samachara
www.samachara.com
ಪತ್ರಿಕೋದ್ಯಮ ಸರಣಿ-4: ಏಳು ಬೀಳುಗಳನ್ನು ಕಂಡವನು ಸತ್ತಾಗಲೂ ಮೀಸೆ ಮಾತ್ರ ಮಣ್ಣಾಗಿರಲಿಲ್ಲ!
SPECIAL SERIES

ಪತ್ರಿಕೋದ್ಯಮ ಸರಣಿ-4: ಏಳು ಬೀಳುಗಳನ್ನು ಕಂಡವನು ಸತ್ತಾಗಲೂ ಮೀಸೆ ಮಾತ್ರ ಮಣ್ಣಾಗಿರಲಿಲ್ಲ!

ಜೀವನದಲ್ಲಿ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ವಿಪರೀತ ಮಹತ್ವಾಕಾಂಕ್ಷಿಯಾಗಿದ್ದ. ಯಶಸ್ವಿ ಪತ್ರಿಕೆಗಳ ಮಾಲೀಕನ ಆಸಕ್ತಿಗಳು ಕ್ರಮೇಣ ರಾಜಕೀಯದ ಕಡೆಗೂ ವಾಲತೊಡಗಿದವು. ಎರಡು ಬಾರಿ ಅಲ್ಲಿನ ಸಂಸತ್ತಿಗೆ ಡೆಮಾಕ್ರಾಟಿಕ್ ಪಕ್ಷದಿಂದ ಸದಸ್ಯನಾಗಿ ಆಯ್ಕೆಯೂ ಆದ. ಆದರೆ ಸದಸ್ಯ ಮಾತ್ರ ಸಾಕಾಗಿರಲಿಲ್ಲ. ಅದಕ್ಕಿಂತ ಆಚೆಯೂ ಅಧಿಕಾರಕ್ಕಾಗಿ ಆತ ಹಂಬಲಿಸುತ್ತಿದ್ದ. ಕನಿಷ್ಟ ಪಕ್ಷ ನ್ಯೂಯಾರ್ಕ್ ಮೇಯರ್ ಆಗುವ ಕನಸು ಇಟ್ಟುಕೊಂಡಿದ್ದ.

ಆದರೆ, ಎರಡೂ ಬಾರಿ ಮೇಯರ್ ಚುನಾವಣೆಯಲ್ಲಿ ಸೋತು ಹೋದ. ಕೊನೆಗೆ ಗವರ್ನರ್ ಆಗಲು ಹೊರಟ. ಆಗಲು ಸೋಲು ಆತನನ್ನು ಹಿಂಬಾಲಿಸಿತು. ಮುಂದೆ ನ್ಯೂಯಾರ್ಕ್ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಆಗುವ ಕನಸು ಕಂಡ; ಅದೂ ಕೈ ಹತ್ತಲಿಲ್ಲ.ಅಮೆರಿಕಾದ ಅಧ್ಯಕ್ಷನಾಗಬೇಕೆಂಬ ಮಹತ್ತರ ಆಸೆ ಈತನಲ್ಲಿತ್ತು.

ಅದಕ್ಕಾಗಿ ಡೆಮಾಕ್ರಟಿಕ್ ಪಕ್ಷದಲ್ಲಿದ್ದಾಗಲೇ ತನ್ನದೇ ಆದ ಪಡೆಯನ್ನು ಹುಟ್ಟು ಹಾಕಿದ. ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿಯಾಗುವಲ್ಲೇ ಮುಗ್ಗರಿಸಿದ. ಆದರೆ, ಪಕ್ಷಗಳ ಹಿನ್ನಲೆಯಲ್ಲಿದ್ದುಕೊಂಡು ಆಟ ಆಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಕಾಲ ಕಾಲಕ್ಕೆ ಬೇರೆ ಬೇರೆ ಅಧ್ಯಕ್ಷರುಗಳಿಗೆ ಈತ ನಿಷ್ಠನಾಗಿದ್ದ.

ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದು ಪರ್ವತದ ತುತ್ತ ತುದಿಗೇರಿದ್ದವನ ಅವನತಿಯೂ ನಿಧಾನವಾಗಿ ಆರಂಭವಾಯ್ತು. 1918ರಲ್ಲಿ ಮೊದಲ ಮಹಾಯುದ್ಧ ಕೊನೆಯಾಗುತ್ತಿದ್ದಂತೆ ನಿಧಾನವಾಗಿ ಈತನ ಉದ್ಯಮದ ಕುಸಿತ ಆರಂಭವಾಯ್ತು. ಪತ್ರಿಕೆಗಳು ಮಾಹಿತಿಯನ್ನು ಮಾತ್ರ ಕೊಡಲು ಎಂಬಂತಿದ್ದ ಕಾಲದಲ್ಲಿ ಈತ ಮಾಹಿತಿ ಮತ್ತು ಮನರಂಜನೆಯ ಹೊಸ ಮಾದರಿ ಹಾಕಿಕೊಟ್ಟಿದ್ದ. ಅದೆಲ್ಲಾ ಹಳಸಲಾಗುತ್ತ ಬಂದಿತ್ತು. ಆತನ ಮೆಚ್ಚಿನ ಓದುಗರು ದೂರ ಸರಿಯಲಾರಂಭಿಸಿದರು. ಆದರೆ ಈತ ಪಟ್ಟು ಬಿಡಲಿಲ್ಲ. ಪತ್ರಿಕೆಗಳ ಜೊತೆಗೆ ನಿಯತಕಾಲಿಕೆಗಳನ್ನೂ ಹೊರ ತರಲಾರಂಭಿಸಿದ. ಇದರ ಪರಿಣಾಮ ವಿಶ್ವದ ಅತೀ ದೊಡ್ಡ ನಿಯತಕಾಲಿಕೆ ಉದ್ಯಮದ ಮಾಲೀಕನಾಗಿ ಕೆಲವೇ ದಿನಗಳಲ್ಲಿ ಹೊರ ಹೊಮ್ಮಿದ.

ನ್ಯೂಯಾರ್ಕ್ ನಿಂದಾಚೆಯೂ ತನ್ನ ಪತ್ರಿಕಾ ಪ್ರಕಟಣೆಗೆ ಗಮನ ಹರಿಸಿದ. 1909ರಲ್ಲಿ 'ನ್ಯೂಸ್ ಏಜೆನ್ಸಿ' ಹುಟ್ಟುಹಾಕಿದ. 1920ರ ಹೊತ್ತಿಗೆ ತನ್ನ ಸಾಮ್ರಾಜ್ಯವನ್ನು ಬೇಕಾಬಿಟ್ಟಿ ವಿಸ್ತರಿಸಿದ. ಆತನ 28 ಪತ್ರಿಕೆಗಳು ಅಮೆರಿಕಾದ ವಿವಿಧ ನಗರಗಳಿಂದ ಪ್ರಕಟವಾಗುತ್ತಿದ್ದವು. ಹಲವು ರೇಡಿಯೋ ಸ್ಟೇಷನ್ ಗಳನ್ನು ಆರಂಭಿಸಿದ. 'ಕಿಂಗ್ ಫೀಚರ್ ಸಿಂಡಿಕೇಟ್' (ನುಡಿಚಿತ್ರಗಳನ್ನು ಪೂರೈಸುವ ಏಜೆನ್ಸಿ) ಹುಟ್ಟು ಹಾಕಿದ. ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿ 'ಕಾಸ್ಮೋಪೊಲಿಟನ್' ಎಂಬ ಕಂಪೆನಿ ತೆರೆದ.

ಇದೇ ಹೆಸರಿನಲ್ಲಿ, ಗಣಿ, ರಿಯಲ್ ಎಸ್ಟೇಟ್, ಮರದ ವ್ಯಾಪಾರಕ್ಕೂ ಇಳಿದ. ಕ್ಯಾಲಿಫೋರ್ನಿಯಾ, ಮೆಕ್ಸಿಕೋದ ಪಟ್ಟಣಗಳಲ್ಲಿ ಸಾವಿರಾರು ಎಕರೆ ಭೂಮಿ ಒಡೆಯನಾದ.1928ರ ಹೊತ್ತಿಗೆ ಈತನ ಪತ್ರಿಕೆಗಳ ಪ್ರಸಾರ ಮತ್ತು ಆದಾಯ ತುತ್ತತುದಿಗೇರಿತ್ತು. ಆದರೆ, ಶಿಖರದ ತುದಿಯಾಚೆ ಪ್ರಪಾತ ಎಂಬಂತೆ ಆತನ ಪತನವೂ ಅಲ್ಲಿಂದಲೇ ಶುರುವಾಯ್ತು. ಅಮೆರಿಕಾದ ಶೇರು ಮಾರುಕಟ್ಟೆ 1929ರಲ್ಲಿ ಇನ್ನಿಲ್ಲದ ಕುಸಿತ ಕಂಡಿತು, ಮಹಾ ಆರ್ಥಿಕ ಹಿಂಜರಿತ ಅಮೆರಿಕಾದಲ್ಲಿ ಆರಂಭವಾಯ್ತು; ಜೊತೆಗೆ ಹರ್ಸ್ಟ್ ನದೂ. ಅದಾಗಲೇ ಈತನ ವ್ಯವಹಾರಗಳು ವಿಪರೀತ ವಿಸ್ತಾರಗೊಂಡು ನಿಯಂತ್ರಣಕ್ಕೆ ಸಿಗದಷ್ಟು ಬೆಳೆದು ಬಿಟ್ಟಿದ್ದವು. ಆರ್ಥಿಕ ಹಿಂಜರಿತ ಶುರುವಾದಾಗ ತನ್ನ ಕಂಪೆನಿಗಳ ನಿಯಂತ್ರಣಕ್ಕಾಗಿ ಈತ ಹರಸಾಹಸ ಪಡಬೇಕಾಯ್ತ.

