samachara
www.samachara.com
‘ಮೈಥುನ ಮಿಸ್ಟರಿ’-4: ಮಕ್ಕಳ ಸರ್ಚ್ ‘ಹಿಸ್ಟರಿ’ ಹಾಗೂ ಸಂತೆಯ ಸರಕುಗಳು!
SPECIAL SERIES

‘ಮೈಥುನ ಮಿಸ್ಟರಿ’-4: ಮಕ್ಕಳ ಸರ್ಚ್ ‘ಹಿಸ್ಟರಿ’ ಹಾಗೂ ಸಂತೆಯ ಸರಕುಗಳು!

ಅದು ಬೆಂಗಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಂಭಾಗದಲ್ಲಿರುವ ಸೈಬರ್ ಸೆಂಟರ್. ಅಲ್ಲಿ ಶಾಲೆಯ ಐಡಿ ಕಾರ್ಡ್ ತೋರಿಸಿ, ತಮ್ಮ ಹೆಸರನ್ನು ಸವಕಲೆದ್ದು ಹೋಗಿರುವ ನೋಟ್ ಪುಸ್ತಕದಲ್ಲಿ ಬರೆದು, ಖಾಲಿ ಇರುವ ಕೋಣೆಯನ್ನು ಹೊಕ್ಕಿ ಕೂರುವ ಮಕ್ಕಳ ವಯಸ್ಸು ಹೆಚ್ಚೆಂದರೆ 15ರ ಆಸುಪಾಸಿನಲ್ಲಿರುತ್ತದೆ.

ಒಳಗೆ ಹೋದವರು ಒಂದು ಗಂಟೆಯ ನಂತರ ಹೊರಬರುತ್ತಾರೆ. ಗಂಟೆಗೆ 30 ರೂಪಾಯಿ ಲೆಕ್ಕದಲ್ಲಿ ಹಣ ಪಾವತಿಸಿ, ಶಾಲೆಯ ಬ್ಯಾಗನ್ನು ಏರಿಸಿಕೊಂಡು ಮನೆಯ ಹಾದಿಯಲ್ಲಿ ನಡೆದು ಮರೆಯಾಗುತ್ತಾರೆ.

'ಸಮಾಚಾರ' ಈ ಸರಣಿಯ ಭಾಗವಾಗಿ ಅಂತಹದೊಂದು ಸೈಬರ್ ಸೆಂಟರ್ ಜತೆ ಒಪ್ಪಂದವೊಂದನ್ನು ಮಾಡಿಕೊಂಡಿತು. ಹೈಸ್ಕೂಲಿನ ಹುಡುಗರು ಕೂತೆದ್ದು ಹೋಗುವ ಕಂಪ್ಯೂಟರ್ಗಳ 'ಹಿಸ್ಟರಿ'ಯನ್ನು ನೋಡುವುದಕ್ಕೆ ಅನುಮತಿಯನ್ನು ಪಡೆದುಕೊಂಡಿತು. ಈ ಮೂಲಕ ಬೆಂಗಳೂರಿನ ಮಕ್ಕಳು ಇವತ್ತು 'ಸೈಬರ್ ಸೆಂಟರ್'ಗಳಲ್ಲಿ ಏನನ್ನು ನೋಡಬಹುದು ಎಂದು ಹೊರಗೆ ನಿಂತು ಊಹಿಸುವುದಕ್ಕಿಂತ, ವಸ್ತುನಿಷ್ಟವಾಗಿ ಅರ್ಥಮಾಡಿಕೊಳ್ಳುವ ಉದ್ದೇಶವಿತ್ತು.

ನಾವು, ನೋಡಿದ ಒಟ್ಟು ಐದು ಕಂಪ್ಯೂಟರ್ 'ಹಿಸ್ಟರಿ', ನಿರೀಕ್ಷೆಯಂತೆಯೇ ಪೊರ್ನ್ ಸೈಟ್ಗಳನ್ನು ಜಾಲಾಡಿರುವುದನ್ನು ಉಳಿಸಿಕೊಂಡಿತ್ತು.

ಅದಕ್ಕಿಂತಲೂ ಆತಂಕಕಾರಿ ವಿಚಾರ ಏನೆಂದರೆ, ಅವರು ಹುಡುಕಿದ ಪೋರ್ನ್ ವಿಭಾಗಗಳು, ಸಹಜ ಮೈಥುನ ಕ್ರಿಯೆಗಳಿಗಿಂತ ದೂರವಾದ, ವಾಸ್ತವದಲ್ಲಿ ಅಸಾಧ್ಯ ಎನ್ನಿಸುವ ಅತಿರೇಕದ ವಿಡಿಯೋಗಳನ್ನು ಒಳಗೊಂಡಿದ್ದು.

