ಪತ್ರಿಕೋದ್ಯಮ ಸರಣಿ-5: ಕೊನೆಗೆ ಎಲ್ಲವನ್ನೂ ಬಿಟ್ಟು ಹೋದವನು ಉಳಿಸಿದ ಪಾಠಗಳು!
SPECIAL SERIES

ಪತ್ರಿಕೋದ್ಯಮ ಸರಣಿ-5: ಕೊನೆಗೆ ಎಲ್ಲವನ್ನೂ ಬಿಟ್ಟು ಹೋದವನು ಉಳಿಸಿದ ಪಾಠಗಳು!

ಐದು ದಿನಗಳ ಹಿಂದೆ, ‘ಸಮಾಚಾರ’ ಇದೊಂದು ಸರಣಿಯನ್ನು ಕೊಂಚ ಅಳುಕಿನಿಂದಲೇ ಶುರುಮಾಡಿತು ಎಂಬುದನ್ನು ಇಲ್ಲಿ ಒಪ್ಪಿಕೊಳ್ಳಬೇಕಿದೆ. ಮಾಧ್ಯಮ ಎಂಬುದು ಎಷ್ಟೇ ಕುತೂಹಲದ ಕ್ಷೇತ್ರವಾದರೂ, ಇತಿಹಾಸ ಎಲ್ಲರಿಗೂ ರುಚಿಸುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ. ಹೀಗಿರುವಾಗ, ಮಾಧ್ಯಮ ಕ್ಷೇತ್ರವನ್ನು 120 ವರ್ಷಗಳ ಹಿಂದಕ್ಕೆ ಹೋಗಿ, ಅಲ್ಲಿನ ಕತೆಗಳನ್ನು ಎತ್ತಿಕೊಂಡು ಬಂದರೆ ಓದುಗರು ಹೇಗೆ ಸ್ವೀಕರಿಸಬಹುದು ಎಂಬ ಸಣ್ಣ ಅಳುಕು ನಮ್ಮ ತಂಡದಲ್ಲಿತ್ತು.

ಆದರೆ, ಮೊದಲ ನಾಲ್ಕು ಸರಣಿ ಲೇಖನಗಳಿಗೆ ನೀವು ತೋರಿಸಿದ ಪ್ರತಿಕ್ರಿಯೆ ನಮಗೆ ಕನ್ನಡದ ಆನ್ ಲೈನ್ ಓದುಗ ವಲಯ ವಿಸ್ತಾರಗೊಳ್ಳುತ್ತಿರುವ, ಅದಕ್ಕಿಂತಲೂ ಹೆಚ್ಚಾಗಿ ಪ್ರಬುದ್ಧಗೊಳ್ಳುತ್ತಿರುವ ಹೊಳವುಗಳನ್ನು ನೀಡಿದೆ. 'ಗಿಮಿಕ್'ಗಳಿಂದ ದೂರ ಇರಬೇಕಾದ ಹೊಣೆಗಾರಿಕೆಯನ್ನು ಹೊರಿಸಿದೆ. ಅದಕ್ಕೆ ನಾವು ಚಿರಋಣಿಗಳು!

