ಪತ್ರಿಕೋದ್ಯಮ ಸರಣಿ-2: ‘ದರ ಸಮರ’ ಹುಟ್ಟುಹಾಕಿದವನು ಗೆದ್ದ ಮೇಲೂ ವಿರಾಮ ಘೋಷಿಸಲಿಲ್ಲ!
SPECIAL SERIES

ಪತ್ರಿಕೋದ್ಯಮ ಸರಣಿ-2: ‘ದರ ಸಮರ’ ಹುಟ್ಟುಹಾಕಿದವನು ಗೆದ್ದ ಮೇಲೂ ವಿರಾಮ ಘೋಷಿಸಲಿಲ್ಲ!

ಅವತ್ತು ಅಮೆರಿಕಾದ ಪತ್ರಿಕೋದ್ಯಮ ಪ್ರಪಂಚ ಹಿಂದೆಂದೂ ಕಾಣದ ಪೈಪೋಟಿಗೆ ಸಾಕ್ಷಿಯಾಗಲು ಕೆಲವು ದಿನಗಳಷ್ಟೆ ಬಾಕಿ ಇತ್ತು. ‘ಸ್ಯಾನ್ ಫ್ರಾನ್ಸಿಸ್ಕೋ ಎಗ್ಸಾಮಿನರ್’ ಪತ್ರಿಕೆ ಒಂದು ಮಟ್ಟಿಗೆ ಯಶಸ್ಸು ಕಾಣುತ್ತಲೇ, ಆಗಷ್ಟೆ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ತಲೆಯಲ್ಲಿ ಹೊಸ ಕನಸುಗಳು ಮೊಳೆತು ನಿಂತಿದ್ದವು.

ಪತ್ರಿಕೋದ್ಯಮವನ್ನು ಆವರಿಸಿಕೊಂಡಿದ್ದ ಜೋಸೆಫ್ ಪುಲಿಟ್ಜರ್ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಲು ಅವನು ಕಾರ್ಯತಂತ್ರಗಳನ್ನು ಹೆಣಿಯಲಾರಂಭಿಸಿದ್ದ.

ಇದರ ಭಾಗವಾಗಿಯೇ ಹರ್ಸ್ಟ್ ನ್ಯೂಯಾರ್ಕ್ ಮಾಧ್ಯಮ ಲೋಕದಲ್ಲಿ ಖಾತೆಯನ್ನು ತೆರೆಯುವ ಅಗತ್ಯವಿತ್ತು. ಅವತ್ತಿಗೆ ಅಮೆರಿಕಾದಲ್ಲಿ ನ್ಯೂಯಾರ್ಕ್ ಆಯಕಟ್ಟಿನ ಸ್ಥಾನ ಪಡೆದುಕೊಂಡಿತ್ತು. ಇಂತಹ ಆಲೋಚನೆಗಳಲ್ಲಿದ್ದ ರಾಂಡೋಲ್ಫ್ ಹರ್ಸ್ಟ್ ಕೈಗೆ ಸಿಕ್ಕಿದ್ದು ‘ನ್ಯೂಯಾರ್ಕ್ ಜರ್ನಲ್’ ಪತ್ರಿಕೆ.

ವಿಪರ್ಯಾಸ ಏನೆಂದರೆ, ಈ ‘ನ್ಯೂಯಾರ್ಕ್ ಜರ್ನಲ್’ ಪತ್ರಿಕೆಯನ್ನು ಶುರು ಮಾಡಿದವನು ಜೋಸೆಫ್ ಪುಲಿಟ್ಜರ್ ಸಹೋದರ. 1882ರ ಸುಮಾರಿಗೆ ಆತ ಪತ್ರಿಕೆ ಆರಂಭಿಸಿದನಾದರೂ, ಜಾನ್ ಆರ್ ಮೆಕ್ಲೀನ್ ಎಂಬಾತನಿಗೆ 1895ರಲ್ಲಿ ಮಾರಾಟ ಮಾಡಿದ್ದ. ಈ ಮಾರಾಟದ ಒಪ್ಪಂದದ ಹಿಂದೆ ಇದ್ದವನು ಹರ್ಸ್ಟ್ ಎಂದು ಕೆಲವು ವರದಿಗಳು ಹೇಳುತ್ತವಾದರೂ, ನಿಖರ ಸಾಕ್ಷಿಗಳಿಲ್ಲ.

