು ಮುದ್ರಿಸಿ ದೇಶಾದ್ಯಂತ ಕಳುಹಿಸುವ ಕೆಲಸವನ್ನು ಮೋದಿಗೆ ವಹಿಸಲಾಗಿತ್ತು.

"ಮೋದಿ ಎಲ್ಲರಂತಿರಲಿಲ್ಲ. ಬೆಳಗ್ಗಿನ ಶಾಖೆಗಳಿಗೆ ಬರದೇ ನಿದ್ದೆ ಮಾಡುತ್ತಿದ್ದರು. ಆದರೆ, ಕೆಲಸದ ವಿಚಾರದಲ್ಲಿ ಒಬ್ಬಂಟಿಯಾಗಿ ನಿಭಾಯಿಸುತ್ತಿದ್ದರು. ಹೀಗಾಗಿ, ಶಿಸ್ತಿನ ವಿಚಾರದಲ್ಲಿ ಸಂಘದ ನಾಯಕರು ಮೋದಿ ಬಗ್ಗೆ ಸಿಟ್ಟಾದರೂ, ಅಚ್ಚುಕಟ್ಟಿನ ಕೆಲಸದ ಕಾರಣಕ್ಕೆ ಏನೂ ಹೇಳುತ್ತಿರಲಿಲ್ಲ,'' ಎಂದು ಮೋದಿ ಜತೆಗೆ ಅಂದು ಸಂಘದಲ್ಲಿದ್ದ ಪ್ರಚಾರಕರು 'ಕ್ಯಾರವಾನ್' ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ವಿವರಣೆ ನೀಡುತ್ತಾರೆ.

ದಿನಗಳು ಕಳೆಯುತ್ತಿದ್ದವು. ಮೋದಿ, ಇತರರಿಗಿಂತ ಹೆಚ್ಚು ಆಶಾವಾದಿ ಮತ್ತು ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಿದ್ದದರಿಂದ ಸಹಜವಾಗಿಯೇ ಸಂಘದ ನಾಯಕರಲ್ಲಿಯೂ ವಿಶ್ವಾಸ ಬೆಳೆಯಿತು. 1978ರಲ್ಲಿ ಗುಜರಾತಿನ 6 ಜಿಲ್ಲೆಗಳಲ್ಲಿ ಸಂಘದ ಪ್ರಚಾರದ ಹೊಣೆಯನ್ನು ಮೋದಿಗೆ ವಹಿಸಲಾಯಿತು. ಅದಾದ ಮೂರು ವರ್ಷಗಳಲ್ಲಿಯೇ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಮೋದಿಯನ್ನು ನೇಮಕ ಮಾಡಿಲಾಯಿತು. ಅದು ರಾಜಕೀಯ ಪಕ್ಷದ ಜತೆಗಿನ ಮೋದಿಯ ಮೊದಲ ಮುಖಾಮುಖಿ. ಮುಂದಿನ 8 ವರ್ಷಗಳ ಕಾಲ ಅದೇ ಸ್ಥಾನದಲ್ಲಿ ಮೋದಿ ಮುಂದುವರಿದರು.

ಈ ಸಮಯದಲ್ಲಿ ರಾಜ್ಯದಲ್ಲಿ ಸರಣಿ ಕೋಮು ಸಂಘರ್ಷಗಳು ನಡೆದವು. ಪರಿಣಾಮ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಸ್ಥಾನಗಳು 11ರಿಂದ 121ಕ್ಕೆ ಏರಿಯಾಯಿತು.ಅವತ್ತಿನ ಗುಜರಾತ್ ಬಿಜೆಪಿಯಲ್ಲಿ ದೊಡ್ಡ ನಾಯಕರು ಎಂದು ಗುರುತಿಸಿಕೊಂಡವರು ಶಂಕರ್ ಸಿಂಗ್ ವಘೇಲಾ ಹಾಗೂ ಕೇಶುಭಾಯಿ ಪಟೇಲ್.

ಇವರ ನಡುವೆ ಮೋದಿ ಕೂಡ ತಮ್ಮ ಸ್ಥಾನದ ವ್ಯಾಪ್ತಿ ಮೀರಿ ಅಧಿಕಾರವನ್ನು ಚಲಾವಣೆ ಮಾಡುವ ಮೂಲಕ ಉಬಯ ನಾಯಕರ ನಡುವೆ ತಮ್ಮನ್ನು ಗುರುತಿಸಬೇಕು ಎಂಬ ಬಯಕೆ ವ್ಯಕ್ತಪಡಿಸುತ್ತಿದ್ದರು. ಹೀಗಿರುವಾಗಲೇ 1995 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಕೇಶುಭಾಯಿ ಪಟೇಲ್ ಮುಖ್ಯಮಂತ್ರಿಯಾದರು. ಇದರಿಂದ ಕಸಿವಿಸಿಗೊಂಡ ಶಂಕರ್ ಸಿಂಗ್ ವಘೇಲಾ, ಅರ್ಧದಷ್ಟು ಶಾಸಕರನ್ನು ಕರೆದುಕೊಂಡು 'ರೆಸಾರ್ಟ್ ರಾಜಕಾರಣ' ಶುರುಮಾಡಿದರು. ಸಂಧಾನಕ್ಕೆ ಬಂದವರು ಅಟಲ್ ಬಿಹಾರಿ ವಾಜಿಪೇಯಿ.

