‘ಮೋದಿ ಸವೆಸಿದ ಹಾದಿ- 2’: ದೇಶ ಗೆಲ್ಲುವ ಮುನ್ನವೇ ಉದ್ಯಮಪತಿಗಳನ್ನು ಮಣಿಸಲು ರಣತಂತ್ರ!
SPECIAL SERIES

‘ಮೋದಿ ಸವೆಸಿದ ಹಾದಿ- 2’: ದೇಶ ಗೆಲ್ಲುವ ಮುನ್ನವೇ ಉದ್ಯಮಪತಿಗಳನ್ನು ಮಣಿಸಲು ರಣತಂತ್ರ!

ಗುಜರಾತ್ ರಾಜ್ಯಕ್ಕೂ ಉದ್ಯಮಕ್ಕೂ ಪುರಾತನ ಸಂಬಂಧವೊಂದಿದೆ. ಹೀಗಾಗಿಯೇ ಗುಜರಾತಿಗಳ ವ್ಯಾಪಾರಿ ಮನೋಭಾವದ ಕುರಿತು ಹಲವು ದಂತಕತೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ 1498ರ ಸುಮಾರಿಗೆ ಭಾರತಕ್ಕೆ ಬಂದಿಳಿದ ವಾಸ್ಕೋ-ಡ-ಗಾಮನಿಗೆ ಆಫ್ರಿಕಾದಿಂದ ಭಾರತಕ್ಕೆ ಸಮುದ್ರ ಮಾರ್ಗವನ್ನು ತೋರಿಸಿದವನು ಗುಜರಾತ್ ಮೂಲದ ವ್ಯಾಪಾರಿ ಕಾಂಜಿ ಮಲಾಮ್ ಎಂಬುದು ಒಂದು. ಇವತ್ತು ಗುಜರಾತ್ ಇತಿಹಾಸವನ್ನು ಹುಡುಕಿಕೊಂಡು ಹೊರಟರೆ ಇಂತಹ ಹಲವು ಕತೆಗಳು ಸಿಗುತ್ತವೆ.

ಈ ವಿಚಾರ ಇಲ್ಲಿ ಯಾಕೆ ಎಂದರೆ, ಇವತ್ತಿಗೆ ಐದು ವರ್ಷಗಳ ಹಿಂದೆ ಮೋದಿ ಇಟ್ಟ ನಡೆಯನ್ನು ಅರ್ಥಮಾಡಿಕೊಳ್ಳಲು ಇದು ಅಗತ್ಯ. ಅದು 2011ರ ಜನವರಿ ತಿಂಗಳು. ಗುಜರಾತಿನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಸುಮಾರು 10 ಸಾವಿರ ಉದ್ಯಮಿಗಳನ್ನು ಗುಡ್ಡ ಹಾಕಲಾಗಿತ್ತು. 100ಕ್ಕೂ ಹೆಚ್ಚು ದೇಶಗಳಿಂದ ಬಂಡವಾಳ ಹೂಡುವ ಆಸಕ್ತರು ಅಲ್ಲಿ ನೆರೆದಿದ್ದರು. ಅವತ್ತು ನಡೆದ ಬಂಡವಾಳ ಹೂಡಿಕೆಯ ಭವ್ಯ ಸಮಾವೇಶದಲ್ಲಿ ತಮ್ಮ ಎಂದಿನ ರೇಶ್ಮೆ ಕೋಟ್ ಧರಿಸಿ ಮಿಂಚುತ್ತಿದ್ದವರು ಗುಜರಾತಿನ ಅವತ್ತಿನ ಮುಖ್ಯಮಂತ್ರಿ ನರೇಂದ್ರ ಮೋದಿ.

