samachara
www.samachara.com
‘ಮೋದಿ ಸವೆಸಿದ ಹಾದಿ-1’: ಜಯಭೇರಿ ಬಾರಿಸಿದ ಬಿಜೆಪಿ ಮತ್ತು ಪ್ರಧಾನಿಯಾದ ಪೂರ್ಣಾವಧಿ ಪ್ರಚಾರಕ!
SPECIAL SERIES

‘ಮೋದಿ ಸವೆಸಿದ ಹಾದಿ-1’: ಜಯಭೇರಿ ಬಾರಿಸಿದ ಬಿಜೆಪಿ ಮತ್ತು ಪ್ರಧಾನಿಯಾದ ಪೂರ್ಣಾವಧಿ ಪ್ರಚಾರಕ!

ಮೇ. 26, 2014.

ಸ್ವತಂತ್ರ ಭಾರತದಲ್ಲಿ ನಡೆದ 16ನೇ ಲೋಕಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ದಿನವಿದು.

2014ರ ಏಪ್ರಿಲ್ ಮೊದಲ ವಾರದಿಂದ ಶುರುವಾದ ಚುನಾವಣೆ ಒಟ್ಟು 9 ಹಂತಗಳಲ್ಲಿ ನಡೆದಿತ್ತು. ದೇಶ ಕಂಡ ಸುದೀರ್ಘ ಚುನಾವಣೆ ಇದು ಎನ್ನಿಸಿಕೊಂಡಿತ್ತು. ಹಿಂದೆಂದೂ ಕಾಣದಷ್ಟು ದೊಡ್ಡ ಮೊತ್ತವನ್ನು ಈ ಚುನಾವಣೆಗಾಗಿ ನಾನಾ ರಾಜಕೀಯ ಪಕ್ಷಗಳು ಹೂಡಿದ್ದವು. ಒಂದು ಅಂದಾಜಿನ ಪ್ರಕಾರ ಒಟ್ಟು 30 ಸಾವಿರ ಕೋಟಿ ರೂಪಾಯಿಗಳ ಭಾರಿ ಮೊತ್ತ.

ಸಾಮಾಜಿಕ ಜಾಲತಾಣಗಳು ಬೆಳೆಯುತ್ತಿದ್ದ ಸಮಯವದು. ಜನರನ್ನು ತಲುಪಲು ಸಾಂಪ್ರದಾಯಿಕ ಪ್ರಚಾರ ತಂತ್ರಗಳ ಜತೆಗೆ ತಂತ್ರಜ್ಞಾನದ ಬಳಕೆಗೆ ಚುನಾವಣೆ ಸಾಕ್ಷಿಯಾಯಿತು. ಒಂದು ಹಂತದಲ್ಲಿ 16ನೇ ಲೋಕಸಭೆ ಚುನಾವಣೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಷ್ಟೆ ಪ್ರಚಾರ ಪಡೆದುಕೊಂಡಿತು.