ಇದಕ್ಕೆ ಪೂರಕ ಎಂಬಂತೆ ಮೆಕ್ಲೀನ್ ಖರೀದಿಸಿದ ಕೆಲವೇ ತಿಂಗಳಲ್ಲಿ ಹರ್ಸ್ಟ್ ಅದನ್ನು ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದ. ಅಂತೂ ಪುಲಿಟ್ಜರ್ ಆಳುತ್ತಿದ್ದ ನ್ಯೂಯಾರ್ಕ್ ಪತ್ರಿಕಾ ಪ್ರಪಂಚಕ್ಕೆ ಹರ್ಸ್ಟ್ ಅಧಿಕೃತವಾಗಿ ಕಾಲಿಟ್ಟಿದ್ದ; ಯುದ್ಧ ಭೂಮಿ ರಂಗೇರಿತ್ತು.

‘ನ್ಯೂಯಾರ್ಕ್ ಜರ್ನಲ್’ ಪತ್ರಿಕೆ ಕೈಗೆ ತೆಗೆದುಕೊಂಡ ಹರ್ಸ್ಟ್ ಅದಕ್ಕೆ ಮರುಹುಟ್ಟು ನೀಡಲು ನಿರ್ಧರಿಸಿದ್ದ. ಅದಕ್ಕಾಗಿ ತನ್ನ ತಂದೆಯ ಗಣಿ ಹಣವನ್ನು ಅದರ ಮೇಲೆ ಸುರಿದ. ಅವತ್ತಿನ ಕಾಲಕ್ಕೇ ಬರೋಬ್ಬರಿ 54 ಕೋಟಿ ರೂಪಾಯಿಗಳು.

ಅವತ್ತಿಗೆ ನ್ಯೂಯಾರ್ಕ್ ನಗರದಲ್ಲಿದ್ದ 16 ದೈನಿಕಗಳ ಪೈಕಿ ತನ್ನ ಪತ್ರಿಕೆ ವಿಭಿನ್ನವಾಗಿ ಮೂಡಿ ಬರಬೇಕು ಎಂದು ತನ್ನ ಪತ್ರಕರ್ತರಿಗೆ ಆತ ಫರ್ಮಾನು ಹೊರಡಿಸಿದ.

ಜತೆಗೆ, ತನ್ನ ಪತ್ರಿಕೆಯ ಬೆಲೆಯನ್ನು ಅವತ್ತಿನ ಮಾರುಕಟ್ಟೆ ದರದಲ್ಲಿ ಅರ್ಧಕ್ಕೆ ಇಳಿಸುವ ತೀರ್ಮಾನ ತೆಗೆದುಕೊಂಡ. ಪುಲಿಟ್ಜರ್ ತನ್ನ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಗೆ ಎರಡು ಸೆಂಟ್ ಮುಖಬೆಲೆ ಇಟ್ಟಿದ್ದ. ಉಳಿದ ಪತ್ರಿಕೆಗಳೂ ಇದನ್ನೇ ಅನುಸರಿಸಿದ್ದವು. ಆದರೆ, ಹರ್ಸ್ಟ್ ತನ್ನ ಪತ್ರಿಕೆಯ ಮುಖಬೆಲೆಯನ್ನು ಒಂದು ಸೆಂಟ್ ಎಂದು ಘೋಷಿಸಿದ.

ಪತ್ರಿಕೋದ್ಯಮ ಇತಿಹಾಸದಲ್ಲಿ ದಾಖಲಾದ ಪತ್ರಿಕೆಗಳ ನಡುವಿನ ಮೊದಲ ದರ ಸಮರ ಇದು.

ಹೀಗಾಗಿ ಹರ್ಸ್ಟ್ ಪತ್ರಿಕೆಗೆ ‘ಪೆನ್ನಿ ಪತ್ರಿಕೆ’ (ಕರೆನ್ಸಿಯ ಅತೀ ಸಣ್ಣ ಭಾಗಕ್ಕೆ ಪೆನ್ನಿ ಎನ್ನುತ್ತಾರೆ. ಭಾರತದಲ್ಲಿ ಪೈಸೆ ಪೆನ್ನಿಯಾದ್ರೆ, ಅಮೆರಿಕಾದಲ್ಲಿ ಅತೀ ಸಣ್ಣ ಹಣದ ಭಾಗ ಸೆಂಟ್) ಎಂಬ ಅಡ್ಡ ಹೆಸರು ತಗುಲಿಕೊಂಡಿತು.