ಅವರ ಅಕ್ಕಪಕ್ಕದಲ್ಲಿ ಭಾರತದ ಉದ್ಯಮಿಗಳಾದ ಅನಿಲ್ ಅಂಬಾನಿ ಹಾಗೂ ರತನ್ ಟಾಟಾ ಕುಳಿತಿದ್ದರು. 'ವೈಬ್ರಂಟ್ ಗುಜರಾತ್' ಹೆಸರಿನಲ್ಲಿ ನಡೆದ ಈ ಬಂಡವಾಳ ಹೂಡಿಕೆ ಸಮಾವೇಶ ದೇಶದ ಆರ್ಥಿಕತೆಯಲ್ಲಿ ಹೊಸದೊಂದು ದಾಖಲೆ ಬರೆದಿತ್ತು. ಸುಮಾರು 45, 000 ಸಾವಿರ ಕೋಟಿ ಡಾಲರ್ ಮೊತ್ತದ ಹೂಡಿಕೆ ಮಾಡಲು ನಾನಾ ದೇಶಗಳ ಉದ್ದಿಮೆಗಳು ಮುಂದೆ ಬಂದಿದ್ದವು. ಅವೆಲ್ಲವಕ್ಕೂ ಜಮೀನು, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಮೋದಿ ನೇತೃತ್ವದ ರಾಜ್ಯ ಸರಕಾರ ಅವಕಾಶ ಮಾಡಿಕೊಡುವುದಾಗಿ ಘೋಷಿಸಿತ್ತು.

ಮಾರನೇ ದಿನ, ದೇಶದ ಪ್ರಮುಖ ದಿನ ಪತ್ರಿಕೆಗಳಲ್ಲಿ 'ವೈಬ್ರೆಂಟ್ ಗುಜರಾತ್' ಭಾರಿ ಯಶಸ್ವಿಯಾದ ಬಗೆಯನ್ನು ನಾನಾ ಆಯಾಮಗಳಲ್ಲಿ ವಿಶ್ಲೇಷಿಸಲಾಗಿತ್ತು. ಈ ಎಲ್ಲಾ ವಿಶ್ಲೇಷಣೆಗಳ ಕೇಂದ್ರಬಿಂದು ಸಹಜವಾಗಿಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಗಿದ್ದರು. ಮೋದಿ ಭಾರತ ಆರ್ಥಿಕ ವ್ಯವಸ್ಥೆಯ ಹೊಸ ಕಣ್ಮಣಿಯಾಗಿ ಬಿಂಬಿತರಾಗಿದ್ದರು. ಅಲ್ಲೀವರೆಗೂ 'ನರಹಂತಕ', 'ಕೋಮುವಾದಿ', 'ಫ್ಯಾಸಿಸ್ಟ್' ಮತ್ತಿತರ ಮೋದಿ ಮೇಲಿದ್ದ ಆರೋಪಗಳ ಸ್ಥಾನವನ್ನು ಒಂದು ಪದ ಅಲಂಕರಿಸಿತ್ತು- ಅದು 'ವಿಕಾಸ ಪುರುಷ'.

ಹೀಗೊಂದು, ಹೊಸ ಬ್ರಾಂಡ್ ಇಮೇಜ್ ಮೋದಿ ಪಾಲಿಗೆ ಅನಾಯಾಸವಾಗಿ ಸಿಕ್ಕಿತ್ತು. ಅದಕ್ಕೆ ಕಾರಣವಾಗಿದ್ದು ಮತ್ತದೇ ಉದ್ದಿಮೆ, ಕೈಗಾರಿಕೋದ್ಯಮದ ಗುಜರಾತಿ ಹಿನ್ನೆಲೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘದಂತಹ ರಾಜಕೀಯೇತರ ಸಂಘಟನೆಯಲ್ಲಿ ಪೂರ್ಣಾವಧಿ ಕಾರ್ಯಕರ್ತನ ಹಿನ್ನೆಲೆಯಿಂದ ಬಂದ ಮೋದಿ ಯಾಕೆ ಉದ್ದಿಮೆಗಳ ಹಿಂದೆ ಬಿದ್ದರು ಎಂಬುದಕ್ಕೂ ಒಂದು ಹಿನ್ನೆಲೆ ಇದು.

ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಮತ್ತೊಂದು ಎಂಟು ವರ್ಷ ಹಿಂದಕ್ಕೆ ಹೋಗಬೇಕು. 2002ರ ಕೋಮು ಸಂಘರ್ಷದ ನಂತರ ಗುಜರಾತ್ ನಲುಗಿ ಹೋಗಿತ್ತು. ಆ ವರ್ಷ ಗುಜರಾತ್ ಮೂಲದ ಉದ್ಯಮ 200 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಕೋಮು ಸಂಘರ್ಷಗಳು ಹಾಗೆಯೇ ಮುಂದುವರಿದರೆ ಗುಜರಾತ್ ರಾಜ್ಯದಿಂದ ಉದ್ದಿಮೆಗಳು ಗುಳೇ ಹೋಗಲಿವೆ ಎಂಬ ವಾತಾವರಣ ನಿರ್ಮಾಣವಾಗಿತ್ತು.

ಗುಜರಾತ್ ಕೋಮು ಸಂಘರ್ಷವನ್ನು ಖಂಡಿಸಿದವರಲ್ಲಿ ಬೆಂಗಳೂರು ಮೂಲಕ ಉದ್ಯಮಿಗಳಾದ ನಾರಾಯಣ ಮೂರ್ತಿ, ಅಜೀಂ ಪ್ರೇಮ್ ಜಿ ಸೇರಿದಂತೆ ಹಲವು ದೊಡ್ಡ ಹೆಸರುಗಳ ಪಟ್ಟಿಯೇ ಇತ್ತು. ಇದರ ನಡುವೆಯೇ, ಮೋದಿ ವಿಧಾನಸಭೆ ಚುನಾವಣೆ ಎದುರಿಸಲು ಮುಂದಾದರು. ಬಿಜೆಪಿ ಹಿಂದೆಂದೂ ಇಲ್ಲದ ಭರ್ಜರಿ ವಿಜಯ ಮೂಲಕ ಮತ್ತೆ ಅಧಿಕಾರವನ್ನು ಹಿಡಿಯಿತು. ಮೋದಿ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಮರುಕ್ಷಣವೇ, ಕಾನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ನೇತೃತ್ವದಲ್ಲಿ ಉದ್ಯಮಿಗಳ ಜತೆ ಸಭೆಯೊಂದನ್ನು ಆಯೋಜಿಸುವಂತೆ ವಿಶೇಷ ಮನವಿ ಮಾಡಿಕೊಂಡರು.


       2003ರಲ್ಲಿ ದಿಲ್ಲಿಯಲ್ಲಿ ನಡೆದ ಸಿಐಐ ಸಭೆಯಲ್ಲಿ ಮೋದಿ.
2003ರಲ್ಲಿ ದಿಲ್ಲಿಯಲ್ಲಿ ನಡೆದ ಸಿಐಐ ಸಭೆಯಲ್ಲಿ ಮೋದಿ.

ಸಿಐಐ 2003ರ ಫೆಬ್ರವರಿಯಲ್ಲಿ ಗುಜರಾತ್ ಮುಖ್ಯಮಂತ್ರಿ ಜತೆ ಭಾರತದ ಉದ್ಯಮಿಗಳ ಸಭೆಯೊಂದನ್ನು ದಿಲ್ಲಿಯಲ್ಲಿ ಆಯೋಜಿಸಿತ್ತು. ರಾಹುಲ್ ಬಜಾಜ್, "2002 ಗುಜರಾತ್ ಪಾಲಿಗೆ ನತದೃಷ್ಟ ವರ್ಷ,'' ಎಂದು ಖಾರವಾದ ಪ್ರತಿಕ್ರಿಯೆ ಮೂಲಕವೇ ಮೊದಲು ಮಾತು ಶುರು ಮಾಡಿದರು. ಒಬ್ಬೊಬ್ಬರಾಗಿ ಮಾತನಾಡಿದ ಪ್ರಮುಖ ಉದ್ಯಮಿಗಳು ಗುಜರಾತ್ ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕಾಪಾಡುವುದು ಹಾಗೂ ಶಾಂತಿಯನ್ನು ಸ್ಥಾಪಿಸುವುದು ಮುಖ್ಯಮಂತ್ರಿಯ ಪ್ರಮುಖ ಕರ್ತವ್ಯವಾಗಬೇಕು ಎಂದು ಪಾಠ ಮಾಡಿದರು.