'ಗರ್ಲ್ ರೇಪ್ಡ್ ಇನ್ ಫ್ರೆಂಟ್ ಆಫ್ ಹರ್ ಬಾಯ್ ಫ್ರೆಂಡ್, ಮಾಮ್ ಟೀಚಸ್ ಸೆಕ್ಸ್ ಟು ಹರ್ ಸ್ಟೆಪ್ ಸನ್' ತರಹದ ವಿಡಿಯೋಗಳನ್ನು ಹೈಸ್ಕೂಲು ಮಕ್ಕಳು ವೀಕ್ಷಿಸಿ ಹೊರ ನಡೆದಿದ್ದರು.

ಇದು ಅವರ ಮನಸ್ಸಿನಲ್ಲಿ ಎಂತಹ ಆಲೋಚನೆಗಳನ್ನು ಹುಟ್ಟುಹಾಕಿರಬಹುದು? ಅವರು ತಮ್ಮ ಸುತ್ತಲಿನ ಸಂಬಂಧಗಳನ್ನು ಹೇಗೆ ನೋಡಬಹುದು? ಎಂಬುದನ್ನು ನಾವು ಊಹಿಸಿಕೊಳ್ಳಬೇಕಷ್ಟೆ.

"ನಾವು ಕಾಲೇಜಿನಲ್ಲಿ ಇರುವಾಗ ಮೊದಲು ಪೋರ್ನ್ ಮೂವಿಗಳನ್ನು ನೋಡಿದ್ದು. ನಂತರ ಅದು ಹೇಗೋ, ನಮ್ಮ ಇ-ಮೇಲ್ಗಳಿಗೆ ಅಂತಹ ವೆಬ್ ಸೈಟ್ಗಳಿಂದ ಮೆಸೇಜಸ್ ರಾಶಿ ರಾಶಿ ಬಂದು ಬೀಳುತ್ತಿದ್ದವು. ಇದನ್ನು ಇಗ್ನೋರ್ ಮಾಡೋದು ಸುಲಭವಾಗಿರಲಿಲ್ಲ. ಪೋರ್ನ್ ನೋಡಿದ ಮೇಲೆ, ಅದರಲ್ಲಿ ಏನೂ ವಿಶೇಷ ಅನ್ನಿಸಲಿಲ್ಲ. ಮೈಥುನ ಎಂಬುದು ಸಹಜ ಅಲ್ಲವಾ?,'' ಎನ್ನುತ್ತಾರೆ ಬೆಂಗಳೂರು ಮೂಲದ ಯುವತಿಯೊಬ್ಬರು.

ಹಿಂದೊಮ್ಮೆ ಅವರು ಪತ್ರಕರ್ತೆಯಾಗಿದ್ದವರು. 'ಸಮಾಚಾರ'ದ ಈ ಸರಣಿಯನ್ನು ಓದುತ್ತಿರುವ ಅವರು, "ನೀವು ಪೋರ್ನ್ ಬಗ್ಗೆ ಬರೆಯುತ್ತಿದ್ದೀರಾ. ಆದರೆ, ಅದರ ಮಾರುಕಟ್ಟೆ ಬಗ್ಗೆ ಬರೀತಿದ್ದೀರಾ? ಅದನ್ನು ತೆಗೆದುಕೊಂಡು ಈ ತಲೆಮಾರಿಗೆ ಏನಾಗಬೇಕಿದೆ?,'' ಎನ್ನುತ್ತಾರೆ.

ನಿಜ, ಇವತ್ತಿನ ತಲೆಮಾರಿಗೆ ಇವ್ಯಾವವೂ ಅಗೋಚರವಾದ ಸಂಗತಿಗಳಲ್ಲ, ಮುಖ್ಯ ಅಂತಲೂ ಅನ್ನಿಸುವುದಿಲ್ಲ. ತಂತ್ರಜ್ಞಾನದ ವಿಸ್ತಾರ ಅವರಿಗೆ ಒಂದಿಲ್ಲೊಂದು ಮೂಲಗಳಿಂದ ಇಂತಹ ವೆಬ್ ತಾಣಗಳು ಅವರನ್ನು ಪ್ರಚೋದಿಸುತ್ತಿವೆ. ಹೀಗಾಗಿಯೇ, ಅದರ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ, ಇದರಿಂದ ಆಗುತ್ತಿರುವ ಸಾಮಾಜಿಕ ಪಲ್ಲಟಗಳು? ಅದು ನಮ್ಮ ಕಾಳಜಿ ಅಷ್ಟೆ.

‘ಮೈಥುನ ಮಿಸ್ಟರಿ’-4: ಮಕ್ಕಳ ಸರ್ಚ್ ‘ಹಿಸ್ಟರಿ’ ಹಾಗೂ ಸಂತೆಯ ಸರಕುಗಳು!