ಹರ್ಸ್ಟ್ ಎಂಬ ವಿಚಿತ್ರ ಪತ್ರಿಕೋದ್ಯಮಿಯ ಕುರಿತು ಬರೆಯುತ್ತಾ ಹೋದಂತೆ, ಕೆಲವು ಘಟನೆಗಳು ಸ್ಥಳೀಯವಾಗಿ, ಇಲ್ಲಿಯೇ ನಡೆದ ವಿಚಾರಗಳೇನೋ ಎಂಬಂತೆ ಭಾಸವಾಗುತ್ತಿದ್ದವು. 120 ವರ್ಷಗಳ ಹಿಂದೆ ಆತ ನಡೆಸಿದ ಪತ್ರಿಕೋದ್ಯಮದ ಪ್ರಯೋಗಗಳು ದಶಕಗಳ ಹಿಂದೆ ಕನ್ನಡದ ಪತ್ರಿಕೋದ್ಯಮದಲ್ಲೂ ಮರುಕಳಿಸಿದ್ದಕ್ಕೆ ನಾವು ಸಾಕ್ಷಿಯಾಗಿದ್ದೆವು. ಇವತ್ತಿಗೂ ಸತ್ಯ ಯಾವುದು? ಸುಳ್ಳು ಯಾವುದು? ಎಂಬುದರ ನಡುವೆ ತೆಳ್ಳನೆಯ ಗೆರೆ ಯಾವಾಗಲೂ ಸುದ್ದಿಗಳ ವಿಚಾರದಲ್ಲಿ ಇದ್ದೇ ಇದೆ. ಆದರೆ, ಇದನ್ನು ಗುರುತಿಸಲು ನಮಗೆ ಹರ್ಸ್ಟ್ ಪತ್ರಿಕೋದ್ಯಮವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಾಗಿತ್ತು.

ಹಾಗಂತ, ಇಷ್ಟು ಹೇಳಿ ಮುಗಿಸಿದರೆ ಹರ್ಸ್ಟ್ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರವೇ ಪರಿಚಯಿಸಿದಂತಾಗುತ್ತದೆ. ಮಾಧ್ಯಮಗಳನ್ನು ಮಾರಾಟಕ್ಕಿಟ್ಟವನಿಗೆ ಸಿದ್ಧಾಂತಗಳೇ ಇರಲಿಲ್ಲವಾ? ಎಂದು ನೋಡಿದರೆ, ಹಾಗಿಲ್ಲ. ಹರ್ಸ್ಟ್ ಕೂಡ ಕೆಲವು ವಿಚಾರಗಳಲ್ಲಿ ಬದ್ಧತೆ ಹೊಂದಿದ್ದ. ಬಹುಶಃ ಈ ಕಾರಣಕ್ಕೆ ಆತ ಪತ್ರಕರ್ತ ಆದ ಅನ್ನಿಸುತ್ತದೆ. ಆತ ಯಾವತ್ತೂ ಕಾರ್ಮಿಕ ಸಂಘಟನೆಗಳ ಪರವಾಗಿದ್ದ, ಬಡವರಿಂದ ಕಸಿದು ಶ್ರೀಮಂತರ ಜೇಬು ತುಂಬಿಸುವ  ತೆರಿಗೆ ನೀತಿಗಳನ್ನು ವಿರೋಧಿಸುತ್ತಿದ್ದ. ಬ್ರಿಟನ್ ತನ್ನ ವಸಹಾತು ದೇಶಗಳಲ್ಲಿ ನಡೆಸುತ್ತಿದ್ದ ಲೂಟಿಗಳನ್ನು ಕೊನೆಯವರೆಗೂ ವಿರೋಧಿಸಿದ.

ಹೀಗೆ, ಒಂದು ಆಯಾಮದಲ್ಲಿ ಆತ ಪತ್ರಿಕೋದ್ಯಮವನ್ನು, ಅದರ ತತ್ವಾದರ್ಶಗಳನ್ನು ನೆಲಕ್ಕಿಚ್ಚುವಂತೆ ಮಾಡಿದರೂ, ಮತ್ತೊಂದು ಕಡೆ, ಅದರಿಂದ ಜನರಿಗೆ ಅನುಕೂಲ ಮಾಡುತ್ತಿದ್ದೇನೆ ಎಂದು ಆತ ನಂಬಿಕೊಂಡಿದ್ದ. ಇವತ್ತು 120 ವರ್ಷಗಳ ನಂತರ ನಿಂತು, ಪತ್ರಿಕೋದ್ಯಮ ಕಾಣುತ್ತಿರುವ ಬದಲಾವಣೆಗಳನ್ನು ನೋಡಿದರೆ, ಹರ್ಸ್ಟ್ ಅವತ್ತಿನ ಕಾಲಕ್ಕೆ, ಕಾಲಕ್ಕಿಂತಲೂ ಮುಂದೆ ಇದ್ದ. ಹೀಗಾಗಿಯೇ ಇವತ್ತು ಹಲವರು ಅವನ ಪತ್ರಿಕೋದ್ಯಮವನ್ನು ಅನುಸರಿಸುತ್ತಿರುವ ಅಗತ್ಯತೆಯನ್ನು ಮಾಧ್ಯಮಗಳು ಆಗಾಗ್ಗೆ ಎದುರಿಸುತ್ತವೆ.