ವಿಲಿಯಂ ಪತ್ರಿಕೆಯ ಬೆಲೆ ಇಳಿಸಿದ್ದು ನೋಡಿ,ಪುಲಿಟ್ಜರ್ 2 ಸೆಂಟ್ ಇದ್ದ ತನ್ನ ಪತ್ರಿಕೆಯ ಬೆಲೆಯನ್ನು ಕಡಿತ ಮಾಡಬೇಕಾಗಿ ಬಂತು. ಪತ್ರಿಕೆಗಳ ಗುಣಮಟ್ಟಕ್ಕಿಂತ ಕಡಿಮೆ ಬೆಲೆಯ ಮೂಲಕ ಜನರನ್ನು ಸೆಳೆಯುವ ಈ ತಂತ್ರದ ಬಗ್ಗೆ ವಿರೋಧಗಳೂ ವ್ಯಕ್ತವಾದವು. ಆದರೆ, ಗುಣಮಟ್ಟಕ್ಕಿಂತ ‘ನಂಬರ್. 1 ಪತ್ರಿಕೆ’ ಎಂದು ಕರೆಸಿಕೊಳ್ಳುವ ಉನ್ಮಾದ ಹೆಚ್ಚಿತ್ತು. ಹೀಗಾಗಿ, ಮೊದಲ ಬಾರಿಗೆ ಪತ್ರಿಕೆಗಳೂ ಕೂಡ ಮಾರುಕಟ್ಟೆಯಲ್ಲಿ ಸಿಗುವ ಸೋಪು, ತರಕಾರಿಯಂತೆ ದರ ಇಳಿಕೆ ಮೂಲಕ ಗ್ರಾಹಕರ ಮನವೊಲಿಸುವ ಮಟ್ಟಕ್ಕೆ ಇಳಿದು ಬಿಟ್ಟವು.


       ಜೋಸೆಫ್ ಪುಲಿಟ್ಜರ್
ಜೋಸೆಫ್ ಪುಲಿಟ್ಜರ್

ಕೇವಲ ದರ ಇಳಿಸಿದ ಮಾತ್ರ ಪುಲಿಟ್ಜರ್ ಪತ್ರಿಕೆಗೆ ಪೆಟ್ಟು ಕೊಡಬಹುದು ಎಂಬ ಹರ್ಸ್ಟ್ ನಂಬಿಕೆ ಸುಳ್ಳಾಗಿತ್ತು. ಯಾಕೆಂದರೆ, ಅವತ್ತಿಗೆ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆ ಕೈಲಿ ಪತ್ರಿಕೋದ್ಯಮದ ಬಹುತೇಕ ಬತ್ತಳಿಕೆಗಳಿದ್ದವು.

ಆಕರ್ಷಕವಾಗಿ ತಲೆ ಬರಹ ನೀಡುವ ನುರಿತ ಸಿಬ್ಬಂದಿ ಇದ್ದರು. ಆಕ್ರಮಣಕಾರಿಯಾಗಿ ಸುದ್ದಿ ಸಂಪಾದಿಸುವ ವರದಿಗಾರರ ತಂಡವಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿ ಒಂದು ಟೀಂ ಸ್ಪಿರಿಟ್ ಕೆಲಸ ಮಾಡುತ್ತಿತ್ತು. ಇದನ್ನು ಮುರಿಯಬೇಕು ಎಂದರೆ, ಹರ್ಸ್ಟ್ ಕೈಲಿ ಇದ್ದ ಕೊನೆಯ ಮಂತ್ರದಂಡವನ್ನು ಉಪಯೋಗಿಸಲೇ ಬೇಕಿತ್ತು. ಅದು ಪತ್ರಕರ್ತರನ್ನು ಕಮಾಡಿಯ ಹಾಗೆ ಖರೀದಿಸುವುದು.

