samachara
www.samachara.com
‘ಮೈಥುನ ಮಿಸ್ಟರಿ’-1: ‘ಸೆಕ್ಸ್’ ಎಂಬ ವಿಸ್ಮಯ ಲೋಕಕ್ಕೆ ಸ್ವಾಗತ!
SPECIAL SERIES

‘ಮೈಥುನ ಮಿಸ್ಟರಿ’-1: ‘ಸೆಕ್ಸ್’ ಎಂಬ ವಿಸ್ಮಯ ಲೋಕಕ್ಕೆ ಸ್ವಾಗತ!

"ಮನುಷ್ಯನಿಗೆ ಆಹಾರ ಮತ್ತು ನೀರು ಹೇಗೋ, ಸೆಕ್ಸ್ ಕೂಡ ಹಾಗೆಯೇ. ನಾವು ಹಸಿದು ಊಟ ಮಾಡಿದ ನಂತರ ಅಥವಾ ತುಂಬಾ ಬಾಯಾರಿದ ನಂತರ ತಣ್ಣನೆಯ ನೀರು ಕುಡಿದಾಗ ಅನುಭವಿಸುವ ಭಾವನೆಗೂ, ಲೈಂಗಿಕ ಚಟುವಟಿಕೆಯ ಕೊನೆಯಲ್ಲಿ ಸಿಗುವ ಭಾವನೆಗೂ ವ್ಯತ್ಯಾಸವಿಲ್ಲ...'' ಎನ್ನುತ್ತಾರೆ ಬೆಂಗಳೂರು ಮೂಲದ ಮಃನಶಾಸ್ತ್ರ ಸಲಹೆಗಾರ್ತಿ ಡಾ. ದಿವ್ಯಾ ಕೆ. ಆರ್.

'ಸಮಾಚಾರ' ಇಂದಿನಿಂದ ಆರಂಭಿಸುತ್ತಿರುವ 'ಮೈಥುನ ಮಿಸ್ಟರಿ' ಸರಣಿ ಲೇಖನಗಳಿಗಾಗಿ ಅವರ ಮುಂದಿಟ್ಟ ಕೆಲವು ಮೂಲಭೂತ ಪ್ರಶ್ನೆಗಳಿಗೆ ಸಿಕ್ಕ ಉತ್ತರವಿದು.

ಮನುಷ್ಯನ ವಿಕಾಸದ ಜತೆಜತೆಗೆ ವಿಕಾಸಗೊಂಡಿರುವ ಹಲವು ಕ್ಷೇತ್ರಗಳಲ್ಲಿ 'ಸೆಕ್ಸ್' ಕೂಡ ಒಂದು. ಇವತ್ತಿಗೆ ಅದು ದೊಡ್ಡ ಕ್ಷೇತ್ರ. ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ವಹಿವಾಟು ಮಾಡುತ್ತಿರುವ ಪೊರ್ನೋಗ್ರಫಿ ಉದ್ಯಮ ನಿಂತಿರುವುದು ಇದೇ 'ಸೆಕ್ಸ್' ಎಂಬ ವಿಷಯದ ಮೇಲೆ. ಆಧುನಿಕ ಮಾನವನ ಹವ್ಯಾಸಗಳು, ಅವನ ಅಥವಾ ಆಕೆಯ ಚಟಗಳಿಗೂ, ಈ 'ಸೆಕ್ಸ್'ಗೂ ಹತ್ತಿರದ ಸಂಬಂಧವಿದೆ. ಈ ಹವ್ಯಾಸಗಳು ಚಟಗಳಾಗಿ ಬದಲಾದ ನಂತರ ಹುಟ್ಟಿಕೊಳ್ಳುವ ಮಾನಸಿಕ ಕಾಯಿಲೆಗಳು, ಅವುಗಳನ್ನು ಗುಣಪಡಿಸಲು ಕಂಡುಕೊಂಡ ವೈದ್ಯಕೀಯ ಪರಿಹಾರಗಳೂ ಕೂಡ ಇವತ್ತಿಗೆ ದೊಡ್ಡ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವ ಪ್ರತ್ಯೇಕ ಉದ್ಯಮಗಳು.

'ಸೆಕ್ಸ್' ಸುತ್ತ ಇರುವ ಆರ್ಥಿಕ ಆಯಾಮಗಳ ಜತೆಗೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮಗಳೂ ಸೃಷ್ಟಿಯಾಗಿವೆ ಮತ್ತವು ಕಾಲದಿಂದ ಕಾಲಕ್ಕೆ ತಮ್ಮ ಸ್ವರೂಪಗಳನ್ನು ಬದಲಾಯಿಸಿಕೊಳ್ಳುತ್ತಿವೆ. ಸಾಕಷ್ಟು ಹರವು ಇರುವ ವಿಚಾರವನ್ನು 'ಸಮಾಚಾರ'ದ ಸಂಪಾದಕೀಯ ವಿಭಾಗ, ಸರಣಿ ರೂಪದಲ್ಲಿ ತನ್ನ ಓದುಗರಿಗೆ ನೀಡಲು ಈ ಸರಣಿಯನ್ನು ಆರಂಭಿಸುತ್ತಿದೆ.