ಪತ್ರಿಕೋದ್ಯಮ ಸರಣಿ-4: ಏಳು ಬೀಳುಗಳನ್ನು ಕಂಡವನು ಸತ್ತಾಗಲೂ ಮೀಸೆ ಮಾತ್ರ ಮಣ್ಣಾಗಿರಲಿಲ್ಲ!

ಕೊನೆಗೆ, ಒಂದೊಂದಾಗಿ ಕಂಪೆನಿಗಳ ಬಾಗಿಲು ಎಳೆಯಲು ಆರಂಭಿಸಿದ. ಆದರೆ ಆತ ಈ ಪರಿ ದಿವಾಳಿಯಾಗುತ್ತಾನೆ ಎಂದು ಯಾರೂ ಅಂದು ಕೊಂಡಿರಲಿಲ್ಲ. ಯಾಕೆಂದರೆ ಇವತ್ತಿನ ಲೆಕ್ಕದಲ್ಲಿ ಹೇಳುವುದಾದರೆ, ಅವತ್ತಿಗೆ ಪತ್ರಿಕೋದ್ಯಮಿಯಾಗಿ ಆತ ಮಾಡಿದ ಆಸ್ತಿಯೇ ಲಕ್ಷ ಕೋಟಿಗಳಲ್ಲಿತ್ತು.1937ರ ಸಮೀಪದಲ್ಲಿ ಈತನ ಆಸ್ತಿಗಳ ಮೇಲೆ ಈತನಿಗೇ ನಿಯಂತ್ರಣ ತಪ್ಪಿ ಹೋಯಿತು. ಆತನ ಬಳಿ ಇದ್ದ ಕಲಾಕೃತಿಗಳ ಸಂಗ್ರಹಗಳನ್ನು ಮಾರಿಬೇಕಾಗಿ ಬಂತು. ದಿಗ್ಗಜ ಬರಹಗಾರರೇ ಸಹಿ ಮಾಡಿದ ಅಪರೂಪದ ಪುಸ್ತಕ ಸಂಗ್ರಹಾಲಯವಿತ್ತು. ಅತ್ಯಪೂರ್ವ ತೈಲವರ್ಣ ಚಿತ್ರಗಳಿದ್ದವು; ಎಲ್ಲವನ್ನೂ ಮಾರಾಟಕ್ಕೆ ಇಟ್ಟ. ಕ್ಯಾಲಿಫೋರ್ನಿಯಾದಲ್ಲಿ ತಾನು ನಿರ್ಮಿಸುತ್ತಿದ್ದ ಕನಸಿನ ಎಸ್ಟೇಟ್ ಪ್ರಾಜೆಕ್ಟ್ ಅರ್ಧಕ್ಕೆ ಕೈ ಬಿಟ್ಟ.

42 ಪತ್ರಿಕೆಗಳ ಒಡೆಯನಾಗಿದ್ದ ಹರ್ಸ್ಟ್ ಕೈಯಲ್ಲಿ 1940ರ ವೇಳೆಗೆ ಕೇವಲ 17 ಪತ್ರಿಕೆಗಳಷ್ಟೇ ಉಳಿದುಕೊಂಡಿತು. 1945ರಲ್ಲಿ ಎರಡನೇ ಮಹಾಯುದ್ಧ ಕೊನೆಗೊಂಡಾಗ ಆತನ ದಿನಗಳು ಪೂರ್ತಿ ಮುಗಿದಿತ್ತು. ಇದ್ದ ಪತ್ರಿಕೆಗಳ ಪ್ರಸಾರ ನೆಲಕಚ್ಚಿತ್ತು. ಬೀದಿಗಳಲ್ಲಿ ಈತನ ಪತ್ರಿಕೆ ಕೇಳುವವರಿರಲಿಲ್ಲ. ಜಾಹೀರಾತು ಆದಾಯ ಕುಸಿದಿತ್ತು. ಕೊನೆಗೊಂದು ದಿನ, 1951ನೇ ಇಸವಿಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಹೃದಯಾಘಾತದಿಂದ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಎಂಬ ಪತ್ರಿಕೋದ್ಯಮದ ಮಹಾಮಹಿಮ ಕೊನೆಯುಸಿರೆಳೆದ. ಆಗ ತನಿಗೆ 88 ವರ್ಷ ವಯಸ್ಸಾಗಿತ್ತು. ಆದರೆ ಹರ್ಸ್ಟ್ ಸಾಯುವಾಗಲೂ ಅಮೆರಿಕಾ ಪತ್ರಿಕಾರಂಗದ ಅತೀ ದೊಡ್ಡ ಉದ್ಯಮಿ ಅವನೇ ಆಗಿದ್ದ...

(ನಾಳೆ ಕೊನೆಯ ಕಂತು)