ಹರ್ಸ್ಟ್ ನಡೆಸಿದ ಭಾನಗಡಿಗಳ ದೊಡ್ಡ ಪಟ್ಟಿಯನ್ನೇ ಇತಿಹಾಸಕಾರರು ಮಾಡಿದ್ದಾರೆ. ಆತನ ವೈಯುಕ್ತಿಕ ಬದುಕು ಕೂಡ ಹೇಳಿಕೊಳ್ಳುವ ಹಾಗಿರಲಿಲ್ಲ. ಮಕ್ಕಳಲ್ಲಿ ಕೆಲವರು ಒಳ್ಳೆಯ ಪತ್ರಕರ್ತರಾದರು. ಆದರೆ, ಪತ್ನಿ ಜತೆಗಿನ ಸಂಬಂಧ ಹಳಸಿತ್ತು. ಹಾಲಿವುಡ್ ಚಿತ್ರತಾರೆಯರೊಂದಿಗೆ ಆತನ ಸಂಬಂಧಗಳು ದೊಡ್ಡ ಸದ್ದು ಮಾಡಿದ್ದವು.ಆತನ ಜೀವನವನ್ನೇ ಆಧರಿಸಿ 'ಸಿಟಿಜನ್ಸ್ ಕೇವ್' ಎಂಬ ಸಿನಿಮಾ 1941ರಲ್ಲಿ ನಿರ್ಮಾಣವಾಯಿತು. ಇದರಲ್ಲಿ ಹರ್ಸ್ಟ್ ನನ್ನು ಮಾನಸಿಕ ಆಘಾತಕ್ಕೆಒಳಗಾದವನು ಎಂಬಂತೆ ಚಿತ್ರಿಸಲಾಗಿತ್ತು. ಆದರೆ ಈ ಸಿನಿಮಾ ಇನ್ನೇನು ಬಿಡುಗಡೆಯಾಗಬೇಕು ಎಂದಾಗ, ಹರ್ಸ್ಟ್ ತನ್ನ ವಿಪರೀತ ಪ್ರಭಾವ ಮತ್ತು ಹಣ ಬಲ ಉಪಯೋಗಿಸಿ, ಚಿತ್ರ ಬಿಡುಗಡೆ ಆಗದಂತೆ ತಡೆಯುವ ಪ್ರಯತ್ನ ನಡೆಸಿದ. ಆದರೆ ಅದು ವಿಫಲವಾಗಿ ಕೊನೆಗೂ ಚಿತ್ರ ಬಿಡುಗಡೆಯಾಯ್ತು. ಛಲ ಬಿಡದ ಹರ್ಸ್ಟ್ ಹಾಲಿವುಡ್ ಸ್ನೇಹಿತರ ಸಂಪರ್ಕ ಬಳಸಿ ಸರಣಿ ಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಡೆಸದಂತೆ ಒತ್ತಡ ಹೇರುವಲ್ಲಿ ಸಫಲನಾದ. ಈತನನ್ನೇ ಕಥಾವಸ್ತುವಾಗಿಸಿಕೊಂಡು ಹಲವು ಕಾದಂಬರಿಗಳೂ ಬಂದವು. ಅಯನ್ ರಾಂಡ್ ನ ‘ದಿ ಫೌಂಟೇನ್ ಹೆಡ್' ಅವುಗಳಲ್ಲಿ ಒಂದು.