ಕೊನೆಗೆ, ಇಬ್ಬರೂ ಬೇಡ ಎಂದು ಸುರೇಶ್ ಮೆಹ್ತಾ ಎಂಬ ಬಿಜೆಪಿ ಕೆಳಹಂತದ ನಾಯಕನ್ನು ಮುಖ್ಯಮಂತ್ರಿ ಮಾಡಿದರು. ಈ ಸಮಯದಲ್ಲಿ ಮೋದಿ ಕೇಶುಭಾಯಿ ಪಟೇಲ್ ಜತೆ ನಿಂತುಕೊಂಡು ವಘೇಲ ವಿರುದ್ಧ ಕತ್ತಿ ಮಸೆಯುತ್ತಿದ್ದರು. ಮುಂದೆ, ಲೋಕಸಭೆಯಲ್ಲಿ ವಘೇಲ ಹೀನಾಯವಾಗಿ ಸೋತು ಹೋದರು. ಇದಕ್ಕೆ ಮೋದಿ ಮತ್ತು ಸಂಘ ಪರಿವಾರ ಕಾರಣ ಎಂದು ಆರೋಪಿಸಿ ಅವರು ಬಿಜೆಪಿಯಿಂದ ಹೊರನಡೆದರು. ಕೇಶುಭಾಯಿ ಪಟೇಲ್ ಮತ್ತೆ ಗುಜರಾತ್ ಮುಖ್ಯಮಂತ್ರಿಯಾದರು.


       ಅಂದಿನ ಗುಜರಾತ್ ಬಿಜೆಪಿ ನಾಯಕರ ಜತೆ ಮೋದಿ.
ಅಂದಿನ ಗುಜರಾತ್ ಬಿಜೆಪಿ ನಾಯಕರ ಜತೆ ಮೋದಿ.

ಈ ಸಮಯದಲ್ಲಿ ಮೋದಿ, ಪಟೇಲ್ ವಿರುದ್ಧ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕಿವಿ ಚುಚ್ಚಲು ಶುರುಮಾಡಿದ್ದರು. ಕೊನೆಗೆ, ಇದು ವಿಕೋಪಕ್ಕೆ ಹೋದಾಗ ಗುಜರಾತ್ ರಾಜ್ಯದಿಂದಲೇ ಮೋದಿಯನ್ನು ಹೊರಕ್ಕೆ ಕಳುಹಿಸಬೇಕು ಎಂದು ಪಟೇಲ್ ಪಟ್ಟು ಹಿಡಿದರು. ಮೋದಿಯನ್ನು ಉತ್ತರ ಭಾರತದ ರಾಜ್ಯಗಳ ಹೊಣೆಗಾರಿಕೆ ಕೊಟ್ಟು ದಿಲ್ಲಿಗೆ ಕರೆಸಿಕೊಂಡರು ಬಿಜೆಪಿಯ ಹಿರಿಯ ನಾಯಕರು. ವಾಜಪೇಯಿ ಪ್ರಧಾನಿಯಾಗುತ್ತಲೇ ಮೋದಿಯನ್ನು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಯಿತು.

ಪಕ್ಷ ಮತ್ತು ಸಂಘದ ನಡುವೆ ಸಮನ್ವಯ ಸಾಧಿಸುವ ಈ ಸ್ಥಾನದಲ್ಲಿದ್ದುಕೊಂಡೇ ಮೋದಿ, ಗುಜರಾತ್ ಬಿಜೆಪಿ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಶುರುಮಾಡಿದರು. ಅಂತಿಮವಾಗಿ, 2001ರಲ್ಲಿ ಪಟೇಲ್ ಕೆಳಗಿಳಿಸಿ ಗುಜರಾತ್ ಮುಖ್ಯಮಂತ್ರಿ ಎಂದು ಹೈಕಮಾಂಡ್ ಮೂಲಕವೇ ಹೇಳಿಸುವಲ್ಲಿ ಸಫಲರಾದರು.ಅಲ್ಲಿಗೆ, ಮೋದಿ ಮಹತ್ವಾಕಾಂಕ್ಷೆಗಳು ಮುಗಿಯಲಿಲ್ಲ. ರಾಜ್ಯ ಮಟ್ಟದಲ್ಲಿ ಹಿರಿಯ ನಾಯಕರನ್ನು ಮಣಿಸಿದ ಮೋದಿಯ ಮುಂದಿನ ನಡೆಗಳು ಇವತ್ತು ಈ ದೇಶದ ಪ್ರಧಾನಿ ಸ್ಥಾನದವರೆಗೆ ಕರೆತಂದು ನಿಲ್ಲಿಸಿವೆ. ಅದಕ್ಕಾಗಿ ಮೋದಿ ಬಳಸಿದ ರಾಜಕೀಯ ತಂತ್ರಗಾರಿಕೆ ಮತ್ತೊಂದು ಸುತ್ತಿನ ರಾಜಕೀಯ ಚದುರಂಗದಾಟ...

(ನಾಳೆಗೆ)