ಇವತ್ತು ಐಪಿಎಲ್ ಹರಾಜಿನಲ್ಲಿ ಕ್ರಿಕೆಟಿಗರನ್ನು ಖರೀದಿಸುವ ವ್ಯವಸ್ಥೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇದಕ್ಕೂ ಒಂದು ಶತಮಾನ ಮೊದಲೇ ಹರ್ಸ್ಟ್, ತನ್ನಲ್ಲಿದ್ದ ಹಣ ಬಲದ ಮೂಲಕ ನ್ಯೂಯಾರ್ಕ್ ನಗರದಲ್ಲಿದ್ದ ಅತ್ಯುತ್ತಮ ಪತ್ರಕರ್ತರನ್ನು ಖರೀದಿಸ ತೊಡಗಿದ. ದೊಡ್ಡ ಮೊತ್ತದ ಸಂಬಳದ ಆಕರ್ಷಣೆಯನ್ನು ಅವನು ಅವರ ಮುಂದಿಟ್ಟಿದ್ದ.

‘ನ್ಯೂಯಾರ್ಕ್ ವರ್ಲ್ಡ್’ನ ಜನಪ್ರಿಯ ವ್ಯಂಗ್ಯ ಚಿತ್ರಕಾರನನ್ನು ತನ್ನ ಖೆಡ್ಡಾಕ್ಕೆ ಕೆಡವಿಕೊಂಡ.

ಹೀಗೆ ಮುಂದಿನ ಮೂರು ವರ್ಷಗಳ ಕಾಲ ಪುಲಿಟ್ಜರ್ ಮತ್ತು ಹರ್ಸ್ಟ್ ತಮ್ಮ ಪತ್ರಿಕಾ ವ್ಯವಸಾಯಕ್ಕಾಗಿ ಭಾರಿ ಹಣ ಹೂಡಿದರು. ಪತ್ರಿಕೋದ್ಯಮ ಪ್ರಪಂಚ ಹಿಂದೆಂದೂ ಕಾಣದಷ್ಟು ಬಂಡವಾಳ ಹೂಡಿಕೆಗೆ ಇವರಿಬ್ಬರ ಮಾರುಕಟ್ಟೆ ಪೈಪೋಟಿ ಭಾಷ್ಯ ಬರೆಯಿತು. ಯುದ್ಧದಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎನ್ನುತ್ತಾರೆ. ಇಲ್ಲೂ ಕೂಡ ಅಷ್ಟೆ, ಮೂರು ವರ್ಷಗಳ ಪೈಪೋಟಿ ಮುಗಿಯುವ ವೇಳೆ, ಇಬ್ಬರದ್ದೂ ಹಣ ಧಾರಾಳವಾಗಿ ಕೈ ಬಿಟ್ಟು ಹೋಗಿತ್ತು.

ಪುಲಿಟ್ಜರ್ ಯುದ್ಧ ವಿರಾಮ ಘೋಷಿಸಿದ. ಹರ್ಸ್ಟ್ ಆರ್ಥಿಕವಾಗಿ ಸೋತರೂ, ಯುದ್ಧ ಗೆದ್ದ ಸಂಭ್ರಮದಲ್ಲಿದ್ದ.

ಅಷ್ಟಾದ ಮೇಲಾದರೂ ಆತ ವಿರಾಮ ತೆಗೆದುಕೊಳ್ಳಬೇಕಿತ್ತು. ಗೆಲುವು ಅವನನ್ನು ಇನ್ನಷ್ಟು ಅಹಂಕಾರಿಯನ್ನಾಗಿಸಿತು. ಇನ್ನಷ್ಟು ಹೆಚ್ಚು ಗೆಲುವಿನ ಹಪಾಹಪಿಕೆಗೆ ಈಡಾದ. ಮುಂದೆ, ಅವನು ಅಮೆರಿಕಾ ಪತ್ರಿಕೋದ್ಯಮವನ್ನು ಆವರಿಸಿಕೊಂಡ ಬಗೆ, ಹಾಗೂ ಶತಾಯಗತಾಯ ಜನರಿಗೆ ಪತ್ರಿಕೆಗಳನ್ನು ಓದುವಂತೆ ಮಾಡಲು ತುಳಿದ ಹಾದಿ, ಪತ್ರಿಕೋದ್ಯಮ ಇತಿಹಾಸದಲ್ಲಿ ದಾಖಲಾಗಿ ಹೋದ ಕೆಟ್ಟ ಪಾಠಗಳು.

(ನಾಳೆಗೆ)