ಕೊನೆಗೆ, ಭಾಷಣಕ್ಕೆಂದು ಎದ್ದುನಿಂತ ಮೋದಿ ಮುಖದಲ್ಲಿ ಅತೃಪ್ತಿ, ಸಿಟ್ಟು, ಆಕ್ರೋಶಗಳು ಎದ್ದು ಕಾಣುತ್ತಿದ್ದವು. "ನೀವು ನಕಲಿ ಜಾತ್ಯಾತೀತರು... ಗುಜರಾತ್ ವಿಚಾರದಲ್ಲಿ ನಿಮ್ಮ ಹಿತಾಸಕ್ತಿಗಳೇನು ಹೇಳಿ...'' ಎಂದರು. ಸಭಾಂಗಣದಲ್ಲಿ ನೀರವ ಮೌನ ಮತ್ತ ಅನುಭವಕ್ಕೆ ಸಿಗುತ್ತಿದ್ದ ಬಿಗುವಿನ ವಾತಾವರಣ.ಅವತ್ತು ದೇಶದ ಪ್ರಮುಖ ಉದ್ಯಮಪತಿಗಳ ಮುಂದೆ ಅವಮಾನಕ್ಕೆ ಈಡಾದ ಮೋದಿ, ಘಟನೆಯನ್ನು ಮರೆಯಬಹುದು ಎಂದು ಸಿಐಐ ಆಯೋಜಕರು ಅಂದುಕೊಂಡಿದ್ದರು.

ಆದರೆ ಅವರ ಊಹೆ ಸುಳ್ಳಾಗಿಸಿತ್ತು, ಮೋದಿ ಇಟ್ಟ ಮುಂದಿನ ನಡೆಗಳು. ಸಭೆ ನಡೆದು ವಾರದೊಳಗೆ ಗುಜರಾತ್ ಮೂಲದ ಉದ್ಯಮಿಗಳಿಂದ ಬಂಡಾಯದ ಬಾವುಟ ಹಾರಿಸಲಾಯಿತು. ಅದಾನಿ ಗ್ರೂಪ್ ಆಫ್ ಕಂಪನಿಗಳ ಗೌತಮ್ ಅದಾನಿ ನೇತೃತ್ವದಲ್ಲಿ ಗುಜರಾತ್ ಮೂಲದ ಔಷಧೋದ್ಯಮಿ ಇಂದ್ರಾವರ್ದನ್ ಮೋದಿ, ನಿರ್ಮಾಣ್ ಗ್ರೂಪ್ನ ಕಾರ್ಸನ್ ಪಟೇಲ್, ಬಕೇರಿ ಗ್ರೂಪ್ ಆಫ್ ಕಂಪನಿಯ ಅನಿಲ್ ಬಕೇರಿ ಮುಂದಾಳತ್ವದಲ್ಲಿ 'ರಿಸರ್ಜೆಂಟ್ ಗ್ರೂಪ್ ಆಫ್ ಗುಜರಾತ್'(ಆರ್ಜಿಜಿ) ಹೆಸರಿನಲ್ಲಿ ಸಿಐಐಗೆ ಪರ್ಯಾಯ ಕೈಗಾರಿಕೋದ್ಯಮ ಸಂಘವೊಂದನ್ನು ಹುಟ್ಟು ಹಾಕಲಾಯಿತು.