ಇಂತಹದೊಂದು ಐತಿಹಾಸಿಕ ಚುನಾವಣೆ ಫಲಿತಾಂಶ ಭಾರತೀಯ ಜನತಾ ಪಕ್ಷದ ಪರವಾಗಿ ದೊಡ್ಡ ಸುನಾಮಿಯನ್ನೇ ತೆಗೆದುಕೊಂಡು ಬಂದಿತ್ತು. ದೇಶದ 543 ಲೋಕಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ 282 ಸ್ಥಾನಗಳ ನಿಚ್ಚಳ ಬಹುಮತ ಲಭಿಸಿತ್ತು. ಪಕ್ಷಕ್ಕೆ ದೇಶಾದ್ಯಂತ ಒಟ್ಟು 1, 71, 660, 230 ಕೋಟಿ ಮತಗಳು ಚಲಾವಣೆಯಾಗಿದ್ದವು. ಒಟ್ಟು ಚಲಾವಣೆಯಾದ ಮತಗಳ ಪೈಕಿ ಬಿಜೆಪಿ ಪಡೆದುಕೊಂಡಿದ್ದು ಶೇ. 31. 34 ರಷ್ಟು ಮತಗಳು. ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ಪಕ್ಷ ಶೇ. 12. 5ರಷ್ಟು ಮತ ಗಳಿಕೆ ಹಾಗೂ 166 ಸ್ಥಾನಗಳ ಗಳಿಕೆಯಲ್ಲಿ ಹೆಚ್ಚಳ ಪಡೆದುಕೊಂಡಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಒಳಗೂ ಹೊರಗೂ ಓಡಾಡಿಕೊಂಡಿದ್ದವರು ಕೇಶವ ಬಲಿರಾಮ್ ಹೆಡ್ಗೆವಾರ್. ನಾಗಪುರದ ಮರಾಠಿ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹಡ್ಗೆವಾರ್ ಕಲಿತದ್ದು ವೈದ್ಯ ಶಿಕ್ಷಣ. ಕಾಂಗ್ರೆಸ್ ಜತೆಗಿನ ಅವರ ಒಡನಾಟ ಸರಿಬರದ ಹಿನ್ನೆಲೆಯಲ್ಲಿ 1925ರಲ್ಲಿ ನಾಗಪುರದಲ್ಲಿಯೇ 'ರಾಷ್ಟ್ರೀಯ ಸ್ವಯಂ ಸೇವಕ ಸಂಘ' (ಆರ್ ಎಸ್ಎಸ್) ಹುಟ್ಟು ಹಾಕಿದರು. ಅವತ್ತಿಗೆ ಅಸ್ತಿತ್ವದಲ್ಲಿ ಹಿಂದೂ ಮಹಾಸಭಾದ ನಾಯಕರು ಕೂಡ ಹೆಡ್ಗೆವಾರ್ ಅವರ ಹೊಸ ಸಂಘಟನೆಯನ್ನುಉಪೇಕ್ಷೆ ಮಾಡಿದ್ದರು. ಆದರೆ, ಮುಂದಿನ 80 ವರ್ಷಗಳಲ್ಲಿ ಭಾರತದಲ್ಲಿ ಆರ್ ಎಸ್ಎಸ್ ಬೆಳೆದ ರೀತಿ ಮತ್ತು ಅದರ ರಾಜಕೀಯ ತಂತ್ರಗಾರಿಕೆಗಳು 2014ರಲ್ಲಿ ಬಿಜೆಪಿಯನ್ನು ಸ್ವತಂತ್ರವಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ತಂದು ನಿಲ್ಲುವಲ್ಲಿ ಸಫಲವಾಗಿದ್ದವು.

ಈ ವಿಜಯದ ಹಿಂದೆ, ಬಿಜೆಪಿ ಆಚೆಗೆ ಆರ್ ಎಸ್ಎಸ್ ಹಾಗೂ ಅದರ ಅಂಗ ಸಂಘಟನೆಗಳ ಕಾರ್ಯಕರ್ತರ ಶ್ರಮ, ಬಲಿದಾನ ಹಾಗೂ ನಿಸ್ವಾರ್ಥ ಸೇವೆ ಇತ್ತು. ಸಾಂಪ್ರದಾಯಿಕ ಚೌಕಟ್ಟಿನೊಳಗೇ ರಾಜಕೀಯ ನಡೆಸಿಕೊಂಡು ಬಂದ 'ರಾಜಕೀಯೇತರ ಸಂಘಟನೆ' ಆರ್ ಎಸ್ಎಸ್ ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಂಘದ ಪೂರ್ಣಾವಧಿ ಕಾರ್ಯಕರ್ತನೊಬ್ಬನನ್ನು ದೇಶದ 15ನೇ ಪ್ರಧಾನ ಮಂತ್ರಿಯಾಗಿ ಮಾಡಿತ್ತು; ಹೆಸರು, ನರೇಂದ್ರ ದಾಮೋದರ್ ದಾಸ್ ಮೋದಿ.