ಚಿಕ್ಕದೊಂದು ರಿಕ್ಯಾಪ್:

ಈ ಸರಣಿ ಹಲವು ವಿಚಾರಗಳನ್ನು ಒಂದೊಂದಾಗಿ ನಿಮ್ಮ ಮುಂದಿಡುವ ಮೊದಲು, 'ಸೆಕ್ಸ್' ಹಿನ್ನಲೆಯ ಕುರಿತು ಚಿಕ್ಕದೊಂದು ಟಿಪ್ಪಣಿಯ ಅಗತ್ಯವಿದೆ. ಏಕಕೋಶ ಜೀವಿಗಳಂತಹ ಕೆಲವು ಅತೀತ ನಿದರ್ಶನಗಳನ್ನು ಹೊರತುಪಡಿಸಿದರೆ, ಎಲ್ಲಾ ಜೀವಿಗಳಲ್ಲಿ ಮೈಥುನ ನಿಸರ್ಗ ಸಹಜವಾದದ್ದು. ತಮ್ಮ ವಂಶವಾಹಿನಿಯನ್ನು ಹರಡಲು 'ಸೆಕ್ಸ್' ಅತ್ಯಗತ್ಯ ಚಟುವಟಿಕೆ ಕೂಡ. ಅವುಗಳ ಪಾಲಿಗೆ ಇದು ಸೀಸನಲ್ ಆದ ವಿಚಾರ. ಆದರೆ ಮನುಷ್ಯ ತನ್ನ ಬೆಳವಣಿಗೆಯ ಓಘದಲ್ಲಿ ಮೈಥುನವನ್ನು ಹವ್ಯಾಸವಾಗಿ, ನಂತರ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿ, ಕೊನೆಗೊಮ್ಮೆ ವ್ಯಸನವಾಗಿ ರೂಢಿಸಿಕೊಂಡು ಬಂದವನು.

ಭಾರತ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಮೈಥುನಕ್ಕೂ ಒಂದು ಸಾಂಸ್ಕೃತಿಕ ಆಯಾಮವನ್ನು ಕೊಟ್ಟುಕೊಂಡು ಬಂದವರು ನಾವು. ಬೌಧ್ಧ ಧರ್ಮ, ಜೈನಧರ್ಮಗಳಲ್ಲೂ ಇದರ ಕುರಿತು ಉಲ್ಲೇಖಗಳಿವೆ. ಅದಕ್ಕೂ ಮುಂಚೆ ದಾಖಲಾಗಿರುವ ಅಶ್ವಮೇಧ ಯಾಗದಂತಹ ಪೌರಾಣಿಕ ಕತೆಗಳಲ್ಲೂ 'ರಾಣಿ ಸತ್ತ ಕುದುರೆ ಜತೆ ನಡೆಸುವ ಮೈಥುನ'ದ ಪ್ರಸಂಗಗಳು ಬರುತ್ತವೆ. ಜನಪ್ರಿಯ ಕಥೆಗಳಾದ ರಾಮಾಯಣ ಹಾಗೂ ಮಹಾಭಾರತಗಳಲ್ಲಿಯೂ, ಲೈಂಗಿಕ ವಿಚಾರಗಳು ಹಲವು ಪಾತ್ರಗಳ ಪ್ರಮುಖ ಆಕರ್ಷಣೆಯಾಗಿವೆ.

ವತ್ಸಾಯನನ 'ಕಾಮಸೂತ್ರ'ವನ್ನು ಜಗತ್ತಿಗೆ ಹಂಚಿದವರು ನಾವು. ಆದರೂ, ನಮ್ಮಲ್ಲಿ 'ಸೆಕ್ಸ್' ಕುರಿತು ಮಡಿವಂತಿಕೆ ಇದೆ ಎಂಬ ಗಟ್ಟಿಯಾದ ನಂಬಿಕೆ ಬೇರೂರಿದೆ.ಹೀಗೆ, ಮನುಷ್ಯನ ಜೀವಿತಾವಧಿಯ ಪಯಣದಲ್ಲಿ ವಂಶವಾಹಿಯಾಗಿ ದಾಟಿಕೊಂಡು ಬಂದ ಮೈಥುನ ಪ್ರಕ್ರಿಯೆ ಇವತ್ತಿಗೆ ಹಲವು ರೂಪದಲ್ಲಿ, ಆಯಾಮಗಳಲ್ಲಿ ನಮ್ಮ ನಿತ್ಯ ಬದುಕನ್ನು ಒಂದಿಲ್ಲೊಂದು ಸಾಧ್ಯತೆಗಳ ಮೂಲಕ ತಟ್ಟುತ್ತಲೇ ಇದೆ.

