samachara
www.samachara.com
‘ಮೈಥುನ ಮಿಸ್ಟರಿ’-2: ಸರಕಾರಿ ಅಧಿಕಾರಿಯ ಫ್ಯಾಂಟಸಿಗಳು ಹಾಗೂ 5000 ಕೋಟಿಯ ಪೊರ್ನೋಗ್ರಫಿ ಉದ್ಯಮ!
SPECIAL SERIES

‘ಮೈಥುನ ಮಿಸ್ಟರಿ’-2: ಸರಕಾರಿ ಅಧಿಕಾರಿಯ ಫ್ಯಾಂಟಸಿಗಳು ಹಾಗೂ 5000 ಕೋಟಿಯ ಪೊರ್ನೋಗ್ರಫಿ ಉದ್ಯಮ!

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

"ಅವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಉದ್ಯೋಗಿ. ಕಳೆದ ಹತ್ತು ವರ್ಷಗಳಿಂದ ಅವರಲ್ಲಿ ಒಂದು ಫ್ಯಾಂಟಸಿ ಬೆಳೆದು ಬಂದಿತ್ತು. ತಮ್ಮ ಪತ್ನಿಯ ಎದುರೇ ಹೆಣ್ಣಿನಂತೆ ವೇಷ ಧರಿಸಿಕೊಂಡು ಓಡಾಡುತ್ತಿದ್ದರು. ಅದನ್ನು ಫೊಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳುತ್ತಿದ್ದರು. ಅವುಗಳನ್ನು ಪತ್ನಿ ಸೇರಿದಂತೆ ಎಲ್ಲರೂ ಇಷ್ಟಪಡಬೇಕು ಎಂದು ಬಯಸುತ್ತಿದ್ದರು. ನಮ್ಮ ಬಳಿ ಬರುವಾಗ ಅವರ ವಯಸ್ಸು 40ರ ಆಸುಪಾಸಿನಲ್ಲಿತ್ತು,'' ಎಂದರು ಮನಃಶಾಸ್ತ್ರಜ್ಞ ಡಾ. ಮಹೇಶ್.

ನಂದಿನಿ ಲೇಔಟ್ನಲ್ಲಿರುವ 'ಸ್ಪಂದನ ಹೆಲ್ತ್ ಕೇರ್'ನಲ್ಲಿ ಇಂತಹ ಹತ್ತು ಹಲವು ಲೈಂಗಿಕತೆ ಸುತ್ತ ಬೆಳೆಯುವ ಮಾನಸಿಕ ಕಾಯಿಲೆಗಳಿಗೆ ಒಳಗಾದ ರೋಗಿಗಳು ನಮಗೆ ಸಿಗುತ್ತಾರೆ. ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿಯಾಗಿ ಬೆಳೆಯುತ್ತಿದ್ದಂತೆ, ಇಲ್ಲಿನ ಅಂತರಾತ್ಮದಲ್ಲಿಯೂ ಕೆಲವು ಮೂಲ ಬದಲಾವಣೆಗಳಾಗಿವೆ. ಇಲ್ಲೀಗ, 'ಮೈಥುನ'ದ ಸುತ್ತ ನಡೆಯುವ ಚಟುವಟಿಕೆಗಳು ತೆರೆಮರೆಯನ್ನು ದಾಟಿ ದಾಖಲಾಗುತ್ತಿವೆ. "ನಮಗೆ ಕ್ರಾಸ್ ಡ್ರೆಸ್ಸರ್ಸ್ ಎಂದು ಕರೆಯುವ ಇಂತಹ ರೋಗಿಗಳು ಬರುತ್ತಿರುತ್ತಾರೆ. ಅವರಲ್ಲಿ, ಈ ಸರಕಾರಿ ಉದ್ಯೋಗಿ ವಿಶೇಷ ಅನ್ನಿಸಿದ್ದು ಯಾಕೆ ಎಂದರೆ, ಅವರು ತಮ್ಮ ಗೀಳನ್ನು ಬಹಿರಂಗವಾಗಿಯೇ ತೋರಿಸಿಕೊಳ್ಳುತ್ತಿದ್ದರು. ಕುಟುಂಬದ ಕಣ್ಣುತಪ್ಪಿಸಿ ಮಾಡುತ್ತಿರಲಿಲ್ಲ,'' ಎಂದರು ಡಾ. ಮಹೇಶ್.