ಹರ್ಸ್ಟ್ ಹುಟ್ಟು ಹಾಕಿದ ‘ಹರ್ಸ್ಟ್ ಕಾರ್ಪೋರೇಷನ್’ ಇವತ್ತಿಗೂ ನ್ಯೂಯಾರ್ಕ್ ನಗರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರ ಒಡೆತನದಲ್ಲಿ ಒಂದಷ್ಟು ನಿಯತಕಾಲಿಕೆಗಳು ಅಮೆರಿಕಾದಲ್ಲಿ ಪ್ರಕಟಣೆ ಕಾಣುತ್ತಿವೆ. ಕಾಸ್ಮೋಪೊಲಿಟನ್, ಗುಡ್ ಹೌಸ್ ಕೀಪಿಂಗ್, ಟೌನ್ ಆಂಡ್ ಕಂಟ್ರಿ, ಹಾರ್ಪೆರ್ಸ್ ಬಜಾರ್ ಇವುಗಳಲ್ಲಿ ಪ್ರಮುಖವಾದವು.

ಇವತ್ತು ಅಮೆರಿಕಾದಲ್ಲಿರುವ ಈತನ ಮನೆ ಪ್ರವಾಸಿ ತಾಣವಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲೀಸ್ ನಡುವಿನ, ಸ್ಯಾನ್ ಸಿಮೊನ್ ಪ್ರದೇಶದಲ್ಲಿ ಈ ಮನೆ ಇದೆ. 2 ಲಕ್ಷದ 40 ಸಾವಿರ ವಿಸ್ತೀರ್ಣದ ಜಾಗದಲ್ಲಿ ತನ್ನ ಕನಸಿನ ಬಂಗಲೆ 'ಹರ್ಸ್ಟ್ ಕ್ಯಾಸ್ಟಲ್' ಹೆಸರಿನಲ್ಲಿ ನಿರ್ಮಿಸಲು ಹರ್ಸ್ಟ್ ಆಲೋಚಿಸಿದ್ದ. 1919ರಲ್ಲಿ ಕಾಮಗಾರಿಯೇನೋ ಆರಂಭವಾಯ್ತು, ಆದರೆ ದುಬಾರಿ ವೆಚ್ಚದಿಂದಾಗಿ 1937ರಲ್ಲಿ ನಿರ್ಮಾಣ ಕೆಲಸಗಳನ್ನು ನಿಲ್ಲಿಸಿದ. ಇದೀಗ ಅಮೆರಿಕಾದ ರಾಷ್ಟ್ರೀಯ ಸ್ಮಾರಕವಾಗಿದೆ. ಅಷ್ಟೆಲ್ಲಾ ವರ್ಣರಂಚಿತ ವ್ಯಕ್ತಿತ್ವವನ್ನು ಹೊಂದಿದ್ದ ಹರ್ಸ್ಟ್ ಇವತ್ತಿಗೆ ನಮಗೆ ಉಳಿಸಿ ಹೋಗಿದ್ದು ಇಂತಹ ಕೆಲವು ಸ್ಮಾರಕಗಳು ಹಾಗೂ ಒಂದಿಷ್ಟು ಪಾಠಗಳು ಮಾತ್ರ.

ಪತ್ರಿಕೋದ್ಯಮದ ಕುರಿತು ಎಲ್ಲರಿಗೂ ಇರಬಹುದಾದ ವೈಯುಕ್ತಿಕ ಅಭಿಪ್ರಾಯಗಳನ್ನು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳಲು ಈ ಸರಣಿ ಸಹಾಯ ಮಾಡಬಲ್ಲದು ಎಂದು ನಂಬಿದ್ದೇವೆ.

(ಮುಗಿಯಿತು)