ಅಂತರ್ಜಾಲದಲ್ಲಿ ಸಿಗುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿಯೇ ಪ್ರತಿ ವರ್ಷ 1. 35 ಲಕ್ಷ ಮಕ್ಕಳು ಕಣ್ಮರೆಯಾಗುತ್ತಾರೆ. ಇವರು ಮಾನವ ಕಳ್ಳ ಸಾಗಣೆ ಜಾಲದ ಬಲೆ ಬೀಳುತ್ತಿದ್ದಾರೆ. ಇವರಲ್ಲಿ ಶೇ. 20ರಷ್ಟು ಮಕ್ಕಳು ಮನೆಕೆಲಸಕ್ಕೆ, ಫ್ಯಾಕ್ಟರಿಗಳಲ್ಲಿ ಬಾಲ ಕಾರ್ಮಿಕರಾಗಿ ಸೇರಿಕೊಳ್ಳುತ್ತಾರೆ.

ಉಳಿದ ಬಹುಪಾಲು ಮಕ್ಕಳು ಬಳಕೆಯಾಗುತ್ತಿರುವುದು ಸೆಕ್ಸ್ ಇಂಡಸ್ಟ್ರಿಯಲ್ಲಿ ಮಾನವ ಸಂಪನ್ಮೂಲಗಳಾಗಿ. ಮತ್ತೊಂದು ಸಮೀಕ್ಷೆಯ ಪ್ರಕಾರ, ಮಾನವ ಕಳ್ಳ ಸಾಗಣೆ ಜಾಲಕ್ಕೆ ಸಿಕ್ಕಿದ ಮಕ್ಕಳಲ್ಲಿ ಶೇ. 75ರಷ್ಟು ಎಳೆಯ ವಯಸ್ಸಿನವರು ಅಂತರ್ಜಾಲದ ಮೂಲಕವೇ ಮೊದಲ ಬಾರಿಗೆ ಮಾರಾಟಕ್ಕೆ ಒಳಗಾಗುತ್ತಿದ್ದಾರೆ.

ಹೀಗೆ, ಮಕ್ಕಳನ್ನೂ ಮೈಥುನ ಮಾರುಕಟ್ಟೆಯಲ್ಲಿ ಸರಕಗಳನ್ನಾಗಿ ಪರಿವರ್ತಿಸಿದ್ದು ಮತ್ತದೇ ಅಶ್ಲೀಲ ಸಿನೆಮಾಗಳು. ಅವು ನೀಡಿದ ಅಸಹಜ ಮೈಥುನ ಸಾಧ್ಯತೆಗಳಿಂದ ಪ್ರೇರಣೆ ಪಡೆದವರು, ಮಕ್ಕಳನ್ನೂ ಲೈಂಗಿಕ ತೃಷೆಗೆ ಬಳಕೆ ಮಾಡಿಕೊಳ್ಳುವ ಮೃಗೀಯ ಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಈ ಕುರಿತು ಬರೆಯುತ್ತಾ ಹೋದರೆ, ಅದಕ್ಕೆ ಪದಮಿತಿ ಹಾಕುವುದು ಕಷ್ಟ. ಹೀಗಾಗಿ, ಹೇಳದೆ ಉಳಿದ ಸಾಕಷ್ಟು ವಿಚಾರಗಳು ಅಂತರ್ಜಾಲದಲ್ಲಿಯೇ ಲಭ್ಯ ಇವೆ. ಅದರ ಎಡೆಗೆ ನಿಮ್ಮ ಆಸಕ್ತಿಯನ್ನು, ಗಮನವನ್ನು ಸೆಳೆಯುವುದು ಅಷ್ಟೆ ನಮ್ಮ ಉದ್ದೇಶ.

ಇಷ್ಟೆಲ್ಲಾ ಹೇಳಿದ ಮೇಲೂ, ಒಂದು ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಏನೇ ಪ್ರಯತ್ನ ಮಾಡಿದರೂ, ಮೈಥುನ ಎಂಬುದು ಮನುಷ್ಯನಿಗೆ ಯಾಕೆ ಕುತೂಹಲದ ಕೇಂದ್ರವಾಗಿದೆ? ಆತನ ವಿಕೃತಿಗಳನ್ನು ಅಭಿವ್ಯಕ್ತಗೊಳಿಸಲು ಅದು ಯಾಕೆ ವೇದಿಕೆ ಒದಗಿಸುತ್ತದೆ? ಪೋರ್ನ್ ಸಿನೆಮಾಗಳಿಂದ ಲಾಭಗಳೇ ಇಲ್ಲವಾ? ಇಂತಹ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಮೂಲಕ ನಾಳೆ ಈ ಸರಣಿ ಮುಕ್ತಾಯವಾಗಲಿದೆ.

(ನಾಳೆಗೆ)