ಅವರಿಗೆ ಹೀಗೊಂದು ಗೀಳು ಆರಂಭವಾಗಲು ಕಾರಣ, ಚಿಕ್ಕ ವಯಸ್ಸಿನಲ್ಲಿ ಮನಸ್ಸಿನ ಮೇಲೆ ಬೀರಿದ ಪರಿಣಾಮಗಳು, ಯಾರೋ ಮಹಿಳೆ ರೋಲ್ ಮಾಡೆಲ್ ಆಗಿ ಕಂಡಿರುವುದು ಹಾಗೂ ಹಾರ್ಮೋನಲ್ ಚೇಂಜಸ್ ಕಾರಣಗಳು ಇರಬಹುದು ಎಂದು ವೈದ್ಯರು ಹೇಳುತ್ತಾರೆ. ಆದರೆ, ಅದು ವ್ಯಸನವಾಗಿ ಬೆಳೆಯಲು ಕಾರಣವಾಗಿದ್ದು, ಹಾಗೂ ಬಹಿರಂಗವಾಗಿ ವ್ಯಕ್ತಪಡಿಸಲು ಮನಸ್ಸು ಗಟ್ಟಿಯಾಗಿದ್ದು ಇವತ್ತು ಅಂತರ್ಜಾಲದಲ್ಲಿ ಸಿಗುವ ವಿಡಿಯೋಗಳ ಪ್ರಭಾವ ಎಂಬುದು ವೈದ್ಯರ ಅನುಮಾನ. "ಅವರು ಇಂತಹ ಹಲವು ವಿಡಿಯೋಗಳನ್ನು ನೋಡುವ ವ್ಯಸನ ಹೊಂದಿದ್ದರು,'' ಎಂದು ಡಾ. ಮಹೇಶ್ ವಿವರಿಸುತ್ತಾರೆ.

'ಮೈಥುನ ಮಿಸ್ಟರಿ'ಯ ಕುತೂಹಲಗಳ ಪೈಕಿ ಈ ಪೊರ್ನೋಗ್ರಫಿ ಕೂಡ ಒಂದು. ಇದರ ಕುರಿತು ಅಧ್ಯಯನಕ್ಕೆ ಇಳಿದರೆ ನಾನಾ ಆಯಾಮಗಳೇ ತೆರೆದುಕೊಳ್ಳುತ್ತವೆ. ಅದರ ಆರ್ಥಿಕತೆ, ಉದ್ಯಮವಾಗಿ ಬೆಳೆದು ಬಂದ ರೀತಿ, ಅದು ಬೀರುತ್ತಿರುವ ಸಾಮಾಜಿಕ ಪರಿಣಾಮಗಳು, ಉಂಟುಮಾಡುತ್ತಿರುವ ಕೌಟುಂಬಿಕ ಸಮಸ್ಯೆಗಳು ಹೀಗೆ ಹಲವು ಕೋನಗಳಲ್ಲಿ ಅದು ತನ್ನದೇ ಆದ ಹಿಡಿತವನ್ನು ಸಮಾಜದಲ್ಲಿ ಇವತ್ತು ಸೃಷ್ಟಿಸಿದೆ.1986ರಲ್ಲಿಯೇ ಅಮೆರಿಕಾ ಪೊರ್ನೋಗ್ರಫಿ ವಿಚಾರದಲ್ಲಿ ನೇಮಿಸಿದ್ದ ಫೆಡರಲ್ ಕಮಿಷನ್ ನೀಡಿದ ವರದಿಯಲ್ಲಿ, "ಇದು ಸಮಾಜವ ಸ್ವಾಥ್ಯವನ್ನು ಹಾಳು ಮಾಡುತ್ತಿರುವ ಉದ್ಯಮ,'' ಎಂದು ಹೇಳಿತ್ತು.

1950ರ ದಶಕದಲ್ಲಿ ಮ್ಯಾಗ್ಸಿನ್ಸ್ ರೂಪದಲ್ಲಿ ಅಮೆರಿಕಾ ಹಾಗೂ ಯುರೋಪ್ ಮಾರುಕಟ್ಟೆ ಪ್ರವೇಶಿಸಿದ ಪೊರ್ನೋಗ್ರಫಿ, 90ರ ವೇಳೆಗೆ ಡಿವಿಡಿ ಹಾಗೂ ಸಿಡಿಗಳಲ್ಲಿ ಸಿನೆಮಾ ರೂಪ ಪಡೆದುಕೊಂಡು ಬಿಕರಿ ಮಾಡುವ ಮೂಲಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿತ್ತು. ಯಾವಾಗ ಅಂತರ್ಜಾಲ ಬಲವಾಯಿತೋ, ಎಲ್ಲರಿಗಿಂತಲೂ ಮೊದಲು ಅದನ್ನು ಗುರುತಿಸಿದ್ದು, ಬಳಕೆ ಮಾಡಿಕೊಂಡಿದ್ದು ಪೊರ್ನೋಗ್ರಫಿ ಇಂಡಸ್ಟ್ರಿ. ಫ್ಲಿಪ್ ಕಾರ್ಟ್, ಅಮೆಝಾನ್ ತರಹದ ಡಿಜಿಟಲ್ ಮಾರುಕಟ್ಟೆ ಉದ್ಯಮಗಳು ಶುರುವಾಗುವ ಮುನ್ನವೇ, ಅದೇ ಮಾದರಿಯಲ್ಲಿ ತಮ್ಮ ಅಶ್ಲೀಲ ಸಿನೆಮಾಗಳನ್ನು ಮಾರಲು ಪೊರ್ನೋಗ್ರಫಿ ಕ್ಷೇತ್ರದ ಚತುರರು ಬಳಸಿಕೊಂಡರು ಎಂಬುದು ಗಮನಾರ್ಹ.