ಆಧುನಿಕ ಭಾರತದ ಚುನಾವಣಾ ರಾಜಕೀಯ ಹಾಗೂ ಅಧಿಕಾರ ಗ್ರಹಣದ ಕತೆಯನ್ನು ಬರೆಯಲು ಹೊರಟರೆ ನರೇಂದ್ರ ಮೋದಿ ಹೆಸರನ್ನು ಇವತ್ತು ಉಪೇಕ್ಷೆ ಮಾಡುವುದಕ್ಕಾಗುವುದಿಲ್ಲ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ರೈಲ್ವೆ ನಿಲ್ದಾಣದಲ್ಲಿ ಟೀ ಮಾರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಯಲ್ಲಿ ಹಿರಿಯರ ಬಟ್ಟೆ ತೊಳೆದು, ನೆಲ ಒರೆಸಿಕೊಂಡಿದ್ದ ಸಾಮಾನ್ಯ ಬಾಲಕನೊಬ್ಬ ಈ ದೇಶದ ಪ್ರಧಾನಿ ಸ್ಥಾನಕ್ಕೆ ಏರಿದ್ದರ ಹಿನ್ನೆಲೆಯೇ ನಾನಾ ಒಳಸುಳಿಗಳನ್ನು ಹೊಂದಿರುವ ಕತೆ.

ಮೋದಿ ಬರೀ ಅಧಿಕಾರ ಗ್ರಹಣ ಮಾತ್ರವೇ ಮಾಡಲಿಲ್ಲ. ಬದಲಿಗೆ ಕಾಂಗ್ರೆಸ್ ಎಂಬ ಪುರಾತನ ಪಕ್ಷದ ಸುದೀರ್ಘ ಆಡಳಿತದಿಂದ ಬೇಸತ್ತಿದ್ದ, ನಮ್ಮ ದೇಶವೂ ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು, ಇಲ್ಲಿರುವ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಸಿಗಬೇಕು, ಬಡತನ, ನಿರುದ್ಯೋಗ ಇಲ್ಲದ ಸಮಾಜ ನಿರ್ಮಾಣವಾಗಬೇಕು, ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಯನ್ನು ಕಾಣಬೇಕು ಎಂಬ ಹತ್ತು ಹಲವು ಕನಸುಗಳನ್ನು ಕಟ್ಟಿಕೊಂಡ ಮಧ್ಯಮ ವರ್ಗಕ್ಕೆ, ಯುವ ಜನತೆಗೆ ಹೊಸ ಸ್ಪೂರ್ತಿಯನ್ನು, ರಾಜಕೀಯ ಪರ್ಯಾಯವನ್ನು ನೀಡಿದರು.

ಹೀಗೆ, ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕುವ ಮೂಲಕ ದೇಶದ ಪ್ರಧಾನಿ ಹುದ್ದೆಗೇರಿದ ಮೋದಿ ಮೇ. 26ಕ್ಕೆ ತಮ್ಮ ಎರಡು ವರ್ಷಗಳ ಆಳ್ವಿಕೆಯನ್ನು ಪೂರೈಸುತ್ತಿದ್ದಾರೆ. ಈ ಸಮಯದಲ್ಲಿ ಮೋದಿ ಅವರ ಆಡಳಿತದ ಆಚೆಗೆ ಅವರನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಪ್ರಯತ್ನವನ್ನು 'ಸಮಾಚಾರ' ತನ್ನ ಹೊಸ ಸರಣಿಯಲ್ಲಿ ಕೈಗೆತ್ತಿಕೊಂಡಿದೆ. ನಾಳೆಯಿಂದ ಮುಂದಿನ ಕೆಲವು ದಿನಗಳವರೆಗೆ ಪ್ರಕಟವಾಗುವ ಈ ಸರಣಿಯು 'ಮೋದಿ ಸವೆಸಿದ ಹಾದಿ'ಯನ್ನು ಹೊಸ ನೋಟದಲ್ಲಿ, ಭಿನ್ನ ಆಯಾಮದಲ್ಲಿ ನಿಮ್ಮೆದುರಿಗೆ ತೆರೆದಿಡಲಿದೆ...

(ನಾಳೆಗೆ)