‘ಮೈಥುನ ಮಿಸ್ಟರಿ’-1: ‘ಸೆಕ್ಸ್’ ಎಂಬ ವಿಸ್ಮಯ ಲೋಕಕ್ಕೆ ಸ್ವಾಗತ!

ಕುತೂಹಲದ ಕೇಂದ್ರ:

ಈ ತಟ್ಟುವಿಕೆ ಯಾವ ಪ್ರಮಾಣದಲ್ಲಿದೆ ಎಂಬುದಕ್ಕೆ ಇವತ್ತು ಬೆಳೆದು ನಿಂತಿರುವ ಅಂತರ್ಜಾಲ ನೀಡುವ ಮಾಹಿತಿಯೇ ನಮ್ಮೆದುರು ಸಾಕ್ಷಿಗಳೆಂಬಂತೆ ನಿಲ್ಲುತ್ತವೆ. "ಅಂತರ್ಜಾಲ ಬಳಸುವ ಪ್ರತಿ ಮೂವರಲ್ಲಿ ಒಬ್ಬರು, ಸೆಕ್ಸ್ ಕುರಿತು ಮಾಹಿತಿ ಬೇಡುತ್ತಾರೆ. ಗೂಗಲ್ ಮೂಲಕ ಮಾಹಿತಿ ಬಯಸುವ ಪ್ರತಿ ನಾಲ್ಕು ಪದಗಳಲ್ಲಿ(ಕೀ ವರ್ಡ್) ಒಂದು ಮೈಥುನಕ್ಕೆ ಸಂಬಂಧಿಸಿದ್ದು, '' ಎನ್ನುತ್ತಾರೆ ಎರಿಕಾ ಲಸ್ಟ್.

ಈಕೆ ಜಗತ್ತು ವಿಸ್ಮಯದಿಂದ ನೋಡುತ್ತಿರುವ ಹೊಸ ತಲೆಮಾರಿನ ಪೋರ್ನ್ ಸಿನೆಮಾಗಳ ನಿರ್ದೇಶಕಿ. ಆಕೆ ಪೊರ್ನೋಗ್ರಫಿ ಇಂಡಸ್ಟ್ರಿಗೆ ತಿರುಗಿ ಬಿದ್ದು, ತನ್ನದೇ ಹೊಸ ಲೋಕವನ್ನು ಸೃಷ್ಟಿಸಿಕೊಂಡಿರುವುದೇ ಒಂದು ಅಪರೂಪದ ಕತೆ.

ಸದ್ಯ ಅದನ್ನು ಪಕ್ಕಕ್ಕಿಟ್ಟು, ಸೆಕ್ಸ್ ಎಂಬ ವಿಸ್ಮಯಕಾರಿ ಲೋಕದ ವಿಚಾರಕ್ಕೆ ಮರಳುವುದಾದರೆ, ಆಧುನಿಕತೆಯ ಉತ್ತುಂಗವನ್ನು ಕಾಣುತ್ತಿರುವ ಈ ದಿನಗಳಲ್ಲೂ, ಮನುಷ್ಯನ ಪಾಲಿಗೆ 'ಸೆಕ್ಸ್' ಎಂಬ ಪದ ಕೌತುಕಗಳನ್ನು ಮೂಡಿತ್ತಲೇ ಇದೆ.ಹೀಗಾಗಿಯೇ, ಭಾರತದಂತಹ ಮಡಿವಂತಿಕೆಯ ಸಮಾಜದಲ್ಲೂ ಸನ್ನಿ ಲಿಯೋನ್ ತನ್ನದೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾಳೆ. ನಾವು ಅಂತ ಮಾರುಕಟ್ಟೆಯನ್ನು ದಾಟಿ, 'ಮೈಥುನ' ಲೋಕದ ಮಿಸ್ಟರಿಗಳ ಕಡೆಗೆ ಸಾಗಬೇಕಿದೆ. ಹೀಗಾಗಿ, ಮುಂದಿನ ಕೆಲವು ದಿನಗಳ ಕಾಲ 'ವಿಸ್ಮಯ ಲೋಕ'ದ ಕಾಡುವ ಕತೆಗಳು, ಆಸಕ್ತಿದಾಯಕ ಮಾಹಿತಿ ಹಾಗೂ ಅಪರೂಪದ ಒಳನೋಟಗಳ ಜತೆ ಇಲ್ಲಿ ಸಿಗುತ್ತಿರೋಣ.ವೆಲ್ಕಮ್ ಟು 'ಮೈಥುನ ಮಿಸ್ಟರಿ'...

(ನಾಳೆಗೆ)