ಟೆಲಿಕಾಲಿಂಗ್ ಹಾಗೂ ಲೈವ್ ಕ್ಯಾಮ್ ಸೇವೆಗಳನ್ನು ಯಶಸ್ವಿಯಾಗಿ ಬಳಸಿಕೊಂಡ ಕುಖ್ಯಾತಿಯೂ ಇವರಿಗೇ ಸಲ್ಲಬೇಕು.

‘ಮೈಥುನ ಮಿಸ್ಟರಿ’-2: ಸರಕಾರಿ ಅಧಿಕಾರಿಯ ಫ್ಯಾಂಟಸಿಗಳು ಹಾಗೂ 5000 ಕೋಟಿಯ ಪೊರ್ನೋಗ್ರಫಿ ಉದ್ಯಮ!

ಆದರೆ, "ಇವತ್ತು ಕಾನೂನು ಬಲಗೊಂಡಿರುವ ಕಾರಣಕ್ಕೆ, ಕ್ಯಾಲಿಫೋರ್ನಿಯಾ ಒಂದರಲ್ಲಿಯೇ 200ರಷ್ಟಿದ್ದ ಅಶ್ಲೀಲ ಸಿನೆಮಾ ತಯಾರಿಕಾ ಸ್ಟುಡಿಯೋಗಳ ಸಂಖ್ಯೆ 20ಕ್ಕೆ ಇಳಿದಿದೆ. ಇದರಲ್ಲಿ 'ಅಭಿನಯಿಸುವ' ನಟಿಯರಿಗೆ ಸಿಗುತ್ತಿದ್ದ ಸಂಭಾವನೆ ಗಂಟೆಗೆ 1, 500 ಡಾಲರ್ಗಳಿಂದ 500 ಡಾಲರ್ಗೆ ಇಳಿದಿದೆ,'' ಎಂದು 'ಎಕನಾಮಿಸ್ಟ್' ವರದಿಯೊಂದು ಹೇಳುತ್ತದೆ.

ಹೀಗಿದ್ದೂ, ಇವತ್ತು ಪೊರ್ನೋಗ್ರಫಿ ಅಮೆರಿಕಾ ಒಂದರಲ್ಲಿಯೇ ವಾರ್ಷಿಕ 5000 ಕೋಟಿ ಡಾಲರ್ ವಹಿವಾಟು ನಡೆಸುತ್ತಿದೆ.ಇನ್ನೊಂದಡೆ, ಪ್ರತಿ ದಿನ ಪೊರ್ನೋಗ್ರಫಿ ವೆಬ್ ಸೈಟ್ಗಳಿಗೆ ಭೇಟಿ ನೀಡುವವರ ಸಂಖ್ಯೆಯೇ 10 ಕೋಟಿಯಷ್ಟಿದೆ. ಇವರು ಒಟ್ಟು ವ್ಯಯಿಸುತ್ತಿರುವ ಡೇಟಾವೇ 1.5 ಟಿಬಿಯಷ್ಟಿದೆ. ಅಂದರೆ, ಸುಮಾರು 150 ಸಿನೆಮಾಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಷ್ಟು.

ಇಷ್ಟು ಅಗಾಧ ಪ್ರಮಾಣದಲ್ಲಿ ಜಗತ್ತಿನಾದ್ಯಂತ ಗ್ರಾಹಕರನ್ನು ಸೃಷ್ಟಿಸಿಕೊಂಡಿರುವ, ವಹಿವಾಟು ನಡೆಸುತ್ತಿರುವ ಉದ್ಯಮ ಬೀರುತ್ತಿರುವ ಅಂತಿಮ ಪರಿಣಾಮ ಬೆಂಗಳೂರು ಮೂಲದ ಅಧಿಕಾರಿಯೊಬ್ಬರ ವಿಚಿತ್ರ 'ಫ್ಯಾಂಟಸಿ'ಯ ಮೂಲಕ ಹೊರಹೊಮ್ಮುತ್ತಿದೆ.ಪೊರ್ನೋಗ್ರಫಿಯ ಲಾಭವನ್ನು ಪಡೆಯುತ್ತಿರುವ ಕಂಪನಿಗಳು ಹಾಗೂ ಉದ್ಯಮದ ಉಳಿವಿಗಾಗಿ ಅವು ಮೈಥುನದ ಸುತ್ತ ಸೃಷ್ಟಿಸುತ್ತಿರುವ ಭ್ರಮಾತ್ಮಕ ಜಗತ್ತಿನ ಕುರಿತು ಇನ್ನಷ್ಟು ಒಳನೋಟಗಳ ಮುಂದಿನ ಭಾಗದಲ್ಲಿ...

(ನಾಳೆಗೆ)