ಸುಮಾರು 600 ಕಂಪನಿಗಳು ಸಿಐಐನಿಂದ ಹೊರಹೋಗುವುದಾಗಿ ಪತ್ರಿಕಾ ಪ್ರಕಟಣೆ ನೀಡಿದವು. "ಮೋದಿಗೆ ಮಾಡಿದ ಅವಮಾನ, ಗುಜರಾತ್ ಉದ್ಯಮಕ್ಕೆ ಮಾಡಿದ ಅವಮಾನ,'' ಎಂದು ಹೇಳಿಕೆಯಲ್ಲಿ ತಿಳಿಸಲಾಯಿತು. ಗುಜರಾತ್ ಸರಕಾರದ ಯಾವ ಸಚಿವಾಲಯಕ್ಕೂ ಉದ್ಯಮಿಗಳನ್ನು ಬಿಡದಂತೆ ಕಟ್ಟಪ್ಪಣೆ ಹೊರಡಿಸಲಾಯಿತು.

ಕೊನೆಗೆ, ಚಂಡು ಬಿಜೆಪಿ ಹೈಕಮಾಂಡ್ ಬುಡಕ್ಕೆ ಬಂದು ಬಿತ್ತು. ಸಿಐಐ ಮಹಾ ನಿರ್ದೇಶಕ ತರುಣ್ ದಾಸ್ ಕ್ಷಮಾಪಣೆ ಪತ್ರವೊಂದನ್ನು ಮೋದಿಗೆ ನೀಡುವ ಮೂಲಕ ಗುಜರಾತ್ ಸರಕಾರದ ಜತೆ ಸಂಬಂಧವನ್ನು ಪುನರ್ ಸ್ಥಾಪನೆ ಮಾಡಿಕೊಳ್ಳಲು ಉದ್ಯಮಪತಿಗಳು ಮುಂದಾದರು. ಹೀಗೆ, ಮೋದಿ ಒಳಗಿರುವ ಹಠಮಾರಿ ಯಾವ ಮಟ್ಟದಲ್ಲಿಯೂ ಬೇಕಾದರೂ ಬಡಿದಾಡಬಲ್ಲ ಎಂಬುದನ್ನು ಭಾರತದ ಕಾರ್ಪೊರೇಟ್ ಪ್ರಪಂಚಕ್ಕೆ ಪರಿಚಯಿಸುವ ಕೆಲಸ ನಡೆಯಿತು.

ಅದಾಗಿ ಎಂಟು ವರ್ಷಗಳ ನಂತರ ನಡೆದ 'ವೈಬ್ರಂಟ್ ಗುಜರಾತ್' ಹೆಸರಿನಲ್ಲಿ ಮೋದಿ ತಮ್ಮ ಮೇಲಿದ್ದ ನರಮೇಧದ ಕಳಂಕವನ್ನು ತೊಡೆದು, 'ದೇಶ ನಡೆಸುವ ಸಿಇಓ' ಎಂಬ ಪಟ್ಟವನ್ನು ಅದೇ ಕಾರ್ಪೊರೇಟ್ ಕಂಪನಿಗಳು ಹಾಗೂ ಅವುಗಳ ಹಿಡಿತದಲ್ಲಿದ್ದ ಮೀಡಿಯಾಗಳು ದೇಶದ ಜನರಿಗೆ ನಂಬಿಸುವ ಪ್ರಯತ್ನ ಮಾಡಿದವು.ಅದರ ಜತೆಗೆ, ಗುಜರಾತ್ ಬಿಜೆಪಿ ಒಳಗೆ ಮೋದಿ ಬೆಳೆದ ರೀತಿ, ಹಿರಿಯ ನಾಯಕರನ್ನು ಮುಗಿಸಿದ ತಂತ್ರಗಾರಿಕೆಗಳೂ ಕೂಡ ಪ್ರಧಾನಿ ಹುದ್ದೆ ಕಡೆ ಸಾಗಿ ಬಂದ ಹಾದಿಯ ಪ್ರಮುಖ ಮೈಲಿಗಲ್ಲುಗಳು. ಅವುಗಳ ಬಗೆಗಿನ ಅಪರೂಪದ ಮಾಹಿತಿ ಜತೆ ನಾಳೆ ಸಿಗೋಣ.

(ನಾಳೆಗೆ)